ADVERTISEMENT

ಕೌತುಕದ ಕಮ್ಮಟ

ಓ.ಎಲ್.ನಾಗಭೂಷಣ ಸ್ವಾಮಿ
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST
ಕೌತುಕದ ಕಮ್ಮಟ
ಕೌತುಕದ ಕಮ್ಮಟ   

ಮಾತನ್ನು ಸೃಷ್ಟಿಸುವ, ಮಾತಿನ ಅಂಗಗಳನ್ನು ಸಂಯೋಜಿಸುವ, ಮಾತನ್ನು ಅರಿಯುವ ಮಿದುಳು- ಅದು ನಿಜವಾದ ಕೌತುಕ. ಮಿದುಳ ಬಗ್ಗೆ ನಮಗೆ ತಿಳಿದಿರುವುದಕ್ಕಿಂತ ತಿಳಿಯದೇ ಇರುವುದೇ ಹೆಚ್ಚು.

ನಾನು ಈ ಲೇಖನ ಬರೆಯದೆ ನಿಮ್ಮ ಎದುರು ಕೂತು ಮಾತಾಡುತಿದ್ದೇನೆ ಅಂದುಕೊಳ್ಳಿ. ಅಕ್ಷರ, ಪದಗಳು ಬಿಡಿಯಾಗಿ ಪ್ರತ್ಯೇಕವಾಗಿ ಕಾಣುವಂತೆ ಮಾತಿನ್ಲ್ಲಲಿ ಖಾಲಿ ಜಾಗಗಳಿರುವುದಿಲ್ಲ. ದಿನ ನಿತ್ಯದ ಮಾತಿನಲ್ಲಿ ನಾವು ಒಂದು ಕ್ಷಣಕ್ಕೆ ಸುಮಾರು ಹತ್ತು ದನಿಗಳನ್ನು ಉಚ್ಚರಿಸುತ್ತೇವಂತೆ. ಒತ್ತೊತ್ತಾಗಿ ಕೂಡಿಕೊಂಡಿರುವ ದನಿಗಳನ್ನು ಪ್ರತ್ಯೇಕವಾಗಿ ಗ್ರಹಿಸಿ, ಅರ್ಥಪೂರ್ಣ ಪದ, ವಾಕ್ಯಗಳಾಗಿ ಮಾರ್ಪಡಿಸಿಕೊಳ್ಳುವ ಕಿವಿಯ ಸೂಕ್ಷ್ಮತೆ, ಅದಕ್ಕೆ ಕಾರಣವಾದ ಮಿದುಳಿನ ಸಾಮರ್ಥ್ಯ ಕೌತುಕವಲ್ಲವೇ!

ಮಿದುಳು ಗ್ರಹಿಸುವ ಮಾತಿನ ತಿರುಳಿಗೂ ನಿಜವಾದ ಮಾತಿನ ರೂಪಕ್ಕೂ ಇರುವ ಸಾಮ್ಯ ತೀರ ಕಡಿಮೆ. ಸುಮಾರು ಆರು ವರ್ಷದವನಾಗಿದ್ದಾಗ ಹಾಡೊಂದನ್ನು ಹೀಗೆ ಕೇಳಿಸಿಕೊಂಡಿದ್ದೆ: `ತೇರೀ ಪ್ಯಾರಿ ಪ್ಯಾರಿಸ್ ಊರತ್‌ಕೋ ಕಿಸಿಕಾ ನಜರ್ ನಾಲಗೆ.

ಪ್ಯಾರಿಸ್ ಚಾಕ್ಲೆಟ್ಟು ಗೊತ್ತಿತ್ತು, ಊರು ಗೊತ್ತಿತ್ತು, ನಾಲಗೆ ಗೊತ್ತಿತ್ತು. ನನಗೆ ಪರಿಚಯವಿದ್ದ ಪದಗಳ ಗಡಿಯನ್ನೇ ನನ್ನ ಕಿವಿ, ಮಿದುಳು ಈ  ಹಿಂದಿ  ಹಾಡಿನಲ್ಲೂ  ಗುರುತಿಸಿ, ಆದರೆ ಹೊಂದಿಸಿಕೊಳ್ಳಲಾಗದೆ ಚಡಪಡಿಸಿತ್ತು. ಅದು ಹಿಂದಿ, ಅದರ ಅರ್ಥ ಇದು ಅನ್ನುವುದು ತಿಳಿದದ್ದು ಎಷ್ಟೋ ವರ್ಷಗಳ ನಂತರ. 

