ADVERTISEMENT

ಸ್ಥಾನದ ಮಿತಿಯ ಅರಿವು

ಡಾ. ಗುರುರಾಜ ಕರಜಗಿ
Published 23 ಜುಲೈ 2012, 19:30 IST
Last Updated 23 ಜುಲೈ 2012, 19:30 IST

ಇದೊಂದು ಪುರಾಣದ ಕಥೆ. ಸ್ವರ್ಗದ ಅಧಿಪತಿಯಾದ ಇಂದ್ರ ಎಲ್ಲ ದೇವತೆಗಳಿಗೂ ನಾಯಕ. ಆದ್ದರಿಂದ ಪ್ರಪಂಚದ ಸಕಲಪ್ರಾಣಿಗಳೂ ಅವನನ್ನು ಸ್ತುತಿಸುತ್ತ ಮೊರೆ ಹೋಗುತ್ತಿದ್ದವು. ಅವನ ಕ್ರೂರದಷ್ಟಿಗೆ ಸಿಲುಕಿದರೆ ತಮಗೆ ಉಳಿಗಾಲವಿಲ್ಲ ಎಂಬುದು ಅವುಗಳಿಗೆಲ್ಲ ತಿಳಿದಿತ್ತು.

ಒಂದು ಕಾಲದಲ್ಲಿ ಸಮುದ್ರದಲ್ಲಿ ವಿಶೇಷ ಜಾತಿಯ ಮೀನುಗಳು ತಲೆದೋರಿದವು. ಅವು ಬಹುದೊಡ್ಡ ಮೀನುಗಳು. ಅವುಗಳಿಗೆ ಯಾವ ಜಲಚರಗಳ ಭಯವೂ ಇಲ್ಲ. ಸದಾ ಕಾಲ ತಮ್ಮ ಬಾಲವನ್ನೆತ್ತಿ ನೀರಿಗಪ್ಪಳಿಸುತ್ತ, ನೀರನ್ನು ಮೇಲೆ ಚಿಮ್ಮುತ್ತ ಓಡಾಡುತ್ತಿದ್ದವು. ಅವುಗಳನ್ನು ಶರ್ಕರ ಮೀನುಗಳು ಎಂದು ಕರೆಯುತ್ತಿದ್ದರು.
 
ಈ ಮೀನುಗಳ ಅಹಂಕಾರ ಹೆಚ್ಚಾಯಿತು. ಅದನ್ನು ಕಂಡ ಇಂದ್ರ, ಒಂದು ದಿನ ಸಮುದ್ರ ತೀರಕ್ಕೆ ಬಂದ. ಅವನನ್ನು ಕಂಡು ಎಲ್ಲ ಜಲಚರಗಳು ಗೌರವ ತೋರಿದವು. ಆದರೆ, ಶರ್ಕರ ಮೀನುಗಳಿಗೆ ಇವನ ಲೆಕ್ಕವೇ ಇಲ್ಲ.

ಇಂದ್ರನೇ ಶರ್ಕರ ಮೀನುಗಳನ್ನು ಕೂಗಿ ಕರೆದ. ಶರ್ಕರ ಮೀನು ಯಾರಪ್ಪಾ ತನ್ನನ್ನು ಹೀಗೆ ಕರೆಯುವವರು ಎಂದುಕೊಂಡು ಸೊಕ್ಕಿನಿಂದಲೇ ಬಂದಿತು. ಇಂದ್ರನನ್ನು ನೋಡಿ,  ಏನಯ್ಯೊ ಇಂದ್ರ. ಏನು ಈ ಕಡೆಗೆ ಬಂದಿದ್ದೀಯಾ.?  ಎಂದು ಉಡಾಫೆಯಿಂದ ಕೇಳಿತು. ಆಗ ಇಂದ್ರ ಕೋಪದಿಂದ,  `ಏ ಶರ್ಕರಾ, ನೀನೊಂದು ಸಾಮಾನ್ಯವಾದ ಜಲಚರ.

ನಿನ್ನ ಅಹಂಕಾರದ ಮೆರವಣಿಗೆ ಸಾಕು. ವಿಧೇಯನಾಗಿ ನನ್ನ ಸ್ತುತಿ ಮಾಡಿಕೊಂಡಿರು~  ಎಂದು ಹೇಳಿದ. ಆಗ ಶರ್ಕರ ಕತ್ತೆತ್ತಿ ನೋಡಿ,  `ಹೇ ಇಂದ್ರ, ಯಾಕಯ್ಯೊ ಇಲ್ಲಿಗೆ ಬಂದು ತೊಂದರೆ ಮಾಡುತ್ತೀಯಾ. ನೀನು ಸುಮ್ಮನೇ ದೇವಲೋಕದಲ್ಲಿ ಕುಳಿತುಕೋ, ಇದು ನನ್ನ ಜಗತ್ತು. ಸ್ತುತಿ ಮಾಡುವುದಕ್ಕೆ ನೀನ್ಯಾವ ನಾಯಕ~ ಎಂದು ಬಾಲವನ್ನೆತ್ತಿ ನೀರಗಪ್ಪಳಿಸಿ ಇಂದ್ರನ ಮುಖಕ್ಕೆ ನೀರು ಎರಚಿ ನಕ್ಕು ಹೊರಟು ಹೋಯಿತು.


 ಈ ಗರ್ವದ ಉತ್ತರ ಇಂದ್ರನ ಕೋಪವನ್ನು ಕೆರಳಿಸಿತು. ಆತ ಬಿಟ್ಟಾನೆಯೇ. ತಕ್ಷಣ ಮೋಡಗಳಿಗೆ ಸಮುದ್ರದ ಮೇಲೆ ಮಳೆ ಸುರಿಸಲು ಆಜ್ಞೆ ಮಾಡಿದ. ಬಿರುಗಾಳಿಗೆ ಸಮುದ್ರವನ್ನು ಅಲ್ಲೋಲ ಕಲ್ಲೋಲ ಮಾಡುವಂತೆ ವಿಧಿಸಿದ.

ದಟ್ಟ ಕರಿಯ ಮೋಡಗಳು ಒತ್ತರಿಸಿಕೊಂಡು ಬಂದು ಪ್ರಳಯಕಾಲದ ಮಳೆ ಸುರಿಸತೊಡಗಿದವು. ಬಿರುಗಾಳಿ ನುಗ್ಗಿ ಬಂದು ಭಯಂಕರವಾದ ಅಲೆಗಳನ್ನು ಸೃಷ್ಟಿಸಿತು. ಗಾಬರಿಗೊಂಡ ಶರ್ಕರ ಸಮುದ್ರ ತಳಕ್ಕೆ ಹೋಗಿ ಕುಳಿತುಕೊಂಡಿತು.
 
ಮತ್ತ್ತೊಂದು ಪ್ರಚಂಡ ಬಿರುಗಾಳಿ ಸಮುದ್ರದ ತಳಕ್ಕೇ ನುಗ್ಗಿ ಶರ್ಕರವನ್ನೆತ್ತಿಕೊಂಡು ಮೇಲಕ್ಕೆ ಬಂದಿತು. ಇನ್ನೊಂದು ಬಿರುಗಾಳಿ ಈ ಶರ್ಕರವನ್ನು ಬೃಹತ್ ತೆರೆಯಲ್ಲಿ ತಳ್ಳಿಕೊಂಡು ಸಮುದ್ರದ ತಡಿಗೆ ಎಸೆದುಬಿಟ್ಟಿತು.

ನೀರಿನಲ್ಲಿ ಹಾರಾಡುತ್ತಿದ್ದ ಶರ್ಕರ ಮೀನು ಮರಳಿನಲ್ಲಿ ಬಿದ್ದೊಡನೆ ಉಸಿರುಗಟ್ಟಿ ಒದ್ದಾಡತೊಡಗಿತು. ತಾನು ಸಾಯುವುದು ಖಚಿತ ಎನ್ನಿಸಿತು. ಈ ಎಲ್ಲ ಅನಾಹುತಕ್ಕೆ ಇಂದ್ರನೇ ಕಾರಣ ಎಂದು ಅರಿವಾದೊಡನೆ ಒಂದು ಶ್ಲೋಕ  ರಚಿಸಿ ಇಂದ್ರನನ್ನು ಕುರಿತು ಹಾಡಿ ಹೊಗಳತೊಡಗಿತು.
 

ತನ್ನನ್ನು ಪಾರುಮಾಡಬೇಕೆಂದು ಪ್ರಾರ್ಥಿಸಿಕೊಂಡಿತು. ಇಂದ್ರನ ಮನಸ್ಸೂ ಕರಗಿ ಅದನ್ನು ಮತ್ತೊಂದು ದೊಡ್ಡ ತೆರೆಯ ಮೂಲಕ ಸಮುದ್ರ ಸೇರುವಂತೆ ಮಾಡಿದ. ಮುಂದೆ ಅದು ತನ್ನ ಮಿತಿಯನ್ನರಿತೇ ಬದುಕಿತಂತೆ.

ಪ್ರತಿಯೊಬ್ಬರಿಗೂ ತಮ್ಮ ಸ್ಥಾನದ ಅಧಿಕಾರದ ಜೊತೆಗೆ ಅದರ ಮಿತಿಗಳೂ ತಿಳಿದಿರುವುದು ಮುಖ್ಯ. ಕೆಲವರು ಪುಟ್ಟ ಅಧಿಕಾರ ದೊರೆತೊಡನೆ ಶರ್ಕರ ಮೀನಿನಂತೆ ಬಾಲವೆತ್ತಿ ಹಾರಾಡುತ್ತ ಅಹಂಕಾರ ಪ್ರದರ್ಶನ ಮಾಡುತ್ತಾರೆ.

ತಮ್ಮ ಮಿತಿಯಾಚೆ ಬಿದ್ದಾಗ ಒದ್ದಾಡಿ ದುಃಖಪಡುತ್ತಾರೆ. ಪ್ರತಿಯೊಂದು ಸ್ಥಾನಕ್ಕೂ ಒಂದು ಗಾಂಭೀರ್ಯ, ಗೌರವವಿದೆ. ಅದನ್ನು ಅನುಸರಿಸಿದರೆ ಮನ್ನಣೆ, ಗೌರವ. ಗಾಂಭೀರ್ಯದ ಮಿತಿ ದಾಟಿದಾಗ ಅಹಂಕಾರವಾಗುತ್ತದೆ. ತನಗಿಂತ ಹೆಚ್ಚಿನ ಶಕ್ತಿಯ ಕೆಂಗಣ್ಣಿಗೆ ಗುರಿಯಾಗುತ್ತದೆ, ಸ್ಥಾನ ಕಳೆದುಕೊಂಡು ಪೆಟ್ಟುತಿಂದು ಮರುಗುತ್ತದೆ, ತಿರಸ್ಕಾರಕ್ಕೆ ಈಡಾಗುತ್ತದೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.