ADVERTISEMENT

ಸಮಾಜದ ಹಣ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:20 IST
Last Updated 16 ಜೂನ್ 2018, 9:20 IST

ಬೆಟ್ಟ ಹತ್ತುವುದು ಸುಲಭವಲ್ಲ. ಅದೂ ವಯಸ್ಸಾದ ಮೇಲೆ. ಕತ್ತಲಾಗುತ್ತಿದೆ ಗುರುಗಳು ಕಡಿದಾದ ಮೆಟ್ಟಿಲುಗಳನ್ನೇರಿ ನಡೆಯುತ್ತಿದ್ದಾರೆ. ಅವರ ಹಿಂದೆ ಒಂದಿಷ್ಟು ಜನ ಶಿಷ್ಯರು. ಒಂದು ಮೆಟ್ಟಲಿನ ಮೇಲೆ ಗುರುಗಳು ಕುಳಿತುಕೊಂಡು ಬಿಟ್ಟರು. ‘ಪಾಪ! ಅವರಿಗೆ ಆಯಾಸವಾಗಿರಬೇಕು’ ಎಂದುಕೊಂಡರು ಶಿಷ್ಯರು. ಆದರೆ ಗುರುಗಳು ಮೊಣಕಾಲೂರಿ ಮೆಟ್ಟಲಿನ ಬದಿಯಲ್ಲಿದ್ದ ಕಲ್ಲುಗಳ ಸಂದಿಯಲ್ಲಿ ಕೈ ಹಾಕಿ ಏನನ್ನೋ ಹುಡುಕತೊಡಗಿದರು. ಅಲ್ಲಿ ಕೈ ಹಾಕಿ ನೋಡಿದರು, ಹಿಂದೆ ಸರಿದು ಮತ್ತೊಂದೆಡೆಗೆ ಹುಲ್ಲು ಸರಿಸಿ ನೋಡಿದರು. ಮುಖದಲ್ಲಿ ಆತಂಕ ಕಾಣುತ್ತಿತ್ತು. ಶಿಷ್ಯರಿಗೆ ಚಿಂತೆ, ‘ಗುರುಗಳು ಏನನ್ನು ಕಳೆದುಕೊಂಡಿದ್ದಾರೆ?’ ಯಾರೋ ಒಬ್ಬರು ಟಾರ್ಚ್ ತಂದರು.
 
ಗುರುಗಳು ಕೈ ಹಾಕಿದಲ್ಲೆಲ್ಲ ಬೆಳಕು ಹರಿಯಿತು. ಅದೋ ಅಲ್ಲಿ, ಮೆಟ್ಟಿಲುಗಳ ಸಂದಿಯಲ್ಲಿ ಬಿದ್ದಿದೆ ಆ ವಸ್ತು. ಗುರುಗಳು ಅದನ್ನೆತ್ತಿಕೊಂಡರು. ಅವರ ಮುಖದಲ್ಲಿ ತೃಪ್ತಿಯ ನಗೆ. ಆ ವಸ್ತುವನ್ನು ಅಂಗೈಯಲ್ಲಿಟ್ಟುಕೊಂಡು ಪ್ರೀತಿಯಿಂದ ತಟ್ಟಿದರು. ಶಿಷ್ಯರು ತುಂಬ ಕುತೂಹಲದಿಂದ ಆ ವಸ್ತುವನ್ನು ನೋಡಿದರು. ಅದೊಂದು ಇಪ್ಪತ್ತು ಪೈಸೆಯ ನಾಣ್ಯ! ಶಿಷ್ಯರೆಂದುಕೊಂಡರು, ಅಯ್ಯೋ ಈ ಇಪ್ಪತ್ತು ಪೈಸೆ ನಾಣ್ಯಕ್ಕಾಗಿ ಗುರುಗಳು ಇಷ್ಟೊಂದು ಕಷ್ಟ ಪಟ್ಟರೇ? ಒಬ್ಬರು ಕೇಳಿಯೇ ಬಿಟ್ಟರು. ಅದಕ್ಕೆ ಗುರುಗಳ ಉತ್ತರ ಮಾರ್ಮಿಕವಾಗಿತ್ತು. ‘ಇಪ್ಪತ್ತು ಪೈಸೆಯ ಬೆಲೆ ಹೆಚ್ಚಲ್ಲ. ಆದರೆ ಅದನ್ನು ನನಗೆ ನೀಡಿದವರ ಮನೋಭಾವ ದೊಡ್ಡದು. ಅದನ್ನು ಕೊಟ್ಟವನು ತನ್ನ ಅವಶ್ಯಕತೆಯನ್ನು ತಡೆ ಹಿಡಿದು ಮಠಕ್ಕೆ ದಾನ ಮಾಡಿದ್ದಾನೆ. ಅದನ್ನು ಕಳೆದುಕೊಳ್ಳುವುದೆಂದರೆ ಅವನ ತ್ಯಾಗವನ್ನು ಕಡೆಗಣಿಸಿದಂತೆ.’

ಹೀಗೆ ಪ್ರೀತಿಯಿಂದ ಭಕ್ತ ನೀಡಿದ ಅಳಿಲುಸೇವೆಯನ್ನು ಮಹತ್ತಾಗಿ ಕಂಡು ದಾನದ ಪ್ರಕ್ರಿಯೆಯನ್ನು ಹಿರಿದಾಗಿಸಿದ ಗುರುಗಳು, ಸುಮಾರು ಸಾವಿರ ವರ್ಷದ ಇತಿಹಾಸವನ್ನು ಹೊಂದಿದ, ಹೈದರಾಬಾದ ಕರ್ನಾಟಕ ಕ್ಷೇತ್ರದಲ್ಲಿ ಆಶಾದೀಪವಾಗಿರುವ ಕೊಪ್ಪಳದ ಗವಿಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಲಿಂ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು. ಕೇವಲ ಶಿಕ್ಷಣದಿಂದ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯವೆಂದು ಬಗೆದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿ ಸುಮಾರು ಮೂವತ್ತೆರಡು ವರ್ಷಗಳ ಕಾಲ ಈ ಮಠವನ್ನು ಬೆಳೆಸಿ ನಡೆಸಿದವರು ಶಿವಶಾಂತವೀರ ಮಹಾಸ್ವಾಮಿಗಳು. ಅವರು ಗವಿಮಠದ ಗುರುಪರಂಪರೆಯಲ್ಲಿ ಹದಿನೇಳನೆಯವರು.
ಅವರ ಉತ್ತರಾಧಿಕಾರಿಗಳಾಗಿ ಈಗ ಪೀಠಾಧಿಕಾರಿಗಳಾದ ತರುಣ ಸನ್ಯಾಸಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಗುರುಗಳ ಆದರ್ಶಗಳನ್ನು ಸಮರ್ಥವಾಗಿ ಬೆಳೆಸಿ ಸಮಾಜಕ್ಕೆ ಚೈತನ್ಯಸ್ವರೂಪಿಗಳಾಗಿದ್ದಾರೆ.

ಇತ್ತೀಚಿಗೆ ಪತ್ರಿಕೆಯ ಸಂಪಾದಕರೊಬ್ಬರು ಈ ಗುರುಗಳ ಜ್ಞಾನ, ನಾಯಕತ್ವ ಗುಣಗಳನ್ನು ಕೇಳಿ ತಿಳಿದುಕೊಂಡು ಅವರ ಸಂದರ್ಶನಕ್ಕಾಗಿ ಬಂದರಂತೆ. ಅವರೊಂದಿಗೆ ಸಾಕಷ್ಟು ಹೊತ್ತು ಸಂವಾದ ಮಾಡಿ, ಬೇರೆಯವರಿಂದ ವಿಷಯಗಳನ್ನು ತಿಳಿದುಕೊಂಡು, ಛಾಯಾಚಿತ್ರಗಳನ್ನು ತೆಗೆದುಕೊಂಡು ತಯಾರಾದರಂತೆ. ಸಂದರ್ಶನದ ಕೊನೆಗೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಕೇಳಿದರು, ‘ತಮ್ಮ ಸಂದರ್ಶನಕ್ಕೆ ಕೃತಜ್ಞತೆಗಳು. ಆದರೆ ನಮ್ಮದೊಂದು ವಿನಂತಿ. ನಮ್ಮ ಪತ್ರಿಕೆಗೆ ತಮ್ಮ ಗವಿಮಠದ ಒಂದು ಜಾಹೀರಾತು ನೀಡಬಹುದೇ?’ ಆಗ ಕ್ಷಣಕಾಲ ಚಿಂತಿಸಿ ತರುಣ ಗುರುಗಳು ಹೇಳಿದರು, ‘ನನ್ನ ಮುಂದಿನ ತಟ್ಟೆಯಲ್ಲಿರುವ ಎಂಟಾಣೆ, ಒಂದು ರೂಪಾಯಿ, ಐದು, ಹತ್ತು ರೂಪಾಯಿಗಳು ಭಕ್ತರು ಮಠಕ್ಕೆ ನೀಡಿದ ಕಾಣಿಕೆಗಳು. ಅವುಗಳಲ್ಲಿಯ ಪ್ರತಿಯೊಂದು ಪೈಸೆ ಸಮಾಜದ ಬೆಳವಣಿಗೆಗೆಂದು ನಮ್ಮ ಭಕ್ತರು ನಂಬಿಕೆಯಿಂದ ಮಾಡಿದ ತ್ಯಾಗ. ಅದನ್ನು ನಾವು ಪ್ರಚಾರಕ್ಕೆ ಬಳಸಿಕೊಂಡರೆ ಅವರ ನಂಬಿಕೆಗೆ ಅನ್ಯಾಯ ಮಾಡಿದಂತಾಗುತ್ತದೆ. ದಯವಿಟ್ಟು ಕ್ಷಮಿಸಿ.

ಇದು ಸಮಾಜದ ಹಣವನ್ನು ಹೇಗೆ ರಕ್ಷಿಸಿ ಅದನ್ನು ಮರಳಿ ಸಮಾಜಕ್ಕೇ ಕೊಡಬೇಕೆಂಬ ಎಚ್ಚರಿಕೆಯಿಂದ ಗುರುಗಳು ನಡೆದು ತೋರಿದ ಆದರ್ಶದ ದಾರಿ. ಇಂಥ ಮಠಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಿಡುವ ಮೂಲಕೇಂದ್ರಗಳು. ಈ ಗುರುಪರಂಪರೆಗೆ ನಮ್ಮೆಲ್ಲರ ಗೌರವ ಪೂರ್ವಕ ಪ್ರಣಾಮಗಳು ಸಲ್ಲಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.