ADVERTISEMENT

ಶುಭ ವಿದಾಯ

ನಾಗತಿಹಳ್ಳಿ ಚಂದ್ರಶೇಖರ
Published 7 ಮಾರ್ಚ್ 2015, 19:30 IST
Last Updated 7 ಮಾರ್ಚ್ 2015, 19:30 IST
ಶುಭ ವಿದಾಯ
ಶುಭ ವಿದಾಯ   

ಅವರ ಮನೆ ಮಗಳು ಗೌರಿ, ಹಸೆಮಣೆ ಏರಿ ವಧುವಾಗಿ ಕುಳಿತಿದ್ದಾಳೆ. ಅಪ್ಪ ಅವ್ವನ ಪ್ರೀತಿ ಬೆಟ್ಟದಷ್ಟಿದ್ದರೂ, ಗಂಡನ ಬೆಚ್ಚನೆ ಪ್ರೀತಿಯ ಆಸೆ ಹೇಗಿರುತ್ತದೋ ಎಂಬ ಕೌತುಕ ಅವಳಿಗೆ. ರಾಮನಗರದ ಕರಿಯಪ್ಪ ಮಾಸ್ತರಿಗೆ ರಾಣೆಬೆನ್ನೂರಿಗೆ ವರ್ಗವಾಗಿದೆ. ಭೂಮಿ-ಕಾಣಿ, ದನ-ಕರು, ತೋಟತುಡಿಕೆ ಮಾಡುತ್ತಾ ಬಿರ್ಯಾನಿ ತಿನ್ನುತ್ತಾ ಅಪರೂಪಕ್ಕೆ ಶಾಲೆಗೂ ಹೋಗುತ್ತಾ ರಾಮನಗರದಲ್ಲಿ ಸುಖವಾಗಿದ್ದ ಅವರಿಗೆ ರಾಣೆಬೆನ್ನೂರಿಗೆ ಹೋಗುವ ಆಸೆ ಹುಟ್ಟಿದೆ. ಕಾರಣ ಅಲ್ಲಿ ರಾಣಿಯ ಬೆನ್ನು ಕಾಣಬಹುದೇನೋ ಎಂಬ ವಿಚಿತ್ರ ಕುತೂಹಲ.

ಏಳನೇ ಕ್ಲಾಸು ಪಾಸಾಗಿರುವ ವೆಂಕಟ್ರಾಜು ಎಂಬ ಮುಗ್ಧ ಬಾಲಕ ಪ್ರೈಮರಿ ಸ್ಕೂಲಲ್ಲಿ ಮುದ್ದಾದ ಗೆಳತಿಯರು, ಒಳ್ಳೆಯ ಮೇಷ್ಟ್ರು ಎಲ್ಲ ಇದ್ದರೂ ಬೇರೆ ಊರಿನ ಹೈಸ್ಕೂಲಿಗೆ ಖುಷಿಯಿಂದ ಹೊರಟು ನಿಂತಿದ್ದಾನೆ. ಮೇಷ್ಟ್ರು  ಒಳ್ಳೆಯವರು ಅಂತ ಪ್ರೈಮರಿ ಸ್ಕೂಲಲ್ಲೇ ಉಳಿಯೋಕಾಗುತ್ತಾ ಎಂದು ಪ್ರಶ್ನಿಸುತ್ತಾನೆ.

ದೆಹಲಿಯಲ್ಲಿ ಹವೆ ಚೆನ್ನಾಗಿರಬಹುದು ಎಂದು ಬೆಂಗಳೂರು ಬಿಡುವ ನಿಜಾಮುದ್ದೀನ್ ರೈಲು ಕಾತರದಲ್ಲಿದೆ. ಸಿಂಹಾಸನದಲ್ಲಿ ಕುಳಿತ ಕಸದ ಪೊರಕೆ ತಿರಸ್ಕಾರದಿಂದ ಬೀದಿಯನ್ನು ನೋಡುತ್ತಿದೆ. ಚಳಿಯನ್ನು ನಿಂದಿಸುತ್ತಿದ್ದವರು ಬೇಸಿಗೆಯನ್ನು ನಿಂದಿಸಲು ಆರಂಭಿಸಿ ದ್ದಾರೆ. ಮಾಗಿ ಮರೆಯಾಗಿ, ವೈಶಾಖ ಬಂದು ಜಗತ್ತನ್ನು ಬೆಚ್ಚಗೆ ಮಾಡಿದೆ. ಹೊಸ ನೀರು ಧುಮುಕಲೆಂದು ಒಣಗಿದ ಜಲಪಾತ ಕಾದಿದೆ. ಇಳೆಯು ಹೊಸ ಮಳೆಗಾಗಿ, ಬೆಳೆಯು ಹೊಸ ಸೂರ್ಯೋದಯಕ್ಕಾಗಿ ತವಕಿಸುತ್ತಿವೆ. ಲಕ್ಷ-ಲಕ್ಷ ಹುಡುಗ -ಹುಡುಗಿಯರು ಹೊಸ ಕನಸು ಕಾಣುತ್ತಾ, ಬೆರಳ ನಟಿಕೆ ಮುರಿಯುತ್ತಾ, ಪರೀಕ್ಷಾ ಕೊಠಡಿಯಿಂದ ಹೊರಬರುತ್ತಿದ್ದಾರೆ.

ಮೊನ್ನೆ ಮೊನ್ನೆ ಮಗ ಹುಟ್ಟಿದನೆಂದು ಸಂಭ್ರಮಿಸಿದ್ದವರು ಈಗ ಮೊಮ್ಮಗುವಿನ ಬಾಣಂತನಕ್ಕೆ ಅಣಿಯಾಗುತ್ತಿದ್ದಾರೆ. ಪ್ರೇಮಪತ್ರಕ್ಕೆ ಪೆನ್ನು, ಹಾಳೆ ಹುಡುಕುತ್ತಿದ್ದ ಜೀವ, ಹೃದ್ರೋಗತಜ್ಞರನ್ನು ಹುಡುಕಿ ಹೊರಟಿದೆ. ತೊದಲುತ್ತಿದ್ದ ಎಳೆಕಂದ ನೋಡನೋಡುತ್ತಿದ್ದಂತೆ, ಅಗೋ ಮಧುರವಾಗಿ ಹಾಡತೊಡಗಿದ್ದಾನೆ. ಅಲ್ಲಿ ಇಲ್ಲಿ ಅಡ್ಡಾಡಿ ಕೊಂಡಿದ್ದವರು ರಾಷ್ಟ್ರಕವಿತ್ವಕ್ಕೆ, ಜ್ಞಾನಪೀಠಕ್ಕೆ ಅರ್ಜಿ ತುಂಬಿಸುತ್ತಿದ್ದಾರೆ. ಬದುಕೆಲ್ಲ ಬಾಡಿಗೆ ಮನೆಯಲ್ಲಿ ಸವೆಸಿದ ಕುಟುಂಬ ಗೃಹಪ್ರವೇಶಕ್ಕೆ ತೋರಣ ಕಟ್ಟುತ್ತಿದೆ. ನಿತ್ಯ ವಾಕಿಂಗ್‌ ಬರುತ್ತಿದ್ದ ವೃದ್ಧರು ಇಂದು ಬೆಳಿಗ್ಗೆ ಹೃದಯಾಘಾತದಿಂದ ತೀರಿಕೊಂಡಿದ್ದಾರೆ.

ಇದು ಮಾತ್ರವಲ್ಲ; ಎಲ್ಲವೂ ಸ್ಥಿತ್ಯಂತರದ ಕಾಲ. ಈ ಸ್ಥಿತ್ಯಂತರದಲ್ಲಿ ಖುಷಿಯೂ ವಿಷಾದವೂ ಜೊತೆಜೊತೆಯಾಗಿರುತ್ತವೆ. ತಾಯಿ ಮನೆ ತೊರೆಯುವಾಗ ಅಳುವ ಮಗಳ ಕಣ್ಣೀರ ಒರೆಸಿ, ‘ಸರಿ ನೀನು ಹೋಗಬೇಡ ಇಲ್ಲೇ ಇದ್ದುಬಿಡು’ ಎಂದರೆ ಅವಳು ಸುತರಾಂ ಒಪ್ಪುವುದಿಲ್ಲ. ಆದರೆ ಅವಳ ಅಳು ಕೃತಕವಲ್ಲ. ಹೋಗಬೇಕಲ್ಲ ಎಂಬ ನೋವಿನಲ್ಲಿ, ಹೋಗುವುದು ಎಷ್ಟು ಚೆನ್ನ ಎಂಬ ಸುಪ್ತ ಸಂತೋಷ ಬೆರೆತಿರುತ್ತದೆ. ಸಹೋದ್ಯೋಗಿಗಳು ಎಷ್ಟು ಹೊಗಳಿದರೂ ಬಡ್ತಿ, ವರ್ಗ, ನಿವೃತ್ತಿಗಳು ಎದುರು ಬಂದಾಗ ಹೊರಡಲೇಬೇಕು.

ಹೂವು ಕಾಯಾಗುವುದು, ಕಾಯಿ ಹಣ್ಣಾಗುವುದು, ಹಣ್ಣಿನೊಳಗಿನ ಬೀಜ ಮತ್ತೆ ಗಿಡವಾಗುವುದು ಬಹುಸೋಜಿಗ. ಪ್ರಕೃತಿಯ ಈ ಸಂಚಾರ ವನ್ನು ಕವಿ ನಿಸಾರ್ ಅವರು ‘ನಿತ್ಯೋತ್ಸವ’ ಎಂದರು. ಇಂದಿನ ಉತ್ಸವ ಇಂದಿಗೆ. ನಾಳೆ ಬೇರೆ ಉತ್ಸವ ಬರಲಿದೆ. ಒಂದನ್ನೊಂದು ಬರಮಾಡಿಕೊಳ್ಳುವುದು ಮತ್ತು ಬೀಳ್ಕೊಡುವುದೇ ಬದುಕಿನ ಸೌಂದರ್ಯ. ಈ ಬೀಳ್ಕೊಡುಗೆ ಗ್ರಹತಾರೆಗಳಿಂದ ಹಿಡಿದು ನೆಲದ ಮೇಲಣ, ಸಣ್ಣ ಅತಿ ಸಣ್ಣ ಸಂಗತಿಗಳವರೆಗೂ ಸಮನಾಗಿದೆ. ಆದ್ದ ರಿಂದ ಎರಡು ಸತ್ಯಗಳು ಸ್ಥಾಪಿತವಾಗುತ್ತವೆ. ಮೊದಲನೆಯದು ವರ್ತಮಾನದ ಈ ಕ್ಷಣದ ಸತ್ಯ. ಎರಡನೆಯದು ಎಲ್ಲ ಕಾಲಕ್ಕೂ ಒಂದೇ ಅರ್ಥ ಕೊಡುವ ಶಾಶ್ವತ ಸತ್ಯ. ಎರಡೂ ಸತ್ಯಗಳನ್ನು ಗ್ರಹಿಸಿ, ಎರಡನ್ನೂ ನಂಬಿ ನಡೆಯಬಹುದೆ?

