ADVERTISEMENT

ಇಲ್ಲದಿರುವುದು ಬಜೆಟ್ ಅಲ್ಲ, ಬದ್ಧತೆ

ನಾಗತಿಹಳ್ಳಿ ಚಂದ್ರಶೇಖರ
Published 30 ಆಗಸ್ಟ್ 2014, 19:30 IST
Last Updated 30 ಆಗಸ್ಟ್ 2014, 19:30 IST
ಇಲ್ಲದಿರುವುದು ಬಜೆಟ್ ಅಲ್ಲ, ಬದ್ಧತೆ
ಇಲ್ಲದಿರುವುದು ಬಜೆಟ್ ಅಲ್ಲ, ಬದ್ಧತೆ   

(ನನ್ನ ಗ್ರಹಿಕೆಯ ಅಲಾಸ್ಕ ಭಾಗ ೩)
ಅವರದೊಂದು ಕರೆ ಅಥವಾ ಮೆಸೇಜು ಪ್ರತಿ ಭಾನುವಾರ ಬಂದು ನನ್ನ ಪ್ರಜ್ಞೆಗೊಂದು ಪ್ರಸನ್ನತೆ ಮೂಡಿಸುತ್ತಿತ್ತು. ಈಗವರು ಎಲ್ಲ ನೆಟ್‌ವರ್ಕ್ ಕವರೇಜ್‌ಗಳ ಕಕ್ಷೆಯಿಂದ ಆಚೆ ಹೋಗಿದ್ದಾರೆ. ನವ್ಯಪಂಥದ ರತ್ನತ್ರಯರಲ್ಲೊಬ್ಬರಾದ ಯು.ಆರ್. ಅನಂತಮೂರ್ತಿಯವರು ಅನಾರೋಗ್ಯದ ಜೊತೆ ಹಸನ್ಮುಖವನ್ನೂ, ಮುಪ್ಪಿನ ಜೊತೆಗೆ ದಿಟ್ಟ ವೈಚಾರಿಕತೆಯನ್ನೂ ಕಾಪಾಡಿಕೊಂಡಿದ್ದರು. ಬೇರೆಯವರದ್ದನ್ನು ಓದುತ್ತಿದ್ದರು ಮತ್ತು ಓದಿಸುತ್ತಿದ್ದರು. ಸಾವು ನಿರೀಕ್ಷಿತವಾಗಲೀ, ಅನಿರೀಕ್ಷಿತವಾಗಲೀ ಖಿನ್ನತೆಯನ್ನು ಮತ್ತು ಅಸಹಾಯಕತೆಯನ್ನು ಮುಖದೆದುರು ರಪ್ಪನೆ ಹಿಡಿಯುತ್ತದೆ. ಅಲಾಸ್ಕಗೆ ಹೊರಟಾಗಲೂ ಆ ಬಗ್ಗೆ ಬರೆಯುವಾಗಲೂ ವೇದನೆಗಳ ಕಟುವಾದ ನೋಟೀಸು. ಈ ಅಂಕಣದ ಘನತೆವತ್ತ ಓದುಗರೊಬ್ಬರು ಇಲ್ಲವಾಗಿದ್ದಾರೆ.

ಪ್ರತಿಯೊಬ್ಬರು ತಮ್ಮ ತಮ್ಮ ಗಾಡಿಗಳನ್ನು ಚಾಲೂ ಇಟ್ಟುಕೊಳ್ಳಬೇಕು. ನಿರ್ದಿಷ್ಟ ಕಾಲಕ್ಕೆ ಹೊರಡಲೇಬೇಕು. ಬರುವವರು ಬೇಗ ಬೇಗ ಹತ್ತಿಕೊಳ್ಳಬೇಕು. ನಾನು ಯಾರಿಗೂ ಕಾಯಲಾರೆ ಎನ್ನಲಾರೆ. ಆದರೆ ಕಾಯುವಂತಿಲ್ಲ. ಗೆಳೆಯರಿಗೆ ಕೆನಡಾ ವೀಸಾ ಬರಲಿಲ್ಲ. ಅವರ ಪಾಸ್‌ಪೋರ್ಟೂ ಹಿಂದಕ್ಕೆ ಬರಲಿಲ್ಲ. ಅವುಚಿಕೊಂಡಿದ್ದ ಖಾಲಿತನದ ಸ್ಥಿತಿಯಲ್ಲಿ ಒಬ್ಬನೇ ಹೋಗುವ ಮನಸ್ಥಿತಿ ಇರಲಿಲ್ಲ. ಆಗಾಗ ಹೇರಿಕೊಳ್ಳಲು, ಹೇಳಿಕೊಳ್ಳಲು, ಕಾದಾಡಲು, ಕಿರುಚಾಡಲು ಮತ್ತು ಕಾಳಜಿಯಿಂದ ಸ್ನೇಹ ಮಾಡಲು ಒಬ್ಬ ಮಿತ್ರರು ಜತೆಗಿರುತ್ತಾರೆ ಎಂಬ ನಂಬಿಕೆಯೊಂದಿತ್ತು. ಹಿಂದೆ ಇಂಥ ನಂಬಿಕೆಗಳನ್ನು ನಂಬದೆ ಒಬ್ಬನೇ ಅಣಿಯಾಗುತ್ತಿದ್ದೆ. ಈ ಸಲ ಎಲ್ಲ ಯಡವಟ್ಟಾಗಿತ್ತು. ಗೆಳೆಯರದ್ದೇನೂ ತಪ್ಪಿಲ್ಲ ; ಅವರೊಬ್ಬ ಅಡ್ಡಕಸುಬಿ ಟ್ರಾವೆಲ್ ಏಜೆಂಟನನ್ನು ನಂಬಿದ್ದರೆಂಬುದನ್ನು ಬಿಟ್ಟರೆ. ನಾನು ಹೊರಡುತ್ತೇನೆ. ನಮ್ಮ ಹಳ್ಳಿ ಕಡೆ, ಸೀಟ್ ನಂಬರಿಲ್ಲದ ಬಸ್ಸಿನಲ್ಲಿ ಮತ್ತು ಟಾಕೀಸಿನಲ್ಲಿ ಮುಂಚೆ ಬಂದವನು, ತಡವಾಗಿ ಬರುವವರಿಗಾಗಿ ಟವೆಲ್ ಹಾಸುವಂತೆ, ನಿಮಗೊಂದು ಟವೆಲ್ ಹಾಸಿ, ಹಡಗು ವ್ಯಾಂಕೋವರ್ ಬಂದರು ಬಿಡುವವರೆಗೂ ಕಾಯುತ್ತೇನೆ. ವೀಸಾ ಸಿಕ್ಕ ಕೂಡಲೇ ಯಾವುದಾದರೂ ವಿಮಾನ ಹಿಡಿದುಕೊಂಡು ವ್ಯಾಂಕೋವರ್‌ಗೆ ಬಂದುಬಿಡಿ. ನನಗೆ ಅಮೆರಿಕೆಯಲ್ಲಿ ಚೂರುಪಾರು ಕೆಲಸಗಳಿವೆ. ಅದನ್ನೆಲ್ಲ ಮುಗಿಸಿಕೊಂಡು ಕಾಯುತ್ತಿರುತ್ತೇನೆ. ನೀವು ಬರದಿದ್ದರೆ ನನಗೆ ತೀವ್ರ ನಿರಾಶೆ ಆಗುತ್ತದೆ; ಒಂಟಿತನ ಕಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಆದರೆ ನೀವು ಬರಲಾಗದಿದ್ದರೆ ನಾನು ಅಲಾಸ್ಕಗೆ ಹೋಗಿಯೇ ತೀರುತ್ತೇನೆ ಎಂಬುದನ್ನೂ ಮರೆಯದಿರಿ -ಎಂದೆ ರಂಗಸ್ವಾಮಿಯವರಿಗೆ.

ನ್ಯೂಯಾರ್ಕಿಗೆ ಹೋಗಿ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಕನಸುಪುಟ್ಟಿಯ ವ್ಯಾಸಂಗ ಸಂಬಂಧಿ ಕೆಲಸಗಳನ್ನು ಮುಗಿಸಿ ಕರೆ ಮಾಡಿದೆ. ಮತ್ತೆ ರಿಚ್‌ಮಂಡ್‌ಗೆ ಹೋಗಿ ಅಲ್ಲಿಂದ ಕರೆ ಮಾಡಿದೆ. ಕೆನಡಾಗೆ ಹೋಗಿ ವ್ಯಾಂಕೋವರ್‌ನಿಂದ ಅಂತಿಮವಾಗಿ ಕರೆ ಮಾಡಿದೆ. ಎಲ್ಲ ಯಥಾಸ್ಥಿತಿ. ಅದೇ ಉತ್ತರ. ಅರ್ಜಿ ಸ್ವೀಕಾರವೂ ಆಗಿಲ್ಲ. ತಿರಸ್ಕೃತವೂ ಆಗಿಲ್ಲ. ದೆಹಲಿಯ ಕೆನಡಾ ರಾಯಭಾರಿ ಕಚೇರಿ ಅದೇಕೋ ತಾಲ್ಲೂಕು ಆಫೀಸಿನಂತಾಗಿತ್ತು. ಬಾಕಿ ಉಳಿದದ್ದು ಇನ್ನು ಮೂರೇ ದಿನ. ಕಂಫರ್ಟ್ಸ್ ಇನ್ ಹೋಟೆಲ್‌ನಲ್ಲಿ ಕಾವಲಿಯ ಮೇಲೆ ಕುಳಿತಂತೆ ಚಡಪಡಿಸಿದೆ. ಎದುರಿಗಿದ್ದ ಮೂರು ತಿಂಗಳ ಪ್ರವಾಸ ನೆನೆದು ಈಗಲೇ ಆಯಾಸ ಅನ್ನಿಸತೊಡಗಿತು.

ತಾಯ್ನಾಡಿನಲ್ಲಿ ಕಷ್ಟಪರಂಪರೆಗಳನ್ನೇ ಬಿಟ್ಟುಬಂದಿದ್ದೆ. ಜೀವನ್ಮರಣದ ಹೋರಾಟದಲ್ಲಿದ್ದ ಅಮ್ಮನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಹಳ್ಳಿಗೆ ಬಿಟ್ಟುಬಂದಿದ್ದೆ. ಚಿತ್ರವೊಂದು ಗಳಿಕೆಯಲ್ಲಿ ಸೋತು ಅಪಾರವಾದ ನಷ್ಟ ಅನುಭವಿಸಿದ್ದೆ. ನೆಚ್ಚಿನ ಸಂಬಂಧಗಳೆಲ್ಲ ತಟಕ್ಕನೆ ದೂರ ಸರಿದಿದ್ದವು. ಇಂಥ ದುರ್ಬರ ಕ್ಷಣಗಳನ್ನು ಮೀರುವುದಕ್ಕೆ ಎಂಬಂತೆ ಅಲಾಸ್ಕ ಭೂಮಿಯ ಅಂಚಿನಲ್ಲಿದೆ ಎಂಬ ಸ್ವಕಲ್ಪಿತ ಮೌಢ್ಯದ ತಿಳಿವಳಿಕೆಯೊಂದಿಗೆ ಇಷ್ಟು ದೂರ ಬಂದಿದ್ದೆ. ಅದು ಹೇಗೆ ಎಂದು ವಿವರಿಸಲಾರೆ. ನನ್ನ ಆಗಿನ ಮನಸ್ಥಿತಿಗೆ ಅಲಾಸ್ಕ ಹೇಳಿಮಾಡಿಸಿದಂತಿತ್ತು. ಆತ್ಮಾರ್ಪಣೆಗೂ, ಮರುಹುಟ್ಟಿಗೂ ಹೇಳಿ ಮಾಡಿಸಿದಂಥ ಜಾಗ. ನನಗೆ ಬೇಕಿದ್ದುದು ಮರುಹುಟ್ಟು, ಹೊಚ್ಚಹೊಸ ಸಂತೋಷಗಳು. ಈಜುಕೊಳಕ್ಕೆ ಬಿದ್ದು ಎದ್ದವನು ಒಂದು ಉನ್ಮಾದವನ್ನು ಪ್ರಜ್ಞಾಪೂರ್ವಕವಾಗಿ ತಂದುಕೊಂಡು ಪ್ರವಾಸದ ಆರಂಭದ ಬಿಂದುವಾದ ವ್ಯಾಂಕೋವರ್‌ ಅನ್ನು-ಹಲವು ಸಲ ನೋಡಿದ್ದರೂ -ಮತ್ತೆ ಹೊಸದಾಗಿ ಕಾಣುವ ಉದ್ದೇಶದಿಂದ ಸ್ಕೈ ಟ್ರೈನ್ ಏರಿದೆ.

ಮುಂಬೈ, ದೆಹಲಿ ಮೆಟ್ರೋಗಳಂತೆ ಜನದಟ್ಟಣೆ ಇಲ್ಲದ ಮೂರ್‍ನಾಲ್ಕು ಡಬ್ಬಿಗಳ ಸಿಟಿ ರೈಲು. ಬ್ರಿಡ್ಜ್‌ಪೋರ್ಟ್ ಸ್ಟೇಶನ್‌ನಿಂದ ನಗರದ ಕೇಂದ್ರ ಭಾಗವಾದ ವಾಟರ್‌ಫ್ರಂಟ್ ಸ್ಟೇಶನ್‌ಗೆ ಹೊರಟೆ. ಅದು ಎಲ್ಲ ಹಡಗುಗಳೂ ನಿಲ್ಲುವ ಜಾಗ. ನಮ್ಮ ರಾಜಕುಮಾರಿ ಹಡಗು ಎಲ್ಲಿ ನಿಲ್ಲುತ್ತಾಳೆ? ಹೇಗೆ ನಿಲ್ಲುತ್ತಾಳೆ? ಎಲ್ಲವನ್ನೂ ಪೂರ್ವಭಾವಿಯಾಗಿ ತಿಳಿದುಕೊಂಡಿದ್ದರೆ ಕ್ಷೇಮ ಎನಿಸಿ ಅತ್ತ ಹೋದೆ. ಕಚೇರಿಗೆ ಹೋಗಿ ನಾನು ನಿಮ್ಮ ಹಡಗಿನ ಅಲಾಸ್ಕ ಪ್ರಯಾಣಿಕ ಎಂದೆ. ಹಬ್ಬಕ್ಕೆ ಮೂರು ದಿನವಿರುವಾಗಲೇ ಬಂದ ನೆಂಟರನ್ನು ನೋಡುವಂತೆ ಅಪಾದಮಸ್ತಕ ನೋಡಿದ. ವಿಮಾನಕ್ಕೆ ಕೂಡಾ ಮೂರು ಗಂಟೆ ಮುಂಚಿತವಾಗಿ ಹೋದರೆ ಸಾಕು. ಆದರೆ ಹಡಗನ್ನೇರಲು ಮೂರು ದಿನ ಮುಂಚೆ ಹೋಗಿದ್ದ ನಾನು ಅತ್ಯುತ್ಸಾಹಿಯಂತೆಯೋ ಮೂರ್ಖನಂತೆಯೋ ಕಾಣಿಸಿರಬೇಕು. ಹಾಗಲ್ಲ ದೊರೆ, ಒಬ್ಬ ಮಿತ್ರರು ಕೊನೆಗಳಿಗೆಯಲ್ಲಿ ಓಡಿ ಬಂದು ಹತ್ತಿಕೊಳ್ಳುವ ಸಂದರ್ಭವಿದೆ. ಬೋರ್ಡಿಂಗ್ ಎಲ್ಲಿ? ಲಗ್ಗೇಜು ಕ್ಲಿಯರೆನ್ಸ್ ಎಲ್ಲಿ? ಇಮಿಗ್ರೇಶನ್ ಚೆಕ್ ಹಡಗಿನ ಒಳಗೋ? ಹೊರಗೋ? ಕಟ್ಟಕಡೆಯ ಬೋರ್ಡಿಂಗ್ ಎಷ್ಟು ಹೊತ್ತಿಗೆ? ಇತ್ಯಾದಿ ಕೇಳಿದೆ. ಅವರಿಗೆ ಗ್ರಾಹಕ ಎಂದರೆ ದೇವರಂತೆಯೇ. ಬಂದರು ಕಟ್ಟೆಗೆ ಬಂದು ಎಲ್ಲವನ್ನೂ ವಿವರಿಸಿದ. ಹಡಗು ಹೊರಡುವುದು ಸಂಜೆ ನಾಲ್ಕೂವರೆಗೆ. ಮಧ್ಯಾಹ್ನ ಒಂದೂವರೆಗೆ ಬಂದುಬಿಡಿ. ಈ ಸೀಸನ್‌ನ ಕೊನೆಯ ಟ್ರಿಪ್ಪು. ವಿಪರೀತ ರಶ್ ಇರುತ್ತದೆ. ಬೇಗ ಬಂದಷ್ಟೂ ಕ್ಷೇಮ ಎಂದ. ನನ್ನನ್ನು ಅವನು ಗುರುತಿಟ್ಟುಕೊಳ್ಳಲಿ ಎಂಬುದು ನನ್ನ ಅಪೇಕ್ಷೆಯಾಗಿತ್ತು. ಮೈಸೂರಿನ ಮಿತ್ರರು ಕೊನೆಯ ಕ್ಷಣದಲ್ಲಿ ಬಂದರೆ ಅವನ ನೆರವು ಬೇಕಾದೀತು ಎಂದು ನನ್ನ ಉದ್ದೇಶ.

ಉತ್ತರ ಧ್ರುವಕ್ಕೆ ಸಮೀಪದಲ್ಲಿರುವ ಕೆನಡಾ ದೇಶ ಭೌಗೋಳಿಕವಾಗಿ, ಆರ್ಥಿಕವಾಗಿ ತಂಪಾಗಿರುವ ದೇಶ. ಅದರಲ್ಲೂ ಕೆನಡಾದ ಕರಾವಳಿ ನಗರಗಳಂತೂ ಬಹುಮೋಹಕ. ಈ ಪಟ್ಟಿಯಲ್ಲಿ ವ್ಯಾಂಕೋವರ್‌ಗೆ ಅಗ್ರಸ್ಥಾನ. ಎಲ್ಲಿಂದ ಬಂದರೋ, ಹೇಗೆ ಬಂದರೋ ಚೀನೀ ಸಂಜಾತರು ಬಹಳ. ಎಲ್ಲೆಡೆ ಸಣ್ಣ ಕಣ್ಣಿನ ಜನರೇ. ಭಾರತೀಯರಲ್ಲಿ ಸರದಾರಜಿಗಳೇ ಹೆಚ್ಚು. ಒಂದು ಕಾಲಕ್ಕೆ ಖಲಿಸ್ತಾನ್ ಬೇಡಿಕೆಯ ಉಗ್ರಗಾಮಿ ಪಂಥ ಇಲ್ಲಿ ಚಟುವಟಿಕೆಯಿಂದ ಇತ್ತು. ಸಿಖ್ಖರು ರಾಜಕೀಯವಾಗಿ, ಆರ್ಥಿಕವಾಗಿ ಕೆನಡಾದಲ್ಲಿ ಮೇಲುಗೈ ಸಾಧಿಸಿದ್ದಾರೆ. ಗುರ್ವಿಂದರ್ ಸಿಂಗ್ ಕಲಾರ್ ಎಂಬಾತನನ್ನು ರಗ್‌ಬಿ ಟೀಂಗೆ ಸೇರಿಸಿಕೊಳ್ಳಲಾಗಿದೆ. ಇದು ಮೊಟ್ಟಮೊದಲ ಸೇರ್ಪಡೆ. ಕೆನಡಾ-ಇಂಡಿಯಾ ಸಂಬಂಧವನ್ನು ಬಿಂಬಿಸುವ ವೃದ್ಧಿಸುವ ಪತ್ರಿಕೆಗಳು, ಸಂಘ ಸಂಸ್ಥೆಗಳು ಬಹಳ ಇವೆ. ಕೆನ್-ಇಂಡಿಯಾ ಎಂಬ ಪತ್ರಿಕೆಯ ಸಂಚಿಕೆಯೊಂದನ್ನು ಗಮನಿಸಿದೆ. ಎರಡೂ ದೇಶಗಳ ಅನೇಕ ಸ್ವಾರಸ್ಯಕರ ಸಂಗತಿಗಳಿದ್ದುವು. ಕೆನಡಾದ ಹಿಂದೂ ದೇವಾಲಯಗಳಲ್ಲಿ ಪೂಜಾರಿಗಳ ಕೊರತೆ ಇದೆಯಂತೆ. ಕೈಲಾಶ್‌ಸಿಂಗ್ ಎಂಬ ಅರವತ್ತಾರು ವರ್ಷದ ತರುಣ ತಾನು ಗಂಡು ಮಗುವನ್ನು ಪಡೆಯುವವರೆಗೂ ಸ್ನಾನ ಮಾಡುವುದಿಲ್ಲ ಎಂದು ಶಪಥ ಮಾಡಿ ಮುವ್ವತ್ತೆಂಟು ವರ್ಷಗಳಿಂದ ಸ್ನಾನವಿಲ್ಲದೆ ಇದ್ದಾನಂತೆ. ಭಗತ್‌ಸಿಂಗ್‌ರ ನೂರೈದನೇ ಜನ್ಮದಿನಾಚರಣೆಯ ನಿಮಿತ್ತ ಅವರನ್ನು ಗಲ್ಲಿಗೇರಿಸಿದ ಜಾಗದಲ್ಲೇ ಲಾಹೋರ್‌ನಲ್ಲಿ ಅವರ ಪ್ರತಿಮೆಯನ್ನು ನಿಲ್ಲಿಸಲಾಗುತ್ತದೆ- ಅಂತೆ. ಇತ್ಯಾದಿ ಸುದ್ದಿಗಳು.

