ಇತಿಹಾಸ ಮರುಕಳಿಸುತ್ತಲೇ ಇದೆ. ಇದಕ್ಕೆಲ್ಲ ‘ಇತಿಹಾಸ’ ಎನ್ನಬೇಕೋ ಬೇಡವೋ ತಿಳಿಯದು. ಆದರೆ, ಇತಿಹಾಸದಲ್ಲಿ ಎಲ್ಲವೂ ಒಳ್ಳೆಯದೇ ಇರಬೇಕು ಎಂದೇನಿಲ್ಲವಲ್ಲ? ಕೆಟ್ಟದ್ದೂ ಇರುತ್ತದೆ. ಇದು ಅವರೋಹಣದ ಕಾಲವಾದ್ದರಿಂದ ಕೆಟ್ಟ ಇತಿಹಾಸವೇ ಮತ್ತೆ ಮತ್ತೆ ಮರುಕಳಿಸುತ್ತಲಿದೆ.
ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ನೋಡಿ ಸಿಕ್ಕಿಬಿದ್ದ ಮೂವರು ಸಚಿವರು ರಾಜೀನಾಮೆ ಕೊಟ್ಟು ಕೇವಲ ಎರಡೂವರೆ ವರ್ಷವಾಯಿತು. ಈಗ ಒಬ್ಬ ಸದಸ್ಯರು ಒಂದು ದಿನದ ಮಟ್ಟಿಗೆ ಅಮಾನತು ಆಗಿದ್ದಾರೆ. ವಿಪರ್ಯಾಸ ಎಂದರೆ ರಾಜೀನಾಮೆ ಕೊಟ್ಟ ಸಚಿವರು ಬಿಜೆಪಿಯವರೇ ಆಗಿದ್ದರು ಮತ್ತು ಈಗ ಅಮಾನತು ಆದ ಸದಸ್ಯರೂ ಬಿಜೆಪಿಯವರೇ ಆಗಿದ್ದಾರೆ. ‘ಸಂಸ್ಕೃತಿ’, ‘ಪರಂಪರೆ’, ‘ಧರ್ಮ’ ಎಂದೆಲ್ಲ ‘ಬೀಗು’ವ ಒಂದು ಪಕ್ಷಕ್ಕೆ ಇದೆಲ್ಲ ಹೇಗೆ ಶೋಭೆ ಎಂದು ಅರ್ಥವಾಗುವುದಿಲ್ಲ.
2012ರ ಆರಂಭದಲ್ಲಿ, ಆಗಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ, ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೇಮಾರ್ ‘ಬ್ಲೂ ಫಿಲಂ’ ನೋಡಿ ಸಿಕ್ಕಿಬಿದ್ದು ರಾಜೀನಾಮೆ ಕೊಟ್ಟಿದ್ದರು. ಆಗಲೂ ಸದನದಲ್ಲಿ ರೈತರ ಬಗೆಗೆ ಚರ್ಚೆ ನಡೆಯುತ್ತಿತ್ತು. ಈಗಲೂ ರೈತರ ಬಗೆಗೆ ಚರ್ಚೆ ನಡೆಯುವಾಗಲೇ ಔರಾದ್ ಶಾಸಕ ಪ್ರಭು ಚವಾಣ್ ಎಡವಟ್ಟು ಮಾಡಿಕೊಂಡರು. ಚವಾಣ್ ಅವರು ಮೊಬೈಲ್‌ನಲ್ಲಿಯೇ ಪ್ರಿಯಾಂಕಾ ಗಾಂಧಿಯವರ ವಕ್ಷ ಭಾಗವನ್ನು ಹಿಗ್ಗಿಸಿ ನೋಡುತ್ತಿದ್ದಾಗ ಮಾಧ್ಯಮದವರ ಕೈಗೆ ಸಿಕ್ಕಿ ಬಿದ್ದರು.
