ವಾಸಕ್ಕೆಂದು ಮೊದಲ ಬಾರಿ ಮೈಸೂರಿಗೆ ಬಂದವರಿಗೆ ಕಾಣುವುದು ಅರಮನೆಯಲ್ಲ, ಅಥವಾ ಕೆಆರ್‌ಎಸ್ ಕೂಡ ಅಲ್ಲ. ಅವೆರಡರ ಜೊತೆ ಮೈಸೂರಿನ ಇನ್ನೂ ಹತ್ತು ಹಲವಾರು ಅದ್ಭುತಗಳು ಮನಸ್ಸನ್ನು ಸೂರೆಗೊಳ್ಳುವುದು ಸ್ವಲ್ಪ ಸಮಯದ ನಂತರವೇ.
ಮೈಸೂರು ಬರೀ ಊರಲ್ಲ. ಪಂಚೇಂದ್ರಿಯಗಳ ಮೂಲಕ ಅನುಭವಕ್ಕೆ ಬರುವ ಒಂದು ಮನಃಸ್ಥಿತಿ. ವಿಶಾಲ ರಸ್ತೆಗಳು, ರಸ್ತೆಯ ಮೇಲೆ ಚಾಚಿಕೊಂಡು ಬಿಳಿಲುಗಳನ್ನು ತೂಗುಬಿಟ್ಟಿರುವ ಆಲದ ಮರಗಳು, ಕುಕ್ಕರಹಳ್ಳಿ ಕೆರೆಯ ದಂಡೆಯ ಮೇಲೆ ವಿಹಾರ ಹೋಗುತ್ತಿರುವ ನಿಧಾನ ನಡಿಗೆಯ ಆರೋಗ್ಯವಂತರು, ಧಸ-ಭಸ ಎಂದು ಒಂದೇ ದಿನಕ್ಕೆ ಕೂಡಿದ ಕೊಬ್ಬೆಲ್ಲವನ್ನೂ ಕರಗಿಸಲು ಓಡುತ್ತಿರುವಂತೆ ಕಾಣುವ ಹೊಟ್ಟೆಯೇ ಮೂಲಧಾತುವಾದ ಜನಗಳು, ಆಮೆ ನಡಿಗೆಯಲ್ಲಿ ಸಾಗುವ ಸೈಕಲ್ಲು-ಲೂನಾ-ಬೈಕು-ಕಾರುಗಳು, ಕ್ಲೀನಾದ ಕಸದ ತೊಟ್ಟಿಗಳು, ನಸು ನಗುವಿನ ನೆರೆ-ಹೊರೆ, ದೇವಸ್ಥಾನಗಳು ಮತ್ತು ರಸ್ತೆಯ ಇಕ್ಕೆಲದಲ್ಲಿ ಸೀಸನ್ನಿಗೆ ತಕ್ಕಂತೆ ಮಾರಾಟಕ್ಕೆ ಕೂತ ಹಣ್ಣುಗಳು, ಕಿಲ-ಕಿಲ ನಗುವಿನ ಸ್ನಿಗ್ಧ ಸೌಂದರ್ಯದ ಹೆಣ್ಣುಮಕ್ಕಳು ಇತ್ಯಾದಿ, ಇತ್ಯಾದಿ.
ವಿಜಿಗೆ ಹಾಸ್ಟೆಲ್ ವಾಸ ಹೊಸತು. ಆದರೆ ತಾನೇ ಕಾಡಿ ಪಡೆದುಕೊಂಡ ಭಾಗ್ಯ. ಹುಟ್ಟಿ-ಬೆಳೆದ ಊರಾದ ದಾವಣಗೆರೆ ತನ್ನ ಆಪ್ತತೆಯಿಂದ ಉಸಿರುಗಟ್ಟಿಸುವಂತಾಗಿತ್ತು. ಹದಿವಯಸ್ಸಿನ ಯಾವ ಮನುಷ್ಯನಾದರೂ ಹೊಸ ಅನುಭವಕ್ಕೆ, ಸವಾಲುಗಳಿಗೆ ಒಡ್ಡಿಕೊಳ್ಳಲು ಹಾತೊರೆವ ವಯಸ್ಸಿನಲ್ಲಿ ವಿಜಿ ಮೈಸೂರಿಗೆ ಬಂದಿದ್ದಳು.
