ADVERTISEMENT

ನೋವಾಗುವ ಮೋಹ

ಡಾ. ಗುರುರಾಜ ಕರಜಗಿ
Published 19 ಫೆಬ್ರುವರಿ 2015, 19:30 IST
Last Updated 19 ಫೆಬ್ರುವರಿ 2015, 19:30 IST

ಇತ್ತೀಚಿಗೆ ಒಂದು ಬೋಡೊ ಭಾಷೆಯ ಕಥೆಯನ್ನು ಇಂಗ್ಲಿಷ್‌ನಲ್ಲಿ ಓದಿದೆ.  ಧುಬಡಿ ಎಂಬ ಊರಿನಲ್ಲಿ ಶಾಲಾ ಇನ್‌ಸ್ಪೆಕ್ಟರ್‌ ಕಚೇರಿಯಲ್ಲಿ ಯಾದವ ಬೋರಾ ಎಂಬ ವ್ಯಕ್ತಿ ಮುಖ್ಯ ಗುಮಾಸ್ತ.  ಈತನ ಮೇಲೆ ಸಬ್‍ ಇನ್‌ಸ್ಪೆಕ್ಟರ್‌ ಮತ್ತು ಇನ್‌ಸ್ಪೆಕ್ಟರ್‌ ಇದ್ದಾರೆ. ಯಾದವ ಬೋರಾ ಕೂಡ್ರುವುದು ಕಚೇರಿಯ ಒಂದು ಮೂಲೆಯಲ್ಲಿದ್ದ ಕೊಠಡಿಯಲ್ಲಿ. ಹಳೆಯ ಮರದ ಮೇಜು, ಅದರ ಮೇಲೆ ಹಸಿರು ಪ್ಲಾಸ್ಟಿಕ್ ಬಟ್ಟೆ ಹೊದಿಸಿದ್ದಾರೆ. ಮೇಜಿನ ಮೇಲೆಲ್ಲ ಫೈಲುಗಳು. ಒಂದೆರಡು ಬಳಸಿ, ಬಳಸಿ ನುಣುಪಾದ ಕಲ್ಲುಗಳು ಕಾಗದಗಳು ಹಾರಿ­ಹೋಗ­ದಂತೆ ನೋಡಿಕೊಳ್ಳುತ್ತವೆ.

ಮೇಜಿನ ಮಧ್ಯದಲ್ಲಿರುವುದು ಹೊಳೆಹೊಳೆವ ಕರೆಗಂಟೆ. ಯಾದವ ಬೋರಾನಿಗೆ ಈ ಕರೆಗಂಟೆ ಅಧಿಕಾರದ ಲಾಂಛನ. ಅದು ಬ್ರಿಟಿಷರ ಕಾಲದ ಗಂಟೆ. ಬೋರಾನ ಅಧಿಕಾರಿಗಳ ಹತ್ತಿರವೂ ಕರೆಗಂಟೆ­ಗಳಿದ್ದರೂ ಅವುಗಳ ಧ್ವನಿ ಇಷ್ಟು ತೀಕ್ಷ್ಣವಾಗಿಲ್ಲ.  ಅದಲ್ಲದೇ ಅವು ಹಲ­ವಾರು ಬಾರಿ ಬದಲಾಗಿವೆ. ಆದರೆ, ಬೋರಾನ ಕರೆಗಂಟೆ ಮಾತ್ರ ದಶಕ­ಗಳಿಂದ ಹಾಗೆಯೇ ಇದೆ. ತಾನು ಎರಡನೇ ದರ್ಜೆ ಗುಮಾಸ್ತನಾಗಿ­ದ್ದಾಗಿ­ನಿಂದ ಈ ಕರೆಗಂಟೆಯನ್ನು ಕೇಳಿದ್ದಾನೆ.  ತಾನೂ ಮುಂದೆ ಮುಖ್ಯ ಗುಮಾಸ್ತ­ನಾದ ಮೇಲೆ ತನಗೂ ಆ ಕರೆಗಂಟೆ ಒತ್ತುವ ಅವಕಾಶ ಬರುತ್ತದೆಂದು ಕನಸು ಕಂಡಿದ್ದಾನೆ. ಅದೇನು ಶಕ್ತಿ ಆ ಕರೆಗಂಟೆಗೆ! ಅದರ ಸ್ಪ್ರಿಂಗ್‌ಗಳನ್ನು ತಿರುಗಿಸಿ ಬಟನ್ ಮೇಲೆ ಬೆರಳಿಟ್ಟು ಒತ್ತಿದರೆ ಇಡೀ ಆಫೀಸಿನ ಮೂಲೆ ಮೂಲೆಗೂ ಅದರ ಧ್ವನಿ ಕೇಳಿಸುತ್ತದೆ. ಅಷ್ಟೇ ಅಲ್ಲ, ಮುಖ್ಯ ಗುಮಾಸ್ತರ ಸೇವೆಗೆಂದು ಇದ್ದ ಮೂವರಲ್ಲಿ ಒಬ್ಬ ಓಡಿ ಬರುತ್ತಾನೆ. ಕೈ ಕಟ್ಟಿ, ‘ಏನಪ್ಪಣೆ ಬಾಬೂ?’ ಎಂದು ವಿನಯದಿಂದ ಕೇಳುತ್ತಾನೆ. ಆರಡಿ ಎತ್ತರದ ಮನುಷ್ಯ­ನೊಬ್ಬನನ್ನು ತನ್ನ ಧ್ವನಿಯಿಂದ ಓಡಿ ಬರುವಂತೆ ಮಾಡುವ ಕರೆಗಂಟೆಯ ಶಕ್ತಿ ಸಣ್ಣದೇ?

ಇಂದು ಯಾದವ ಬೋರಾ ಕರೆ­ಗಂಟೆಯನ್ನು ಮೇಲಿಂದ ಮೇಲೆ ಬಾರಿಸುತ್ತಿದ್ದಾನೆ. ಸದ್ದು ಕೇಳಿ ಒಳಬಂದ ಸೇವಕನಿಗೆ ಒಂದು ಕೆಲಸ ಹೇಳಿ ಆತ ಕೊಠಡಿಯಿಂದ ಹೊರಡುವ ಮೊದಲೇ ಮತ್ತೊಮ್ಮೆ ಗಂಟೆ ಬಾರಿಸುತ್ತಾನೆ. ಇವರ ಕೈಕೆಳಗೆ ಕೆಲಸಮಾಡುವ ಮತ್ತೊಬ್ಬ ಗುಮಾಸ್ತ ಕೇಳಿದ, ‘ಬಾಬೂ ಇವತ್ತು ನಿಮ್ಮ ಕರೆಗಂಟೆ ನಿಲ್ಲುವಂತೆ ಕಾಣುವುದಿಲ್ಲ. ಏನು ವಿಶೇಷ?’ ದುಃಖ ತುಂಬಿದ ಧ್ವನಿಯಲ್ಲಿ ಯಾದವ ಬೋರಾ ಹೇಳಿದ, ‘ನಿನಗೆ ಇದರ ಮರ್ಮ ಅರ್ಥವಾಗುವುದಿಲ್ಲ ಮಗೂ.  ಇಂದು ನನ್ನ ಸೇವೆಯ ಕೊನೆಯ ದಿನ.  ನಾಳೆಯಿಂದ ನಾನು ಕಚೇರಿಗೆ ಬರುವುದಿಲ್ಲ. ಇಂದೇ ನನ್ನ ಪ್ರೀತಿಯ ಈ ಕರೆಗಂಟೆಯನ್ನು ಬಾರಿಸುವ ಕೊನೆಯ ದಿನ. ನಾಳೆ ನಾನು ಕರೆಗಂಟೆ ಇಲ್ಲದೇ ಹೇಗಿರುತ್ತೇನೋ ತಿಳಿಯದು’. ಹೀಗೆ ಹೇಳಿ ತನ್ನ ಕರವಸ್ತ್ರದಿಂದ ಆ ಕರೆ­ಗಂಟೆಯನ್ನು ನಯವಾಗಿ ಒರೆಸಿ ಅದರ ಮೇಲೆ ಬೆರಳಾಡಿಸಿದ. 

ಈ ಮಾತು­ಗಳನ್ನು ಕೇಳುತ್ತಿದ್ದ ಸೇವಕನೊಬ್ಬ ಹೇಳಿದ, ‘ಬಾಬೂ, ನಾವೆಲ್ಲ ಸಾಹೇಬ­ರಿಗೆ ಹೇಳಿ ಈ ಕರೆಗಂಟೆಯನ್ನು ನಿಮಗೇ ಕೊಡುವಂತೆ ಕೇಳುತ್ತೇವೆ. ನೀವು ಮನೆಯಲ್ಲಿ ಕುಳಿತು ಗಂಟೆ ಬಾರಿಸಿದರೆ ನಿಮ್ಮ ಹೆಂಡತಿ, ಮಕ್ಕಳು ಓಡಿ ಬರುತ್ತಾರೆ’. ಎಲ್ಲರೂ ನಕ್ಕರು. ಆದರೆ ಯಾದವ ಬೋರಾ ನಗಲಿಲ್ಲ. ಮರುದಿನ ಯಾದವ ಬೋರಾನಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.  ಆಫೀಸಿನಿಂದ ಹೊರಡುವಾಗ ತಮ್ಮ ಕರೆಗಂಟೆಯನ್ನು ಮೇಜಿನ ಮೇಲೆಯೇ ಇಟ್ಟು ಹೊರಟಾಗ ತುಂಬ ಹತ್ತಿರದವರು ಯಾರೋ ತೀರಿ­ಹೋದಂತೆ ಭಾಸವಾಗಿ ಎದೆ ಭಾರವಾ­ಯಿತು. ಎದೆ ಬಡಿತ ಹೆಚ್ಚಾಯಿತು. ಮನೆಗೆ ಬಂದಾಗ ಹೆಂಡತಿ, ಮಕ್ಕಳು ಸ್ವಾಗತಿಸಿದರು.  ಯಾದವ ಬೋರಾ ಕುರ್ಚಿಯಲ್ಲಿ ಕುಸಿದು ಕುಳಿತರು. ನಾಳೆಯಿಂದ ಅಧಿಕಾರವಿಲ್ಲ, ಅದರ ಸಂಕೇತವಾದ ಕರೆಗಂಟೆಯಿಲ್ಲ ಎಂಬು­ದನ್ನು ಕಲ್ಪಿಸಲೂ ಸಾಧ್ಯವಾಗಲಿಲ್ಲ. ಅಷ್ಟು ಹೊತ್ತಿಗೆ ಆಫೀಸಿನ ಸೇವಕ ಬಂದ.  ‘ಬಾಬೂ, ನಮ್ಮ ಸಾಹೇಬರು, ನೀವು ಅಷ್ಟು ಪ್ರೀತಿಸಿದ ಕರೆಗಂಟೆಯನ್ನು ನಿಮಗೇ ಕೊಡಲು ಹೇಳಿ ಕಳುಹಿಸಿದ್ದಾರೆ, ದಯವಿಟ್ಟು ಸ್ವೀಕರಿಸಿ’ ಎಂದು ಹೇಳಿ ಕರೆಗಂಟೆಯನ್ನು ಕೊಟ್ಟು ಹೋದ. ಬೋರಾನಿಗೆ ಸಂತೋಷದ ಕಾಮನ­ಬಿಲ್ಲು ಕಾಣಿಸಿತು, ಅವೇಶ ಗಗನ­ಕ್ಕೇರಿತು, ಉಸಿರಾಡಲು ಅಸಾಧ್ಯ­ವೆನಿಸಿತು. 

ಆದರೂ ನಿಧಾನವಾಗಿ ಬಟನ್ ಮೇಲೆ ಬೆರಳಿಟ್ಟು ಒತ್ತಿದ.  ಅದರ ತೀಕ್ಷ್ಣ ಶಬ್ದ ಮನೆಯಲ್ಲಿ ಅನುರಣಿಸಿತು.  ಮೊದಲೆಂದೂ ಇಂಥ ಶಬ್ದ ಕೇಳಿರದ ಹೆಂಡತಿ ಮಕ್ಕಳು ಓಡಿ ಬಂದರು. ಯಾದವ ಬೋರಾನ ಬೆರಳು ಇನ್ನೂ ಕರೆಗಂಟೆಯ ಬಟನ್ ಮೇಲೆಯೇ ಇತ್ತು. ಆದರೆ ಅತಿಯಾದ ಅವೇಶದ ಹೃದಯಾಘಾತದಿಂದ ಅವನ ಪ್ರಾಣಪಕ್ಷಿ ಮಾತ್ರ ದೇಹದಲ್ಲಿರಲಿಲ್ಲ. ಮೋಹದಿಂದ ಪಾರಾಗುವುದು ಬಹಳ ಕಷ್ಟ. ಆದರೆ ಅದನ್ನು ಮಿತಿಯಲ್ಲಿ­ಡು­ವುದು ಕ್ಷೇಮ. ಮೋಹಕ್ಕೂ ನೋವಿಗೂ ಅತ್ಯಂತ ನಿಕಟ ಸಂಬಂಧ. ಮೋಹ ಹೆಚ್ಚಾದಷ್ಟೂ ನೋವು ಅದರ ನೆರಳಲ್ಲೇ ಬಲಿಯುತ್ತದೆ.  ಯಾವುದೇ ವಸ್ತು, ವ್ಯಕ್ತಿಯ ಜೊತೆಗಿನ ಅತಿಯಾದ ಮೋಹ, ಆ ವಸ್ತು, ವ್ಯಕ್ತಿ ಮರೆಯಾ­ದೊಡನೆ ನೋವಾಗಿ ಅಮರಿಕೊಳ್ಳು­ತ್ತದೆ, ಜೀವ ಹಿಂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.