ADVERTISEMENT

ಕಿರಿಯರನ್ನು ಪ್ರೋತ್ಸಾಹಿಸುವ ಬಗೆ

ಡಾ. ಗುರುರಾಜ ಕರಜಗಿ
Published 9 ಮೇ 2013, 19:59 IST
Last Updated 9 ಮೇ 2013, 19:59 IST

ಒಂದು ಬಾರಿ ಅ.ನ.ಕೃಷ್ಣರಾಯರು ಎಂ.ರಾಮಮೂರ್ತಿ ಮತ್ತು ಎಂ.ಎಸ್. ನಟರಾಜನ್ ಅವರೊಡನೆ ನಾಟಕ ನೋಡಲು ರವೀಂದ್ರ ಕಲಾಕ್ಷೇತ್ರಕ್ಕೆ ಹೋದರು. ಅದು ಒಂದು ಐತಿಹಾಸಿಕ ನಾಟಕ. ವಿಶೇಷವೆಂದರೆ ನಾಟಕದ ಆ ವಸ್ತುವಿನ ಮೇಲೆಯೇ ಅ.ನ.ಕೃ ಒಂದು ನಾಟಕವನ್ನು ಮತ್ತು ಕಾದಂಬರಿಯನ್ನು ಬರೆದಿದ್ದರು. ನಾಟಕದ ವಿಷಯದ ಆಳ ಮತ್ತು ಹರಹು ಚೆನ್ನಾಗಿ ತಿಳಿದಿದ್ದವರು ಅವರು. ನಾಟಕ ಪ್ರಾರಂಭವಾಯಿತು. ಈ ನಾಟಕ ಅ.ನ.ಕೃ ಅವರು ಬರೆದ ನಾಟಕವಲ್ಲ. ನಾಟಕದ ಪ್ರಯೋಗ ಚೆನ್ನಾಗಿರಲಿಲ್ಲ.

ರಂಗಸಜ್ಜಿಕೆ ಹೇಳಿಕೊಳ್ಳುವಂಥದ್ದಾಗಿರಲಿಲ್ಲ. ನಟರೂ ತುಂಬ ಎಳಸು. ನಿರ್ದೇಶಕರಿಗೆ ಆ ನಾಟಕದ ವಸ್ತುವಿನ ಆಳ ಅರ್ಥವಾಗಿಲ್ಲವೆಂಬುದು ಸುಲಭವಾಗಿ ತಿಳಿಯುತ್ತಿತ್ತು. ನಟರ ಮಾತು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ರಂಗದ ಮೇಲೆ ಬೆಳಕು ಎಲ್ಲೋ ಪಾತ್ರಗಳು ಎಲ್ಲೋ. ಒಟ್ಟಾರೆಯಾಗಿ ಪ್ರದರ್ಶನ ಕಳೆಕಟ್ಟದಿರುವುದಷ್ಟೇ ಅಲ್ಲ, ಪ್ರೇಕ್ಷಕರ ಸಹನೆಯನ್ನೂ ಪರೀಕ್ಷಿಸುತ್ತಿತ್ತು. ಕಷ್ಟಪಟ್ಟು ಮುಕ್ಕಾಲು ಗಂಟೆ ಅದನ್ನು ತಾಳಿಕೊಂಡ ಮೇಲೆ ಜೊತೆಗಿದ್ದವರು,  ನಾವೂ ಹೊರಡೋಣವೇ?  ಎಂದು ಕೇಳಿದರು.

>ನಾಟಕವನ್ನೇ ಗಮನಿಸುತ್ತಿದ್ದ ಅ.ನ.ಕೃ, `ಇನ್ನೂ ಸ್ವಲ್ಪ ಹೊತ್ತು ಇರಿ. ನಾಟಕ ನೋಡೋಣ'  ಎಂದರು. ಹತ್ತು ಹತ್ತು ನಿಮಿಷಗಳಿಗೊಮ್ಮೆ ಒಬ್ಬರಾದ ಮೇಲೆ ಒಬ್ಬರು ಜೊತೆಗಾರರು  ಹೋಗೋಣವೇ?  ಎಂದು ಕೇಳಿದರು ಅ.ನ.ಕೃ ಮಾತ್ರ ನಾಟಕ ಬಿಟ್ಟು ಹೋಗುವ ಮನಸ್ಸು ಮಾಡಲಿಲ್ಲ. ಎಲ್ಲರಿಗೂ ಆಶ್ಚರ್ಯ. ಇಂಥ ಕೆಟ್ಟ ನಾಟಕವನ್ನು ಸಹಿಸಿಕೊಂಡು ಯಾಕೆ ನೋಡುತ್ತಾ ಕುಳಿತಿದ್ದಾರೆ ಎಂಬುದು ಅರ್ಥವಾಗಲಿಲ್ಲ.

ನಾಟಕ ಮುಗಿಯಿತು. ಎಲ್ಲರೂ ನಡೆದುಕೊಂಡು ಕಲಾಕ್ಷೇತ್ರದಿಂದ ಮನೆಗೆ ಹೊರಟರು. ದಾರಿಯಲ್ಲಿ ಅಂಥ ಕೆಟ್ಟ ನಾಟಕವನ್ನು ಅಷ್ಟೊಂದು ತನ್ಮಯತೆಯಿಂದ ನೋಡಿದ ಅ.ನ.ಕೃರ ಬಗ್ಗೆ ಗೇಲಿ ಮಾಡಿದರು. ಅಷ್ಟು ಕೆಟ್ಟ ನಾಟಕವನ್ನು ಅಷ್ಟೊಂದು ತನ್ಮಯತೆಯಿಂದ ನೋಡುವುದು ಅ.ನ.ಕೃ ರವರಿಗೆ ಮಾತ್ರ ಸಾಧ್ಯ ಎಂದು ಕಾಲೆಳೆದರು. ಆಗ ರಾಯರು ಹೇಳಿದರು, `ನೋಡಿ, ಅವರೆಲ್ಲ ಹೊಸ ಹುಡುಗರು. ಹುಮ್ಮಸ್ಸಿನಿಂದ ನಾಟಕ ಮಾಡುತ್ತಿದ್ದಾರೆ. ಅವರ ಉತ್ಸಾಹವನ್ನು ನಾವು ಮೆಚ್ಚಬೇಕು.

ನಮ್ಮ ಬಗ್ಗೆ ಅವರಿಗೆ ತುಂಬ ಗೌರವವಿದೆ. ನಾವೇ ಮಧ್ಯದಲ್ಲಿ ಎದ್ದು ಹೋದರೆ ಅವರಿಗೆ ತುಂಬ ನಿರಾಸೆಯಾಗುತ್ತದೆ. ಅವರಲ್ಲಿ ಕೀಳರಿಮೆ ಬಂದು ನಾಟಕ ಮಾಡುವುದನ್ನೇ ಬಿಟ್ಟುಬಿಡಬಹುದು. ಈ ಹೊತ್ತು ಸರಿಯಾಗಿ ಮಾಡಲಾಗದೇ ಎಡವಿದ್ದರೆ ನಾಳೆ ಎದ್ದು ಸರಿಯಾಗಿ ನಡೆಯುತ್ತಾರೆ. ಅವರು ಇಂದು ಎಡವಿದರೆಂದು ಅವರ ಪ್ರಯತ್ನವನ್ನು ತಿರಸ್ಕರಿಸುವುದು ಸರಿಯೇ'. ಇದು ಅ.ನ.ಕೃರವರು ಕಿರಿಯ ಕಲಾವಿದರನ್ನು, ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದ್ದ ರೀತಿ. `ಛೇ ಈ ಎಳಸು ಹುಡುಗರಿಗೆ ಏನು ಗೊತ್ತು. ತಿಳುವಳಿಕೆ ಇಲ್ಲ, ಅನುಭವ ಇಲ್ಲ ಎಂದು ಟೀಕೆ ಮಾಡುತ್ತ ಮೂಗೆಳೆಯುವುದಕ್ಕಿಂತ, ಪ್ರೋತ್ಸಾಹ ನೀಡುತ್ತ ಅವರ ತಪ್ಪುಗಳನ್ನು ತಿದ್ದುವುದು ಹಿರಿಯರು ಮಾಡಬೇಕಾದ ಕೆಲಸ. ಇದು ಅ.ನ.ಕೃ ಹಾಕಿಕೊಟ್ಟ ಮಾರ್ಗ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.