ADVERTISEMENT

ತ್ವರಿತ ಬದಲಾವಣೆಯೂ ಕಾಲದ ಚಲನೆಯೂ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:09 IST
Last Updated 16 ಜೂನ್ 2018, 9:09 IST

ಹೊಸ ವರ್ಷದ ಆಗಮನ ಕಾಲದ ಚಲನೆಯನ್ನು ಧ್ಯಾನಿಸುವಂತೆ ಪ್ರೇರೇಪಿಸುತ್ತಿದೆ. ನಾವು ಬದುಕಿರುವ ಕಾಲಘಟ್ಟವನ್ನು ಐತಿಹಾಸಿಕ ದೃಷ್ಟಿಕೋನದಿಂದ ನೋಡಿದರೆ ಹೇಗೆ ಕಾಣಬಹುದು? ನೂರು ವರ್ಷಗಳ ನಂತರದ ಇತಿಹಾಸಕಾರ ಇಂದಿನ ಸಂದರ್ಭವನ್ನು ಹೇಗೆ ವಿಶ್ಲೇಷಿಸಬಹುದು?

ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಕಾಲವನ್ನು ನಿಧಾನ ಮಾಡಿ, ಪ್ರಸ್ತುತದ ಮುಖ್ಯ ಬೆಳವಣಿಗೆಗಳನ್ನು ಗುರುತಿಸುವ ಪ್ರಯತ್ನ ಮಾಡೋಣ. ಇತಿಹಾಸ ಅಧ್ಯಯನದ ಬಹುಮುಖ್ಯ ಕೌಶಲವೆಂದರೆ ಸಮಯವನ್ನು ನಿಧಾನಿಸಿ, ದೈನಂದಿನ ಬದುಕನ್ನು ದಶಕಗಳ ಕಾಲ ನಿಧಾನವಾಗಿ ತೆರೆದುಕೊಳ್ಳುವ ದೀರ್ಘಕಾಲೀನ ಪ್ರಕ್ರಿಯೆಗಳಿಗೆ ಜೋಡಿಸಿ ನೋಡುವುದು. ಆ ವಿಧಾನವನ್ನು ಬಳಸಿ ವರ್ತಮಾನವನ್ನು ವಿಶ್ಲೇಷಿಸಲು ಎರಡು ಚಿತ್ರಗಳನ್ನು ಚರ್ಚಿಸೋಣ.

ಮೊದಲನೆಯ ಉದಾಹರಣೆಯಾಗಿ, ಅಂಕಣದ ಓದುಗರಿಗೆ ಪರಿಚಿತವಾದ ಮಧ್ಯಮ ವರ್ಗದ ದೈನಂದಿನ ಬದುಕನ್ನೇ ಗಮನಿಸಿ. ಇಂದು ಮಧ್ಯವಯಸ್ಸಿನಲ್ಲಿರುವ ನಮ್ಮಂತಹವರ ಬಾಲ್ಯದ ಭೌತಿಕ ಪ್ರಪಂಚ ನಮ್ಮ ಮಕ್ಕಳಿಗೆ ಕಲ್ಪಿಸಿಕೊಳ್ಳಲೂ ಆಗದಂತಹುದು. ಸೀಮಿತ ಟೆಲಿಫೋನ್ ಸಂಪರ್ಕ ಮತ್ತು ರೇಡಿಯೊಗಳಷ್ಟೇ ಇದ್ದ, ಸುದ್ದಿಗಾಗಿ ಮುಖ್ಯವಾಗಿ ವೃತ್ತಪತ್ರಿಕೆಗಳನ್ನೇ ಅವಲಂಬಿಸಿದ್ದ ಕಾಲ ಕೇವಲ ಮೂರು ದಶಕಗಳ ಹಿಂದೆಯಿತ್ತು.

ಕಳೆದ ಎರಡು ದಶಕಗಳಲ್ಲಿ ಕೇಬಲ್ ಟೆಲಿವಿಷನ್, ಮೊಬೈಲ್ ಟೆಲಿಫೋನ್‌, ಇಂಟರ್‌ನೆಟ್, ಸಾಮಾಜಿಕ ತಾಣಗಳು ನಮ್ಮ ಇರುವಿಕೆಯ ಅಂಗವಾಗಿವೆಯಷ್ಟೇ ಅಲ್ಲ ನಮ್ಮ ಪ್ರಜ್ಞೆಯನ್ನು ಅನಾಯಾಸವಾಗಿ ರೂಪಿಸುವ ಮುಖ್ಯ ಸಾಧನಗಳಾಗಿವೆ. ಸ್ವಾತಂತ್ರ್ಯಗಳಿಸಿ ಏಳು ದಶಕಗಳಾಗುತ್ತಿದ್ದರೂ ನಮಗೆ ಕುಡಿಯುವ ನೀರು, ನೈರ್ಮಲ್ಯ, ಆಹಾರ ಭದ್ರತೆ, ಆರೋಗ್ಯ ಮತ್ತು ಶಿಕ್ಷಣದ ಮೂಲಸೌಕರ್ಯಗಳನ್ನು ಎಲ್ಲೆಡೆ ಒದಗಿಸಲು ಸಾಧ್ಯವಾಗಿಲ್ಲ. ಆದರೆ ಎಂತಹ ಕುಗ್ರಾಮದಲ್ಲಿಯೂ ಕೇಬಲ್ ಟೆಲಿವಿಷನ್ ಮತ್ತು ಮೊಬೈಲ್ ರಿಚಾರ್ಜಿಂಗ್ ಸೌಕರ್ಯಗಳು ಒಂದು ದಶಕದೊಳಗೆ ಹಬ್ಬಿಬಿಟ್ಟವು. ಭಾರತದಲ್ಲಿ ಶೇ 60ಕ್ಕಿಂತ ಹೆಚ್ಚಿನ ಮನೆಗಳಲ್ಲಿ (ಸುಮಾರು 13 ಕೋಟಿಗೂ ಹೆಚ್ಚು) ಟೆಲಿವಿಷನ್ ಇದ್ದರೆ, ಮೊಬೈಲ್ ಸಂಪರ್ಕಗಳ ಸಂಖ್ಯೆ 100 ಕೋಟಿ ದಾಟಿದೆ.

ಈ ಅಂಕಿಅಂಶಗಳನ್ನು ಪ್ರಗತಿಯ ದ್ಯೋತಕ ಎಂದು ನಾನಿಲ್ಲಿ ನೀಡುತ್ತಿಲ್ಲ. ಬದಲಿಗೆ ತ್ವರಿತವಾಗಿ ನಮ್ಮ ಬದುಕನ್ನು ಆವರಿಸಿರುವ ಈ ಹೊಸ ಮಾಧ್ಯಮಗಳು ಒಂದೆಡೆ ನಮ್ಮ ಸಂವೇದನೆಗಳನ್ನು ರೂಪಿಸತೊಡಗಿವೆ. ಮುದ್ರಣಗೊಂಡ ಒಂದು ವೃತ್ತಪತ್ರಿಕೆಯ ಬದಲಿಗೆ ಜಗತ್ತಿನ ಯಾವ ಭಾಗದ್ದಾದರೂ ಸರಿಯೇ ಹತ್ತಾರು ಸುದ್ದಿಯ ತಾಣಗಳನ್ನು ಓದುವ ಅವಕಾಶ ನಮಗಿದೆ. ರೇಡಿಯೊದಲ್ಲಿ ರಾಜ್ಯ ರಣಜಿ ತಂಡದ ಪಂದ್ಯಗಳ ವೀಕ್ಷಕ ವಿವರಣೆ ಕೇಳುವ ಬದಲಿಗೆ ಅಮೆರಿಕ ಮತ್ತು ಯುರೋಪ್‌ಗಳ ಖಾಸಗಿ ಕ್ರೀಡಾ ಲೀಗ್‌ಗಳ ಪಂದ್ಯಗಳನ್ನು ದಿನವೂ ತಕ್ಷಣವೇ ನಾವು ನೋಡುತ್ತೇವೆ. ನಮ್ಮ ಹೀರೊ ಆಫ್ರಿಕಾದಲ್ಲೋ ಇಲ್ಲವೆ ಅರ್ಜೆಂಟಿನಾದಲ್ಲೋ ಹುಟ್ಟಿ, ಯುರೋಪಿನಲ್ಲಿ ಆಡುವ ಅಥವಾ ಹಾಲಿವುಡ್‌ನ ಸಿನಿಮಾದಲ್ಲಿ ನಟಿಸುವವನಾಗಿರುತ್ತಾನೆ.

ಈ ವಿದ್ಯಮಾನಗಳನ್ನು ಗುರುತಿಸುವಾಗ ನನಗೆ ಕಳೆದುಹೋದ ಪ್ರಪಂಚದ ಬಗ್ಗೆ ಹಳಹಳಿಕೆಯಿಲ್ಲ. ಆದರೆ ನಮ್ಮ ಎಲ್ಲ ಸಂವೇದನೆ ಮತ್ತು ನಿಷ್ಠೆಗಳು ಜಾಗತಿಕವಾಗುತ್ತಿವೆ ಎಂದು ಗುರುತಿಸುವ ಬಯಕೆಯಿದೆ. 1990ರ  ತನಕ ಹೀಗೆ ಜಾಗತಿಕ ಸಂವೇದನೆ ನಮ್ಮೊಳಗೆ ಮೂಡಿದ್ದರೆ ಅದು ಕೇವಲ ಸೃಜನಶೀಲ ಸಾಹಿತ್ಯ ಮತ್ತು ವೈಚಾರಿಕ ಚಿಂತನೆಯಿಂದ ಆಗುತ್ತಿತ್ತು. ಈಗ ಹೊಸ ತಂತ್ರಜ್ಞಾನಗಳು ಮತ್ತು ಅವುಗಳಿಂದ ಹುಟ್ಟಿರುವ ಸಮೂಹ ಮಾಧ್ಯಮಗಳು ಜಾಗತಿಕ ಸಂವೇದನೆ ಮಾಡುತ್ತಿವೆ.

ಮಿಗಿಲಾಗಿ ಈ ಮಾಧ್ಯಮಗಳ ಸುತ್ತಣ ವಾಣಿಜ್ಯ ನಮ್ಮ ಭೌತಿಕ ಪ್ರಪಂಚವನ್ನು ಸಾರಾಸಗಟು ಬದಲಾಯಿಸುತ್ತಿದೆ ಕೂಡ. ಇದು ಹೇಗಾಗುತ್ತಿದೆ ಎಂದು ಅರಿಯಲು ಕೆಲವು ದಿನಗಳ ಹಿಂದೆ ವ್ಯಾಪಕವಾಗಿ ಚರ್ಚೆಗೊಳಗಾದ, ಬಿಲ್ ಗೇಟ್ಸ್ ಮೊದಲಾಗಿ ಹಲವರನ್ನು ಬೆಚ್ಚಿಬೀಳಿಸಿದ ಈ ಅಂಶವನ್ನು ಗಮನಿಸಿ: 2011– 13ರ ನಡುವೆ ಮೂರು ವರ್ಷಗಳ ಅವಧಿಯಲ್ಲಿ ಚೀನಾ ಬಳಸಿದ ಸಿಮೆಂಟಿನ ಪ್ರಮಾಣ ಇಡೀ 20ನೇ ಶತಮಾನದಲ್ಲಿ ಅಮೆರಿಕದಲ್ಲಿ ಬಳಕೆಯಾದ ಸಿಮೆಂಟಿಗಿಂತ ಹೆಚ್ಚು! ಗಮನಿಸಿ.

ಚೀನಾ ಮತ್ತು ಅಮೆರಿಕಗಳೆರಡೂ ಭೌಗೋಳಿಕವಾಗಿ ಹೆಚ್ಚುಕಡಿಮೆ ಒಂದೇ ಗಾತ್ರದವು. ಚೀನಾದ ಜನಸಂಖ್ಯೆ ಅಮೆರಿಕಕ್ಕಿಂತ ನಾಲ್ಕು ಪಟ್ಟು ಹೆಚ್ಚಿದೆ, ನಿಜ. ಆದರೆ ಅಮೆರಿಕದ ಕೈಗಾರಿಕೀಕರಣ ಮತ್ತು ನಗರೀಕರಣ 20ನೇ ಶತಮಾನದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯಿತು ಎಂಬುದನ್ನು ಇಲ್ಲಿ ಮರೆಯಬಾರದು. ಅಲ್ಲಿನ ಹೆದ್ದಾರಿಗಳು ಮತ್ತು ಸೇತುವೆಗಳು, ಅಣೆಕಟ್ಟುಗಳು ಮತ್ತು ಗಗನಚುಂಬಿ ಕಟ್ಟಡಗಳು ನಿರ್ಮಿತವಾದದ್ದು ಈ ಸಮಯದಲ್ಲಿಯೇ. ಇವೆಲ್ಲವುಗಳ ನಿರ್ಮಾಣಕ್ಕೆ ಅಮೆರಿಕ ಬಳಸಿದ ಸಿಮೆಂಟಿನ ಪ್ರಮಾಣ 4.5 ಗಿಗಾಟನ್.

ಹಾಗಾದರೆ ಚೀನಾ ಮೂರೇ ವರ್ಷದಲ್ಲಿ 6.6 ಗಿಗಾಟನ್ ಸಿಮೆಂಟನ್ನು ಎಲ್ಲಿ ಮತ್ತು ಏತಕ್ಕಾಗಿ ಬಳಸಿತು? ಬಹುಮುಖ್ಯವಾಗಿ ತನ್ನ ನಗರಗಳನ್ನು ಕಟ್ಟಿಕೊಳ್ಳಲು ಮತ್ತು ಅವುಗಳ ನಡುವೆ ಸಂಪರ್ಕ ಜಾಲವೊಂದನ್ನು ರೂಪಿಸಿಕೊಳ್ಳಲು. ಪ್ರತಿವರ್ಷ 2 ಕೋಟಿ ಚೀನಾದ ಜನ ನಗರಗಳಲ್ಲಿ ಹೊಸದಾಗಿ ನೆಲೆಸುತ್ತಿದ್ದಾರೆ.

2020ರ ವೇಳೆಗೆ ಚೀನಾದ ಶೇ 60ರಷ್ಟು ಜನಸಂಖ್ಯೆ ನಗರಗಳಲ್ಲಿರುತ್ತದೆ ಎಂಬ ಅಂದಾಜಿದೆ. ಬೀಜಿಂಗ್, ಶಾಂಘೈಗಳಂತಹ ಬೃಹತ್ ನಗರಗಳಲ್ಲದೆ, 10 ಲಕ್ಷಕ್ಕಿಂತ ಹೆಚ್ಚು ಜನ  ವಾಸಿಸುವ 221 ನಗರಗಳು ಚೀನಾದಲ್ಲಿವೆ. ಇದಕ್ಕೆ ಪ್ರತಿಯಾಗಿ ಇಡೀ ಯುರೋಪಿನಲ್ಲಿರುವ ಇಂತಹ ನಗರಗಳ ಸಂಖ್ಯೆ ಕೇವಲ 35. ಚೀನಾ ಇಂದು ಚಲಿಸುತ್ತಿರುವ ಕೈಗಾರಿಕೀಕರಣ ಮತ್ತು ನಗರೀಕರಣಗಳ ಪಥದಲ್ಲಿ ಯುರೋಪ್ ಈಗಾಗಲೇ ಎರಡು ಶತಮಾನಗಳನ್ನು ಕಳೆದಿದೆ ಎಂಬುದನ್ನು ನಾವಿಲ್ಲಿ ನೆನಪಿಡಬೇಕು.

ಚೀನಾ ಕೇವಲ ನಗರಗಳನ್ನು ಕಟ್ಟುತ್ತಿಲ್ಲ. ಜೊತೆಗೆ ಜಗತ್ತಿನ ಉತ್ಪಾದಕ ಕೇಂದ್ರವಾಗಿ ಎಲ್ಲರಿಗೆ ಎಲ್ಲವನ್ನೂ ಒದಗಿಸುವ ಸಾಹಸಕ್ಕೂ ಕೈಹಾಕಿದೆ. ಎಲ್ಲ ದೇಶಗಳ ಬಹುರಾಷ್ಟ್ರೀಯ ಕಂಪೆನಿಗಳೂ ಚೀನಾದಲ್ಲಿಯೇ ತಮ್ಮ ಉತ್ಪಾದನೆಯ ಕೇಂದ್ರಗಳನ್ನು ಹೊಂದಲು ಆಶಿಸುತ್ತಿವೆ, ಯೋಜಿಸುತ್ತಿವೆ ಎಂದರೆ ಉತ್ಪ್ರೇಕ್ಷೆಯೇನಲ್ಲ. ಚೀನಾಕ್ಕೆ ಉತ್ಪಾದನೆಯ ಕ್ಷೇತ್ರದಲ್ಲಿ ದೊರಕಿರುವ ಯಶಸ್ಸನ್ನು ಅರಿಯಲು ನಮ್ಮ ಊರುಗಳ ಗುಜರಿ ಮಾರುಕಟ್ಟೆಗಳಿಂದ ಮೊಬೈಲ್ ಅಂಗಡಿಗಳ ತನಕ, ಚನ್ನಪಟ್ಟಣದ ಬೊಂಬೆ ಅಂಗಡಿಗಳಿಂದ ನಗರದ ಅತ್ಯಾಧುನಿಕ ಮಾಲ್‌ಗಳ ತನಕ, ಎಲ್ಲ ವ್ಯಾಪಾರದ ಸ್ಥಳಗಳಲ್ಲಿ ದೊರಕುವ ಚೀನಾದಲ್ಲಿ ಉತ್ಪಾದನೆಗೊಂಡ ವಸ್ತುಗಳನ್ನೇ ಗಮನಿಸಿ. ನನ್ನ ಮೇಲಿನ ಮಾತುಗಳಿಗೆ ಆಧಾರ ದೊರೆಯುತ್ತದೆ.

ಇದು ಚೀನಾದ ಕಥೆ ಮಾತ್ರವಲ್ಲ, ಭಾರತ ಕ್ರಮಿಸಲು ಆರಂಭಿಸಿರುವ ಪಥ ಕೂಡ. ಮುಂದಿನ ಮೂರು ದಶಕಗಳಲ್ಲಿ ಭಾರತ ಸುಮಾರು 40 ಕೋಟಿ ಜನರಿಗೆ ತನ್ನ ನಗರಗಳಲ್ಲಿ ವಾಸಿಸಲು ಅವಕಾಶ ಮಾಡಿಕೊಡಲಿದೆ. ಈ ಸಂಖ್ಯೆ ಇಂದಿನ ಅಮೆರಿಕದ ಜನಸಂಖ್ಯೆಗಿಂತ ಹೆಚ್ಚಿನದು.

ಭಾರತದಲ್ಲಿ ನಗರೀಕರಣ ಪ್ರಕ್ರಿಯೆಯು ಚೀನಾಕ್ಕಿಂತ ಎರಡು ರೀತಿಯಲ್ಲಿ ಭಿನ್ನವಾಗಿ ಅನಾವರಣಗೊಳ್ಳುತ್ತಿದೆ. ಜೆ-ನರ್ಮ್ ಮತ್ತು ಸ್ಮಾರ್ಟ್ ಸಿಟಿಗಳಂತಹ ಯೋಜನೆಗಳ ಮಾತು ಕೇಳಿಬಂದರೂ, ಭಾರತದಲ್ಲಿ ನಗರಗಳ ಬೆಳವಣಿಗೆ ಅವ್ಯವಸ್ಥಿತವಾಗಿಯೇ ನಡೆಯುತ್ತಿದೆ. ಬದಲಿಗೆ ಚೀನಾದಲ್ಲಿ ನಗರೀಕರಣವು ಸರ್ಕಾರದ ಕೇಂದ್ರೀಕೃತ ಯೋಜನೆಯಾಗಿದೆ. ಎರಡನೆಯದಾಗಿ, ಚೀನಾದ ನಗರಗಳು ಹೆಚ್ಚಾಗಿ ಉತ್ಪಾದನೆಯ ಕೇಂದ್ರಗಳಾಗಿ ರೂಪುಗೊಳ್ಳುತ್ತಿದ್ದರೆ, ಭಾರತೀಯ ನಗರಗಳು ಮುಖ್ಯವಾಗಿ ವಿವಿಧ ಸೇವೆಗಳನ್ನು ಒದಗಿಸುವ ತಾಣಗಳಾಗಿವೆ.

ಇಂತಹ ಸೇವೆಗಳ ಅನುಕೂಲ ಪಡೆಯುವವರ ಪೈಕಿ ದೇಶದ ಒಳಗಿನವರು ಮತ್ತು ಹೊರಗಿನವರೂ ಇದ್ದಾರೆ. ಕಳೆದ ದಶಕದಲ್ಲಿ ಹೊಸ ಬಗೆಯ ಸೇವಾ-ಕೇಂದ್ರಿತ ಉದ್ಯೋಗಗಳು ಭಾರತದಲ್ಲಿ ಸೃಷ್ಟಿಯಾಗಿವೆ. ಇವುಗಳ ಪೈಕಿ ತಳಮಟ್ಟದ ಕೌಶಲ ನಿರೀಕ್ಷಿಸುವ ಮಾಲ್‍ ಕೆಲಸಗಳಿಂದ ಅತ್ಯಂತ ಪರಿಣತಿಯನ್ನು ನಿರೀಕ್ಷಿಸುವ ಸಾಫ್ಟ್‌ವೇರ್‌ ಸೇವೆಗಳ ತನಕ ಹಾಗೂ ಇವುಗಳ ನಡುವಿನ ಮನರಂಜನೆ, ಶಿಕ್ಷಣ, ಬ್ಯಾಂಕಿಂಗ್ ಇತ್ಯಾದಿ ಎಲ್ಲ ವಲಯಗಳೂ ಸೇರಿವೆ.

ನಾನು ಗಮನಿಸಿದಂತೆ ನಮ್ಮ ಇಂದಿನ ವಾಸ್ತವದ ಸಂಕೀರ್ಣತೆಯನ್ನು ತೋರಿಸುವ ಉದಾಹರಣೆಯೆಂದರೆ ‘ಟಾರ್ಗೆಟ್’ ಎಂಬ ಅಮೆರಿಕದ ಮೂರನೆಯ ಅತಿದೊಡ್ಡ ರಿಟೇಲರ್ (ಬಹುಸರಕು ಮಾರಾಟ ಮಾಡುವ ಅಂಗಡಿಗಳ ಸಮೂಹ) ಬೆಂಗಳೂರಿನ ತನ್ನ ಗ್ರಾಹಕ ಬೆಂಬಲ ಕೇಂದ್ರದಿಂದ ಮಾಡಿದ ಪ್ರಯೋಗ.

2012ರಲ್ಲಿ ಕೆನಡಾದಲ್ಲಿ 100ಕ್ಕೂ ಹೆಚ್ಚು ಅಂಗಡಿಗಳನ್ನು ಸ್ಥಾಪಿಸಲು ನಿರ್ಧರಿಸಿದ ‘ಟಾರ್ಗೆಟ್’ ಬೆಂಗಳೂರಿನಲ್ಲಿ ಆ ಯೋಜನೆಯ ನೀಲನಕ್ಷೆಯನ್ನು ತಯಾರಿಸಲು 2500 ಉದ್ಯೋಗಿಗಳ ತಂಡವನ್ನು ಕಟ್ಟಿತು. ಈ ತಂಡದಲ್ಲಿ ವಾಸ್ತುಶಿಲ್ಪಿಗಳು, ಮಾರಾಟತಂತ್ರ ಪರಿಣತರು ಮತ್ತು ತಂತ್ರಜ್ಞರು ಇದ್ದರು. ಅಂಗಡಿಗಳ ಸ್ಥಳ, ವಿನ್ಯಾಸ, ಸಾಮಾನುಗಳ ಆಯ್ಕೆ ಮತ್ತು ಬೆಲೆ ನಿಗದಿ ಹಾಗೂ ವ್ಯವಸ್ಥಿತವಾದ ಸರಬರಾಜು ವ್ಯವಸ್ಥೆ- ಇದಿಷ್ಟನ್ನೂ ಬೆಂಗಳೂರಿನಲ್ಲಿ ಯೋಜಿಸಲಾಯಿತು.

ನೆರೆಯ ದೇಶವಾದ ಕೆನಡಾದಲ್ಲಿನ ತನ್ನ ವ್ಯವಹಾರ ತಂತ್ರವನ್ನು ದೂರದ ಬೆಂಗಳೂರಿನಲ್ಲಿ ಭಾರತೀಯ ತಜ್ಞರ ನೆರವಿನಿಂದ ಅಮೆರಿಕದ ಕಂಪೆನಿಯೊಂದು ನಿರ್ಧರಿಸಿತು ಎಂಬುದು ನಮ್ಮ ಇಂದಿನ ವಾಸ್ತವ. ಜೊತೆಗೆ ಕೆನಡಾದಲ್ಲಿ ಲಾಭದಾಯಕ ವ್ಯವಹಾರವನ್ನು ಕಟ್ಟಲಾಗದ ‘ಟಾರ್ಗೆಟ್’ ಮೂರೇ ವರ್ಷದಲ್ಲಿ 25,000 ಕೋಟಿ ರೂಪಾಯಿಗಳ ನಷ್ಟವನ್ನು ಘೋಷಿಸಿ, ತನ್ನ 133 ಅಂಗಡಿಗಳನ್ನು ಮುಚ್ಚಿತು.

ನಮ್ಮಲ್ಲಿ ಇಂದಿಗೂ ಇರುವ, ಆದರೆ ಕ್ಷಿಪ್ರವಾಗಿ ನೆಲೆ ಕಳೆದುಕೊಳ್ಳುತ್ತಿರುವ ನೆರೆಹೊರೆಯ ಕಿರಾಣಿ ಅಂಗಡಿಗಳು ಎರಡು ತಲೆಮಾರುಗಳ ಹಿಂದೆ ಅಮೆರಿಕದ ವಾಸ್ತವ ಕೂಡ ಆಗಿದ್ದವು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಂದು ವಾಲ್‍ಮಾರ್ಟ್, ಐಕಿಯಾ, ಟಾರ್ಗೆಟ್‌ನಂತಹ  ಸಾವಿರಾರು ಶಾಖೆಗಳಿರುವ ಅಂಗಡಿಗಳ ಸಮೂಹಗಳು ಹೊಸ ದೇಶಗಳನ್ನು ಪ್ರವೇಶಿಸುತ್ತವೆ ಮತ್ತು ನಿರ್ಗಮಿಸುತ್ತವೆ. 

ಕರ್ನಾಟಕದೊಳಗೆ ನಿರುಮ್ಮಳವಾಗಿ ಇರಬಯಸುವ ನಮ್ಮೆಲ್ಲರ ಒಳಗಿನ ಮತ್ತು ಹೊರಗಿನ ಪ್ರಪಂಚವನ್ನು ರೂಪಿಸುತ್ತಿರುವ ಶಕ್ತಿಗಳು ಮತ್ತು ಪ್ರಕ್ರಿಯೆಗಳು ಈ ಸ್ವರೂಪದವು. ಭವಿಷ್ಯದ ಇತಿಹಾಸಕಾರನಿಗೆ ಬಹುಶಃ ಅಚ್ಚರಿ ಮೂಡಿಸುವ ಎರಡು ಅಂಶಗಳೆಂದರೆ ಬದಲಾವಣೆಗಳ ತ್ವರಿತಗತಿ ಹಾಗೂ ಅವುಗಳ ನಿಯಂತ್ರಣ ಯಾವುದೇ ಒಂದು ಕೇಂದ್ರದಿಂದ, ಶಕ್ತಿಯಿಂದ ಆಗುತ್ತಿಲ್ಲ ಎಂಬುದು.

ಬಿರುಗಾಳಿಯ ಕೇಂದ್ರದೊಳಗಿರುವ ನಮಗೆ ಅದರ ವ್ಯಾಪ್ತಿ ಮತ್ತು ಶಕ್ತಿಯನ್ನು ಅಳೆಯಲಾಗುತ್ತಿಲ್ಲ. ಇದರಿಂದ ನಮ್ಮ ಪರಿಸರ ಮತ್ತು ಸಮಾಜದ ಮೇಲಾಗುತ್ತಿರುವ ಪರಿಣಾಮಗಳನ್ನು ನಿಖರವಾಗಿ ಅರಿಯಲೂ ಆಗುತ್ತಿಲ್ಲ. ನಮಗೆ ಅವಶ್ಯವಾದ ಇಲ್ಲವೇ ಅಪೇಕ್ಷಣೀಯವಾದ ದಿಕ್ಕಿನಲ್ಲಿ ಬದಲಾವಣೆಗಳನ್ನು ಕೊಂಡೊಯ್ಯಲೂ ಆಗದಿರಬಹುದು. ಆದರೆ ನಾವು ಮನುಕುಲದ ಇತಿಹಾಸದಲ್ಲಿಯೇ ಹೆಚ್ಚಿನ ಬದಲಾವಣೆಗಳ, ಸಾಧ್ಯತೆಗಳ ಮತ್ತು ತಲ್ಲಣಗಳ ಕಾಲಘಟ್ಟಗಳಲ್ಲೊಂದರಲ್ಲಿ ಬದುಕಿದ್ದೇವೆ.

2016ನ್ನು ಸ್ವಾಗತಿಸುತ್ತ, ನಮ್ಮ ಕಾಲದ ಚಲನೆಯನ್ನು ಗುರುತಿಸುವ, ಸಾಧ್ಯವಾದಷ್ಟು ರೂಪಿಸುವ ಸವಾಲು ನಮ್ಮ ಮುಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.