ದಿನಗಳು ಉರುಳಿದಂತೆಲ್ಲ ಸ್ನೇಹಿತೆಯರಾದ ರಿಂಕಿ, ಈಶ್ವರಿ, ಇಂದುಮತಿ, ರಶ್ಮಿ ಮತ್ತು ವಿಜಿ ಗಾಢವಾದ ಸ್ನೇಹಿತೆಯರಾಗುತ್ತಲೇ ಒಬ್ಬರನ್ನೊಬ್ಬರು ಇರಿಯುವ ಭರ್ಜಿಗಳೂ ಆಗುತ್ತಿದ್ದರು. ಅದೊಂದು ಅತೀವ ನೈಸರ್ಗಿಕ ಪ್ರಕ್ರಿಯೆ. ಬಹಳ ಸಹಜವಾಗಿ ದಟ್ಟವಾಗುತ್ತಲೇ ಅಳ್ಳಕವೂ ಆಗಿಬಿಡುವ ಸಂಬಂಧಗಳೆಂದರೆ ಒಂದು ಮದುವೆ, ಅದನ್ನು ಬಿಟ್ಟರೆ ಸ್ನೇಹ.
ನಮ್ಮ ಸ್ನೇಹದಲ್ಲಿ ಒಂದೂ ಭಿನ್ನಮಾತಿಲ್ಲ ಅಂತ ಕೊಚ್ಚಿಕೊಂಡ ತಿಂಗಳಲ್ಲೇ ಆ ಸ್ನೇಹಕ್ಕೆ ಕಾಲದ ಉಳಿ ಪೆಟ್ಟು ಬಲವಾಗೇ ಬಿದ್ದಿರುತ್ತದೆ. ‘ನಾನೂ ನನ್ ಗಂಡನೂ ಒಂದ್ ಸಾರಿನೂ ಜಗಳಾಡಲ್ಲ. ನಾವ್ ಡಿಫರೆಂಟ್’ ಎನ್ನುವ ಆಧುನಿಕ ಹೆಂಡತಿಯೋ ಅಥವಾ ‘ನನ್ ವೈಫು ಬಹಳಾ ಆಂಡರ್ಸ್ಟಾಂಡಿಂಗು. ನಾನ್ ಏನ್ ಹೇಳಿದ್ರೂ ಒಪ್ಪಿಕೋತಾಳೆ. ನಂಗೇನೂ ತಿಳಿಯಲ್ಲ ನೀವೇ ಡಿಸೈಡ್ ಮಾಡಿ ಅಂತಾಳೆ’ ಅಂತ ತಂಪೊತ್ತಿನಲ್ಲಿ ಬಿಯರ್ರೋ ವಿಸ್ಕಿಯೋ ಹೀರುತ್ತಾ ಹೇಳುವ ಗಂಡೆದೆಯ ಗಂಡಂದಿರಿಗೆ ತಾವೆಷ್ಟು ನಗೆಪಾಟಲಾಗುತ್ತಿದ್ದೇವೆ ಅನ್ನುವ ಅಂದಾಜೇ ಇರುವುದಿಲ್ಲ. ಹೀಗೆ ಹೇಳಿದ ವಾರಕ್ಕೇ ಅವರ ಮನೆ ಜಗಳ ಅರ್ಧ ಜಗತ್ತಿಗೆ ಗೊತ್ತಾಗಿರುತ್ತದೆ. ಆಮೇಲೆ ಮುಖ ಮುಚ್ಚಿಕೊಂಡು ಓಡಾಡುವ ಅನಿವಾರ್ಯ ಬೇರೆ!
ಜೀವನವನ್ನು, ನೋವುಗಳನ್ನು, ಅವಮಾನವನ್ನು ಭರಪೂರವಾಗಿಯೇ ಉಂಡ ಈಶ್ವರಿ ಉಳಿದವರಿಗೆ ಇಂತಹ ಜ್ಞಾನವನ್ನು ಪಸರಿಸುತ್ತಿದ್ದರೆ ಅವಳು ಬುದ್ಧನೇನೋ, ತಾವೆಲ್ಲ ಪದತಲದಲ್ಲಿರುವ ಶಿಷ್ಯರೇನೋ ಎನ್ನುವ ಆರ್ದ್ರತೆಯಿಂದ ಉಳಿದವರೂ ಕೇಳುತ್ತಿದ್ದರು. ರಿಂಕಿ ಮಾತ್ರ ಒಮ್ಮೊಮ್ಮೆ ಇಂಥದಕ್ಕೆ ಜೋತು ಬೀಳದೆ ತನ್ನ ವಾದಸರಣಿಯನ್ನು ಆಗಾಗ ಬಹಿರಂಗಕ್ಕೆ ತರುತ್ತಿದ್ದಳು.
‘ಆಸೆಯೇ ದುಃಖಕ್ಕೆ ಮೂಲ ಅನ್ನೋದಾದರೆ ದುಃಖವೇ ಸುಖ ಅಂತ ಯಾಕೆ ಅಂದ್ಕೋಬಾರದು’ ಅಂತ ರಿಂಕಿ ಕೇಳಿದಾಗ ಸೂರ್ಯ ಡ್ಯೂಟಿ ಮುಗಿಸಿಕೊಂಡು ತನ್ನ ಮನೆಗೆ ಹೊರಡುತ್ತಿದ್ದ. ಭೋರಾಡಿ ಅಳುವ ಮಗುವಿನ ಕಣ್ಣೀರು ಎಲ್ಲೆಡೆಯೂ ಚೆಲ್ಲಾಡಿದ ಹಾಗೆ ಕ್ಷಿತಿಜದಲ್ಲಿ ಹರಡಿದ ಕಿತ್ತಳೆ ಬಣ್ಣ ಹರಡುತ್ತಿದ್ದ ಬೆನ್ನಲ್ಲೇ ಕ್ಷಯವಾಗುತ್ತಲೂ ಹೊರಟಿತ್ತು. ಕಿತ್ತಳೆ ಮುಗಿದ ತಕ್ಷಣ ಆವರಿಸಲು ಕತ್ತಲೆ ಅಲ್ಲೇ ಮೂಲೆಯಲ್ಲೇ ಕೂತು ತನ್ನ ಸರದಿಗಾಗಿ ಕಾಯುತ್ತಿತ್ತು. ಎಲ್ಲರೂ ಹಾಸ್ಟೆಲಿನ ಹೊರಗೆ ಇದ್ದ ಗಾರ್ಡನ್ ಎಂಬೋ ಕುರುಚಲು ಪೊದೆಗಳ ಜಾಗದಲ್ಲಿ ಕೂತಿದ್ದರು. ಕ್ಲಾಸ್ ಮೇಟ್ ಗಣೇಶನ ಹತ್ತಿರ ಕಾಡಿಬೇಡಿ ಒಂದು ಪ್ಯಾಕೆಟ್ ಸಿಗರೇಟ್ ತರಿಸಿ ಈವತ್ತು ತಂತಮ್ಮ ಫೆಮಿನಿಸಮ್ಮಿಗೆ ಧೂಪಾರತಿಯ ಪ್ರಯೋಗ ಮಾಡಲೇಬೇಕೆನ್ನುವ ದೃಢ ನಿರ್ಧಾರ ಮಾಡಿ ಎಲ್ಲರೂ ಹೊರಗೆ ಬಂದಿದ್ದರು.
ಪೊದೆ ಪ್ರೇಮಿಗಳು ಬಂದು, ಪ್ರೇಯಸಿಯರ ಹತ್ತಿರ ತಂತಮ್ಮ ಪ್ರೀತಿಯ ನಿವೇದನೆಗಳನ್ನು, ಭರವಸೆಗಳನ್ನೂ, ಸಾಧ್ಯವಾದರೆ ಕಳ್ಳ ಮುತ್ತುಗಳಿಂದ ಶುರುವಾಗಿ ಸಮಯ ಹಾಗೂ ಸಾಮರ್ಥ್ಯಾನುಸಾರ ಮುಂದುವರೆದು ಯಾವುದೋ ಉತ್ತುಂಗವನ್ನು ಮುಟ್ಟುವ ಹವಣಿಕೆಯಲ್ಲಿ ಹಾಸ್ಟೆಲಿನ ಗಾರ್ಡನ್ನಿನ ಕಡೆ ಬರುತ್ತಿದ್ದರೆ, ಹೆಸರಿಗೊಂದು ಬಾಯ್ ಫ್ರೆಂಡೂ ಇಲ್ಲದ ಈ ಬಡ ಹುಡುಗಿಯರು ಸಿಗರೇಟು ಸೇದುವುದನ್ನು ಕಲಿತರೆ ತಮಗೆ ಸಿನಿಮಾ ಹೀರೊಗಳ ಹಾಗೆ ಜಗತ್ತನ್ನು ಹೊಡೆದು ಬಡಿದು ಚಚ್ಚಿ ಬಿಸಾಕುವ ಸಾಮರ್ಥ್ಯ ಬಂದೀತೇನೋ ಎಂಬ ಮಹದಾಸೆಯಿಂದ ಹೊಸ ಪ್ರಯೋಗಕ್ಕೆ ಸಜ್ಜಾಗುತ್ತಿದ್ದರು.
ಸಿಗರೇಟು ಸೇದುವುದನ್ನು ಕಲಿತು, ಕಾರ್ಬನ್ ಫಿಲ್ಟರ್ ಇಲ್ಲದ ಗಾಡಿ ಹಾಗೆ ಹೊಗೆ ಬಿಡುವುದರಿಂದಲೇ ತಾವು ಅತಿಮಾನುಷ ಶಕ್ತಿಯನ್ನು ಹೊಂದಬಹುದು ಎನ್ನುವ ಆಸೆಯಿಂದ ಸಿಗರೇಟು ಪ್ರಯೋಗಕ್ಕೆ ಕೋರಂ ಸೇರಿತ್ತು. ಆಗಲೇ ‘ದುಃಖವನ್ನೇ ಸುಖ ಅಂದ್ಕೊಂಡರೆ ಹೇಗೆ’ ಎಂದು ಕೇಳಿ ರಿಂಕಿ ಎಲ್ಲರಲ್ಲೂ ತಬ್ಬಿಬ್ಬು ಮಾಡಿಬಿಟ್ಟಿದ್ದಳು.
ಒಂದು ನಿಮಿಷ ಎಲ್ಲರಿಗೂ ‘ಹೌದಲ್ಲಾ?’ ಎನ್ನಿಸಿತಾದರೂ ಸಂಪೂರ್ಣವಾಗಿ ಸ್ವೀಕರಿಸಲು ಮನಸ್ಸು ಒಪ್ಪಲಿಲ್ಲ. ಆದರೆ ರಿಂಕಿ ಮಾತಿಗೆ ವಿರುದ್ಧವಾಗಿ ಯಾರ ಹತ್ತಿರವೂ ವಾದದ ಬಾಣವಿನ್ನೂ ಸಾಣೆಯಾಗಿ ಚೂಪು ಹಿಡಿದಿರಲಿಲ್ಲ. ಪರ್ಯಾಯ ತರ್ಕಕ್ಕೆ ಅವಕಾಶವಿಲ್ಲದ ಕಾರಣ ಸುಮ್ಮನಾದರು.
ಕಾಶಿಯ ಪಂಡಿತ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದು ತೆನಾಲಿ ರಾಮನ ಕೈಲಿ ‘ತಿಲಕಾಷ್ಠ ಮಹಿಷ ಬಂಧನ’ದ ಸವಾಲನ್ನು ಬಿಡಿಸಲು ತಿಣುಕಾಡಿದಂತಿತ್ತು ಎಲ್ಲರ ಪರಿಸ್ಥಿತಿ. ಹೌದು ಎನ್ನುವ ಹಾಗಿಲ್ಲ. ಇಲ್ಲ ಅನ್ನಲು ಅನ್ಯ ಆಧಾರವೇ ಇಲ್ಲ. ಕಡೆಗೆ ತಿಲಕಾಷ್ಠಮಹಿಷ ಬಂಧನ ಎನ್ನುವ ಸಾಮಗ್ರಿ ಎಮ್ಮೆ ಕಟ್ಟುವ ಹಗ್ಗದಿಂದ ಎಳ್ಳಿನ ಕಡ್ಡಿಗಳನ್ನು ಕಟ್ಟಿದ್ದು ಎನ್ನುವುದು ಬಹಿರಂಗವಾದಾಗ ಅದ ನಿರಾಳತೆ ಮತ್ತು ಹಾಸ್ಯದಂತೆಯೇ ಇಂದುಮತಿ ಇದಕ್ಕೊಂದು ಮರುಸವಾಲನ್ನು ಹಾಕಿದಳು.
‘ದುಃಖವನ್ನು ಸುಖ ಅಂದ್ಕೋಬಹುದು. ಆದರೆ ಸುಖ ಯಾವುದು ದುಃಖ ಯಾವುದು ಅಂತ ಗೊತ್ತಾಗೋದು ಹೇಗೆ? ಅದು ಪರ್ಸನಲ್ ಅಲ್ವಾ?’ ಎಂದು ಈಶ್ವರಿಯ ಕಡೆ ಪ್ರತಿಕ್ರಿಯೆಗಾಗಿ ನೋಡಿದಳು. ಈಶ್ವರಿ ಮೊದಲೇ ಏನಾದರೂ ಅಡ್ವೆಂಚರ್ ಮಾಡಬೇಕು ಎನ್ನುವ ಹುಮ್ಮಸ್ಸಿನಲ್ಲಿದ್ದವಳು. ಇಂದುಮತಿ ಹೀಗೆ ಹೇಳಿದ ತಕ್ಷಣ ಅವಳೂ ಒಂದು ಪೂರಕ ವಾದ ಮುಂದಿಟ್ಟೇಬಿಟ್ಟಳು.
‘ಹೌದು. ಫಾರ್ ಎಕ್ಸಾಂಪಲ್, ಕಾಡಿನ ಮಧ್ಯೆ ಸುಖವಾಗಿ ಇರೋವ್ರಿಗೆ ಬಂಗ್ಲೇಲಿ ಇರು ಅಂತ ಬಲವಂತ ಮಾಡೋದು, ಬಂಗ್ಲೇಲಿ ಇರೋವ್ರನ್ನ ತಂದು ಕಾಡಿನ ಮಧ್ಯೆ ಇರು ಅಂತ ಹೇಳೋದು – ಎರಡೂ ಅತಿರೇಕ ಆಗುತ್ತೆ. ಈ ಎರಡೂ ಕಂಡೀಷನ್ನೂ ನಮ್ಮ ವಾದಕ್ಕೆ ಹೊಂದಲ್ಲ. ಅವ್ರಿಗೆ ಅದೇ ಸುಖ, ಇವ್ರಿಗೆ ಇದೇ ಸುಖ’ ಎಂದಳು.
ಹೀಗೇ ಸೂತ್ರವಿಲ್ಲದ ಗಾಳಿಪಟದಂತೆ ಏರುತ್ತಿದ್ದ, ಡೈವ್ ಹೊಡೆಯುತ್ತಿದ್ದ ಮಾತುಗಳನ್ನು ನಿಯಂತ್ರಿಸುವ ಆಸಕ್ತಿ ಯಾರಿಗೂ ಇರಲಿಲ್ಲ. ಸಮಯ ಕಳೆದು ಕತ್ತಲಾಗಿ ಒಂದು ಪೊದೆ ಸಿಕ್ಕರೆ ಧೂಮಲೀಲೆಯನ್ನು ಆವಾಹಿಸಿಕೊಂಡು ಜೀವನಕ್ಕೊಂದು ಹೊಸ ರೋಮಾಂಚನವನ್ನೂ, ಅರ್ಥವನ್ನೂ ಕೊಡುವುದಕ್ಕೆ ಎಲ್ಲರೂ ಉತ್ಸುಕರಾಗಿದ್ದರು.
ಸುಮಾರು ಎಂಟು ಗಂಟೆಯಾದರೂ ಪೊದೆ ಪ್ರೇಮಿಗಳ ಸಲ್ಲಾಪ ನಿಂತಿರಲಿಲ್ಲ. ಅಲ್ಲದೆ ಊಟಕ್ಕೆ ಹೊತ್ತಾಗುತ್ತಿತ್ತು. ಊಟ ಖಾಲಿಯಾದರೆ ಬರೀ ಸಿಗರೇಟಿನ ತಂಬಾಕನ್ನೇ ತಿನ್ನಬೇಕಾದೀತು ಎನ್ನುವ ಎಚ್ಚರದಲ್ಲಿ ಎಲ್ಲರೂ ಊಟ ಮುಗಿಸಿ ನಂತರ ಸಿಗರೇಟು ಪಾರಾಯಣವನ್ನು ಮುಂದುವರೆಸುವುದು ಎಂದುಕೊಂಡು ಜಾಗ ಖಾಲಿ ಮಾಡಿದರು. ಹಾಸ್ಟೆಲಿನ ಅಟೆಂಡರುಗಳಲ್ಲಿ ಆವತ್ತು ಚಂದ್ರಣ್ಣನ ಡ್ಯೂಟಿ ಇತ್ತು. ಆಜಾನುಬಾಹು ಮನುಷ್ಯ. ಆ ಮೈಗೆ ಒಪ್ಪುವಂತಿದ್ದ ಆ ಧ್ವನಿ. ನಾಟಕದಲ್ಲಿ ವೇಷ ಹಾಕಿಸಿದ್ದರೆ ದುರ್ಯೋಧನನದ್ದೇ ಹಾಕಿಸಬಹುದಿತ್ತು. ಅಂಥ ಶ್ರೀಮಂತ ಬಾಹ್ಯ ಅವನದ್ದು.
ಆದರೆ ಚಂದ್ರಣ್ಣನ ಅಂತರಂಗದಲ್ಲಿ ಯಾವಾಗಲೂ ಒಬ್ಬ ಸಿಐಡಿ ಆಫೀಸರ್ ಜಾಗೃತನಾಗಿರುತ್ತಿದ್ದ. ಹುಡುಗಿಯರು ಊಟಕ್ಕೇಂತ ಒಳಗೆ ಬರುತ್ತಾ ಏನನ್ನೋ ಅವಸರವ್ಸರದಲ್ಲಿ ಬಚ್ಚಿಟ್ಟುಕೊಂಡದ್ದು ಅವನ ಮನಸ್ಸಿನಲ್ಲಿ ದಾಖಲಾಯಿತು. ಹಾಗೇ ತೇಲುಗಣ್ಣಿನಲ್ಲಿ ಗಡ್ಡ ಕೆರೆದುಕೊಳ್ಳುತ್ತಾ ಇವರನ್ನು ‘ವಾಚ್’ ಲಿಸ್ಟಿಗೆ ಸೇರಿಸಿಕೊಂಡ. ಇನ್ನು ಇವನು ನಮ್ಮನ್ನು ಗಮನಿಸುತ್ತಾನೆ ಎನ್ನುವ ವಿಚಾರ ವಿಜಿಗೆ ಅರ್ಥವಾಯಿತು. ಹಾಗಾಗಿ ಸಿಗರೇಟಿನ ಟ್ರಯಲ್ ಅನ್ನು ಮಾರನೇ ದಿನಕ್ಕೆ ಮುಂದೂಡಲಾಯಿತು.
ಮರುದಿನ ಸಿಗರೇಟಿನ ಅತೀಸಾಮಾನ್ಯ ಸಾಹಸಕ್ಕೆ ಒಬ್ಬ ಸದಸ್ಯೆ ಕಡಿಮೆ ಆಗಲು ಕಾರಣ ರಿಂಕಿಗೆ ಹೊಸ ಹುಡುಗನೊಬ್ಬ ಪರಿಚಯ ಆಗಿದ್ದು. ವಯಸ್ಸಿನಲ್ಲಿ ರಿಂಕಿಗಿಂತ ಚಿಕ್ಕವ. ಆದರೆ ವ್ಯಕ್ತಿತ್ವದಲ್ಲಿ, ಆಲೋಚನೆಗಳಲ್ಲಿ ಊರಿಗೇ ದೊಡ್ಡಪ್ಪ. ರಿಂಕಿಗೆ ಅವನ ಜೊತೆ ಸಂಸಾರ ಮಾಡುವ ಪ್ಲಾನೇನೂ ಇಲ್ಲದ್ದರಿಂದ ಹಂಗಾಮಿ ವ್ಯವಸ್ಥೆಯಲ್ಲಿ ಅವನನ್ನು ಸೇರಿಸಿಕೊಂಡಿದ್ದಳು. ಅವನು ರಿಂಕಿಯನ್ನು ಡಿಸ್ಕೋಗೆ ಕರೆದುಕೊಂಡು ಹೋಗುವವನಿದ್ದ. ನಜರ್ ಬಾದ್ ಎನ್ನುವ ಏರಿಯಾದಲ್ಲಿ ರಾಯಲ್ ಲೆಗಸಿ ಎನ್ನುವ ಪಬ್ ಒಂದು ಡಿಸ್ಕೋ ಫ್ಲೋರ್ ಒಂದನ್ನು ನಡೆಸುತ್ತಿತ್ತು. ಸಾಮಾನ್ಯವಾಗಿ ಹೊರಗಿನಿಂದ ಬಂದ ಹುಡುಗ ಹುಡುಗಿಯರು ಇಲ್ಲಿಗೆ ಬಂದು ಸಂಜೆಯಿಂದ ರಾತ್ರಿಯವರೆಗೆ ಡಾನ್ಸ್ ಮಾಡಿ, ಸ್ವಲ್ಪ ಬಿಯರ್ ಕುಡಿದು ತಂತಮ್ಮ ಗಮ್ಯ ಸ್ಥಾನಗಳಿಗೆ ತೆರಳುತ್ತಿದ್ದರು.
ರಿಂಕಿಗೆ ಆ ಜಾಗಕ್ಕೆ ಹೋಗಬೇಕೆಂಬ ಮಹದಾಸೆ ಯಾವಾಗಲೂ ಇತ್ತು. ಆದರೆ ಅಲ್ಲೀತನಕದ ಬಾಯ್ ಫ್ರೆಂಡುಗಳೆಲ್ಲಾ ಕಾಸಿಲ್ಲದ ಕುಬೇರರಾದ್ದರಿಂದ ಅವಳ ಕನಸು ಹಾಗೇ ರೆಕ್ಕೆಗಳನ್ನು ಜೋಪಾನವಾಗಿ ಮಡಿಸಿ ಇಟ್ಟುಕೊಂಡಿತ್ತು. ಈಗ ಈ ಹುಡುಗ ಸಿಕ್ಕಿದ್ದ. ಅವನ ಹೆಸರು ‘ಯವಾರ್ ಮಲಿಕ್’ ಅಂತೇನೋ ಇತ್ತು. ಎಲ್ಲಿಯವನು ಅಂತ ಕೇಳಿದರೆ ಪ್ಯಾಲೆಸ್ತೀನಿನವನು ಅಂತ ಹೇಳಿದಳು ರಿಂಕಿ. ಅವನು ರಿಂಕಿಗೆ ಇಂಥದ್ದೇ ಬಟ್ಟೆ ತೊಡಬೇಕು ಅಂತ ತಾಕೀತು ಮಾಡಿದ್ದನಂತೆ. ಅವಳೂ ಪುಟ್ಟಾಣಿ ಡ್ರೆಸ್ಸೊಂದನ್ನು ತೊಟ್ಟು ಭರ್ಜರಿ ಮೇಕಪ್ಪು ಮಾಡಿಕೊಂಡು ಮರುದಿನ ಸಂಜೆಗೇ ತಯಾರಾಗಿದ್ದಳು. ಯವಾರ್ ಬಂದು ಅವಳನ್ನು ಕರೆದೊಯ್ಯುವಾಗ ಅಲ್ಲೆಲ್ಲ ಸುತ್ತ ಇದ್ದ ನೈಟಿ ಮಣಿಯರು ನೋಡಿದ ಪರಿಗೆ ಹುಡುಗ ಯವಾರೂ, ರಿಂಕಿಯೂ ಭಸ್ಮವಾಗಿಬಿಡಬಹುದಿತ್ತು. ನೋಟಗಳು ಅಷ್ಟು ನಿಗಿನಿಗಿ ಎಂದು ಕಾವು ಹಾಯಿಸುತ್ತಿದ್ದವು. ರಿಂಕಿಯೇನು ಅಷ್ಟಕ್ಕೆಲ್ಲ ಹೆದರುವ ಹೆಣ್ಣೇ ಅಲ್ಲ. ಸುಮ್ಮನೆ ಹೀಲ್ಡ್ ಶೂಸ್ ತೊಟ್ಟು ಹೊರಗೆ ಹೋದಳು. ಅವಳನ್ನು ಬಿಡಲು ಜೊತೆಗೆ ಹುಡುಗಿಯರೂ ಹೋದರು.
ಹೊರಗೇ ಇದ್ದು, ಹಾಸ್ಟೆಲಿನ ಒಳಕ್ಕೆ ಬರುವ ಮುನ್ನ ಪೊದೆಯಲ್ಲಿ ಸಿಗರೇಟು ಪ್ರಯೋಗವನ್ನು ಸಂಪನ್ನಗೊಳಿಸಬೇಕೆಂಬುದು ಉಳಿದವರ ಪ್ಲಾನಾಗಿತ್ತು. ಮನೋಹರನಿಗೆ ಸ್ಪೆಷಲ್ಲಾಗಿ ರಿಕ್ವೆಸ್ಟ್ ಮಾಡಿ ಊಟವನ್ನು ಎತ್ತಿಟ್ಟಿರು ಎಂದು ಕೇಳಿಕೊಳ್ಳಲಾಗಿತ್ತು. ಹಾಗಾಗಿ ಸಮಯದ ಆಭಾವ ಇರಲಿಲ್ಲ.
ಪೊದೆ ಪ್ರೇಮಿಗಳು ತಂತಮ್ಮ ಕಾರ್ಯಗಳನ್ನು ನಿರ್ವಹಿಸಿ ಹೊರಟ ನಂತರ ಇಂದುಮತಿ, ರಶ್ಮಿ, ವಿಜಿ ಮತ್ತು ಈಶ್ವರಿ ಒಬ್ಬೊಬ್ಬರೂ ಒಂದೊಂದು ಸಿಗರೇಟನ್ನು ಬಾಯಿಗಿಟ್ಟುಕೊಂಡು ಹತ್ತಿಸಲು ಕಡ್ಡಿ ಗೀರಿದರು. ಎಲ್ಲರ ಬಾಯ ಹತ್ತಿರವೂ ಕಡ್ಡಿ ಒಯ್ದರೆ ಒಂದು ಸಿಗರೇಟೂ ಹತ್ತಲಿಲ್ಲ. ಎಲ್ಲರೂ ಮಕ್ ಮಕ ನೋಡಿಕೊಂಡು ಮತ್ತೆ ಯುದ್ಧ ಸನ್ನದ್ಧರಾಗಿ ಒಬ್ಬೊಬ್ಬರೂ ಒಂದೊಂದು ಕಡ್ಡಿ ಗೀರಿಕೊಂಡು ಸಿಗರೇಟು ಹತ್ತಿಸಲು ನೋಡಿದರೆ, ಊಹೂಂ...ಮತ್ತೂ ಸಿಗರೇಟು ಹತ್ತಲಿಲ್ಲ.
‘ಲೈ ವಿಜಿ ಡೂಪ್ಲಿಕೇಟಾ ಇದು? ಹತ್ತೋದೇ ಇಲ್ಲ ಅನ್ನುತ್ತೆ?’ ಎಂದಳು ಇಂದುಮತಿ.
‘ಅಕ್ಕ... ನಾನು ಜನ್ಮದಲ್ಲಿ ಇದೇ ಮೊದಲ್ನೇ ಸಾರಿ ಸಿಗರೇಟು ಹತ್ತಿಸ್ತಾ ಇರೋದು. ಡೂಪ್ಲಿಕೇಟಾ ಒರಿಜಿನಲ್ಲಾ ನಂಗೆ ಗೊತ್ತಾಗೋದಾದ್ರೂ ಹೇಗೆ?’
‘ಥತ್! ನನ್ ಮಗಂದು. ಸಿಗರೇಟ್ ಹತ್ಸೋಕೂ ಬರಲ್ವಲ್ಲಾ ನಮಗೆ!’ ಎಂದು ರಶ್ಮಿ ಬೇಜಾರು ಮಾಡಿಕೊಂಡು ಕೂತಳು. ಈಶ್ವರಿ ಎಷ್ಟೆಂದರೂ ಸಮಯ ಪ್ರಜ್ಞೆ ಕಳೆದುಕೊಳ್ಳದ ಜಾಣೆ. ‘ಸರಿ ಬನ್ರೇ ಮತ್ತೆ. ನಾಳೆ ನೋಡಿದ್ರಾಯ್ತು. ಊಟ ಮಾಡೋಣ. ಬೆಳ್ ಬೆಳಿಗ್ಗೆ ರಿಂಕೀನಾ ಕರ್ಕೊಂಡೋಗಕ್ಕೆ ಇಲ್ಲಿಗೇ ಬರಬೇಕಲ್ವಾ? ಸುಮ್ನೆ ನಿದ್ದೇನಾದ್ರೂ ಮಾಡಿದ್ರಾಯ್ತು’ ಎಂದಳು. ಸಭೆ ಬರಖಾಸ್ತಾಗಿ ಎಲ್ಲರೂ ರೂಮಿಗೆ ಹೋಗಿ ನಿದ್ದೆ ಮಾಡಿದರು. ಐದು ಗಂಟೆಗೇ ಅಲಾರಾಂ ಇಟ್ಟುಕೊಂಡು ಎದ್ದು ಒಂದು ಕವರಿನಲ್ಲಿ ರಿಂಕಿಗೆ ಸೇರಿದ ಬಟ್ಟೆಗಳನ್ನು ತುಂಬಿಸಿಕೊಂಡು ಬಂದು ಪೊದೆಗಳ ಹತ್ತಿರ ಕಾದರು. ಕಾದು ಕಾದು ಇನ್ನೇನು ಅಲ್ಲೇ ನಿದ್ದೆ ಹೋಗಬೇಕೆನ್ನುವಾಗ ಯವಾರನ ಬೈಕ್ ರಣ ಸದ್ದು ಮಾಡುತ್ತಾ ಅವರ ಹತ್ತಿರ ಬಂದು ನಿಂತಿತು. ರಿಂಕಿಯ ಮೇಕಪ್ಪು ಮಕದಿಂದ ಇಳಿದು ಕುತ್ತಿಗೆಯಲ್ಲಿ ಕೂತಿತ್ತು. ‘ಬೈ ಬೈ’ ಹೇಳಿ ಯವಾರ್ ಹೋದ. ಇವಳೂ ಲಗುಬಗೆಯಲ್ಲಿ ಒಂದು ಉದ್ದನೆ ಗೌನ್ ಅನ್ನು ಪುಟ್ಟಾಣಿ ಡ್ರೆಸ್ಸಿನ ಮೇಲೆ ಧರಿಸಿ ಒಳಗೆ ಹೋಗಲು ತಯಾರಾದಳು.
‘ಹೆಂಗಿತ್ತೇ ನಿನ್ನೆ?’ ಇಂದುಮತಿ ಎನ್ ಕ್ವಯರಿ ಶುರು ಮಾಡಿದಳು.
‘ಸುಮ್ನೇ ಕುಣುದ್ವಿ. ಬಿಯರ್ ಕುಡುದ್ವಿ. ಮತ್ತೆ ಕುಣಿದ್ವಿ, ಮತ್ತೆ ಬಿಯರ್ ಕುಡಿದ್ವಿ. ಆಗಾಗ ಬಾತ್ರೂಮಿಗೆ ಹೋಗಿ ಬಂದೆ. ತಿಂದೆ. ಬಂದೆ’ ರಿಂಕಿ ನಿರ್ಲಿಪ್ತತೆಯಿಂದ ಹೇಳುತ್ತಿದ್ದ ಹಾಗೆ ಇಂದುಮತಿಗೆ ಇವಳ ಬೆನ್ನ ಮೇಲೆ ಗುದ್ದಿ ಬಿಡಬೇಕೆನ್ನಿಸುವಷ್ಟು ಸಿಟ್ಟು ಬಂತು. ಈ ಮಿಟುಕಲಾಡಿಯನ್ನು ಕಾಪಾಡಲಿಕ್ಕೆ ಸೂರ್ಯನಿಗಿಂತ ಮುಂಚೆ ಎದ್ದು ಕಾಯಬೇಕಾಗಿ ಬಂದದ್ದು ವಿಜಿಗೂ ಕಿರಿಕಿರಿಯಾಗಿತ್ತು. ಏನಾದ್ರೂ ಇಂಟರೆಸ್ಟಿಂಗ್ ಆಗಿ ಹೇಳ್ತಾಳೇನೋ ಅಂದ್ರೆ ಬೇಕಾಬಿಟ್ಟಿ ಮಾತಾಡುತ್ತಿದ್ದಾಳೆ ಅನ್ನಿಸಿ ರೇಗಿತು.
‘ಲೇಯ್! ನೀನೆಷ್ಟ್ ಸಾರಿ ಕುಡುದೆ. ಎಷ್ಟ್ ಸಾರಿ ಉಚ್ಚೆ ಹೊಯ್ದೆ ಅಂತ ಕೇಳಕ್ಕೆ ಕೂತಿಲ್ಲ ನಾವಿಲ್ಲಿ. ಸುಮ್ನೆ ಬೆಳ್ ಬೆಳಿಗ್ಗೆ ಉಡಾಫೆ ಮಾತಾಡ್ಬೇಡ. ಮುಚ್ಕೊಂಡು ಏನ್ ನಡೀತು ಹೇಳು’ ಎಂದಳು.
ರಿಂಕಿಗೆ ಇನ್ನು ಉಳಿಗಾಲವಿಲ್ಲವೆಂದೆನಿಸಿ ಕಥೆ ಹೇಳಿದಳು. ಯವಾರ್ ಇವಳನ್ನು ಡಿಸ್ಕಿಗೆ ಕರೆದುಕೊಂಡು ಹೋದದ್ದೇನೋ ಸರಿಯೇ. ಅದು ರಾತ್ರಿಯೆಲ್ಲಾ ಡಾನ್ಸ್ ಮಾಡುವ ಓವರ್ ನೈಟ್ ಡಿಸ್ಕ್ ಎಂದು ನಂಬಿದ್ದ. ಹಾಗಂತ ಸ್ವಲ್ಪ ಸ್ವಲ್ಪವೇ ಬಿಯರ್ ಕುಡಿದರು. ಡ್ಯಾನ್ಸೂ ಮಾಡಿದರು. ಆದರೆ ಅದೇನಾಯಿತೋ ಆ ಡಿಸ್ಕಿನ ಓನರ್ರುಗಳು ಬೆಳಗಿನ ಜಾವ ಎರಡು ಗಂಟೆಗೆ ‘ನೋ ಮರ್ಸಿ’ ಬ್ಯಾಂಡ್ ಹುಡುಗರು ಹಾಡಿರುವ ‘ವೇರ್ ಡೂ ಯು ಗೋ! ಮೈ ಲವ್ಲೀ! ಐ ವಾನ್ನ ನೋ!...’ ಎಂಬ ಹಾಡನ್ನ ಹಾಕಿ ಡಿಸ್ಕನ್ನು ಕ್ಲೋಸ್ ಮಾಡಿಬಿಟ್ಟರು.
ಅಷ್ಟು ಹೊತ್ತಿನಲ್ಲಿ ರಿಂಕಿ ಹಾಸ್ಟೆಲಿಗೆ ಬರುವಂತಿಲ್ಲ... ಯವಾರ್ ತನ್ನ ಮನೆಗೆ ಹೋಗುವಂತಿಲ್ಲ. ಶ್ರೀರಂಗಪಟ್ಟಣದ ರಸ್ತೆಯಲ್ಲಿ ಯಾವುದೋ ಧಾಬಾದಲ್ಲಿ ಕೂತು ಕೆಟ್ಟ ಟೀ ಕುಡಿದು ಬೆಳಗು ಮಾಡಿ ಹಾಸ್ಟೆಲಿಗೆ ಬಂದಿದ್ದಳು ರಿಂಕಿ,
‘ಹೆದರಿಕೆ ಆಗಲಿಲ್ವೇನೇ?’ ಕೇಳಿದಳು ವಿಜಿ.
‘ಅದಕ್ಯಾಕೆ ಹೆದರಿಕೆ?’
‘ಅವನೇನಾದ್ರೂ ಮಾಡಿದ್ರೆ ನಿನ್ನ?’
‘ಏನ್ ಮಾಡ್ತಿದ್ದ? ಲೋಕಲ್ಸ್ ನೋಡಿ ಹೆದರಿ ಸಾಯ್ತಿದ್ದ. ಬೆಬೆಬೆಬೆ ಅಂತಿದ್ದ’
‘ಮಾತ್ ಬರಲ್ವಾ ಅವ್ನಿಗೆ?’
‘ಏನೋಪ್ಪಾ... ಅದೇನ್ ಹೇಳ್ತಾನೋ ಅರ್ಥವೇ ಅಗಲ್ಲ’ ಎಂದು ರಿಂಕಿ ಹೇಳಿದ ತಕ್ಷಣ ಇಂದುಮತಿ ಅವಳ ಮೇಲೆ ಎಗರಿ ಬಿದ್ದಳು.
‘ಅಲ್ಲಾ ಭೋಸುಡಿ. ಅವ್ನ್ ಮಾತಾಡೋ ಭಾಷೆ ಅರ್ಥ ಆಗಲ್ಲಾಂತಿ. ಮತ್ತೆ ಅವ್ನು ನಿನ್ನ ಡಿಸ್ಕಿಗೆ ಕರ್ಕೊಂಡೋಗ್ತೀನಿ, ವಾಪಸ್ ಬರೋಕೆ ಇಷ್ಟೊತ್ತಾಗುತ್ತೆ ಅಂತೆಲ್ಲಾ ಯಾವ್ ಭಾಷೇಲಿ ಹೇಳಿದ?’
