ADVERTISEMENT

ಬುದ್ಧಿವಂತರ ವಾದ

ಡಾ. ಗುರುರಾಜ ಕರಜಗಿ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST

ಒಬ್ಬ ಗುರುಗಳು ತಮ್ಮ ಶಿಷ್ಯರನ್ನು ಕರೆದುಕೊಂಡು ನಗರದಲ್ಲಿದ್ದ ಬಹುದೊಡ್ಡ ಪ್ರದರ್ಶನಕ್ಕೆ ಹೋದರು. ಶಿಷ್ಯರನ್ನೆಲ್ಲ ಆಗಾಗ ಕೂಡ್ರಿಸಿ ಉಪದೇಶ ಮಾಡುತ್ತಿದ್ದರು. ಇದನ್ನು ನೋಡಿದ ಸಾಮಾನ್ಯ ಜನ ಇವರ ಹಿಂದೆಯೇ ಗುಂಪಾಗಿ ಬರುತ್ತಿದ್ದರು.

ಇದರಿಂದ ಗುರುಗಳೂ ತುಂಬ ಉತ್ತೇಜಿತರಾದಂತೆ ತೋರುತ್ತಿತ್ತು. ಅವರ ಉಪದೇಶಗಳೂ, ವಿವರಣೆಗಳೂ ಹೆಚ್ಚು ಉದ್ದವಾಗತೊಡಗಿದವು. ಹಾಗೆಯೇ ಮುಂದೆ ಬಂದಾಗ ಅಲ್ಲೊಂದು ಆಟ ಕಣ್ಣಿಗೆ ಬಿತ್ತು.

ಸ್ವಲ್ಪ ದೂರದ ಗೋಡೆಯ ಮೇಲೆ ವೃತ್ತಗಳನ್ನು ಬರೆದು ಅದನ್ನು ಗುರಿಯಾಗಿ ಮಾಡಿದ್ದರು. ಸುಮಾರು ಐವತ್ತು ಅಡಿ ದೂರದಲ್ಲಿ ಬಂದು ಗೆರೆ ಹಾಕಿ ಅಲ್ಲಿ ಬಿಲ್ಲು ಬಾಣಗಳನ್ನು ಇಟ್ಟಿದ್ದರು. ಯಾರಾದರೂ ಗೆರೆಯ ಈ ಬದಿಗೆ ನಿಂತು ಬಾಣ ಹೂಡಿ ಸರಿಯಾಗಿ ಗುರಿಯ ಮಧ್ಯಕ್ಕೆ ಹೊಡೆದರೆ ಅವರಿಗೆ ಎರಡು ಪಟ್ಟು ಹಣವನ್ನು ಕೊಡುತ್ತಿದ್ದರು.
 
ಸಾಕಷ್ಟು ಜನ ತರುಣರು ತಮ್ಮ ಕೌಶಲ್ಯದ ಪ್ರಯೋಗ ಮಾಡಿ ನೋಡುತ್ತಿದ್ದರು. ಗುರುಗಳಿಗೆ ಸ್ಫೂರ್ತಿ ಬಂತು. ತಮ್ಮ ಶಿಷ್ಯನೊಬ್ಬನಿಗೆ ಹಣ ಕಟ್ಟುವಂತೆ ಹೇಳಿ ಬಿಲ್ಲು ಬಾಣ ತೆಗೆದುಕೊಂಡು ಸಜ್ಜಾಗಿ ನಿಂತರು. ಸುತ್ತ ಜನರೆಲ್ಲ ಕುತೂಹಲದಿಂದ ನೋಡುತ್ತಿದ್ದರು.

ಗುರುಗಳು ಸುತ್ತಲೆಲ್ಲ ನೋಡಿ ಬಿಲ್ಲಿಗೆ ಹೆದೆ ಏರಿಸಿ ಬಾಣ ಬಿಟ್ಟರು. ಆ ಬಾಣ ಗುರಿಯ ಹತ್ತಿರವೂ ಹೋಗಲಿಲ್ಲ. ಅರ್ಧ ದಾರಿಗೇ ಬಿದ್ದುಬಿಟ್ಟಿತು. ಸುತ್ತಲಿದ್ದ ಜನರೆಲ್ಲ ಗೊಳ್ಳೆಂದು ನಕ್ಕರು. ಗುರುಗಳ ಮುಖ ಕೆಂಪಾಯಿತು. ಜೋರಾಗಿ ಕೂಗಿದರು, `ಸದ್ದು, ನಾನು ಈಗ ತೋರ್ದ್ದಿದು ನನ್ನ ಕೌಶಲ್ಯವನ್ನಲ್ಲ, ನಿಮಗೊಂದು ಪಾಠ ಹೇಳಬೇಕಿತ್ತು~ ಎಂದರು.
 
ಜನರೆಲ್ಲ ಸ್ತಬ್ಧರಾದರು. ಬಹುಶಃ ಗುರುಗಳ ಪಾಠ ಹೇಳುವ ವಿಧಾನವೇ ಹೀಗಿರಬೇಕು ಎಂದು ನಂಬಿದರು. ಗುರುಗಳು ಗಂಭೀರವಾಗಿ ಹೇಳಿದರು,  ಈಗ ನಾನು ತೋರಿಸಿದೆನಲ್ಲ, ಇದು ಕೀಳರಿಮೆ ಇರುವಂಥ ವ್ಯಕ್ತಿಯ ನಡತೆ.

