ADVERTISEMENT

ಯಾರಿಗೆ ಯಾರು ?

ಡಾ. ಗುರುರಾಜ ಕರಜಗಿ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ನಮ್ಮಲ್ಲಿ ಚಿಂತೆ ಯಾರಿಗಿಲ್ಲ? ದೇವರಿಗೇ ನಮ್ಮನ್ನೆಲ್ಲ ನಿಭಾಯಿಸುವ ಚಿಂತೆ ಇದೆ­ಯಂತೆ! ಆದರೆ, ಕೆಲವರಿಗೆ ಚಿಂತೆ ಇಲ್ಲದಿದ್ದರೆ ಚಿಂತೆಯಾಗುತ್ತದೆ. ಇಂದು ಯಾವುದೇ ಚಿಂತೆ ಇಲ್ಲವಲ್ಲ ಎಂದು ತಲೆಕೆಡಿಸಿಕೊಂಡವರಿದ್ದಾರೆ.

ತಮಗೆ ಚಿಂತೆ ಇರದಿದ್ದರೆ ಪಕ್ಕದ ಮನೆಯವರ ಚಿಂತೆ, ಅದಿಲ್ಲದಿದ್ದರೆ ರಾಜ್ಯದ ಚಿಂತೆ, ಅದೂ ಇಲ್ಲದಿದ್ದರೆ ದೇಶದ ಚಿಂತೆ. ಸಣ್ಣ ಸಣ್ಣ ಕೊರತೆಗಳನ್ನು ದಿಟ್ಟಿಸಿ ನೋಡಿ ಕೊರ­ಗು­ವವರನ್ನು ನೋಡಿದಾಗ ಮರುಕ ಉಂಟಾಗುತ್ತದೆ. ಇಬ್ಬರು ಸ್ನೇಹಿತರು ಹೋಟೆಲ್‌ನಲ್ಲಿ ಮಾತನಾಡುತ್ತ ಕುಳಿತಿದ್ದರು. ಇಬ್ಬರು ಎಷ್ಟೋ ವರ್ಷಗಳ ನಂತರ ಭೆಟ್ಟಿಯಾಗಿದ್ದರಿಂದ ಮಾತನಾಡಲು ಹಳೆಯ ಸರಕು ಬೇಕಾದಷ್ಟಿತ್ತು.

ಅವ­ರ­ಲ್ಲೊಬ್ಬ ಆರಾಂ ಮನುಷ್ಯ. ಯಾವ ಚಿಂತೆಯನ್ನು ತಲೆಗೆ ಹಚ್ಚಿಕೊಳ್ಳದೇ ಸದಾ ಖುಷಿ­ಯಾಗಿ ಇರುವವ. ಮತ್ತೊಬ್ಬ ಮಾತ್ರ ಸದಾ ಚಿಂತೆಯ ಬೇಟೆ­ಯಲ್ಲಿ­ಯೇ ತಲ್ಲೀನ. ಚಿಂತಾರಹಿತ ತನ್ನ ಕಥೆಯನ್ನೆಲ್ಲ ಚುಟುಕಾಗಿ ಹೇಳಿ ಎಲ್ಲವೂ ತುಂಬ ಚೆನ್ನಾ­ಗಿದೆಯಪ್ಪ ಎಂದು ಮನಸಾರೆ ನಕ್ಕ. ಮತ್ತೊಬ್ಬ ಹಣೆ ತುಂಬ ಗೆರೆಗಳನ್ನು ತುಂಬಿಸಿ­ಕೊಂಡು ಹೇಳಿದ, ‘ಏನೋಪ್ಪ, ನೀನು ಪುಣ್ಯವಂತ. ನಿನಗೆ ಮನೆಯಲ್ಲಿ ಯಾವ ಚಿಂತೆ­ಯೂ ಇಲ್ಲ. ಹಾಗಿರುವುದಕ್ಕೆ ಪುಣ್ಯ ಮಾಡಿರ­ಬೇಕು. ಆದರೆ, ನನ್ನ ಹಣೆ­ಬರಹ ನೋಡು. ನನ್ನ ಪರಿವಾರದಲ್ಲಿ ಆದ ಗೊಂದಲ­ದಿಂದ ನನಗೆ ಹುಚ್ಚೇ ಹಿಡಿ­ದಂತಾ­ಗಿದೆ. ಪರಿವಾರದಲ್ಲಿ ಯಾರು ಯಾರ ಸಂಬಂಧ ಎಂಬುದೇ ತಿಳಿಯದಾಗಿದೆ’

‘ಹೌದೇ ಅದೇನಪ್ಪ ಅಂಥ ಸಮಸ್ಯೆ?’ ಎಂದು ಕೇಳಿದ ಚಿಂತಾರಹಿತ. ಚಿಂತಾಗ್ರಸ್ತ ಹೇಳಿದ, ‘ನಿನಗೇ ಗೊತ್ತಿದೆಯಲ್ಲಪ್ಪ, ನನ್ನ ಹೆಂಡತಿ ಹೋಗಿ ಎಷ್ಟು ವರ್ಷವಾಯಿತು. ಕೆಲ ವರ್ಷಗಳ ಹಿಂದೆ ನಾನೊಬ್ಬ ವಿಧವೆಯನ್ನು ಭೆಟ್ಟಿಯಾದೆ. ಆಕೆಗೆ ಒಬ್ಬಳು ಬೆಳೆದ ಮಗಳಿದ್ದಳು. ಆಕೆಗೂ ಆಧಾರ ಮತ್ತು ನನಗೆ ಸಂಗಾತಿ ಬೇಕಿತ್ತು. ಇಬ್ಬರೂ ಮದುವೆಯಾದೆವು. ಆಗೊಂದು ವಿಚಿತ್ರವಾಯಿತು. ನನ್ನ­ಪ್ಪನಿಗೆ ಆಗ ಎಪ್ಪತ್ತು ವರ್ಷ.

ಅವರು ನನ್ನ ಮಲಮಗಳನ್ನು ಮದುವೆ­ಯಾದರು. ಆಗ ನನ್ನ ಮಲಮಗಳು ನನಗೆ ಮಲತಾಯಿಯಾದಳು. ಇನ್ನೊಂದು ರೀತಿಯಲ್ಲಿ ನನ್ನಪ್ಪ ನನಗೆ ಮಲಮಗ ಅಥವಾ ಅಳಿಯನಾದಂತೆ ಆಯಿತು. ಈ ಸಂಬಂಧ­ದಿಂದಾಗಿ ನನ್ನ ಹೆಂಡತಿ ತನ್ನ ಮಾವನಿಗೆ ಅಂದರೆ ನನ್ನಪ್ಪಗೆ ಅತ್ತೆಯಾದಳು. ಇಷ್ಟೇ ಸಾಲದಯ್ಯ, ಮುಂದೆ ಎರಡು ವರ್ಷಕ್ಕೆ ನನ್ನ ಮಲಮಗಳಿಗೆ ಅಂದರೆ ನನ್ನ ಮಲ­ತಾಯಿಗೆ ಒಬ್ಬ ಗಂಡುಮಗ ಹುಟ್ಟಿದ.

ಆಗ ಮತ್ತಷ್ಟು ಅದ್ವಾನವಾಗಿ ಹೋಯಿತು. ಈ ಮಗು ನನಗೆ ಮಲತಮ್ಮನಾದ. ಯಾಕೆಂದರೆ ಅವನು ನನ್ನಪ್ಪನ ಮಗ. ಆದರೆ ಅವನು ನನ್ನ ಹೆಂಡತಿಯ ಮಗಳ ಮಗನಾಗಿದ್ದರಿಂದ ನನಗೂ ನನ್ನ ಹೆಂಡತಿಗೂ ಮೊಮ್ಮಗ­ನಾದ. ಅಂದರೆ ನನ್ನ ಮಲತಮ್ಮ ನನ್ನ ಮೊಮ್ಮಗನೂ ಹೌದು. ಇಷ್ಟೇ ಆಗಿದ್ದರೆ ಹೇಗೋ ನಿಭಾಯಿ­ಸಬಹುದಾಗಿತ್ತು. ಮರುವರ್ಷ ನನಗೂ ನನ್ನ ಹೆಂಡತಿಗೂ ಒಬ್ಬ ಮಗ ಹುಟ್ಟಿದ. ಈಗ ನೋಡಪ್ಪ ಫಜೀತಿ. ನನ್ನ ಮಲಮಗಳು ನನ್ನ ಮಗನಿಗೆ ಅಕ್ಕನೂ ಆಗಬೇಕು. ನನ್ನಪ್ಪನನ್ನು ಮದುವೆ­ಯಾಗಿದ್ದರಿಂದ ನನಗೆ ಅತ್ತೆಯೂ ಆಗಬೇಕು. ನನಗತ್ತೆ­ಯಾದ್ದರಿಂದ ನನ್ನ ಮಗನಿಗೆ ಅಜ್ಜಿಯೂ ಆಗಬೇಕು.

ಈ ಗಲಾಟೆಯಲ್ಲಿ ನನ್ನ ತಂದೆಯ ಸ್ಥಿತಿ ಏನಾಗಿದೆ ನೋಡು. ನನ್ನ ಮಲಮಗಳನ್ನು ಮದುವೆ­ಯಾಗಿ­ದ್ದರಿಂದ ನನ್ನಪ್ಪ ನನ್ನ ಮಗನಿಗೆ ಅಕ್ಕನ ಗಂಡ ಅಂದರೆ ಭಾವನಾಗಬೇಕು. ಮಗು ನನ್ನ ಮಗನಾದ್ದರಿಂದ ನನ್ನಪ್ಪ ಅಜ್ಜನೂ ಆಗಬೇಕು. ಇನ್ನು ನನ್ನ ಪರಿಸ್ಥಿತಿ ನಾಯಿ ಪಾಡು. ನಾನು ನನ್ನ ಮಲತಾಯಿಗೆ ಭಾವನಾಗುತ್ತೇನೆ, ನನ್ನ ಹೆಂಡತಿ ತನ್ನ ಮಗನಿಗೇ ಅತ್ತೆ­ಯಾಗು­ತ್ತಾಳೆ, ನನ್ನ ಮಗ ನನ್ನಪ್ಪನಿಗೆ ಸೋದರಳಿ­ಯ­ನಾಗು­ತ್ತಾನೆ. ಈ ಸಂಬಂಧಗಳನ್ನು ಯೋಚಿಸಿ ಯೋಚಿಸಿ ನನ್ನ ತಲೆ ಮೊಸರು ಗಡಿಗೆ­ಯಾಗಿ ಹೋಗಿದೆ. ಮನೆಯಲ್ಲಿ ಯಾರನ್ನು ನೋಡಿದರೂ ಯಾರಿಗೆ ಯಾರು ಏನಾಗಬೇಕು ಎಂಬ ಪ್ರಶ್ನೆ ಬರುತ್ತದೆ’ ಇಷ್ಟು ಹೇಳಿ ಚಿಂತಾಗ್ರಸ್ತ ನಿಟ್ಟುಸಿರುಬಿಟ್ಟ.

ಯಾರೂ ಈತನಿಗೆ ವಂಶವೃಕ್ಷ ಬರೆಯಲು ಹೇಳಿರಲಿಲ್ಲ. ಇರಲಾರದ ಸಮಸ್ಯೆಗಳನ್ನು ತಲೆಯ ಮೇಲೆ ಹೇರಿಕೊಂಡು ಕತ್ತು ಉಳುಕಿಸಿಕೊಳ್ಳು­ವುದಕ್ಕಿಂತ. ಪರಿಹಾರಕ್ಕೆ ಯೋಗ್ಯವಾದ ಸಮಸ್ಯೆಗಳ ಬಗ್ಗೆ ಚಿಂತಿಸಿ ಯೋಜಿಸುವುದು ಬುದ್ಧಿ­ವಂತರ ಲಕ್ಷಣ. ಅನವಶ್ಯಕವಾದ ವಿಷಯಗಳ ಬಗ್ಗೆ ತಲೆ ಬಿಸಿ ಮಾಡಿಕೊಂಡು ಒದ್ದಾಡುವಾಗ ಅವಶ್ಯವಾಗಿ ಪರಿಹಾರ ಕಂಡುಕೊಳ್ಳಲೇ­ಬೇಕಾದ ವಿಷಯಗಳ ಬಗ್ಗೆ ಬೇಕಾದ ಸಮಯ, ವ್ಯವಧಾನ ದೊರೆಯದೇ ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT