ADVERTISEMENT

ಗಾಂಧಿ ನಡೆದ ದಾರಿಯಲ್ಲಿ...

ಡಾ. ಗುರುರಾಜ ಕರಜಗಿ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ಇದು ಮೊನ್ನೆ ತಾನೇ ನಡೆದ ಘಟನೆ. ಅನೇಕ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಬಹುದಾದ ಘಟನೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಅಪರೂಪದ ಶಾಲೆಯೊಂದಿದೆ. ಅದರ ಹೆಸರು ಸ್ಕೂಲ ಚಂದನ. ನಾನೂ ಪ್ರಪಂಚದಾದ್ಯಂತ ಬೇಕಾದಷ್ಟು ಶಿಕ್ಷಣ ಸಂಸ್ಥೆಗಳನ್ನು ಕಂಡಿದ್ದೇನೆ. ಮಕ್ಕಳ ಸಬಲೀಕರಣದ ವಿಷಯದಲ್ಲಿ ಮತ್ತು ಅವರನ್ನು ಜವಾಬ್ದಾರಿ ಯುವಕರನ್ನಾಗಿ ಮಾಡುವ ಪ್ರಕ್ರಿಯೆಯಲ್ಲಿ ಇದಕ್ಕಿಂತ ಮಿಗಿಲಾದ ಶಾಲೆಯನ್ನು ನಾನು ಕಾಣಲಿಲ್ಲ ಎಂದರೆ ಉತ್ಪ್ರೇಕ್ಷೆಯಾಗದು.
 
ಅಲ್ಲಿಯ ಶಿಕ್ಷಕರೇ ಪ್ರಥಮ ವಿದ್ಯಾರ್ಥಿಗಳು! ತಾವು ಮಕ್ಕಳಿಗೆ ಕಲಿಸಬೇಕಾದ್ದನ್ನು ತಾವೇ ಮಾಡಿ ತೋರಿಸುತ್ತಾರೆ, ವಿದ್ಯಾರ್ಥಿಗಳಲ್ಲಿ ಶಾಶ್ವತ ಬದಲಾವಣೆ ತರಲು ಪ್ರಯತ್ನಿಸುತ್ತಾರೆ. ಇದೇ ಅಕ್ಟೋಬರ್ ಎರಡನೇ ತಾರೀಕಿನಂದು ಶಿಕ್ಷಕರು ಮತ್ತು ಮಕ್ಕಳೆಲ್ಲ ಸೇರಿ ಗಾಂಧಿ  ಜಯಂತಿ ಆಚರಿಸಿದರು.
 
ಅದರ ಭಾಗವಾಗಿ ಗಾಂಧೀಜಿ ಅವರ ಜೀವನ ಕುರಿತಾದ ಉಪನ್ಯಾಸ ಕೇಳಿದರು. ಅದರಿಂದ ಪ್ರಭಾವಿತರಾಗಿ ತಾವೆಲ್ಲ ಗಾಂಧೀಜಿ ಅವರ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಿರ್ಧಾರ ಮಾಡಿದರು. ನಿರ್ಧಾರ ಮಾಡುವುದು ಬಲು ಸುಲಭ.  ಅದನ್ನು ಪಾಲಿಸಲು ಛಲ, ನಿಷ್ಠೆ ಎರಡೂ ಬೇಕು.
 
ಮರುದಿನ ಶಾಲೆಯ ನಿಯಮದಂತೆ ಮಕ್ಕಳು ಬೆಳಿಗ್ಗೆ ಐದು ಗಂಟೆಗೆ ಎದ್ದು ಯೋಗಾಸನ ಮಾಡಬೇಕಿತ್ತು. ಅಂದು ಶಾಲೆಯ ವಾರ್ಡನ್‌ರಿಗೆ ಅನಾರೋಗ್ಯವಾಗಿದೆ. ಸಹಾಯಕ ವಾರ್ಡನ್ ಊರಿಗೆ ತೆರಳಿದ್ದಾರೆ. ಪ್ರಾಂಶುಪಾಲರಾದ ಚಂದ್ರಹಾಸ ಪಟಗಾರ ಮತ್ತು ಶಿಕ್ಷಕರು ಶಾಲಾ ಮೈದಾನದಲ್ಲಿ ಮಕ್ಕಳಿಗಾಗಿ ಕಾದರು.
 
ಆರೂವರೆಯಾಯಿತು, ಗಂಟೆ ಏಳಾಯಿತು, ಮಕ್ಕಳು ಮೈದಾನಕ್ಕೆ ಬರುವ ಲಕ್ಷಣವೇ ಕಾಣುತ್ತಿಲ್ಲ. ಪ್ರಾಂಶುಪಾಲರಿಗೆ ಕೋಪ ಏರತೊಡಗಿತು. ನಿನ್ನೆ ತಾನೆ ಗಾಂಧೀಜಿ  ವಿಚಾರಧಾರೆ ಕೇಳಿಸಿಕೊಂಡು ಅವರಂತೆಯೇ ಸಮಯ ನಿಷ್ಠರಾಗಿರಬೇಕೆಂದುಕೊಂಡ ಪ್ರತಿಜ್ಞೆ ರಾತ್ರಿ ಕಳೆಯುವುದರಲ್ಲಿಯೇ ಕರಗಿಹೋಯಿತೇ.
 
ಈ ಮಕ್ಕಳಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಮನದಲ್ಲಿ ಹೊಳೆದಾಗ ತಾವೂ ಗಾಂಧೀಜಿಯ ಅಹಿಂಸಾ ತತ್ವ ಪಾಲಿಸಬೇಕಲ್ಲವೇ ಎಂಬ ಚಿಂತನೆ ಮೂಡಿತು. ಎರಡು ಕ್ಷಣ ಚಿಂತಿಸಿದಾಗ ಹೊಸದೊಂದು ದಾರಿ ಗಾಂಧಿ ದಾರಿ ನಿಚ್ಚಳವಾಯಿತು.
ಏಳು ಗಂಟೆಗೆ ನಿಧಾನವಾಗಿ ಒಬ್ಬೊಬ್ಬರಾಗಿ ಎದ್ದು ಮಕ್ಕಳು ಹೊರಗೆ ಬಂದರು.

ಬಯಲಿನಲ್ಲಿ ತಮಗಾಗಿ ಕಾದು ನಿಂತಿದ್ದ ಪ್ರಾಂಶುಪಾಲರು, ಶಿಕ್ಷಕರನ್ನು ನೋಡಿ ಭಯ, ನಾಚಿಕೆ, ಅಪರಾಧಿ ಭಾವ ಎಲ್ಲ ಒಮ್ಮೆಗೇ ಅವರನ್ನು ಮುತ್ತಿದವು. ಯಾವ ಮಾತೂ ಆಡದೇ ಎಲ್ಲರೂ ತಲೆತಗ್ಗಿಸಿ ಶಿಕ್ಷಕರ ಮುಂದೆ ನಿಂತರು.
 

ಆಗ ಪ್ರಾಂಶುಪಾಲರು, `ಮಕ್ಕಳೇ, ನೀವಿಂದು ಜವಾಬ್ದಾರಿಯಿಂದ ವರ್ತಿಸಲಿಲ್ಲ. ಅದಕ್ಕೆ ನಾನು ನಿಮಗೆ ಯಾವ ಶಿಕ್ಷೆಯನ್ನೂ ನೀಡುವುದಿಲ್ಲ. ನಾವು ಹೇಳಿದ್ದನ್ನು ನೀವು ಪಾಲಿಸದಿದ್ದಾಗ ಬಹುಶಃ ನಮ್ಮ ಬೋಧನೆಯಲ್ಲೇ ದೋಷವಿರಬೇಕು.

ಆದ್ದರಿಂದ ನಾನು ಹಾಗೂ ನನ್ನ ಸಹೋದ್ಯೋಗಿಗಳು ಇಂದು ಪೂರ್ತಿ ದಿನ ಉಪವಾಸ ಮಾಡುತ್ತೇವೆ. ನೀವು ಗಾಂಧೀಜಿ ತತ್ವಗಳಿಗೆ ಒಂದೇ ದಿನದಲ್ಲಿ ತಿಲಾಂಜಲಿಯನ್ನಿತ್ತರೂ, ನಾವಾದರೂ ಪಾಲಿಸಲು ಪ್ರಯತ್ನಿಸುತ್ತೇವೆ. ನೀವಿನ್ನು ಹೊರಡಿ~ ಎಂದರು. ಮಕ್ಕಳ ಪರಿಸ್ಥಿತಿ ತುಂಬ ಕಠಿಣವಾಯಿತು.
 
ಅವರು ಹೇಗೆ ತಾನೇ ತಮ್ಮ ಪ್ರೀತಿಯ ಶಿಕ್ಷಕರನ್ನು ಬಿಟ್ಟು ತಿಂಡಿ ತಿಂದಾರು, ಊಟ ಮಾಡಿಯಾರು. ಮಕ್ಕಳೆಲ್ಲ ಅಳುತ್ತ ಬಂದು ಗೋಗರೆದು, ವಿನಂತಿಸಿಕೊಂಡು, `ಇನ್ನೊಮ್ಮೆ ಈ ತರಹದ ತಪ್ಪು ತಮ್ಮಿಂದ ಆಗುವುದ್ಲ್ಲಿಲ~ ಎಂದು ಪ್ರಮಾಣಮಾಡಿ ಒಪ್ಪಿಸಿದರು. ಶಿಕ್ಷಕರು ಮಕ್ಕಳನ್ನು ತಬ್ಬಿಕೊಂಡರು.

ಗುರುಗಳ ಕಣ್ಣಲ್ಲಿ ಧನ್ಯತೆಯ ಒರತೆ ಕಂಡರೆ, ಮಕ್ಕಳ ಕಣ್ಣಲ್ಲಿ ಕೃತಜ್ಞತೆಯ ಸೆಲೆ! ಇನ್ನು ಮುಂದೆ ಮಕ್ಕಳಿಂದ ಯಾವ ತಪ್ಪಾದರೂ ನಮ್ಮನ್ನೇ ಶಿಕ್ಷಿಸಿಕೊಳ್ಳುತ್ತೇವೆ ಎಂದು ಶಿಕ್ಷಕರು ತೀರ್ಮಾನ ಮಾಡಿದ್ದಾರೆ! ದಂಡನೆಯಿಂದ ಆಗದ ಬದಲಾವಣೆ ಪ್ರೀತಿಯಿಂದ ಆಗುತ್ತದೆ. ಬದಲಾವಣೆ ಆಗಬೇಕಾದದ್ದು ಮನಸ್ಸು. ಬಹುತೇಕ ಶಾಲೆಗಳಲ್ಲಿ ತಪ್ಪು ನಡೆದಾಗ ಮಕ್ಕಳ ದೇಹಕ್ಕೆ ಶಿಕ್ಷೆ ನೀಡುತ್ತಾರೆ.
 
ದೇಹ - ಮನಸ್ಸು ಎರಡೂ ಬೇರೆ ಬೇರೆ. ಮನಸ್ಸಿನ ತೊಂದರೆಗೆ ದೇಹಕ್ಕೇಕೆ ಶಿಕ್ಷೆ. ಮನಸ್ಸಿನ ಬದಲಾವಣೆಗೆ ಇಂಥ ಅಂತಃಕರಣದ ಉಪಕರಣಗಳೇ ಸರಿ. ಈ ಶಾಲೆಯ ಪ್ರಯೋಗ ಬೇರೆಯವರಿಗೆ ಮಾದರಿಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT