ಎರಡು ವಾರಗಳ ಹಿಂದೆ ಬಿಡುಗಡೆಯಾದ 2011ರ ಸಾಮಾಜಿಕ-ಆರ್ಥಿಕ ಜಾತಿ ಗಣತಿ (ಎಸ್‌ಇಸಿಸಿ) ಮಾಹಿತಿಯು ಗ್ರಾಮೀಣ ವಲಯದ ಬಡತನದ ಕರಾಳ ಚಿತ್ರವನ್ನು ನಮ್ಮ ಮುಂದಿಟ್ಟಿದೆ. ಇತ್ತೀಚಿನ ದಶಕಗಳಲ್ಲಿ ಬಡತನ ಕಡಿಮೆಯಾಗುತ್ತಿದೆ ಎಂಬ ಆಶಾವಾದದ, ಭರವಸೆಯ ಕಥನವನ್ನು ಇಲ್ಲಿಯವರೆಗಿನ ಎಲ್ಲ ಸಮೀಕ್ಷೆಗಳು ಹೇಳುತ್ತಿದ್ದವು. ಹೊಸದಾಗಿ ಲಭ್ಯವಾಗಿರುವ ಮಾಹಿತಿಯ ಪ್ರಕಾರ 49% ಗ್ರಾಮೀಣ ಕುಟುಂಬಗಳು ಬಡತನದ ಸ್ಪಷ್ಟ ಸೂಚನೆಗಳನ್ನು ತೋರಿಸುತ್ತಿವೆ. 51% ಗ್ರಾಮೀಣ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗೆ ಕೂಲಿ ಕೆಲಸದ ಮೇಲೆಯೇ ಅವಲಂಬಿತವಾಗಿವೆ.
ಈ ಸಮೀಕ್ಷೆಯು ಗ್ರಾಮೀಣ ಬದುಕಿನ ವಾಸ್ತವವನ್ನು ಗುರುತಿಸಲು ಏಳು ಬಗೆಯ ಅಭಾವಗಳನ್ನು ಗುರುತಿಸಿತ್ತು. ಇವುಗಳ ಪೈಕಿ, ಬಹುಮುಖ್ಯ ಅಭಾವವಾಗಿ ಗುರುತಿಸಲ್ಪಟ್ಟಿರುವುದು 5.4 ಕೋಟಿ ಕುಟುಂಬಗಳು ಭೂಮಿಯ ಒಡೆತನವನ್ನು ಹೊಂದಿಲ್ಲ ಎಂಬ ಅಂಶವನ್ನು. ಅಂದರೆ 30%ನಷ್ಟು ಗ್ರಾಮೀಣ ಕುಟುಂಬಗಳ ಸದಸ್ಯರು ಭೂರಹಿತರು ಮತ್ತು ಕೂಲಿಕಾರ್ಮಿಕರಾಗಿ ಜೀವನ ನಿರ್ವಹಿಸುತ್ತಾರೆ. ಈ ಕುಟುಂಬಗಳು ಮತ್ತೊಂದು ಅಭಾವದಿಂದ ಪೀಡಿತವಾಗಿದ್ದರೆ ಬದುಕು ಬಹುಮಟ್ಟಿಗೆ ದುಸ್ತರವಾಗುತ್ತದೆ ಎಂದು ಸಮೀಕ್ಷೆ ಹೇಳುತ್ತದೆ. ಈ ವಾಸ್ತವ ಸುಮಾರು 30% ಗ್ರಾಮೀಣ ಕುಟುಂಬಗಳನ್ನು ಕಾಡುತ್ತಿದೆ.
ಭೂಒಡೆತನ ಮತ್ತು ಗ್ರಾಮೀಣ ಜೀವನದ ಸುಭದ್ರತೆಯ ನಡುವೆ ಹೀಗೆ ಕೊಂಡಿಹಾಕುವುದು ಸಾಂಪ್ರದಾಯಿಕವಾಗಿ ಭಾರತೀಯ ಅರ್ಥಶಾಸ್ತ್ರದಲ್ಲಿ ಕಳೆದ ನೂರು ವರ್ಷಗಳಿಂದ ಬೆಳೆದು ಬಂದಿರುವ ಪರಿಪಾಠ. ಸ್ವಾಭಾವಿಕವಾಗಿಯೇ ಭೂಸುಧಾರಣೆ ನಮ್ಮ ಅತಿದೊಡ್ಡ ಸಾರ್ವಜನಿಕ ನೀತಿಯ ಆಶಯವಾಗಿತ್ತು.
ಒಂದು ಎಕರೆಯಾದರೂ ಸರಿಯೇ ಭೂಮಿಯಿದ್ದರೆ ಒಂದು ಕುಟುಂಬ ಸ್ವಾವಲಂಬನೆಯ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು ಎಂಬ ನಂಬಿಕೆ, ವಿಶ್ವಾಸ ನಮ್ಮಲ್ಲಿತ್ತು. ಆದುದರಿಂದಲೇ ಸಾಂಪ್ರದಾಯಿಕವಾಗಿ ಭೂಮಿಯ ಪ್ರಶ್ನೆಯೆಂದು ನಾವು ಪ್ರಸ್ತಾಪಿಸುತ್ತಿದ್ದುದು ಈ ಕೆಳಗಿನ ಪ್ರಶ್ನೆಗಳನ್ನು: ಕೃಷಿ ಕ್ಷೇತ್ರದಲ್ಲಿರುವ ಎಲ್ಲರಿಗೂ ಹೇಗೆ ಭೂಒಡೆತನವನ್ನು ಒದಗಿಸುವುದು? ಉಳುವವನನ್ನು ಭೂಮಿಯ ಒಡೆಯನನ್ನಾಗಿ ಹೇಗೆ ಮಾಡುವುದು?
ಕಳೆದ ಮೂರು ವಾರಗಳಲ್ಲಿ ನಾವು ಕಾಣುತ್ತಿರುವ ರೈತರ ಸರಣಿ ಆತ್ಮಹತ್ಯೆಗಳು ಭೂಮಿಯ ಪ್ರಶ್ನೆಯನ್ನು ಭಿನ್ನವಾದ ರೀತಿಯಲ್ಲಿ ನೋಡುವಂತೆ ನಮ್ಮನ್ನು ಮಾಡುತ್ತಿವೆಯೇ ಎಂಬ ಸಂಶಯ ನನ್ನದು. ನನ್ನ ಈ ಮಾತಿನ ಅರ್ಥ ಸರಳವಾದುದು. ಭೂಒಡೆತನ ಬದುಕಿನ ಅಭದ್ರತೆಯನ್ನು ಹೋಗಲಾಡಿಸುತ್ತದೆ ಎಂಬ ನಂಬಿಕೆಯನ್ನು ಆತ್ಮಹತ್ಯೆಗಳು ಮತ್ತು ಬೆಳೆನಾಶದಂತಹ ಕ್ರಿಯೆಗಳು ಪ್ರಶ್ನಿಸುತ್ತಿವೆ. ಇವುಗಳನ್ನು ಅಲ್ಲೊಂದು, ಇಲ್ಲೊಂದು ನಡೆಯುತ್ತಿರುವ ನಾಟಕೀಯ ಕ್ರಿಯೆಗಳು ಎಂದು ಸರಾಗವಾಗಿ ತಳ್ಳಿ ಹಾಕುವಂತಿಲ್ಲ.
ಹೀಗೆ ಆತ್ಮಹತ್ಯೆ ಮಾಡಿಕೊಂಡಿರುವವರಲ್ಲಿ ಸಣ್ಣ ಮತ್ತು ದೊಡ್ಡ ಹಿಡುವಳಿದಾರರು, ನೀರಾವರಿ ಸೌಲಭ್ಯ ಇರುವವರು ಮತ್ತು ಇಲ್ಲದವರು, ಬ್ಯಾಂಕ್‌ಗಳಿಂದ ಮತ್ತು ಲೇವಾದೇವಿದಾರರಿಂದ ಕೃಷಿಗೆ ಹಾಗೂ ಖಾಸಗಿ ಉದ್ದೇಶಗಳಿಗೆ ಸಾಲ ಪಡೆದವರು- ಹೀಗೆ ಎಲ್ಲ ಬಗೆಯವರೂ ಸೇರಿದ್ದಾರೆ. ಈಗಾಗಲೇ ಹಲವು ವರ್ಷಗಳಿಂದ ದೇಶದಾದ್ಯಂತ ನಾವು ಆಗಾಗ ನೋಡುತ್ತಲೇ ಇರುವ ಇಂತಹ ಘಟನೆಗಳು ಮತ್ತೇನನ್ನೋ ಹೇಳುತ್ತಿವೆ. ಅದೇನಿರಬಹುದೆಂದು ತಿಳಿಯಲು ಗ್ರಾಮೀಣ ಬದುಕಿನಲ್ಲಿ, ಅದರಲ್ಲೂ ಭೂಒಡೆತನ ಮತ್ತು ಕೃಷಿಕ್ಷೇತ್ರಕ್ಕೆ ಸಂಬಂಧಿಸಿದಂತೆ, ಯಾವ ಬದಲಾವಣೆಗಳಾಗುತ್ತಿವೆ ಎಂದು ಸ್ಪಷ್ಟ ಪಡಿಸಿಕೊಳ್ಳಬೇಕು.
ಭೂಮಿಯ ಹೊಸ ಪ್ರಶ್ನೆಯೆಂದು ನಾನಿಲ್ಲಿ ಗುರುತಿಸಬಯಸುವುದು ನಮ್ಮ ಕಣ್ಣೆದುರಿಗೆ ಆಗುತ್ತಿರುವ ಬದಲಾವಣೆಯೊಂದರ ಸಂಬಂಧದಲ್ಲಿ. ಕಳೆದ ಒಂದೂವರೆ ದಶಕಗಳಲ್ಲಿ ಭೂಮಿಯ ಮೌಲ್ಯ, ಅಂದರೆ ಬೆಲೆ, ಹೆಚ್ಚುತ್ತಲೇ ಬಂದಿದೆ. ಇದಕ್ಕೆ ಕಾರಣಗಳು ಹಲವು ಮತ್ತು ಬಹುಮಟ್ಟಿಗೆ ಕೃಷಿಯೇತರ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಸಂಬಂಧಿಸಿರುವುದು. ಅಂದರೆ ನಗರೀಕರಣ, ಕೈಗಾರಿಕೆಗಳ ವಿಸ್ತರಣೆ, ಹೆದ್ದಾರಿಗಳಂತಹ ಮೂಲ ಸೌಕರ್ಯಗಳನ್ನು ಸೃಷ್ಟಿಸಲು ಭೂಮಿಯ ಅವಶ್ಯಕತೆ, ಗಣಿಗಾರಿಕೆ ಇತ್ಯಾದಿ ಕಾರಣಗಳಿಂದ ಕೃಷಿ ಭೂಮಿಯ ಮೇಲಿನ ಒತ್ತಡ ಮತ್ತು ಅದರ ಮೌಲ್ಯಗಳೆರಡೂ ಹೆಚ್ಚಾಗಿವೆ.
ಈಗ ಚರ್ಚಿತವಾಗುತ್ತಿರುವ ಭೂಸ್ವಾಧೀನ ಮಸೂದೆಯನ್ನೂ ಈ ಚೌಕಟ್ಟಿನಲ್ಲಿಯೇ ನೋಡಬೇಕು. ಇದರ ಜೊತೆಗೆ ಕಳೆದ ಎರಡು ದಶಕಗಳಲ್ಲಿ ದೇಶದೊಳಗೆ ಮತ್ತು ಹೊರಗೆ ಭಾರತೀಯರು ಕೃಷಿಯೇತರ ಕ್ಷೇತ್ರಗಳ ಮೂಲಕವೇ ಸಂಪತ್ತನ್ನು ದೊಡ್ಡ ಪ್ರಮಾಣದಲ್ಲಿಯೇ ಸೃಷ್ಟಿಸಿದ್ದಾರೆ. ಈ ಹೊಸ ಸಂಪತ್ತು ಬಂಡವಾಳವಾಗಿ ಭೂಮಿಯ ಮೇಲೂ ಹೂಡಿಕೆಯಾಗುತ್ತಿದೆ.
ಕೆಲವೊಮ್ಮೆ ಕೃಷಿಗಾಗಿ, ಹಲವು ಬಾರಿ ಕೃಷಿಯೇತರ ಉದ್ದೇಶಗಳಿಗೆ ಈ ಹೊಸ ಬಂಡವಾಳ ಹರಿದು ಬರುತ್ತಿದೆ. ಕೃಷಿಕರಲ್ಲದವರು ಭೂಮಿ ಕೊಳ್ಳುವಾಗ ಇರುವ ಭೂಮಾಲೀಕತ್ವದ ಕುರಿತಾದ ನಿರ್ಬಂಧಿತ ನಿಯಮಗಳು ಹಾಗೂ ಕಾನೂನುಗಳು ಅನುಷ್ಠಾನಗೊಳ್ಳುತ್ತಿಲ್ಲ. ಉದಾಹರಣೆಗೆ ಕೃಷಿಕರಲ್ಲದವರು ಹಾಗೂ ವಾರ್ಷಿಕ ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯವುಳ್ಳವರು ಭೂಮಿ ಕೊಂಡುಕೊಳ್ಳುವಂತಿಲ್ಲ ಎಂಬ ನಿಯಮಗಳು ಕೇವಲ ಅವುಗಳ ಉಲ್ಲಂಘನೆಯಲ್ಲಿ ಪಾಲನೆಯಾಗುತ್ತಿವೆ.
ಹೀಗೆ ಹೊರಗಿನಿಂದ ಹರಿದು ಬರುವ ಬಂಡವಾಳ ಕೃಷಿ ಕ್ಷೇತ್ರದ ಮೇಲೆ ಹೊಸದೊಂದು ಒತ್ತಡವನ್ನು ಹುಟ್ಟುಹಾಕುತ್ತಿದೆ. ಭೂಮಿಯ ಬೆಲೆ ಹೆಚ್ಚಾದರೂ ಕೃಷಿಯ ಮೂಲಕ ಭೂಮಿಯಿಂದ ಪಡೆಯಬಹುದಾದ ಆದಾಯದ ಪ್ರಮಾಣ ಅದೇ ಗತಿಯಲ್ಲಿ ಹೆಚ್ಚುವುದಿಲ್ಲ. ಅಂದರೆ ಭೂಮಿಯ ಮೌಲ್ಯಕ್ಕೂ, ಕೃಷಿಯಿಂದ ಪಡೆಯಬಹುದಾಗಿರುವ ಆದಾಯಕ್ಕೂ ಯಾವುದೇ ಸಂಬಂಧವಿಲ್ಲ.
ಇಂದು ಯಾರೂ ಕೃಷಿಗಾಗಿ ಭೂಮಿಯ ಮೇಲೆ ಬಂಡವಾಳ ಹೂಡಿ ಅದರಿಂದಲೇ ಬಂಡವಾಳಕ್ಕೆ ತಕ್ಕ ಪ್ರಮಾಣದಲ್ಲಿ ಆದಾಯ ಗಳಿಸುತ್ತೇವೆ ಎಂದು ಖಾತ್ರಿಯಿಂದ ಹೇಳುವಂತಿಲ್ಲ. ಹೀಗಾಗಿ ಕಳೆದ ದಶಕದಲ್ಲಿ ನಾವು ಕಾಣುತ್ತಿರುವ ಒಂದು ಗಣನೀಯ ಬೆಳವಣಿಗೆಯೆಂದರೆ ಮತ್ತೊಂದು ಒಳ್ಳೆಯ ಆದಾಯದ ಮೂಲವಿರುವ ಸ್ಥಿತಿವಂತರ ಉಪಕಸುಬಾಗಿ ಕೃಷಿ ಪರಿವರ್ತನೆ ಹೊಂದುತ್ತಿರುವುದು. ಈ ವರ್ಗಕ್ಕೆ ಕೃಷಿಭೂಮಿ ಆದಾಯದ ಮೂಲ ಎನ್ನುವುದಕ್ಕಿಂತ ತಮ್ಮ ಬಂಡವಾಳಕ್ಕೆ ಪ್ರತಿಯಾಗಿ ಬೇರೆ ಬಗೆಯ ತೃಪ್ತಿಯನ್ನು ಒದಗಿಸುವ ಸಾಧನ. ಇಂತಹವರ ಸಂಖ್ಯೆ ಎಷ್ಟಿರಬಹುದು ಎಂಬ ಸ್ಪಷ್ಟ ಅಂದಾಜು ನಮಗಿಲ್ಲ ಹಾಗೂ ಈ ಬೆಳವಣಿಗೆಯ ಬಗ್ಗೆ ಇನ್ನೂ ಗಂಭೀರ ಅಧ್ಯಯನಗಳು ನಡೆಯಬೇಕಿದೆ. ಆದರೆ, ನಾವು ಕೃಷಿ ಕ್ಷೇತ್ರ ಎದುರಿಸುತ್ತಿರುವ ಹೊಸ ಬಿಕ್ಕಟ್ಟನ್ನು ಇಲ್ಲಿ ಗುರುತಿಸಬಹುದು ಎಂಬುದಂತೂ ಸ್ಪಷ್ಟ.
ಹೀಗೆ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಶಕಗಳಲ್ಲಿ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳು ಕೃಷಿಕ್ಷೇತ್ರದ ರಾಜಕೀಯ- ಆರ್ಥಿಕತೆಯನ್ನು (ಪೊಲಿಟಿಕಲ್ ಇಕಾನಮಿಯನ್ನು) ಬದಲಿಸಿವೆ. ಉದಾರೀಕರಣ ಮತ್ತು ಜಾಗತೀಕರಣಗಳ ಬಗ್ಗೆ ನಮ್ಮ ನಿಲುವುಗಳೇನೇ ಇದ್ದರೂ ಈ ಸಾಮಾಜಿಕ ವಾಸ್ತವವನ್ನು ನಾವು ಗುರುತಿಸಲೇಬೇಕು.
ನಾನಿಲ್ಲಿ ಮೇಲೆ ಪ್ರಸ್ತಾಪಿಸಿದ ಭೂಮಿಯ ಬೆಲೆ ಹೆಚ್ಚಾಗಿರುವ ವಿಚಾರ ಈ ಹೊಸ ವಾಸ್ತವದ ಒಂದು ಆಯಾಮ. ಇದರ ಮತ್ತೊಂದು ಮುಖ ಕೃಷಿ ಉತ್ಪನ್ನಗಳ ಬೆಲೆಯ ವಿಷಯ. ಉದಾಹರಣೆಗೆ ಇಂದು ಬಹು ಚರ್ಚಿತವಾಗುತ್ತಿರುವ ಕಬ್ಬು ಬೆಳೆಗಾರರ ಉದಾಹರಣೆಯನ್ನೇ ಗಮನಿಸಿ. ಕಬ್ಬು ಬೆಳೆಗಾರರನ್ನು ಹತಾಶರಾಗಿಸುವುದು ಅವರ ಉದ್ಯಮದ ರಾಚನಿಕ (ಸ್ಟ್ರಕ್ಚರಲ್) ಆಯಾಮ. ಅವರು ನಿರೀಕ್ಷಿಸುವ ವೈಜ್ಞಾನಿಕ ಬೆಲೆಯನ್ನು (ಅಂದರೆ ಕಬ್ಬು ಬೆಳೆಯುವಾಗ ಬಳಕೆಯಾದ ಬೀಜ, ಗೊಬ್ಬರ ಇತ್ಯಾದಿಗಳ ಮತ್ತು ರೈತನ ಶ್ರಮದ ಪ್ರತಿಫಲದ ಮೊತ್ತವನ್ನು) ಯಾರೂ ನೀಡುವುದಿಲ್ಲ. ಮಾರುಕಟ್ಟೆಯಲ್ಲಿ ಎಂದೂ ಮೌಲ್ಯ ಅಥವಾ ಬೆಲೆಯ ನಿರ್ಣಯ ಈ ನೆಲೆಯಲ್ಲಿ ಆಗಿಲ್ಲ, ಆಗುವುದೂ ಇಲ್ಲ.
ಇದಕ್ಕೆ ಕಾರಣ ಸರಳವಾದುದು. ಕಬ್ಬು ಬೆಳೆಗಾರರ ನಿರೀಕ್ಷೆ ಅರ್ಥಶಾಸ್ತ್ರದಲ್ಲಿ ಮೌಲ್ಯದ ಶ್ರಮಸಿದ್ಧಾಂತವೆಂದು (ಲೇಬರ್ ಥಿಯರಿ ಆಫ್ ವ್ಯಾಲ್ಯು) ಕರೆಯಲ್ಪಡುವ ತತ್ವದ ಮೇಲೆ ಆಧಾರಿತವಾದುದು. ಡೇವಿಡ್ ರಿಕಾರ್ಡೊ (1772–1823) ಮತ್ತು ಕಾರ್ಲ್ ಮಾರ್ಕ್ಸ್ (1818–1883) ಮುಂದಿಟ್ಟ ಈ ಸಿದ್ಧಾಂತದಲ್ಲಿ ಒಂದು ಉತ್ಪನ್ನದ ಮೌಲ್ಯವನ್ನು ಅದನ್ನು ಉತ್ಪಾದಿಸಲು ಅಗತ್ಯವಿರುವ (ಸಾಮಾಜಿಕ) ಶ್ರಮದ ಮೇಲೆ ನಿರ್ಧರಿಸಲಾಗುವುದು.
ಸಾಂಪ್ರದಾಯಿಕ ಅರ್ಥಶಾಸ್ತ್ರದಲ್ಲಿ ಯಾವಾಗಲೂ ಹೆಚ್ಚಿನ ಚಾಲನೆಯನ್ನು ಈ ಸಿದ್ಧಾಂತ ಪಡೆಯಲಿಲ್ಲ. ಯಾಕೆಂದರೆ ವಾಸ್ತವದಲ್ಲಿ ಮಾರುಕಟ್ಟೆಯಲ್ಲಿ ಒಂದು ಉತ್ಪನ್ನದ ಬೆಲೆ ನಿಗದಿಯಾಗುವುದು ಅದರ ಬಳಕೆಯ (ಯೂಸ್ ವ್ಯಾಲ್ಯೂ) ಇಲ್ಲವೇ ವಿನಿಮಯದ (ಎಕ್ಸಚೇಂಜ್ ವ್ಯಾಲ್ಯೂ) ಮೌಲ್ಯದ ಮೇಲೆ. ಅಂದರೆ ಒಬ್ಬ ಗ್ರಾಹಕ ಕೂಡ ಒಂದು ಉತ್ಪನ್ನ ತನಗೆ ಎಷ್ಟು ಅಗತ್ಯವಿದೆ ಇಲ್ಲವೇ ಅದನ್ನು ಕೊಳ್ಳಲು ತನ್ನ ಬಳಿ ಹಣ ಅಥವಾ ವಿನಿಮಯ ಯೋಗ್ಯ ವಸ್ತುಗಳೇನಿವೆ ಎಂಬ ಆಧಾರದ ಮೇಲೆ ಅದರ ಬೆಲೆ ತೆರಲು ಸಿದ್ಧನಾಗುತ್ತಾನೆ. ಹೀಗೆ ಅರ್ಥಶಾಸ್ತ್ರದೊಳಗೆ ಸಹ ಮೌಲ್ಯದ ಶ್ರಮಸಿದ್ಧಾಂತ ಮಹತ್ವ ಗಳಿಸಲಿಲ್ಲ.
ಈ ಕಾರಣದಿಂದಲೇ ಶ್ರಮದ ಮೌಲ್ಯವನ್ನು ಬೆಂಬಲ ಬೆಲೆ ಹಾಗೂ ಸಬ್ಸಿಡಿಗಳಂತಹ ಮಾರುಕಟ್ಟೆಯಾಚೆಗಿನ ತಂತ್ರಗಳ ಮೂಲಕ ರಕ್ಷಿಸುವ ಪ್ರಯತ್ನವನ್ನು ಸರ್ಕಾರಗಳು ಮಾಡುತ್ತ ಬಂದಿವೆ. ಆದರೆ ರಾಜಕೀಯ ಇಚ್ಛಾಶಕ್ತಿಯ ಅಭಾವವಿದ್ದಾಗ ಬೆಂಬಲ ಬೆಲೆ ಅಲ್ಪಾವಧಿಯ ಪರಿಹಾರವಾಗಿಯೂ ಅನುಪಯುಕ್ತ. ಇಂದು ಕಬ್ಬು-ಸಕ್ಕರೆಯ ಉದ್ಯಮದ ಸಂದರ್ಭದಲ್ಲಿ ಆಗಿರುವುದು ಇದೇನೆ.
ಖಾಸಗಿ ಮತ್ತು ಸಹಕಾರಿ ವಲಯದ ಸಕ್ಕರೆ ಕಾರ್ಖಾನೆಗಳನ್ನು ನಿಯಂತ್ರಿಸುತ್ತಿರುವವರು ಬಹುಮಟ್ಟಿಗೆ ರಾಜಕಾರಣಿಗಳು. ಹೀಗಾಗಿ ಸರ್ಕಾರದ ನೀತಿ ಏನೇ ಇದ್ದರೂ ಅದರ ಅನುಷ್ಠಾನದಲ್ಲಿ ಸಮಸ್ಯೆಗಳಿವೆ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆಯ ಉತ್ಪಾದನೆ, ಮಾರಾಟಗಳ ಮೇಲಿನ ನಿಯಂತ್ರಣ ಸಡಿಲಿಸಿದ ನಂತರ ಮಾರುಕಟ್ಟೆಯ ಅಸ್ಥಿರತೆಗೆ ಕಬ್ಬು ಬೆಳೆಗಾರರು ಸಿಲುಕಿದ್ದಾರೆ.
ಈ ಸನ್ನಿವೇಶದಲ್ಲಿ ಕಬ್ಬನ್ನು ಬೆಳೆಯಲು ಅಗತ್ಯವಿರುವಷ್ಟು ಹಣವನ್ನು ಬೆಂಬಲ ಬೆಲೆಯ ರೂಪದಲ್ಲಿ ನೀಡುವುದು ಅಸಾಧ್ಯದ ಮಾತು. ಜೊತೆಗೆ ಕಬ್ಬು-–ಸಕ್ಕರೆಗಳ ಸುತ್ತ ಸೃಷ್ಟಿಸಬಹುದಾದ ಉಪ-ಉದ್ಯಮಗಳು (ಇಥೆನಾಲ್ ಇಂಧನ ಇಲ್ಲವೇ ವಿದ್ಯುತ್ ಉತ್ಪಾದನೆ) ದೊಡ್ಡ ಪ್ರಮಾಣದ ಸರ್ಕಾರದ ಸಬ್ಸಿಡಿ ಇಲ್ಲದೆ ಬ್ರೆಜಿಲ್ ಹಾಗೂ ಅಮೆರಿಕಗಳಲ್ಲಿ ಯಶಸ್ವಿಯಾಗಿಲ್ಲ. ಕಬ್ಬಿನಿಂದ ಉತ್ಪಾದಿತವಾಗುತ್ತಿರುವ ಸಕ್ಕರೆಗೆ ಜಾಗತಿಕವಾಗಿ ಬೇಡಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ತಂಬಾಕಿನಂತೆ ಕಬ್ಬಿನ ಕೃಷಿಯನ್ನೂ ನಿಯಂತ್ರಿಸಬೇಕೆ? ಇತರ ಬೆಳೆಗಳನ್ನು ಬೆಳೆಯುವಂತೆ ಒತ್ತಾಯಿಸಬೇಕೆ?
ಕಬ್ಬು ಬೆಳೆಗಾರರ ಸಮಸ್ಯೆ ಕೃಷಿ ಕ್ಷೇತ್ರಕ್ಕೆ ರೂಪಕವಾಗುವ ವಿದ್ಯಮಾನ. ನಾನು ಮೇಲೆ ಪ್ರಸ್ತಾಪಿಸಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಿದಾಗ ಸುಲಭವಾದ ಪರಿಹಾರಗಳಿವೆ ಎಂದು ತೋರುತ್ತಿಲ್ಲ. ಇದು ಭಾರತದ ಸಮಸ್ಯೆ ಮಾತ್ರವಲ್ಲ. ಜಾಗತಿಕವಾಗಿ, ಅದರಲ್ಲೂ ಪಶ್ಚಿಮದ ರಾಷ್ಟ್ರಗಳು, ಈ ಸಮಸ್ಯೆಗೆ ಪರಿಹಾರವಾಗಿ ಕೃಷಿಗೆ ಅಪಾರ ಸಬ್ಸಿಡಿ ನೀಡುತ್ತಿದ್ದರೆ, ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ರೈತರನ್ನು ಬಡವರನ್ನಾಗಿ ಉಳಿಸುತ್ತಿವೆ. ನಮ್ಮ ಆಯ್ಕೆ ಸರಳವಾಗಿ ಉಳಿದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.