ADVERTISEMENT

ನಾವು ಕಂಡಂತೆ ಪ್ರಪಂಚ

ಡಾ. ಗುರುರಾಜ ಕರಜಗಿ
Published 20 ಫೆಬ್ರುವರಿ 2011, 17:45 IST
Last Updated 20 ಫೆಬ್ರುವರಿ 2011, 17:45 IST

ಆಗ ತಾನೇ ದ್ರೋಣಾಚಾರ್ಯರು ಹಸ್ತಿನಾವತಿಗೆ ಬಂದು ಸೇರಿದ್ದರು. ಕುರು ಪಿತಾಮಹ ಭೀಷ್ಮರು ಅವರನ್ನು ಮಕ್ಕಳ ಶಿಕ್ಷಣಕ್ಕೆಂದು ನೇಮಿಸಿಕೊಂಡಿದ್ದರು. ದ್ರೋಣರು ತುಂಬ ಸೂಕ್ಷ್ಮಗ್ರಾಹಿಗಳು. ಅವರು ಮಕ್ಕಳಿಗೆ ತರಬೇತಿ ನೀಡುವಾಗ ಅವರ ಮನಸ್ಸನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದರು. ಈ ಪುಟ್ಟ ಬಾಲಕರನ್ನು ಒಬ್ಬೊಬ್ಬರನ್ನಾಗಿ ಕರೆದು ಮಾತನಾಡಿಸಿ ಅವರ ಆಂತರ್ಯವನ್ನು ತಿಳಿಯಲು ಪ್ರಯತ್ನ ಮಾಡುತ್ತಿದ್ದರು.

ಒಂದು ದಿನ ಅವರು ಬಾಲಕ ಧರ್ಮರಾಯ ಹಾಗೂ ದುರ್ಯೋಧನರನ್ನು ಕರೆದರು. ಮಕ್ಕಳೇ ನಿಮಗೊಂದು ಕೆಲಸವಿದೆ ಇಂದು. ನೀವಿಬ್ಬರೂ ಇಡೀ ದಿನ ಬೇರೆ ಬೇರೆಯಾಗಿ ನಗರಪ್ರದಕ್ಷಿಣೆ ಮಾಡಿ ಬರಬೇಕು. ಎಷ್ಟು ಸಾಧ್ಯವೋ ಅಷ್ಟು ಜನರನ್ನು ಭೆಟ್ಟಿಯಾಗಬೇಕು, ಅವರ ಬಗ್ಗೆ ವಿಷಯ ಸಂಗ್ರಹಿಸಬೇಕು, ಅವರ ಶಕ್ತಿಗಳ ಬಗ್ಗೆ ಅವರ ಅಶಕ್ತತೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿ ಹೇಳಿ ಕಳುಹಿಸಿದರು.

ಸಾಯಂಕಾಲ ಮಕ್ಕಳು ಮರಳಿ ಬಂದರು. ತಕ್ಷಣ ಅವರನ್ನು ಮಾತನಾಡಿಸದೇ ರಾತ್ರಿ ಊಟವಾದ ಮೇಲೆ ಚರ್ಚಿಸೋಣ ಎಂದು ಹೇಳಿ ನಡೆದರು. ಧರ್ಮರಾಜ ಮತ್ತು ದುರ್ಯೋಧನ ಇಬ್ಬರೂ ತಮ್ಮ ಅನುಭವಗಳನ್ನು ಹೇಳಲು ಕಾತರರಾಗಿದ್ದರು. ರಾತ್ರಿ ಆಚಾರ್ಯ ದ್ರೋಣರು ಮೊದಲಿಗೆ ಧರ್ಮರಾಜರನ್ನು ಕರೆದು ಅವನ ಅನುಭವವನ್ನು ಹೇಳಲು ತಿಳಿಸಿದರು.

‘ಗುರುಗಳೇ ನಮ್ಮ ಹಸ್ತಿನಾವತಿಯಂಥ ಸಮೃದ್ಧನಗರ ಯಾವುದೂ ಇರಲಿಕ್ಕಿಲ್ಲ. ನಾನು ಕಂಡ ಪ್ರತಿಯೊಬ್ಬ ವ್ಯಕ್ತಿ ಧರ್ಮಿಷ್ಠನಾಗಿದ್ದ, ಸುಸಂಸ್ಕೃತನಾಗಿದ್ದ. ಅವನಲ್ಲಿ ಪರಿಶ್ರಮ ಮಾಡುವ ಮನಸ್ಸಿತ್ತು. ಯಾರಲ್ಲೂ ಮತ್ತೊಬ್ಬರಿಗೆ ಮೋಸ ಮಾಡುವ ಬುದ್ಧಿ ಕಾಣಲಿಲ್ಲ. ಅವರಲ್ಲಿ ತಮ್ಮ ನಾಡಿನ ಬಗ್ಗೆ, ರಾಜರ ಬಗ್ಗೆ ತುಂಬ ಅಭಿಮಾನ ಹಾಗೂ ಗೌರವ’ ಎಂದು ಸಂಭ್ರಮದಲ್ಲಿ ನುಡಿದ. ‘ಹಾಗಾದರೆ ಅವರಲ್ಲಿ ಯಾವ ದೌರ್ಬಲ್ಯವೂ ಇರಲಿಲ್ಲವೇ?’ ಕೇಳಿದರು ದ್ರೋಣರು. ‘ಇಲ್ಲ ಗುರುಗಳೇ ನನಗೆ ಯಾವ ದೌರ್ಬಲ್ಯಗಳೂ ಕಾಣಲಿಲ್ಲ. ಹಾಗೆ ನೋಡಿದರೆ ನನ್ನಲ್ಲೇ ಅನೇಕ ಕೊರತೆಗಳು ಕಂಡವು. ನಾನು ಕಂಡವರೆಲ್ಲರೂ ನನಗಿಂತ ಒಳ್ಳೆಯವರಾಗಿಯೇ ಇದ್ದರು’ ಎಂದು ನುಡಿದ ಧರ್ಮರಾಜ.

ನಂತರ ಆಚಾರ್ಯರು ದುರ್ಯೋಧನನನ್ನು ಕರೆದು ಅದೇ ಪ್ರಶ್ನೆ ಮಾಡಿದರು. ಅದಕ್ಕೆ ಅವನು, ‘ಗುರುಗಳೇ, ನಮ್ಮ ರಾಜ್ಯದ ಪರಿಸ್ಥಿತಿ ಚೆನ್ನಾಗಿಲ್ಲ. ನಾನು ಎಷ್ಟೊಂದು ಜನರನ್ನು ಕಂಡೆ. ಅವರೆಲ್ಲ ದುರಾಚಾರಿಗಳು, ಅನಾಚಾರಿಗಳು, ಅಪಚಾರಿಗಳು ಮತ್ತು ಅತ್ಯಾಚಾರಿಗಳು. ಒಬ್ಬರಲ್ಲಿಯೂ ಧರ್ಮಬುದ್ಧಿ ಇಲ್ಲ. ಸದಾ ಮತ್ತೊಬ್ಬರಿಗೆ ಮೋಸ ಮಾಡುವ ಹೊಂಚಿನಲ್ಲೇ ಇದ್ದಾರೆ. ಕಪಟ, ವಂಚನೆಗಳೇ ಅವರ ಬಂಡವಾಳಗಳಾಗಿವೆ’ ಎಂದ. ‘ಅಲ್ಲಪ್ಪ. ಅವರಲ್ಲಿ ಯಾವ ಒಳ್ಳೆ ಗುಣಗಳನ್ನೂ ನೀನು ಕಾಣಲಿಲ್ಲವೇ?’ ಎಂದು ಆಶ್ಚರ್ಯದಿಂದ ಕೇಳಿದರು ಗುರುಗಳು. ‘ಇಲ್ಲ ಗುರುಗಳೇ ಅವರಲ್ಲಿ ಯಾರೂ ಒಳ್ಳೆಯವರಾಗಿರಲಿಲ್ಲ. ಬಹುಶಃ ನಾನೊಬ್ಬನೇ ಪರಿಪೂರ್ಣ ವ್ಯಕ್ತಿ. ನಾನು ಕಂಡವರಲ್ಲಿ ಯಾರೊಬ್ಬರೂ ನನ್ನ ವ್ಯಕ್ತಿತ್ವದ ಹತ್ತಿರ ಕೂಡ ಬರುವುದು ಸಾಧ್ಯವಿರಲಿಲ್ಲ’ ಎಂದು ದುರ್ಯೋಧನ ಹೆಮ್ಮೆಯಿಂದ ಹೇಳಿದ. ಗುರುಗಳು ನಿಟ್ಟುಸಿರುಬಿಟ್ಟು ನುಡಿದರು, ‘ಮಗೂ ನೀನು ಹೇಗಿದ್ದೀಯೋ ಸಮಾಜ ಹಾಗಿರುತ್ತದೆ.’

ಪ್ರಪಂಚ ಕನ್ನಡಿ ಇದ್ದಂತೆ. ಅಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ನಾವು ಯಾವುದನ್ನು ಕಾಣಬೇಕೆನ್ನುತ್ತೇವೋ ಅದೇ ಸಿಗುತ್ತದೆ. ಕಣ್ಣಲ್ಲಿ ಬರೀ ಕೊಳಕು ತುಂಬಿಕೊಂಡು ನೋಡಿದರೆ ಕೊಳಕೇ ಕಾಣುತ್ತದೆ. ನಿರ್ಮಲವಾದ ಮನಸ್ಸಿನಿಂದ ಕಂಡರೆ ಸುಂದರವಾದದ್ದು ಸಿಗುತ್ತದೆ. ನಾವು ಏಕೆ ಹುಡುಕಾಡಿ, ಹುಡುಕಾಡಿ ಕೆಟ್ಟದ್ದನ್ನೇ ನೋಡಿ, ಕೇಳಿ ಮನಸ್ಸನ್ನು ಕಸದ ಬುಟ್ಟಿಯನ್ನಾಗಿಸಿಕೊಳ್ಳಬೇಕು? ಸದಾ ಒಳ್ಳೆಯದನ್ನು ನೋಡುವ, ಮಾತನಾಡುವ, ತಿಳಿಯುವ ಪ್ರಯತ್ನ ಮಾಡುತ್ತಿದ್ದರೆ ಕನಿಷ್ಠ ನಮ್ಮ ಸುತ್ತಮುತ್ತಲಿನ ವಾತಾವರಣವಾದರೂ ನಿರ್ಮಲವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.