ADVERTISEMENT

‘ಯುದ್ಧ ಅವನದ್ದು; ಎದುರಾಳಿಯೂ ಅವನೇ!’

ಪ್ರೀತಿ ನಾಗರಾಜ
Published 3 ಫೆಬ್ರುವರಿ 2016, 19:51 IST
Last Updated 3 ಫೆಬ್ರುವರಿ 2016, 19:51 IST

ಯವಾರ್ ಮಲಿಕನ ಜೊತೆ ಓವರ್ ನೈಟ್ ಡಿಸ್ಕೋಗೆ ಹೋಗಿ ಬೆಳಗಿನ ಜಾವ ಹಾಸ್ಟೆಲಿಗೆ ಬಂದ ರಿಂಕಿ ಒಂದಿಷ್ಟು ದಿನ ಸೈಲೆಂಟಾಗಿಬಿಟ್ಟಳು. ಯಾಕೆ ಅಂತ ಕೇಳಿದರೆ ಹಾಂ ಹೂಂ ಯಾವುದೂ ಇಲ್ಲ. ಯವಾರನೇನಾದರೂ ಅವಳಿಗೆ ಬೇಡವಾದ ರೀತಿಯಲ್ಲಿ ನಡೆದುಕೊಂಡನಾ ಎಂದು ಕೇಳಿದರೆ ಬಹಳ ಅನ್ಯಮನಸ್ಕತೆಯಿಂದ ಉತ್ತರ ನೀಡುತ್ತಿದ್ದಳು.

ಈಶ್ವರಿ ಮಾತ್ರ ಖಿನ್ನತೆಯಲ್ಲಿ ಮುಳುಗಿದ ರಿಂಕಿಯನ್ನು ನೋಡಲಾಗದೆ ಅವಳ ಯೋಗಕ್ಷೇಮವನ್ನು ತಪ್ಪದೇ ಕೇಳಿ ತಿಳಿದುಕೊಳ್ಳುತ್ತಿದ್ದಳು. ರಿಂಕಿಯೂ ಸರಿಯೇ. ಈಶ್ವರಿಗೆ ಮಾತ್ರ ತನ್ನ ಸಂಕಟ ಅರ್ಥವಾಗುವುದೇನೋ ಎನ್ನುವ ಹಾಗೆ ಅವಳೊಬ್ಬಳ ಪ್ರಶ್ನೆಗೆ ಮಾತ್ರ ಸೂಕ್ತ ಉತ್ತರ ಕೊಡುತ್ತಿದ್ದಳು.

ತಾನು ಆ ಪ್ಯಾಲಸ್ತೇನಿನ ಹುಡುಗನೊಡನೆ ಓವರ್ ನೈಟ್ ಡಿಸ್ಕೋಗೆ ಹೋಗಿದ್ದು, ನಟ್ಟಿರುಳು ಹೊರಬಿದ್ದಿದ್ದೂ ಅಥವಾ ಬಲವಂತವಾಗಿ ಹೊರದೂಡಲ್ಪಟ್ಟಿದ್ದೂ, ಮತ್ತೆ ಅಲ್ಲಿಂದ ಶ್ರೀರಂಗಪಟ್ಟಣ ರಸ್ತೆಯ ಯಾವುದೋ ಧಾಬಾದಲ್ಲಿ ಕೂತು ಬೆಳಕು ಮೂಡಿದ ಮೇಲೆ ಹಾಸ್ಟೆಲಿಗೆ ವಾಪಸ್ಸು ಬಂದು ಅಟೆಂಡರ್ ಚಂದ್ರಣ್ಣನ ಕೈಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದ ಕಳ್ಳನಂತಾದರೂ ಎಷ್ಟೆಷ್ಟೂ ಮನಸ್ಸು ಹುಳ್ಳಗೆ ಮಾಡಿಕೊಳ್ಳದೆ ಹೀಗೆ ಬದುಕುವುದು ತನ್ನ ಹಕ್ಕು ಎಂದು ಪ್ರತಿಪಾದಿಸುವಂತೆ ಇದ್ದವಳು ರಿಂಕಿ. ಹಾಗೆ ಇದ್ದ ಹುಡುಗಿಗೆ ಇದ್ದಕ್ಕಿದ್ದ ಹಾಗೆ ಮೌನ ರುಚಿಸುತ್ತದೆ ಎಂದರೆ ಅನುಮಾನ ಬರುವ ವಿಷಯವೇ ಸರಿ. ಉಳಿದವರೂ ಅವಳನ್ನು ಹೋಗಲಿ ಬಿಡು ಎಂದು ಬಿಡುವಂತಿರಲಿಲ್ಲ. ಆಗಾಗ ಕೇಳುತ್ತಲೇ ಇದ್ದರು. ಅವಳೂ ಉಡಾಫೆ ಉತ್ತರ ಕೊಡುತ್ತಲೇ ಇದ್ದಳು.

ರಿಂಕಿಗೆ ರಾಜೀವ ಎಂಬ ಹೆಸರಿನ ತಮ್ಮನೊಬ್ಬನಿದ್ದ. ಅವನೂ ಮೈಸೂರಿನಲ್ಲೇ ಓದುತ್ತಿದ್ದ. ಚಂದದ ಹುಡುಗ. ರಿಂಕಿ ಅವನನ್ನು ‘ಟೆಡ್ಡಿ’ ಅಂತ ಕರೆಯುತ್ತಿದ್ದಳು. ಅವನ ಅಕ್ಕನ ಚಾಳಿಗಳೆಲ್ಲವೂ ಅವನನ್ನು ಬಾಧಿಸುತ್ತಿದ್ದವೋ ಇಲ್ಲವೋ ತಿಳಿಯದು. ಏಕೆಂದರೆ ಹಾಸ್ಟೆಲಿಗೆ ಬಂದಾಗಲೆಲ್ಲ ಅವಳು ಸಿಕ್ಕರೂ, ಸಿಗದಿದ್ದರೂ ಆರಾಮಾಗೇ ಹೊರಟುಬಿಡುತ್ತಿದ್ದ. ರಿಂಕಿಯ ಉಳಿದ ಸ್ನೇಹಿತೆಯರನ್ನು ದೀದಿ ದೀದಿ ಎಂದು ಕರೆಯುತ್ತ ಆತ್ಮೀಯತೆ ಬೆಳೆಸಿಕೊಂಡಿದ್ದ. ತೀರಾ ಮನಸ್ಸು ವ್ಯಗ್ರಗೊಂಡಿದ್ದರೆ ವಿಜಿ ಹತ್ತಿರವೋ ಇಲ್ಲಾ ರಶ್ಮಿಯ ಹತ್ತಿರವೋ ಮಾತನಾಡಿ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದ. ಕನ್ನಡದ ಹುಡುಗಿಯೊಂದು ಅವನೊಂದಿಗೆ ಬಹಳ ಸ್ನೇಹದಿಂದಿದ್ದ ಕಾರಣ, ಲೋಕಲ್ ಹುಡುಗರ ಜೊತೆ ತೀವ್ರ ತಿಕ್ಕಾಟ ನಡೆದಿತ್ತು. ಅಂಥಾ ಜಗಳಗಳು ಅತಿರೇಕಕ್ಕೆ ಹೋದಾಗ ಬಂದು ತನ್ನ ಅಕ್ಕನನ್ನೋ, ಅಥವಾ ಅವಳ ಸ್ನೇಹಿತೆಯರನ್ನೋ ಮಾತನಾಡಿಸಿ ಸಮಾಧಾನ ಕಂಡುಕೊಳ್ಳುತ್ತಿದ್ದ.

ರಶ್ಮಿ ಮತ್ತು ವಿಜಿಗೆ ಕೂಡ ಈ ತಮ್ಮನ ಮೇಲೆ ಅದೇಕೋ ವಿಶೇಷ ಮಮತೆ ಬೆಳೆದಿತ್ತು. ಅವ ‘ದೀದಿ’ ಎಂದು ಕರೆದರೆ ಯಾಕೋ ಬಹಳ ‘ಅಕ್ಕತ್ತ್ವ’ ಉಕ್ಕಿ ಹರಿಯುತ್ತಿತ್ತು. ಅವನೂ ರಿಂಕಿಯಂತೆಯೇ ಚಿಕ್ಕಂದಿನಿಂದಲೂ ಹಾಸ್ಟೆಲಿನಲ್ಲೇ ಬೆಳೆದವನಾದರೂ ತನ್ನ ಮುಂದಿರುವ ದಿಕ್ಕು ದೆಸೆಗಳ ಬಗ್ಗೆ ಸ್ವಲ್ಪವಾದರೂ ಜ್ಞಾನ ಇಟ್ಟುಕೊಂಡಿದ್ದ. ಹಾಗಾಗೇ ಅವನು ಬಂದರೆ ರಿಂಕಿ ಇರಲಿ, ಇಲ್ಲದಿರಲಿ– ರಶ್ಮಿ ವಿಜಿ ಮಾತ್ರ ಅವನನ್ನು ಕೂರಿಸಿಕೊಂಡು ಸ್ವಲ್ಪ ಸಮಯ ಮಾತನಾಡಿಸಿ ಅವನ ಯೋಗಕ್ಷೇಮ ವಿಚಾರಿಸಿಯೇ ಕಳಿಸುತ್ತಿದ್ದರು. ಪುಡಿ ತಿಂಡಿಗಳೇನಾದರೂ ಇದ್ದರೆ ಹಂಚಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಅವನು ಬರುತ್ತಿದ್ದುದು ಸಂಜೆಯಾದ್ದರಿಂದ ಆ ಹೊತ್ತಿಗೆ ಚಹಾ ಸರ್ವೀಸ್ ನಡೆದಿದ್ದರೆ ಅವನಿಗೂ ಕಳ್ಳತನದಲ್ಲಿ ಒಂದು ಲೋಟ ಚಹಾ ತಂದುಕೊಟ್ಟು ಸಂತೋಷಪಡುತ್ತಿದ್ದರು.

ಅದ್ಯಾಕೆ ಟೆಡ್ಡಿ ಉಳಿದವರ ಹೃದಯವನ್ನೂ ತಟ್ಟಿದ ಎನ್ನುವುದಕ್ಕೆ ಕಾರಣಗಳು ನಿರ್ದಿಷ್ಟವಾಗಿರಲಿಕ್ಕಿಲ್ಲ. ಕೆಲವು ಬಂಧಗಳು ಹೀಗೇ. ಕಷ್ಟದಲ್ಲಿ – ಸುಖದಲ್ಲಿ, ಅತಿ ಮುಖ್ಯವಾಗಿ ನಮ್ಮ ಆಳವಾದ ಭಾವುಕ ಘಳಿಗೆಗಳಲ್ಲಿ ಹೆಚ್ಚು ಪ್ರಶ್ನೆಗಳನ್ನು ಕೇಳದೆ, ಹತ್ತಿರದಿಂದ ಒದಗಿಬಂದವರು ಅದ್ಯಾಕೋ ಬಹಳ ಅಪ್ಯಾಯಮಾನರಾಗುತ್ತಾರೆ. ಪ್ರಶ್ನೆ ಕೇಳದೆ ನಮ್ಮನ್ನು ಅರ್ಥಮಾಡಿಕೊಳ್ಳಬಲ್ಲವರು ಅಂತಲೋ ಅಥವಾ ಅವರು ಕೇಳುವ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರ ಇಲ್ಲ ಅನ್ನುವ ಕಾರಣಕ್ಕೋ – ಒಟ್ಟಾರೆ ಬಹಳ ಪ್ರಶ್ನಾರ್ಥಕ ಚಿನ್ಹೆ ಹುಟ್ಟಿಸದ ಸಂಬಂಧಗಳು ಹೆಚ್ಚು ಆಪ್ತ. ಅವು ಸಾಮಾನ್ಯವಾಗಿ ಭೌತಿಕತೆಯನ್ನು, ಭೌಗೋಳಿಕ ಮಿತಿಗಳನ್ನು ಮೀರಿ ಬೆಳೆಯುತ್ತವೆ.

ಇದೇ ಕಾರಣಕ್ಕೇ ಕೆಲವು ಸಂಬಂಧಗಳು ದಿನಂಪ್ರತಿ ನವೀಕರಿಸುತ್ತಿದ್ದರೂ ಹಳಸಲಾಗುವುದಿಲ್ಲ. ಅಥವಾ ವರ್ಷಗಳ ನಂತರ ಆ ಒಬ್ಬ ಸ್ನೇಹಿತ/ಸ್ನೇಹಿತೆ ಹತ್ತಿರ ಮಾತನಾಡಿದರೂ ಯಾವ ಬಗೆಯ ಕೊಸರು ಅಥವಾ ಮುನಿಸೂ ಇಲ್ಲದಂತೆ ಮಾತುಗಳು ಸಾಗಿ ಬಿಡುತ್ತವೆ. ಇನ್ನು ಕೆಲವು ಸಂಬಂಧಗಳು ಪ್ರತೀ ದಿನ ಒಟ್ಟಿಗೇ ಬದುಕುತ್ತಿದ್ದರೂ ಸತ್ತು ಹೋಗಿರುತ್ತವೆ. ಹೆಣ ಇಟ್ಟುಕೊಂಡು ಅಳುವ ಜನರೂ ಅವಕ್ಕೆ ದಕ್ಕುವುದಿಲ್ಲ.

ಉಳಿದ ಹುಡುಗಿಯರು ರಿಂಕಿಯ ಅನ್ಯಮನಸ್ಕತೆಗೆ ಕಾರಣ ಹುಡುಕುವ ಧಾವಂತದಲ್ಲಿರುವಾಗ ಒಂದು ಬೆಳಿಗ್ಗೆ ಟೆಡ್ಡಿ ಹಾಸ್ಟೆಲಿನ ಹತ್ತಿರ ಸುಳಿದಾಡುತ್ತಿದ್ದ ಎನ್ನುವ ಸಂದೇಶವನ್ನು ಇಂದುಮತಿ ಹುಡುಗಿಯರಿಗೆ ಮುಟ್ಟಿಸಿದಳು. ಇವಳು ಕ್ಲಾಸ್ ಮಧ್ಯದಲ್ಲೇ ಯಾವ ಕಾರಣಕ್ಕೋ ಹಾಸ್ಟೆಲಿಗೆ ವಾಪಸ್ಸು ಬರುತ್ತಿರುವಾಗ ಟೆಡ್ಡಿ ಅಲ್ಲೆಲ್ಲೋ ಮೆಟ್ಟಿಲ ಮೇಲೆ ಕೂತು ಬಹಳ ಗಾಢ ಆಲೋಚನೆಯಲ್ಲಿದ್ದನಂತೆ. ಧಸ ಭಸ ಬರುತ್ತಿದ್ದ ಇವಳನ್ನು ಕಂಡನೋ ಕಾಣಲಿಲ್ಲವೋ ಅದೂ ಗೊತ್ತಾಗಲಿಲ್ಲ ಎಂದಳು ಇಂದುಮತಿ. ಈ ವಿಚಾರ ಹೇಳುವ ಹೊತ್ತಿಗೆ ಇಂದುವಿಗೆ ಟೆಡ್ಡಿ ಇದೇ ಸ್ಥಿತಿಯಲ್ಲಿ ಒಂದೇ ವಾರದಲ್ಲಿ ಮೂರು ಬಾರಿ ಕಂಡಿದ್ದ.

‘ಹಾಸ್ಟೆಲಿಗೆ ಬಂದು ಮಾತಾಡಿಸಲೂ ಇಲ್ಲ ಅನ್ಸುತ್ತೆ. ಸಾಯಂಕಾಲನೂ ಬರಲಿಲ್ಲ ಅವನು, ಅಲ್ವಾ? ಯಾರನ್ನೂ ಭೇಟಿ ಮಾಡೋಕೆ ಬರ್ತಿಲ್ಲ. ಸುಮ್ಮನೆ ಇಲ್ಲಿ ಬಂದು ಕೂತ್ಕೋತಾನೆ’ ಎಂದಳು ಇಂದುಮತಿ.

‘ಅವ್ನ್ ಬಂದು ಕೂತ್ಕೊಳ್ಳೋದು ಹಾಗಿರ್ಲಿ. ನೀನ್ಯಾಕೆ ಕ್ಲಾಸ್ ಬಿಟ್ಟು ದಿನಾ ವಾಪಸ್ ಬರ್ತಿದೀಯಾ?’ ವಿಜಿ ಪಾಟೀಸವಾಲು ಹಾಕಿದರೆ ಇಂದುಮತಿಗೆ ಉರಿದುಹೋಯಿತು.

‘ನಮ್ಮಪ್ಪ ಕಟ್ಟಿರೋ ದುಡ್ ಹಾಳ್ಮಾಡಕ್ಕೆ ಬರ್ತೀನಿ. ನಿಂಗ್ಯಾಕೆ ಅವೆಲ್ಲಾ?!’ ಎಂದು ಎಗರಿ ಬೀಳಲು, ವಿಜಿಯೂ ಬಡಪೆಟ್ಟಿಗೆ ಬಗ್ಗದೇ ‘ರಿಂಕಿನೇ ಅವ್ಳ್ ತಮ್ಮನ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಓಡಾಡ್ತಾ ಇದಾಳೆ. ನಿಂಗ್ಯಾಕೆ ಅವನ ಮೇಲೆ ಕಣ್ಣಿಡೋ ಜವಾಬ್ದಾರಿ? ಮುಚ್ಕೊಂಡು ನಿನ್ ಕೆಲ್ಸ ನೀನ್ ನೋಡು’

ಇಂದುಮತಿ ಮೆತ್ತಗಾದಳು. ‘ಗೊತ್ತು ಗುರಿ ಇಲ್ಲದ ಊರು ಕಣೇ. ಭಾಷೆ ಅರ್ಥವಾಗಲ್ಲ. ಅಕ್ಕ ನೋಡಿದ್ರೆ ಊರ್ ತಿರುಕಿ. ಅವನಿಗೆ ಸಪೋರ್ಟ್ ಬೇಕೇನೋ! ಅದಕ್ಕೆ ನಿಮ್ಮೆಲ್ಲರನ್ನೂ ಮಾತಾಡಿಸ್ತಾನೆ ಅಷ್ಟು ವಿಶ್ವಾಸದಿಂದ’ ಎಂದು ವಿಜಿಗೆ ವಿವರಿಸಿದಳು. ವಿಜಿಗೂ ವಿಷಯದ ಬಗ್ಗೆ ಸ್ವಲ್ಪ ಕ್ಲಾರಿಟಿ ಬಂದ ಹಾಗಾಯ್ತು. ಟೆಡ್ಡಿ ಮತ್ತೆ ಹಾಸ್ಟೆಲಿನ ಕಡೆ ಬಂದಾಗ ಅವನನ್ನು ಕಾಡುತ್ತಿರುವ ವಿಷಯ ಏನೆಂದು ಸರಿಯಾಗಿ ಕೇಳಬೇಕು ಎಂದುಕೊಂಡಳು.

ಮಾರನೇ ದಿನವೇ ಟೆಡ್ಡಿ ಬೆಳ್ಳ್ಂಬೆಳಿಗ್ಗೆ ಹಾಸ್ಟೆಲಿಗೆ ಬಂದ. ರಿಂಕಿ ತನ್ನ ತಮ್ಮನನ್ನು ಮಾತಾಡಿಸುತ್ತಿರುವಾಗ ವಿಜಿ ಹೊರಗೆ ಬಂದು ಇಬ್ಬರನ್ನೂ ದೂರದಿಂದಲೇ ನೋಡಿದಳು. ಇಬ್ಬರೂ ಬಹಳ ಡಿಸ್ಟರ್ಬ್ ಆದಂತಿತ್ತು. ರಿಂಕಿಯ ಅನ್ಯಮನಸ್ಕತೆಗೆ ಕಾರಣ ಟೆಡ್ಡಿ ಅಥವಾ ಅವನಿಗೆ ಸಂಬಂಧಪಟ್ಟ ಘಟನೆಯೇ ಇರಬಹುದು ಅಂತ ಖಾತ್ರಿಯಾಯಿತು. ಆ ಸಂಜೆ ಟೆಡ್ಡಿ ಮತ್ತೆ ಹಾಸ್ಟೆಲಿಗೆ ಅಕ್ಕನನ್ನು ಹುಡುಕಿಕೊಂಡು ಬಂದ. ರಿಂಕಿ ಇರಲಿಲ್ಲವಾಗಿ ವಿಜಿಯೇ ಟೆಡ್ಡಿಯನ್ನು ಭೇಟಿಯಾದಳು. ಅವನ್ಯಾಕೋ ಮುಖ ಕೊಟ್ಟು ಮಾತಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ‘ಅಕ್ಕ ಇಲ್ಲಾಂದ್ರೆ ಪರವಾಗಿಲ್ಲ. ಮತ್ತೆ ಬರ್ತೀನಿ ದೀದಿ’ ಎಂದು ಅವಸರವಸರವಾಗಿ ಕಳಚಿಕೊಳ್ಳಲು ನೋಡಿದ. ಆದರೆ ವಿಜಿ ಬಿಟ್ಟಾಳೆಯೇ?
‘ಯಾಕೋ ನನ್ ಹತ್ರ್ ಮಾತಾಡ್ತಾ ಇಲ್ಲ ನೀನು?’
‘ಹಾಗೇನೂ ಇಲ್ಲ ದೀದಿ!’
‘ಮತ್ತೆ ಕಾಲಿಗೆ ಚಕ್ರ ಕಟ್ಟಿಕೊಂಡೇ ಬಂದೀ?’
‘ಹಾಗೇನಿಲ್ಲ. ಅಕ್ಕನ ಹತ್ತಿರವೇ ಕೆಲಸ ಇತ್ತು. ಅಪ್ಪ ಏನೋ ಹೇಳಿಕಳಿಸಿದ್ರು’
‘ಆಯ್ತು. ಅಕ್ಕನ ಹತ್ತಿರ ಇರೋ ಕೆಲಸವನ್ನ ಅವಳ ಹತ್ತಿರವೇ ಹೇಳು. ನಾನು ನಿನ್ನ ವಿಚಾರಿಸದೇ ಕಳಿಸಲ್ಲ. ಹೇಳು. ಓದು ಬರಹ, ಲವ್ವು ಎಲ್ಲಾ ಹೇಗೆ ನಡೆದಿದೆ?’
‘ಹೆಹೆಹೆಹೆಹೆ. ಎಲ್ಲಾ ಚೆನ್ನಾಗಿದೆ ದೀದಿ’
‘ಗರ್ಲ್ ಫ್ರೆಂಡ್‌ ಹತ್ತಿರ ಜಗಳ ಆಡಿದೆಯಾ?’
‘ಇಲ್ವಲ್ಲ?’
‘ಮತ್ತೇನಾಗಿದೆ ನಿಂಗೆ? ಯಾಕೆ ಇಲ್ಲೆಲ್ಲೋ ಬಂದು ಅಬ್ಬೇಪಾರಿ ಥರಾ ಕೂತಿರ್ತೀಯಾ??’
‘ನಾನಿಲ್ಲಿ ಕೂತಿರ್ತೀನಿ ಅಂತ ಯಾರು ಹೇಳಿದ್ರು ನಿಂಗೆ?’ ದಂಗಾಗಿ ಕೇಳಿದ.
‘ನೋಡಿದ ಬಹಳ ಜನ ಇದಾರೆ. ವಿಷಯಕ್ಕೆ ಬಾ’
ತಲೆ ತಗ್ಗಿಸಿ ಕೂತ. ಸ್ವಲ್ಪ ಹೊತ್ತಿನಲ್ಲೇ ಧಾರಾಕಾರವಾಗಿ ಕಣ್ಣಲ್ಲಿ ನೀರು ಸುರಿಯತೊಡಗಿತು. ಎಲ್ಲಿ ಭರ್ಜರಿ ದನಿ ತೆಗೆದು ಸ್ವಾತಿ ಮುತ್ಯಂ ಸಿನಿಮಾದಲ್ಲಿ ಕಮಲಹಾಸನ್ ಅಳುವ ಥರ ಅತ್ತು ಜನರ ಗಮನವನ್ನೆಲ್ಲ ತನ್ನ ಮೇಲೆ ತಂದುಕೊಳ್ಳುತ್ತಾನೋ ಅಂತ ವಿಜಿಗೆ ಗಾಬರಿಯಾಯಿತು.
‘ಯಾಕೋ? ಏನಾಯ್ತೋ? ಹೆದರಬೇಡ್ವೋ. ನಾವೆಲ್ಲಾ ಇದೀವಿ!’. ಉಹೂಂ. ಅಳು ನಿಲ್ಲಲಿಲ್ಲ. ಬದಲಾಗಿ ಇನ್ನೂ ಜೋರಾಗುತ್ತಲೇ ಹೋಯಿತು.

‘ಪ್ಲೀಸ್ ಕಣೋ ಟೆಡ್ಡಿ. ಏನಾಯ್ತು ಅಂತ ಹೇಳದೆ ಈ ಥರಾ ಅಳ್ತಾ ಇದೀಯಲ್ಲ? ನನ್ನ ಪರಿಸ್ಥಿತಿ ಬಗ್ಗೆನೂ ಸ್ವಲ್ಪ ಯೋಚಿಸು. ನೋಡಿದವರು ಹುಡುಗಿನೇ ಹುಡುಗನಿಗೆ ತೊಂದರೆ ಕೊಡ್ತಾ ಇದಾಳೆ ಅಂದ್ಕೊಳಲ್ವಾ?’

‘ಸಾರಿ ದೀದಿ. ವಿಷಯ ಬಹಳ ಕಾಂಪ್ಲಿಕೇಟೆಡ್ ಆಗಿದೆ’

ಟೆಡ್ಡಿಯ ಹಾಸ್ಟೆಲಿನಲ್ಲಿ ಇರುವ ದೀಪಕ್ ಎನ್ನುವ ಒಬ್ಬ ಹುಡುಗ ಇವನೊಂದಿಗೆ ಸ್ನೇಹ ಬೆಳೆಸಿದ್ದಾನೆ. ಇವನ ಗರ್ಲ್ ಫ್ರೆಂಡ್ ಜೊತೆ ಕೂಡ ಸ್ನೇಹದಿಂದ ಇದ್ದ. ಆದರೆ ಬರುಬರುತ್ತಾ ವಿಷಯ ಸ್ವಲ್ಪ ಬೇರೆಯೇ ತಿರುವು ಪಡೆದುಕೊಂಡಿತು. ಪ್ರತಿಮಾ ಎನ್ನುವ ಆ ಗರ್ಲ್ ಫ್ರೆಂಡು ಟೆಡ್ಡಿಯನ್ನು ಬಿಟ್ಟು ದೀಪಕನ ಕಡೆ ಹೆಚ್ಚು ಒಲವು ತೋರಿಸಲು ಪ್ರಾರಂಭ ಮಾಡಿದಳು. ಅದು ಪ್ರೇಮವಲ್ಲ. ಕಾಮವೂ ಅಲ್ಲ. ದೀಪಕನಿಗೆ ಪ್ರತಿಮಾಳ ನಡೆ ನುಡಿ ಬಹಳ ಇಷ್ಟವಾಗುತ್ತಿತ್ತು. ಅವಳ ಹತ್ತಿರ ಜಗತ್ತಿನ ಯಾವ ಗುಟ್ಟನ್ನೂ ಹೇಳಿಕೊಳ್ಳಬಹುದು ಎನ್ನುವ ವಿಶ್ವಾಸ ಮೂಡುತ್ತಿತ್ತು. ಅದರಿಂದ ಟೆಡ್ಡಿಗೆ ಒಂದು ರೀತಿ ಅಸಹನೆ ಹೆಡೆಯೆತ್ತಿತ್ತು. ಆದರೆ ಇಬ್ಬರನ್ನೂ ಬೈಯುವಂತಿಲ್ಲ. ಯಾಕೆಂದರೆ ಬಯ್ಯುವಂಥ ಕೆಲಸ ಯಾವುದನ್ನೂ ಅವರು ಮಾಡಿಲ್ಲ.

ಹಾಗೇ ಬಿಡುವಂತೆಯೂ ಇಲ್ಲ. ಯಾಕೆಂದರೆ ಇವರಿಬ್ಬರ ಆಪ್ತತೆ ಟೆಡ್ಡಿಗೆ ಕಿರಿಕಿರಿಯಾಗಿದೆ. ಹಾಗಂತ ಬಾಯಿ ಬಿಟ್ಟು ಹೇಳಿದರೆ ಎಲ್ಲಿ ತನ್ನೊಳಗಿನ ಆಧುನಿಕ ಗಂಡಸು ಸತ್ತು ಬಿಡುತ್ತಾನೋ ಅಂತ ಅವನಿಗೆ ಹೆದರಿಕೆ. ಅಲ್ಲದೆ ಪ್ರತಿಮಾ ಬಿಂದಾಸ್ ಹುಡುಗಿ. ನೀನು ಚಿಕ್ಕಚಿಕ್ಕದಕ್ಕೆಲ್ಲ ತಲೆ ಕೆಡಿಸಿಕೊಳ್ತೀಯ, ನಿನ್ನ ಮನಸ್ಸು ವಿಶಾಲವಾಗಿಲ್ಲ ಅಂತ ಟೆಡ್ಡಿಯನ್ನೇ ಬಿಟ್ಟು ಹೊರಟುಬಿಟ್ಟರೆ?
‘ದೀಪಕನಿಲ್ಲದೆ ನಾನು ಬದುಕಲಾರೆ ದೀದಿ. ಬಹಳ ಒಳ್ಳೆಯ ಸ್ನೇಹಿತ ಅವನು. ಪ್ರತಿಮಾ ಕೂಡ ನನಗೆ ಬಹಳ ಒಳ್ಳೆಯ ಸ್ನೇಹಿತೆಯೇ. ಅವರಿಬ್ಬರೂ ಯಾವ ವಿಕೃತಿಯೂ ಇಲ್ಲದೆ ಮಾತಾಡಿಕೊಂಡಿದಾರೆ. ಕಷ್ಟವೆಲ್ಲ ನನಗೇ ಆಗ್ತಿದೆ’ ಎಂದು ಅಳಲು ತೋಡಿಕೊಂಡ.
ಇಲ್ಲಿ ಯಾಕೋ ತನ್ನ ಅಳತೆ ಮೀರಿ ಕಾಂಪ್ಲಿಕೇಶನ್ನುಗಳಿದ್ದು ತನ್ನ ಗ್ರಹಿಕೆ ಮೀರಿದ ವಿಷಯ ಇದೆ ಎನ್ನಿಸಿತು ವಿಜಿಗೆ. ಹಾಸ್ಟೆಲಿನ ಬಗ್ಗೆ ಬಹಳಷ್ಟು ವಿಷಯಗಳು ಗೊತ್ತಿಲ್ಲದಂತೆಯೇ ಮನುಷ್ಯ ಸಂಬಂಧಗಳ ಬಗ್ಗೆಯೂ ಅವಳಿಗೆ ಅರ್ಥವಾಗದೇ ಇರುವುದು ಬೇಕಾದಷ್ಟು ಇತ್ತು.
ಟೆಡ್ಡಿಗೆ ಸಮಾಧಾನ ಮಾಡಿ ಕಳಿಸಿಕೊಟ್ಟು, ಹಾಸ್ಟೆಲಿಗೆ ಮರಳಿ ಇಂದುಮತಿಗೆ ಎಲ್ಲಾ ವಿಷಯ ಅರುಹಿದಳು. ರಿಂಕಿ ಹತ್ತಿರ ಇದನ್ನೆಲ್ಲ ಚರ್ಚೆ ಮಾಡೋಣ ಎಂದು ನಿರ್ಧರಿಸಿ ಅವಳಿಗಾಗಿ ಕಾದರು. ಆವತ್ತು ರಿಂಕಿ ಹಾಸ್ಟೆಲಿಗೆ ಮರಳಿ ಬರಲಿಲ್ಲ.

ಟೆಡ್ಡಿಯ ಬಗ್ಗೆ ಇಂದುಮತಿಗೆ ಒಂದು ಗುಮಾನಿ ಶುರುವಾದರೂ ಅದನ್ನ ಹಾಗೇ ಮನಸ್ಸಿನಲ್ಲಿ ಉಳಿಸಿಕೊಂಡು ಸೈಕಾಲಜಿ ಕೋರ್ಸ್ ಮಾಡುತ್ತಿದ್ದ ಹುಡುಗಿಯೊಬ್ಬಳ ರೂಮಿಗೆ ಹೋದರು. ಇಂದುಮತಿಯ ರೂಮ್ ಮೇಟ್ ಕಾವೇರಿಯ ಸ್ನೇಹಿತೆ ವಿನಯಾ ಎನ್ನುವ ಆ ಹುಡುಗಿ ಇವರಿಬ್ಬರೂ ಹೇಳಿದ್ದನ್ನು ಬಹಳ ತಾಳ್ಮೆಯಿಂದ ಕೇಳಿಸಿಕೊಂಡು ತನ್ನ ಪರಿಚಯದ ಸೈಕಾಲಜಿಸ್ಟ್ ಒಬ್ಬರ ಹತ್ತಿರ ಚರ್ಚಿಸಿ ಇದಕ್ಕೆ ಉತ್ತರ ನೀಡುತ್ತೇನೆಂದಳು. ಹಾಗೂ, ಇಂದುಮತಿಗೆ ಇದ್ದ ಅನುಮಾನವೇ ವಿನಯಾಗೂ ಹುಟ್ಟಿತ್ತು. ಆದರೆ ಎಕ್ಸ್‌ಪರ್ಟ್ ಒಬ್ಬರ ಹತ್ತಿರ ಮಾತನಾಡದೆ ಸುಮ್ಮನೆ ಉತ್ತರ ಕೊಟ್ಟು ಆ ಹುಡುಗನ ಸಂಕೀರ್ಣ ಪರಿಸ್ಥಿತಿಗೆ ಇನ್ನೂ ತುಪ್ಪ ಸುರಿಯುವುದು ಯಾರಿಗೂ ಬೇಡವಾಗಿತ್ತು.

ಹಾಗಾಗಿಯೇ ಮೂರೂ ಜನ, ರಿಂಕಿಯ ಅನುಪಸ್ಥಿತಿಯಲ್ಲಿ ಅವಳ ತಮ್ಮನ ಜೀವನದ ಜಟಿಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಹಾಯ ಮಾಡುವುದೆಂದು ನಿರ್ಧರಿಸಿ ಮುಂದೆ ನಡೆದಿದ್ದರು. ಆವತ್ತು ಸಾಯಂಕಾಲ ರಿಂಕಿ ಹಾಸ್ಟೆಲಿಗೆ ವಾಪಾಸು ಬಂದಳು. ಟೆಡ್ಡಿ ಬಂದಿದ್ದ ಎನ್ನುವುದನ್ನು ವಿಜಿ ಅವಳಿಗೆ ಹೇಳಿದಳು. ರಿಂಕಿ ತನ್ನ ತಮ್ಮ ಏನ್ ಹೇಳಿದ ಎಂದು ಕೇಳುವ ಹೊತ್ತಿಗೆ ಇಂದುಮತಿಯೂ ರೂಮಿನೊಳಕ್ಕೆ ಬಂದಳು.