ಸದ್ದಿನ ಮೂಲಕವೇ ಗುರುತಿಸುವುದು ಎಲ್ಲ ಪ್ರಾಣಿಗಳಿಗೂ ಇರುವ ಶಕ್ತಿ. ಮನಾಲಿ ಕಣಿವೆಯ ರಶೋಲ್ ಜಾಟ್ ಎಂಬ ಬೆಟ್ಟದ ಬೆನ್ನಿನ ಜಾಗ; ಮುಸ್ಸಂಜೆ ಹೊತ್ತು; ಐದಾರು ಸಾವಿರ ಸಂಖ್ಯೆಯ ಕುರಿಯ ಹಿಂಡು ಬಂದಿತ್ತು. ಎಲ್ಲವೂ ಒಟ್ಟಿಗೇ ಬಗೆಬಗೆಯ ಸದ್ದು ಮಾಡುತ್ತ ಅಲೆಯುತಿದ್ದವು. ಆ ಸದ್ದುಗಳಿಂದಲೇ ತಮ್ಮ ಬಂಧುಗಳನ್ನು ಗುರುತಿಸಿ ಕೂಡಿಕೊಂಡವು. ಕ್ರಮೇಣ ನಿಶ್ಶಬ್ದ, ಕತ್ತಲು. ಅದೊಂದು ಮರೆಯಲಾಗದ ಅನುಭವವಾಗಿ ಮನಸ್ಸಿನಲ್ಲಿ ಉಳಿದಿದೆ.

ನಮಗೆ ಅರುವತ್ತು ಸಾವಿರ ಪದಗಳು ತಿಳಿದಿದ್ದರೂ ಅವುಗಳ ಸೃಷ್ಟಿಗೆ ಅರುವತ್ತು ಸಾವಿರ ಬಗೆಯ ಸದ್ದುಗಳು ಬೇಕಾಗಿಲ್ಲ. ಮನುಷ್ಯ ಹೊರಡಿಸಬಹುದಾದ ಸದ್ದುಗಳ್ಲ್ಲಲಿ ಕೆಲವನ್ನು ಮಾತ್ರ ಆಯ್ದುಕೊಂಡು ಬಗೆಬಗೆಯ ಸಂಯೋಜನೆಗಳ ಮೂಲಕ ಭಾಷೆಯೊಂದರ ಪದಗಳು ಸೃಷ್ಟಿಯಾಗುತ್ತವೆ. ಅರ್ಥ ಅನ್ನುವುದು ಇಡೀ ಪದಕ್ಕೆ ಮೆತ್ತಿಕೊಂಡದ್ದೇ ಹೊರತು ಅದರ ಬಿಡಿ ಬಿಡಿ ಸದ್ದುಗಳಲ್ಲಲ್ಲ. `ನಾ~ ಮತ್ತು `ಯಿ~ ಒಟ್ಟಿಗೆ ಸೇರಿದಾಗ ಅರ್ಥಪೂರ್ಣ ನಾಯಿ ಆಗುತ್ತದೆಯೇ ಹೊರತು ನಾ ಮತ್ತು ಯಿ ಎಂಬ ಯಾವೊಂದು ಸದ್ದಿನಲ್ಲೂ `ನಾಯಿ~ ಇಲ್ಲ. ಸದ್ದುಗಳನ್ನು, ಸದ್ದುಗಳ ನಡುವೆ ಇರುವ ನಿಶ್ಶಬ್ದದ ಗಡಿಯನ್ನು ಖಚಿತವಾಗಿ ಗುರುತಿಸುತ್ತ ಅರ್ಥವನ್ನು ಸಂಯೋಜಿಸುವುದು ಮಿದುಳಿನ ಕೆಲಸ.

ಮಿಕ್ಕ ಅನೇಕ ಪ್ರಾಣಿಗಳ ಮಿದುಳಿನಂತೆಯೇ ಮನುಷ್ಯ ಮಿದುಳಿನಲ್ಲಿ ಎರಡು ಗೋಳಾರ್ಧಗಳಿವೆ. ಒಂದೊಂದರದೂ ಒಂದೊಂದು ಕೆಲಸ. ಹೀಗಾಗಿ ಒಂದು ಭಾಗಕ್ಕೆ ಪೆಟ್ಟಾದರೆ ತೊಂದರೆಯಾದರೆ ಇನ್ನೊಂದರ್ಧದ ಕಾರ್ಯಗಳಿಗೆ ಅಡಚಣೆ ಇಲ್ಲ. ಎಡಗೋಳಾರ್ಧ ದೇಹದ ಬಲಭಾಗವನ್ನು ನಿಯಂತ್ರಿಸುತ್ತದೆ, ಬಹಳಷ್ಟು ಮನುಷ್ಯರಲ್ಲಿ ಭಾಷೆಯನ್ನು ಕೂಡ. ಭಾಷೆಗೂ ಎಡಬಲಗಳಿಗೂ ಸಂಬಂಧವೇನು ಸರಿಯಾಗಿ ಗೊತ್ತಿಲ್ಲ. ಮಿದುಳಿನ ಈ ಸ್ವರೂಪ ನಮ್ಮ ದಾಯಾದಿ ವಾ-ನರಗಳೊಂದಿಗೆ ಎಂಥ ಸಂಬಂಧ ಬೆಸೆದಿದೆ ಗೊತ್ತಿಲ್ಲ.

ಮನುಷ್ಯ ಮಿದುಳಿನಲ್ಲಿ ಭಾಷೆಯ ಜವಾಬ್ದಾರಿ ಹೊತ್ತ ಎರಡು ಪ್ರಮುಖ ಏರಿಯಾಗಳನ್ನು, ಅವನ್ನು ಕಂಡು ಹಿಡಿದ ವಿಜ್ಞಾನಿಗಳ ಹೆಸರಿನಿಂದಲೇ ಬ್ರೋಕಾ ಏರಿಯಾ ಮತ್ತು ವೆರ್ನಿಕ್ ಏರಿಯಾ ಎಂದೇ ಗುರುತಿಸಿದ್ದಾರೆ. ಬ್ರೋಕಾ ಏರಿಯಾ ಭಾಷೆಯ ಉತ್ಪಾದನೆ, ಅಂದರೆ ವಾಕ್ಯಗಳ ಜೋಡಣೆ, ರಚನೆ, ಮಾತಿನ ಅಂಗಗಳ ಚಲನೆಯ ನಿರ್ವಹಣೆಯ ಕೆಲಸ ಮಾಡುತ್ತದೆ; ವೆರ್ನಿಕ್ ಏರಿಯಾ ಇತರರ ಮಾತನ್ನು ಕೇಳಿ ಅದರ ವಾಕ್ಯ ರಚನೆ, ದನಿಯ ಏರಿಳಿತ ಇತ್ಯಾದಿಗಳನ್ನು ಗುರುತಿಸುತ್ತದೆ; ಜೊತೆಗೆ ಮಿದುಳಿನಲ್ಲಿರುವ ಸಿಲ್ವಿಯನ್ ಫಿಶರ್ ಅನ್ನುವ ಕಣಿವೆಯ ಸುತ್ತಮುತ್ತಲ ಪ್ರದೇಶ ನೆರವು ನೀಡುತ್ತದೆ. ಬ್ರೋಕಾ ಏರಿಯಾಕ್ಕೆ ಘಾಸಿಯಾದರೆ ಮಾತು ನಿಧಾನವಾಗಿ, ತಡವರಿಸುತ್ತದೆ, ವ್ಯಾಕರಣಬದ್ಧವಾಗಿರುವುದಿಲ್ಲ.

ಶಬ್ದಗಳ ಸಂಪತ್ತು ಇದ್ದರೂ ಅರ್ಥಸ್ಪಷ್ಟತೆಗೆ ಅಗತ್ಯವಾದ ಪ್ರತ್ಯಯಗಳನ್ನು ಸೇರಿಸುವುದು ಕಷ್ಟವಾಗುತ್ತದೆ. ಮಾತಾಡುವುದು ಕಷ್ಟವಾದರೂ ಬೇರೆಯವರು ಹೇಳಿದ್ದು ತಿಳಿಯುತ್ತದೆ.

ಬ್ರೋಕಾ ಏರಿಯಾ ವ್ಯಾಕರಣದೇಶವಿದ್ದೀತು. ವೆರ್ನಿಕ್ ಏರಿಯಾಕ್ಕೆ ಘಾಸಿಯಾದರೆ ಅರ್ಥರಹಿತವಾಕ್ಯಗಳಾಗಿದ್ದರೂ ಸರಿ ಮಾತಾಡುವುದಕ್ಕೆ ಆಗುತ್ತದೆ, ಆದರೆ ಇನ್ನೊಬ್ಬರು ಹೇಳಿದ್ದು ತಿಳಿಯುವುದಿಲ್ಲ. ಮನಸ್ಸಿನೊಳಗಿನ ನಿಘಂಟುದೇಶವಿರಬೇಕು ಈ ಏರಿಯಾ. ಮತ್ತೆ ಕಂಡದ್ದು, ಕೇಳಿ, ಮೂಸಿದ್ದು ಇತ್ಯಾದಿ ಅನುಭವಕೋಶಗಳೊಡನೆಯೂ ಈ ಪ್ರದೇಶಗಳಿಗೆ ಸಂಪರ್ಕ ಇರಬೇಕು.

ಇಡೀ ಮಿದುಳು ಹುಟ್ಟಿದ ಕ್ಷಣದಿಂದ, ಬಹುಶಃ ಅದಕ್ಕೂ ಮೊದಲಿನಿಂದ, ಇಡಿಯಾಗಿ ಕೆಲಸ ಮಾಡಲು ತೊಡಗಿರುತ್ತದೆ. ಕಾಲಕ್ರಮದಲ್ಲಿ ಒಂದೊಂದು ಭಾಗವೂ ಒಂದೊಂದು ನಿರ್ದಿಷ್ಟ ಕೌಶಲ ಬೆಳೆಸಿಕೊಳ್ಳುತ್ತ ವಿಶಿಷ್ಟವಾಗುತ್ತ, ಜಟಿಲವಾಗುತ್ತದೆ ಅನ್ನುತ್ತಾರೆ. ಭಾಷೆ ಮತ್ತು ಮಿದುಳು ಪರಸ್ಪರ ತಾಕಲಾಡಿಕೊಳ್ಳುತ್ತ, ಒಂದನ್ನು ಇನ್ನೊಂದು ಉದ್ದೀಪಿಸುತ್ತಾ ಎರಡೂ ಒಟ್ಟೊಟ್ಟಿಗೆ ವಿಕಾಸವಾಗಿರಬಹುದು ಅನ್ನುವ ಊಹೆ ಇತ್ತೀಚಿನದು.

ಭಾಷೆಗೂ ಮಿದುಳಿಗೂ ಸ್ವಯಂ ವಿನ್ಯಾಸದ, ಸ್ವಯಂ ವಿಕಾಸದ ಸಾಮರ್ಥ್ಯ ಇದೆ. ದೇಹವನ್ನೂ, ಹೊರಗಿನ ಜಗತ್ತನ್ನೂ ಇಷ್ಟಿಷ್ಟೆ ಸ್ಯಾಂಪಲ್ ನೋಡುತ್ತ ಮಿದುಳು ಬೆಳೆಯುತ್ತದೆ. ಮಿದುಳು ತಾನು ಅಳವಟ್ಟುಕೊಳ್ಳಬೇಕಾದ ಪರಿಸರ ಅನ್ನುವುದರ್ಲ್ಲಲಿ ಭಾಷೆ ಕೂಡ ಸೇರಿದೆ. ಇದು ಒಂದು ಊಹೆ. ಬೀವರ್ ಜಲಚರದ ಪೂರ್ವಜರೆಲ್ಲ ನೀರಿನಲ್ಲಿದ್ದವು.
 
ತಾವು ವಾಸಮಾಡಲು ಅನುಕೂಲವಾಗುವ ಹಾಗೆ ಹರಿವ ನೀರಿಗೆ ಅಡ್ಡಗಟ್ಟೆ ಕಟ್ಟಿಕೊಳ್ಳುತ್ತವೆ ಅವು. ವಾಸಮಾಡುವ ಸ್ಥಳಕ್ಕೆ ಅನುಗುಣವಾಗಿ ಬೀವರ್‌ಗಳ ಶರೀರ ರಚನೆ, ಮಿದುಳ ರಚನೆ ಬೆಳೆಯಿತು. ಭಾಷೆ ಕೂಡ ಬೀವರ್‌ಗಳು ಕಟ್ಟಿಕೊಳ್ಳುವ ಅಣೆಕಟ್ಟೆಯ ಹಾಗೆ. ಮನುಷ್ಯ ಮಿದುಳು ಕೂಡ ಮನುಷ್ಯನ ಶರೀರದ ಸೃಷ್ಟಿಯಾದ ಭಾಷೆಗೆ ಹೊಂದಿಕೊಳ್ಳುತ್ತ ಬೆಳೆದಿರಬಹದು.

ಭಾಷಿಕ ವರ್ತನೆ ಸಾಧ್ಯವಾಗಬೇಕಾದರೆ ಪ್ರಾಣಿ ಮಿದುಳಿಗೂ ಮನುಷ್ಯ ಮಿದುಳಿಗೂ ದೊಡ್ಡ ವ್ಯತ್ಯಾಸಗಳು ಇರಲೇಬೇಕು. ಮೊದಲನೆಯದಾಗಿ ಮನುಷ್ಯ ಮಿದುಳಿನ ಗಾತ್ರ ದೊಡ್ಡದು. ಯಾವುದೇ ವಸ್ತುವಿನ ಗಾತ್ರ ಬದಲಾದಾಗ ಅದರ ವಿವಿಧ ಅಂಗಗಳ ಪರಸ್ಪರ ಸಂಬಂಧದ ಸ್ವರೂಪವೂ ಬದಲಾಗುತ್ತದೆ.
 
ಮಿಕ್ಕ ವಾ-ನರಗಳಿಗೆ ಹೋಲಿಸಿದರೆ ಮನುಷ್ಯ ಮಕ್ಕಳ ಬಾಲ್ಯ ದೀರ್ಘವಾದದ್ದು. ಆ ಕಾರಣದಿಂದಲೇ ಮನುಷ್ಯರ ಮಿದುಳ ಸಂಯೋಜನೆಗೆ ಅನುಕೂಲವಾಗಿರಬಹುದು. ಮಕ್ಕಳು ವಾ-ನರ ವರ್ಗದ ಮರಿಗಳಿಗಿಂತ ಅಸಹಾಯಕ ಸ್ಥಿತಿಯ್ಲ್ಲಲಿ ಹುಟ್ಟಿ ಪ್ರಬುದ್ಧರಾಗಲು ತುಂಬ ಸಮಯ ತೆಗೆದುಕೊಳ್ಳುತ್ತವೆ.
 
ಈ ಲೋಕಕ್ಕೆ ಬೇಗ ಬಂದವೇನೋ ಅನ್ನುವ ಹಾಗೆ! ಹೀಗಾಗುವುದಕ್ಕೆ ಮನುಷ್ಯ ಮಿದುಳಿನ ಗಾತ್ರ ಕಾರಣವಿರಬಹುದು. ಮನುಷ್ಯ ಎರಡು ಕಾಲಮೇಲೆ ನಡೆಯಲು ಕಲಿತದ್ದರಿಂದ ಜನನ ದ್ವಾರ ಕಿರಿದಾಗಿದ್ದು ಇನ್ನೊಂದು ಕಾರಣ ಇದ್ದೀತು. ಮಿದುಳು ಇನ್ನಷ್ಟು ಬೆಳೆಯುವವರೆಗೆ ಬಸಿರಲ್ಲೇ ಇದ್ದರೆ ಹೆರಿಗೆ ಕಷ್ಟವಾಗುತಿತ್ತು.
 
ಲಾಭವೆಂದರೆ ಮಿದುಳ ಬಹುಪಾಲು ಹುಟ್ಟಿದ ನಂತರ ವಿಕಾಸವಾಗುತ್ತದೆ; ಅದರ ಚುರುಕು ಹುರುಪು ಹೆಚ್ಚು ಕಾಲ ಉಳಿಯುತ್ತದೆ, ಹೆಚ್ಚಿನ ಕಲಿಕೆ ಸಾಧ್ಯವಾಗುತ್ತದೆ. ಅಸಹಾಯಕ ಕೂಸು ಅಮ್ಮನೊಡನೆ, ಬೆಳೆದವರೊಡನೆ ದೀರ್ಘಕಾಲ ಇರುತ್ತಾ ತೀವ್ರ ಸಾಮಾಜಿಕ ಪ್ರಚೋದನೆಗಳಿಗೆ ಒಡ್ಡಿಕೊಂಡು ಭಾಷೆಯ ಸಾಮರ್ಥ್ಯ ವೃದ್ಧಿಯಾಗುತ್ತದೆ.
 
ಸಂಕೇತಗಳ ಸಂಸ್ಕರಣೆ, ವಾಕ್ಯರಚನೆ ಮತ್ತು ವಿಶ್ಲೇಷಣೆ ಸಲೀಸಾಗಿ ನಡೆಯುವ ಹಾಗೆ ನಿಡುಗಾಲದ ಮತ್ತು ಕಿರುಕಾಲದ ನೆನಪುಗಳ ವ್ಯವಸ್ಥೆ, ಧ್ವನಿ ಉತ್ಪಾದನೆ ಮತ್ತು ಶ್ರವಣದ ಮಿತಿಗಳು, ಕಂಡದ್ದು ಕೇಳಿದ್ದನ್ನು ವ್ಯಾಖ್ಯಾನಿಸಿಕೊಳ್ಳುವುದು ಇವೆಲ್ಲ ಮಿದುಳಿನ ಶಕ್ತಿಗಳಾಗಿ ಹುಟ್ಟಿನ ನಂತರ ಬೆಳೆಯುತ್ತವೆ.

ಮನುಷ್ಯರು ಒಂದಲ್ಲ ಹಲವಾರು ಭಾಷಾಪೂರ್ವ, ಆದಿಮ ಭಾಷಾ ಸ್ಥಿತಿಗಳನ್ನು ಹಾದು ಬಂದಿದ್ದಾರೆ. ಮಾತು ಯಾವಾಗ ಸುರುವಾಯಿತು? ಕ್ರಿ.ಪೂ. 100,000 ದಿಂದ ಕ್ರಿ.ಪೂ. 30,000ದವರೆಗೆ ಯೂರೋಪಿನಲ್ಲಿದ್ದ ಮನುಷ್ಯರಂಥ ಜೀವಿಗಳಲ್ಲಿ ಆದಿಮವಾದ ಮಾತು ಇತ್ತೋ ಏನೋ. ಆ ಕಾಲದ ಅಸ್ಥಿಪಂಜರಗಳನ್ನು ಪರಿಶೀಲಿಸಿದ ತಜ್ಞರು ಜಟಿಲವಾದ ಲೆಕ್ಕಾಚಾರ ಹಾಕಿ ಆ ಕಾಲದ ಮನುಷ್ಯಜೀವಿಗಳ ಮಿದುಳ ಗಾತ್ರ ಈಗಿನ ಆಧುನಿಕ ಮನುಷ್ಯನ ಮಿದುಳ ಗಾತ್ರದಷ್ಟೇ ಇದ್ದಿರಬೇಕು ಅಂತ ತೀರ್ಮಾನಿಸಿದ್ದಾರೆ. ಅದರಾಚೆಗೆ ಏನೂ ಗೊತ್ತಿಲ್ಲ.

ಆ ಕಾಲದ ಬುರುಡೆ ಮತ್ತು ಕತ್ತಿನ ಮೂಳೆಗಳನ್ನು ಆಧುನಿಕ ಕೂಸು ಮತ್ತು ವಯಸ್ಕರದರೊಡನೆ ಹೋಲಿಸಿ ನೋಡಿರುವ ಸಂಶೋಧಕರು ಆದಿಮ ಜೀವಿಗಳು ಮಾತಿನಂಥ ದನಿ ಹೊರಡಿಸುತಿದ್ದವು ಅನ್ನುತ್ತಾರೆ. ಅವರು ಹೊರಡಿಸುತಿದ್ದ ಸದ್ದುಗಳು ಆಧುನಿಕ ಭಾಷೆಯ್ಲ್ಲಲಿ ಇರುವಷ್ಟು ವ್ಯವಸ್ಥಿತವಾಗಿ, ಅಷ್ಟು ಸಂಖ್ಯೆಯಲ್ಲಿ ಇದ್ದಿರಲಾರವು. ಆದರೂ ಅವರು ವಾ-ನರಗಳಿಗಿಂತ ಹೆಚ್ಚಿನ ಸಂಖ್ಯೆಯ ಸದ್ದು ಮಾಡಬಲ್ಲವರಾಗಿದ್ದಿರಬೇಕು.
ಕ್ರಿ.ಪೂ. 30,000ದ ವೇಳೆಗೆ ಮಾತಿನ ದಾರಿಯಲ್ಲಿ ಸಾಕಷ್ಟು ದೂರ ಕ್ರಮಿಸಿದ್ದಾಗಿರಬಹುದು. ಮನುಷ್ಯ ಭಾವನೆ, ಅಗತ್ಯಗಳಿಗೆ ಸಂಬಂಧಪಟ್ಟಂಥ ಎಚ್ಚರಿಕೆಯ ಕೂಗಿನಂಥ ಸರಳ ಪದಗಳೂ ರೂಪುಗೊಂಡಿದ್ದಿರಬಹುದು. ಸನ್ನೆಭಾಷೆಯೂ ಇದ್ದಿರಬೇಕು. ಈ ವೇಳೆಗೆ ಮನುಷ್ಯಜೀವಿಗಳು ಕೈಯನ್ನೂ ನೆಲಕ್ಕೂರಿ ವಾ-ನರಗಳ ಹಾಗೆ ಚತುಷ್ಪಾದಿಗಳಾಗಿರಲಿಲ್ಲ.
 
ನೇರ ನಿಲ್ಲುವುದು ಸಾಧ್ಯವಾಗಿ ಅವರ ಕೈಗಳಿಗೆ ಬಿಡುಗಡೆ ಸಿಕ್ಕಿ ಹೊಸ ಆವಿಷ್ಕಾರಗಳು ಸಾಧ್ಯವಾಗಿದ್ದವು- ಉಪಕರಣಗಳ ತಯಾರಿ, ಗುಹೆಯ ಬಂಡೆಗಳ ಮೇಲೆ ಚಿತ್ರ ಬರೆಯುವುದು ಇತ್ಯಾದಿ ಕೈಗೆಟುಕಿದ್ದವು. ಇಲ್ಲಿ ಬಾ, ಅಲ್ಲೇ ನಿಲ್ಲು ಅನ್ನುವಂಥ ಸೂಚನೆ ಕೊಡುವುದಕ್ಕೆ ಕೈ ಸನ್ನೆ ಮಾಡುವುದು ಸಾಧ್ಯವಾಗಿದ್ದಿರಬೇಕು. ಈ ಸನ್ನೆಗಳನ್ನು ಮಾಡುವಾಗಲೇ ದನಿಯನ್ನೂ ಹೊರಡಿಸುತ್ತ, ಕತ್ತಲಲ್ಲಿ, ಬಂಡೆಯ ಹಿಂದೆ ನಿಂತಿರುವಂಥ ಸನ್ನೆ ಕಾಣಿಸದ ಸಂದರ್ಭಗಳಲ್ಲಿ ದನಿಯ ಬಳಕೆ ಕಲಿತಿರಬೇಕು.

ಕ್ರಿ.ಪೂ. 8000ದ ಹೊತ್ತಿಗೆ ಬರವಣಿಗೆಯ ಪ್ರಾಥಮಿಕ ದಾಖಲೆಗಳು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ದೊರೆತಿರುವುದರಿಂದ ಆ ಹೊತ್ತಿಗೆ ಮನುಷ್ಯರ ಭಾಷಾ ಸಾಮರ್ಥ್ಯ ಬೆಳೆದಿದ್ದಿರಬೇಕು.
 
ಕ್ರಿ.ಪೂ. 10000ದಿಂದ ಕ್ರಿ.ಪೂ. 8000ದ  ಅವಧಿಯಲ್ಲಿ  ಮನುಷ್ಯರು ಮಾತಾಡುವುದು ಕಲಿತಿರಬಹುದು. ಇದು ಅತ್ಯಂತ ಕಡಿಮೆ ಅವಧಿ. ಅತ್ಯಂತ ಹಳೆಯ ಜೀವ ರೂಪಗಳಿಂದ ಮನುಷ್ಯನ ವಿಕಾಸ ನಡೆಯಲು ಅಗತ್ಯವಾಗಿದ್ದ ಲಕ್ಷಾಂತರ ವರ್ಷಗಳ ಅವಧಿಯನ್ನು ಗಮನಿಸಿದರೆ ಮಾತು ಕಲಿತದ್ದು ಬೇಗ ಅನ್ನಬಹುದು. ಇವತ್ತಿನ ಕೂಸು ಬದುಕಿನ ಮೊದಲ ನಾಲ್ಕು ವರ್ಷಗಳ ಅವಧಿಯಲ್ಲಿ ಭಾಷಾವಿಶಾರದ ಆಗಿರುವ ಹಾಗೆಯೇ ಇದೂನೂ.

ಮಾತಿದ್ದರೆ ಮಾತ್ರ ಸಾಧ್ಯವಾಗುವ, ಮಾತಿರದಿದ್ದರೆ ಅಸಾಧ್ಯವಾಗುವ ಎಷ್ಟೊಂದು ಸಂಗತಿಗಳಿವೆ: ಬೇರೆಯವರಿಗೆ ಕಾಣದ, ನಿಮಗೆ ಮಾತ್ರ ಕಂಡ ಅಪಾಯದ ಬಗ್ಗೆ ಎಚ್ಚರ ಕೊಡುವುದು; ಇಡೀ ಬದುಕಿನ ಅವಧಿಯಲ್ಲಿ ಕಂಡುಕೊಂಡ ಕೌಶಲವನ್ನು ಎಳೆಯರಿಗೆ ದಾಟಿಸುವುದು; ಶತ್ರುವಿನ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುವುದು. ಮಾತು ಹೇಗೆ ಎಲ್ಲರನ್ನೂ ಹಿಡಿದುಬಿಟ್ಟಿತು ಅನ್ನುವುದನ್ನು ಊಹಿಸಬಹುದು. ಮಾತಾಡುವ ಸಾಮರ್ಥ್ಯ ಒಂದು ನಿರ್ದಿಷ್ಟ ಗುಂಪಿನ್ಲ್ಲಲಿ ಸಾಧ್ಯವಾಗಿ ಎಲ್ಲ ಗುಂಪುಗಳಿಗೂ ಹರಡಿತೋ?

ಬೇರೆ ಬೇರೆ ಮನುಷ್ಯ ಸಮುದಾಯಗಳು ಸುಮಾರಾಗಿ ಒಂದೇ ಸಮಯದಲ್ಲಿ ಮಾತು ಕಲಿತರೋ, ಬೇರೆ ಬೇರೆ ಅವಧಿಯಲ್ಲೋ ಗೊತ್ತಿಲ್ಲ. ಆದರೆ ಇಷ್ಟು ಗೊತ್ತು, ಮಾತು ಕಲಿತ ಕೆಲವೇ ಸಾವಿರ ವರ್ಷಗಳಲ್ಲಿ ಭಿನ್ನ ಭಾಷಾ ಕುಟುಂಬಗಳು ತಲೆ ಎತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.