ADVERTISEMENT

ಪರ್ಯಾಯ ಪೊಲೀಸಿಂಗ್‌ನ ವಿಪತ್ತು

ಶಿವರಾಮ್
Published 27 ಆಗಸ್ಟ್ 2011, 19:00 IST
Last Updated 27 ಆಗಸ್ಟ್ 2011, 19:00 IST

ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವ ಮಂದಿ ತಮ್ಮದೇ ಆದ `ಪೊಲೀಸಿಂಗ್~ ಜಾರಿಗೆ ತಂದಿರುವುದಕ್ಕೆ ಚರಿತ್ರೆಯಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಆದರೆ, ಈ ರೀತಿಯ ಪರ್ಯಾಯ ಪೊಲೀಸ್ ವ್ಯವಸ್ಥೆಯಿಂದ ಸಮಾಜ ಸುಧಾರಿಸಿರುವುದಕ್ಕಿಂತ ಆಗಿರುವ ಹಾನಿಯೇ ಹೆಚ್ಚು.

ಇತ್ತೀಚೆಗೆ ಚಿಂತಾಮಣಿ ಬಳಿಯ ಬಾರ‌್ಲಹಳ್ಳಿ ಹಾಗೂ ಎರ‌್ರಕೋಟೆಯಲ್ಲಿ ಶಂಕಿತ ದರೋಡೆಕೋರ ರೆಂದು ಹತ್ತು ಮಂದಿಯನ್ನು ಸಾವಿರಾರು ಜನ ಹೊಡೆದು ಕೊಂದರು.
ಆ ಹಳ್ಳಿಯಲ್ಲಿ ಸರಣಿ ಕಳ್ಳತನಗಳಾಗಿದ್ದು, ಆ ಹತ್ತು ಮಂದಿ ಅದೇ ಗುಂಪಿ ನವರಿರಬೇಕು ಎಂದು ಶಂಕಿಸಿ ಜನರೇ ಕಾನೂನನ್ನು ಕೈಗೆತ್ತಿಕೊಂಡಿದ್ದರ ಪರಿಣಾಮವಿದು. ಅಷ್ಟು ವ್ಯಾಪಕವಾಗಿ ದರೋಡೆಗಳು ಆಗುತ್ತಿದ್ದರೂ ಪೊಲೀಸರು ಏನೂ ಕ್ರಮ ತೆಗೆದುಕೊಳ್ಳಲಿಲ್ಲ ಎಂಬುದು ಜನರ ಆರೋಪ. ಮೃತಪಟ್ಟವರಲ್ಲಿ ದರೋಡೆ ಕೋರರೆಷ್ಟು, ಅಮಾಯಕರೆಷ್ಟು ಎಂಬುದನ್ನು ಹುಂಬ ಜನ ಯೋಚಿಸಲೇ ಇಲ್ಲ.

ಇತ್ತೀಚೆಗೆ ಒಂದು ಸಂಘಟನೆ ಬೆಳಗಾವಿಯಲ್ಲಿ ಪೊಲೀಸ್ ತರಬೇತಿ ಕೊಡುವ ಮಾತಾಡಿತು. ನಕ್ಸಲೀಯರಂತೂ ನ್ಯಾಯಕ್ಕಾಗಿ ಹೋರಾಟ ಎಂದು ಕೊಂಡು ನಡೆಸಿರುವ ನರಮೇಧಗಳು ಅಸಂಖ್ಯ. ಅವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಪರ್ಯಾಯ ಸೇನೆ ಕಟ್ಟುವ ಮಂದಿಯ ಉದ್ದೇಶ ಈ ರೀತಿಯ ಕೃತ್ಯಗಳಿಂದ ಈಡೇರುತ್ತಿದೆಯೇ ಎಂಬ ಜಿಜ್ಞಾಸೆ ದೀರ್ಘ ಕಾಲದಿಂದ ಇದೆ.

`ನಾವು ಎಂದಿಗೂ ರೈತರು, ಕೂಲಿಕಾರ್ಮಿಕರು, ಗುಡ್ಡಗಾಡಿನ ಜನರ ಪರವಾಗಿ ಹೋರಾಡುತ್ತೇವೆ~ ಎಂದು ಘೋಷಣೆ ಕೂಗಿದ್ದ ನಕ್ಸಲೀಯರು ಕಳೆದ ವರ್ಷ ದಾಂತೇವಾಡದಲ್ಲಿ 77 ರಿಸರ್ವ್ ಪೊಲೀಸರನ್ನು  ಕೊಂದರು.

