ADVERTISEMENT

ವಯಸ್ಸಾಗದಿರುವುದು ಹೇಗೆ?

ಡಾ. ಗುರುರಾಜ ಕರಜಗಿ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST

ಜಾರ್ಜ ಡಾಸನ್ ಎಂದರೆ ನಿಮಗೆ ಗೊತ್ತಾಗಲಾರದು. ಅವನದು ವಿಶೇಷವಾದ ಜೀವನ ಚರಿತ್ರೆ. ಆತ ಹುಟ್ಟಿದ್ದು 1898ರಲ್ಲಿ. ಹುಟ್ಟಿದಾಗಲೇ ತಾಯಿ ಕಳೆದುಕೊಂಡ ಜಾರ್ಜ್ ತನ್ನ ಎಂಟನೇ ವಯಸ್ಸಿನಲ್ಲಿ  ಕೆಲಸಕ್ಕೆ ಸೇರಿದ. ಅವನ ತಂದೆ ಇವನನ್ನು ಹನ್ನೆರಡನೇ ವಯಸ್ಸಿನಲ್ಲಿ  ಬಿಳಿಯನೊಬ್ಬನ ಸೇವೆಗೆ ಮಾರಿಬಿಟ್ಟ. ಈತನ ತಮ್ಮ ತಂಗಿಯರು ಕಪ್ಪು ವರ್ಣದವರಿಗಾಗಿಯೇ ಇದ್ದ ಶಾಲೆಗಳಲ್ಲಿ  ಸ್ವಲ್ಪ ಕಲಿತರು. ಈತನೇ ಹಿರಿಯ ಮಗನಾದ್ದರಿಂದ ಕೆಲಸ ಮಾಡುವುದು ಅನಿವಾರ್ಯವಾಗಿ ಶಾಲೆ ದೂರವೇ ಉಳಿಯಿತು.

ಡಾಸನ್ ಮಾಡದಿದ್ದ ಕೆಲಸಗಳೇ ಇರಲಿಲ್ಲ. ಕಟ್ಟಿಗೆ ಕಡಿಯುವುದು, ಮನೆ ಒರೆಸುವುದು, ಮರದ ದಿಮ್ಮಿಗಳನ್ನು ಕತ್ತರಿಸುವ ಯಂತ್ರಗಳನ್ನು ನಡೆಸುವುದು, ಮನೆಗಳ ಕಟ್ಟಡ ನಿರ್ಮಾಣದಲ್ಲಿ  ಕಲ್ಲು, ಕಬ್ಬಿಣ ಹೊರುವುದು. ಇವೆಲ್ಲ ಅವನಿಗೆ ಅಭ್ಯಾಸವಾಗಿದ್ದವು. ತನ್ನ ಇಪ್ಪತ್ತೆಂಟನೇ ವಯಸ್ಸಿಗೆ ಮದುವೆಯಾಗಿ ಮರುವರ್ಷವೇ ತಂದೆಯಾಗಿಬಿಟ್ಟ. ಅವನಿಗೆ ಯಾವ ಕೆಲಸವೂ ಬೇಜಾರು ತರಲಿಲ್ಲ, ಪ್ರತಿಯೊಂದರಲ್ಲೂ ಉತ್ಸಾಹ. ಹಾಲಿನ ಡೈರಿಯಲ್ಲಿ  ಶೈತ್ಯಾಗಾರವನ್ನು ಹತ್ತು ವರ್ಷ ನಡೆಸಿದ. ಮಕ್ಕಳು ದೊಡ್ಡವರಾದರು. ಈತ ತನ್ನ ಕೆಲಸದಲ್ಲಿ  ಗಳಿಸಿದ ಸ್ವಲ್ಪ ಹಣವನ್ನು ಅಲ್ಲಿ  ಇಲ್ಲಿ  ತೊಡಗಿಸಿದ್ದ. ದೈವ ಚೆನ್ನಾಗಿತ್ತು. ಹಾಕಿದ ಹಣ ನೂರು ಪಟ್ಟಾಗಿ ಮರಳಿತು. ಮಕ್ಕಳ ಗಳಿಕೆಯೂ ಪ್ರಾರಂಭವಾಯಿತು. ಈಗ ಆತನಿಗೆ ಹಣದ ಯಾವ ತೊಂದರೆಯೂ ಇಲ್ಲ, ಅವನೀಗ ಶ್ರಿಮಂತರ ಪಂಕ್ತಿಯಲ್ಲೇ ಸೇರುತ್ತಾನೆ.

ಅವನಿಗೆ ತೊಂಬತ್ತೆಂಟು ವರ್ಷವಾದಾಗ ಹೊಸದೊಂದು ಆಸೆ ಚಿಗುರಿತು. ಇಷ್ಟು ವರ್ಷಗಳ ಕಾಲ ಓದಲು ಬರೆಯಲು ಕಲಿಯದೇ ಕಳೆದೆನಲ್ಲ ಎಂದು ದುಃಖಿಸಿ ಅಕ್ಷರ ಕಲಿಯಲು ತೀರ್ಮಾನಿಸಿದ. ತೊಂಬತ್ತೆಂಟು ವರ್ಷದ ಶಿಷ್ಯನಿಗೆ ಇಪ್ಪತ್ತೈದರ ಗುರು! ತರುಣ ಒಂದೊಂದೇ ಅಕ್ಷರ ಕಲಿಸುತ್ತ ಬಂದ. ಆಗ ಜಾರ್ಜ್ ಡಾಸನ್ ಹೇಳಿದ,  `ಮಗೂ, ನಿನಗೆ ಹೇಳಲು ಸಾಕಷ್ಟು ಸಮಯವಿದೆ. ಆದರೆ, ಕಲಿಯಲು ನನಗೆ ಹೆಚ್ಚು ವ್ಯವಧಾನವಿಲ್ಲ~.
ಡಾಸನ್ ದಿನಕ್ಕೆ ನಾಲ್ಕು ಗಂಟೆ ಒಂದೇ ಕಡೆಗೆ ಕುಳಿತು ಕಲಿತ. ಒಂದು ತಿಂಗಳಾಗುವುದರಲ್ಲಿ  ತನ್ನ ಹೆಸರು, ವಿಳಾಸ ಬರೆಯುವಷ್ಟು ತಿಳುವಳಿಕೆ ಬಂತು. ಆರು ತಿಂಗಳಲ್ಲಿ  ಬೈಬಲ್ ಓದತೊಡಗಿದ.

ನಾನು ಅವನ ಕಥೆ ಓದಿದಾಗ ಅವನಿಗೆ ನೂರಾಮೂರು ವರ್ಷ ವಯಸ್ಸಾಗಿತ್ತು. ಆತ ಕೇವಲ ಓದುವುದು ಮಾತ್ರವಲ್ಲ, ಪತ್ರಿಕೆಗಳಿಗೆ ವಿಚಾರಪೂರ್ಣವಾದ ಲೇಖನಗಳನ್ನು ಬರೆದು ಪ್ರಕಟಿಸುತ್ತಿದ್ದ. ತಾನು ಇನ್ನೂ ಕಲಿಯುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ. ಇವನ ಕಥೆ ಓದಿದಾಗ ಎಷ್ಟು ವರ್ಷ ಕಳೆದರೆ ಒಬ್ಬ ವ್ಯಕ್ತಿಗೆ ವಯಸ್ಸಾಯಿತು ಎನ್ನಬಹುದು ಎನ್ನುವುದು ತಿಳಿಯಲಿಲ್ಲ. ನಾನು ತಿಳಿದುಕೊಂಡ ಹಾಗೆ 1) ಸದಾ ಚಟುವಟಿಕೆಯಲ್ಲಿದ್ದರೆ 2) ಯಾವಾಗಲೂ ಏನನ್ನಾದರೂ ಕಲಿಯುವ ಆಸಕ್ತಿ ಇದ್ದರೆ ಮತ್ತು 3) ಸಮಾಜಕ್ಕೆ ಏನಾದರೂ ನೀಡುವ ಮನಸ್ಸಿದ್ದರೆ, ವಯಸ್ಸಾಗುವುದೇ ಇಲ್ಲ. ಕ್ಯಾಲೆಂಡರ್ ಎಷ್ಟೇ ವರ್ಷ ತೋರಿದರೂ ವಯಸ್ಸಾಗದೇ ಉಳಿಯುವುದು ಸಾಧ್ಯ. ಈ ಮೂರು ಗುಣಗಳು ವಯಸ್ಸಾದವರು ಮತ್ತು ವಯಸ್ಸಾಗದೇ ಉಳಿದವರ ನಡುವಿನ ವ್ಯತ್ಯಾಸ ತೋರುತ್ತವೆ.

ಮೂವತ್ತು ವಯಸ್ಸಿಗೇ ಮೊಣಕಾಲೂರಿ ವಯಸ್ಸಾಯಿತಪ್ಪ ಎಂದು ಕೂತವರನ್ನೂ ಕಂಡಿದ್ದೇವೆ, ನೂರಾದರೂ ಲವಲವಿಕೆಯಿಂದ ತರುಣರನ್ನು ನಾಚಿಸುವಂಥವರನ್ನೂ ಕಂಡಿದ್ದೇವೆ. ನಮ್ಮ ಮನೋಭಾವ ವಯಸ್ಸನ್ನು ತೀರ್ಮಾನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.