ರಂಗಾಯಣ ಶುರುವಾಗಿ ಆಗ ಕೆಲವು ವರ್ಷಗಳು ಮಾತ್ರವೇ ಆಗಿದ್ದಿರಬೇಕು. ಊರಿನೆಲ್ಲೆಡೆ ರಂಗಾಯಣದ ಪ್ರದರ್ಶನಗಳು ನಡೆಯುತ್ತಿದ್ದವು. ಕಾರಂತರೂ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಪ್ರದರ್ಶನದ ನಂತರ ಮಾತಿಗೆ ಕೆಲವೊಮ್ಮೆ ನಿಂತರೆ ಅವರ ಓಘ ಎಂಥವರನ್ನೂ ದಂಗುಬಡಿಸುವಂತಿತ್ತು. ಆದರೆ, ಇನ್ನು ಕೆಲವು ಸಲ ಬಲವಂತಕ್ಕೆ ಮಾತನಾಡುವಾಗ ಕಾರಂತರು ಯಾಕಾದರೂ ವೇದಿಕೆಗೆ ಬಂದರೋ ಎನ್ನುವಂತೆ ಮಾತನಾಡಿ ಅಲ್ಲಿದ್ದವರನ್ನು ಮುಜುಗರಕ್ಕೆ ಈಡು ಮಾಡಿಬಿಡುತ್ತಿದ್ದರು. ಹಾಸ್ಟೆಲ್ಲಿನ ಬಹುತೇಕ ಹುಡುಗಿಯರು ಯಾಕೋ ನಾಟಕಗಳ ಬಗ್ಗೆ ಹೆಚ್ಚು ಒಲವಿಲ್ಲದವರಾಗಿದ್ದರು. ಕಾರಂತರ ಆಯಸ್ಕಾಂತ-ಭರಿತ ವ್ಯಕ್ತಿತ್ವಕ್ಕೆ, ರಂಗಜಂಗಮ ಎನ್ನುವ ಅವರ ಬಿರುದಿಗೆ ಮಾರು ಹೋಗದ ಮೈಸೂರಿನ ಕೆಲವು ಭಾಗಗಳು ವಿಜಿಗೆ ಪೌಷ್ಟಿಕಾಂಶದ ಕೊರತೆಯುಳ್ಳ ಮಗುವಿನ ಹಾಗೆ ನಿಸ್ತೇಜವಾಗಿ ಕಾಣುತ್ತಿದ್ದವು.
ನಾಟಕ ಪ್ರದರ್ಶನಕ್ಕೆ ಹೋಗಲು ಮನಸ್ಸು ಹಾತೊರೆಯುತ್ತಿದ್ದರೂ ಕೆಲವೊಮ್ಮೆ ನಾಟಕ ಮುಗಿದ ಮೇಲೆ ಸಂಜೆ ವಾಪಾಸ್ಸು ಬರುವುದು ಒಂದು ದೊಡ್ಡ ಸಮಸ್ಯೆಯಾಗುತ್ತಿತ್ತು. ಮಾನಸಗಂಗೋತ್ರಿಗೆ ಬರಲು ಆಟೊಗಳು ಒಪ್ಪುತ್ತಿರಲಿಲ್ಲ. ಬೀದಿದೀಪಗಳಿಂದ ಕಂಗೊಳಿಸುತ್ತಿದ್ದರೂ ನಿರ್ಜನವಾದ ಅಗಲ ರಸ್ತೆಗಳು, ನೆಲದಲ್ಲೇ ಛತ್ರಿಯಂತೆ ಹರಡಿಕೊಂಡು ಬುಡದಲ್ಲಿ ಕತ್ತಲಿನ ಮರಿಗಳನ್ನು ಹಾಕಿಕೊಂಡಿದ್ದ ಮರಗಳು, ಸುಯ್ಯೋ ಎನ್ನುವ ಗಾಳಿ ಎಲ್ಲವೂ ಒಂದು ರೀತಿಯ ಭಯ ಮಿಶ್ರಿತ ಅನಾಥಪ್ರಜ್ಞೆಯನ್ನು ಗಟ್ಟಿ ಮಾಡುತ್ತಿದ್ದವು.
ಸಮಾಧಾನಕ್ಕಾದರೂ ನಾಟಕಗಳ ಬಗ್ಗೆ ಚರ್ಚೆ ಮಾಡೋಣವೆಂದರೆ ಕನ್ನಡದ ಗಂಧಗಾಳಿಯೂ ಇಲ್ಲದ ರೂಮ್ ಮೇಟ್ಸ್. ಬೆಳಗಾದರೆ ಬಿಸಿ ನೀರು ಖಾಲಿಯಾಗುವುದರ ಮೊದಲೇ ಸ್ನಾನ ಹೇಗೆ ಮುಗಿಸುವುದು, ನೀರು ನಿಲ್ಲುವ ಮೊದಲು ಬಟ್ಟೆ ಹೇಗೆ ತೊಳೆದುಕೊಳ್ಳುವುದು, ಹಾಸ್ಟೆಲ್ಲಿನಲ್ಲಿ ಬರುವ ನೀರಿನ ಗುಣಕ್ಕೆ ಯಾವ ಸೋಪು ಉತ್ತಮ, ಅದರಲ್ಲಿ ಬಟ್ಟೆ ಹೇಗೆ ತೊಳೆಯಬೇಕು, ಎಷ್ಟು ಹೊತ್ತಿನಲ್ಲಿ ಬಟ್ಟೆ ತೊಳೆಯುವ ಕಾರ್ಯಕ್ರಮ ಇಟ್ಟುಕೊಂಡರೆ ಜನ ಕಮ್ಮಿ ಇರುತ್ತಾರೆ, ತೊಳೆದಾದ ಮೇಲೆ ಬಟ್ಟೆ ಒಣಗಲು ಹಾಕುವ ಪ್ರಶಸ್ತ ಜಾಗವನ್ನು ಮೊದಲೇ ಬುಕ್ ಮಾಡಿಟ್ಟುಕೊಳ್ಳುವುದು ಹೇಗೆ ಇತ್ಯಾದಿಗಳ ಪಾಠಗಳು ಸಾದ್ಯಂತವಾಗಿ ಆಗಿದ್ದವು. ಅವರ ಜೊತೆ ಕಾಂಪಿಟೇಶನ್ನಿಗೆ ನಿಂತಿಲ್ಲ ಎನ್ನುವುದು ಖಾತ್ರಿಯಾಗಿ, ಅವರ ಚಿಕ್ಕ-ಪುಟ್ಟ ಕ್ಲೀನಿಂಗ್ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿಕೊಟ್ಟರೆ ಸೀನಿಯರ್‌ಗಳೆಲ್ಲ ಬಹಳ ಹೃದಯವಂತ ಹುಡುಗಿಯರೇ.