ಪುಸ್ತಕಕ್ಕೆ ಪ್ರವೇಶಿಕೆ, ಮುನ್ನುಡಿಯ ತೋರಣವಿರುವಂತೆ, ಅಲಾಸ್ಕ ಯಾತ್ರೆಗೆ ಆರಂಭ ಬಿಂದುವಿನಲ್ಲಿರುವ ವ್ಯಾಂಕೋವರ್ ಆಭರಣದಂತಿದೆ. ಹಾಗೆ ನೋಡಿದರೆ ಕೆನಡಾದ ಉತ್ತರ ಭಾಗದಲ್ಲಿ ಜನವಸತಿಯೇ ಇಲ್ಲ. ಗಂಟೆಗಟ್ಟಲೆ ಮೈಲುಗಟ್ಟಲೆ ಸಂಚರಿಸಿದರೂ ನೋಡಲೊಂದು ಮನುಷ್ಯಪ್ರಾಣಿ ಸಿಗುವುದಿಲ್ಲ. ದಕ್ಷಿಣ ತುದಿಯಲ್ಲಿರುವ ಕೆಲವು ನಗರಗಳಾದ ಟೊರಾಂಟೋ, ಮಾಂಟ್ರಿಯಲ್, ಕ್ಯುಬೆಕ್, ಓಟೊವಾ, ಕ್ಯಾಲ್‌ಗರಿಗಳೂ ಕೂಡಾ ಪ್ರಶಾಂತ ಮತ್ತು ಒತ್ತಡರಹಿತ. ಜನಸಂಖ್ಯೆ ಕಡಿಮೆ ಇರುವ ದೇಶಗಳು ಸಾಮಾನ್ಯವಾಗಿ ಸಂಪದ್ಭರಿತವಾಗಿರುತ್ತವೆ. ಕೆನಡಾ ಕೆಲವು ಕ್ಷೇತ್ರಗಳಲ್ಲಿ ಅಮೆರಿಕಾಗಿಂತ ಶ್ರೀಮಂತ ದೇಶ. ಆದರೆ ಪಕ್ಕದ ದೊಡ್ಡ ದೇಶದೊಂದಿಗೆ ಸ್ಪರ್ಧಿಸಲಿಚ್ಛಿಸದ ಕೆನಡಾ, ಅಮೆರಿಕನ್ ಡಾಲರ್‌ಗಿಂತ ತನ್ನ ಡಾಲರ್ ಮೌಲ್ಯವನ್ನು ತುಸು ಕಡಿಮೆ ಇರಿಸಿಕೊಳ್ಳಬಯಸುತ್ತದಂತೆ. ಇದು ಹೇಗೆ ಸರಿ ಮತ್ತು ಎಷ್ಟು ಸರಿ ಎಂದು ಆರ್ಥಿಕತಜ್ಞನಲ್ಲದ ನನಗೆ ಹೊಳೆಯುವುದಿಲ್ಲ. ಬರಹಗಾರನಾಗಿ ನನಗೆ ಹೊಳೆಯುವ ಸತ್ಯ, ಕೆನಡಾ ಅಮೆರಿಕಾಗಿಂತ ಸುಂದರವಾಗಿದೆ. ಹಾಗೆಯೇ ಆಸ್ಟ್ರೇಲಿಯಾಗಿಂತ ನ್ಯೂಜಿಲ್ಯಾಂಡ್ ಸುಂದರವಾಗಿದೆ.

ಅಂದು ಬಸ್ಸೇರಿ ವ್ಯಾಂಕೋವರ್‌ನ ದಟ್ಟಕಾಡಿನ ನೆಲೆಯಾದ ಕ್ಯಾಪಿಲಾನೊಗೆ ಹೋಗಿದ್ದು ಮರೆಯಲಾಗದ ಅನುಭವ. ಡಗ್ಲಸ್ ಫರ್ ಮರಗಳು ಆಕಾಶ ಮುಟ್ಟಲು ಹವಣಿಸುತ್ತಿದ್ದವು. ನಡುವೆ ಕ್ಯಾಪಿಲಾನೊ ಎಂಬ ಹೊಳೆ. ಆ ಹೊಳೆಗೆ ಅನೇಕ ತೂಗುಸೇತುವೆ. ಅಸಂಖ್ಯ ಪಕ್ಷಿ ಸಮೂಹ. ಹಳೆಯ ಮರಗಳ ಮೇಲೆ ಹಸಿರು ಹಾವಸೆ ಹಬ್ಬಿತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ ಅದೊಂದು ಮಳೆಕಾಡಿನ ಪರ್ಯಾವರಣ. ಈ ಪರ್ವತಶ್ರೇಣಿ ಉತ್ತರ ಅಮೆರಿಕಾದಿಂದ ದಕ್ಷಿಣ ಅಲಾಸ್ಕವರೆಗೆ ಸಾವಿರದ ಆರು ನೂರು ಕಿಲೋ ಮೀಟರುಗಳವರೆಗೆ ಹಬ್ಬಿ ನಿಂತಿದೆ. ಕಾಡಿನಲ್ಲಿ ವ್ಯರ್ಥ ಎಂಬುದೇ ಇಲ್ಲ. ಅಸಂಖ್ಯ ಪ್ರಾಣಿಪಕ್ಷಿಗಳು, ಕ್ರಿಮಿಕೀಟಗಳು, ಹುಳುಹುಪ್ಪಟೆಗಳು ಜೀವ ತಳೆಯುತ್ತವೆ. ಬಿದ್ದ ಮರ, ಸತ್ತ ಪ್ರಾಣಿ ಎಲ್ಲವೂ ಸಮೃದ್ಧ ಗೊಬ್ಬರವಾಗುತ್ತದೆ. ಜೀವ ಸರಪಳಿಯ ಇತಿಹಾಸದಲ್ಲಿ ಕಾಡುಗಳದು ಬಹುಮುಖ್ಯ ಪಾತ್ರ. ಹಲವು ಮಿಲಿಯನ್ ವರ್ಷಗಳ ಹಿಂದೆ ಭೂಮಿ ಒಂದೇ ಖಂಡದಂತಿತ್ತು. ಅದನ್ನು Pangea ಎನ್ನಲಾಗುತ್ತದೆ. ಆಗ ನಮ್ಮ ಇಂಡಿಯಾ, ಅಂಟಾರ್ಟಿಕಾ ಪಕ್ಕದಲ್ಲಿತ್ತಂತೆ. ನಾವು ಅಲ್ಲೇ ಇದ್ದರೆ ಚೆನ್ನಾಗಿತ್ತು. ಆಗ ಪಾಕಿಸ್ತಾನ ನಮ್ಮ ಪಕ್ಕದ ದೇಶವಾಗಿರುತ್ತಿರಲಿಲ್ಲ.

ಕ್ಯಾಪಿಲಾನೊ ತೂಗುಸೇತುವೆಯ ಸುತ್ತಮುತ್ತ ಇಡೀ ದಿನ ಕಳೆದೆ. ಸೇತುವೆಗೂ ನೀರಿಗೂ ಇನ್ನೂರಮುವ್ವತ್ತು ಅಡಿ ಎತ್ತರ. ಅಲ್ಲಿದ್ದ ಗೈಡು ಬೋಳು ತಲೆಯ ಹದ್ದನ್ನು ತೋರಿಸಿ ಅದರ ದೃಷ್ಟಿ ಬಹಳ ಹರಿತ, ಹತ್ತು ಸಾವಿರ ಅಡಿಯವರೆಗೆ ಹಾರುತ್ತದೆ ಎಂದಳು. ಕ್ಯಾಪಿಲಾನೊ ಕಾಡು ನಮ್ಮ ಪಶ್ಚಿಮಘಟ್ಟದ ಕಾಡುಗಳನ್ನು ನೆನಪಿಸುತ್ತದೆ. ಆದರೆ ಸಸ್ಯಸಂಕುಲ, ಪ್ರಾಣಿಸಂಕುಲ ಭಿನ್ನವರ್ಗಕ್ಕೆ ಸೇರಿದವುಗಳು. ಇದೇ ಬಗೆಯಲ್ಲಿ ಸಂರಕ್ಷಿಸಲ್ಪಟ್ಟ ಅರಣ್ಯವು ನ್ಯೂಜಿಲ್ಯಾಂಡ್‌ನಲ್ಲಿದೆ. ಅಲ್ಲಿನ ಮೂಲನಿವಾಸಿಗಳಾದ ಮೌರಿಗಳೂ, ಇಂದಿನ ಸರ್ಕಾರವೂ ಅಪಾರ ಪರಿಸರ ಪ್ರೇಮಿಗಳು. ಅವರು ದಕ್ಷಿಣ ಧ್ರುವಕ್ಕೂ ಇವರು ಉತ್ತರ ಧ್ರುವಕ್ಕೂ ಸಮೀಪದಲ್ಲಿರುವುದು ಅಧ್ಯಯನದ ದೃಷ್ಟಿಯಿಂದ ಕುತೂಹಲಕರ. ಕಾಡನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವು ಈ ಇಬ್ಬರಿಂದಲೂ ಕಲಿಯಬೇಕು.

ಪ್ಲಾಸ್ಟಿಕ್‌ಮಯವಾಗುತ್ತಿರುವ ಪಶ್ಚಿಮಘಟ್ಟದ ಕಾಡುಗಳನ್ನು ನೆನೆದರೆ ವ್ಯಥೆಯಾಗುತ್ತದೆ. ನಮ್ಮ ಹೊಣೆಗೇಡಿ ಪ್ರಭುತ್ವಕ್ಕೆ ಯಾವುದೇ ಒಳ್ಳೆಯ ಯೋಜನೆಯನ್ನು ಸೂಚಿಸಲಿ, ಬಜೆಟ್ ಇಲ್ಲ ಎಂಬ ಹಾರಿಕೆಯ ಉತ್ತರ ಸಿದ್ಧ. ಇಲ್ಲದಿರುವುದು ಬಜೆಟ್ ಅಲ್ಲ; ಬದ್ಧತೆ-ಅಭಿರುಚಿ- ದೂರದೃಷ್ಟಿ- ಇಚ್ಛಾಶಕ್ತಿ. ಧರ್ಮ, ಭಾಷೆ, ದೇವರು ಎಂದರೆ ಬೀದಿಗಿಳಿದು ಕಾದಾಡಬಲ್ಲ ಭಾರತೀಯನಿಗೆ ಪರಿಸರಕ್ಕಿಂತ ದೊಡ್ಡ ಧರ್ಮ ಇನ್ನೊಂದಿಲ್ಲ ಎಂದು ಈವರೆಗೂ ಅನ್ನಿಸಿಲ್ಲ.

ನಾಳೆ ಸಂಜೆ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಎಂಬ ಅತ್ಯಾಧುನಿಕ ಬೃಹತ್ ಹಡಗು ಅಲಾಸ್ಕದತ್ತ ಹೊರಡಲಿತ್ತು. ಇದಕ್ಕೆ ಮುನ್ನ ಕಾಡಿನಲ್ಲಿ ಅಲೆದದ್ದು ಸೂಕ್ತ ಆರಂಭ ಎನ್ನಿಸಿತ್ತು. ಅಸಂಭವ ಅನ್ನಿಸಿದರೂ, ಹಡಗು ತೀರ ಬಿಡುವ ಮುನ್ನ, ಮೈಸೂರಿನ ಮಿತ್ರರು ಲಗ್ಗೇಜು ಹಿಡಿದು ಏದುಸಿರು ಬಿಡುತ್ತಾ ಓಡೋಡಿ ಬರುತ್ತಿರುವ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾ ಅರೆನಿದ್ರೆಯಲ್ಲೊಂದು ಅಸ್ಪಷ್ಟ ಚಿತ್ರ ಬಿಡಿಸಿಕೊಳ್ಳತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT