ದೇವರಾಜ ಅರಸು ಅವರ ಶತಮಾನೋತ್ಸವ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ನಿನ್ನೆ ಪ್ರಾರಂಭವಾದವು. ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕಾರಣದ ವ್ಯಾಕರಣವನ್ನು ಸಂಪೂರ್ಣವಾಗಿ ಬದಲಿಸಿದ ಹಾಗೂ ನಮ್ಮ ಸಾರ್ವಜನಿಕ ನೀತಿಯ ಆದ್ಯತೆಗಳಿಗೆ ಹೊಸ ಆಯಾಮಗಳನ್ನು ನೀಡಿದ ಹಿರಿಮೆ ದೇವರಾಜ ಅರಸು ಅವರದು ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಈ ಕಾರಣದಿಂದಲೇ ಅರಸು ಅವರು ಕರ್ನಾಟಕ ಕಂಡಿರುವ ಅತ್ಯಂತ ಪ್ರಭಾವಶಾಲಿ ರಾಜಕಾರಣಿ ಎಂಬುದನ್ನು ಅವರ ಟೀಕಾಕಾರರೂ ಒಪ್ಪಲೇಬೇಕು. ಅವರಿಂದ ಆಗಿರುವ ಬದಲಾವಣೆಗಳು, ಅವರ ಶ್ರೇಷ್ಠತೆಯ ಚರ್ಚೆಯನ್ನು ಮೀರಿ ನಿಲ್ಲುವಷ್ಟು ಪ್ರಮುಖವಾದವುಗಳು.
ಹಾಗಾಗಿ ಈ ವರ್ಷ ಕರ್ನಾಟಕದಾದ್ಯಂತ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಅರಸು ಅವರ ಬದುಕು ಮತ್ತು ಸಾಧನೆಗಳನ್ನು ಚರ್ಚಿಸುವಾಗ, ಅವರನ್ನು ನೆನಪಿಸಿಕೊಳ್ಳುವಾಗ, ಕನ್ನಡಿಗರಿಗೆ ತಮ್ಮ ಇತ್ತೀಚಿನ ಇತಿಹಾಸವನ್ನು ಮತ್ತೊಮ್ಮೆ ಅವಲೋಕಿಸುವ ಅವಕಾಶವೊಂದು ಲಭಿಸುತ್ತಿದೆ. ಕಳೆದ ಏಳು ದಶಕಗಳ ಪ್ರಜಾಸತ್ತಾತ್ಮಕ ಪರಂಪರೆಯು ಬೆಳೆದುಬಂದಿರುವ ದಾರಿಯನ್ನು ಮತ್ತೊಮ್ಮೆ ವಿಮರ್ಶಿಸಿಕೊಳ್ಳುವ ಅವಕಾಶ ದೊರಕುತ್ತಿದೆ. ಈ ಮಾತನ್ನು ಆಧುನಿಕ ಕಾಲದ ಬೇರೆ ಯಾವ ಕನ್ನಡಿಗನ ವಿಚಾರದಲ್ಲೂ ಹೇಳಲು ಸಾಧ್ಯವಿಲ್ಲ. ಹಾಗಾಗಿ ‘ಅರಸು ಪರಂಪರೆ’ಯ ಚರ್ಚೆಯನ್ನು ಪ್ರಾರಂಭಿಸುವ ಸುವರ್ಣಾವಕಾಶ ನಮ್ಮ ಮುಂದಿದೆ.
ಒಂದು ರೀತಿಯಲ್ಲಿ ‘ಅರಸು ಪರಂಪರೆ’ ಹಲವು ವಿಪರ್ಯಾಸಗಳನ್ನು ಒಳಗೊಳ್ಳುತ್ತ, ನಮ್ಮ ಕಣ್ಣ ಮುಂದೆಯೇ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತ, ದೇವರಾಜ ಅರಸು ಎಂಬ ವ್ಯಕ್ತಿಯನ್ನೂ ಮೀರಿ ಬೆಳೆದಿದೆ. ಅಪ್ಪಟ ಕಾಂಗ್ರೆಸ್ ವಿರೋಧಿಗಳು ಸಹ ಇಂದಿರಾ ಗಾಂಧಿಯವರ ರಾಜಕೀಯ ಮರುಹುಟ್ಟಿಗೆ ಕಾರಣಕರ್ತರಾದ ಅರಸು ಅವರನ್ನು ಪಕ್ಷ ರಾಜಕಾರಣದ ಚೌಕಟ್ಟಿನಾಚೆಗಿಟ್ಟು ನೋಡುತ್ತಿದ್ದಾರೆ. ವಂಶ ಪಾರಂಪರ್ಯದ ರಾಜಕಾರಣ ಭಾರತವ್ಯಾಪಿ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ಆವರಿಸಿದಾಗ, ಆ ಪಕ್ಷದ ಹಿರಿಯ ನಾಯಕರಲ್ಲೊಬ್ಬರಾಗಿದ್ದ ಅರಸು ಅವರನ್ನು ಇಂದು ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಗುರುತಿಸುತ್ತಿದ್ದಾರೆ.
ತುರ್ತುಪರಿಸ್ಥಿತಿಯ ಸಮಯದಲ್ಲಿ ಅಧಿಕಾರದ ಗದ್ದುಗೆಯನ್ನು ಬಿಗಿಯಾಗಿ ಹಿಡಿದು ಕೂತಿದ್ದ ಅರಸು ಅವರನ್ನು, ‘ಕರ್ನಾಟಕದಲ್ಲಿ ಪ್ರಜಾಸತ್ತಾತ್ಮಕ ರಾಜಕಾರಣವು ಆಳವಾಗಿ ಬೇರೂರಲು ಕಾರಣಕರ್ತರಾದವರು, ಅಲಕ್ಷಿತ ಸಮುದಾಯಗಳನ್ನು ರಾಜಕಾರಣದ ಮುಖ್ಯವಾಹಿನಿಗೆ ಕರೆತಂದವರು’ ಎಂದೇ ಕರೆಯುತ್ತಿದ್ದಾರೆ. ತಮಾಷೆಯೆಂದರೆ ಅರಸು ಅವರ ಬಗೆಗಿನ ಅವರ ರಾಜಕೀಯ ವಿರೋಧಿಗಳ ಮತ್ತು ನಮ್ಮೆಲ್ಲರ ಅಭಿಪ್ರಾಯಗಳು ಬದಲಾಗಲು ಹೊಸದೇನೂ ಸಂಭವಿಸಿಲ್ಲ. ಅವರನ್ನು ಕಟುವಾಗಿ ಟೀಕಿಸುತ್ತಿದ್ದ ಸಮಯದಲ್ಲಿ ಅವರು ಮಾಡಿದ ಕೆಲಸಗಳ ಬಗ್ಗೆ ನಮ್ಮ ಗ್ರಹಿಕೆಗಳು ಮಾತ್ರ ಬದಲಾಗಿವೆ.
ವಿಷಾದನೀಯ ಸಂಗತಿಯೆಂದರೆ ಅರಸು ಅವರ ಕುರಿತಾದ ಗಂಭೀರ ಅಧ್ಯಯನಗಳು ಬಹಳ ಕಡಿಮೆ. ಕನ್ನಡದಲ್ಲಾಗಲಿ ಅಥವಾ ಇಂಗ್ಲಿಷಿನಲ್ಲಾಗಲಿ ಅರಸು ಅವರ ಮೇಲೆ ಒಳ್ಳೆಯ ಜೀವನಚರಿತ್ರೆ ಒಂದೂ ಇಲ್ಲ. ಈ ಮಾತನ್ನು ವಡ್ಡರ್ಸೆ ರಘುರಾಮಶೆಟ್ಟಿಯವರ ‘ಬಹುರೂಪಿ ಅರಸು’ ಕೃತಿಯನ್ನೂ ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ. ಇದು ಕೇವಲ ಅರಸು ಅವರ ವಿಚಾರದಲ್ಲಿ ಆಗಿರುವ ಅಪಚಾರವಲ್ಲ. ರಾಷ್ಟ್ರಕವಿ ಕುವೆಂಪು, ಡಾ. ರಾಜ್‌ಕುಮಾರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತಿತರ ಕನ್ನಡಿಗರ ವಿಚಾರದಲ್ಲೂ ಸತ್ಯ.