ನಮ್ಮ ಕಾಲಮಾನದಲ್ಲಂತೂ ಬದಲಾವಣೆ ಅತಿ ವೇಗ. ಕರಿದಾರದಂತೆ ಅಂಕುಡೊಂಕಾಗಿದ್ದ ಸಣ್ಣ ರಸ್ತೆಗಳು ನೋಡುತ್ತಿದ್ದಂತೆ ನೆಟ್ಟಗೆ ನಿಗುರಿ ಎಡಬಲ ಕಬಳಿಸಿ ಚತುಷ್ಪಥಗಳಾದವು. ತೋಪುಗಳು, ಗೋಮಾಳಗಳು, ಕೆರೆಕಟ್ಟೆಗಳು ಕಾಣೆಯಾದವು. ಕೈಬರಹಗಳು ತೀರಾ ಕಮ್ಮಿ ಆದವು. ಅಂಗೈನಲ್ಲಿ ನಕ್ಷತ್ರ ಕಂಡವು. ಬೆಂಗಳೂರಿನಿಂದ ಮೈಸೂರಿಗೆ ಹೋಗುವಷ್ಟೇ ಸಹಜವಾಗಿ ಜನ ದೇಶವಿದೇಶ ಅಡ್ಡಾಡತೊಡಗಿದರು. ಸ್ವಾಮೀಜಿಗಳು ನಟರಾದರು.

ಸಂಕೋಚದಿಂದ ಮುದುರಿಕೊಳ್ಳುತ್ತಿದ್ದ ಸೂಕ್ಷ್ಮ ನಟಿಯರು, ಗ್ರಾಂಥಿಕ ಅಸ್ಖಲಿತ ಆದರೆ ಶುಷ್ಕ, ಕೃತಕ ಭಾಷಣ ಮಾಡುವ ಮಂತ್ರಿಯಾದರು. ನಿನ್ನೆಯ ಸಚಿವ ಇದೀಗ ನಿವೃತ್ತ. ಇಂದಿನ ಸಚಿವ ನಾಳೆಯ ನಿರುದ್ಯೋಗಿ. ಇಲ್ಲಿ ಅದೆಷ್ಟು ‘ಯು’ ಟರ್ನ್‌ಗಳು, ‘ಟಿ’ ಜಂಕ್ಷನ್‌ಗಳು, ಡೆಡ್ ಎಂಡ್‌ಗಳು, ಒನ್‌ವೇಗಳು, ನಿಲ್ಲದೆ ಚಲಿಸುತ್ತಲೇ ಇರು ಎಂದು ಸೂಚಿಸುವ ನೋ ಪಾರ್ಕಿಂಗ್‌ಗಳು! ಚಲನೆ ಇಲ್ಲಿ ಅನಿವಾರ್ಯ.

ಆದರೆ ಇದು ಒಳಗಿನ ಚಲನೆಯೋ, ಹೊರಗಿನ ಚಲನೆಯೋ ಎಂಬುದು ಈಗಿರುವ ಜಿಜ್ಞಾಸೆ. ಈ ಚಲನೆ ನಿಜವಾಗಿದ್ದರೆ ಬಚ್ಚಲುಗಳು ಏಕೆ ಸೃಷ್ಟಿಯಾಗುತ್ತಿದ್ದವು? ನಾನು ತುಂಬಾ ಸಲ ಓದಿರುವ, ಓದುತ್ತಿರುವ ಪುಸ್ತಕ ದೇವನೂರರ ‘ಎದೆಗೆ ಬಿದ್ದ ಅಕ್ಷರ’. ದಯೆಗಾಗಿ ನೆಲ ಒಣಗಿದೆ ಎಂಬ ಅಧ್ಯಾಯದಲ್ಲಿ ‘ನನಗೆ ಈ ಸಹಸ್ರಮಾನ ದಲ್ಲಿ ಕಾಣುವುದು ಹನ್ನೆರಡನೆ ಶತಮಾನದ ವಚನ ಆಂದೋಲನದ ಆ ಇಪ್ಪತ್ತೈದು ವರ್ಷಗಳು.

ಹುಡುಕಿದರೂ ಜಗತ್ತಿನಲ್ಲೇ ಕರ್ನಾ ಟಕದ ಈ ಮಾದರಿ ಬಹುಶಃ ಎಲ್ಲೂ ಸಿಗುವುದಿಲ್ಲವೇನೋ! ಈ ವಚನಧರ್ಮವನ್ನು ಜಾತಿಯ ಬಚ್ಚಲಿನಿಂದ ಮೇಲೆತ್ತಿ ರಕ್ಷಿಸಿದರೆ ಜಗತ್ತಿಗೇ ಇದು ಬೆಳಕಾಗಬಹುದೇನೋ. ಇದು ಜಾತಿಯಾದರೆ ಕೆಟ್ಟ ಜಾತಿ; ಧರ್ಮವಾದರೆ ಮಹೋನ್ನತ ಧರ್ಮ’. ಎನ್ನುತ್ತಾರೆ. ಸ್ತಬ್ಧತೆಯಿಂದ, ನಿಲುಗಡೆಯಿಂದ ಬಚ್ಚಲುಗಳು ನಿರ್ಮಾಣವಾಗುತ್ತವೆ. ಪ್ರಕೃತಿಯು ಬದಲಾವಣೆಯ ಪಠ್ಯವನ್ನು ಎಷ್ಟು ಬೋಧಿಸಿದರೂ ತನಗೆ ಬೇಕಾದ ಕಡೆ ನಿಂತು ಮನುಷ್ಯ ಬಚ್ಚಲು ಕಟ್ಟಿಕೊಳ್ಳುತ್ತಾನೆ.

ದುರ್ವಾಸನೆ ಬಂದರೂ ಮೂಗು ಹಿಡಿದು ಅಲ್ಲೇ ಬದುಕುತ್ತಾನೆ. ಇಡೀ ಜಗತ್ತನ್ನು ಆವರಿಸಿಕೊಳ್ಳುತ್ತಾ ದೊಡ್ಡ ಧರ್ಮವಾಗಿ­ರುವವರಲ್ಲೇ ಕೆಲವರು ಭಯೋತ್ಪಾದಕರಾಗಿ, ತಮ್ಮ ಧರ್ಮಕ್ಕೆ ಅಪಾಯ ಬಂದಿದೆ’ ಎಂದು ಬೊಬ್ಬಿಡುವುದನ್ನು ನೋಡಿ ದರೆ ಜಾತಿಗಳೂ, ಧರ್ಮಗಳೂ ಸ್ಥಗಿತಗೊಂಡಿವೆ ಎಂಬುದು ನಿಚ್ಚಳ. ಎಲ್ಲವೂ ಅಕಾಲಿಕ ನಿಲುಗಡೆಯ ಪರಿಣಾಮ. ಕೊಟ್ಟು ಪಡೆ ಯುತ್ತಾ, ಒಂದನ್ನೊಂದು ಸ್ವಾಗತಿಸುತ್ತಾ, ಬೀಳ್ಕೊಡುತ್ತಾ ಇದ್ದರೆ ತಿಳಿನೀರಿನಂತೆ ಪ್ರವಹಿಸಲು ಸಾಧ್ಯ.

ಕಾಲವೆನ್ನುವುದು ಸ್ವತಂತ್ರ ಘಟಕ ವಲ್ಲ. ಅದಕ್ಕೆ ಅಸ್ತಿತ್ವವೂ ಇಲ್ಲ. ಅಲ್ಲಮನ ವಚನ ನೆನಪಾಗುತ್ತಿದೆ. ‘ಹಿಂದಣ ಅನಂತವನು, ಮುಂದಣ ಅನಂತವನು ಒಂದು ದಿನ ಒಳಕೊಂಡಿತ್ತು ನೋಡಾ! ಒಂದು ದಿನವನೊಳಕೊಂಡು ಮಾತ ನಾಡುವ ಮಹಂತನ ಕಂಡು ಬಲ್ಲವರಾರಯ್ಯ? ಆದ್ಯರು ವೇದ್ಯರು ಅನಂತ ಹಿರಿಯರು ಲಿಂಗದಂತುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರ!’ ಕಾಲವನ್ನು ಕಾಲವೇ ಕೊಂದು ಕಾಲಾತೀತವಾಗುವುದು ಎಂಥ ಸೋಜಿಗ!

ಎಪ್ಪತ್ತೆಂಟು ವಾರಗಳ ಕಾಲ ‘ಪ್ರಜಾವಾಣಿ’ಯ ಓದುಗರಿಗಾಗಿ ನಾನು ಬರೆದ ‘ರೆಕ್ಕೆ ಬೇರು’ ಅಂಕಣವನ್ನು ಇದರೊಂದಿಗೆ ಕೃತಜ್ಞತಾಪೂರ್ವಕವಾಗಿ ಮುಗಿಸು­ತ್ತಿದ್ದೇನೆ. ಹಾರುವ-ಹೀರುವ ಕಾಯಕದ ವಿಶ್ಲೇಷಣೆ­ಯೊಂದಿಗೆ ಆರಂಭವಾದ ಈ ಅಲೆಮಾರಿ ಬರಹ, ನಾಗತಿಹಳ್ಳಿಯ ಓಣಿಯಿಂದ, ಗೋಳದ ಉತ್ತರದ ಅಲಾಸ್ಕದವರೆಗೆ ದಿಕ್ಕಾಪಾಲಾಗಿ ಚಲಿಸಿದೆ. ಸಣ್ಣ ಕಥೆಗಳಂತೆ, ಪ್ರವಾಸೀ ಕಥನಗಳಂತೆ, ಅಂಕಣಗಳು ನನ್ನ ಮೆಚ್ಚಿನ ಪ್ರಕಾರ.

ಹದಿನೈದು ವರ್ಷಗಳ ಸಾತತ್ಯ ಮತ್ತು ಸಾಂಗತ್ಯ ಉಳ್ಳ ಈ ಅಂಕಣ ಪ್ರಕಾರ ನನ್ನ ಓದನ್ನು ಹೆಚ್ಚಿಸಿದೆ. ಓದಿನ ಆಯ್ಕೆಯನ್ನು, ಆದ್ಯತೆಯನ್ನು ಸೂಚಿಸಿದೆ. ಇಂಥ ಒತ್ತಡ ಮೈಮೇಲೆ ಹೇರಿಕೊಳ್ಳದಿದ್ದರೆ ಮೈಗಳ್ಳ ಮನಸ್ಸು ಕುಳಿತು ಓದುವುದಿಲ್ಲ.
ಅಂಕಣಗಳ ದೆಸೆಯಿಂದ ಓದಿನ ಶಿಸ್ತು ದಕ್ಕಿತು. ಓದುವವರಿಗೆ ಪ್ರಯೋಜನವಾಯಿತೋ ಇಲ್ಲವೋ ಕಾಣೆ ; ಆದರೆ ಬರೆಯುತ್ತ ನಾನು ಬದುಕಿದ್ದೇನೆ.

ಭಾನುವಾರ ಮುಂಜಾನೆಯ ಪತ್ರಿಕೆ ಮನೆ ಬಾಗಿಲಿಗೆ ಬೀಳುತ್ತಿದ್ದಂತೆ ಮುಂದಿನ ವಾರ ಎದುರಿಗೆ ನಿಂತು ಸವಾಲೊಡ್ಡುತ್ತಿತ್ತು. ಹೆರಿಗೆಯ ಮರುಕ್ಷಣವೇ ಬಸಿರಾಗುವ ಸಾಹಸ ಇದು. ಬೊಗಸೆಯಲ್ಲಿ ಎಷ್ಟು ಅಮೃತಬಿಂದುಗಳನ್ನು ತುಂಬಿಟ್ಟುಕೊಂಡರೂ ತಟತಟನೆ ಸೋರಿಹೋಗುತ್ತವೆ. ಪರಾಮರ್ಶನ, ಪ್ರವಾಸ, ಅಧ್ಯ ಯನ ಮತ್ತು ಸಂಶೋಧನೆಗಳಿಂದ ಮರು ತುಂಬಿ ಕೊಳ್ಳುತ್ತಿರಲೇಬೇಕು. ಹೀಗೆ ಸನ್ನದ್ಧವಾಗಿ ಜಾಗೃತ ಸ್ಥಿತಿಯಲ್ಲಿರುವುದು ಮಾತ್ರ ಅಂಕಣಕಾರನನ್ನು ಜೀವಂತವಾಗಿರಿಸುತ್ತದೆ.

