ಕಳೆದ ವಾರ ಹಿರಿಯ ಚಿಂತಕ ಶ್ರೀ ಕೆ.ಎನ್. ಗೋವಿಂದಾಚಾರ್ಯರೊಡನೆ ಎರಡು ದಿನ ಕಳೆಯುವ ಅವಕಾಶ ದೊರೆತಿತ್ತು. ಅವರು ಯಾವಾಗಲೂ ಉತ್ಸಾಹದಿಂದ, ಜನರನ್ನು ಉತ್ತೇಜಿಸುತ್ತ ಕಳೆಯುವುದು ನನಗೆ ಇಷ್ಟವಾಯಿತು. ಯಾವುದೇ ವಸ್ತುವನ್ನು ಭಿನ್ನಕೋನದಿಂದ, ಆಶಾಭಾವದಿಂದ ಕಾಣುವುದು ಅವರ ಮೂಲಸ್ವಭಾವ ಎನ್ನಿಸಿತು.
ಬೆಳಗಿನ ಉಪಹಾರಕ್ಕೆ ಅವರೊಂದಿಗೆ ಕುಳಿತಾಗ ಮಾತು ಬೆಳೆಯಿತು. ಅವರೊಂದಿಗೆ ಒಂದು ತಾಸು ಮಾತನಾಡಿದರೆ ವಿಶ್ವವನ್ನೇ ಸುತ್ತಿ ಬಂದಂತೆ ಎಲ್ಲ ವಿಷಯಗಳ ಚರ್ಚೆಯಾಗುತ್ತದೆ. ಅವರು ಇತ್ತೀಚಿಗೆ ಗುಜರಾತಿನ ದ್ವಾರಕೆಗೆ ಹೋದ ವಿಷಯ ತಿಳಿಸಿದರು. ಅದೊಂದು ಚಾರಿತ್ರಿಕವಾದ ಸ್ಥಳ. ಶ್ರೀ ಕಷ್ಣನ ದೇವಸ್ಥಾನ ಕೂಡ ತುಂಬ ಪ್ರಸಿದ್ಧವಾದದ್ದು. ಅವರು ಈ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಮತ್ತೆ ಮುಂದುವರೆದು ಮತ್ತೊಂದು ಹತ್ತಿರದ ಊರಿಗೆ ಹೋದರಂತೆ. ಅಲ್ಲೊಂದು ಆಂಜನೇಯನ ದೇವಸ್ಥಾನ, ಅದು ತುಂಬ ವಿಶೇಷವಾದದ್ದೆಂದು ಜೊತೆಗಾರರು ಕರೆದುಕೊಂಡು ಹೋದರಂತೆ. ಅಲ್ಲಿಯ ಅರ್ಚಕರೊಬ್ಬರು ಬಿಹಾರದವರಂತೆ. ಗುಜರಾತಿನ ಈ ದೇವಸ್ಥಾನಕ್ಕೆ ಬಿಹಾರದ ಅರ್ಚಕರು ಹೇಗೆ ಬಂದರು ಎಂದು ಚಿಂತಿಸುತ್ತ. ತಾವು ಇಲ್ಲಿಗೆ ಹೇಗೆ ಬಂದಿರಿ? ಏನು ಕಾರಣ? ಎಂದು ಕೇಳಿದರಂತೆ.
ಅದಕ್ಕೆ ಆ ಅರ್ಚಕರು ಹೇಳಿದ ಮಾತು ತುಂಬ ಚೆಂದದ್ದು, ಸ್ವಾಮಿ, ಯಾರಾದರೂ ದೇವಸ್ಥಾನದ ಪೂಜಾರಿಗಳಾಗಿ ಬಂದಿದ್ದರೆ ನಾಲ್ಕೇ ಕಾರಣ ಎಂದರಂತೆ. ಹೌದೇ? ಯಾವುವು ಆ ನಾಲ್ಕು ಕಾರಣಗಳು? ಎಂದು ಇವರು ಕೇಳಿದಾಗ ಅರ್ಚಕರು ನಕ್ಕು, ಸ್ವಾಮೀ, ಇವೇ, ಪೇಟ, ಚೋಟ, ಲಪೇಟ ಅಥವಾ ನೋಟ ಎಂದರು. ಸ್ವಲ್ಪ ವಿವರಿಸಿ ಎಂದು ಕೇಳಿದಾಗ ವಿವರಣೆ ನೀಡಿದರಂತೆ, ಈ ನಾಲ್ಕೂ ಪದಗಳು ಹಿಂದೀ ಪದಗಳು ಈ ನಾಲ್ಕು ಕಾರಣಗಳಿಂದಾಗಿ ಜನ ದೇವರ ಸೇವೆಗೆ ನಿಲ್ಲುತ್ತಾರಂತೆ.
ಮೊದಲನೆಯದು ಪೇಟ ಅಂದರೆ ಹೊಟ್ಟೆ. ಬಹಳಷ್ಟು ಜನ ಹೊಟ್ಟೆಪಾಡಿಗೇ ಅರ್ಚಕರ ಕೆಲಸಕ್ಕೆ ಬರುವುದು, ದೇವಸ್ಥಾನ ಪ್ರಸಿದ್ಧವಾಗಿದ್ದರಂತೂ ಇವರ ಹೊಟ್ಟೆಗೆ ಸಮದ್ಧವಾಗಿ ದೊರಕುತ್ತದೆ. ಅಲ್ಲಿ ಭಕ್ತಿಯ ಪ್ರಮಾಣ ತುಂಬ ಕಡಿಮೆ, ಬದುಕಿಗೆ ನೂರಾರು ಕೆಲಸಗಳಿದ್ದಂತೆ ಇದೂ ಒಂದು ಹೊಟ್ಟೆ ಹೊರೆಯುವ ಕೆಲಸ. ಅದರಲ್ಲಿ ಧಾರ್ಮಿಕತೆ ಏನೂ ಇಲ್ಲ.
ಎರಡನೆಯದು ಚೋಟ ಎಂದರೆ ಪೆಟ್ಟು. ಜೀವನ ಯಾತ್ರೆಯಲ್ಲಿ ಎಲ್ಲಿಯಾದರೂ ಯಾವುದೋ ಸಂದರ್ಭದಲ್ಲಿ ಬಲವಾದ ಪೆಟ್ಟು ಬೀಳುತ್ತದೆ. ಆ ಪೆಟ್ಟು ಮನುಷ್ಯನನ್ನು ಅಂತರ್ಮುಖಿಯನ್ನಾಗಿ ಮಾಡುತ್ತದೆ, ಯಾರ ಸಂಪರ್ಕವೂ ಬೇಡವೆನ್ನಿಸುತ್ತದೆ. ಯಾರನ್ನೂ ನಂಬುವುದು ಬೇಡವೆನ್ನಿಸಿದಾಗ, ನಮ್ಮನ್ನು ಎಂದೂ ಮೋಸಗೊಳಿಸದೇ ಉಳಿಯುವುದು ನಮ್ಮ ನಂಬಿಕೆ ಮಾತ್ರ. ನಂಬಿಕೆಯನ್ನೇ ಅವಲಂಬಿಸಿದಾಗ ಅದು ಇನ್ನಷ್ಟು ಬಲವಾಗುತ್ತದೆ. ಹೀಗೆ ಪೆಟ್ಟು ತಿಂದು ಯಾರೂ ಬೇಡವೆಂದು ಅರ್ಚಕರ ವೃತ್ತಿಗೆ ಬಂದವರೂ ಸಾಕಷ್ಟು ಜನ. ಇದರಲ್ಲಿ ಭಕ್ತಿಯ ಅಂಶ ಸ್ವಲ್ಪ ಜಾಸ್ತಿ. ಅದೊಂದು ಆದ ನೋವನ್ನು ಮರೆಯುವ ಕೆಲಸ.
ಮೂರನೆಯದು ಲಪೇಟ ಅಂದರೆ ಮೋಸದ ವ್ಯವಹಾರದಲ್ಲಿ ಸಿಕ್ಕಿಕೊಂಡದ್ದು. ಕೆಲವರು ಯಾವುದೋ ಮೋಸದ ವ್ಯವಹಾರದಲ್ಲಿ ಸಿಕ್ಕಿ ಹಾಕಿಕೊಂಡೋ, ಕಾನೂನಿನ ತೊಡಕಿನಲ್ಲಿ ಸಿಕ್ಕುಬಿದ್ದೋ, ಜನರ ಕಣ್ಣಿಗೆ, ಪೊಲೀಸರ ದೃಷ್ಟಿಗೆ ಬೀಳದಂತೆ ಪಾರಾಗಲು ಓಡಿ ಹೋಗುತ್ತಾರೆ. ಅವರಲ್ಲಿ ಕೆಲವರು ತಮ್ಮ ಗುರುತು ಸಿಗದಂತೆ ಪಾರಾಗಲು ಅತ್ಯಂತ ದೂರದ ಯಾವುದೋ ಸಣ್ಣ ದೇವಸ್ಥಾನದಲ್ಲಿ ಸೇರಿಕೊಂಡು ಅರ್ಚಕರಾಗುತ್ತಾರೆ. ಅವರ ಕೆಲಸದಲ್ಲಿ ಪ್ರಾಯಶ್ಚಿತ್ತ, ಅಪರಾಧೀಭಾವದ ಮನಸ್ಸಿನ ಕೆಲಸವೇ ಹೆಚ್ಚು. ಅದರ ಭಯ, ಭಕ್ತಿಯ ರೂಪ ತಾಳುತ್ತದೆ.
ಕೊನೆಯದು ನೋಟ ಅಂದರೆ ದೃಷ್ಟಿ. ಇದು ತುಂಬ ಅಪರೂಪದ್ದು. ಯಾವುದೋ ಮಹಾತ್ಮರ, ಸಾಧಕರ, ಸಂತರ, ಗುರುಗಳ ಒಂದು ಕೃಪಾದೃಷ್ಟಿ ಬಿದ್ದು ಕ್ಷಣಮಾತ್ರದಲ್ಲಿ ಜೀವನದ ಗುರಿ ಬದಲಾಗಿ ಹೋಗುತ್ತದೆ. ಹಳೆಯ ಜೀವನ ನೀರಿನ ಮೇಲಿನ ಬರಹದಂತೆ ಅಳಿಸಿಹೋಗುತ್ತದೆ. ಚಿತ್ತಶುದ್ದವಾಗಿ ಕೇವಲ ಭಕ್ತಿ ಮಾತ್ರ ಉಳಿಯುತ್ತದೆ. ಅವರು ನಿರ್ಮಲಚಿತ್ತದಿಂದ ಹೃದಯದಲ್ಲಿ ಭಗವಂತನನ್ನು ನೆನೆಸಿಕೊಳ್ಳುತ್ತ ಹೊರಗೆ ವಿಗ್ರಹದ ಪರಮಾತ್ಮನನ್ನು ಪೂಜಿಸಿ ಸಾರ್ಥಕರಾಗುತ್ತಾರೆ. ಆದರೆ ಅವರ ಸಂಖ್ಯೆ ತುಂಬ ಸಣ್ಣದು.
ಅಂತೂ, ಎಂತೋ ಜನ ಅರ್ಚಕರಾಗುತ್ತಾರೆ. ಕೆಲವರಿಗೆ ಹೊಟ್ಟೆ ಪಾಡು, ಕೆಲವರಿಗೆ ಪೆಟ್ಟು ಮರೆಯುವ ಸ್ಥಳ, ಮತ್ತೆ ಕೆಲವರಿಗೆ ಪಾರಾಗಲು ತೋರಿದ ಅವಕಾಶ ಆದರೆ ಕೆಲವರಿಗೆ ಮಾತ್ರ ಭಗವಂತನ ದರ್ಶನದ ತವಕ, ಸೇವೆಯ ಭಾವ. ಇದರಿಂದ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಯಾವ ತೊಂದರೆಯೂ ಇಲ್ಲ. ಅವರ ಭಕ್ತಿಯಂತೆ ಅವರ ದರ್ಶನ. ಅರ್ಚಕರ ಕರ್ಮಕ್ಕೆ ಅವರೇ ಹೊಣೆ, ಭಕ್ತರಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.