ADVERTISEMENT

ಚೂರುಪಾರು ಪ್ರೀತಿಗೆ ಹಂಬಲಿಸುವ ಮನ...

ಪದ್ಮರಾಜ ದಂಡಾವತಿ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST
ಚೂರುಪಾರು ಪ್ರೀತಿಗೆ  ಹಂಬಲಿಸುವ ಮನ...
ಚೂರುಪಾರು ಪ್ರೀತಿಗೆ ಹಂಬಲಿಸುವ ಮನ...   

ಸಿನಿಮಾ ಮುಗಿಯುವುದನ್ನೇ ಅವರೆಲ್ಲ ಕಾಯುತ್ತ ಇದ್ದಂತೆ ಇತ್ತು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಮರಾಠಿಯ ಪ್ರಖ್ಯಾತ ನಟ ಮತ್ತು ನಿರ್ದೇಶಕ ಡಾ.ಮೋಹನ ಅಗಾಶೆ ಅವರಿಗೆ ಎಲ್ಲರೂ ಮುತ್ತಿಗೆ ಹಾಕಿದರು. ಎಲ್ಲರೂ ಅವರಿಗೆ ಅಭಿನಂದನೆ ಹೇಳುವವರೇ. ಕೆಲವರು ಅವರ ಕಾಲಿಗೆ ನಮಸ್ಕಾರ ಮಾಡಿದರು. ಕೆಲವರು ಕೈ ಕುಲುಕಿದರು. ಎಲ್ಲರ ಕಣ್ಣು ಒದ್ದೆಯಾಗಿದ್ದುವು. ಕೆಲವರ ಕಣ್ಣಲ್ಲಿ ಧಾರಾಕಾರ ನೀರು ಹರಿಯುತ್ತಿತ್ತು. ಕೊನೆಯ ದೃಶ್ಯದವರೆಗೆ ನನ್ನ ಕಣ್ಣಲ್ಲಿಯೂ ಕಾದು ಕುಳಿತಂತೆ ಇದ್ದ ನೀರು ಕೆನ್ನೆಗುಂಟ ಇಳಿಯಿತು. ನಾನೂ ಅಗಾಶೆ ಅವರ ಕೈ ಕುಲುಕಿ ಒದ್ದೆ ಕಣ್ಣನ್ನು ಒರೆಸಿಕೊಳ್ಳುತ್ತ, ‘ತಡವಾಯಿತು’ ಎಂದು ಕರೆಯುತ್ತಿದ್ದ ಕಚೇರಿ ಕಡೆಗೆ ಓಡಿ ಬಂದೆ.

ಹೊಸ ವರ್ಷದ ಮೊದಲ ದಿನ ದೂರದ ಚೆನ್ನೈನಿಂದ ಕರೆ ಮಾಡಿದ ಗೆಳೆಯ ಭರತಕುಮಾರ್‌, ‘ಈಗ ಮಧ್ಯಾಹ್ನ 12.30ಕ್ಕೆ ಲಿಡೋದಲ್ಲಿ ಮರಾಠಿಯ ‘ಅಸ್ತು’ ಸಿನಿಮಾ ಇದೆ. ನೀವು ನೋಡಬೇಕು. ಚಿತ್ರಮಂದಿರಕ್ಕೆ ಹೋಗಿ ನನಗೆ ಫೋನ್‌ ಮಾಡಬೇಕು’ ಎಂದು ಆದೇಶ ಕೊಟ್ಟು ಫೋನ್‌ ಕಟ್ ಮಾಡಿದರು. ಹೊಸ ವರ್ಷದ ಹ್ಯಾಂಗ್‌ಓವರ್‌ನಿಂದ ನಾನು ಇನ್ನೂ ಹೊರಗೆ ಬಂದಿರಲಿಲ್ಲ! ಧಡಬಡಿಸಿ ಎದ್ದು ಚಿತ್ರಮಂದಿರಕ್ಕೆ ದೌಡಾಯಿಸಿದೆ. 123 ನಿಮಿಷದ ‘ಅಸ್ತು (So be it)’ ನೋಡದೇ ಇದ್ದರೆ ನಾನು ಜೀವನದಲ್ಲಿ ಬಹುಮೂಲ್ಯವಾದುದನ್ನು ಕಳೆದುಕೊಳ್ಳುತ್ತಿದ್ದೆ ಎನಿಸಿತು.

ಭಾರತದಲ್ಲಿ ನಡೆದ ಎಲ್ಲ ಅಂತರ ರಾಷ್ಟ್ರೀಯ ಚಲನಚಿತ್ರ ಉತ್ಸವಗಳಲ್ಲಿ ತೆರೆ ಕಂಡಿರುವ ‘ಅಸ್ತು’ ಚಿತ್ರಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ತೀರ್ಪುಗಾರರ ವಿಶೇಷ ಮೆಚ್ಚುಗೆ ಪ್ರಶಸ್ತಿಯೂ ಸಿಕ್ಕಿದೆ. ‘ಅಸ್ತು’ ಸಿನಿಮಾಕ್ಕೆ ಆರಿಸಿಕೊಂಡಿರುವ ವಸ್ತುವೇ ಅಪರೂಪದ್ದು. ಕಥಾ ನಾಯಕ ಡಾ.ಚಕ್ರಪಾಣಿ ಶಾಸ್ತ್ರಿ ಒಬ್ಬ ದೊಡ್ಡ ಸಂಸ್ಕೃತ ವಿದ್ವಾಂಸ. ವಯಸ್ಸು 70ರ ಆಸುಪಾಸು. ಅವರು ಓರಿಯಂಟಲ್‌ ರೀಸರ್ಚ್ ಇನ್ಸ್ಟಿಟ್ಯೂಟ್‌ನ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಈಚೆಗೆ ಅವರಿಗೆ ಮರೆಗುಳಿತನ. ತಮ್ಮ ಹೆಸರನ್ನೂ ಮರೆಯುತ್ತಿದ್ದಾರೆ. ವೈದ್ಯರು ಅದಕ್ಕೆ ‘ಅಲ್ಜೈಮರ್‌’ ಎಂದು ಹೆಸರು ಇಟ್ಟಿದ್ದಾರೆ.

ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳು ವಿದೇಶದಲ್ಲಿ ಇದ್ದಾಳೆ. ಅವಳ ಹೆಸರು ರಾಹಿ. ಇನ್ನೊಬ್ಬಳು ಇವರು ಇರುವ ಊರಿನಲ್ಲಿಯೇ ಇದ್ದಾಳೆ. ಇವಳ ಹೆಸರು ಇರಾ. ಶಾಸ್ತ್ರಿ ಅವರ ಪತ್ನಿ ತೀರಿಕೊಂಡಿದ್ದಾಳೆ. ಬೇರೆ ಮನೆ ಮಾಡಿಕೊಂಡು ಇರುವ ಶಾಸ್ತ್ರಿ ಅವರನ್ನು ಒಂದು ದಿನ ಬೆಳಿಗ್ಗೆ ತನ್ನ ಮಗಳಿಗೆ ಬಟ್ಟೆ ಖರೀದಿಸಲು ಇರಾ ಕರೆದುಕೊಂಡು ಹೋಗುತ್ತಾಳೆ. ಆಕೆ ಅಂಗಡಿಗೆ ಹೋಗಿ ಬರುವುದರೊಳಗೆ ಶಾಸ್ತ್ರಿಗಳು ಕಾರು ಇಳಿದು ಒಂದು ಆನೆಯ ಬೆನ್ನು ಹತ್ತಿ ಹೊರಟು ಹೋಗುತ್ತಾರೆ. ಇಪ್ಪತ್ತು ಗಂಟೆಗಳ ಕಾಲ ಅವರನ್ನು ಹುಡುಕುವ ಇರಾ ಮತ್ತು ಆಕೆಯ ಕುಟುಂಬದ ಸುತ್ತಲಿನ ಕಥೆ ಇದು.

ಇರಾಗೆ ನೆನಪುಗಳು ಇವೆ. ಶಾಸ್ತ್ರಿಗಳಿಗೆ ನೆನಪಿನ ಶಕ್ತಿ ಕಳೆದು ಹೋಗಿದೆ. ಆನೆಯ ಬೆನ್ನು ಹತ್ತಿ ಹೋದ ಶಾಸ್ತ್ರಿಗಳು ಆನೆ ಸಾಕುವವನ ಕುಟುಂಬದ ಜತೆಗೆ ಕಾಲ ಕಳೆಯುತ್ತಾರೆ. ಇರಾಗೆ ತಂದೆಯ ಬದುಕಿನ ಸುತ್ತಲಿನ ನೆನಪುಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಇದು ಒಂದು ಕಡೆ ಅಪ್ಪ–ಮಗಳ ಕಥೆ. ಇನ್ನೊಂದು ಕಡೆ ತಾಯಿ–ಮಗನ ಕಥೆ. ಶಾಸ್ತ್ರಿಗಳು ಆನೆ ಸಾಕುವವನ ಹೆಂಡತಿಯಲ್ಲಿ ತಾಯಿಯನ್ನು ಕಾಣುತ್ತಾರೆ. ಕನ್ನಡ ಮಾತನಾಡುವ ಈ ಹೆಣ್ಣು ಮಗಳು ‘ಅಳಬ್ಯಾಡಾ ನನ ಕಂದಾ, ಹಾಲ ಮಾರಿ ಬರ್ತೇನೆ’ ಎಂದು ಹಾಡುವ ಹಾಡು ತನ್ನ ತಂದೆಯ ವಯಸ್ಸಿನ ಶಾಸ್ತ್ರಿಗಳನ್ನು ಕುರಿತೇ ಇದೆ. ‘ಅವ್ವ–ಅಪ್ಪನನ್ನು ನಾವು ಎಷ್ಟೇ ನೋಡಿಕೊಳ್ಳುತ್ತೇವೆ ಎಂದರೂ ಮಸಣದ ಹಾದಿವರೆಗೆ ಮಾತ್ರ’ ಎಂದು ಗೊತ್ತಿರುವ ಇರಾ ತನ್ನ ಬೇಜವಾಬ್ದಾರಿಯಿಂದಲೇ ತಂದೆ ತಪ್ಪಿಸಿಕೊಂಡರು ಎಂದು ಅಪರಾಧ ಪ್ರಜ್ಞೆಯಿಂದ ನರಳುತ್ತಾಳೆ.

ತನ್ನ ತಂದೆಯನ್ನು ತನ್ನ ಮನೆಯಲ್ಲಿ ಇಟ್ಟುಕೊಳ್ಳಲು ಆಗದ ಅಪರಾಧ ಭಾವವೂ ಆಕೆಯನ್ನು ಕಾಡುತ್ತ  ಇರುತ್ತದೆ. ಕಾಲೇಜಿಗೆ ಹೋಗುವ ಇರಾ ಮಗಳಿಗೂ ವಯೋವೃದ್ಧ ಶಾಸ್ತ್ರಿಗಳಿಗೂ ತಲೆಮಾರುಗಳ ಅಂತರ. ಮರೆಗುಳಿ ತಾತ ಸ್ನಾನದ ಮನೆಗೆ ಹೋಗುವಾಗ ಬಾಗಿಲು ಹಾಕಿಕೊಳ್ಳುವುದಿಲ್ಲ ಮತ್ತು ತನಗೆ ಒತ್ತಾಯ ಮಾಡಿ ಕೇಕ್‌ ತಿನ್ನಿಸುತ್ತಾನೆ ಎಂದು ಅಮ್ಮನ ಜತೆಗೆ ಆಕೆಗೆ ನಿತ್ಯ ಜಗಳ. ತಂದೆಯನ್ನು ವೃದ್ಧಾಶ್ರಮಕ್ಕೆ ಕಳಿಸಬೇಕು ಎಂದು ಇರಾ ಒಂದೆರಡು ಆಶ್ರಮಗಳಿಗೆ ಹೋಗಿಯೂ ಬರುತ್ತಾಳೆ. ಅಲ್ಲಿನ ಶೋಚನೀಯ ಸ್ಥಿತಿಗತಿ ಕಂಡು ವಾಪಸು ಮನೆಗೆ ಬರುತ್ತಾಳೆ.

ಅಲ್ಲಿ ಅಪ್ಪನನ್ನು ಇಡಲಾಗದು ಎಂದು ಆಕೆಗೆ ಗೊತ್ತಾಗುತ್ತದೆ. ಕೊನೆಗೆ ಅಪ್ಪನ ಮನೆಯಲ್ಲಿಯೇ ಒಬ್ಬ ಕೆಲಸದ ಹುಡುಗನನ್ನು ಜತೆ ಮಾಡಿ ಬಿಟ್ಟು ಬರುತ್ತಾಳೆ. ಆ ಹುಡುಗ ಶಾಸ್ತ್ರಿಗಳ ಮುಖಕ್ಷೌರವೂ ಸೇರಿದಂತೆ ಎಲ್ಲ ಸೇವೆ ಮಾಡುತ್ತಾನೆ. ಆತನಿಗೆ ಅಂದು ಪರೀಕ್ಷೆ ಎಂಬ ಕಾರಣಕ್ಕಾಗಿ ಒಂದು ದಿನದ ಮಟ್ಟಿಗೆ ಶಾಸ್ತ್ರಿಗಳನ್ನು ನೋಡಿಕೊಳ್ಳಬೇಕಿದ್ದ ಇರಾ ತಂದೆಯನ್ನು ಕರೆದುಕೊಂಡೇ ಮಾರುಕಟ್ಟೆಗೆ ಹೋಗುತ್ತಾಳೆ. ‘ಐದು ನಿಮಿಷದಲ್ಲಿ ಬರುತ್ತೇನಲ್ಲ’ ಎಂದು ಕಾರಿನ ಬಾಗಿಲು ಹಾಕದೆ ಹೋಗಿ ಬಿಡುತ್ತಾಳೆ.

ದಾರಿಯಲ್ಲಿ ಆನೆಯನ್ನು ಕಂಡಿದ್ದ ಶಾಸ್ತ್ರಿಗಳು ಕಾರಿನಿಂದ ಇಳಿದು ಹೋದವರು ಅದರ ಹಿಂದೆಯೇ ಹೊರಟು ಬಿಡುತ್ತಾರೆ. ಅವರು ಹೆಚ್ಚೂ ಕಡಿಮೆ ಈಗ ಮಗುವಿನ ಹಾಗೆಯೇ. ಆಗಾಗ ಅವರ ಬಾಯಿಯಿಂದ ಉದುರುವ ಸಂಸ್ಕೃತ ಶ್ಲೋಕ ಕೇಳಿ ಆನೆ ಸಾಕಿದವನ ಹೆಂಡತಿ ಈತ ಎಲ್ಲಿಯೋ ದೇವಾಂಶ ಸಂಭೂತನೇ ಇರಬೇಕು ಎಂದುಕೊಂಡು ಆತನ ಆರೈಕೆ ಮಾಡುತ್ತಾಳೆ. ಮಗುವಿನ ಹಾಗೆಯೇ ಪೈಜಾಮದಲ್ಲಿ ಮೂತ್ರ ಮಾಡಿಕೊಳ್ಳುವ ಶಾಸ್ತ್ರಿಗಳ ಬಟ್ಟೆಯನ್ನು ಆಕೆ ಬದಲಿಸುತ್ತಾಳೆ.

ನಗರದ ಮಗಳು ಇರಾ ತಂದೆಯನ್ನು ಟಬ್‌ನಲ್ಲಿ ಕೂಡ್ರಿಸಿ ಬಟ್ಟೆ ಕೊಟ್ಟು ಹೊರಗೆ ಬಂದಿರುತ್ತಾಳೆ. ಅಜ್ಜ ಬಾಗಿಲು ಹಾಕಿಕೊಳ್ಳುವುದಿಲ್ಲ ಎಂದು ಮೊಮ್ಮಗಳು ಜಗಳ ಮಾಡುತ್ತ ಇರುತ್ತಾಳೆ. ಕಥೆ ಹೀಗೆಯೇ ಸಮಾನಾಂತರವಾಗಿ ಬಿಚ್ಚಿಕೊಳ್ಳುತ್ತ ಸಂಬಂಧಗಳ ಗಟ್ಟಿತನವನ್ನು ಮತ್ತು ಪೊಳ್ಳುತನವನ್ನು ಏಕಕಾಲದಲ್ಲಿಯೇ ಅನಾವರಣ ಮಾಡುತ್ತ ಹೋಗುತ್ತದೆ. ನಗರವಾಸಿಗಳು, ಹಳ್ಳಿವಾಸಿಗಳು, ಸುಶಿಕ್ಷಿತರು, ಅಶಿಕ್ಷಿತರು ಮತ್ತು ಅವರ ಸಂಬಂಧಗಳ ನೆಲೆಗಳೂ ತೆರೆದುಕೊಳ್ಳುತ್ತ ಹೋಗುತ್ತವೆ.

ಇನ್ನೊಂದು ನೆಲೆಯಲ್ಲಿ ಭಾಷೆಯ ದುರಂತ ಸ್ಥಿತಿಯನ್ನೂ ಸಿನಿಮಾ ಧ್ವನಿಸುತ್ತದೆ. ಶಾಸ್ತ್ರಿಗಳ ಮಾತೃಭಾಷೆ ಮರಾಠಿ. ಆದರೆ, ಅವರು ಸಂಸ್ಕೃತದಲ್ಲಿಯೇ ಮಾತನಾಡುವುದು ಹೆಚ್ಚು. ಮರೆಗುಳಿತನ ಅಂಟಿಕೊಂಡ ನಂತರವಂತೂ ಅವರು ಹೇಳುವುದು ಒಂದೋ ಎರಡೋ ಸಂಸ್ಕೃತ ಶ್ಲೋಕಗಳನ್ನು ಮಾತ್ರ. ಅವರಿಗೆ ಮಾತೃಭಾಷೆ ಮರೆತೇ ಹೋಗಿದೆ. ಅವರು ಆನೆಗೆ ‘ಗಜ’ ಎಂದೇ ಕರೆಯುತ್ತಾರೆ. ತಾಯಿಗೆ ಆಯಿ ಅನ್ನುವ ಬದಲು ‘ಮಾ’ ಎನ್ನುತ್ತಾರೆ. ನೂರೆಂಟು ವಾಹನಗಳು ಗಿಜಿಗಿಡುವ ಮಾರುಕಟ್ಟೆಯಲ್ಲಿ ಈ ಸಂಸ್ಕೃತ ವಿದ್ವಾಂಸ ಆನೆ ಮೇಲೆ ಕುಳಿತು ಹೋದರೂ ಅವರ ವಿದ್ವತ್ತಿಗೆ ಏನೂ ಬೆಲೆ ಇರುವುದಿಲ್ಲ. ನೆನಪಿನಿಂದ ದೂರ ಉಳಿದ ಮನುಷ್ಯನ ದುರಂತದ ಜತೆಗೆ ಜನರಿಂದ ದೂರ ಹೋದ ಭಾಷೆಯ ದುರಂತವೂ ಬಯಲಾಗುತ್ತದೆ.

ಕಳೆದು ಹೋದ ತನ್ನ ತಂದೆಯನ್ನು ಹುಡುಕುತ್ತಲೇ ಬದುಕಿನ ಅರ್ಥವನ್ನೂ ಇರಾ ಶೋಧಿಸುತ್ತಾಳೆ. ತನ್ನ ತಂದೆ ಮತ್ತು ತಾಯಿಯ ನಡುವಿನ ಸಂಬಂಧದಲ್ಲಿನ ಸಂಶಯದ ಬಿರುಕು. ಮತ್ತು ಅದಕ್ಕೆ ತನ್ನ ತಂದೆ ತನ್ನ ಸಹೋದ್ಯೋಗಿ ಜತೆ ಕಾಪಾಡಿಕೊಂಡ ‘ರಹಸ್ಯ ಒಪ್ಪಂದ’ ಕಾರಣವಾದುದು. ತನ್ನ ತಂಗಿಗೆ ತನ್ನ ತಂದೆಯ ಬಗ್ಗೆ ಅಂಥ ಪ್ರೀತಿಯೇನೂ ಇಲ್ಲದೇ ಇದ್ದುದು. ತನ್ನ ಜೀವನದ ಕೋಟಲೆಗಳು... ಸಿನಿಮಾದ ಕೊನೆಯಲ್ಲಿ ಸಿಗುವ ತಂದೆಯನ್ನು ‘ಅಪ್ಪಾ’ ಎಂದು ತಬ್ಬಿಕೊಳ್ಳಲು ಹೋಗುವ ಮಗಳು. ಅದುವರೆಗೆ ತನ್ನನ್ನು ಸಾಕಿ ಸಲುಹಿದ ಹಳ್ಳಿಯ ಕನ್ನಡದ ಹೆಣ್ಣುಮಗಳನ್ನು ‘ಅವ್ವಾ’ ಎಂದು ತಬ್ಬಿಕೊಳ್ಳಲು ಹೋಗುವ ತಂದೆ... ಅಂತಿಮವಾಗಿ ಜೀವನದಲ್ಲಿ ಎಲ್ಲರೂ ಹಂಬಲಿಸುವುದು ಚೂರುಪಾರು ಪ್ರೀತಿಗಾಗಿ ಮಾತ್ರ ಎಂದು ಸಿನಿಮಾ ಹೇಳುವಂತೆ ಕಾಣುತ್ತದೆ.

ಸ್ವತಃ ಮನಃಶಾಸ್ತ್ರಜ್ಞರಾದ ಡಾ.ಮೋಹನ ಅಗಾಶೆ ಮತ್ತು ಇರಾವತಿ ಹರ್ಷೆ ತಂದೆ ಮಗಳ ಪಾತ್ರದಲ್ಲಿ ಇಡೀ ಸಿನಿಮಾವನ್ನು ಆವರಿಸಿದ್ದಾರೆ. ನಮ್ಮ ಎಲ್ಲ ಆಂತರಿಕ ತುಮುಲಗಳನ್ನು ಇರಾವತಿ ಅತ್ಯಂತ ಸಹಜ ಎನ್ನುವಂತೆ ಅಭಿವ್ಯಕ್ತಿ ಮಾಡಿದ್ದಾರೆ. ಅಗಾಶೆ ಒಬ್ಬ ಅಂತರರಾಷ್ಟ್ರೀಯ ಮಟ್ಟದ ನಟ. ಅವರು ಪಾತ್ರವನ್ನು ಅಭಿನಯಿಸಿದ್ದಾರೆಯೇ  ಅಥವಾ ಬದುಕಿದ್ದಾರೆಯೇ ಎಂದು ಹೇಳುವುದು ಕಷ್ಟ.

ಯಾವ ಗ್ಲಾಮರ್‌, ಮೆಲೊಡ್ರಾಮಾ ಇಲ್ಲದೆ, ಕೈಯಲ್ಲಿ ಹಿಡಿದುಕೊಳ್ಳುವ ಕ್ಯಾಮೆರಾದಿಂದಲೇ ಇಡೀ ಸಿನಿಮಾ ಷೂಟ್‌ ಮಾಡಿರುವ ನಿರ್ದೇಶಕರಾದ ಸುಮಿತ್ರಾ ಭಾವೆ ಮತ್ತು ಸುನಿಲ್‌ ಸುಖ್ತಂಕರ್‌ ‘ಅಸ್ತು’ ಚಿತ್ರದ ಮೂಲಕ ಒಂದು ಸಾರ್ಥಕ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ... ಯಾರಿಗೆ ಕೃತಜ್ಞತೆ ಹೇಳಲಿ? ಸಿನಿಮಾ ನೋಡು ಎಂದು ಹೇಳಿದ ದೂರದ ಗೆಳೆಯನಿಗೇ? ಇರಾಳಿಗೇ? ಶಾಸ್ತ್ರಿಗಳಿಗೇ?...ಅಥವಾ ನನ್ನ ಅವ್ವನಂತೆ ‘ಅಳಬ್ಯಾಡಾ ನನ ಕಂದಾ...’ ಎಂದು ಹಾಡಿದ ಆ ಕನ್ನಡದ ಹೆಣ್ಣು ಮಗಳಿಗೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.