ಇತಿಹಾಸಕಾರ ರಾಮಚಂದ್ರ ಗುಹಾ ಆಗಾಗ ಹೇಳುತ್ತಿರುತ್ತಾರೆ, ‘ಪಶ್ಚಿಮದ ಬೌದ್ಧಿಕ ಸಂಸ್ಕೃತಿಗಳಲ್ಲಿ ಬೆಳೆದುಬಂದಿರುವಂತೆ ಉತ್ತಮ ಜೀವನ ಚರಿತ್ರೆಗಳನ್ನು ಬರೆಯುವ ಪರಂಪರೆ ನಮ್ಮಲ್ಲಿ ಬೆಳೆಯಲೇ ಇಲ್ಲ’. ಅರಸು ಅವರ ರಾಜಕೀಯ ಬದುಕಿನ ಅಧಿಕೃತ ಕಥನ ಆಂಶಿಕವಾಗಿ ದೊರಕುವುದು ರಾಘವನ್ ಮತ್ತು ಮೇನರ್ ಅವರ ‘ಬ್ರಾಡನಿಂಗ್ ಅಂಡ್ ಡೀಪನಿಂಗ್ ಡೆಮಾಕ್ರಸಿ’ (2009) ಎಂಬ ಕೃತಿಯ ಮೊದಲ ಭಾಗದಲ್ಲಿ. ಇದನ್ನು ಬಿಟ್ಟರೆ ಇಂದಿಗೂ ಅರಸು ರಾಜಕಾರಣ, ಆಡಳಿತ ನೀತಿ ಮತ್ತು ವೈಖರಿಗಳ ಬಗ್ಗೆ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ಪ್ರಕಟವಾಗಿರುವ ಬಹು ಮುಖ್ಯವಾದ ಮೂರು ಲೇಖನಗಳು ಕನಿಷ್ಠ ನಾಲ್ಕು ದಶಕಗಳಷ್ಟು ಹಳೆಯವು.
ಇವುಗಳ ಪೈಕಿ ಎರಡು ಲೇಖನಗಳನ್ನು 1977 ಮತ್ತು 1980ರಲ್ಲಿ ಪ್ರಕಟಿಸಿದವರು ಜೇಮ್ಸ್ ಮೇನರ್. ಅರಸು ಕುರಿತಾದ ತಮ್ಮ ಲೇಖನಗಳಲ್ಲಿ ಮೇನರ್, 70ರ ದಶಕದ ಕರ್ನಾಟಕದ ರಾಜಕಾರಣದಲ್ಲಿ ಒಕ್ಕಲಿಗ-ಲಿಂಗಾಯತ ಸಮುದಾಯಗಳ ರಾಜಕೀಯ ನಿಯಂತ್ರಣವನ್ನು ಮುರಿಯುವುದರ ಮೂಲಕ ಆದ ರಾಚನಿಕ ಬದಲಾವಣೆಗಳನ್ನು ಗುರುತಿಸಿದರು. ಜೊತೆಗೆ ಅರಸು ರಾಜಕಾರಣದ ಮತ್ತು ಸಾರ್ವಜನಿಕ ನೀತಿಯ ಪ್ರಗತಿಪರತೆಯನ್ನು ಚರ್ಚಿಸಿದರು. ಇವುಗಳನ್ನು ಬರೆಯುವ ಮೊದಲು 20ನೆಯ ಶತಮಾನದ ಪೂರ್ವಾರ್ಧದಲ್ಲಿ ಹಳೆಯ ಮೈಸೂರು ಭಾಗದಲ್ಲಿ ಆಗಿದ್ದ ರಾಜಕೀಯ ಬದಲಾವಣೆಗಳನ್ನು ಮೇನರ್ ಅಭ್ಯಸಿಸಿದ್ದರು.
ಈ ಅಧ್ಯಯನಗಳಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಜೊತೆಗೂಡಿ ಚುನಾವಣೆಯ ರಾಜಕೀಯ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದ ರೀತಿಯನ್ನು ಮೇನರ್ ವಿವರಿಸಿದ್ದರು. ವಿಪರ್ಯಾಸವೆಂದರೆ ಈ ಎರಡೂ ಸಮುದಾಯಗಳು ಹಿಂದುಳಿದ ವರ್ಗಗಳೆಂದು ಸರ್ಕಾರದ ಸವಲತ್ತುಗಳಿಗೆ ಬೇಡಿಕೆಯಿಡುತ್ತ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಂಡದ್ದು. ಅರಸು ಅವಧಿಯಲ್ಲಿ ಹೊಸ ಹಿಂದುಳಿದ ವರ್ಗದ ರಾಜಕಾರಣ ಪ್ರಾರಂಭವಾಗುತ್ತ, ಒಕ್ಕಲಿಗ-ಲಿಂಗಾಯತ ರಾಜಕೀಯ ನಿಯಂತ್ರಣಕ್ಕೆ ಮೊದಲ ಅಧಿಕೃತ ಸವಾಲು ಆರಂಭವಾಯಿತು ಹಾಗೂ ಅದುವರೆಗೆ ಅಧಿಕಾರದ ಮತ್ತು ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿದ್ದ ಗುಂಪುಗಳು ಹೇಗೆ ರಾಜಕೀಯ ಮುಖ್ಯವಾಹಿನಿಗೆ ಬಂದುವು ಎನ್ನುವುದನ್ನು ಮೇನರ್ ದಾಖಲಿಸುತ್ತಾರೆ.
ಅರಸು ಯುಗದ ಮತ್ತೊಂದು ಗಂಭೀರ ಮೌಲ್ಯಮಾಪನ ಮಾಡಿದವರು ಲಲಿತಾ ನಟರಾಜ್ ಮತ್ತು ವಿ.ಕೆ.ನಟರಾಜ್ (1982). ಇವರು ತಮ್ಮ ಲೇಖನದಲ್ಲಿ ಅರಸು ಅವರ ಪಾಪ್ಯುಲಿಸಮ್ (ಜನಪ್ರಿಯ ರಾಜಕಾರಣದ) ಮಿತಿಗಳನ್ನು ಗುರುತಿಸಲು ಪ್ರಯತ್ನಿಸಿದರು ಹಾಗೂ ಅರಸು ಅವರು ರೂಪಿಸಿದ ಹಿಂದುಳಿದ ವರ್ಗಗಳ ಮೈತ್ರಿ ಎಷ್ಟು ಕಾಲ ಉಳಿಯಬಹುದೆಂದು ಚರ್ಚಿಸಿದರು. ಈ ಚರ್ಚೆಗಳು ನಡೆದಿರುವುದು ‘ಅರಸು ಪರಂಪರೆ’ಯ ಬಗ್ಗೆ ಹೆಚ್ಚು ಸಹಾನುಭೂತಿಯಿಂದ ನೋಡುವ ಹೊಸ ದೃಷ್ಟಿಕೋನ ಹುಟ್ಟುವ ಮೊದಲೇನೆ.
ಗಮನಿಸಿ. ನಾನಿಲ್ಲಿ ಗುರುತಿಸಿರುವ ಮೂರೂ ಲೇಖನಗಳು ಮಹತ್ವದ ಒಳನೋಟಗಳನ್ನು ಒಳಗೊಂಡಿದ್ದರೂ ಏಳೆಂಟು ಪುಟಗಳ ಸಣ್ಣ ಲೇಖನಗಳು. ಆಶ್ಚರ್ಯದ ವಿಚಾರವೆಂದರೆ 1982ರ ನಂತರ ಅರಸು ಅವರ ಬಗ್ಗೆ ಮಹತ್ವದ ಅಧ್ಯಯನಗಳು, ಗಾತ್ರದಲ್ಲಿ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಬರಲೇ ಇಲ್ಲ. ಇತ್ತೀಚಿನ ದಶಕಗಳಲ್ಲಿ ಪ್ರಕಟವಾಗಿರುವ ಭೂಸುಧಾರಣೆ, ಮೀಸಲಾತಿ ಮತ್ತು ಹಿಂದುಳಿದ ವರ್ಗಗಳ ಮೇಲಿನ ಅಧ್ಯಯನಗಳಲ್ಲಿ ಸಹ ಅರಸು ಅವರನ್ನು ನಿರ್ಲಕ್ಷಿಸಿಯೇ ನಮ್ಮ ಚರ್ಚೆಗಳು ಮುಂದುವರಿದಿವೆ. ಸಂಖ್ಯೆಯ ದೃಷ್ಟಿಯಿಂದ ಕನ್ನಡದಲ್ಲಿ ನೂರಾರು ಕೃತಿಗಳು, ಸಂಶೋಧನಾ ಪ್ರಬಂಧಗಳು ಮತ್ತು ಲೇಖನಗಳು ಬಂದಿದ್ದರೂ, ಇವುಗಳಲ್ಲಿ ತಾತ್ವಿಕ ಚೌಕಟ್ಟುಗಳ ಅಭಾವ ಎದ್ದು ಕಾಣುತ್ತದೆ.
ಪತ್ರಾಗಾರಗಳಲ್ಲಿ ಇಲ್ಲವೇ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಮತ್ತು ಅಂಕಿ ಅಂಶಗಳನ್ನು ಕಲೆ ಹಾಕುವ ಕೆಲಸ ಆಗಲಿಲ್ಲ. ಉದಾಹರಣೆಗೆ ಭೂಸುಧಾರಣೆಯಿಂದ ಲಾಭ ಪಡೆದ ಗೇಣಿದಾರರ ಸಂಖ್ಯೆಯ ಅಂದಾಜು ಪಡೆಯಬೇಕೆಂದರೆ ಮೇನರ್ ಅವರ ಬರಹಗಳಿಗೇ ನಾವು ವಾಪಸು ಹೋಗಬೇಕಾಗುತ್ತದೆ. 1980ರ ನಂತರದ ಅಂಕಿ-ಅಂಶಗಳ ಆಧಾರದ ಮೇಲೆ ಈ ಅಂದಾಜಿನ ಪರಿಷ್ಕರಣೆ ಆಗಿಲ್ಲ. ಬದಲಿಗೆ ಈಗಾಗಲೇ ಸಾಮಾನ್ಯ ತಿಳಿವಳಿಕೆಯಾಗಿರುವ ಒಳನೋಟಗಳನ್ನೇ ಪುನಃ ನೀಡುವ, ಐತಿಹ್ಯಗಳನ್ನು ಆಧರಿಸಿದ ಬರಹಗಳೇ ಹೆಚ್ಚು. ಅಲ್ಲಲ್ಲಿ ಅರಸು ಅವರ ವರ್ಣರಂಜಿತ ವ್ಯಕ್ತಿತ್ವ, ರಾಜಕೀಯ ತಂತ್ರಗಾರಿಕೆ ಮತ್ತು ಮಾನವೀಯತೆಯ ಬಗ್ಗೆ ಒಳನೋಟಗಳನ್ನು ನೀಡುವ ಪ್ರಬಂಧಗಳು ಕಂಡುಬಂದರೂ, ಅವರ ಒಟ್ಟು ವ್ಯಕ್ತಿತ್ವವನ್ನು ಮತ್ತು ಕರ್ನಾಟಕದ ಮೇಲೆ ಅವರ ಪ್ರಭಾವವನ್ನು ಹಿಡಿದಿಡುವ ಗಂಭೀರ ಪ್ರಯತ್ನಗಳು ನಡೆದಿಲ್ಲ.
ಹಾಗೆ ನೋಡಿದರೆ ಅರಸು ಅವರನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವವರು ಸಮಾಜವಿಜ್ಞಾನಿಗಳು ಮತ್ತು ಸಂಶೋಧಕರಲ್ಲ. ಅರಸು ಅವರ ಸಹಕಸುಬುದಾರರಾದ ವೃತ್ತಿಪರ ರಾಜಕಾರಣಿಗಳು. ನಾನು ಪ್ರಾರಂಭದಲ್ಲಿ ಹೇಳಿದಂತೆ ಅರಸು ಅವರು ಕರ್ನಾಟಕ ರಾಜಕಾರಣದ ವ್ಯಾಕರಣವನ್ನೇ ಬದಲಿಸಿದರು. ಈ ಬದಲಾದ ವಾಸ್ತವವನ್ನು ಅರಿಯಲೇಬೇಕಾದ ಅನಿವಾರ್ಯತೆಯಿದ್ದ ಏಕೈಕ ವರ್ಗ ರಾಜಕಾರಣಿಗಳದ್ದು. ಹಾಗಾಗಿ ಚುನಾವಣೆಯ ರಾಜಕಾರಣದಲ್ಲಿ, ಸಾರ್ವಜನಿಕ ನೀತಿಯನ್ನು ರೂಪಿಸುವುದರಲ್ಲಿ, ಸಾಮಾಜಿಕ ಸಂಯೋಜನೆಗಳನ್ನು ರೂಪಿಸುವುದರಲ್ಲಿ, ರಾಜಕೀಯ ವಾಸ್ತವವನ್ನು ಹಳ್ಳಿಯಿಂದ ಬೆಂಗಳೂರಿನವರೆಗೆ ಬದಲಿಸಲು ಹಣವನ್ನು ಬಳಸುವುದರಲ್ಲಿ ಅರಸು ಮಾದರಿಯನ್ನು ಅನುಸರಿಸಿದವರು ಮಾತ್ರ ಕರ್ನಾಟಕದ ರಾಜಕಾರಣದಲ್ಲಿ ಯಶಸ್ಸು ಗಳಿಸಿದ್ದಾರೆ. ಇವರು ಸಮಾಜಶಾಸ್ತ್ರೀಯ ಕೃತಿಗಳನ್ನು ರಚಿಸದಿರಬಹುದು. ಆದರೆ ಕರ್ನಾಟಕದ ಎಲ್ಲ ರಾಜಕಾರಣಿಗಳೂ ಆಚರಣೆಯಲ್ಲಿ ಅರಸು ಅವರನ್ನೇ ಅನುಸರಿಸಿದ್ದಾರೆ. ಇದನ್ನೇ ನಾನು ‘ಅರಸು ಪರಂಪರೆ’ ಎಂದು ಮೇಲೆ ಕರೆದದ್ದು.
ಮೈಸೂರರಸರ ಪರಂಪರೆಗಿಂತ ಭಿನ್ನವಾದ ಈ ‘ಅರಸು ಪರಂಪರೆ’ಯನ್ನು ನಾಲ್ಕು ನೆಲೆಗಟ್ಟುಗಳಲ್ಲಿ ಇಂದು ನಾವು ಅರಿಯಬೇಕಿದೆ.
ಮೊದಲಿಗೆ, ಅರಸು ಅವರು ಅನುಷ್ಠಾನಗೊಳಿಸಿದ ಶಾಸನಗಳ ‘ಪ್ರಗತಿಪರತೆ’ಯನ್ನು ಸೈದ್ಧಾಂತಿಕವಾಗಿ, ತುಲನಾತ್ಮಕವಾಗಿ ಅಧ್ಯಯನ ಮಾಡಬೇಕಿದೆ. ಎರಡನೆಯದಾಗಿ, ಅರಸು ಅವರು ಪ್ರಾರಂಭಿಸಿದ ಹಿಂದುಳಿದ ವರ್ಗಗಳನ್ನು ಸಂಘಟಿಸುವ ರಾಜಕಾರಣವನ್ನು ಕರ್ನಾಟಕದೊಳಗಿನ ಮತ್ತು ಭಾರತದಾದ್ಯಂತ ಕಳೆದ ನೂರು ವರ್ಷಗಳಲ್ಲಿ ನಡೆದಿರುವ ಇದೇ ಬಗೆಯ ಇತರ ಪ್ರಯತ್ನಗಳ ಸಂದರ್ಭದಲ್ಲಿ ಹೋಲಿಸಿ ಚರ್ಚಿಸಬೇಕಿದೆ.
ಮೂರನೆಯದಾಗಿ, ಅರಸು ಅವರು ರೂಪಿಸಿದ ಸಾಮಾಜಿಕ ಸಂಯೋಜನೆಯ ಮಾದರಿಗಳನ್ನು 80ರ ದಶಕ ದಿಂದ ಜನತಾ ಪರಿವಾರ, ಕಾಂಗ್ರೆಸ್, ಬಿಜೆಪಿ ಮತ್ತಿತರರು ಹೇಗೆ ಅನುಕರಿಸಲು ಯತ್ನಿಸಿದರು ಎಂಬುದನ್ನು ಗುರುತಿಸಬೇಕಿದೆ. ನಾಲ್ಕನೆಯದಾಗಿ, ಕರ್ನಾಟಕದ ರಾಜ ಕಾರಣದಲ್ಲಿ ಹಣವನ್ನು ಬಳಸಲು ಅರಸು ಪ್ರಾರಂಭಿಸಿದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಹಿನ್ನೆಲೆಯಲ್ಲಿ ರಾಜಕಾರಣ ದಲ್ಲಿ ಹಣದ ವರ್ಚಸ್ಸು, ಬದಲಾಗುತ್ತ ಬಂದಿ ರುವ ಹಣದ ಕ್ರೋಡೀಕರಣದ ದಾರಿಗಳು ಮತ್ತು ಸಾರ್ವಜನಿಕ ನೀತಿಯ ಮೇಲೆ ಅವುಗಳ ಪ್ರಭಾವ -ಈ ಆಯಾಮಗಳ ಚರ್ಚೆಯನ್ನೂ ಮಾಡಬೇಕಿದೆ.
ಮುಂದಿನ ವಾರದ ಅಂಕಣದಲ್ಲಿ ಈ ನಾಲ್ಕೂ ನೆಲೆಗಟ್ಟುಗಳ ಬಗ್ಗೆ ವಿಸ್ತೃತ ಚರ್ಚೆಯನ್ನು ಮುಂದುವರಿಸುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.