ADVERTISEMENT

ಸೃಜನಶೀಲ ಅತೃಪ್ತಿ

ಡಾ. ಗುರುರಾಜ ಕರಜಗಿ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST

ನಂದಲಾಲ ಬೋಸ್ ಭಾರತ ಕಂಡ ಅಪ್ರತಿಮ ಚಿತ್ರಕಾರರಲ್ಲಿ ಪ್ರಮುಖರು. ಗುರುದೇವ ರವೀಂದ್ರನಾಥ ಟ್ಯಾಗೋರ್ ಜೊತೆಗಿದ್ದು ಶಾಂತಿನಿಕೇತನಕ್ಕೆ ವಿಶ್ವಮಾನ್ಯತೆ ದೊರಕಿಸಿಕೊಡುವುದರಲ್ಲಿ ಅವರ ಕಾಣಿಕೆಯೂ ದೊಡ್ಡದೇ.  ನಂದಲಾಲ ಬೋಸ್ ತರುಣರಾಗಿದ್ದಾಗ ರವೀಂದ್ರನಾಥರ ತಂದೆ ದೇವೇಂದ್ರನಾಥ್ ಠಾಕೂರರನ್ನು ತಮ್ಮ ಗುರುವನ್ನಾಗಿ ಸ್ವೀಕರಿಸಿದ್ದರು. ಅವರದು ಅಪಾರವಾದ ಗುರುಭಕ್ತಿ. ಒಂದು ಬಾರಿ ಕೃಷ್ಣಜನ್ಮಾಷ್ಟಮಿಯ ದಿನ ನಂದಲಾಲಬೋಸ್ ಒಂದು ಸುಂದರವಾದ ಶ್ರೀಕಷ್ಣನ ಚಿತ್ರ ಬಿಡಿಸಿದರು. ಅದೊಂದು ದೊಡ್ಡ ಕ್ಯಾನವಾಸ್. ಮಧ್ಯದಲ್ಲಿ ತನ್ಮಯನಾಗಿ ಕೊಳಲು ನುಡಿಸುತ್ತಿದ್ದ ಕೃಷ್ಣ. ಸುತ್ತಲೂ ನಿಂತು ಅವನನ್ನೇ ನೋಡುತ್ತ ಮೈಮರೆತಿದ್ದ ಗೋಪಿಯರು, ಹಾರುವುದನ್ನು ಮರೆತು ಈ ಅದ್ಭುತ ದೃಶ್ಯವನ್ನೇ ನೋಡುತ್ತಿದ್ದ ಪಕ್ಷಿಗಳು, ಹುಲ್ಲು ತಿನ್ನುವುದನ್ನು ತೊರೆದು ನಿಂತ ಹಸುಗಳು, ಹೀಗೆ ಚಿತ್ರ ಅದ್ಭುತವಾಗಿತ್ತು. ಅದನ್ನು ತೋರಿಸಲು ಗುರುಗಳಾದ ದೇವೇಂದ್ರನಾಥರನ್ನು ಕರೆತಂದರು. ಗುರುಗಳು ಬಂದರು, ಕ್ಷಣಕಾಲ ತದೇಕಚಿತ್ತದಿಂದ ಅದನ್ನೇ ಗಮನಿಸಿದರು. ಜನರು ನೋಡುತ್ತಿದ್ದಂತೆ ಅವರ ಮುಖ ಬಿರುಸಾಯಿತು, ಹುಬ್ಬು ಗಂಟಿಕ್ಕಿದವು.  ನಂದಲಾಲ, ಇದನ್ನೇನು ಚಿತ್ರ ಎಂದು ಬಿಡಿಸಿದ್ದೀಯಾ. ಕೋಲ್ಕತ್ತದ ರಸ್ತೆಯ ಬದಿಯಲ್ಲಿ ಕುಳಿತು ಚಿತ್ರ ಬಿಡಿಸುವ ಹುಡುಗರು ನಿನಗಿಂತ ಚೆನ್ನಾಗಿ ಬರೆಯುತ್ತಾರೆ. ತೆಗೆದು ಹಾಕು ಇದನ್ನು  ಎಂದು ಹೊರಟು ಹೋದರು.
ಇಷ್ಟು ಚೆಂದವಾದ ಚಿತ್ರವನ್ನು ಅದೇಕೆ ಗುರುಗಳು ಇಷ್ಟಪಡಲಿಲ್ಲ ಎಂದು ಉಳಿದವರೆಲ್ಲ ಆಶ್ಚರ್ಯಪಟ್ಟರು. ರವೀಂದ್ರನಾಥರಿಗೂ ಇದು ಅರ್ಥವಾಗಲಿಲ್ಲ. ತಮ್ಮ ತಂದೆಯನ್ನು ಕೇಳಿಯೇ ಬಿಟ್ಟರು,  ನಂದಲಾಲ ಬರೆದ ಚಿತ್ರ ತುಂಬ ಚೆನ್ನಾಗಿತ್ತು. ನೀವು ಅಷ್ಟು ತೆಗಳುವ ಹಾಗೆ ಕೆಟ್ಟದ್ದೇನೂ ಆಗಿರಲಿಲ್ಲ ಅಲ್ಲವೇ.  ಅದಕ್ಕೆ ದೇವೇಂದ್ರನಾಥರು,  ನನಗೆ ಗೊತ್ತು, ಅದೊಂದು ಒಳ್ಳೆಯ ಚಿತ್ರ. ಆದರೆ ನಂದಲಾಲನ ಶಕ್ತಿ ತುಂಬ ಹೆಚ್ಚಿನದು. ಆತ ಇನ್ನೂ ಅದ್ಭುತವಾದ ಚಿತ್ರಗಳನ್ನು ಬರೆಯಬಲ್ಲ. ನಾನು ಅವನನ್ನು ಮೆಚ್ಚಿ ಹೊಗಳಿದರೆ ಆತ ಇನ್ನಷ್ಟು ಪ್ರಯತ್ನಮಾಡುವುದನ್ನು ಮುಂದುವರೆಸಲಿಕ್ಕಿಲ್ಲ  ಎಂದರು.

ಮುಂದಿನ ಮೂರು ವರ್ಷಗಳ ಕಾಲ ನಂದಲಾಲ ನಿಜವಾಗಿಯೂ ರಸ್ತೆಯ ಬದಿಯಲ್ಲಿ ಚಿತ್ರ ಬರೆಯುವವರೊಂದಿಗೇ ಸಮಯ ಕಳೆದು ಅವರ ಕಲೆಯನ್ನು ಅಭ್ಯಾಸ ಮಾಡಿದರು. ಅದಲ್ಲದೇ ಸ್ವಂತ ಪರಿಶ್ರಮವೂ ನಡೆದೇ ಇತ್ತು. ನಂತರ ಕೆಲದಿನಗಳ ನಂತರ ಮತ್ತೆ ಕೃಷ್ಣ ಜನ್ಮಾಷ್ಟಮಿ ಬಂದಿತು. ಅಂದಿನ ದಿವಸಕ್ಕೆ ನಂದಲಾಲ ಮತ್ತೊಂದು ಚಿತ್ರವನ್ನು ಬರೆದು ಅದನ್ನು ತಮ್ಮ ಗುರುವಿಗೆ ತೋರಿಸಲೆಂದು ತಂದರು. ಅದನ್ನು ನೋಡಿ ಎಲ್ಲರೂ ಬೆರಗಾದರು. ಅದೂ ಕೃಷ್ಣ ಕೊಳಲೂದುತ್ತ ನಿಂತಿರುವ ಚಿತ್ರ, ಅಲ್ಲಿಯೂ ಗೋಪಿಯರಿದ್ದರು, ಪಕ್ಷಿ, ಪ್ರಾಣಿಗಳಿದ್ದವು. ಆದರೆ ಎಲ್ಲವೂ ಜೀವಂತವಾಗಿ ಇದ್ದಂತಿದ್ದವು. ಕೃಷ್ಣನ ಕೊಳಲು ಕೇಳಿಸುವಂತಿತ್ತು, ಗೋಪಿಯರ ಕಾಲಿನ ಗೆಜ್ಜೆಯ ನಾದ ಕೇಳುತ್ತಿತ್ತು, ಪಕ್ಷಿಗಳ ಕಲರವ ಕಿವಿ ತಲುಪುತ್ತಿತ್ತು. ಇಡೀ ಚಿತ್ರ ಜೀವಂತಿಕೆ  ಸಾರುತ್ತಿತ್ತು. ದೇವೇಂದ್ರನಾಥರು ಅದನ್ನು ನೋಡಿದರು, ಅವರ ಕಣ್ಣಂಚಿನಲ್ಲಿ ನೀರು ಒಸರಿತು. ನೇರವಾಗಿ ನಂದಲಾಲರ ಹತ್ತಿರ ಹೋಗಿ ಅವರನ್ನು ಬಿಗಿದಪ್ಪಿದರು.  ನಂದಲಾಲ, ನನಗೆ ಗೊತ್ತಿತ್ತು ನಿನ್ನಲ್ಲಿ ಈ ಶಕ್ತಿ ಇದೆಯೆಂದು. ಇದಕ್ಕಿಂತ ಕೊಂಚ ಕೆಳಮಟ್ಟಕ್ಕೆ ನೀನು ಬಂದರೂ ನಿನ್ನಲ್ಲಿರುವ ಕಲೆಗೆ ಅಪಮಾನ ಮಾಡಿದಂತೆ. ಅದಕ್ಕೇ ನಾನು ನಿನ್ನನ್ನು ಹಾಗೆ ತೆಗಳಿದ್ದು  ಎಂದು ಬೆನ್ನು ತಟ್ಟಿದರು. ನಂದಲಾಲ ಬೋಸ್ ಅರ್ಥವಾಯಿತೆಂಬಂತೆ ತಲೆ ಅಲ್ಲಾಡಿಸಿದರು.

ನಾವು ನಮ್ಮ ಪ್ರಯತ್ನದಲ್ಲಿ ಉನ್ನತ ಮಟ್ಟಕ್ಕೆ ಹೋಗಲು ಸದಾ ಶ್ರಮಿಸುತ್ತಿರಬೇಕು. ನಾವು ಮಾಡಿದ್ದು ತುಂಬ ಚೆನ್ನಾಗಿದೆ ಎಂಬ ಭಾವ ಮೂಡಿದರೆ ಮುಂದಿನ ಬೆಳವಣಿಗೆ ನಿಂತುಹೋಗುತ್ತದೆ. ಆದ್ದರಿಂದ ಉನ್ನತಿಯ ದಾರಿಯಲ್ಲಿ ಸೃಜನಶೀಲ ಅತೃಪ್ತಿ ಬಹಳ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.