ADVERTISEMENT

ಬಹುಜನಾಭಿಪ್ರಾಯ

ಡಾ. ಗುರುರಾಜ ಕರಜಗಿ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ನೀವು ಯಾವುದೋ ಕೆಲಸದ ಮೇಲೆ ಕಾರಿನಲ್ಲೋ, ಇನ್ನಾವುದೋ ವಾಹನ­ದಲ್ಲಿ ಹೋಗುತ್ತಿದ್ದೀರಿ. ಆಗ ನಾಲ್ಕು ರಸ್ತೆಗಳು ಕೂಡುವ ಸ್ಥಳ ಬರುತ್ತದೆ. ಮುಂದೆ ಹೋಗುವಾಗ ನಿಮ್ಮ ಗಮನ ರಸ್ತೆಯ ಬದಿಗೆ ನಿಂತಿದ್ದ ನೂರಾರು ಜನರ ಕಡೆಗೆ ಹೋಗುತ್ತದೆ. ಎಲ್ಲರೂ ಆಕಾಶದತ್ತ ನೋಡುತ್ತಿದ್ದಾರೆ, ಕೆಲವರು ಮುಗಿಲ ಕಡೆಗೆ ಬೆರಳು ಮಾಡಿ ತೋರಿ ಏನೇನೋ ಹೇಳುತ್ತಿದ್ದಾರೆ.

ಆಗ ನೀವು ಏನು ಮಾಡುತ್ತೀರಿ? ನೂರಕ್ಕೆ ತೊಂಭತ್ತೈದರಷ್ಟು ಜನ ಕುತೂಹಲದಿಂದ ತಾವು ನಡೆ­ಸುತ್ತಿದ್ದ ವಾಹನದ ವೇಗವನ್ನು ಕಡಿಮೆ ಮಾಡಿಯೋ, ಸಮಯವಿದ್ದರೆ ಅದನ್ನು ರಸ್ತೆಯ ಬದಿಗೆ ನಿಲ್ಲಿಸಿ, ಕೆಳಗಿಳಿದು ಆಕಾಶದ ಕಡೆಗೆ ಮುಖ ಮಾಡಿ ನೋಡುತ್ತ ಬದಿಗಿದ್ದವರನ್ನು ಏನು ವಿಷಯ? ಎಂದು ಕೇಳುತ್ತಾರೆ. ಹೌದೋ, ಅಲ್ಲವೋ?

ಒಂದು ಆಟವನ್ನು ನೋಡಲು ಮೈದಾನಕ್ಕೆ ಹೋಗಿದ್ದೀರಿ. ಸಾವಿರಾರು ಜನ ತನ್ಮಯರಾಗಿ ಆಟ ನೋಡುತ್ತಿದ್ದಾರೆ. ಇದ್ದಕಿದ್ದಂತೆ ನಿಮ್ಮ ಸುತ್ತಮುತ್ತ ಇದ್ದವ­ರಲ್ಲಿ ನೂರಾರು ಜನ ಹೋ, ಹೋ ಎಂದು ಕಿರಿಚಿಕೊಂಡು ಎದ್ದು ಮುಖ್ಯ­ದ್ವಾರದ ಕಡೆಗೆ ರಭಸದಿಂದ ಓಡತೊಡಗುತ್ತಾರೆ. ಆಗ ನೀವೇನು ಮಾಡುತ್ತೀರಿ? ಹೋಗುವವರನ್ನು ನೋಡುತ್ತ ನಗುತ್ತ ಕುಳಿತುಕೊಳ್ಳುತ್ತೀರಾ ಅಥವಾ ನೀವೂ ಸಾವರಿಸಿಕೊಂಡೆದ್ದು ಅವರೊಂದಿಗೆ ಓಡುತ್ತೀರಾ? ಬಹುತೇಕ ಜನ ಗಾಬರಿ­ಯಿಂದ ಓಡುತ್ತಾರೆ. ಏನಾಯಿತೆಂಬ ವಿಷಯ ತಿಳಿಯುವ ಮೊದಲೇ ಓಡ­ಬೇಕೆಂಬ ಪ್ರಚೋದನೆಯಾಗುತ್ತದೆ.

ಯಾಕೆ ಹೀಗಾಗುತ್ತದೆ ಗೊತ್ತೇ? ಬಹಳಷ್ಟು ಜನ ಯಾವುದೊಂದು ಕ್ರಿಯೆ­ಯನ್ನು ಮಾಡುತ್ತಿದ್ದರೆ ಅದು ಸರಿ ಇರಬಹುದೆಂಬ ತಕ್ಷಣದ ಭಾವನೆ ಬರುತ್ತದೆ. ತಪ್ಪಿದ್ದರೆ ಅಷ್ಟೊಂದು ಜನ ಯಾಕೆ ಅನುಸರಿಸುತ್ತಿದ್ದರು ಎಂದು ಮನಸ್ಸು ತರ್ಕ ಮಾಡುತ್ತದೆ. ಸಾವಿರಾರು ಜನ ಮಾಡುವ ಕೆಲಸ, ನಂಬಿದ ನಂಬಿಕೆ ನಮಗರಿವಿ­ಲ್ಲದಂತೆ ನಮ್ಮದೂ ಅಗಿ ಬಿಡುತ್ತದೆ.

ಇದನ್ನು ಸಮರ್ಥಿಸಲು ಐವತ್ತರ ದಶಕದಲ್ಲಿ ಸೊಲೋಮನ್ ಆಶ್ ಎಂಬ ಮನೋವಿಜ್ಞಾನಿಯೊಬ್ಬ ಪ್ರಯೋಗವೊಂದನ್ನು ಮಾಡಿದ. ಒಂದೇ ಗಾತ್ರದ ನಾಲ್ಕು ಕಾಗದಗಳನ್ನು ತೆಗೆದುಕೊಂಡು ಒಂದರ ಮೇಲೆ ಅಡ್ಡ ಗೆರೆಯೊಂದನ್ನು ಎಳೆದ. ಮತ್ತೊಂದು ಕಾಗದದ ಮೇಲೆ ಮೊದಲನೆಯ ಗೆರೆಗಿಂತ ಚಿಕ್ಕದಾದದ್ದನ್ನು ಬಿಡಿಸಿದ. ಮೂರನೇ ಹಾಗೂ ನಾಲ್ಕನೆಯ ಕಾಗದದ ಮೇಲೆ ಮೊದಲನೆಯ ಗೆರೆಗಿಂತ ಉದ್ದವಾದ ರೇಖೆಗಳನ್ನು ತೆಗೆದ.

ADVERTISEMENT

ಒಬ್ಬ ಮನುಷ್ಯನಿಗೆ ಒಂದಾದ ಮೇಲೆ ಒಂದರಂತೆ ನಾಲ್ಕೂ ಕಾಗದಗಳನ್ನು ತೋರಿಸಿ ಮೊದಲನೆಯ ಕಾಗದದ ಗೆರೆಗಿಂತ ಚಿಕ್ಕದಾದ ಗೆರೆ ಯಾವುದು ಎಂದು ಕೇಳಿದ. ಆದೇನು ಕಷ್ಟದ ಪ್ರಶ್ನೆಯಾಗಿರಲಿಲ್ಲ. ಆತ ತಕ್ಷಣವೇ ಎರಡನೇ ಕಾಗದದ ಗೆರೆ ಚಿಕ್ಕದು ಎಂದ. ಆ ಹೊತ್ತಿಗೆ ಮೊದಲೇ ಯೋಜಿಸಿದಂತೆ ಮನೋವಿಜ್ಞಾನಿಯ ಸ್ನೇಹಿತರು ಹತ್ತಾರು ಜನ ಅಲ್ಲಿಗೆ ಬಂದರು. ಸೊಲೋಮನ್ ಅವರಿಗೂ ಅದೇ ಪ್ರಶ್ನೆ ಕೇಳಿದ.

ಅವರಲ್ಲಿ ಒಂಭತ್ತು ಜನ ತುಂಬ ಯೋಚನೆ ಮಾಡಿದವರಂತೆ ಮಾಡಿ ಮೂರನೇ ಕಾಗದದ ಗೆರೆಯೇ ಗಿಡ್ಡದಾದದ್ದು ಎಂದು ತೀರ್ಪನ್ನೂ ನೀಡಿ­ದರು. ಆಮೇಲೆ ಮೊದಲಿನವನನ್ನು ಕೇಳಿದರೆ ಅವನೊಂದು ಕ್ಷಣ ಚಿಂತಿಸಿ ಉಳಿದ­ವರಂತೆ ಮೂರನೇ ಕಾಗದದ ಗೆರೆಯೇ ಚಿಕ್ಕದು ಎಂದ. ಒಂಭತ್ತು ಜನ ಹೇಳಿದ್ದು ಹೇಗೆ ಸುಳ್ಳಾದೀತು ಎಂದುಕೊಂಡು ತನ್ನ ಸರಿಯಾದ ಉತ್ತರವನ್ನೇ ತಿದ್ದಿ­ಕೊಂಡಿದ್ದ. ಇದೇ ಬಹುಜನಾಭಿಪ್ರಾಯ ಸೃಷ್ಟಿಸುವ ಒತ್ತಾಯ.

ಈ ವಿಷಯವನ್ನು ವ್ಯಾಪಾರದಲ್ಲಿ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಸಾವಿರ ಜನ, ಅದರಲ್ಲೂ ಪ್ರಖ್ಯಾತರಾದವರು ಒಂದು ವಸ್ತು ಚೆನ್ನಾಗಿದೆಯೆಂದು ಹೇಳಿದರೆ, ಅಷ್ಟೊಂದು ಜನರ, ದೊಡ್ಡವರ ಮಾತು ಸರಿಯಾಗಿಯೇ ಇದ್ದೀತು ಎಂದು ಉಳಿದವರು ಭಾವಿಸುತ್ತಾರೆ. ಕೆಲವೊಂದು ಭಾಷಣಗಳಲ್ಲಿ, ಹಾಸ್ಯಕಾರ್ಯಕ್ರಮ­ಗಳಲ್ಲಿ ಚಪ್ಪಾಳೆಯ, ಜನರ ನಗುವಿನ ಧ್ವನಿಗಳ ಮುದ್ರಿಕೆಯನ್ನು ಆಗಾಗ ನುಡಿಸುತ್ತಾರೆ. ಅದನ್ನು ಕೇಳಿದ ಉಳಿದವರಿಗೂ ಚಪ್ಪಾಳೆ ತಟ್ಟುವಂತೆ, ನಗುವಂತೆ ಪ್ರೇರೇಪಣೆಯಾಗುತ್ತದೆ, ಕಾರ್ಯಕ್ರಮ ಯಶಸ್ವಿಯಾಯಿತು ಎಂಬ ಭಾವನೆ ಮೂಡಿಸುತ್ತದೆ.

ಇದರಿಂದ ನಾವು ತುಂಬ ಎಚ್ಚರವಾಗಿರಬೇಕು. ಇಲ್ಲದಿದ್ದರೆ ನಮ್ಮದಲ್ಲದ ಅಭಿಪ್ರಾಯವನ್ನು ನಮ್ಮ ತಲೆಯ ಮೇಲೆ ಹೊತ್ತುಕೊಳ್ಳಬೇಕಾಗುತ್ತದೆ. ಖ್ಯಾತ ಲೇಖಕ ಸಾಮರ್ಸೆಟ್ ಮಾಮ್ ಹೇಳಿದ ಮಾತು ನಮಗೆ ಸದಾ ಎಚ್ಚರ ನೀಡಬೇಕು. ಆತ ಹೇಳಿದ್ದ, ಮೂರ್ಖತನದ ಮಾತನ್ನು ಐದು ಕೋಟಿ ಜನರು ಹೇಳಿದರೂ ಅದು ಮೂರ್ಖತನದ ಮಾತೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.