ಒಂದು ವಾರವಿಡೀ ಒಂದನ್ನೇ ನಿಯತವಾಗಿ ಧ್ಯಾನಿಸುವುದು ಕಷ್ಟದ ಕೆಲಸವೂ ಹೌದು; ಅಚ್ಚರಿಯ ಕೆಲಸವೂ ಹೌದು. ನಿದ್ರಾವಿಹೀನ ರಾತ್ರಿಗಳು, ಗಾಯಗೊಂಡ ಹುಲಿಯ ಚಡಪಡಿಕೆ, ವಾರಕ್ಕೊಮ್ಮೆ ಹೊಸ ಹುಟ್ಟಿನ ಹಂಬಲ, ಜತೆಯಲ್ಲಿ ಬದುಕುವವರಿಗೆ ಅಪರಿಮಿತ ಒತ್ತಡಗಳ ರವಾನೆ, ಒಳಗುದಿಗಳ ಮುಚ್ಚುವ ಕೃತಕ ನಗೆ, ಪೂರ್ವಗ್ರಹರಹಿತನಾಗಿ ಮನಸ್ಸನ್ನು ಕಾಯ್ದಿರಿಸುವ ಬಗೆ, ಯಾವ ಸ್ವರ್ಗಸೀಮೆಯಲ್ಲಿದ್ದರೂ ಕೀಟದಂತೆ ಕೊರೆಯುವ ಮುಂದಿನ ವಾರದ ವಸ್ತು... ಇವೆಲ್ಲ ನಿಜವಾದ ಅಂಕಣಕಾರನ ನಿಜ ಸ್ಥಿತಿಗಳು.

ಇಷ್ಟಾದರೂ ಬರೆಯುವ ಸುಖಕ್ಕೆ ಸರಿಸಾಟಿ ಇನ್ನೊಂದಿಲ್ಲ. ಲಕ್ಷಾಂತರ ಓದುಗರಿದ್ದರೂ, ಒಬ್ಬನೇ ಒಬ್ಬ ಓದುಗ ಇಲ್ಲದಿರುವಾಗಲೂ ಬರವಣಿಗೆಯ ಮಾಂತ್ರಿಕತೆ ಕೊಡುವ ಕಿಕ್‌ಗೆ ಸಮನಿಲ್ಲ. ವೈಯಕ್ತಿಕ, ಸಾರ್ವಜನಿಕ, ಸಾಂಸ್ಥಿಕ, ತಾತ್ವಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಆರ್ಥಿಕ, ಜಾಗತಿಕ, ವೈಜ್ಞಾನಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ನನ್ನ ಅಂಕಣಗಳು ಹರಿದಾಡಿವೆ. ಬರೆಯುವುದು ಅಗ್ನಿದಿವ್ಯ. ಸತ್ಯದಿಂದ ದೂರ ಹೋದಷ್ಟೂ ಸುಡುತ್ತದೆ.

ಅಂಬೇಡ್ಕರ್, ಲೋಹಿಯಾ, ಡಾರ್ವಿನ್, ಐನ್‌ಸ್ಟೀನ್‌, ಗಾಂಧಿ, ಯಯಾತಿ, ಟ್ಯಾಗೋರ್, ಕುವೆಂಪು ಮುಂತಾದ ಹಿರಿಯರನ್ನೂ ಚೀನಾ, ಅಮೆರಿಕ, ಮಾರಿಷಸ್, ಕೀನ್ಯ, ತಾಂಜಾನಿಯ, ಕುಂಭಕೋಣಂ ಮುಂತಾದ ದೇಶ ಪ್ರದೇಶಗಳನ್ನು ಸಂದರ್ಶಿಸಿ ಓದುಗರ ಮುಂದಿಡಲು ಸಾಧ್ಯವಾಯಿತು. ನಾನು ಕಂಡದ್ದನ್ನು ವಿನಯಪೂರ್ವಕವಾಗಿ ಮಂಡಿಸಿದ್ದೇನೆ. ಅಸಂಖ್ಯಾತ ಓದುಗರು ನಿಯತವಾಗಿ ಪ್ರತಿಕ್ರಿಯಿಸಿದ್ದಾರೆ. ಆ ಓದುಗ ಸಮೂಹದಲ್ಲಿ ಖ್ಯಾತ ಲೇಖಕರು, ನ್ಯಾಯಾಧೀಶರು, ಅಧಿಕಾರಿಗಳು, ಗೃಹಿಣಿಯರು, ರಾಜಕಾರಣಿಗಳು, ಶಿಕ್ಷಕರು, ನಿವೃತ್ತರು, ರೈತರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿದ್ದಾರೆ. ನನ್ನನ್ನು ಎಚ್ಚರವಾಗಿರಿಸಿದ ಇವರಿಗೆಲ್ಲ ನಾನು ಋಣಿಯಾಗಿದ್ದೇನೆ.

ವಸ್ತುವಿನ ಆಯ್ಕೆ ಮತ್ತು ಪ್ರತಿಪಾದನೆಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟು ನನ್ನ ಮತ್ತು ಓದುಗರ ನಡುವೆ ಸೇತುವೆಯಾದ ‘ಪ್ರಜಾವಾಣಿ’ಗೂ, ಸಂಪಾದಕ ಮಂಡಳಿಗೂ ನಾನು ಋಣಿಯಾಗಿದ್ದೇನೆ. ಎಂದಿನಂತೆ ಅಂಕಣ ಬರಹಗಳೆಲ್ಲ ಪ್ರಕಟಗೊಂಡು ಇಡಿಯಾಗಿ ಪುಸ್ತಕ ರೂಪದಲ್ಲಿ ಲಭಿಸಲಿವೆ. ಮುಂದಿನ ವಾರದಿಂದ ನಾನು ಬರೆಯುವುದಿಲ್ಲ ಎಂಬುದು ಒಂದು ಬಗೆಯ ಸಂಕಟವನ್ನೂ, ಬಿಡುಗಡೆಯ ಆನಂದವನ್ನೂ ಒಟ್ಟಿಗೇ ತರುತ್ತಿದೆ.

ಗೌರಿ, ಕರಿಯಪ್ಪ, ವೆಂಕಟ್ರಾಜು ಮತ್ತು ವೈಶಾಖ ಮಾಸ ನೆನಪಾಗುತ್ತಿದೆ. ನಾನು ಮೊದಲು ಅಂಕಣ ಬರೆಯಲು ಆರಂಭಿಸಿದ್ದು ಲಂಕೇಶ್‌ ಪತ್ರಿಕೆಯಲ್ಲಿ. ಅದು ಎಂಬತ್ತರ ದಶಕ. ಇಂದು ಲಂಕೇಶರ ಜನ್ಮದಿನ (ಮಾರ್ಚ್‌ 8) ಗುರುವನ್ನು ನೆನೆದು ಅಂಕಣಮಾಲೆಯನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಎಲ್ಲರಿಗೂ ನಮಸ್ಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.