‘ಅವನ ವಿಷಯ ಏನೋ ಕಾಂಪ್ಲಿಕೇಟ್ ಆಗಿರೋ ಹಂಗಿದೆ ಕಣೇ!’ ವಿಜಿ ಪೀಠಿಕೆ ಹಾಕಿದಳು.
‘ಕಾಂಪ್ಲಿಕೇಟೆಡ್ ಏನಿಲ್ಲ. ಹಿ ಈಸ್ ಡಿಫರೆಂಟ್ ಅಷ್ಟೇ!’
‘ಅಂದ್ರೆ?’ ಇಂದುಮತಿ ಕೇಳಿದಳು.
‘ಮೈ ಬ್ರದರ್ ಈಸ್ ಗೇ. ಹಿ ಲವ್ಸ್ ಮೆನ್ (ನನ್ನ ತಮ್ಮ ಸಲಿಂಗಿ. ಅವನಿಗೆ ಗಂಡಸರ ಮೇಲೆ ಪ್ರೀತಿ ಇದೆ)’
‘ಮತ್ತೆ ಪ್ರತಿಮಾ?’
‘ಅವಳೊಂದಿಗೆ ಅವನಿಗೆ ಬಹಳ ಗಾಢವಾದ ಗೆಳೆತನ ಇದೆ. ಅವಳಷ್ಟು ಚೆನ್ನಾಗಿ ಅವನನ್ನು ಅರ್ಥ ಮಾಡಿಕೊಳ್ಳುವವರು ಇನ್ಯಾರೂ ಇಲ್ಲ’
‘ನಿನಗೆ ಇದೆಲ್ಲಾ ಗೊತ್ತಿತ್ತಾ?’   
‘ಗೊತ್ತಿತ್ತು. ಮೊದಲಿನಿಂದಲೂ ನಾನು ಅವನ ಬೆಳವಣಿಗೆಯನ್ನು ಗಮನಿಸಿದ್ದೇನೆ’
‘ಮತ್ತೆ ಮುಂದೇನು?’

‘ಏನಿಲ್ಲ. ಅವನ ವ್ಯಕ್ತಿತ್ವದ ಬಗ್ಗೆ ಅವನಿಗೆ ವಿಶ್ವಾಸ ಮೂಡುವವರೆಗೂ ಅವನ ಬೆಂಬಲಕ್ಕೆ ನಾನಿದ್ದೇನೆ. ಆದರೆ ತನ್ನ ಐಡೆಂಟಿಟಿಯನ್ನು ಒಪ್ಪಿಕೊಳ್ಳುವುದು ಮಾತ್ರ ಅವನ ವೈಯಕ್ತಿಕ ಯುದ್ಧ. ಅದನ್ನು ಅವನೇ ಮಾಡಿ ಗೆಲ್ಲಬೇಕು. ಏಕೆಂದರೆ ಈ ಯುದ್ಧದಲ್ಲಿ ಎಲ್ಲಿ ನಿಂತರೂ ಅವನ ಎದುರಾಳಿ ಸ್ವತಃ ಅವನೇ ಆಗಿರುತ್ತಾನೆ’
‘ಡೆಲಿಕೇಟ್ ಸಂದರ್ಭ ಅಲ್ವಾ?’
‘ಇರಬಹುದೇನೋ. ಆದರೆ ಅವನಿಗೆ ಸಾಮಾಜಿಕ ಬೆಂಬಲ ಮತ್ತು ಒಪ್ಪಿಗೆ ಸಿಕ್ಕರೆ ಅವನು ಏನನ್ನು ಬೇಕಾದ್ರೂ ಫೇಸ್ ಮಾಡಿಯಾನು. ಇದು ಸೃಷ್ಟಿಕ್ರಿಯೆಯಲ್ಲೇ ನಡೆಯುವ ವ್ಯತ್ಯಾಸ. ಇಲ್ಲಿ ತಪ್ಪು-ಸರಿಯ ಪ್ರಶ್ನೆ ಬರುವುದೇ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಇದು ರೋಗವಲ್ಲ. ನನ್ನ ತಮ್ಮ ಹೇಗೇ ಇದ್ದರೂ ಅವನು ನನ್ನ ತಮ್ಮನೇ. ಅವನ ಬೆನ್ನಿಗೆ ನಾನು ನಿಂತೇ ನಿಲ್ಲುತ್ತೇನೆ. ಅಪ್ಪ ಅಮ್ಮನ ವಿರುದ್ಧ ನಿಲ್ಲಬೇಕಾಗಿ ಬಂದರೂ ನನಗೆ ಯಾವ ಚಿಂತೆಯೂ ಇಲ್ಲ’

ಇಲ್ಲಿಯತನಕ ಬೇಜವಾಬ್ದಾರಿ ಎಂದುಕೊಂಡಿದ್ದ ಹೆಣ್ಣೊಂದು ಇದ್ದಕ್ಕಿದ್ದ ಹಾಗೆ ಜವಾಬ್ದಾರಿ ಹೊಂದಿದ ಹಿರಿ ಮಗಳ ಹಾಗೆ ಕಂಡು ಬದಲಾವಣೆಯೊಂದರ ಹರಿಕಾರಳಾಗಿ ನಿಂತಾಗ ಆ ಕ್ಷಣಕ್ಕೆ ಸಾಕ್ಷಿಯಾದ ಸಮಯದ ಬಗ್ಗೆ ಧನ್ಯತಾಭಾವವಲ್ಲದೆ ಇನ್ನೇನು ತಾನೇ ಮೂಡಲು ಸಾಧ್ಯ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT