ADVERTISEMENT

ಕೊಂಬೆಗೆ ಅಂಟಿ ಕುಳಿತ ಗರುಡ

ಡಾ. ಗುರುರಾಜ ಕರಜಗಿ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಒಬ್ಬ ರಾಜನಿಗೆ ಪರದೇಶದಲ್ಲಿದ್ದ ಅವನ ಸ್ನೇಹಿತನೊಬ್ಬ ಅತ್ಯಂತ ಸುಂದರ­ವಾದ ಎರಡು ಗರುಡ ಪಕ್ಷಿಗಳನ್ನು ಕಾಣಿಕೆಯಾಗಿ ಕಳುಹಿಸಿದ. ಅವುಗಳಷ್ಟು ಸುಂದರವಾದ ಪಕ್ಷಿಗಳನ್ನು ರಾಜ ನೋಡಿರಲೇ ಇಲ್ಲ. ಅವುಗಳಿಗೆ ಚೆನ್ನಾಗಿ ತರಬೇತಿ ದೊರಕಲೆಂದು ತನ್ನ ರಾಜ್ಯದಲ್ಲಿದ್ದ ಶ್ರೇಷ್ಠ ಪಕ್ಷಿ ತರಬೇತಿ­ದಾರನಿಗೆ ಅವನ್ನು ಒಪ್ಪಿಸಿದ. ಪ್ರತಿದಿನ ಅವುಗಳ ವಿವರ ತನಗೆ ದೊರಕುವಂತೆ ಆಜ್ಞೆ ನೀಡಿದ. ತರಬೇತಿದಾರ ತನ್ನ ತರಬೇತಿಯನ್ನು ಪ್ರಾರಂಭಿಸಿದ.

ವಾರಕಳೆಯಿತು, ತಿಂಗಳು ಕಳೆಯಿತು. ತರಬೇತಿದಾರ ದಿನವೂ ವರದಿ ಒಪ್ಪಿಸುತ್ತಿದ್ದ. ಒಂದು ಗರುಡ ಪಕ್ಷಿ ಗಂಭೀರವಾಗಿ, ರಾಜಯೋಗ್ಯವಾದ ಶೈಲಿಯಿಂದ ಹಾರುತ್ತ ಇಡೀ ಆಕಾಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅದು ರೆಕ್ಕೆಯನ್ನು ಬಿಚ್ಚಿ ಆಕಾಶದಲ್ಲಿ ಹಾರಾಡಿದ್ದನ್ನು ನೋಡಿದ ಯಾರಿಗಾದರೂ ಪ್ರೀತಿ, ಅಭಿಮಾನ ಉಕ್ಕಿ ಬರುತ್ತಿತ್ತು. ಆದರೆ ಎರಡನೆಯ ಪಕ್ಷಿಯ ಬಗ್ಗೆ ವರದಿ ನಿರಾಶಾದಾಯಕವಾಗಿತ್ತು. ಅದು ಹಾರಲು ಪ್ರಯತ್ನಿಸಲೇ ಇಲ್ಲ. ಏನೆಲ್ಆ ಪುಸಲಾಯಿಸಿದರೂ, ಆಸೆ ತೋರಿ­ದರೂ, ಹೆದರಿಸಿದರೂ ಅದು ತಾನು ಕುಳಿತ ಮರದ ಕೊಂಬೆಯನ್ನು ಬಿಟ್ಟು ಸರಿಯುತ್ತಲೇ ಇಲ್ಲ. ರಾಜ ತನ್ನ ಅರಮನೆಯ ಕಿಟಕಿಯಿಂದ ಅದನ್ನು ಗಮನಿಸುತ್ತಲೇ ಇದ್ದ. ಅವನಿಗೆ ಈ ಗರುಡ ಪಕ್ಷಿಯ ಬಗ್ಗೆ ಚಿಂತೆಯಾಗಿ ಮತ್ತೊಬ್ಬ ತರಬೇತಿದಾರನನ್ನು ನಿಯಮಿ­ಸಿದ. ಆದರೆ ಪರಿಣಾಮ ಒಂದೇ. - ಪಕ್ಷಿ ಕೊಂಬೆಯನ್ನು ಬಿಟ್ಟು ಹಾರಲೇ ಇಲ್ಲ. ಚಿಂತಿಸಿದ ರಾಜ ತನಗೆ ಇದನ್ನು ಕಾಣಿಕೆಯಾಗಿ ಕೊಟ್ಟ ಸ್ನೇಹಿತನನ್ನು ಸಂಪರ್ಕಿಸಿ ಆ ದೇಶದ ವಿಶೇಷ ತರಬೇತಿದಾರನನ್ನು ಕರೆಸಿದ. ಅವನೂ ಏನೇನೋ ಪ್ರಯೋಗಗಳನ್ನು ಮಾಡಿ­ದರೂ ಪಕ್ಷಿ ಹಾರಲು ಮನಸ್ಸು ಮಾಡಲಿಲ್ಲ.

ಆಗ ರಾಜ ಮತ್ತೊಂದು ವಿಚಾರ ಮಾಡಿದ. ತನ್ನ ದೇಶದ ಹಳ್ಳಿಗಳಲ್ಲಿ ಕೆಲವು ರೈತರು ಗರುಡ ಪಕ್ಷಿಗಳನ್ನು ಸಾಕುವುದು ತಿಳಿದಿತ್ತು. ಮಂತ್ರಿಗಳಿಗೆ ಆದೇಶ ನೀಡಿದ, ಅಂಥ ಒಬ್ಬ ಹಿರಿಯ ರೈತನನ್ನು ಕರೆತನ್ನಿ. ಮರುದಿನವೇ ರೈತನೊಬ್ಬ ಹಾಜರಾದ. ಅವನಿಗೆ ಎಲ್ಲ ವಿಷಯವನ್ನು ಸವಿಸ್ತಾರವಾಗಿ ತಿಳಿಸಿ ರಾಜ ಹೇಗಾದರೂ ಮಾಡಿ ಈ ಸುಂದರವಾದ ಗರುಡ ಹಾರಲು ಅನುವು ಮಾಡುವಂತೆ ಕೋರಿದ. ಈಗಾಗಲೇ ಪ್ರಯತ್ನಿಸಿ ಸೋತ ದೇಶವಿದೇಶಗಳ ತರಬೇತಿದಾರರು ಮುಸಿಮುಸಿ ನಕ್ಕರು. ತಮ್ಮಂತಹ ಪರಿಣತರಿಗೇ ಸಾಧ್ಯವಾಗದ್ದು ಈ ರೈತನಿಂದ ಹೇಗಾದೀತು ಎಂದು ಕೈ ತಟ್ಟಿ ನಕ್ಕರು. ಅದನ್ನು ನೋಡಿದ ರೈತ ತಲೆಕಡಿಸಿಕೊಳ್ಳಲಿಲ್ಲ.

ಮರುದಿನ ಕಿಟಕಿಯ ಹತ್ತಿರ ನಿಂತ ರಾಜನಿಗೆ ಆಶ್ಚರ್ಯ ಕಾದಿತ್ತು. ಮೊದ­ಲನೆಯ ಗರುಡ ಆಕಾಶಕ್ಕೆ ಹಾರಿದ ಎರಡು ಕ್ಷಣಗಳಲ್ಲಿ ಎರಡನೆಯ, ಹಾರಲೊಲ್ಲದ ಗರುಡ ಕೂಡ ಆಕಾಶಕ್ಕೆ ನೆಗೆದಿತ್ತು. ತನ್ನ ವಿಶಾಲವಾದ ರೆಕ್ಕೆಗಳನ್ನು ಹರಡಿಕೊಂಡು ನಿಜವಾದ ಬಾನಿನ ರಾಜನಂತೆ ಮೈದುಂಬಿ ಹಾರುತ್ತಿತ್ತು. ರಾಜ ಸಂತೋಷದಿಂದ ಕೂಗಿದ, ಈ ಪವಾಡ ಮಾಡಿದ ರೈತನನ್ನು ತಕ್ಷಣ ಕರೆತನ್ನಿ. ರೈತ ಬಂದು ಕೈ ಜೋಡಿಸಿ ನಿಂತುಕೊಂಡ. ರಾಜ, ‘ಈ ಅಸಾಧ್ಯವಾದ ಪವಾಡವನ್ನು ನೀನು ಹೇಗೆ ಮಾಡಿದೆ, ಅದೂ ಒಂದೇ ಕ್ಷಣದಲ್ಲಿ?’ ಎಂದು ಕೇಳಿದ. ರೈತ ನಿಧಾನವಾಗಿ ಹೇಳಿದ, ‘ನಾನು ಏನೂ ಮಾಡಲಿಲ್ಲ ಪ್ರಭೂ, ಗರುಡ ಕುಳಿತಿದ್ದ ಮರದ ಕೊಂಬೆಯನ್ನು ಕತ್ತರಿಸಿ ಬಿಟ್ಟೆ’.

ನಮ್ಮಲ್ಲಿ ಬಹಳಷ್ಟು ಜನರ ಪರಿಸ್ಥಿತಿ ಕೂಡ ಎರಡನೆಯ ಗರುಡನ ಅವಸ್ಥೆಯೇ. ನಮ್ಮಲ್ಲಿ ಅಪರಿಮಿತವಾದ ಶಕ್ತಿಯಿದೆ, ಸಾಮರ್ಥ್ಯವಿದೆ. ಆದರೆ, ನಾವು ಭಯದಿಂದಲೋ ಭದ್ರತೆಯ ಚಿಂತೆಯಿಂದಲೋ ಇರುವುದಕ್ಕೇ ಅಂಟಿಕೊಂಡು ಕುಳಿತಿದ್ದೇವೆ. ಹೊಸದೇನನ್ನಾದರೂ ಮಾಡ ಹೊರಟರೆ ಇದ್ದದ್ದೇ ಕಳೆದುಹೋದರೆ ಗತಿ ಏನು ಎಂದು ಹೆದರಿ ನಮ್ಮ ಶಕ್ತಿಗಳನ್ನು ಕುಗ್ಗಿಸಿ ಅವುಗಳನ್ನು ಯೋಜಿಸದೇ ಸಮಾಧಿ ಮಾಡಿಬಿಡು­ತ್ತೇವೆ. ಜೀವನದ ಕೊನೆಯಲ್ಲಿ ಬಳಸದೇ ಹಾಗೆಯೇ ಉಳಿದು ಮುಗ್ಗಾಗಿ ಹೋದ ಸಾಮರ್ಥ್ಯಗಳ ಬಗ್ಗೆ ಚಿಂತಿಸಿ ನಿಟ್ಟುಸಿರು ಬಿಡುತ್ತೇವೆ. ನಾವಿರುವ, ಭದ್ರತೆಯೆಂದು ಭಾವಿಸಿರುವ, ಕೊಂಬೆಯನ್ನು ಕತ್ತರಿಸಿ­ಕೊಂಡಾಗಲೇ ನಾವು ಆಗಸ  ಆಳಬಲ್ಲೆ­ವೆಂಬ, ಸಾಗರ ದಾಟಬಲ್ಲೆವೆಂಬ ಶಕ್ತಿಯ ಅರಿವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.