‘ಅವ್ನ್ ಹೇಳಿಲ್ಲ. ಅದೆಲ್ಲಾ ನಾನೇ ಪ್ಲಾನ್ ಮಾಡಿದ್ದು. ಅವ್ನು ನಾನ್ ಹೇಳ್ದಂಗೆ ಕೇಳ್ದ ಅಷ್ಟೇ!’
ಇಂದುಮತ್ತೆ ಗಕ್ಕನೆ ನಿಂತು ಉಳಿದವರಿಗೆ ಹೇಳಿದಳು. ‘ಇವ್ಳು ಕಡಿಮೆ ಹರಾಮಿ ಇಲ್ಲಾ ಕಣ್ರೇ! ಊರಿಗೇ ಹಂಚಬೋದು ಇವ್ಳ್ ಬುದ್ಧೀನಾ. ಲೈ ರಿಂಕಿ, ಎಲ್ಲಾ ನಿನಗೇ ಗೊತ್ತಿದ್ರೆ ಮತ್ತೆ ಅವನ್ಯಾಕೆ ಕರ್ಕೊಂಡು ಹೋದೆ?’
‘ಅದು ಬಾರ್ಟರ್ ಸಿಸ್ಟಮ್ಮು. ನನ್ ಹತ್ರ ಬೈಕು, ದುಡ್ಡು ಇರ್ಲಿಲ್ಲ. ಅವ್ನ್ ಹತ್ರ ಇತ್ತು’ ಎಂದು ಉತ್ತರಿಸಿ ರಿಂಕಿ ಧಪ ಧಪ ಹೆಜ್ಜೆ ಇಡುತ್ತಾ ಮುಂದೆ ಹೋಗುತ್ತಿರಲು ಹಾಸ್ಟೆಲಿನಿಂದ ಚಂದ್ರಣ್ಣ ಹೊರಗೆ ಬಂದ. ಇವಳನ್ನು ನೋಡಿ ‘ಕಾ ಗಯೆ ತೆ?’ (ಎಲ್ಲಿಗೆ ಹೋಗಿದ್ದೆ?) ಎಂದು ಹರುಕು ಹಿಂದಿಯಲ್ಲಿ ಕೇಳಲಾಗಿ ಅವಳು ‘ಜಾಗಿಂಗ್’ ಎಂದಷ್ಟೇ ಉತ್ತರಿಸಿ ಒಳಗೆ ಹೋದಳು. ಹಿಂದಿನಿಂದ ಬರುತ್ತಿದ್ದ ಹುಡುಗಿಯರಲ್ಲಿ ವಿಜಿಯನ್ನು ಚಂದ್ರಣ್ಣ ಸೈಡಿಗೆ ಕರೆದ.
‘ಏನ್ ಕತೆ ನಿಮ್ದು?’
‘ಏನಿಲ್ಲ ಚಂದ್ರಣ್ಣ. ವಾಕ್ ಹೋಗಿದ್ವಿ’
‘ಸುಳ್ಳು ಹೇಳೋವಾಗ ಎದುರಿಗೆ ಯಾರಿದಾರೆ ಅಂತಲಾದ್ರೂ ನೋಡ್ಬೇಕು. ಆಯಮ್ಮ ಮೇಕಪ್ ಮಾಡ್ಕಂದು ಜಾಗಿಂಗ್ ಹೋಗಿತ್ತಾ?’ ಎಂದ.
‘ಹಹಹ! ಸಾರಿ ಚಂದ್ರಣ್ಣ. ಈ ಹೊರಗಿನಿಂದ ಬರೋ ಹುಡ್ಗೀರಿಗೆ ನಾವೇನ್ ಹೇಳೋಕಾಗತ್ತೆ... ಅವ್ಳು ನನ್ ಫ್ರೆಂಡ್ ಚಂದ್ರಣ್ಣಾ... ಆದ್ರೆ ನಾನು ಅಂಥಾ ಕೆಲಸ ಎಲ್ಲಾ ಮಾಡಲ್ಲ’ ಎಂದು ವಿಜಿ ಅಂತರಂಗ-ಬಹಿರಂಗ ಶುದ್ಧಿಯನ್ನು ಚಂದ್ರಣ್ಣನಿಗೆ ಹೇಳಿದಳು. ಅವನು ಕಿರುನಗೆ ನಕ್ಕು ಮುಂದಕ್ಕೆ ಹೋಗಿ, ಏನೋ ನೆನಪಿಸಿಕೊಂಡು ಅವಳನ್ನು ಮತ್ತೆ ಕರೆದ. ‘ಅಂದಂಗೆ ಸಿಗ್ರೇಟು ಅಚ್ಕಳಕೂ ಊದುಬತ್ತಿ ಅಚ್ಚಕ್ಕೂ ಯತ್ವಾಸ ಅದೆ. ಬಾಯಗೆ ಸಿಗ್ರೇಟ ಇಟ್ಕಂದು, ಕಡ್ಡಿ ಕೆರ್ದು ಅತ್ರ ತಂದಾಗ ಉಸರ ಒಳಕ್ಕೆ ಎಳ್ಕಬೇಕು. ಅಂದ್ರೆ ಮಾತ್ರ ಅತ್ತ್ ತದೆ. ಗೊತ್ತಾತಾ?’ ಎಂದ. ವಿಜಿಯ ಬಾಯಿ ವಿಶ್ವದರ್ಶನ ಮಾಡಿಸುವಷ್ಟು ಅಗಲವಾಗಿ ತೆರೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.