ಸೂಕ್ಷ್ಮವಾಗಿ ಗಮನಿಸಿದರೆ, ಅವರು ಕೊಂದವರಲ್ಲಿ ಬಹುಪಾಲು ಜನ ಬಡತನ, ರೈತಾಪಿ ವರ್ಗದ ಹಿನ್ನೆಲೆಯಿಂದ ಬಂದವರೆಂಬುದು ಸ್ಪಷ್ಟವಾಗುತ್ತದೆ. ಯಾರ ಹಕ್ಕುಗಳಿಗಾಗಿ ಅವರು ಹೋರಾಡುತ್ತಿದ್ದಾರೋ, ಅಂಥ ಕುಟುಂಬದ ಸದಸ್ಯರನ್ನೇ ಕೊಂದಂತಾಗಲಿಲ್ಲವೇ?

ಪೊಲೀಸ್ ಕಾನ್‌ಸ್ಟೇಬಲ್ ಆಗುವುದು ಯುವಕರ ಆದ್ಯತೆ ಆಗಿರುವುದಿಲ್ಲ. ಬೇರೆ ಬೇರೆ ಕೆಲಸಗಳಿಗೆ ಪ್ರಯತ್ನಿಸಿದ ನಂತರ ಯಾವುದೂ ಸಿಗಲಿಲ್ಲವೆಂದಾದ ಮೇಲೆ ಈ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಕಾನ್‌ಸ್ಟೇಬಲ್ ಆಗುವವರಲ್ಲಿ ಮೇಷ್ಟರ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು, ಶೋಷಿತವರ್ಗದವರ- ದಲಿತರ ಮಕ್ಕಳು ಹೆಚ್ಚಾಗಿ ಇರುತ್ತಾರೆ.
ಅವರಲ್ಲಿ ಆರ್ಥಿಕವಾಗಿ ಪರವಾಗಿಲ್ಲ ಎಂಬಂತೆ ಇರುವವರು ರೈತರ ಮಕ್ಕಳಷ್ಟೆ.

ಉಳಿದವರಿಗೆ ತುತ್ತಿನಚೀಲ ತುಂಬಿಸಿಕೊಳ್ಳಲು ಕೆಲಸವೇ ಗಟ್ಟಿ. ಬದುಕಿನಲ್ಲಿ ಕಟ್ಟ ಕಡೆಯದಾಗಿ ಪ್ರಯತ್ನ ಮಾಡಿ ಕಾನ್‌ಸ್ಟೇಬಲ್ ಹುದ್ದೆಗೆ ಅವರೆಲ್ಲಾ ಆಯ್ಕೆಯಾಗಿರುತ್ತಾರೆ. ಅವರಲ್ಲಿ ಎಲ್ಲಾ ಜಾತಿ- ವರ್ಗದವರು ಇರುತ್ತಾರೆ. ಅವರನ್ನು ಪತ್ನಿ, ತಾಯಿ, ಅಕ್ಕ-ತಂಗಿಯರು, ಮಕ್ಕಳು ಮೊದಲಾದವರು ನೆಚ್ಚಿಕೊಂಡಿರುತ್ತಾರೆ.
 
ದುಡಿಯುವ ಕೈ ಒಂದೇ ಎಂಬಂಥ ಕಾನ್‌ಸ್ಟೇಬಲ್ ಅಸುನೀಗಿದರೆ ಅವನ ಕುಟುಂಬದ್ದು ಅಧೋಗತಿ. ಹಾಗಾದಾಗ ಅಂಥ ಕುಟುಂಬಗಳ ಶೇ 20ರಷ್ಟು ಹೆಣ್ಣುಮಕ್ಕಳು ಮೈಮಾರಿಕೊಂಡು ಬದುಕುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಒಂದು ಸಮೀಕ್ಷೆ ಸ್ಪಷ್ಟಪಡಿಸಿತ್ತು.

ನಿಷ್ಠೆ, ಪ್ರಾಮಾಣಿಕತೆಗೆ ಪಕ್ಕಾ ಉದಾಹರಣೆ ಎಂಬಂತೆ ಬದುಕುವ ಅನೇಕ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳನ್ನು ನಾನು ಕಂಡಿದ್ದೇನೆ. ದೀರ್ಘ ಕಾಲದ ಅನುಭವದಿಂದಾಗಿ ಅಪರಾಧ ಲೋಕದ ಆಳಗಳನ್ನು ಅವರು ಚೆನ್ನಾಗಿ ಅರಿತಿರುತ್ತಾರೆ.

ಸೂಕ್ಷ್ಮಮತಿಗಳಾದವರು ಪಾತಕಿಗಳನ್ನು ಹಿಡಿಯಬಹುದಾದ ಜಾಲವನ್ನೇ ನಿರ್ಮಿಸಿರುತ್ತಾರೆ. ಅಧಿಕಾರಿಗಳು ಅಂಥ ಕಾನ್‌ಸ್ಟೇಬಲ್‌ಗಳ ನೆರವಿಲ್ಲದೆ ಅಪರಾಧ ಪತ್ತೆ ಮಾಡುವುದು ಹಲವಾರು ಸಂದರ್ಭಗಳಲ್ಲಿ ಸಾಧ್ಯವಿಲ್ಲ. ಆದರೂ ಕೆಲವು ಅಧಿಕಾರಿಗಳು ಅವರನ್ನು ನಿಕೃಷ್ಟವಾಗಿ ಕಾಣುತ್ತಾರೆ. ಶೋಷಣೆ ಅನುಭವಿಸುವ ಪೊಲೀಸರು ಹತಾಶೆಯಿಂದ ಕರ್ತವ್ಯನಿಷ್ಠೆ ಕಳೆದುಕೊಳ್ಳುತ್ತಾರೆ. ಅದರ ಪರಿಣಾಮವೇ `ಪರ್ಯಾಯ ಪೊಲೀಸಿಂಗ್~ನ ಹುಟ್ಟು.

ಪಾಳೇಗಾರಿಕೆ ಪದ್ಧತಿಯನ್ನು ಒಳಗೊಳಗೇ ಪೋಷಿಸಿಕೊಂಡು ಬಂದಿರುವ ಸಮುದಾಯಗಳಲ್ಲಿ `ಪರ್ಯಾಯ ಪೊಲೀಸಿಂಗ್~ ಬಹಳ ಸುಲಭವಾಗಿ ಹುಟ್ಟು ಪಡೆಯುತ್ತದೆ. `ನಮ್ಮೂರನ್ನು ಕಾಯಲು ಬೇರೆ ದೊಣ್ಣೆನಾಯಕ ಯಾಕೆ ಬೇಕು~ ಎಂಬುದು ಅವರ ಧೋರಣೆ.

ತಾವೇ ಪಂಚಾಯಿತಿ ಮಾಡಿ ತಪ್ಪಿತಸ್ಥನಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದು, ಕಳ್ಳನೋ, ಕಿಡಿಗೇಡಿಯೋ ಸಿಕ್ಕಿಬಿದ್ದರೆ ಮರಕ್ಕೆ ಕಟ್ಟಿಹಾಕಿ ಊರ ಜನರೆಲ್ಲಾ ಹೊಡೆದು ಚಿತ್ರಹಿಂಸೆ ಕೊಡುವುದು, ದಲಿತರನ್ನು ಸುಟ್ಟುಹಾಕುವುದು ಮೊದಲಾದ ಘಟನೆಗಳು ಈಗಲೂ ಕೆಲವೆಡೆ ನಡೆಯುತ್ತಲೇ ಇರುವುದು ಇದೇ ಕಾರಣಕ್ಕೆ.
 
ವಿದ್ಯುನ್ಮಾನ ಮಾಧ್ಯಮದ ಪರಿಣಾಮ ಈಗ ಹೆಚ್ಚಾಗಿದ್ದು, ಅಲ್ಲೂ ಇಂಥ ಘಟನೆಗಳನ್ನು ವೈಭವೀಕರಿಸಿ ತೋರಿಸಲಾಗುತ್ತಿದೆ. ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ತಾವೇ ದುಷ್ಟರ ಸಂಹಾರ ಮಾಡುತ್ತಿದ್ದೇವೆ ಎಂಬಂತೆ ಟೀವಿ ಚಾನೆಲ್ಲುಗಳಿಗೆ ಜನ ಹೇಳಿಕೆಗಳನ್ನು ಕೊಡುವುದು ಇದಕ್ಕೆ ಉದಾಹರಣೆ.

ಇನ್ನೊಂದೆಡೆ ಭಜರಂಗದಳ, ಶಿವಸೇನೆಯಂಥ ಸಂಘಟನೆಗಳು ರೇವ್ ಪಾರ್ಟಿಗಳ ಮೇಲೆ, ಡಾನ್ಸ್ ಬಾರ್‌ಗಳ ಮೇಲೆ ರೇಡ್ ಮಾಡಿ ಪೊಲೀಸರನ್ನು ಪ್ರಶ್ನಿಸುವ ಕೆಲಸ ನಡೆಯುತ್ತಿದೆ. ಬೆಲ್ಜಿ, ಪಿಪ್ರಾ, ಕರಮ್‌ಚೇಡು ಮೊದಲಾದ ಪ್ರದೇಶಗಳಲ್ಲಿ `ಪರ್ಯಾಯ ಪೊಲೀಸಿಂಗ್~ ಸೃಷ್ಟಿಸಿರುವ ಪರಿಸ್ಥಿತಿ ಕರಾಳ ಸ್ವರೂಪದ್ದು. 

ಪೊಲೀಸರಿಗೆ ಸುಪ್ರೀಂಕೋರ್ಟ್ ಏಳು ಮಾರ್ಗದರ್ಶಿ ತತ್ವಗಳನ್ನು ನಿರ್ದೇಶಿಸಿದೆ. ಪೊಲೀಸರು ಬದ್ಧತೆಯಿಂದ ಇರಬೇಕಾದರೆ ಏನು ಮಾಡಬೇಕು, ಅವರ ಸೌಕರ‌್ಯ ಹೆಚ್ಚಿಸಲು ಏನೇನು ಕ್ರಮ ತೆಗೆದುಕೊಳ್ಳಬೇಕು, ಅವರು ತಪ್ಪು ಮಾಡಿದರೆ ತಿದ್ದಿ ಸರಿಪಡಿಸುವುದು ಹೇಗೆ ಮೊದಲಾದ ವಿಷಯಗಳನ್ನು ಪ್ರತಿಪಾದಿಸಿದೆ.

ವರ್ಗಾವಣೆಯಲ್ಲಿ ಯಾರೂ ಮೂಗು ತೂರಿಸಬಾರದೆಂದೂ, ಬುದ್ಧಿ-ಕಾರ್ಯ ವೈಖರಿಗೆ ಮಾನ್ಯತೆ ನೀಡಿ ಪೊಲೀಸರಿಗೆ ಬಡ್ತಿ, ಪ್ರಶಸ್ತಿ ಸಲ್ಲಬೇಕೆಂಬುದು ಅದರ ಆಶಯ.

ಆದರೆ, ವಸ್ತುಸ್ಥಿತಿಯಲ್ಲಿ ಆ ತತ್ವಗಳು ಮಸುಕಾಗಿವೆ. ವರ್ಗಾವಣೆಯನ್ನು ದಂಧೆ ಮಾಡಿಕೊಂಡಿರುವ ಇನ್ಸ್‌ಪೆಕ್ಟರ್ ಕೂಡ ತಲೆಎತ್ತಿಕೊಂಡೇ ಓಡಾಡುತ್ತಾರೆ. ತಮ್ಮದೇ ಜಾತಿಯವರನ್ನು ತಾವಿರುವಲ್ಲಿಗೆ ವರ್ಗ ಮಾಡಿಸಿಕೊಂಡು ಇನ್ಯಾರೋ ಅಧಿಕಾರಿ ಖುಷಿಯಿಂದ ಬೀಗುತ್ತಾರೆ. ಸುಪ್ರೀಂಕೋರ್ಟ್ ನಿರ್ದೇಶಿಸಿರುವ ಮಾರ್ಗದರ್ಶಿ ತತ್ವಗಳ ಅರಿವಿರುವ ಕಾನ್‌ಸ್ಟೇಬಲ್ ಕೂಡ ಈ ಕುರಿತು ಏನೂ ಪ್ರಶ್ನಿಸುವ ಸ್ಥಿತಿಯಲ್ಲಿ ಇಲ್ಲ.

ಪ್ರಶ್ನಿಸಿದರೆ ಅವನನ್ನು ಹೊಸಕಿಹಾಕುವವರೇ ಹೆಚ್ಚು. ಸಿನಿಮೀಯ ರೀತಿಯ `ಕಪ್ಪು- ಬಿಳುಪು~ ಘಟನೆಯಂತೆ ಇದು ಕಾಣುತ್ತದಾದರೂ ಇದೇ ಸತ್ಯ. ನ್ಯಾಯ-ನಿಷ್ಠೆಗೆ ಟೊಂಕಕಟ್ಟಿ ನಿಂತವರು ಈ ವ್ಯವಸ್ಥೆಯ ವಿರುದ್ಧ ಈಜಲಾಗದೆ ಸುಮ್ಮನಾಗುತ್ತಾರೆ.

ಪೊಲೀಸ್ ವ್ಯವಸ್ಥೆಯ ಬಗ್ಗೆ ಜನ ನಂಬಿಕೆ ಕಳೆದು ಕೊಳ್ಳುವಂತಾಗಲು ಇಂಥ ಸಣ್ಣ ಸಣ್ಣ ಲೋಪಗಳ ಮೊತ್ತವೇ ಕಾರಣ. ಇದು `ಪರ್ಯಾಯ ಪೊಲೀಸಿಂಗ್~ನ ಇನ್ನೊಂದು ಆಪತ್ತನ್ನು ಸೃಷ್ಟಿಸಿದೆಯಷ್ಟೆ.

ವ್ಯವಸ್ಥೆಯ ಹುಳುಕಿನ ಕುರಿತು ಯೋಚಿಸುತ್ತಾ ಹೋದಂತೆಲ್ಲಾ ಬರೀ ಕೆಡುಕಿನ ಕಥೆಗಳೇ ನೆನಪಾಗುತ್ತವೆ.  ಆದರೆ, ಅವುಗಳ ಪಕ್ಕದಲ್ಲಿಡಲು ಆಗೀಗ ಒಳ್ಳೆಯ ಉದಾಹರಣೆಗಳೂ ಸಿಗುವುದುಂಟು. ಸರ್ಕಾರಿ ಸೇವೆಯಲ್ಲಿದ್ದೂ ತಮ್ಮ ಚೌಕಟ್ಟಿನಲ್ಲೇ ಒಳ್ಳೆಯತನ ಮೆರೆದ ಅಧಿಕಾರಿಗಳು ಇದ್ದಾರೆ.

ಕಾನ್‌ಸ್ಟೇಬಲ್‌ಗಳನ್ನು ಸರಿಯಾಗಿ ನಡೆಸಿಕೊಂಡವರೂ ಉಂಟು. ಅವರು ಖುದ್ದು ವೃತ್ತಿಪರರಾಗಿದ್ದರಿಂದ ಬೇರೆಯವರಿಗೆ ಆದರ್ಶಪ್ರಾಯರೂ ಆಗಿದ್ದರು. ಪೊಲೀಸರಷ್ಟೇ ಅಲ್ಲ, ಬೇರೆ ಇಲಾಖೆಗಳಲ್ಲೂ ಅಂಥ ನಿದರ್ಶನಗಳನ್ನು ನಾನು ನೋಡಿದ್ದೇನೆ.

ಕೋ.ಚೆನ್ನಬಸಪ್ಪನವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದವರು. ಅವರು ಕೃತಿಯೊಂದರಲ್ಲಿ ತಮ್ಮ ವೃತ್ತಿಯ ಅನುಭವ ಬರೆದುಕೊಂಡಿದ್ದಾರೆ. ಅದರ ಸಾರಾಂಶ ಹೀಗಿದೆ- ಕೋ.ಚೆನ್ನಬಸಪ್ಪ ಕಚೇರಿಗೆ ಎಂದಿನಂತೆ ಹೋದರು. ಕಾರು ಪ್ರಾಂಗಣದಲ್ಲಿ ನಿಂತಿತು.
ಕೆಳಗಿಳಿದರೆ ಎಲ್ಲೆಡೆ ಕಸ. ಅವರಿಗೆ ಅಚ್ಚರಿ. ಕಸ ಗುಡಿಸಲೆಂದೇ ಕೆಲವೇ ದಿನಗಳ ಹಿಂದೆ ಅಲ್ಲಿ ಒಬ್ಬನನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಕಸ ಯಾಕೆ ಗುಡಿಸಿಲ್ಲ ಎಂದು ಅಲ್ಲಿದ್ದವರನ್ನು ಕೋಚೆ ಕೇಳಿದರು. `ಅವನಿಗೆ ಕೊಬ್ಬು. ತಾನು ಕೆಲಸಕ್ಕೆ ಸೇರಿರುವುದು ಒಳಗೆ ಮಾತ್ರ ಕಸ ಗುಡಿಸಲು. ಹೊರಗೆ ಗುಡಿಸುವುದು ತನ್ನ ಕೆಲಸ ಅಲ್ಲ~ ಎಂದು ವಾದ ಮಾಡುತ್ತಿದ್ದಾನೆ ಎಂದು ಇನ್ನೊಬ್ಬ ಸಿಬ್ಬಂದಿ ತಿಳಿಸಿದರು.

ಸಾಮಾನ್ಯವಾಗಿ ಹೀಗಾದರೆ, ಅಧಿಕಾರಿಗಳು ಸಿಟ್ಟಿಗೆದ್ದು ಬಾಯಿಗೆ ಬಂದಂತೆ ಬಯ್ಯುತ್ತಾರೆ. ಕೋಚೆ ಹಾಗೆ ಮಾಡಲಿಲ್ಲ. `ಹೌದೇ~ ಎಂದಷ್ಟೇ ಹೇಳಿ ಕಚೇರಿಯೊಳಗೆ ಹೋದರು. ಮರುದಿನ ಕಚೇರಿ ಮುಂದೆ ಯಥಾಪ್ರಕಾರ ಅವರ ಕಾರು ಬಂದು ನಿಂತಿತು.
 
ಠಾಕುಠಾಕಾಗಿ ಡ್ರೆಸ್ ಮಾಡುತ್ತಿದ್ದ ಕೋಚೆ, ಕೆಳಗಿಳಿದು ತಮ್ಮ ಕೋಟ್ ಬಿಚ್ಚಿಟ್ಟರು. ಡಿಕ್ಕಿ ತೆಗೆಯುವಂತೆ ಚಾಲಕನಲ್ಲಿ ವಿನಂತಿಸಿಕೊಂಡರು. ಡಿಕ್ಕಿ ತೆರೆದದ್ದೇ, ಒಂದು  ಪೊರಕೆಯನ್ನು ಹೊರತೆಗೆದರು. ಚಾಲಕನಿಗೆ ಡಿಕ್ಕಿ ಮುಚ್ಚುವಂತೆ ಸೂಚಿಸಿ, ಪ್ರಾಂಗಣದಲ್ಲಿ ಬಿದ್ದಿದ್ದ ಕಸವನ್ನು ತಾವೇ ಗುಡಿಸಲಾರಂಭಿಸಿದರು.

ಕಚೇರಿಯ ಬಳಿ ಇದ್ದ ಎಲ್ಲರೂ ಸ್ತಂಭೀಭೂತರಾದರು. ಕಸ ಗುಡಿಸುವವನ ಕಿವಿಗೂ ಈ ವಿಷಯ ಮುಟ್ಟಿತು. ಅವನು ಓಡೋಡಿ ಬಂದು, ಕಾಲು ಹಿಡಿದುಕೊಂಡ. ತನ್ನದು ತಪ್ಪಾಯಿತೆಂದ. ಆಮೇಲೆ ಅವನು ಪ್ರಾಂಗಣದ ಕಸವನ್ನೂ ಗೊಣಗದೆ ಗುಡಿಸತೊಡಗಿದ. ಒಂದು ರೀತಿಯಲ್ಲಿ ಕೋಚೆ ತೋರಿದ್ದು ಗಾಂಧೀಮಾರ್ಗವನ್ನೇ.

ಇಂಥ ಅಧಿಕಾರಿಗಳು ತೀರಾ ವಿರಳ. ಇಂಥವರ ಸಂತತಿ ಸರ್ಕಾರಿ ಕಚೇರಿಗಳಲ್ಲಿ, ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಹೆಚ್ಚಾಗಿದ್ದಿದ್ದರೆ ಬಹುಶಃ ಈಗಿನಷ್ಟು ಅವ್ಯವಸ್ಥೆಯನ್ನು ನಾವು ನೋಡಬೇಕಿರಲಿಲ್ಲ.

ಮುಂದಿನ ವಾರ: ಸೂಕ್ಷ್ಮ ಸಂದರ್ಭಗಳಲ್ಲಿ ಪೊಲೀಸಿಂಗ್
ಶಿವರಾಂ ಅವರ ಮೊಬೈಲ್ ನಂಬರ್: 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.