ADVERTISEMENT

ಸರ್ಕಾರಕ್ಕೆ ಇಚ್ಛಾಶಕ್ತಿ ಇರುವುದಿಲ್ಲ ಎಂಬುದು ಎಷ್ಟು ನಿಜ ಅಲ್ಲವೇ?

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:10 IST
Last Updated 16 ಜೂನ್ 2018, 9:10 IST

ಇದು ತೀರಾ ಅನಿರೀಕ್ಷಿತವೇನೂ ಆಗಿರಲಿಲ್ಲ. ಹೀಗೆಯೇ ಆಗುತ್ತದೆ ಎಂದು ನಾವೆಲ್ಲ ಗೆಳೆಯರು ಮಾತನಾಡಿಕೊಂಡಿದ್ದೆವು. ಅಂದುಕೊಂಡಂತೆಯೇ ಆಗಿದೆ. ದೇವನೂರ ಮಹಾದೇವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿರಾಕರಿಸಿದ್ದಾರೆ. ‘ಕನ್ನಡದ ವಿಚಾರದಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿ ಎಂಬುದು ಇರುವುದಿಲ್ಲ’ ಎಂದು ಅವರು ಕೊರಗಿದ್ದಾರೆ. ಕನ್ನಡ ಕುರಿತಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಅವರು ದೊಡ್ಡ ತ್ಯಾಗವನ್ನೇ ಮಾಡಿದ್ದಾರೆ. ಬಾಹುಬಲಿಯೂ ಹೀಗೆಯೇ ರಾಜ್ಯವನ್ನೇ ತ್ಯಾಗ ಮಾಡಿದ್ದ. ಬೆಟ್ಟದ ಮೇಲೆ ನಿಂತುಕೊಂಡು ಎಲ್ಲರನ್ನು ಕುಬ್ಜರಾಗಿ ಕಾಣುವಂತೆ ಮಾಡಿದ. ದೇವನೂರರು ತಮ್ಮ ತೀರ್ಮಾನವನ್ನು ತ್ಯಾಗ ಎಂದು ಒಪ್ಪಲಾರರು. ಆದರೆ, ಅವರು ನಾವೆಲ್ಲ ಮತ್ತೆ ಮತ್ತೆ ಕುಬ್ಜರಾಗಿ ಕಾಣುವಂತೆ ಮಾಡಿ ಬಿಡುತ್ತಾರೆ. ತಾವು ಮಾತ್ರ ಬಾಹುಬಲಿಯ ಹಾಗೆ ಎತ್ತರಕ್ಕೆ ಎದ್ದು ನಿಲ್ಲುತ್ತಾರೆ... ಹಾಗೆಂದು ಸಾಹಿತ್ಯ ಸಮ್ಮೇಳನ ನಿಲ್ಲುತ್ತದೆಯೇ? ನಿಲ್ಲುವುದಿಲ್ಲ. ಇನ್ನೊಬ್ಬರು ಸಮ್ಮೇಳನದ ಅಧ್ಯಕ್ಷರಾಗುತ್ತಾರೆ. ತೇರು ಮುಂದೆ ಸಾಗುತ್ತದೆ; ದೇವನೂರರು ಎತ್ತಿದ ಪ್ರಶ್ನೆ ಹಾಗೆಯೇ ಉಳಿಯುತ್ತದೆ.
ಸರ್ಕಾರಕ್ಕೆ, ಅದು ಯಾವುದೇ ಇರಲಿ, ಅದಕ್ಕೆ ಭಾಷೆ ಎಂಬುದು ಒಂದು ಆದ್ಯತೆಯ ವಿಚಾರವೇ? ಕಾಳಜಿಯ ಸಂಗತಿಯೇ? ಈ ಪ್ರಶ್ನೆ ನನಗೆ ಅನೇಕ ವರ್ಷಗಳಿಂದ ಕಾಡಿದೆ. ಉತ್ತರ ‘ಅಲ್ಲ’ ಎಂದೇ ಸಿಕ್ಕಿದೆ. ರಾಜ್ಯ ರಚನೆಯಾಗಿ 58 ವರ್ಷಗಳೇ ಕಳೆದು ಹೋಗಿವೆ. ಯಾರಾದರೂ ಮುಖ್ಯಮಂತ್ರಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಅಥವಾ ಶಿಕ್ಷಣ ಖಾತೆ ತನ್ನ ಬಳಿ ಇರಲಿ ಎಂದು ಬಯಸಿ ಇಟ್ಟುಕೊಂಡಿದ್ದಾರೆಯೇ? ಹಣಕಾಸು, ಗೃಹ, ಅಬಕಾರಿ ಖಾತೆಗಳನ್ನು ಯಾರಾದರೂ ಮುಖ್ಯಮಂತ್ರಿ ಬಿಟ್ಟುಕೊಡಲು ಬಯಸುತ್ತಾರೆಯೇ? ಏಕೆ ಹೀಗೆ?

ರಾಜ್ಯ ಸರ್ಕಾರ ಮೊನ್ನೆ ಅನೇಕ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರಗಳೂ ಅದರಲ್ಲಿ ಸೇರಿಕೊಂಡಿವೆ. ಇವೆರಡೂ ಸಾಮಾನ್ಯ ನಿಗಮ ಅಥವಾ ಮಂಡಳಿಗಳು ಅಲ್ಲ. ಉಳಿದ ನಿಗಮ ಮತ್ತು ಮಂಡಳಿಗಳ ಜತೆಗೇ ಈ ಎರಡೂ ಪ್ರಾಧಿಕಾರಗಳಿಗೆ ನೇಮಕಾತಿ ಆದೇಶ ಹೊರಡಿಸಿದ್ದನ್ನು ನೋಡಿದರೆ ಸರ್ಕಾರ, ರಾಜಕೀಯ ದೃಷ್ಟಿಯಿಂದಲೇ ಈ ನೇಮಕಗಳನ್ನೂ ಮಾಡಿದೆ ಎಂದು ಅರ್ಥವಾಗುತ್ತದೆ. ಈ ಪ್ರಾಧಿಕಾರಗಳಿಗೆ ರಾಜಕೀಯ ನೇಮಕಾತಿ ಆಗಬಾರದು. ಅವು ರಾಜಕೀಯೇತರ ಸಂಸ್ಥೆಗಳು. ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಇದು ಎರಡನೇ ಅವಧಿ. ಆದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಾಗೆ ಅಲ್ಲ. ಅಲ್ಲಿ ಹಿಂದೆ ಅಧ್ಯಕ್ಷರಾದವರು ಬಹುಪಾಲು ಕನ್ನಡದ ಹೋರಾಟಗಾರರು, ಪ್ರಾಧ್ಯಾಪಕರು, ಕನ್ನಡದ ಬಗ್ಗೆ ಕಾಳಜಿ ಇದ್ದವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ.ಎಲ್‌.