ADVERTISEMENT

ತರ್ಕಕ್ಕೆ ಮಿತಿ

ಡಾ. ಗುರುರಾಜ ಕರಜಗಿ
Published 21 ಫೆಬ್ರುವರಿ 2011, 16:45 IST
Last Updated 21 ಫೆಬ್ರುವರಿ 2011, 16:45 IST

ತರ್ಕ ವಾದಕ್ಕೆ ಸರಿ. ತರ್ಕವಿಲ್ಲದೇ ಯಾವ ವ್ಯವಹಾರವೂ ನಡೆಯುವುದಿಲ್ಲ. ನಾವು ಮಂಡಿಸುವ ವಿಷಯ ತರ್ಕಬದ್ಧವಾಗಿಲ್ಲದಿದ್ದಲ್ಲಿ ಅದನ್ನು ಯಾರೂ ಒಪ್ಪುವುದಿಲ್ಲ. ಆದರೆ ಕೆಲವೊಮ್ಮೆ ತರ್ಕ ವಿಪರೀತವಾಗಿ ವಿತರ್ಕವಾದವೂ ಆಗುವುದುಂಟು. ತರ್ಕ ಅದರ ಮಿತಿಯಲ್ಲಿದ್ದರೆ ಸೊಗಸು. ಅದನ್ನು ಕನ್ನಡ-ಸಂಸ್ಕೃತದ ಬಹುದೊಡ್ಡ ವಿದ್ವಾಂಸರೊಬ್ಬರು ತುಂಬ ತಮಾಷೆಯಾಗಿ ಹೇಳುತ್ತಾರೆ. ಅವರ ತಂದೆ ತರ್ಕಶಾಸ್ತ್ರದ ಮಹಾನ್ ಪಂಡಿತರಾಗಿದ್ದರಂತೆ. ಅವರಿಗೆ ‘ತರ್ಕ ಕೇಸರಿ’ ಎಂಬ ಬಿರುದು ದೊರೆತಿತ್ತಂತೆ. ಇವರಿಗೂ ಬಾಲ್ಯದಲ್ಲಿ ಅದೇ ಹುಚ್ಚು. ತಾನೂ ಚೆನ್ನಾಗಿ ತರ್ಕಶಾಸ್ತ್ರವನ್ನೋದಿ, ವಿದ್ವಾಂಸನಾಗಿ ತರ್ಕಕೇಸರಿ ಎಂದೆನ್ನಿಸಿಕೊಳ್ಳಬೇಕು ಎಂಬ ಹಂಬಲ. ಅಂತೆಯೇ ಅಭ್ಯಾಸ ಪ್ರಾರಂಭಿಸಿದರಂತೆ. ಸ್ವಲ್ಪ ದಿನ ಅದನ್ನು ಪ್ರಯತ್ನಿಸಿದ ನಂತರ ಅವರಿಗೆ ಅರಿವಾಯಿತಂತೆ. ತಮಗೆ ಮುಂದೆ ದೊರೆಯುವ ಪದವಿ ‘ತರ್ಕಕೇಸರಿ’ಯಲ್ಲ ಅದು ಕೇವಲ ‘ತರ್ಕಕ್ಕೇ ಸರಿ’ ಎಂದು. ನಂತರ ಆ ಪದವಿಯ ಹಂಬಲ ಬಿಟ್ಟು ಹೋಯಿತಂತೆ.

ಇತ್ತೀಚೆಗೆ ನಾನೊಂದು ಲೇಖನ ಓದಿದಾಗ ಈ ವಿತರ್ಕವಾದದ ನೆನಪು ಬಂತು. ಆ ಲೇಖನದಲ್ಲಿ ಇಂಗ್ಲೆಂಡ್ ಸೈ ನಿಕರ ಶೌರ್ಯದ ಗುಟ್ಟೇನು ಎಂಬುದರ ಬಗ್ಗೆ ಬರೆದಿತ್ತು. ಅವರಿಗೆ ತಮ್ಮ ದೇಶದ ಸೈನಿಕರ ಶೌರ್ಯ, ಸಾಹಸಗಳ ಬಗ್ಗೆ ಅಪಾರ ಅಭಿಮಾನ. ಅವರ ಶೌರ್ಯದ ಕಾರಣವೇನು ಎಂಬುದನ್ನು ವಿವರಿಸಿದ್ದಾರೆ. ಆ ತರ್ಕವನ್ನು ಗಮನಿಸಿ.

ಇಂಗ್ಲೆಂಡಿನ ಸೈನಿಕರ ದೇಹದಾರ್ಢ್ಯವನ್ನು ಕಾಪಾಡಲು ಅವರಿಗೆ ದಿನಾಲು ಅತ್ಯುತ್ತಮ ವಾದ ದನದ ಮಾಂಸವನ್ನು ಕೊಡುತ್ತಾರಂತೆ. ಆ ಶ್ರೇಷ್ಠ ಮಟ್ಟದ ದನಗಳನ್ನು ಆರೈಕೆ ಮಾಡಲು, ಅವುಗಳ ಮಾಂಸ ವೃದ್ಧಿ ಮಾಡಲು ಅವುಗಳಿಗೆ ಉತ್ತಮ ಮಟ್ಟದ ಕ್ಲೋವರ್ ಬೆಳೆಯ ಎಲೆಗಳನ್ನು ಹಾಕುತ್ತಾರೆ. ಆ ಕ್ಲೋವರ್ ಬೆಳೆ ಸಮೃದ್ಧಿಯಾಗಿ ಬೆಳೆಯಲು ಸರಿಯಾದ ಪರಾಗಸ್ಪರ್ಶವಾಗಬೇಕು. ಅದಕ್ಕೇ ದುಂಬಿಗಳು ಬಹಳ ಸಂಖ್ಯೆಯಲ್ಲಿ ಬರಬೇಕು. ಆದರೆ ಇದಕ್ಕೆ ತೊಂದರೆಯಾಗುವುದು ಇಲಿಗಳಿಂದ. ಇಲಿಗಳು ಬೆಳೆ ಹಾಳು ಮಾಡಿದರೆ ದುಂಬಿಗಳು ಪರಾಗಸ್ಪರ್ಶ ಹೇಗೆ ಮಾಡಿಯಾವು? ಇಲಿಗಳ ಹಾವಳಿ ತಡೆಯಲು ಬೆಕ್ಕುಗಳು ಬೇಕು. ಅಷ್ಟೊಂದು ಬೆಕ್ಕುಗಳು ಎಲ್ಲಿಂದ ಬಂದಾವು? ಇಂಗ್ಲೆಂಡಿನಲ್ಲಿ ಸರಿಯಾದ ವಯಸ್ಸಿನಲ್ಲಿ ಮದುವೆಯಾಗದೇ ಹಾಗೆಯೇ ಮುದುಕರಾದರೂ ಕುಮಾರಿಯಾಗಿಯೇ ಉಳಿದ ಹೆಣ್ಣುಮಕ್ಕಳು ತಮ್ಮ ಜೊತೆಗೆ ಬೆಕ್ಕುಗಳನ್ನು ಪ್ರೀತಿಯ ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುತ್ತಾರಂತೆ. ಆದ್ದರಿಂದ ಇಂಗ್ಲೆಂಡಿನ ಸೈನಿಕರ ಶೌರ್ಯಕ್ಕೆ ಆ ದೇಶದ ಮದುವೆಯಾಗದೇ ಉಳಿದ ವಯಸ್ಸಾದ ಕನ್ಯೆಯರೇ ಕಾರಣ ಎಂಬುವುದು ತರ್ಕ.

ಈ ಕನ್ಯೆಯರು ಸಾಕಿದ ಬೆಕ್ಕುಗಳಿಂದ ಇಲಿಗಳ ನಿಯಂತ್ರಣವಾಗುತ್ತದೆ, ಆಗ ಕ್ಲೋವರ್ ಬೆಳೆ ಹಾನಿಯಾಗುವುದಿಲ್ಲ, ಸಹಸ್ರಾರು ದುಂಬಿಗಳು ಬಂದು ಪರಾಗಸ್ಪರ್ಶ ಮಾಡುತ್ತವೆ, ಕ್ಲೋವರ್ ಬೆಳೆ ಸಮೃದ್ಧಿಯೂ, ಪೌಷ್ಟಿಕವೂ ಆಗುತ್ತದೆ, ಅದನ್ನು ತಿಂದ ದನಗಳು ಹೆಚ್ಚು ಮಾಂಸವನ್ನು ಸಂಪಾದಿಸಿಕೊಳ್ಳುತ್ತವೆ, ಅವುಗಳ ಮಾಂಸವನ್ನು ತಿಂದ ಸೈನಿಕರ ದೇಹದಾರ್ಢ್ಯ ಹಾಗೂ ಶೌರ್ಯಗಳು ತುಂಬ ಶ್ರೇಷ್ಠಮಟ್ಟದ್ದಾಗುತ್ತವೆ.

ಹೀಗೆ ಬೆಳೆಯುತ್ತದೆ ನಮ್ಮ ತರ್ಕ. ನಮ್ಮ ಸಮಾಜಜೀವನದಲ್ಲಿ ಕೆಲವರು ಕೇವಲ ತಾರ್ಕಿಕವಾಗಿ ಮಾತನಾಡುತ್ತ ಜನರನ್ನು ಸಂದೇಹಕ್ಕೆ ದೂಡುತ್ತಾರೆ. ಆದರೆ ಯಾವ ಸಾರ್ಥಕ ಕೆಲಸವಾಗುವುದಿಲ್ಲ. ತರ್ಕವನ್ನು ಬಹಳವಾಗಿ ಬೆಳೆಸದೇ ಮಿತಿಯಲ್ಲಿಟ್ಟರೆ ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.