ಸೇರಿಕೊಂಡಿದ್ದ ಎಂಎ ಸಾಹಿತ್ಯದ ಕೋರ್ಸಿನ ಏಕತಾನತೆಯನ್ನೂ, ಒಂದು ರೀತಿಯ ವ್ಯಗ್ರತೆಯಿಂದ ಕೂಡಿದ ಹಾಸ್ಟೆಲ್ಲಿನ ಜಂಜಾಟದ ವಾತಾವರಣವನ್ನೂ, ಮೈಸೂರಿನ ವೈಶಾಲ್ಯವನ್ನೂ, ಹಿರಿಮೆಯನ್ನೂ ತೂಗಿಸಲು ಪ್ರಯತ್ನ ಪಡುತ್ತಿದ್ದ ಹಲವರಿಗೆ ಕೆಲವೊಮ್ಮೆ ಊರು ಮೈ ನಡುಗಿಸಿಬಿಡುತ್ತಿತ್ತು. ಒಂದು ಬೆಳಿಗ್ಗೆ ಅಕಸ್ಮಾತ್ತಾಗಿ ನ್ಯೂಸ್ ಪೇಪರ್ ಒಳ್ಳೆಯ ಕಂಡೀಷನ್ನಿನಲ್ಲಿ ವಿಜಿಯ ಕೈಗೆ ಸಿಕ್ಕುಬಿಟ್ಟಿತು. ‘ನಗರದಲ್ಲಿ ಇಂದು’ ಕಾಲಮ್ಮಿನಲ್ಲಿ ನಾಟಕ ಪ್ರದರ್ಶನದ ವಿವರಗಳಿದ್ದವು. ಕಾರಂತರ ‘ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕ ಅವತ್ತೇ ಸಂಜೆ ಇತ್ತು.
ವಿಜಿಯ ಮನಸ್ಸು ಮಳೆಗಾಲದ ನವಿಲಿನಂತಾಗಿ ಸಾವಿರ ಕಣ್ಣುಗಳನ್ನು ಬೆಳೆಸಿಕೊಂಡು ಕುಣಿಯಿತು. ಸಾಯಂಕಾಲದ ನಾಟಕವೂ, ಅದರಲ್ಲಿನ ರಂಗ ಸಜ್ಜಿಕೆಯೂ, ನಟರ ಹಾವ-ಭಾವ-ನಡಿಗೆಯೂ, ಲೈಟಿಂಗಿನ ಚಮತ್ಕಾರವೂ ಕಣ್ಣ ಮುಂದೆ ಊಹಾ ಸ್ವರೂಪದಲ್ಲಿ ಹಾದು ಹೋಯಿತು. ತನ್ನ ರೂಮ್‌ಮೇಟ್ ರಶ್ಮಿಯ ಕೈ ಕಾಲು ಕಟ್ಟಿದಳು. ರಶ್ಮಿಯೋ ಕನ್ನಡಿಗಳಾದರೂ ಕನ್ನಡ ಬಾರದವಳು. ಅವಳ ತಂದೆ ಆರ್ಮಿಯಲ್ಲಿದ್ದ ಕಾರಣ ಹುಟ್ಟಿದ್ದು ಬೆಂಗಳೂರಿನಲ್ಲಾದರೂ ಭಾರತದಾದ್ಯಂತ ಬೆಳೆದವಳು. ಕನ್ನಡ ಅವಳಿಗೆ ಆಡು ಮಾತು. ತಂದೆ-ತಾಯಿಯ ಹತ್ತಿರವೂ ಹಿಂದಿ ಮಾತನಾಡುತ್ತಿದ್ದ ರಶ್ಮಿ ನಾಟಕ ನೋಡಲು ಬರುವುದು ಸಾಧ್ಯವೇ ಇರಲಿಲ್ಲ. ಆದರೆ ವಿಜಿ ಬಿಡಬೇಕಲ್ಲ. ತನ್ನ ಪ್ರಾಣವನ್ನೇ ಬೇಕಾದರೆ ಒತ್ತೆಯಿಡುತ್ತೇನೆಂದೂ, ರಶ್ಮಿ ನಾಟಕ ನೋಡಲು ಬಂದರೆ ತಾನು ಏನು ಬೇಕಾದರೂ ಮಾಡಲು ಸಿದ್ಧವೆಂದೂ ಗೋಗರೆದಳು. ಅಲ್ಲದೆ ನಾಟಕ ನಡೆಯುವ ಜಾಗ ತುಂಬಾ ದೂರವೇನೂ ಇಲ್ಲ. ಉಚಿತ ಪ್ರದರ್ಶನವಾದ್ದರಿಂದ ಟಿಕೇಟಿನ ಖರ್ಚೂ ಇಲ್ಲ.
ಪ್ಲೀಸು-ಪ್ಲೀಸುಗಳ ಸರಮಾಲೆಯನ್ನೇ ರಶ್ಮಿಯ ಕೊರಳಿಗೆ ಹಾಕಿದಳು. ರಶ್ಮಿ ಜಾಣೆ. ವಿಜಿಗೆ ಸಾಧಾರಣ ಎನ್ನುವ ಮಟ್ಟಿಗೆ ಅಡುಗೆ ಮಾಡಲು ಬರುತ್ತದೆ ಎನ್ನುವುದು ಅವಳಿಗೆ ಗೊತ್ತಿತ್ತು. ‘ಸರಿ ಹಂಗಾದ್ರೆ. ಈವನಿಂಗ್ ಬಂದ್ ಮೇಲೆ ನಂಗೆ ಎಗ್ ಬುರ್ಜಿ ಮಾಡ್ಕೊಡ್ಬೇಕು’ ಎಂದು ಷರತ್ತು ವಿಧಿಸಿದಳು. ವಿಜಿಗೆ ಸ್ವರ್ಗ ರೂಮಿನ ಹೊರಗೇ ನಿಂತಷ್ಟು ಖುಷಿ ಆಯಿತು. ಹೇಗೂ ಯಾವ ಖರ್ಚೂ ಇಲ್ಲ. ಎಗ್ ಬುರ್ಜಿ ಏನು ನಾಟಕಕ್ಕೆ ಬರಲು ರಶ್ಮಿ ಒಪ್ಪಿದ್ದಕ್ಕೆ ಹಬ್ಬದಡುಗೆ ಬೇಕಾದರೂ ಮಾಡಲು ತಯಾರಿದ್ದಳೇನೋ! ಆದರೆ, ಹಾಸ್ಟೆಲ್ಲಿನಲ್ಲಿ ಸ್ಟೌವ್ ಇಟ್ಟುಕೊಳ್ಳುವಂತಿಲ್ಲ ಎಂಬ ನಿಯಮ ಚಾಲ್ತಿಯಲ್ಲಿ ಇತ್ತಾದರೂ ಅದನ್ನು ಯಾರೂ ಪಾಲಿಸುತ್ತಿರಲಿಲ್ಲ.
ಯಾಕೆಂದರೆ ಹಾಸ್ಟೆಲ್ಲಿನ ಊಟದ ಕಾಂಟ್ರಾಕ್ಟು ವಹಿಸಿಕೊಳ್ಳಲು ಇನ್ನೂ ಯಾವ ಅಡುಗೆಯವರೂ ಬಂದಿರಲಿಲ್ಲ. ಹಾಗಾಗಿ ರಾತ್ರಿಯ ಊಟಕ್ಕಾದರೂ ರೂಮುಗಳಲ್ಲಿ ಮ್ಯಾಗಿ ಕುದಿಸುವ ಅನಿವಾರ್ಯತೆ ಇತ್ತು. ಏಳು ಗಂಟೆಯಾದರೆ ಸಾಕು, ಎಲ್ಲ ರೂಮುಗಳಿಂದ ವಿಧವಿಧದ ಪರಿಮಳ ಹೊಮ್ಮುತ್ತಿತ್ತು. ರಶ್ಮಿಯ ಷರತ್ತಿಗೆ ವಿಜಿ ಒಪ್ಪಿದಳು. ಬ್ರೆಡ್ಡು, ಮೊಟ್ಟೆ, ಈರುಳ್ಳಿ, ಮೆಣಸಿನಕಾಯಿ, ಸತ್ತಂತೆ ಕಾಣುತ್ತಿದ್ದ ಕೊತ್ತಂಬರಿ ಸೊಪ್ಪು -ಎಲ್ಲವನ್ನೂ ಕ್ಲಾಸು ಮುಗಿಸಿ ಬರುವಾಗಲೇ ಮಾನಸ ಗಂಗೋತ್ರಿಗೂ-ಜೇಸಿ ಎಂಜಿನಿಯರಿಂಗ್ ಕಾಲೇಜಿಗೂ ಸಂಪರ್ಕ ಸೇತುವೆಯಂತಿದ್ದ ರಸ್ತೆಯ ಪಕ್ಕದಲ್ಲೇ ಇದ್ದ ಡೌನ್ ಟೌನಿಗೆ ಹೋಗಿ ತಂದಿಟ್ಟುಕೊಂಡರು.
ಸಂಜೆಗೆ ತಯಾರಾಗಿ ನಾಟಕ ನೋಡಲು ಹಾಸ್ಟೆಲ್ಲಿನ ಹತ್ತಿರದ ಸ್ಪೋರ್ಟ್ಸ್ ವಿಲೇಜಿಗೆ ನಡೆದು ಹೋದರು. ಸಂಜೆ ಐದು ಗಂಟೆಗೆ ಹೋಗುವಾಗಲೇ ಜನ ಸಂದಣಿ ಕಡಿಮೆಯಾಗುತ್ತಿತ್ತು. ಇನ್ನು ಬರುವಾಗ ಎಂಟು ಗಂಟೆ. ವಿಜಿ ನಾಟಕದಲ್ಲಿ ತೇಲುತ್ತಾ ಹೆಜ್ಜೆ ಹಾಕುತ್ತಿದ್ದರೆ, ರಶ್ಮಿಗೆ ಎಗ್ ಬುರ್ಜಿಯ ಕನಸಿನಿಂದ ಕಾಲುಗಳಲ್ಲಿ ಕಸುವು ಬಂದಿತ್ತು. ಇಬ್ಬರೂ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದರು. ಬೀದಿ ದೀಪದ ಬೆಳಕಿನಲ್ಲಿ ಅಸ್ಪಷ್ಟ ಆಕೃತಿಯೊಂದು ಕತ್ತಲನ್ನೇ ಹೊದ್ದು ಮೆಲ್ಲಗೆ ಚಲಿಸುತ್ತಿದ್ದಂತೆ ಕಾಣುತ್ತಿತ್ತು.
ಕಣ್ಣು ಕ್ಷೀಣ ಬೆಳಕಿಗೆ ಹೊಂದಿಕೊಳ್ಳುವುದಕ್ಕೂ, ಆ ಆಕೃತಿ ಇನ್ನೊಂದು ಬೀದಿ ದೀಪದ ಕೆಳಗೆ ಬರುವುದಕ್ಕೂ ಸರಿ ಹೋಯಿತು. ಸ್ವಲ್ಪ ದಪ್ಪವಿದ್ದ ಮನುಷ್ಯ ಕಷ್ಟ ಪಟ್ಟುಕೊಂಡು ಆಗಾಗ ಕಿರ್ರೋ ಎನ್ನುತ್ತಿದ್ದ ಸೈಕಲ್ಲನ್ನು ತುಳಿದುಕೊಂಡು ಮುಂದಕ್ಕೆ ಹೊರಟಿದ್ದ. ಮಧ್ಯವಯಸ್ಕನಿರಬಹುದು. ವಯಸ್ಸಿಗೆ ಸಾಕ್ಷಿಯಾಗಿ ಕೂದಲಿಲ್ಲದ ತಲೆ ಬೆಳಕು ಪ್ರತಿಫಲಿಸುತ್ತಾ ಮಂದವಾಗಿ ಹೊಳೆಯುತ್ತಿತ್ತು. ಅವನನ್ನು ಕಂಡದ್ದೇ ಜೀವ ಬಂದಂತಾಯಿತು. ಯಾವುದೋ ಡೆಪಾರ್ಟ್ಮೆಂಟಿನ ಸಹಾಯಕನಿರಬೇಕು. ನಾವೂ ಇಲ್ಲಿಯ ಸ್ಟೂಡೆಂಟ್ಸೇ. ಸಾಮಾನ್ಯವಾಗಿ ಮೈಸೂರಿನಲ್ಲಿ ಯಾರೂ ಕೆಟ್ಟದಾಗಿ ನಡೆದುಕೊಂಡ ಅನುಭವವಿಲ್ಲದ ಕಾರಣ ವಿಜಿ ರಶ್ಮಿಗೆ ಹೇಳಿದಳು.
‘ನೋಡೆ, ಹಾಸ್ಟೆಲ್ ಸೇರೋಕೆ ಇನ್ನೂ ಹದಿನೈದು ನಿಮಿಷ ಇದೆ. ಜನ ಬೇರೆ ಇಲ್ಲ. ಅಲ್ಲಿ ಹೋಗ್ತಾ ಇರೋವ್ರ್ನನ್ನ ಸ್ವಲ್ಪ ನಮ್ಮ ಜೊತೆ ನಡಿಯೋಕೆ ಕೇಳೋಣಾ? ಯೂನಿವರ್ಸಿಟಿ ಕೆಲಸಗಾರರು ಅಂತ ಕಾಣ್ಸುತ್ತೆ. ನಂ ಜೊತೆ ನಡೆದ್ರೆ ನಮಗೂ ಧೈರ್ಯ ಇರುತ್ತೆ’ ಎಂದು ವಿಜಿ ಸಲಹೆ ಕೊಟ್ಟಳು. ಅವಳಿಗೋ, ನಂಬಿಕೆಗೂ-ಅಪನಂಬಿಕೆಗೂ ಅಂಥಾ ವ್ಯತ್ಯಾಸವೇನೂ ಇರಲಿಲ್ಲ. ಜಗತ್ತು ನೇರ-ಸರಳ. ಯೂನಿವರ್ಸಿಟಿಯವರು ಜವಾಬ್ದಾರಿಯುಳ್ಳವರು. ತಮ್ಮ ವಿದ್ಯಾರ್ಥಿಗಳನ್ನು ಕಾಪಾಡುತ್ತಾರೆ ಎನ್ನುವ ಕುರುಡು ನಂಬಿಕೆ.
ಆದರೆ ದೇಶದ ಯಾವ್ಯಾವುದೋ ಊರಿನಲ್ಲಿ ಬೆಳೆದು ಎಪ್ಪತ್ತೇಳು ಕೆರೆ ನೀರು ಕುಡಿದ ರಶ್ಮಿ ಜೀವನದ ಅತೀ ಅಪನಂಬಿಕೆಯ ಕ್ಷಣಗಳನ್ನು ಅನುಭವಿಸಿದವಳು. ‘ಲೇಯ್, ಆ ಮನಶಾ ಯಾಕೆ ನಿನ್ನ ಪ್ರೊಟೆಕ್ಟ್ ಮಾಡ್ತಾನೆ? ಅವನ್ಯಾರೋ ಏನೋ? ಕ್ಯಾಂಪಸ್ಸಲ್ಲಿ ಸೈಕಲ್ ಹೊಡೀತಿದಾನೆ ಅಂದ್ರೆ ಇಲ್ಲಿನವನೇ ಅಂತ ಹೇಗೆ ಹೇಳ್ತೀಯ? ಸುಮ್ಮನೆ ಬೇಗ ಬೇಗ ನಡಿ. ಹೊಟ್ಟೆ ಹಸೀತಾ ಇದೆ’ ಎಂದಳು.
ತನ್ನ ಮಾತುಗಳಿಗೆ ತರ್ಕ ಇರಲಿಲ್ಲವಾದ್ದರಿಂದಲೂ, ರಶ್ಮಿಯ ಮಾತುಗಳಲ್ಲಿ ತರ್ಕ ಇದ್ದದ್ದರಿಂದಲೂ ವಿಜಿ ಸುಮ್ಮನಾದಳು. ಆದರೂ, ಅಕಸ್ಮಾತ್ ಸೈಕಲ್ ಆಸಾಮಿಯ ಹತ್ತಿರ ಹೋದರೆ ಸಹಾಯ ಕೇಳುವುದೆಂದೇ ಗಟ್ಟಿ ಮಾಡಿಕೊಂಡಿದ್ದಳು. ಇವರೇ ಬೇಗ ಬೇಗ ನಡೆದರೋ ಅಥವಾ ಸೈಕಲ್ ಹೊಡೆಯುತ್ತಿದ್ದವನಿಗೇ ಮೈಯ್ಯಲ್ಲಿ ಕಸುವಿರಲಿಲ್ಲವೋ ಕತ್ತಲಲ್ಲಿ ಸೈಕಲ್ಲಿನ ಕೀಂಯಾ-ಕೀಂಯಾ ಎಂಬ ಸದ್ದು ಹತ್ತಿರಾಗತೊಡಗಿತು.
ಹತ್ತಿರದಿಂದ ನೋಡಿದರೆ ಮನುಷ್ಯ ಡೊಳ್ಳು ಹೊಟ್ಟೆಯ ಠೊಣಪ. ಕೈಲಾಗದೇ ಬುಸ್-ಬುಸ್ ಎಂದು ಸೈಕಲ್ ತುಳಿಯುತ್ತಿದ್ದ. ವಿಜಿ ಇನ್ನೇನು ಬಾಯಿ ಬಿಟ್ಟು ಅವನನ್ನು ಕೇಳಬೇಕು ಅಂದುಕೊಳ್ಳುವಷ್ಟರಲ್ಲಿ ಅವನೇ ಬಾಯಿ ಬಿಟ್ಟ.
‘ಓಯ್... ಏನ್ರೇ ಕತ್ಲಲ್ಲಿ ಹೋಗ್ತಿದೀರಾ? ದಂಧೆಗಾ?’ ಎಂದ. ವಿಜಿ, ರಶ್ಮಿ ಇಬ್ಬರಿಗೂ ಅವನೇನು ಹೇಳಿದ ಎಂದು ಅರ್ಥವಾಗಲಿಲ್ಲ. ದಂಧೆ ಎನ್ನುವ ಪದ ವಿಜಿಗೆ ಗೊತ್ತಿತ್ತಾದರೂ ಆ ಪದ ಲಿಂಗ ಸೂಕ್ಷ್ಮತೆಯುಳ್ಳದ್ದು; ಕತ್ತಲಾದ ನಂತರ ಅದಕ್ಕೆ ಬೇರೆ ಆಯಾಮವುಂಟು ಎಂದು ತಿಳಿದಿರಲಿಲ್ಲ. ಆದರೆ ಅವನು ಕೇಳಿದ ದನಿಯಿಂದಾಗಿ ಇಬ್ಬರ ಜೀವವೂ ಅಲ್ಲಾಡಿ ಹೋಯಿತು. ಮಾತೇ ಹೊರಡಲಿಲ್ಲ.
‘ಯಾಕ್ರೇ, ಮಾತಾಡಾಕಿಲ್ವಾ?’ ಇಬ್ಬರು ಹುಡುಗಿಯರೂ ಕೈ-ಕೈ ಗಟ್ಟಿಯಾಗಿ ಹಿಡಿದುಕೊಂಡು ಧಡ-ಭಡ ಹೆಜ್ಜೆ ಹಾಕತೊಡಗಿದರು. ಸೈಕಲ್ ಆಸಾಮಿಯೂ ಹಿಂದೆಯೇ ಬಂದ. ‘ನೀವು ಇಬ್ರಿದೀರಾ... ನಾನೂ ನಂ ಫ್ರೆಂಡೂ ಇದೀವಿ. ಇಲ್ಲೇ ಇದಾನಂವ. ಬತ್ತೀರಾ? ಹೇಳ್ರೇ!’ ಎಂದು ಕೂಗುತ್ತಲೇ ಹಿಂಬಾಲಿಸಲು ಶುರು ಮಾಡಿದ. ಆ ಫ್ರೆಂಡೂ ಅಲ್ಲೆಲ್ಲೂ ಇದ್ದು ಇವನ ಧ್ವನಿ ಕೇಳಿ ಬಂದು ಇವನ ಜೊತೆ ಸೇರಿಕೊಂಡುಬಿಟ್ಟರೆ ತಮ್ಮ ಜೀವನ ಇಲ್ಲೇ ಮುಗಿಯುತ್ತದೆಂದೆನಿಸಿ ಇಬ್ಬರು ಹುಡುಗಿಯರೂ ಜೀವ ಕೈಯಲ್ಲಿ ಹಿಡಿದುಕೊಂಡು ಓಡಲು ಶುರು ಮಾಡಿದರು.
ಬತ್ತೀರಾ ಎಂದು ಕೇಳಿದವನಿಗೆ ಒಂದು ಥ್ಯಾಂಕ್ಸ್ ಹೇಳಬೇಕಿತ್ತು. ಹದಿನೈದು ನಿಮಿಷದ ದಾರಿ ಐದೇ ನಿಮಿಷದಲ್ಲಿ ಮುಗೀತು. ಹಿಂದೆ ತಿರುಗಿಯೂ ನೋಡದೆ ಹಾಸ್ಟೆಲ್ ಸೇರಿ ಸೀದಾ ರೂಮಿಗೆ ಹೋದರು. ಇಬ್ಬರೂ ಅಸಾಧ್ಯ ಬೆವತಿದ್ದರು. ಮರು ಮಾತಾಡದೇ ಬಟ್ಟೆ ಬದಲಾಯಿಸಿ ಎಗ್ ಬುರ್ಜಿ ತಯಾರಿಯಲ್ಲಿ ತೊಡಗಿದರು. ಸಣ್ಣ ತವಾ ಒಲೆಯ ಮೇಲಿಟ್ಟು ಈರುಳ್ಳಿ-ಹಸಿ ಮೆಣಸಿನಕಾಯಿ ಹಾಕುತ್ತಿದ್ದಂತೆ ಪಂಚೇಂದ್ರಿಯಗಳು ಅಂಧಕಾರದಿಂದ ಅರಿವಿನತ್ತ ಹೊರಟವು. ರೂಮಿನಲ್ಲೆಲ್ಲ ಒಗ್ಗರಣೆಯ ಸುವಾಸನೆ ಹರಡಿತು.
ಮೊಟ್ಟೆ ಒಡೆದು ಹಾಕಿದ ತಕ್ಷಣ ಪಂಚೇಂದ್ರಿಯಗಳು ನಿಮಿಷಗಳ ಹಿಂದೆ ಆದ ಘಟನೆಯನ್ನು ಸಾಸಿವೆ ಕಾಳಿನಷ್ಟೂ ನೆನಪಿಟ್ಟುಕೊಳ್ಳದೆ ಹೊಸ ಹುಡುಗಿಯನ್ನು ಹುಡುಕುವ ಕ್ಯಾಸನೋವಾನಂತೆ, ಋಣಪಾತಕರಾಗಿ ಜೊಲ್ಲು ಸುರಿಸಲು ಪ್ರಾರಂಭಿಸಿದವು. ಅಕ್ಕ-ಪಕ್ಕದ ರೂಮಿಗೂ ಸುವಾಸನೆ ಪ್ರಯಾಣಿಸಿ ಇಲ್ಲಿನ ಪಂಚಭಕ್ಷ್ಯ-ಪರಮಾನ್ನದ ವಾರ್ತೆ ಕೊಟ್ಟಿತೆಂದು ಕಾಣುತ್ತದೆ. ರೂಮಿನ ಬಾಗಿಲು ‘ಟಕ್ ಟಕ್’ ಎಂದು ಸದ್ದು ಮಾಡಿತು. ಇಬ್ಬರಿಗೂ ತಕ್ಷಣ ಎಲ್ಲಿ ‘ಬತ್ತೀರಾ’ ಎಂದವ ತಮ್ಮನ್ನು ಹುಡುಕಿಕೊಂಡು ಇಲ್ಲಿಯ ತನಕವೂ ಬಂದನೋ ಎಂದು ಸಣ್ಣ ನಡುಕ. ಹೆದರುತ್ತಲೇ ಬಾಗಿಲು ತೆರೆದರೆ ಪಕ್ಕದ ರೂಮಿನ ಮಂಡ್ಯದ ಹುಡುಗಿ ನಿಂತಿದ್ದಳು.
‘ಮೊಟ್ಟೆ ಇಕ್ಕಿದೀರಾ?’ ಎಂದು ಕೇಳಿದಳು. ನಾಟಕ-ವಾಸ್ತವಗಳ ನಡುವೆ ತೇಲುತ್ತಿದ್ದ ವಿಜಿಗೆ ಮನುಷ್ಯರು ಮೊಟ್ಟೆ ಇಕ್ಕುವ ದೃಶ್ಯ ಮನಸ್ಸಿನಲ್ಲಿ ಮೂಡಿ ಅಗಾಧವಾದ ಸಾಧ್ಯತೆಗಳನ್ನು ಹೊರಚೆಲ್ಲಿತು. ಅರೆ! ಕೋಳಿ ಮೊದಲೋ ಮೊಟ್ಟೆ ಮೊದಲೋ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟಿತಲ್ಲ, ಇನ್ನು ಮುಂದೆ ಮನುಕುಲ ಈ ಪ್ರಶ್ನೆಯನ್ನು ಬಿಟ್ಟು ಮುಂದೆ ಸಾಗಬಹುದಲ್ಲ ಎಂದೆಲ್ಲ ಆಲೋಚನೆಗಳು ಚಿತ್ರಗಳಾಗಿ ಹೊಮ್ಮುತ್ತಿದ್ದವು.
ಎಲ್ಲವೂ ಮುರಿದದ್ದು ರಶ್ಮಿ ನಕ್ಕಾಗಲೇ ‘ಅಯ್ಯ ನಾವೆಂಗ್ ಮೊಟ್ಟೆ ಇಡಕ್ಕಾಗುತ್ತೆ?’ ಎಂದು ಗಹಗಹಿಸಿ ನಗಲಾರಂಭಿಸಿದಳು. ಮಂಡ್ಯದ ಹುಡುಗಿ ಸೌಭಾಗ್ಯ ಕೂಡ ತನ್ನ ಮಾತಿಗೆ ತಾನೇ ನಕ್ಕು ಸುಸ್ತಾದಳು. ಆಮೇಲೆ ತನ್ನ ರೂಮ್ ಮೇಟ್ ದೀಪಾಳಿಗೆ ಹುಷಾರಿಲ್ಲವೆಂತಲೂ, ಆಕೆ ಮಾತ್ರೆ ಸೇವಿಸಬೇಕಿದೆಯೆಂದೂ, ಹಣ್ಣು ಖಾಲಿಯಾದ ಪ್ರಯುಕ್ತ ಮೊಟ್ಟೆ ಬೇಯಿಸಿ ತಿನ್ನಿಸಲು ಸೂಕ್ತವೆಂದೂ, ರೂಮಿನಿಂದ ಮೊಟ್ಟೆ ವಾಸನೆ ಬಂದಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿ, ಹೆಚ್ಚುವರಿ ಮೊಟ್ಟೆ ಇದ್ದರೆ ಕೊಡಿ ಎಂದು ಕೋರಿಕೆಯನ್ನು ಮುಂದಿಟ್ಟಳು. ಕೋಳಿಯಾಗದೆ ಮೊಟ್ಟೆ ಇಟ್ಟವರು ಸೌಭಾಗ್ಯಳಿಗೆ ಮೊಟ್ಟೆ ಕೊಟ್ಟು ಹೊಟ್ಟೆ ತುಂಬಾ ಬ್ರೆಡ್ಡು ಬುರ್ಜಿ ಬಾರಿಸಿ ನಿದ್ದೆ ಬರುವ ತನಕ ನಗುತ್ತಲೇ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.