ADVERTISEMENT

ದಡ್ಡರು ಕಂಡುಹಿಡಿದ ಪರಿಹಾರ

ಡಾ. ಗುರುರಾಜ ಕರಜಗಿ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ಒಂದು ಬಹುದೊಡ್ಡ ಅಂತರ ರಾಷ್ಟ್ರೀಯ ಕಂಪನಿಯಲ್ಲಿ ಮಾಡಿದ ಪ್ರಯೋಗ ಇದು.
ಕಂಪನಿಯ ಹಿರಿಯ ಅಧಿಕಾರಿಗಳು ತಮ್ಮ ಮಾನವ ಸಂಪನ್ಮೂಲ ಇಲಾಖೆಯ ಹಿರಿಯರೊಂದಿಗೆ ಮಾತನಾಡುತ್ತಿದ್ದಾಗ ಕಂಪನಿಯಲ್ಲಿ ಕೆಲವರ ಕೆಲಸ ಉತ್ತಮ ಮಟ್ಟದಲ್ಲಿ ಇಲ್ಲವೆಂದೂ ಅವರೆಲ್ಲ ಅಪ್ರಯೋಜಕರು, ಅವರನ್ನು ತೆಗೆದು ಹಾಕಬೇಕೆಂಬ ವಿಷಯ ಚರ್ಚೆಗೆ ಬಂದಿತು. ಆಗ ಇಲಾಖೆಯ ಮುಖ್ಯಸ್ಥರು, ಯಾರೂ ದೊರೆಯದೇ ಅವರ ಸೃಜನಶೀಲತೆ ಹೊರಬರುವುದಿಲ್ಲ.  ಇನ್ನು ಕೆಲವರಿಗೆ ತಾವು ಅತ್ಯಂತ ಸೃಜನಶೀಲರು ಎಂಬ ವಿಚಾರವೇ ತಿಳಿದಿಲ್ಲ. ಆದರೆ ಸರಿಯಾದ ಅವಕಾಶ ದೊರೆತರೆ ಎಲ್ಲರೂ ಸೃಜನಶೀಲತೆಯನ್ನು ಮರೆಯುತ್ತಾರೆ ಎಂದರು. ಹಾಗಾದರೆ ನಾನು ಕೆಲವರನ್ನು ಆಯ್ಕೆ ಮಾಡಿ ಕೊಡುತ್ತೇನೆ ಅವರೆಷ್ಟು ಸೃಜನಶೀಲರು ಎಂಬುದನ್ನು ನೋಡಿಯೇ ಬಿಡೋಣ ಎಂದರು ಕಂಪನಿಯ ಮ್ಯೋನೇಜಿಂಗ್ ಡೈರೆಕ್ಟರ್‌ರವರು. 

ಮರುವಾರ ಕಂಪನಿಯಲ್ಲಿ ಅತ್ಯಂತ ದಡ್ಡರಾದವರ ಹುಡುಕಾಟ ನಡೆಯಿತು. ಪ್ರತಿಯೊಂದು ವಿಭಾಗದಲ್ಲಿ ತೀರಾ ಕಳಪೆಯಾದ ಕೆಲಸ ಮಾಡಿದವರನ್ನು ಹುಡುಕಿ ಅದರಲ್ಲೂ ತೀರ ಕನಿಷ್ಠರಾದ ಹತ್ತು ಜನರನ್ನು ಆಯ್ಕೆ ಮಾಡಿದರು. ಅವರನ್ನು ಮಾನವ ಸಂಪನ್ಮೂಲ ಇಲಾಖೆಯ ಮುಖ್ಯಸ್ಥರಿಗೆ ಒಪ್ಪಿಸಿದರು. ಅವರು ಮ್ಯೋನೇಜಿಂಗ್ ಡೈರೆಕ್ಟರ್‌ರನ್ನು ಭೇಟಿಯಾಗಿ ಕಂಪನಿಯು ಎದುರಿಸುತ್ತಿರುವ ದೊಡ್ಡ ದೊಡ್ಡ ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಬಂದರು. 

ಮರುದಿನ ಈ ಹತ್ತು ಜನರನ್ನು ಕಂಪನಿಯ ಅತಿಥಿ ನಿಲಯಕ್ಕೆ ಕರೆದೊಯ್ದರು. ಅವರಿಗೆಲ್ಲ ಅಲ್ಲಿ ಇರಲು ಚೆಂದವಾದ ವ್ಯವಸ್ಥೆಯಾಗಿತ್ತು.  ಪ್ರತಿಯೊಬ್ಬರಿಗೂ ಒಂದು ಹವಾ ನಿಯಂತ್ರಿತ ಕೊಠಡಿ, ಸಕಲ ಸೌಕರ್ಯಗಳು ಸಿದ್ಧವಾಗಿದ್ದವು. ಅವರಾರೂ ಇಂತಹ ಸುಖವನ್ನು ಪಡೆದವರಲ್ಲ. ಮರುದಿನ ಅವರಿಗೆಲ್ಲ ಹೊಸ ಬಟ್ಟೆಗಳು, ಸೂಟುಗಳು ತಯಾರಾಗಿ ಬಂದಿದ್ದವು. ಅವರು ಅವನ್ನೆಲ್ಲ ಧರಿಸಿದಾಗ ದೊಡ್ಡ ಅಫೀಸರುಗಳ ತರಹ ಕಾಣುತ್ತಿದ್ದರು.

ADVERTISEMENT

ಬೆಳಿಗ್ಗೆ ತಿಂಡಿಯಾದ ಮೇಲೆ ಅವರನ್ನು ಇಲಾಖೆಯ ಅಧಿಕಾರಿಗಳು ಕಂಪನಿಯ ಮುಖ್ಯ ಆಡಳಿತ ಕಚೇರಿಗೆ ಕರೆದುಕೊಂಡು ಬಂದರು. ಹತ್ತು ಜನರನ್ನು ಕಂಪನಿಯ ಬೋರ್ಡ ರೂಮಿಗೆ ತರಲಾಯಿತು. ಪಾಪ! ಅವರಲ್ಲಿ ಯಾರೂ ಇದುವರೆಗೆ ಇಂತಹ ವೈಭವೋಪೇತವಾದ ಕೊಠಡಿಯನ್ನು ನೋಡಿರಲಿಲ್ಲ. ಈ ಕೊಠಡಿಯಲ್ಲಿಯೇ ಕಂಪನಿಯ ಅತ್ಯಂತ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡದ್ದನ್ನು ತಿಳಿಸಲಾಯಿತು.

ನಂತರ ಅಲ್ಲಿದ್ದ ಭಾರಿ ಚರ್ಮದ ಕುರ್ಚಿಗಳಲ್ಲಿ ಕೂಡ್ರಿಸಿ ಇಲಾಖೆಯ ಮುಖ್ಯಸ್ಥರು ಮಾತನಾಡಿದರು. `ನಿಮಗೆ ಇದೆಲ್ಲ ಆಶ್ಚರ್ಯವನ್ನು ತಂದಿರಬೇಕು. ನೀವು ಹತ್ತು ಜನ ನಮ್ಮ ಕಂಪನಿಯಲ್ಲಿಯೇ ಅತ್ಯಂತ ಪ್ರತಿಭಾನ್ವಿತರಾದವರು. ನಿಮ್ಮ ಶಕ್ತಿ ಅಪಾರವಾದದ್ದು. ಅದಕ್ಕೇ ತಮ್ಮ ಮುಂದೆ ಕಂಪನಿಯ ಕೆಲವು ಪ್ರಮುಖ ಸಮಸ್ಯೆಗಳನ್ನು ಇಡುತ್ತಿದ್ದೇವೆ. ಅವುಗಳಿಗೆ ನೀವು ಖಂಡಿತವಾಗಿಯೂ ಪರಿಹಾರಗಳನ್ನು ಕಂಡುಹಿಡಿಯುತ್ತೀರೆಂಬ ನಂಬಿಕೆ ಇದೆ.~  ಅವರ ಮುಂದೆ ಸಮಸ್ಯೆಗಳನ್ನು ವಿವರಿಸಿ ಹೊರಟು ಹೋದರು. ಸಂಜೆಗೆ ಅವರು ಮರಳಿ ಬಂದಾಗ ಅವರ ಬಹುತೇಕ ಎಲ್ಲ ಸಮಸ್ಯೆಗಳಿಗೂ ಸರಿಯಾದ ಪರಿಹಾರಗಳನ್ನು ಈ ಹತ್ತು ಜನ ಗುರುತಿಸಿದ್ದರು! ಕಂಪನಿಯ ದೊಡ್ಡ ದೊಡ್ಡ ಅಧಿಕಾರಿಗಳಿಗೂ ಅಸಾಧ್ಯವಾದದ್ದು ಇವರಿಗೆ ಸುಲಭ ಸಾಧ್ಯವಾಗಿತ್ತು!.

ಸೃಜನಶೀಲತೆ ಯಾರೊಬ್ಬರ ಸೊತ್ತಲ್ಲ. ಅದು ಎಲ್ಲರಲ್ಲೂ ಇದೆ. ನಮ್ಮಲ್ಲಿ ಅದು ಇದೆ ಎಂದು ತಿಳಿದು ಸದಾ ಹುಮ್ಮಸ್ಸಿನಲ್ಲಿ ಮುನ್ನುಗ್ಗಿದರೆ ಅದು ಪ್ರಕಾಶಕ್ಕೆ ಬರುತ್ತದೆ. ನನ್ನಂಥ ದಡ್ಡ ಯಾರಿಲ್ಲ ಎಂದು ಕೊರಗುತ್ತ ಕುಳಿತರೆ ಒಳಗಿದ್ದ ಸೃಜನಶೀಲತೆ ಕರಗಿಹೋಗುತ್ತದೆ. ಬುದ್ಧಿವಂತರಾಗುವುದು, ಆಗದಿರುವುದು ನಮ್ಮ ಸಕಾರಾತ್ಮಕ ಇಲ್ಲವೇ ನಕಾರಾತ್ಮಕ ಚಿಂತನೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.