ಹಾಗಾದರೆ ಇತಿಹಾಸದಿಂದ ನಾವು ಏನು ಪಾಠ ಕಲಿಯುತ್ತೇವೆ? ಅಶ್ಲೀಲ ಚಿತ್ರ ನೋಡಿ ಸಿಕ್ಕಿ ಬಿದ್ದು ಮೂವರು ಸಚಿವರು ರಾಜೀನಾಮೆ ಕೊಟ್ಟ ನಂತರವೂ ಬಿಜೆಪಿ ಪಾಠ ಕಲಿಯಲಿಲ್ಲವೇ? ಪ್ರತಿ ಸಾರಿ ಅಧಿವೇಶನ ನಡೆಯುವುದಕ್ಕಿಂತ ಮುಂಚೆ ಎಲ್ಲ ರಾಜಕೀಯ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ಕರೆಯುತ್ತವೆ. ಅಲ್ಲಿ ತಮ್ಮ ತಮ್ಮ ಕಾರ್ಯತಂತ್ರ ಕುರಿತು ಚರ್ಚೆ ಮಾಡುತ್ತವೆ. ಆದರೆ, ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಚರ್ಚೆ ಮಾಡುವುದಿಲ್ಲವೇ? ಮಾಡಿದ್ದರೆ ಪ್ರಭು ಚವಾಣ್ ಹೀಗೆ ಏಕೆ ನಡೆದುಕೊಂಡರು?
ಯಾರೋ ಒಬ್ಬರು ಹೀಗೆ ನಡೆದುಕೊಳ್ಳುವುದರಿಂದ ಇಡೀ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಶಾಸಕಾಂಗ ಪಕ್ಷದ ನಾಯಕರಾದವರು ಕಿವಿ ಮಾತು ಹೇಳಬಹುದಿತ್ತಲ್ಲ? ಸೋಜಿಗ ನೋಡಿ : ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಮೂರು ನಾಲ್ಕು ವರ್ಷಗಳ ಮುಂಚೆಯೇ ರಾಜ್ಯದ ಬಿಜೆಪಿ ಶಾಸಕರಿಗೆ ‘ಮೊಬೈಲ್ ಎಷ್ಟು ಅಪಾಯಕಾರಿ’ ಎಂದು ಎಚ್ಚರಿಕೆ ಕೊಟ್ಟಿದ್ದರು.
ಮಕ್ಕಳು ತಂತ್ರಜ್ಞಾನ ಬಳಸಿಕೊಂಡು ಖಾಸಗಿಯಾಗಿ ಕೂಡ ಏನು ಮಾಡಬಾರದು, ಏನು ನೋಡಬಾರದು ಎಂದು ಹೇಳುತ್ತೇವೆಯೋ ಅದನ್ನೇ ಜನಪ್ರತಿನಿಧಿಗಳು ನೋಡುತ್ತಿದ್ದಾರೆ; ಅದನ್ನು ಎಲ್ಲರೂ ನೋಡುವ ಹಾಗೆ ನೋಡುತ್ತಿದ್ದಾರೆ. ಮತ್ತು ಪ್ರಜಾಸತ್ತೆಯ ಅತ್ಯುನ್ನತ ಜಾಗವಾದ ಸದನದಲ್ಲಿಯೇ ನೋಡುತ್ತಿದ್ದಾರೆ! ಹಾಗಾದರೆ ಅವರು ಜನರಿಗೆ ಯಾವ ಮಾದರಿ ಹಾಕಿ ಕೊಡುತ್ತಿದ್ದಾರೆ? ಜನರಿಗೆ ಬಿಡಿ, ಕನಿಷ್ಠ ತಮ್ಮ ಮಕ್ಕಳಿಗೆ ಮುಜುಗರ ಆಗುವಂತೆಯಾದರೂ ಜನಪ್ರತಿನಿಧಿಗಳು ನಡೆದುಕೊಳ್ಳಬಾರದು.
ವಿಧಾನಮಂಡಲದ ಅಧಿವೇಶನದ ಬಗೆಗೆ ಯಾವ ಸರ್ಕಾರಕ್ಕೂ ಅಂಥ ಉತ್ಸಾಹ ಇರುವುದಿಲ್ಲ. ಏಕೆಂದರೆ ಅದು ವಿರೋಧ ಪಕ್ಷಗಳ ಅಸ್ತ್ರಗಳನ್ನು ಎದುರಿಸಲು ಸಿದ್ಧವಾಗಿರಬೇಕಾಗುತ್ತದೆ. ಈ ಸಾರಿಯ ಚಳಿಗಾಲದ ಅಧಿವೇಶನಕ್ಕೆ ವಿಶೇಷ ಮಹತ್ವ ಇತ್ತು. ಆ ಭಾಗದ ಮಾತ್ರವಲ್ಲ, ಇಡೀ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿ ಮಾಡಿದ ದರ ಪಾವತಿ ಮಾಡದೇ ಸತಾಯಿಸುತ್ತಿದ್ದುವು.
ಹಾಗೆ ನೋಡಿದರೆ ಕಬ್ಬು ಬೆಳೆಗಾರರ ಬೆಂಬಲಕ್ಕೆ ನಿಲ್ಲಬೇಕಾಗಿದ್ದ ಸರ್ಕಾರ ಕಾರ್ಖಾನೆ ಮಾಲೀಕರ ಮರ್ಜಿಯಲ್ಲಿ ಸಿಲುಕಿದಂತೆ ಕಾಣುತ್ತಿತ್ತು. ಸರ್ಕಾರವನ್ನು ಬಡಿಯಲು ಕಬ್ಬು ಬೆಳೆಗಾರರು ಹೊರಗೆ ಮತ್ತು ವಿರೋಧ ಪಕ್ಷಗಳ ಸದಸ್ಯರು ಒಳಗೆ ಬಡಿಗೆ ಹಿಡಿದುಕೊಂಡೇ ಸಜ್ಜಾಗಿದ್ದರು. ಅದು ನಿಜಕ್ಕೂ ಗಂಭೀರ ಸಂಗತಿಯಾಗಿತ್ತು. ಆದರೆ, ಪ್ರಭು ಚವಾಣ್ ವಿರೋಧ ಪಕ್ಷಗಳ ಕೈಯಲ್ಲಿನ ಅಸ್ತ್ರವನ್ನು ಕಿತ್ತುಕೊಂಡು ಆಡಳಿತ ಪಕ್ಷದ ಕೈಗೆ ಕೊಟ್ಟರು! ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲೇ, ‘ಸದನದಲ್ಲಿಯೇ ಬ್ಲೂ ಫಿಲಂ ನೋಡಿದವರು ನಮಗೇನು ಬುದ್ಧಿ ಹೇಳುತ್ತಾರೆ’ ಎಂದು ಬಿಜೆಪಿಯ ಸದಸ್ಯರನ್ನು ಕಂಡಕಂಡಲ್ಲಿ ಹಂಗಿಸುತ್ತಿದ್ದಾರೆ.
ಈಗ ಮತ್ತೆ ಅವರ ಕೈಯಲ್ಲಿ ಇನ್ನೊಂದು ಬೆತ್ತವನ್ನು ಬಿಜೆಪಿಯವರೇ ಕೊಟ್ಟಂತಾಯಿತು. ಸಚಿವ ಅಂಬರೀಷ್ ಮತ್ತು ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಮೊಬೈಲಿನಲ್ಲಿ ಏನು ನೋಡುತ್ತಿದ್ದರೋ ಗೊತ್ತಿಲ್ಲ. ಅದರ ನೆಪದಲ್ಲಿ ಬಿಜೆಪಿಯವರು ಸಮಾಧಾನ ಹುಡುಕಲು ಹೊರಟುದು ಒಂದು ತಪ್ಪಿಗೆ ಮತ್ತೊಂದು ತಪ್ಪಿನ ಸಮಜಾಯಿಷಿ ಕೊಟ್ಟಂತೆ ಇತ್ತು. ಹಾಗಾದರೆ ಬಿಜೆಪಿಗೂ ಕಾಂಗ್ರೆಸ್ಸಿಗೂ ಏನೂ ವ್ಯತ್ಯಾಸವಿಲ್ಲ ಎಂದೇ ಹೇಳಿದಂತಾಯಿತು.
ಅಧಿವೇಶನ ಏಕೆ ಸೇರುತ್ತದೆ, ಅದರ ಮಹತ್ವವೇನು ಎಂದೇ ಬಹುತೇಕ ಶಾಸಕರಿಗೆ ಈಗ ಗೊತ್ತಾಗುವಂತೆ ಕಾಣುತ್ತಿಲ್ಲ. ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರೂ ಸದನ ಸೇರಿಯೇ ಸೇರುತ್ತದೆ. ಜನರ ಜ್ವಲಂತ ಸಮಸ್ಯೆಗಳು ಹಾದಿ ಬೀದಿಯಲ್ಲಿ ಚರ್ಚೆಯಾಗುವುದಕ್ಕೂ, ಸದನದಲ್ಲಿ ಚರ್ಚೆಯಾಗುವುದಕ್ಕೂ ವ್ಯತ್ಯಾಸ ಇದೆ.
ಸರ್ಕಾರ ಆಯಾ ಕಾಲದ ಸಮಸ್ಯೆಗಳಿಗೆ ಮತ್ತು ‘ವಿಷಯ’ಗಳಿಗೆ ಹೇಗೆ ಸ್ಪಂದಿಸಬೇಕು ಹಾಗೂ ವಿರೋಧ ಪಕ್ಷ ತನ್ನ ಮೇಲೆ ಹೇಗೆ ದಾಳಿ ಮಾಡಬಹುದು, ಆ ದಾಳಿಯಿಂದ ತಾನು ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸಿ ಸಿದ್ಧವಾಗಿ ಬರಬೇಕು. ಸರ್ಕಾರ ಎಸಗಿದ ಲೋಪಗಳು ಯಾವುದೆಲ್ಲ ಎಂದು ವಿರೋಧ ಪಕ್ಷ ಅಧ್ಯಯನ ಮಾಡಿ ಬಂದಿರಬೇಕು. ಇದು ಒಂದು ರೀತಿಯ ಸಂಸದೀಯ ಕುಸ್ತಿಯಾಟ. ಸರ್ಕಾರಕ್ಕೆ ಬಗೆಬಗೆಯ ಪೇಚು ಹಾಕಿ ‘ಚಿತ್’ ಮಾಡಬೇಕು ಎಂದು ವಿರೋಧ ಪಕ್ಷ ಸಿದ್ಧವಾಗಿ ಬಂದರೆ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಸರ್ಕಾರ ಯೋಚನೆ ಮಾಡಬೇಕು. ಆದರೆ, ಈಗ ಅದೆಲ್ಲ ನಡೆಯುವುದು ಯಾವಾಗಲೋ ಒಮ್ಮೊಮ್ಮೆ.
ಹಾಗೆ ನೋಡಿದರೆ ಆಡಳಿತ ಪಕ್ಷದಲ್ಲಿನ ರಮೇಶ್ ಕುಮಾರ್ ಮತ್ತು ಸಭಾಧ್ಯಕ್ಷರ ಪೀಠದಲ್ಲಿನ ಕಾಗೋಡು ತಿಮ್ಮಪ್ಪನವರು ಸರ್ಕಾರಕ್ಕೆ ಮಾಡಿದ ಮುಜುಗರದ ಒಂದು ಪಾಲನ್ನೂ ವಿರೋಧ ಪಕ್ಷದವರು ಮಾಡಿಲ್ಲ! ರಮೇಶ್‌ಕುಮಾರ್ ಮತ್ತು ಕಾಗೋಡು ತಿಮ್ಮಪ್ಪನವರು ಮಾಡುತ್ತಿರುವುದು ಸರಿಯೇ ಎಂಬುದು ಬೇರೆ ಪ್ರಶ್ನೆ. ಆದರೆ, ಅವರು ಮಾತಿನ ಮನೆಯಲ್ಲಿ ಸರ್ಕಾರವನ್ನು ಚುಚ್ಚಲು ಮಾತಿನ ಬಾಣವನ್ನೇ ಬಳಸಿದ್ದಾರೆ.
ವಿಧಾನ ಮಂಡಲ ಎಂಬುದು ಮಾತಿನ ಅನುಭವ ಮಂಟಪ. ಅಲ್ಲಿ ಮಾತೇ ಬ್ರಹ್ಮಾಸ್ತ್ರ. ಮಾತಿನ ಮೂಲಕವೇ ಸರ್ಕಾರವನ್ನು ಕೊಲ್ಲಬೇಕು. ಈಗಿನ ಸದನದಲ್ಲಿ ಮಾತು ಬಲ್ಲವರು ಬೇಕಾದಷ್ಟು ಮಂದಿ ಇದ್ದಾರೆ. ಆದರೆ, ಏಕೋ ಮಾತು ಸೋಲುತ್ತಿದೆ. ಜಗಳವೇ ಗೆಲ್ಲುತ್ತಿದೆ. ಏಕೆ ಹೀಗೆ? ಕಾಲಾಂತರದಲ್ಲಿ ಸದನದ ಸ್ವರೂಪ ಬದಲಾಗುತ್ತಿರುವುದಕ್ಕೂ ಈಗಿನ ಮಾತು ಸೋಲುವ ವಿದ್ಯಮಾನಕ್ಕೂ ಸಂಬಂಧ ಇರಬಹುದು. ಪ್ರಭು ಚವಾಣ್ ಅವರು ಒಂದು ಕಾಲದಲ್ಲಿ ಗುಜರಿ ವ್ಯಾಪಾರಿಯಾಗಿದ್ದವರು. ಆದರೆ, ಅದು ಅವರ ವ್ಯಕ್ತಿತ್ವದ ಕುಂದು ಎಂದು ಯಾರೂ ಭಾವಿಸುವುದಿಲ್ಲ.
ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಒಂದು ಕಾಲದ ಗುಜರಿ ವ್ಯಾಪಾರಿ ಒಬ್ಬ ಒಳ್ಳೆಯ ಸಂಸದೀಯ ಪಟು ಆಗಬಾರದು ಎಂದೇನೂ ಇಲ್ಲ. ಆತನಿಗೆ ಸ್ವಲ್ಪ ತರಬೇತಿ ಬೇಕು, ಒಂದಿಷ್ಟು ಅಧ್ಯಯನ ಮಾಡಬೇಕು; ಹಿರಿಯ ಸದಸ್ಯರು ಹೇಗೆ ಮಾತನಾಡುತ್ತಾರೆ ಎಂದು ಕೇಳುವ ವ್ಯವಧಾನ ಇರಬೇಕು. ಹಾಗೆ ಒಂದಿಷ್ಟು ಕಷ್ಟಪಟ್ಟು ಕಲಿತು, ಮಾತನಾಡಿದರೆ ಪ್ರಭು ಚವಾಣ್ ಕೂಡ ಒಬ್ಬ ಒಳ್ಳೆಯ ಸಂಸದೀಯ ಪಟು ಆಗಬಹುದು. ಆದರೆ, ಹಾಗೆಲ್ಲ ಆಗುವುದಕ್ಕೆ ಮುಖ್ಯವಾಗಿ ಕಾಳಜಿ ಬೇಕಾಗುತ್ತದೆ ಮತ್ತು ತನ್ನ ಕೆಲಸಕ್ಕೆ ಒಂದು ಬದ್ಧತೆ ಎಂಬುದು ಇರಬೇಕಾಗುತ್ತದೆ.
ಆದರೆ, ಶಾಸಕರಿಗೆ ಈಗ ಕಾಳಜಿಯೂ ಕಡಿಮೆ ಆಗುತ್ತಿದೆ, ಬದ್ಧತೆಯೂ ಇಲ್ಲವಾಗುತ್ತಿದೆ. ಶಾಸಕರಾಗಿ ಆಯ್ಕೆಯಾಗುವುದು ‘ಇನ್ನು ಯಾವುದಕ್ಕೋ’ ಎಂದು ಅವರು ಅಂದುಕೊಳ್ಳುತ್ತಿರುವಂತೆ ಕಾಣುತ್ತದೆ. ವಿಧಾನಸಭೆಯಲ್ಲಿ ಒಬ್ಬ ಶಾಸಕ ಒಂದೂವರೆಯಿಂದ ಎರಡು ಲಕ್ಷ ಜನರನ್ನು ಪ್ರತಿನಿಧಿಸುತ್ತಾರೆ. ಲೋಕಸಭೆಯಲ್ಲಿ ಹದಿನೈದರಿಂದ ಇಪ್ಪತ್ತು ಲಕ್ಷ ಜನರನ್ನು ಒಬ್ಬ ಸಂಸದ ಪ್ರತಿನಿಧಿಸುತ್ತಾರೆ. ಮತದಾರರು ಬರೀ ಜನರಾಗಿರುವುದಿಲ್ಲ, ಒಂದು ಊರಾಗಿರುತ್ತಾರೆ, ಒಂದು ಪ್ರದೇಶವಾಗಿರುತ್ತಾರೆ ಎಂಬುದನ್ನು ಅವರನ್ನು ಪ್ರತಿನಿಧಿಸುವವರು ನೆನಪು ಇಟ್ಟುಕೊಳ್ಳಬೇಕು.
ಯಾರಾದರೂ ಶಾಸಕರು ತಪ್ಪಾಗಿ ನಡೆದುಕೊಂಡರೆ ಆ ಊರಿಗೆ, ಆ ಪ್ರದೇಶಕ್ಕೆ ಅವಮಾನ ಎಂದು ತಿಳಿದುಕೊಳ್ಳುವವನು ನಾನು. ಪ್ರಭು ಚವಾಣ್ ವರ್ತನೆ ಔರಾದ್ ಜನರು ತಲೆ ತಗ್ಗಿಸುವಂತೆ ಮಾಡಿದೆ. ಏಕೆಂದರೆ ಅವರೇ ಚವಾಣ್ ಅವರನ್ನು ಆರಿಸಿ ವಿಧಾನಸಭೆಗೆ ಕಳಿಸಿ ಕೊಟ್ಟಿದ್ದಾರೆ! ಶಾಸಕರನ್ನು ಶಾಸನ ಸಭೆಗೆ ಆರಿಸಿ ಕಳುಹಿಸಿದ ಜನರು, ಅಲ್ಲಿ ತಮ್ಮ ಬಗೆಗೆ ಏನು ಚರ್ಚೆ ನಡೆಯುತ್ತದೆ ಎಂದು ತಿಳಿಯಲು ಕುತೂಹಲಿಗಳೂ ಆಗಿರುತ್ತಾರೆ. ಆದರೆ, ಈಗೀಗ ಶಾಸನ ಸಭೆಗಳು ತಮಾಷೆಯ, ಮನರಂಜನೆಯ ತಾಣಗಳು ಆಗಿವೆ ಎಂದು ಅವರಿಗೆ ಅನಿಸತೊಡಗಿದೆ.
ಪ್ರಭು ಚವಾಣ್ ಅವರು ಮೊಬೈಲ್‌ನಲ್ಲಿ ಪ್ರಿಯಾಂಕಾ ಗಾಂಧಿಯವರ ಚಿತ್ರವನ್ನು ನೋಡಿದ ಬೆಳಿಗ್ಗೆಯೇ ಪಡಿತರ ಚೀಟಿಗಳ ಸರವನ್ನು ಕೊರಳಿಗೆ ಹಾಕಿಕೊಂಡು ‘ಪ್ರತಿಭಟಿಸಿ’ದ್ದು ಕೂಡ ಒಂದು ರೀತಿಯ ತಮಾಷೆ ಮತ್ತು ಮನರಂಜನೆ. ಏಕೆ, ಅವರಿಗೆ ತಮ್ಮ ಕ್ಷೇತ್ರದಲ್ಲಿನ ಪಡಿತರ ಚೀಟಿದಾರರ ಸಮಸ್ಯೆಯೇನು ಎಂದು ಮಾತನಾಡಿ ಹೇಳಲು ಸಾಧ್ಯ ಇರಲಿಲ್ಲವೇ? ಬೆಂಗಳೂರಿನಿಂದ ಐದು ನೂರು ಕಿಲೋ ಮೀಟರ್ ದೂರದಲ್ಲಿ ಇರುವ ಬೆಳಗಾವಿಯಲ್ಲಿ ಈಗ ಅಧಿವೇಶನ ನಡೆಯುತ್ತಿದೆ. ಆದರೆ, ಆ ಭಾಗದ ಜನರಿಗೆ ಅಧಿವೇಶನದಲ್ಲಿ ಯಾವ ಆಸಕ್ತಿಯೂ ಇಲ್ಲ.
ಪ್ರೇಕ್ಷಕರ ಗ್ಯಾಲರಿಗಳು ಬಣಗುಡುತ್ತಿವೆ. ಅಧಿವೇಶನ ನಡೆಯುವಾಗಲೆಲ್ಲ ಜನರು ತಮ್ಮ ಕಷ್ಟ ಸುಖಗಳ ಮನವಿ ಪತ್ರ ಹಿಡಿದುಕೊಂಡು ಬಂದು ತಮಗೆ ಬೇಕಾದ ಶಾಸಕರಿಗೆ ಕೊಟ್ಟು ಆ ಕುರಿತು ಚರ್ಚೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದರು. ಈ ಸಾರಿ ಅಂಥವರೂ ಬಂದಿಲ್ಲ. ಅಂದರೆ, ಜನರಿಗೆ ಶಾಸನ ಸಭೆಗಳ ಬಗೆಗೆ ನಂಬಿಕೆ ಕುಸಿಯುತ್ತಿದೆಯೇ ಅಥವಾ ನಿರೀಕ್ಷೆಗಳು ಕಡಿಮೆ ಆಗುತ್ತಿವೆಯೇ? ಎರಡೂ ಒಳ್ಳೆಯದಲ್ಲ. ಲೋಕಸಭೆಯ ನಡವಳಿಕೆಯೂ ಸಮಾಧಾನಕರವಾಗಿಲ್ಲ.
ಅಲ್ಲಿಯೂ ಸಂಸದರು ಏನು ಮಾಡಬೇಕೋ ಅದನ್ನು ಬಿಟ್ಟು ಇನ್ನೇನೋ ಮಾಡುತ್ತಿದ್ದಾರೆ. ಅವರ ನಾಲಗೆಗೆ ಲಂಗು ಲಗಾಮು ಇರುವಂತೆ ಕಾಣುವುದಿಲ್ಲ. ಹೀಗೆ ನಾಲಗೆಗೆ ಲಂಗು ಲಗಾಮು ಇಲ್ಲದಂತೆ ಮಾತನಾಡುವವರು ಆಡಳಿತ ಪಕ್ಷದವರೇ ಆಗಿರುವುದು ಮತ್ತು ಅದರಲ್ಲಿಯೂ ಬಿಜೆಪಿಯವರೇ ಆಗಿರುವುದು ಕೇವಲ ಆಕಸ್ಮಿಕ ಇರಲಾರದು. ಮತ್ತೆ ಅವರಲ್ಲಿ ಸಾಧ್ವಿ ಎಂದೂ ಮಹಾರಾಜ್ ಎಂದೂ ‘ಸಂತ’ರ ಹೆಸರು ಇಟ್ಟುಕೊಂಡವರು ಮಾತನಾಡುತ್ತಿರುವ ರೀತಿ ಇನ್ನೂ ಕರ್ಣ ಕಠೋರವಾಗಿದೆ; ಅರಗಿಸಿಕೊಳ್ಳಲು ಆಗದಂತೆ ಇದೆ.
ಉದ್ದೇಶಗಳು ಮರೆತು ಹೋದಾಗ ಹೀಗೆಯೇ ಆಗುತ್ತದೆ. ನಾವು ಏಕೆ ಆಯ್ಕೆಯಾಗಿದ್ದೇವೆ ಎಂಬುದನ್ನು ಶಾಸಕರಾದವರು, ಸಂಸದರಾದವರು ಒಂದು ಕ್ಷಣವೂ ಮರೆಯಬಾರದು. ಜನರ ಹಿತ ಎಂಬುದು ಬಹಳ ದೊಡ್ಡದು. ಅದೇ ಶಾಸನಸಭೆಯಲ್ಲಿ ಮುಖ್ಯವಾಗಿ ಚರ್ಚೆಯಾಗಬೇಕು. ಅದಕ್ಕೇ ಪ್ರಾಧಾನ್ಯ ಕೊಡಲು ಆಡಳಿತ ಪಕ್ಷವೂ ಮುಂದಾಗಬೇಕು, ವಿರೋಧ ಪಕ್ಷಗಳು ಕೈ ಜೋಡಿಸಬೇಕು.
ಸಂಸತ್ತು ಎಂಬ ಬಂಡಿಗೆ ಕಟ್ಟಿದ ಎರಡು ಎತ್ತುಗಳು ಎಷ್ಟೇ ಕೊಸರಾಡಿದರೂ ತಾವು ಸಾಗಬೇಕಾದ ‘ಲಕ್ಷ್ಯ’ವನ್ನು ಮರೆಯಬಾರದು.
ಮಟ್ಟ ಎಷ್ಟೇ ಕುಸಿದು ಹೋದರೂ ನಮ್ಮ ಶಾಸನಸಭೆಗಳು ಅನೇಕ ಸಾರಿ ಒಳ್ಳೆಯ ಇತಿಹಾಸವನ್ನು ನಿರ್ಮಿಸಿವೆ. ಈಗ ನಡೆಯುತ್ತಿರುವುದೆಲ್ಲ ಒಂದು ಕಾಲಘಟ್ಟದ ಅಪಭ್ರಂಶ ಎಂದು ಮಾತ್ರ ಅನಿಸಬೇಕೇ ಹೊರತು ಇದೇ ಈ ಕಾಲದ ಗುಣಧರ್ಮ ಎಂದು ಅನಿಸಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.