ADVERTISEMENT

ಟಾರ್ಚ್‌ನ ಬ್ಯಾಟರಿ

ಡಾ. ಗುರುರಾಜ ಕರಜಗಿ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ಇದೊಂದು ತೀರಾ ಪುಟ್ಟ ಕಥೆ. ಆದರೆ ಬಹಳೇ ಪ್ರಭಾವಶಾಲಿಯಾದ ಕಥೆ. ನನ್ನ ಗೆಳೆಯನೊಬ್ಬ ಆಫ್ರಿಕಾ ಖಂಡದ ಎರಿಟ್ರಿಯಾ ದೇಶದಲ್ಲಿದ್ದಾನೆ. ಅಲ್ಲಿ ಬಡತನ ವಿಪರೀತ.

ಅನಕ್ಷರತೆ, ದಾರಿದ್ರ್ಯಗಳು ತಾಂಡವವಾಡುತ್ತ, ಒಂದು ದೇಶವಾಗಿ ಉಳಿಯಲು ಹೆಣಗುತ್ತಿದೆ ಎರಿಟ್ರಿಯಾ. ಅಲ್ಲಿ ಎಲ್ಲ ವಸ್ತುಗಳ ಕೊರತೆ. ಮೂಲಭೂತ ಅವಶ್ಯಕತೆಗಳ ಪೂರೈಕೆಯೇ ಕಷ್ಟಸಾಧ್ಯವಾಗಿದೆ. ಬಹಳಷ್ಟು ಹಳ್ಳಿಗಳಲ್ಲಿ ವಿದ್ಯುತ್ ಶಕ್ತಿ ದೊರಕುವುದೇ ಅಪರೂಪ.

ನನ್ನ ಸ್ನೇಹಿತ ಆ ದೇಶದ ದೊಡ್ಡ ಊರಿನಲ್ಲಿ ಒಂದು ಟಾರ್ಚ್ ಕೊಳ್ಳಲು ಅಂಗಡಿಗೆ ಹೋದ. ಅಲ್ಲಿ ಅನೇಕ ಮಾದರಿಯ ಟಾರ್ಚುಗಳನ್ನಿಟ್ಟಿದ್ದರು. ಅದರಲ್ಲೊಂದು ಅವನ ಮನಸ್ಸನ್ನು ಸೆಳೆಯಿತು. ನೋಡಲು ವಿಚಿತ್ರವಾಗಿ ಕಾಣುತ್ತಿತ್ತು. ಅದನ್ನು ತಿರುಗಿಸಿ, ತಿರುಗಿಸಿ ನನ್ನ ಸ್ನೇಹಿತ ಕೌಂಟರಿನಲ್ಲಿದ್ದ ಹೆಂಗಸನ್ನು ಕೇಳಿದ,  `ಇದರ ಬ್ಯಾಟರಿ ಎಷ್ಟು ದಿನ ಬಾಳುತ್ತದೆ?~ ಯಾಕೆಂದರೆ ಇವನು ಇದ್ದ ಹಳ್ಳಿಯಲ್ಲಿ ಬ್ಯಾಟರಿ ಸೆಲ್ ಸಿಗುವುದೂ ಕಷ್ಟ. ಆಕೆ ಥಟ್ಟನೇ ನಕ್ಕು ಹೇಳಿದಳು,  `ನೀವೆಷ್ಟು ದಿನ ಇರುತ್ತೀರೋ ಅಷ್ಟು ದಿನ ಬರುತ್ತದೆ.~

 `ಏನು ಹಾಗೆಂದರೆ?~  ಸ್ನೇಹಿತ ಕೇಳಿದ.

 `ನೀವೇ ಆ ಟಾರ್ಚ್‌ನ ಬ್ಯಾಟರಿ. ಏಕೆಂದರೆ ಅದರೊಳಗೆ ಬ್ಯಾಟರಿ ಇಲ್ಲ. ಕೆಳಗೆ ನೋಡಿ ಒಂದು ಹ್ಯಾಂಡಲ್ ಇದೆ. ಅದನ್ನು ನೀವು ಗರಗರನೇ ತಿರುಗಿಸಿದರೆ ಅದೇ ವಿದ್ಯುತ್ತನ್ನು ಉತ್ಪಾದನೆ ಮಾಡಿ ಬೆಳಕು ಕೊಡುತ್ತದೆ. ನೀವು ಎಷ್ಟು ಹೊತ್ತು ಅದನ್ನು ತಿರುಗಿಸುತ್ತೀರೋ ಅಷ್ಟು ಹೊತ್ತು ಟಾರ್ಚ್ ಬೆಳಕು ನೀಡುತ್ತದೆ.~

ಈತ ತಿರುಗಿಸಿ ನೋಡಿದ. ಹೌದು! ತಿರುಗಿಸಿದಷ್ಟು ಹೊತ್ತು ಬೆಳಕು ಬರುತ್ತದೆ! ತಿರುಗಿಸುವುದು ನಿಂತ ತಕ್ಷಣ ಬೆಳಕು ನಿಂತಿತು. ಆಗ ಆಕೆ ಹೇಳಿದಳು, ನಮ್ಮ ದೇಶದ ಹಳ್ಳಿಗಳಲ್ಲಿ ಬ್ಯಾಟರಿ ಸರಿಯಾಗಿ ದೊರಕುವುದಿಲ್ಲ. ಅದಕ್ಕೆಂದೇ ಇಂಥ ಟಾರ್ಚ್‌ಗಳನ್ನು ಮಾಡಿದ್ದಾರೆ.

ನನ್ನ ಗೆಳೆಯ ನನಗೆ ಈ ವಿಷಯವನ್ನು ತಿಳಿಸಿದಾಗ ನನಗೆ ಬಹಳ ಆಶ್ಚರ್ಯವಾಯಿತು. ಈ ಪುಟ್ಟ ಘಟನೆಯಲ್ಲಿ ಅದೆಂಥ ಅದ್ಭುತ ಸಂದೇಶ ಅಡಗಿದೆ! ನಮ್ಮ ಜೀವನದ ಬ್ಯಾಟರಿ ನಾವೇ. ನಾವು ಶ್ರಮಿಸಿದಷ್ಟೂ ಈ ಜೀವ ಬೆಳಕು ಪಡೆಯುತ್ತದೆ, ಬೆಳಕು ನೀಡುತ್ತದೆ. ಶ್ರಮ ನಿಂತೊಡನೆ ಬೆಳಕು ಪಡೆಯುವುದು, ನೀಡುವುದು ನಿಂತಿತು. ಜೀವನದ ಕೊನೆಯ ಕ್ಷಣದವರೆಗೂ ನಮ್ಮ ಶಕ್ತಿಯನ್ನು ತಿರುಗಿಸುತ್ತಲೇ, ಬಳಸುತ್ತಲೇ, ಬೆಳೆಸುತ್ತಲೇ ಇರಬೇಕು. ಅಂದಾಗಲೇ ನಮಗೂ ಬೆಳಕು, ನಮ್ಮ ಸುತ್ತಲಿನವರಿಗೂ ಬೆಳಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.