ಅವನಿಗೆ ತನ್ನ ಶಕ್ತಿಯಲ್ಲಿ, ಕೌಶಲ್ಯದಲ್ಲಿ ಮತ್ತು ಜ್ಞಾನದಲ್ಲಿ ನಂಬಿಕೆ ಇಲ್ಲ. ಅವನು ಯಾವಾಗಲೂ ಸೋತಂತೆಯೇ ನಡೆಯುತ್ತಾನೆ. ನಾನು ಅಂಥ ವ್ಯಕ್ತಿ ಬಾಣ ಹೊಡೆದರೆ ಹೇಗಿರುತ್ತದೆ ಎಂಬುದನ್ನು ತೋರಿಸಿದೆ. ಜನ ತಲೆ ಅಲ್ಲಾಡಿಸಿದರು.

ಗುರುಗಳು ಮತ್ತೊಂದು ಬಾಣ ಪ್ರಯೋಗ ಮಾಡಿದರು. ಈ ಬಾರಿ ಶಕ್ತಿ ಹೆಚ್ಚಾಗಿದ್ದು ಬಾಣ ಗುರಿಯನ್ನು ಚಿತ್ರಿಸಿದ್ದ ಗೋಡೆಯನ್ನು ದಾಟಿ ಹಿಂದೆ ಹೋಗಿ ಬಿದ್ದಿತು. ಮತ್ತೆ ಜನ ನಕ್ಕರು. ಗುರುಗಳು ಗುರಾಯಿಸಿದರು. 

`ಏನು ಮೂರ್ಖರಯ್ಯ ನೀವು? ನಿಮಗೆ ತಿಳಿವಳಿಕೆ ಹೇಳಲು ನಾನು ಹೀಗೆ ಮಾಡಿದೆ. ಈ ಎರಡನೆಯ ಬಾಣ ಪ್ರಯೋಗ ತನ್ನಲ್ಲಿ ಅವಶ್ಯಕ್ಕಿಂತ ಹೆಚ್ಚು ನಂಬಿಕೆಯನ್ನಿಟ್ಟು ವ್ಯಕ್ತಿ ಮಾಡುವಂತಹದು. ತನ್ನಲ್ಲಿದ್ದ ಅತೀವ ಆತ್ಮವಿಶ್ವಾಸದಿಂದ ಮೈಮರೆತಾಗ ಹೀಗೆ ಗುರಿ ತಪ್ಪುತ್ತದೆ. ನೀವು ಹೀಗಾಗಬಾರದು~ ಎಂದರು.
 
ಮತ್ತೆ ಜನ ಗೋಣು ಅಲ್ಲಾಡಿಸಿದರು. ಗುರುಗಳು ಮೂರನೇ ಬಾಣ  ಬಿಟ್ಟರು. ದೇವರ ದಯದಿಂದ ಅದು ನೇರವಾಗಿ ಗುರಿಯನ್ನೇ ತಲುಪಿತು. ಗುರುಗಳು ಸಂತೋಷದಿಂದ ಹೋಗಿ  ಎರಡುಪಟ್ಟು ಹಣ ಕೊಡಪ್ಪ  ಎಂದು ಕೇಳಿದರು.

 `ಈ ಪ್ರಯೋಗದಲ್ಲೇನಾದರೂ ಜ್ಞಾನದ ಲಾಭ ಉಂಟೇ ಸ್ವಾಮಿ~ ಎಂದು ಶಿಷ್ಯ ಕೇಳಿದಾಗ,  `ಇಂಥ ಗುರಿಯನ್ನು ನನ್ನಂತಹ ಗುರು ಮಾತ್ರ ಹೊಡೆಯಬಲ್ಲ. ಅದಿರಲಿ, ಎರಡು ಪಟ್ಟು ಹಣ ಇಸಿದುಕೋ~  ಎಂದು ಹೇಳಿ ಹೊರ ನಡೆದರು.
 
ಗುರುಗಳ ಮಾದರಿ ಇಂದಿನ ಬಹು ಬುದ್ಧಿಜೀವಿಗಳ ನಡತೆ. ಅವರ ಬುದ್ಧಿ ಬಹಳ ಚುರುಕು. ಏನಾದರೂ ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಮಾತಿನ ಚಾಕಚಕ್ಯತೆ ಅವರಿಗಿರುತ್ತದೆ.
 
ತಮ್ಮದೇ ಸರಿಯೆಂದು ತೋರಲು ಬಣ್ಣಬಣ್ಣದ ವಿವರಣೆ ಬಳಸುವ ಹಾದಿ ತಿಳಿದಿದೆ. ಅದನ್ನು ಕೇಳುವ ನಾವು ಅದು ಕೇವಲ ತೋರಿಕೆಯೇ ಅಥವಾ ಪ್ರಾಮಾಣಿಕವಾದ ವಿವರಣೆಯೇ ಎಂಬುದನ್ನು ತಿಳಿದುಕೊಳ್ಳುವ ಬುದ್ಧಿವಂತಿಕೆ ಹೊಂದಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.