ADVERTISEMENT

ಮರಳಿ ಬಂದ ರೈಲು

ಡಾ. ಗುರುರಾಜ ಕರಜಗಿ
Published 5 ಫೆಬ್ರುವರಿ 2015, 19:49 IST
Last Updated 5 ಫೆಬ್ರುವರಿ 2015, 19:49 IST

‘ಜೀವಿ’ ಎಂದೇ ಖ್ಯಾತರಾದ ಡಾ. ಜಿ.ವಿ. ಕುಲಕರ್ಣಿ ಅವರು ಕನ್ನಡ ನೆಲದ ಹೊರಗಿದ್ದು ಕನ್ನಡದ ಪರಿಮಳವನ್ನು ಹರಡಿದವರು.  ಮುಂಬೈನಲ್ಲಿದ್ದು ಸದಾ ಕನ್ನಡವನ್ನೇ ಚಿಂತಿಸಿದವರು. ಬೇಂದ್ರೆ­ಯವರ ಅಂತರಂಗಕ್ಕೆ ಹತ್ತಿರವಾಗಿದ್ದ ‘ಜೀವಿ’ಯವರಿಗೆ ಈ ಸಲದ  ಬೇಂದ್ರೆ ಪುರಸ್ಕಾರ ದೊರೆತದ್ದು ಸಂತೋಷ.

ಅವರಿಗೆ ಬೇಂದ್ರೆ ಹಾಗೂ ಗೋಕಾಕ­ರೆಂದರೆ ಅನನ್ಯ ಪ್ರೀತಿ, ಭಕ್ತಿ. ಇಬ್ಬರೂ ಮಹಾನುಭಾವರ ಬಗ್ಗೆ ಸಾಕಷ್ಟು ಬರ­ವಣಿಗೆಯನ್ನು ಮಾಡಿದ್ದಾರೆ. ಮೊನ್ನೆ ಅವರು ನನ್ನನ್ನು ಭೆಟ್ಟಿಯಾದಾಗ ತಿಳಿಸಿದ ಒಂದು ಘಟನೆ ತುಂಬ ಸುಂದರ­ವಾದದ್ದು.  ಇದು ಡಾ. ವಿ.ಕೃ ಗೋಕಾಕ­ರನ್ನು ಕುರಿತದ್ದು. ಒಮ್ಮೆ ಡಾ. ಗೋಕಾಕರು ರೈಲಿನಲ್ಲಿ ಪ್ರವಾಸ ಮಾಡುತ್ತಿದ್ದರು.

ರಾತ್ರಿ ಪ್ರವಾಸ­ವಾದ್ದರಿಂದ ಪೈಜಾಮಾ, ಶರ್ಟು ಹಾಕಿಕೊಂಡಿದ್ದರು. ಮಲಗುವ ಮುನ್ನ ಶರ್ಟು ತೆಗೆದಿಟ್ಟು ಬನಿಯನ್ ಮೇಲೆ ಮಲಗಿದ್ದರು. ಬೆಳಿಗ್ಗೆ ಎಚ್ಚರವಾದಾಗ ರೈಲು ಒಂದು ನಿಲ್ದಾಣದಲ್ಲಿ ನಿಂತಿತ್ತು.  ಗೋಕಾಕರು ಕಿಟಕಿಯಿಂದ ಆಚೆ ನೋಡಿ ಹತ್ತಿರದಲ್ಲೇ ಚಹಾದ ಅಂಗಡಿ ಇರುವು­ದನ್ನು ಕಂಡರು. ಚಹಾ ಕುಡಿಯ­ಬೇಕೆಂದು ಅವಸರದಿಂದ ಪೈಜಾಮಾದ ಜೇಬಿನಲ್ಲಿ ಎರಡು ರೂಪಾಯಿ ಹಾಕಿ­ಕೊಂಡು ಕೆಳಗಿಳಿದರು. ನೇರವಾಗಿ ಚಹಾದ ಅಂಗಡಿಗೆ ನಡೆದು ಚಹಾ ಆರ್ಡರ್ ಮಾಡಿದರು.

ಚಹಾ ಕುಡಿಯುತ್ತಿದ್ದಂತೆ ರೈಲು ಹೊರಡ­ತೊಡಗಿತು. ಇವರು ಗಾಬರಿಯಿಂದ ಚಹಾ ಕುಡಿಯುವುದನ್ನು ಬಿಟ್ಟು ರೈಲಿನ ಕಡೆಗೆ ಓಡಿದರು. ಆದರೆ ರೈಲು ಹೊರಡುತ್ತ ವೇಗವನ್ನು ಪಡೆದುಕೊಳ್ಳ­ತೊಡಗಿತು. ಇವರು ಎಷ್ಟೇ ಧಾವಂತ­ದಿಂದ ಓಡಿದರೂ ರೈಲು ಮುಂದೆ ಹೋಗಿಯೇ ಬಿಟ್ಟಿತು! ಡಾ. ಗೋಕಾಕ­ರಿಗೆ ಈಗ ಫಜೀತಿ. ಹಾಕಿಕೊಳ್ಳಲು ಬಟ್ಟೆಯಿಲ್ಲ, ಹಣವೂ ಇಲ್ಲ. ಇದ­ರೊಂದಿಗೆ ತಾವು ಹೊರಟಿದ್ದ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗು­ವುದಾಗುವುದಿಲ್ಲ.

ಇನ್ನೇನು ಮಾಡು­ವುದು ಎಂದು ಚಿಂತಿಸುವಷ್ಟರಲ್ಲಿ ರೈಲು ಪ್ಲಾಟ್‌ಫಾರ್ಮ್‌ ದಾಟಿಯಾಗಿತ್ತು. ಇವರು ಹತಾಶರಾಗಿ ನಿಂತಿದ್ದಾಗ ಒಂದು ಆಶ್ಚರ್ಯಕರ ಸಂಗತಿ ಘಟಿಸಿತು.  ಹೊರಟಿದ್ದ ರೈಲು ನಿಂತಿತು. ಇವರು ನೋಡುತ್ತಿದ್ದಂತೆ ಹಿಂದೆ ಹಿಂದೆ ಬರತೊಡಗಿತು! ರೈಲಿನ ಗಾರ್ಡ ಇದ್ದ ಬೋಗಿ ಪ್ಲಾಟಫಾರ್ಮ್ ಮೇಲೆ ಬಂದೊಡನೆ ಅದರಲ್ಲಿದ್ದ ಗಾರ್ಡ್ ಹೊರಗೆ ಹಾರಿಕೊಂಡ. ಗೋಕಾಕರು ನೋಡುತ್ತಿರುವಂತೆ ಆತ ಓಡಿಬಂದು ಅವರ ಕಾಲು ಮುಟ್ಟಿ ನಮಸ್ಕರಿಸಿದ!

ಇವರು ಬೆರಗಿನಲ್ಲಿದ್ದಂತೆಯೇ ಅತ ಹೇಳಿದ, ‘ಸರ್, ನಾನು ಕರ್ನಾಟಕ ಕಾಲೇಜಿನಲ್ಲಿ ನಿಮ್ಮ ವಿದ್ಯಾರ್ಥಿ­ಯಾಗಿದ್ದೆ. ನಾನು ಬಿ.ಎ. ಓದುತ್ತಿರು­ವಾಗ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿ­ದ್ದೆನೆಂದು ನೀವು ಮೂರು ವರ್ಷ ಡಿಬಾರ್ ಮಾಡಿಸಿದ್ದಿರಿ’. ‘ಹೌದಲ್ಲ, ನೀನು ಮೆನೆಜಿಸ್ ಅಲ್ಲವೇ?’ ಕೇಳಿದರು ಗೋಕಾಕ. ‘ಹೌದು ಸರ್, ಡಿಬಾರ್ ಮಾಡಿದ್ದು ನಿಮ್ಮ ತಪ್ಪಲ್ಲ ಸರ್, ಅದು ನನ್ನ ತಪ್ಪಿಗೆ ಶಿಕ್ಷೆ. ಆದರೆ ಆಮೇಲೆ ನಾನು ತಮ್ಮನ್ನು ಕಂಡು ಕ್ಷಮೆ ಕೇಳಿ ಪರಿಶ್ರಮ­ದಿಂದ ಓದಿದೆ.  ನಂತರ ನೀವು ನನ್ನ ಡಿಬಾರ್ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿದಿರಿ. ಮರುವರ್ಷ ನಾನು ಪರೀಕ್ಷೆಗೆ ಕುಳಿತು ಪಾಸಾದೆ. ನನಗೆ ಈ ಗಾರ್ಡ್‌ ಕೆಲಸ ದೊರಕಿತು. ಸರ್, ಇಂದಿಗೂ ನಾನು ತಮ್ಮ ಇಂಗ್ಲೀಷ್ ತರಗತಿಗಳನ್ನು ಮರೆತಿಲ್ಲ’ ಎಂದ ಗಾರ್ಡ್‌ ಮೆನೆಜಿಸ್.

ಗೋಕಾಕರು ನಿರಾಳವಾಗಿ ರೈಲನ್ನೇರಿ ಪ್ರವಾಸ ಮುಂದುವರೆಸಿದರು. ಆದರ್ಶ ಶಿಕ್ಷಕರು ಏನೆಲ್ಲ ಮಾಡಬಹುದು. ವಿದ್ಯಾರ್ಥಿ­ಗಳನ್ನು ವಿಷಯದಲ್ಲಿ ಪ್ರೋತ್ಸಾ­­ಹಿಸಬಹುದು, ಅವರ ಬದುಕಿಗೆ ಮಾರ್ಗದರ್ಶನ ನೀಡಬಹುದು, ಸಮಾಜದಲ್ಲಿ ಪರಿವರ್ತನೆ ತರಬ­ಹುದು. ಇದೆಲ್ಲದರ ಜೊತೆಗೆ ಮುಂದೆ ಹೋದ ರೈಲನ್ನು ಕೂಡ ಮರಳಿ ಪ್ಲಾಟಫಾರ್ಮ್‌ಗೆ  ತರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.