ADVERTISEMENT

ಯಾರು ಬದಲಾಗಬೇಕು?

ಡಾ. ಗುರುರಾಜ ಕರಜಗಿ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಮನೋ ವೈದ್ಯರೊಬ್ಬರು ಸ್ನೇಹಿತರಿಗೆ ಹೇಳಿದರು, ‘ಸಮಾಜದಲ್ಲಿ ಅನುಕರಣೆ ಅತ್ಯಂತ ಸುಲಭವಾದ ಕ್ರಿಯೆ. ಹಿಂದೆಯೂ ಹಾಗೆಯೇ ಇತ್ತು, ಇಂದೂ ಹಾಗೆಯೇ ಇದೆ. ಯಾರಾದರೂ ಏನಾದರೂ ಮಾಡಿದರೆ ಅವರನ್ನು ಗಮನಿ­ಸುವ ಬಹುತೇಕ ಜನ ಅವರಂತೆಯೇ ಮಾಡುತ್ತಾರೆ, ಸ್ವಂತಿಕೆಯಿಂದ ಬೇರೆಯಾಗಿ ಚಿಂತಿಸು­ವುದಿಲ್ಲ’. ಆಗ ಸ್ನೇಹಿತರು ಅದನ್ನು ಸಿದ್ಧಪಡಿಸುವಂತೆ ಆಹ್ವಾನಿಸಿದರು. ತಕ್ಷಣವೇ ಮನೋ ವೈದ್ಯರು ಒಂದು ಯೋಜನೆಯನ್ನು ಮಾಡಿದರು. ಅವರ ಕೊಠಡಿ­ಯ ಮುಂದೆ ಅವರನ್ನು ಕಾಣಲು ಎಂಟು-ಹತ್ತು ಜನ ರೋಗಿಗಳು ಕಾಯು­ತ್ತಿ­ದ್ದರು.

ಮನೋ ವೈದ್ಯರು ತಮ್ಮ ಸ್ನೇಹಿತರಿಗೆ ಹೇಳಿದರು, ‘ಈಗ ನಾನು ಸದ್ದು ಮಾಡಿ ಎಲ್ಲ ಹೊರಗಿನ ರೋಗಿಗಳನ್ನು ಕರೆಯುತ್ತೇನೆ. ಮೊದಲನೆಯವರು ಒಳ ಬರುವಾಗ ನೀವು ತಟಕ್ಕನೇ ಮೇಲೆದ್ದು ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿ, ಕಾಲಿನ ಹತ್ತಿರ ನೂರು ರೂಪಾಯಿ ನೋಟನ್ನು ಇಟ್ಟು ಮತ್ತೆ ನಮಸ್ಕಾರ ಮಾಡಿ ಹೋಗಬೇಕು. ಯಾಕೆ ಎಂದು ಕೇಳಬೇಡಿ. ಹೊರಗೆ ಹೋಗಿ ಪಕ್ಕದ ಬಾಗಿಲಿ­ನಿಂದ ಒಳಗೆ ಬಂದು ದೂರ ಕುಳಿತುಕೊಂಡು ಆಗುವುದನ್ನು ನೋಡಿ. ಇವರೂ ಏನಾಗುತ್ತದೋ ನೋಡ­ಬೇಕೆಂದು ಎದ್ದು ನಿಂತರು.

ಗಂಟೆ ಬಾರಿಸಿದಾಗ ರೋಗಿ­ಯೊಬ್ಬರು ಒಳಗೆ ಬಂದರು. ಅವರು ಬರುತ್ತಿದ್ದಂತೆ ಸ್ನೇಹಿತರು ಭಕ್ತಿಯಿಂದ ವೈದ್ಯರ ಕಾಲುಮುಟ್ಟಿ ನಮಸ್ಕಾರ ಮಾಡಿ ನೂರು ರೂಪಾಯಿ ನೋಟನ್ನಿಟ್ಟು ಮತ್ತೆ ನಮಸ್ಕಾರ ಮಾಡಿ ಹಿಂದೆ ಸರಿದು ಹೊರನಡೆದರು. ಒಳಗೆ ಬಂದ ರೋಗಿ ಇದನ್ನು ಗಮನಿಸಿದರು. ವೈದ್ಯರೊಡನೆ ಸಮಾಲೋಚನೆ ಮುಗಿದ ಮೇಲೆ ಅವರೂ ಬಗ್ಗಿ ಕಾಲುಮುಟ್ಟಿ ನಮಸ್ಕರಿಸಿ ನೂರು ರೂಪಾಯಿ ನೋಟನ್ನಿಟ್ಟು ನಡೆ­ದರು. ಇದನ್ನು ನೋಡಿದ ಒಳಬಂದವರೂ ಅದನ್ನೇ ಮಾಡಿದರು. ಇದು ಹೇಗೆ ಪ್ರಚಾರವಾಯಿತೆಂದರೆ ವೈದ್ಯರು ತಮ್ಮ ಫೀಸನ್ನು ತೆಗೆದು­ಕೊಳ್ಳುವುದೇ ಹೀಗೆ ಎಂದು ಜನ ಮಾತನಾಡ ತೊಡಗಿದರು. ಮನೋ ವೈದ್ಯರ ಮಾತು ಸತ್ಯ­ವಾಗಿತ್ತು. ಜನ ಮತ್ತೊಬ್ಬರ ನಡತೆಯ ಅನುಕರಣೆ ಮಾಡಿದ್ದರು.

ಇಂಥ ವಿಷಯ ನಮ್ಮೆಲ್ಲರ ಗಮನಕ್ಕೆ ಬಂದಿರಲಿಕ್ಕೂ ಸಾಕು. ಇನ್ನೊಂದು ಸಂದರ್ಭ. ಮದುವೆಯ ಮನೆಯಲ್ಲಿ ಊಟಕ್ಕೆ ಕುಳಿತಿದ್ದೀರಿ. ನಿಮ್ಮ ಟೇಬಲ್ಲಿಗೆ ನೀವೇ ಮೊದಲನೆಯವರು ಎಂದಿಟ್ಟು­ಕೊಳ್ಳಿ. ಆಗ ಸಿಹಿತಿಂಡಿ ಬಡಿಸಲು ಬರು­ತ್ತಾರೆ. ಆಗ ನೀವು ಜೋರಾಗಿ ಹೇಳಿ, ‘ಬೇಡಪ್ಪ ಮಹಾರಾಯಾ ಈ ಸಿಹಿತಿಂಡಿ ನಿನ್ನೆಯ ಪೇಪರ ನೋಡಿದ್ರಾ? ನಮಗೆ ಬರುವ ದೊಡ್ಡ ದೊಡ್ಡ ರೋಗಗಳ ಮೂಲ ಈ ಸಿಹಿತಿಂಡಿನೇ ಅಂತೆ. ಅದನ್ನು ದೂರ ಇಡೋದೇ ವಾಸಿ’ ಎಂದು. ತಮಾಷೆ ನೋಡಿ. ನಿಮ್ಮ ನಂತರ ಕುಳಿತವರಲ್ಲಿ ಬಹಳಷ್ಟು ಜನ ಕೈ ಚಾಚಿ ಬೇಡ ಎಂದೇ ಹೇಳಬಹುದು.

ಒಂದು ದೇವಸ್ಥಾನದ ಮುಂದೆ ಚಪ್ಪಲಿಗಳು ಬೇಕಾಬಿಟ್ಟಿ­ಯಾಗಿ ಬಿದ್ದಿದ್ದರೆ ನೀವೂ ಕೂಡ ಚಪ್ಪಲಿಗಳನ್ನು ಅಲ್ಲೇ ಎಲ್ಲೋ ಬಿಟ್ಟು ಹೋಗು­ತ್ತೀರಿ. ಆದರೆ ಅದನ್ನೇ ಮೊದಲಿನ ಕೆಲವರು ಸಾಲಾಗಿ ಗೋಡೆಯಗುಂಟ ಇಟ್ಟಿ­ದ್ದರೆ ನೀವೂ ಆ ಸಾಲಿನಲ್ಲೇ ಚಪ್ಪಲಿ ಬಿಡುತ್ತೀರಿ. ಸ್ವಚ್ಛವಾದ ಶಾಂತ ಧ್ಯಾನ­ಮಂದಿರ­ದಲ್ಲಿ ಎಲ್ಲರೂ ಧ್ಯಾನ ಮಾಡು­ವಾಗ ನಿಮಗೆ ಕೆಮ್ಮು ಬಂದರೂ ಕೆಮ್ಮು­ವುದಿಲ್ಲ. ತಡೆದು­ಕೊಳ್ಳಲಾಗ­ದಿದ್ದರೆ ಹೊರಗೆ ಹೋಗಿ ಕೆಮ್ಮಿ ಬರುತ್ತೀರಿ. ಆದರೆ ನೀವು ಕೊಳಕಾದ ತರಕಾರಿ ಮಾರ್ಕೆಟ್ಟಿನಲ್ಲಿದ್ದರೆ ಜೋರಾಗಿ ಕಿರಿಚುತ್ತೀರಿ, ಬಾಳೆ­ಹಣ್ಣು ತಿಂದು ಸಿಪ್ಪೆಯನ್ನು ಅಲ್ಲಿಯೇ ಬಿಸಾಡುತ್ತೀರಿ.

ಇದು ಯಾಕೆ ಹೀಗೆ? ನಮ್ಮ ಮನಸ್ಸು ಮಾದರಿಯನ್ನರಸುತ್ತದೆ. ಅದಕ್ಕೇ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬ ಗಾದೆ ಬಂದದ್ದು. ನಮ್ಮ ಹಿರಿಯರು ಮಾಡಿದಂತೆಯೇ ನಾವು ಮಾಡು­ತ್ತೇವೆ. ಹಾಗಾದರೆ ನಮ್ಮ ಮನೆ, ಸಮಾಜ, ರಾಜ್ಯ, ದೇಶ ಸರಿಯಾಗ­ಬೇಕಾದರೆ, ಭ್ರಷ್ಟಾಚಾರ, ಅನಾಚಾರ­ಗಳು ತೊಲಗಬೇಕಾದರೆ ನಮ್ಮ ಹಿರಿಯರು ಸರಿಯಾಗ­ಬೇಕು ಅಲ್ಲವೇ? ಮಕ್ಕಳು ತಪ್ಪು ದಾರಿ ಹಿಡಿಯುತ್ತಿದ್ದರೆ, ಅವರಲ್ಲಿ ಮೌಲ್ಯಗಳು ಕಾಣುತ್ತಿಲ್ಲ ಎನ್ನುವುದಾದರೆ ಅದಕ್ಕೆ ಮಾದರಿ­ಯಾದವರು ಯಾರು? ಯಾರು ಬದಲಾಗಬೇಕು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT