ADVERTISEMENT

ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಪ್ರಕಾಶ್ ಕೊಡುಗೆ ಅನನ್ಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:09 IST
Last Updated 16 ಜೂನ್ 2018, 9:09 IST

ಮರೆಯುವ ಮುನ್ನ, ತಡವಾಗುವ ಮುನ್ನ ಬಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಅವರನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಇದಕ್ಕೆ ನಮಗಿರುವ ನೆಪ ಕಳೆದ ಜೂನ್ 10ಕ್ಕೆ ಅವರಿಗೆ 60 ವರ್ಷಗಳಾದದ್ದು. ಇಂದಿನ ತಲೆಮಾರಿಗೆ ಪ್ರಕಾಶ್, ಬಾಲಿವುಡ್ ತಾರೆ ದೀಪಿಕಾರ ತಂದೆಯಾಗಿಯೇ ಹೆಚ್ಚು ಪರಿಚಿತರು. ಅವರ 60ನೇ ಹುಟ್ಟುಹಬ್ಬದ ವರದಿಗಳು ಕೂಡ ದೀಪಿಕಾ, ತಂದೆಯ ಹುಟ್ಟುಹಬ್ಬ ಆಚರಿಸಲು ಬೆಂಗಳೂರಿಗೆ ಬರುತ್ತಾರೆ ಎನ್ನುವುದರ ಮೇಲೆ ಕೇಂದ್ರೀಕೃತವಾಗಿದ್ದವು. ಕಳೆದ ತಿಂಗಳು ಪ್ರಕಾಶರ ಕೆಲವು ಸಂದರ್ಶನಗಳು ಪತ್ರಿಕೆಗಳಲ್ಲಿ ಪ್ರಕಟವಾದರೂ ಅವುಗಳ ಸಂಖ್ಯೆ, ದೀಪಿಕಾರ ಸ್ನೇಹಿತ ರಣವೀರ್ ಸಿಂಗ್ ಪ್ರಕಾಶರ ಹುಟ್ಟುಹಬ್ಬದ ಆಚರಣೆಗೆ ಬೆಂಗಳೂರಿಗೆ ಬಂದಿದ್ದರು ಎಂಬ ವರದಿಗಳಿಗಿಂತ ಕಡಿಮೆಯೇ.  ಭಾರತೀಯ ಕ್ರೀಡಾ ಇತಿಹಾಸದ ಅತ್ಯಂತ ದೊಡ್ಡ ಸಾಧಕರೊಬ್ಬರ ಬದುಕು ಮತ್ತು ಸಾಧನೆಗಳನ್ನು ನಾವು ಅರಿಯಲು ಪ್ರಯತ್ನಿಸುವ ಬಗೆಯಿದು.

ನಾನು ಪ್ರಕಾಶರನ್ನು ಹತ್ತಿರದಿಂದ ಬಲ್ಲವನಲ್ಲ. ಅಥವಾ ವೃತ್ತಿಪರ ಕ್ರೀಡಾ ವರದಿಗಾರನಾಗಿ ಕೆಲಸ ಮಾಡಿದವನಲ್ಲ. ಹಾಗಾಗಿ ಅವರ ಕುರಿತಾದ ನನ್ನ ತಿಳಿವಳಿಕೆ ಪತ್ರಿಕಾ ವರದಿಗಳಿಂದ ಮತ್ತು ದೇವ್ ಸುಕುಮಾರರ ಜೀವನಚರಿತ್ರೆಯಿಂದ ಪಡೆದದ್ದು. ಆದರೆ ಕಳೆದ ಮೂರೂವರೆ ದಶಕಗಳಿಂದ ಅವರ ಎಲ್ಲ ಸಾಧನೆಗಳು ಮತ್ತು ಪ್ರಯೋಗಗಳನ್ನು ತುಂಬ ಕುತೂಹಲದಿಂದ ಗಮನಿಸುತ್ತಿದ್ದೇನೆ. ಎಪ್ಪತ್ತರ ದಶಕದ ಕಡೆಯಲ್ಲಿ ‘ಪ್ರಜಾವಾಣಿ’ ಓದಲು ಮತ್ತು ಆಕಾಶವಾಣಿಯ ರಾಷ್ಟ್ರೀಯ ವಾರ್ತೆಗಳನ್ನು ಕೇಳಲು ಕಾರಣಗಳಲ್ಲೊಂದು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪ್ರಕಾಶರ ಯಶಸ್ಸಿನ ಸುದ್ದಿ ತಿಳಿಯುವುದು. ಇಂದು ನಮಗೆ ಅಂತರ್ಜಾಲ ಮತ್ತು ಕ್ರೀಡಾ ಟಿ.ವಿ. ವಾಹಿನಿಗಳು ಇಲ್ಲದ ಸಮಯವೊಂದನ್ನು ಊಹಿಸಲೂ ಆಗದು. ಆಗ, ಪ್ರಕಾಶರ ನೆಪದಲ್ಲಿ ಪ್ರಪಂಚದ ಸುದ್ದಿಗಳನ್ನು ರೇಡಿಯೊ ಮತ್ತು ವೃತ್ತಪತ್ರಿಕೆಗಳ ಮೂಲಕ ಅರಿಯುತ್ತ, ನಮ್ಮ ಸುತ್ತಮುತ್ತಲ ಜಗತ್ತಿನ ಅರಿವನ್ನೂ ಪಡೆಯುತ್ತಿದ್ದೆವು.

‘ಪ್ರಜಾವಾಣಿ’ಯಲ್ಲಿ ಮತ್ತು ಆಕಾಶವಾಣಿಯ ಮೂಲಕ ಸಂಕ್ಷಿಪ್ತ ವರದಿಗಳು ಮತ್ತು ಪಂದ್ಯದ ಫಲಿತಾಂಶ (ಸ್ಕೋರ್) ಮಾತ್ರ ದೊರಕುತ್ತಿತ್ತು. ಅವರ ಆಟದ ತುಣುಕುಗಳು ಅಪರೂಪಕ್ಕೆ ದೂರದರ್ಶನದ ಭಾನುವಾರ ಸಂಜೆಯ ಕ್ರೀಡಾವರದಿ ಕಾರ್ಯಕ್ರಮದಲ್ಲಿ ಕೆಲವೇ ನಿಮಿಷಗಳು ದೊರಕುತ್ತಿದ್ದವು. ಹಾಗಾಗಿ ಪ್ರಕಾಶರ ಆಟದ ವೈಖರಿಯನ್ನು ಅರಿಯುವ, ಆನಂದಿಸುವ ಅವಕಾಶ  ಸಿಕ್ಕಿದ್ದು ಕಡಿಮೆಯೇ.

ಇಂಡೊನೇಷ್ಯಾ ಹಾಗೂ ಚೀನಾದ ದಿಗ್ಗಜರ ನಡುವೆ ಪ್ರಕಾಶ್, ಜಾಗತಿಕ ಮಟ್ಟದಲ್ಲಿ ಗಣನೀಯ ಯಶಸ್ಸನ್ನು ಗಳಿಸಿದವರು. ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಪ್ರಕಾಶ್ ಈ ದೇಶಗಳ ಮೂರು ತಲೆಮಾರಿನ ಆಟಗಾರರೊಡನೆ ಸತತವಾಗಿ ಸೆಣಸಿದರು. ಈ ಕಾಲಘಟ್ಟದಲ್ಲಿ ಪ್ರಕಾಶರ ಮುಖ್ಯ ಪ್ರತಿಸ್ಪರ್ಧಿಗಳಾಗಿದ್ದವರು ಇಂಡೊನೇಷ್ಯಾದ ರೂಡಿ ಹಾರ್ಟನೊ, ಲಿಮ್ ಸ್ವೀ ಕಿಂಗ್ ಮತ್ತು ಸುಗಿಯಾರ್ತೊ ಹಾಗೂ ಚೀನಾದ ಹಾನ್ ಜಿಯಾನ್, ಯಾಂಗ್ ಯಾಂಗ್ ಮತ್ತು ಝಾವ್ ಜಿಯಾನ್‍ಹುವ. ಈ ಪಟ್ಟಿಗೆ ಸೇರುವ ಮತ್ತೊಬ್ಬರು ಡೆನ್ಮಾರ್ಕಿನ ಮಾರ್ಟಿನ್ ಫ್ರಾಸ್ಟ್. ಯುರೋಪು ಸೇರಿದಂತೆ ಇತರ ದೇಶಗಳ ಬ್ಯಾಡ್ಮಿಂಟನ್ ಆಟಗಾರರಿಗೆ ತಾವೂ  ಇಂಡೊನೇಷ್ಯಾ ಮತ್ತು ಚೀನಾಗಳ ಆಟಗಾರರನ್ನು ಸೋಲಿಸಬಹುದು ಎಂಬ ವಿಶ್ವಾಸವನ್ನು, ನಂಬಿಕೆಯನ್ನು ತಂದುಕೊಟ್ಟವರು. ಪ್ರಕಾಶರ ಸ್ನೇಹಿತ  ಮಾರ್ಟಿನ್ ಫ್ರಾಸ್ಟ್ ಪದೇ ಪದೇ ಪ್ರಕಾಶರಿಂದ ಕಲಿತ ಪಾಠಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಅದರಲ್ಲೂ ಪ್ರಕಾಶರ ಶಾಂತ ಮನೋಧರ್ಮ, ಚುರುಕಾದ ಬುದ್ಧಿಮತ್ತೆ ಮತ್ತು ಆತ್ಮವಿಶ್ವಾಸಗಳು ಇತರರಿಗೆ ಅನುಕರಣೀಯವಾಗಿತ್ತು.

ಬೆಂಗಳೂರಿನ ಮಲ್ಲೇಶ್ವರದ ಕೆನರಾ ಯೂನಿಯನ್‌ನ ಹವ್ಯಾಸಿ ವಲಯಗಳಿಂದ ಬ್ಯಾಡ್ಮಿಂಟನ್ ಜಗತ್ತಿನ ಸ್ಪರ್ಧಾತ್ಮಕ ಪ್ರಪಂಚದೆಡೆಗೆ ಚಲಿಸಿದ ಪ್ರಕಾಶರ ಪ್ರಯಾಣ ಕುತೂಹಲಕರ ಮತ್ತು ಯಾವುದೇ ಬಾಲಿವುಡ್ ಚಲನಚಿತ್ರಕ್ಕಿಂತಲೂ ರೋಚಕವಾದುದು. ಅವರ ತಂದೆ ರಮೇಶ್ ಪಡುಕೋಣೆ  ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್‌ಗೆ ಭದ್ರ ಬುನಾದಿ ಹಾಕಿದವರು. ಬಾಲ್ಯದಿಂದಲೂ ಆಡುತ್ತ ಬೆಳೆದ ಪ್ರಕಾಶ್ ಹದಿಹರೆಯದಲ್ಲಿಯೇ ಯಶಸ್ಸು ಕಂಡರು. 1972ರಲ್ಲಿ ಜೂನಿಯರ್ ಮತ್ತು ಸೀನಿಯರ್ ರಾಷ್ಟ್ರೀಯ ಪಂದ್ಯಾವಳಿಗಳೆರಡನ್ನೂ ಗೆದ್ದರು.

ಮುಂದಿನ ಹದಿನೈದು ವರ್ಷಗಳಲ್ಲಿ ಭಾರತದ ಯಾವುದೇ ಬ್ಯಾಡ್ಮಿಂಟನ್ ಆಟಗಾರ ಅದುವರೆಗೆ ಗಳಿಸದ ಯಶಸ್ಸು ಸಾಧಿಸಿದರು. ಇವುಗಳ ಪೈಕಿ ಬಹು ಮುಖ್ಯವಾದವು ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ (1978), ಲಂಡನ್ ಮಾಸ್ಟರ್ಸ್ ಪಂದ್ಯಾವಳಿ (1979), ಆಲ್ ಇಂಗ್ಲೆಂಡ್, ಸ್ವೀಡಿಷ್‌ ಮತ್ತು ಡ್ಯಾನಿಷ್ ಓಪನ್ ಪಂದ್ಯಾವಳಿಗಳು (ಮೂರೂ 1980ರಲ್ಲಿ), ವಿಶ್ವಕಪ್ (1981) ಮತ್ತು ಹಾಂಕಾಂಗ್ ಓಪನ್ (1982). 1980ರ ಆಲ್ ಇಂಗ್ಲೆಂಡ್ ಪಂದ್ಯಾವಳಿಯ ಗೆಲುವು ಪ್ರಕಾಶರಿಗೆ ಹೆಚ್ಚಿನ ಪ್ರತಿಷ್ಠೆಯನ್ನು ತಂದುಕೊಟ್ಟಿತಲ್ಲದೆ ಭಾರತದಲ್ಲಿ ಬ್ಯಾಡ್ಮಿಂಟನ್ ಬೆಳವಣಿಗೆಗೂ ಸಹಕಾರಿಯಾಯಿತು. ಈ ಗೆಲುವುಗಳ ಜೊತೆಗೆ ಪ್ರಕಾಶ್ ಹತ್ತಾರು ಪಂದ್ಯಾವಳಿಗಳಲ್ಲಿ ಅಂತಿಮ ಸುತ್ತುಗಳನ್ನು ಪ್ರವೇಶಿಸಿದ್ದಾರೆ. ಅತ್ಯಂತ ಸ್ಪರ್ಧಾತ್ಮಕವಾಗಿರುತ್ತಿದ್ದ ಈ ಪಂದ್ಯಾವಳಿಗಳಲ್ಲಿ ಚೀನಾ ಮತ್ತು ಇಂಡೊನೇಷ್ಯಾದ ಆಟಗಾರರನ್ನು ಎದುರಿಸುವುದು ಸುಲಭವಾಗಿರಲಿಲ್ಲ.

ಪ್ರಕಾಶರ ಯಶಸ್ಸು ಭಾರತೀಯ ಕ್ರೀಡಾಜಗತ್ತನ್ನು ಪೀಡಿಸುತ್ತಿರುವ ಹಲವಾರು ಸಾಂಪ್ರದಾಯಿಕ ಸಮಸ್ಯೆಗಳ ನಡುವೆಯೇ ಬಂದಿದೆ. ಬ್ಯಾಡ್ಮಿಂಟನ್‍ ಅಸೋಸಿಯೇಷನ್ ಆಫ್ ಇಂಡಿಯಾದ (ಬಿಎಐ) ಕಾರ್ಯವೈಖರಿ ಐತಿಹಾಸಿಕವಾಗಿ ಆಟಗಾರರಿಗೆ ಮೂಲಭೂತ ಸೌಕರ್ಯಗಳು ಹಾಗೂ ಉತ್ತಮ ತರಬೇತಿ ಒದಗಿಸುವುದಾಗಲಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಗಳನ್ನು ನಡೆಸುವುದಾಗಲಿ ಆಗಿರಲಿಲ್ಲ.

ದಶಕಗಟ್ಟಲೆ ಅವಧಿಗೆ ಅಧಿಕಾರ ಹಿಡಿದಿಟ್ಟುಕೊಳ್ಳುತ್ತಿದ್ದ ಆಡಳಿತಗಾರರು ಪ್ರಕಾಶ್ ಸೇರಿದಂತೆ ಎಲ್ಲ ಆಟಗಾರರನ್ನು ನಿಯಂತ್ರಿಸುವ ಪ್ರಯತ್ನವನ್ನು ಮಾಡುತ್ತಿದ್ದ ನಿರ್ಲಜ್ಜರು. ಜೊತೆಗೆ ಬ್ಯಾಡ್ಮಿಂಟನ್‌ಗೆ ದೊರಕುತ್ತಿದ್ದ ಖಾಸಗಿ ಇಲ್ಲವೇ ಸಾರ್ವಜನಿಕ ವಲಯದ ಉದ್ದಿಮೆಗಳ ಪ್ರೋತ್ಸಾಹವೂ ಹೆಚ್ಚಿನದೇನಾಗಿರಲಿಲ್ಲ. ಉದಾಹರಣೆಗೆ ಬಿ.ಕಾಂ. ಮುಗಿಸಿದ ನಂತರ ಪ್ರಕಾಶ್ ಯೂನಿಯನ್ ಬ್ಯಾಂಕಿನಲ್ಲಿ ಉದ್ಯೋಗ ಪಡೆದದ್ದು ಎಲ್ಲರಂತೆ ಪರೀಕ್ಷೆ ಬರೆದು, ಕ್ರೀಡಾಮೀಸಲಾತಿಯಿಂದಲ್ಲ. ಬ್ಯಾಂಕಿನ ಹಿರಿಯ ಅಧಿಕಾರಿಗಳು ಪ್ರಕಾಶರಿಗೆ ಉತ್ತೇಜನ ನೀಡಿದರೂ, ಪ್ರಕಾಶ್ ಎಲ್ಲರಂತೆ ದಿನದ ಕೆಲಸ ಮಾಡಿ ಜೊತೆಗೆ ಬ್ಯಾಡ್ಮಿಂಟನ್ ಅಭ್ಯಾಸವನ್ನೂ ನಡೆಸಿದವರು. 

ಧ್ಯಾನ್‌ಚಂದ್‌, ವಿಶ್ವನಾಥನ್ ಆನಂದ್ ಮತ್ತು ತೆಂಡೂಲ್ಕರ್ ಹೀಗೆ ಪ್ರಕಾಶರಂತೆ ಕ್ರೀಡಾಂಗಣದೊಳಗೆ ಯಶಸ್ಸು ಗಳಿಸಿದವರು ಹಲವರಿದ್ದಾರೆ. ಆದರೆ ಪ್ರಕಾಶ್ ಭಾರತೀಯ ಕ್ರೀಡಾ ಇತಿಹಾಸದಲ್ಲಿ ವಿಶಿಷ್ಟರಾಗುವುದು ಮೂರು ಕಾರಣಗಳಿಂದ. ಮೊದಲಿಗೆ, ಜಾಗತಿಕ ಮಟ್ಟದ ಸಾಧನೆ ಮಾಡಲು ಏನು ಅಗತ್ಯ ಎಂಬುದನ್ನು ಅರಿತ ಪ್ರಕಾಶ್ ಅದರ ಬೆಂಬತ್ತಿದರು. 1980ರಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ ನಂತರ ಅದನ್ನು ಉಳಿಸಿಕೊಳ್ಳಲು ವೃತ್ತಿಪರನಾಗಿ ಯುರೋಪಿನಲ್ಲಿ ಅಭ್ಯಾಸ ಮಾಡಲು ಡೆನ್ಮಾರ್ಕಿಗೆ ಹೋದರು. ಮಧ್ಯಮವರ್ಗದ ಹಿನ್ನೆಲೆಯ  ಪ್ರಕಾಶ್ ತಮ್ಮ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿ, ಹೆಚ್ಚೇನೂ ಹಣವಿರದ ಬ್ಯಾಡ್ಮಿಂಟನ್‍ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲು ಹೋದದ್ದು ಸುಲಭದ ನಿರ್ಧಾರವಾಗಿರಲಿಕ್ಕಿಲ್ಲ. ಆದರೆ ಚೀನಾ ಮತ್ತು ಇಂಡೊನೇಷ್ಯಾದ ಆಟಗಾರರನ್ನು ಎದುರಿಸಲು ಪೂರ್ಣಾವಧಿಯ ವೃತ್ತಿಪರ ತರಬೇತಿ ಮತ್ತು ದೈಹಿಕ ಕ್ಷಮತೆಯನ್ನು ಬೆಳಸಿಕೊಳ್ಳುವ ಅಗತ್ಯವಿದೆ ಎಂದು ಅರಿತಿದ್ದರು.

ನಿಯಮಿತ ತರಬೇತಿಯ ಜೊತೆಗೆ, ಪ್ರಕಾಶ್ ತಮ್ಮ ಆಟದ ಶೈಲಿಯಲ್ಲೂ ಸತತವಾಗಿ ಮಾರ್ಪಾಡು ಮಾಡಿಕೊಳ್ಳುವ ಜಾಣ್ಮೆ ತೋರಿದರು. ಸಾಂಪ್ರದಾಯಿಕ ಭಾರತೀಯ ಶೈಲಿಯ ನಿಖರತೆ ಮತ್ತು ತಂತ್ರಗಾರಿಕೆಯ ಜೊತೆಗೆ ಆಧುನಿಕ ಬ್ಯಾಡ್ಮಿಂಟನ್‌ನ ಲಕ್ಷಣವಾದ ವೇಗವನ್ನು ಅಳವಡಿಸಿಕೊಂಡರು. ಎಂದೂ ಶಕ್ತಿಯ ಆಟಕ್ಕೆ ಹೆಸರಾಗಿರದ ಪ್ರಕಾಶ್ ತಮ್ಮ ಎದುರಾಳಿ ಕಿಂಗ್‌ರಂತೆ ಸ್ಮಾಶ್ ಮಾಡಲಿಲ್ಲ. ಆದರೆ ತನ್ನ ಆಟದ ವೇಗಕ್ಕೆ ಎದುರಾಳಿಯೂ ಹೊಂದಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದರು. ಅವರ ನೆಟ್ ಬಳಿಯ ಆಟ ಮತ್ತು ಮಣಿಕಟ್ಟಿನ (ರಿಸ್ಟ್) ಕುಶಲತೆ ಎದುರಾಳಿಯೆಡೆಗೆ ಅನಿರೀಕ್ಷಿತ ಹೊಡೆತಗಳನ್ನು ಕಳಿಸಲು ನೆರವಾಗುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಅವರ ಸಮಚಿತ್ತತೆ ಮತ್ತು ಎದುರಾಳಿಯ ಸಾಮರ್ಥ್ಯವನ್ನು ಅಳೆದು, ಅಗತ್ಯ ಬದಲಾವಣೆ ಮಾಡಿಕೊಳ್ಳಬಲ್ಲ ಶಕ್ತಿಯನ್ನು ಎಲ್ಲರೂ ಗುರುತಿಸುತ್ತಾರೆ. ಹೀಗೆ ಪ್ರಕಾಶ್ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಬೆಳೆಸಿಕೊಳ್ಳುವಲ್ಲಿ ಯಶಸ್ವಿಯಾದರು. ನನಗೆ ಇಲ್ಲಿ ಗಮನಾರ್ಹವೆನಿಸುವುದು ತನ್ನ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸುವುದು ಹೇಗೆ ಎಂದು ಅರಿತ ಪ್ರಕಾಶ್ ಅದರ ಬೆಂಬತ್ತಿದ ರೀತಿ.

ನಾನಿಲ್ಲಿ ಪ್ರಸ್ತಾಪಿಸಬಯಸುವ ಎರಡನೆಯ ಅಂಶ ಪ್ರಕಾಶ್ ಮತ್ತು ವಿಮಲ್ ಕುಮಾರ್ ನಿವೃತ್ತಿಯ ನಂತರ ಬ್ಯಾಡ್ಮಿಂಟನ್ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿದ್ದು. ಪ್ರಕಾಶ್ ಮತ್ತು ವಿಮಲ್ ಇಬ್ಬರೂ ತಮ್ಮ ತರಬೇತಿಗಾಗಿ ಡೆನ್ಮಾರ್ಕ್ ಮತ್ತು ಇಂಗ್ಲೆಂಡ್‌ಗಳಿಗೆ ಹೋಗಬೇಕಾಯಿತು. ಹಾಗೂ ಬಿಎಐನ ನೆರವಿಗಿಂತ ಅಡಚಣೆಗಳನ್ನೇ ಎದುರಿಸುತ್ತ ಇಬ್ಬರೂ ತಮ್ಮ ವೃತ್ತಿಜೀವನ ಕಳೆದರು. ತಮ್ಮ ಮುಂದಿನ ಪೀಳಿಗೆಗೆ ವ್ಯವಸ್ಥಿತ ತರಬೇತಿ ಸೌಲಭ್ಯ ಒದಗಿಸಲು ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯನ್ನು 1994ರಲ್ಲಿ ತೆಗೆದರು. ಎರಡು ದಶಕದಲ್ಲಿ ಭಾರತದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರರೆಲ್ಲ ಇಲ್ಲಿ ಅಭ್ಯಾಸ ಮಾಡಿದ್ದಾರೆ ಇಲ್ಲವೇ ತರಬೇತಿ ಪಡೆದಿದ್ದಾರೆ. ಅಕಾಡೆಮಿಯ ಸಾಧನೆಗಳ ಬಗ್ಗೆ ಹಾಗೂ ಅಲ್ಲಿ ತರಬೇತಿಯ ಅವಕಾಶ ಪಡೆಯಲು ಈಗ ಕಾಯಬೇಕಾಗುತ್ತದೆ ಎಂಬ ಪ್ರಶ್ನೆಗಳಿವೆ.

ಆದರೆ, ಇಲ್ಲಿ ಎರಡು ಅಂಶಗಳು ಮುಖ್ಯ. ಸರ್ಕಾರಿ ಸಂಸ್ಥೆಗಳು ಮತ್ತು ಬಿಎಐ ಕಟ್ಟಲಾಗದ ಅಕಾಡೆಮಿಯೊಂದನ್ನು ಪ್ರಕಾಶ್ ಬೆಳೆಸಿದ್ದಾರೆ. ಜೊತೆಗೆ, ಅಗತ್ಯ ಕಂಡಾಗ ತಮ್ಮ ಕಾರ್ಯವಿಧಾನದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಉದಾಹರಣೆಗೆ ಕಳೆದ ದಶಕದಲ್ಲಿ ಹಿರಿಯರಿಗಿಂತ ಕಿರಿಯ ಆಟಗಾರರಿಗೆ ತಮ್ಮ ಮಾರ್ಗದರ್ಶನ ಮತ್ತು ತರಬೇತಿ ಸೌಲಭ್ಯಗಳ ಅವಶ್ಯಕತೆ ಇದೆ ಎಂದು ಅರಿತು ಅವರೆಡೆಗೆ ಪ್ರಕಾಶ್ ಗಮನ ಹರಿಸಿದ್ದಾರೆ.

ಮೂರನೆಯದಾಗಿ, ಬಿಎಐನ ಭ್ರಷ್ಟತೆ ಮತ್ತು ಆಟಗಾರರನ್ನು ನಿಯಂತ್ರಿಸುವ ಮನೋಭಾವದ ಆಡಳಿತಗಾರರ ವಿರುದ್ಧ ವ್ಯವಸ್ಥಿತ ಹೋರಾಟವನ್ನು ಪ್ರಕಾಶ್ 1997ರಲ್ಲಿ ನಡೆಸಿದರು ಮತ್ತು ಪರ್ಯಾಯ ಸಂಘಟನೆಯನ್ನು ಕಟ್ಟಿದರು. ಪ್ರಕಾಶರ ಈ ಪ್ರಯತ್ನ ಅವರ ವ್ಯಕ್ತಿತ್ವದ ಮಿತಿಗಳೂ ಸೇರಿದಂತೆ ಹಲವಾರು ಕಾರಣಗಳಿಂದ ಪೂರ್ಣವಾಗಿ ಯಶಸ್ಸು ಗಳಿಸಲಿಲ್ಲ. ಆದರೆ ದಶಕಗಳಿಂದ ಬಿಎಐ ನಿಯಂತ್ರಿಸುತ್ತಿದ್ದ ಫಜಿಲ್ ಅಹ್ಮದ್‌ರಂತಹ ಆಡಳಿತಗಾರರು ಹೊರಬರಬೇಕಾಯಿತು. ಹೊಂದಾಣಿಕೆ ಮಾಡಿಕೊಂಡು, ಲಾಭ ಪಡೆಯಲೆಣಿಸುವ ಕ್ರೀಡಾಪಟುಗಳ ನಡುವೆ ಪ್ರಕಾಶರ ಪ್ರಯತ್ನ ಗಮನಾರ್ಹ ಮತ್ತು ಶ್ಲಾಘನೀಯ.

ಕ್ರೀಡಾಂಗಣದೊಳಗಿನ ಸಾಧನೆ ಹಾಗೂ ಅದಕ್ಕೆ ಅಗತ್ಯವಾದ ಸಿದ್ಧತೆ, ಅಕಾಡೆಮಿಯ ಸ್ಥಾಪನೆ ಮತ್ತು ಬ್ಯಾಡ್ಮಿಂಟನ್ ಆಡಳಿತ ವ್ಯವಸ್ಥೆಯ ಸುಧಾರಣೆ ಈ ಮೂರೂ ಆಯಾಮಗಳನ್ನು ಒಟ್ಟಿಗೆ ಗಮನಿಸಿದಾಗ ಪ್ರಕಾಶ್ ಪಡುಕೋಣೆಯವರ ಸ್ಥಾನ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅನನ್ಯವಾದುದು ಎಂಬುದು ಸುಸ್ಪಷ್ಟ. ಇತಿಹಾಸದ ವೃತ್ತಿಪರ ವಿದ್ಯಾರ್ಥಿಯಾದ ನನಗೆ ಮತ್ತೊಬ್ಬ ಇಂತಹ ಕ್ರೀಡಾಪಟು ಕಾಣುತ್ತಿಲ್ಲ. ಪ್ರಕಾಶರ ಸಜ್ಜನಿಕೆ ಮತ್ತು ವಿವಾದಾತೀತ ಬದುಕು ನಮ್ಮೆಲ್ಲರ ಮೆಚ್ಚಿಗೆ ಮತ್ತು ಗೌರವಗಳನ್ನು ಗಳಿಸಿಕೊಂಡಿದೆ. ಅವರಿಗೆ ನಮ್ಮ ಶುಭಾಶಯಗಳು ಮತ್ತು ಕೃತಜ್ಞತೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.