ಹನುಮಂತಯ್ಯ ಅವರ ಕನ್ನಡದ ಕಾಳಜಿಯನ್ನು ನಾನು ಪ್ರಶ್ನೆ ಮಾಡುತ್ತಿಲ್ಲ. ಆದರೆ, ಇದು ಪಕ್ಷಾತೀತ ನೇಮಕವಾಗಿದ್ದರೆ ಹೆಚ್ಚು ಸಂತೋಷವಾಗುತ್ತಿತ್ತು. ಬಿಜೆಪಿ ಮಾಡಿದ ತಪ್ಪನ್ನೇ ಕಾಂಗ್ರೆಸ್‌ ಪಕ್ಷವೂ ಮಾಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದವರು ಮುಖ್ಯಮಂತ್ರಿಯನ್ನೂ ತರಾಟೆಗೆ ತೆಗೆದುಕೊಳ್ಳುವಂಥ ಗಟ್ಟಿಗರಾಗಿರಬೇಕು. ಸಚಿವರು ಅಧಿಕಾರಿಗಳನ್ನಂತೂ ಕೇಳುವುದೇ ಬೇಡ. ಹನುಮಂತಯ್ಯ ತೀರಾ ಈಚಿನ ವರೆಗೆ ಕಾಂಗ್ರೆಸ್‌ ಪಕ್ಷದ ವಕ್ತಾರರಾಗಿ ಕೆಲಸ ಮಾಡಿದವರು. ಅದು ಅವರಿಗೆ ಒಂದು ಮಿತಿ ಅಲ್ಲವೇ? ಆದರೆ, ನಮಗೆ ನಾವೇ ಸಮಾಧಾನ ಮಾಡಿಕೊಳ್ಳುವುದಕ್ಕಾಗಿ, ಹನುಮಂತಯ್ಯ ಮೂಲತಃ ಕವಿಯಾದುದರಿಂದ ಪಕ್ಷದ ಹಂಗನ್ನು ತೊರೆದು ಕನ್ನಡದ ಕೆಲಸ ಮಾಡಿಯಾರು ಎಂದು ಆಶಿಸಬಹುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡಬೇಕಾದ ಕೆಲಸ ಬಹಳ ಇದೆ; ಒಂದು ಅರ್ಥದಲ್ಲಿ ಅದು ಎಂದೂ ಮುಗಿಯದ ಕೆಲಸ.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ವಿಚಾರದಲ್ಲಿ ಇದೇ ಮಾತು ಹೇಳುವಂತೆ ಇಲ್ಲ. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಕೋರವಾರ ಗ್ರಾಮದ ಸುಭಾಷ್‌ ಛಾಯಾಗೋಳ್‌ ಅವರು ಗಡಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಛಾಯಾಗೋಳ್‌ ಒಬ್ಬ ಕಾಂಗ್ರೆಸ್‌ ಕಾರ್ಯಕರ್ತ. ‘ವಿಜಯಪುರ ಜಿಲ್ಲೆಯ ಕಾಂಗ್ರೆಸ್‌ ರಾಜಕಾರಣಕ್ಕೆ ಅವರ ನೇಮಕ ಅಗತ್ಯವಾಗಿತ್ತಂತೆ’. ಹಾಗಿದ್ದರೆ ಛಾಯಾಗೋಳ್‌ ಅವರನ್ನು ಇನ್ನು ಯಾವುದಾದರೂ ನಿಗಮ ಅಥವಾ ಮಂಡಳಿಗೆ ನೇಮಕ ಮಾಡಬೇಕಿತ್ತು. ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಲ್ಲ. ಈ ಪ್ರಾಧಿಕಾರವನ್ನು ಹುಟ್ಟಿ ಹಾಕಿದ್ದರ ಹಿಂದೆ ಒಂದು ಇತಿಹಾಸ ಇದೆ; ನಿರ್ದಿಷ್ಟ ಕಾರಣ ಇದೆ.

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಪ್ರೊ.ಬರಗೂರು ರಾಮಚಂದ್ರಪ್ಪ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಅವರು 2002ರ ಮಾರ್ಚ್ ನಲ್ಲಿ ಸರ್ಕಾರಕ್ಕೆ ಗಡಿ ಪ್ರದೇಶಗಳ ಅಭಿವೃದ್ಧಿ ಕುರಿತು ಒಂದು ದೀರ್ಘ ವರದಿ ಕೊಟ್ಟಿದ್ದರು. ರಾಜ್ಯದ ಒಟ್ಟು ತಾಲ್ಲೂಕುಗಳ ಪೈಕಿ 52 ತಾಲ್ಲೂಕುಗಳು ಗಡಿ ತಾಲ್ಲೂಕುಗಳು ಎಂದು ಅವರು ಗುರುತಿಸಿದ್ದರು. ಅದು ಗಣನೀಯವಾಗಿ ದೊಡ್ಡ ಸಂಖ್ಯೆ. ಆ ತಾಲ್ಲೂಕುಗಳು ಮತ್ತು ಅವುಗಳ ವ್ಯಾಪ್ತಿಯ 199 ಹೋಬಳಿಗಳಲ್ಲಿನ ಕನ್ನಡದ ಸ್ಥಿತಿಗತಿಯನ್ನು ಅಧ್ಯಯನ ಮಾಡಿ 33 ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಅದರಲ್ಲಿ ಇದ್ದ ಶಿಫಾರಸುಗಳು ಮುಖ್ಯವಾಗಿ ನಾಲ್ಕು:
1. ಗಡಿ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಬೇಕು. 2. ಕನ್ನಡ ಮಾಧ್ಯಮದ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. 3. ಸರ್ಕಾರಿ ಅಧಿಕಾರಿಗಳಿಗೆ ಅವರ ಸೇವಾವಧಿಯಲ್ಲಿ ಮೂರು ವರ್ಷಗಳ ಕಾಲ ಗಡಿ ಭಾಗದಲ್ಲಿ ಸೇವೆ ಮಾಡುವುದನ್ನು ಕಡ್ಡಾಯ ಮಾಡಬೇಕು ಮತ್ತು
4. ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಬರಗೂರರಿಗಿಂತ ಮುಂಚೆ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವಾಟಾಳ್‌ ನಾಗರಾಜ್‌ ಅವರೂ ಈ ಕುರಿತು ಒಂದು ವರದಿ ಸಲ್ಲಿಸಿದ್ದರು. ಆದರೆ, ಗಡಿ ಪ್ರದೇಶ ಅಭಿವೃದ್ಧಿ ಕುರಿತಂತೆ ಈಗಲೂ ಬರಗೂರು ವರದಿಯೇ ಹೆಚ್ಚು ಸಮಗ್ರವಾದುದು. ಮತ್ತು ಎಲ್ಲಿಯಾದರೂ ಗಡಿಯಲ್ಲಿ ಸಮ್ಮೇಳನ ನಡೆದರೆ ಬರಗೂರು ವರದಿ ಜಾರಿಯಾಗಲಿ ಎಂಬ ನಿರ್ಣಯ ಇದ್ದೇ ಇರುತ್ತದೆ.
 
ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದರು. ಅವರೂ ರಾಜಕೀಯ ಮೀರಿ ಯೋಚನೆ ಮಾಡಲಿಲ್ಲ. ತಮ್ಮ ಸರ್ಕಾರದಲ್ಲಿ ಮಂತ್ರಿಯಾಗಬೇಕಿದ್ದ ಚಂದ್ರಕಾಂತ ಬೆಲ್ಲದ್‌ ಅವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಮಾಧಾನ ಮಾಡಿದ್ದರು. ಈ ಪ್ರಾಧಿಕಾರ ಎಷ್ಟು ನಿಷ್ಕ್ರಿಯವಾಗಿತ್ತು ಎಂಬುದೆಲ್ಲ ಈಗ ಜನಜನಿತ ಮಾತು. ತನಗೆ ಒದಗಿಸಿದ್ದ ಅನುದಾನದಲ್ಲಿ 25 ಕೋಟಿ ರೂಪಾಯಿಗಳನ್ನು ಬೆಲ್ಲದ್‌ ಅಧ್ಯಕ್ಷತೆಯ ಪ್ರಾಧಿಕಾರ ಸರ್ಕಾರಕ್ಕೆ ವಾಪಸು ಮಾಡಿತು. ಒಬ್ಬಿಬ್ಬರು ಸದಸ್ಯರು ಆಸಕ್ತಿಯಿಂದ ಕೆಲಸ ಮಾಡಿದರು. ಉಳಿದವರು ಸಭೆಗೆ ಬಂದು ವಾಪಸು ಹೋದರು.

ಹಾಗಾದರೆ ರಾಜ್ಯದ ಗಡಿಯಲ್ಲಿ ಯಾವ ಸಮಸ್ಯೆಯೂ ಇಲ್ಲವೇ? ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡ ಆಂಧ್ರದ ಅನಂತಪುರ, ಕರ್ನೂಲು, ಮೆದಕ, ಮೆಹಬೂಬ್‌ನಗರ ಮುಂತಾದ ಜಿಲ್ಲೆಗಳ 84 ಹಳ್ಳಿಗಳ ಮಕ್ಕಳಿಗೆ ತೀರಾ ಈಚಿನವರೆಗೆ ಕನ್ನಡದ ಪಠ್ಯಪುಸ್ತಕಗಳು ಸಿಗುತ್ತಿರಲಿಲ್ಲ. ಬೆಳಗಾವಿ ಜಿಲ್ಲೆಯ ಅಥಣಿಗೆ ಹೊಂದಿಕೊಂಡ ಗಡಿಯಲ್ಲಿನ ಅಭಿವೃದ್ಧಿ ವಂಚಿತ 20 ಗ್ರಾಮಗಳು ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ನಿರ್ಣಯ ತೆಗೆದು ಕೊಂಡು ಬಹಳ ವರ್ಷಗಳೇನೂ ಆಗಿಲ್ಲ. ಮಹಾರಾಷ್ಟ್ರದಲ್ಲಿ ಕನ್ನಡದ ಶಾಲೆಗಳು ಒಂದೊಂದಾಗಿ ಕಣ್ಣು ಮುಚ್ಚುತ್ತಿವೆ. ಅಲ್ಲಿನ ಸರ್ಕಾರ, ಕನ್ನಡದ ಶಾಲೆಗಳಿಗೆ ಅನುದಾನ ಕೊಡುವುದನ್ನು ನಿಲ್ಲಿಸುತ್ತಿದೆ. ಶಿಕ್ಷಕರಿಗೆ ಸಂಬಳವನ್ನೂ ಕೊಡುತ್ತಿಲ್ಲ. ಈಗ ಬೆಳಗಾವಿ ಮತ್ತು ಕರ್ನಾಟಕದ ವ್ಯಾಪ್ತಿಯ 854 ಹಳ್ಳಿಗಳನ್ನು ತನಗೆ ಕೊಡಬೇಕು ಎಂದು ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಿದೆ. ತಮಿಳುನಾಡು ಹಾಗೂ ಕೇರಳದಲ್ಲಿನ ಕನ್ನಡ ಸ್ಥಿತಿಯೂ ಅಷ್ಟೇನು ಉತ್ತಮವಾಗಿಲ್ಲ. ಬರಗೂರು ರಾಮಚಂದ್ರಪ್ಪ ವರದಿಯಲ್ಲಿ, ಗಡಿ ಪ್ರದೇಶದ ಇಂಥೆಲ್ಲ ಶೈಕ್ಷಣಿಕ ಬಿಕ್ಕಟ್ಟುಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ, ಗಡಿ ಶಿಕ್ಷಣ ನಿರ್ದೇಶನಾಲಯದ ರಚನೆಗೆ ಒತ್ತು ಕೊಡಲಾಗಿತ್ತು. ಈಗಲೂ ಅದು ಬರೀ ಶಿಫಾರಸು ಆಗಿಯೇ ಉಳಿದುಕೊಂಡಿದೆ.

ಗಡಿ ಜಿಲ್ಲೆಗಳಲ್ಲಿ ವಾಸ ಮಾಡುವ ಕನ್ನಡಿಗರ ಕಷ್ಟಗಳು ಒಂದೆರಡಲ್ಲ. ಅವರು ಪಕ್ಕದ ರಾಜ್ಯದ ಬಲಿಷ್ಠ ಭಾಷೆಯ ನೆರಳಿನಲ್ಲಿಯೇ ಬದುಕಬೇಕಾಗುತ್ತದೆ. ಬೆಳಗಾವಿಯಲ್ಲಿ ಕೆಲಸ ಮಾಡಿದವನು ನಾನು. ಅಲ್ಲಿ ಮರಾಠಿ ಭಾಷೆ ಎಷ್ಟು ಪ್ರಬಲವಾಗಿದೆ ಎಂದರೆ ತೀರಾ ಈಚಿನವರೆಗೆ ಅಲ್ಲಿನ ಕನ್ನಡಿಗರಿಗೆ ಅನಾಥ ಪ್ರಜ್ಞೆ ಕಾಡುತ್ತಿತ್ತು. ಈಗ ಅಲ್ಲಿ ಸುವರ್ಣ ಸೌಧ ಇತ್ಯಾದಿ ಎಲ್ಲ ಆಗಿ ಪರಿಸ್ಥಿತಿ ಒಂದಿಷ್ಟು ಬದಲಾಗಿದೆ. ಆದರೆ, ಅದೇ ಜಿಲ್ಲೆಯ ಗಡಿ ಭಾಗದಲ್ಲಿ ನಿತ್ಯವೂ ಕನ್ನಡದ ದೀಪ ಹಚ್ಚಿಕೊಂಡು ಕುಳಿತವರು ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ. ಹಾಗೆಯೇ ಬಳ್ಳಾರಿ ಗಡಿಯ ಆಂಧ್ರದ ಅನೇಕ ಹಳ್ಳಿಗಳಲ್ಲಿ, ಚಾಮರಾಜನಗರ ಗಡಿಯ ತಮಿಳುನಾಡಿನ ಹಲವು ಹಳ್ಳಿಗಳಲ್ಲಿ ಕನ್ನಡದ ದೀಪ ಹಚ್ಚಿಕೊಂಡು ಕುಳಿತವರೂ ಅನೇಕ ಮಂದಿ ಇದ್ದಾರೆ. ಕಾಸರಗೋಡಿನಲ್ಲಿ ಹಿರಿಯ ಜೀವ ಕಯ್ಯಾರ ಕಿಂಞಣ್ಣ ರೈ ಅವರಂತೂ ಕನ್ನಡದ ದೀಪವನ್ನು ಎರಡೂ ಕೈಗಳ ನಡುವೆ ಜೀವದಂತೆ ಹಿಡಿದುಕೊಂಡು ಅದು ಆರದಂತೆ ನೋಡಿಕೊಳ್ಳುತ್ತಿದ್ದಾರೆ. ಅವರಿಗೆಲ್ಲ ಸರ್ಕಾರ ಏನು ಸಮಾಧಾನ ಹೇಳುತ್ತದೆ? ಅವರ ಬಗೆಗೆ ಕಾಳಜಿಯನ್ನು ವ್ಯಕ್ತಪಡಿಸುವುದು ಅಂದರೆ ಏನು ಮತ್ತು ಹೇಗೆ?
ಗಡಿನಾಡ ಕನ್ನಡಿಗರ ಸಂಕಟಗಳನ್ನು, ನೋವುಗಳನ್ನು ಅರ್ಥ ಮಾಡಿಕೊಂಡವರು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಬೇಕು. ಯಾವುದಾದರೂ ಇರಲಿ ಒಂದು ಗೂಟದ ಕಾರು ಇರಲಿ ಎಂದು ಬಯಸುವವರು ಅಲ್ಲ. ಬಯಸುವವರು ಏನನ್ನಾದರೂ ಬಯಸುತ್ತಾರೆ. ಕೊಡುವವರಿಗೆ ಯೋಚನೆ ಇರಬೇಕು. ಯಾವುದನ್ನು ಯಾರಿಗೆ ಕೊಡಬೇಕು ಎಂದು ಚಿಂತಿಸಬೇಕಾದುದು ಸರ್ಕಾರದ ಹೊಣೆ ಮತ್ತು ಜವಾಬ್ದಾರಿ.  ಉದ್ದೇಶವಿಲ್ಲದ ನಿರ್ಣಯಗಳಿಂದ ಯಾವ ಗುರಿಯ ಸಾಧನೆಯೂ ಆಗುವುದಿಲ್ಲ. ರಾಜ್ಯ ಯೋಜನಾ ಮಂಡಳಿಗೆ ಉಪಾಧ್ಯಕ್ಷರ ನೇಮಕ ಆಗಿ ಆರು ತಿಂಗಳೇ ಆಯಿತು. ಇದುವರೆಗೆ ಅದಕ್ಕೆ ಸದಸ್ಯರ ನೇಮಕ ಆಗಿಲ್ಲ. ಮತ್ತೆ, ಉಪಾಧ್ಯಕ್ಷರು ಹೇಗೆ ಕೆಲಸ ಮಾಡಬೇಕು? ಅದಕ್ಕೇ ಇರಬೇಕು ಅವರು ಒಮ್ಮೆ ದೇವೇಗೌಡರನ್ನು ಹೊಗಳುತ್ತಾರೆ. ಇನ್ನೊಮ್ಮೆ ಬಿಜೆಪಿಗೆ ಸೇರುತ್ತಾರೆ ಎಂದು ಸುದ್ದಿ ಹಬ್ಬಿಸುತ್ತಾರೆ. ಮಗದೊಮ್ಮೆ ದೆಹಲಿಗೆ ಹೋಗಿ ಸೋನಿಯಾ ಗಾಂಧಿಯವರನ್ನು ‘ಕಂಡು’ ಸಿದ್ದರಾಮಯ್ಯ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿ ಬರುತ್ತಾರೆ! ಇದು ಅವರಿಗೆ ವಹಿಸಿದ ಕೆಲಸವೇ? ಇರಲಾರದು. ಅವರ ಕೆಲಸ ಬೇರೆಯದೇ ಇದೆ. ಈಗ ಕಳೆದು ಹೋದ ಆರು ತಿಂಗಳು ಮತ್ತೆ ಅವರಿಗೆ ಬರುತ್ತವೆಯೇ?

ಕಳೆದ ಅವಧಿಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಯುವಾಗಲೂ ಹೀಗೆಯೇ ಆರು ತಿಂಗಳು ಕಳೆದು ಹೋಗಿದ್ದುವು. ಈಗಲೂ ಈ ಸರ್ಕಾರವೂ ಪ್ರಾಧಿಕಾರಕ್ಕೆ ಸದಸ್ಯರನ್ನು ನೇಮಿಸಲು ಎಷ್ಟು ದಿನ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ. ಅದಕ್ಕೂ ಮುಖ್ಯಮಂತ್ರಿಗಳು ಮತ್ತು ಪಕ್ಷದ ಅಧ್ಯಕ್ಷರು ಜತೆಯಾಗಿ ಕುಳಿತುಕೊಳ್ಳಬೇಕು. ಪಟ್ಟಿಯನ್ನು ಸಿದ್ಧ  ಮಾಡಬೇಕು. ಸೋನಿಯಾ ಮತ್ತು ರಾಹುಲ್‌ ಅವರ ವೇಳೆ ಕೇಳಬೇಕು. ಅವರ ಸಮ್ಮತಿ ಪಡೆಯಬೇಕು. ಅಲ್ಲಿಯವರೆಗೆ ಗಡಿಯಲ್ಲಿನ ಕನ್ನಡಿಗರು ಬಾಯಿಯಲ್ಲಿ ಎಳ್ಳು ನೀರು ಹಾಕಿಕೊಂಡು ಕಾಯುತ್ತ ಇರಬೇಕು.

ಸರ್ಕಾರಕ್ಕೆ ಇಚ್ಛಾಶಕ್ತಿ ಇರುವುದಿಲ್ಲ ಎಂದು ದೇವನೂರರು ಹೇಳಿದ್ದು ಎಷ್ಟು ಸತ್ಯ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT