ADVERTISEMENT

ಹಿಮದಲ್ಲೇ ಸಮಾಧಿಯಾದ ನಮ್ಮ ಯೋಧರು....!

ಬ್ರಿಗೇಡಿಯರ್ ಐ.ಎನ್.ರೈ
Published 27 ಫೆಬ್ರುವರಿ 2019, 9:52 IST
Last Updated 27 ಫೆಬ್ರುವರಿ 2019, 9:52 IST
   

ಈ ಹಿಮಪಾತದ ಅನುಭವವೇ ಅತ್ಯಂತ ವಿಚಿತ್ರವೂ, ಭಯಾನಕವೂ ಆದದ್ದು. ಹತ್ತು - ಹದಿನೈದು ಅಡಿಗಳಷ್ಟೆತ್ತರದ ಮಂಜುಗಡ್ಡೆಗಳು ಪರ್ವತದಂತೆ ಜರಿಯುವ ದೃಶ್ಯದ ಭಯಾನಕತೆ ನೋಡುವುದೂ ಅಸಾಧ್ಯ. ಅದೂ ಒಂದು ಗುಡ್ಡೆಯ ಅಡಿ ಭಾಗದಲ್ಲಿ ಮಂಜು ನೀರಾಗುತ್ತದೆ. ನಾವು ಸಮುದ್ರದ ದಡದಲ್ಲಿ ನಿಂತಾಗ, ತೆರೆಗಳು ಅಪ್ಪಳಿಸಿ ನಮ್ಮ ಕಾಲ ಕೆಳಗಿನ ಮರಳು ಜಾರಿ ಹೋದಾಗ ಆಗುವ ಅನುಭವವನ್ನು ನೆನಪಿಸಿಕೊಳ್ಳಬಹುದು. ಅದೇ ರೀತಿಯಲ್ಲಿ ಮಂಜು ಕರಗುತ್ತಾ, ದೊಡ್ಡ ದೊಡ್ಡ ಗುಡ್ಡೆಗಳೇ ಕುಸಿಯುವ ದೃಶ್ಯ ಭಯಂಕರವಾಗಿರುತ್ತದೆ. ಒಮ್ಮೊಮ್ಮೆ ಹಿಮಗುಡ್ಡೆಗಳು ಸ್ಥಿರವಾಗಿ ನಿಂತಂತೆ ಕಂಡರೂ, ಗುಂಡಿನ ಶಬ್ದಕ್ಕೆ, ಗುಡುಗಿನ ಶಬ್ದಕ್ಕೆ ಅಥವಾ ಬೇರಾವುದೇ ಶಬ್ದಕ್ಕೆ ಜಾರಲು ಆರಂಭವಾಗುತ್ತದೆ. ಮೊದಲು ನಿಧಾನವಾಗಿ ಅಲುಗಾಡಿದ ಹಾಗೆ ಆರಂಭವಾಗಿ ಕೊನೆ ಕೊನೆಗೆ ಇಡೀ ಪರ್ವತವೇ ಕುಸಿದು ಬೀಳುವ ದೃಶ್ಯ...ಅದ್ಭುತ ಅನಿಸುತ್ತದೆ- ಆದರೆ ಸೈನಿಕನ ಪಾಲಿಗೆ ಇದು ಮಾರಣಾಂತಿಕ.

ಸೈನಿಕ ಕೇವಲ ಯುದ್ಧದಲ್ಲಿ ಮಾತ್ರ ಹುತಾತ್ಮನಾಗುವುದಿಲ್ಲ. ಎಷ್ಟೋ ಜನ ಹವಾಮಾನ ವೈಪರೀತ್ಯ, ಅನಾರೋಗ್ಯ, ಅಪಘಾತಗಳಲ್ಲೂ ಮರಣ ಹೊಂದುತ್ತಾರೆ. ಇದೆಲ್ಲವನ್ನೂ ನಮ್ಮ ಭವ್ಯ ಭಾರತಾಂಬೆ ಸೇವೆಗೆ ನಮ್ಮನ್ನು ತೊಡಿಗಿಸಿಕೊಂಡಾಗ ಆಗುವ ಸಾರ್ಥಕವೆಂದೇ ಸೈನಿಕ ಭಾವಿಸುತ್ತಾನೆ. ಯುದ್ಧದಲ್ಲಿ ಗೆಲುವನ್ನು ಮಾತ್ರ ಬಯಸುವ ಸೈನಿಕ, ಅದಿಲ್ಲವಾದರೆ ಸಾವನ್ನೂ ಅಷ್ಟೇ ಸಮಚಿತ್ತದಿಂದ ಆರಿಸಿಕೊಳ್ಳುತ್ತಾನೆ. ಇದೇ ನಮ್ಮ ಹೆಮ್ಮೆ ಎಂಬಂತೆ.

ಹೀಗೆ ಆದ ಒಂದು ಹಿಮತಾಪದ ದುರಂತದ ಬಗ್ಗೆ ಹೇಳಲೇಬೇಕು. ಗರೇಝ್‌ನಲ್ಲಿ ನಮ್ಮ ಸೈನ್ಯ ನೆಲೆಸಿದ್ದ ಸಮಯ. ಒಂದು ಟೆಂಟ್‌ನಲ್ಲಿ 10 ಜನ ಸೈನಿಕರು ಮಲಗಿದ್ದ ರಾತ್ರಿ. ಈ ಟೆಂಟ್‍ನ್ನು ‘ಸ್ನೋಟೆಂಟ್’ ಎಂದೇ ಕರೆಯುತ್ತೇವೆ. ಈ ಸಂದರ್ಭದಲ್ಲಿ ರಾತ್ರಿ ಹೊತ್ತು. ಒಬ್ಬ ಸೈನಿಕ, ಸೆಂಟ್ರಿಯಾಗಿ ನಿಂತಿದ್ದವ, ಮೂತ್ರ ವಿಸರ್ಜನೆಗೆಂದು ತುಸು ದೂರ ಹೋದ. ಹಾಗೆ ಹೋದ ಸೆಕೆಂಡುಗಳಲ್ಲಿ ಹಿಮಪಾತ ಆರಂಭವಾಯಿತು. ದೊಡ್ಡದೊಂದು ಹಿಮಗಡ್ಡೆ, ನೋಡ ನೋಡುತ್ತಾ, ಇವರು ನೆಲೆಸಿದ್ದ ಸ್ನೋಟೆಂಟ್ ಮೇಲೇ ಬಿತ್ತು!. ಅವನ ಕಣ್ಣೆದುರಿಗೇ ಹಿಮ ಅವರನ್ನೆಲ್ಲ ಕೊಚ್ಚಿಕೊಂಡು ಹೋಯ್ತು!. ಆ ಪರಿಸ್ಥಿತಿ ಯೋಚಿಸಿದರೇ ಎದೆಗುಂದುತ್ತದೆ. ಕ್ಷಣದ ಹಿಂದೆ ಒಟ್ಟಿಗೇ ಮಾತಾಡಿ ಮಲಗಿದ್ದ ಸಹ ಸೈನಿಕರು, ಕಣ್ಣೆದುರೇ ಹಿಮರಾಶಿಯಡಿ ಹೂತು ಹೋದಾಗ, ಇದಕ್ಕೆ ಸಾಕ್ಷಿಯಾದ ಒಬ್ಬನೇ ಸೈನಿಕನ ಮನ:ಸ್ಥಿತಿ ಹೇಗಿದ್ದೀತು!. ಆ ಸಮಯದಲ್ಲಿ ನಮಗೆ ಫೋನ್ ಬಂತು!. ಬದುಕುಳಿದಿದ್ದ ಸೈನಿಕ, ಹೇಗೋ ಅದೇ ಹಿಮದ ರಾಶಿ ನಡುವೆ, ಟೆಲಿಫೋನ್ ತಂತಿ ಹಿಡಿದ, ಹಿಮಗಡ್ಡೆಗಳನ್ನು ಕೈಯಿಂದಲೇ ಅಗೆದು ಅಗೆದು ತೆಗೆದು, ಟೆಲಿಫೋನ್‍ನ್ನು ಪತ್ತೆ ಹಚ್ಚಿ ಫೋನ್ ಮಾಡಿದ್ದ!. ಮಾತಿಗಿಂತ ಅಳುವೇ ಜಾಸ್ತಿ ಇತ್ತು. ಘೋರ ರಾತ್ರಿ...ಒಂಭತ್ತು ಜನರ ದುರ್ಮರಣ...ಒಂಟಿ ಸೈನಿಕ...ನಡುವೆ ಭೋರ್ಗರೆಯುವ ಗಾಳಿ...ಯಾವುದೇ ಕ್ಷಣದಲ್ಲೂ ಮತ್ತೆ ಆರಂಭವಾಗಬಹುದಾದ ಹಿಮಪಾತ... ಸೈನಿಕ ಅಳುತ್ತಿದ್ದ!. ‘ಸಾಬ್ಜೀ, ಐಸಾ ಐಸಾ ಹೋಗಯಾ’ ಎನ್ನುತ್ತಾ ಅಳುತ್ತಿದ್ದ ಅವನೊಂದಿಗೆ ಇಡೀ ರಾತ್ರಿ ಫೋನ್‍ನಲ್ಲೇ ಮಾತಾಡುತ್ತಾ, ಧೈರ್ಯ ತುಂಬುತ್ತಾ, ಬೆಳಗು ಮಾಡಿದೆವು!. ಮನುಷ್ಯ ಸಂಪರ್ಕವೊಂದೇ ಅವನನ್ನು ಉಳಿಸಬಲ್ಲುದಾಗಿತ್ತು.

ADVERTISEMENT

ಈ ಸ್ಥಳಕ್ಕೆ ತಲುಪಿದ್ದೂ ಒಂದು ಸಾಹಸವೇ!. ಘಟನೆ ನಡೆದ ಸ್ಥಳಕ್ಕೂ ನಮ್ಮ ವಾಸಸ್ಥಳಕ್ಕೂ ಸೀದಾ ಹೋದರೆ ಒಂದು ಘಂಟೆ ದಾರಿ ಆದರೆ, ಈ ಹಿಮರಾಶಿಯ ಮೇಲೆ ಹೋಗಲು ಕನಿಷ್ಠ ಐದು ಘಂಟೆ. ಮರುದಿನ ಬೆಳಿಗ್ಗೆ ಒಬ್ಬ ಆಫೀಸರ್, ಒಬ್ಬ ಜೆಸಿಒ, ಹತ್ತು ಜನ ಅತ್ಯಂತ ಶಕ್ತಿವಂತ ಸೈನಿಕರನ್ನು ಕಳಿಸಿದೆವು. ಮೊಳಕಾಲಿನಷ್ಟು ರಾಶಿಯ ಮಂಜಿನೊಳಗೆ ಹೆಜ್ಜೆ ಇಟ್ಟು ಹೋಗುವುದೇ ಕಷ್ಟ. ಅಂತೂ ಅಲ್ಲಿಗೆ ಸಮೀಪಿಸಿದ ನಮ್ಮ ಸೈನಿಕರ ಪಡೆ, ಕಷ್ಟಪಟ್ಟು, ಮಧ್ಯಾಹ್ನದ ಹೊತ್ತಿಗೆ ತಲುಪಿದರು. ಮಂಜುರಾಶಿ ಅಗೆದೂ ಅಗೆದೂ ಒಂಭತ್ತೂ ಸೈನಿಕರ ಶವ ತೆಗೆದರು. ಅಲ್ಲಿಂದ ಮತ್ತೆ ಮರಳಿ ಆ ದೇಹಗಳನ್ನು ತರುವುದು ಸಾಧ್ಯವೇ ಇಲ್ಲ. ಅಲ್ಲೇ ಒಂದು ಮರದ ದಿಮ್ಮಿಗಳನ್ನು ಕಡಿದು ಮಾಡಿದ್ದ ಗುಡಿಸಲಿತ್ತು. ದಿಮ್ಮಿಗಳನ್ನೆಲ್ಲಾ ತೆಗೆದು, ಆ ಒಂಭತ್ತೂ ಜನರ ಶವಗಳನ್ನು ಅಲ್ಲಿಯೇ ದಹನ ಮಾಡಲಾಯ್ತು!. ಈ ಪರಿಸ್ಥಿತಿ ಯೋಚಿಸಿದರೆ ಈಗಲೂ ಅಳು ಉಕ್ಕಿಬರುತ್ತದೆ. ಅಂತೂ ಹೇಗೋ ಈ ಕೆಲಸ ಮುಗಿಸಿ ಇನ್ನು ಹೊರಡ ಬೇಕು ಎಂಬಷ್ಟರಲ್ಲಿ ಮತ್ತೆ ಆರಂಭವಾಗಿದ್ದು ಭೀಕರ ಹಿಮಪಾತ!. ಮುಂದಿನ ಇಪ್ಪತ್ತ ನಾಲ್ಕು ಘಂಟೆಗಳ ಕಾಲ ಮತ್ತೆ ಏನೂ ಮಾಡಲಾಗದ, ಪರಿಸ್ಥಿತಿ!. ಎಲ್ಲಾ ಹನ್ನೆರಡು ಜನ ಸೈನಿಕರೂ ಅಲ್ಲೇ ಉಳಿಯಬೇಕಾಯ್ತು.

ಅಷ್ಟರಲ್ಲಿ ನಾಲ್ಕು ದಿನಗಳೇ ಉರುಳಿದ್ದುವು. ಆ ಹೊತ್ತಿಗೆ ತೆಗೆದುಕೊಂಡು ಹೋಗಿದ್ದ ಆಹಾರವೂ ಮುಗಿದಿತ್ತು. ರೈಫಲ್ ಮತ್ತು ಸ್ಲೀಪಿಂಗ್ ಬ್ಯಾಗ್ ಮಾತ್ರ ಇತ್ತು!. ಎದುರಿಗೆ ನೋಡಿದರೆ ಹಿಮರಾಶಿ!. ಹಸಿವು..ಕುಡಿಯಲು ನೀರೂ ಇಲ್ಲ!. ಕೊನೆಗೆ ಅವರಲ್ಲೇ ಒಬ್ಬನ ಸ್ಲೀಪಿಂಗ್ ಬ್ಯಾಗ್‍ನ್ನು ತುಂಡರಿಸಿದರು. ಒಂದು ಅಲ್ಯೂಮೀನಿಯಂ ಪಾತ್ರೆಯಲ್ಲಿ, ಮಂಜುಗಡ್ಡೆಗಳನ್ನು ಹಾಕಿ, ಆ ಸ್ಲೀಪಿಂಗ್ ಬ್ಯಾಗ್‍ಗೆ ಬೆಂಕಿ ಹಾಕಿ, ನೀರು ಕಾಯಿಸಿದರು. ಕೊನೆಗೆ ಅದೇ ನೀರಿಗೆ ಉಪ್ಪು ಹಾಕಿ, ಒಂದಿಡೀ ದಿನ ಸ್ವಲ್ಪ ಸ್ವಲ್ಪವೇ ಉಪ್ಪು ನೀರು ಕುಡಿದು, ದಿನ ದೂಡಿದರು!. ಅಂತೂ ಮರುದಿನ ವಾತಾವರಣ ಒಂದು ಹಂತಕ್ಕೆ ಬಂತು. ಹಸಿವು, ಪರಿಸ್ಥಿತಿ ವಿಕೋಪದಲ್ಲಿ ಸೈನಿಕ ಎಷ್ಟು ಬಳಲುತ್ತಾನೆ ಎಂಬುದನ್ನು ಹೇಳಿ, ಬರೆದು ವಿವರಿಸಲಾಗದು!. ಹಿಮಪಾತವನ್ನು ಎದುರಿಸಲು ಹೇಗೆ ತಯಾರಿರಬೇಕೆಂದು ತರಬೇತಿಯಲ್ಲಿ ಹೇಳಿಕೊಡುತ್ತಾರೆ. ಆದರೆ ಇದೆಲ್ಲವನ್ನೂ ಪಠ್ಯವಾಗಿ ಹೇಳಿಕೊಟ್ಟರೆ, ಅಲ್ಲಿ 8-9 ಅಡಿ ಎತ್ತರದಿಂದ ಹಿಮಪಾತವಾಗಿ ಮೈಮೇಲೆ ಬಿದ್ದಾಗ, ಯಾವ ಪಾಠವೂ ಸಹಾಯಕ್ಕೆ ಬರುವುದಿಲ್ಲ!.

ಈ ಸಂಧರ್ಭದಲ್ಲಿ ಬದುಕುಳಿದ ಒಬ್ಬ ಸೈನಿಕನದ್ದೇ ಬೇರೆ ಕಥೆ. ಆತ ಕೈಯಲ್ಲಿನ ಗ್ಲೌಸ್ ತೆಗೆದು ಫೋನ್ ಹಿಡಿದು ಇಡೀ ರಾತ್ರಿ ಮಾತಾಡುತ್ತಿದ್ದ. ಅವನನ್ನು ಸಮೀಪಿಸಿದ ನಮ್ಮ ತಂಡ, ಮೊದಲು ಅವನನ್ನು ಹೆಲಿಕಾಪ್ಟರ್‌ಗೆ ಹಾಕಿ ಶ್ರೀನಗರಕ್ಕೆ ಕಳಿಸಿತು. ದುರಂತ ನೋಡಿ, ಆ ಹಿಮದಲ್ಲಿ ಗ್ಲೌಸ್ ತೆಗೆದು ಫೋನ್ ಹಿಡಿದ ಅವನ ಕೈ ಮರಗಟ್ಟಿ ಹೋಗಿತ್ತು. ಶ್ರೀನಗರದ ಆಸ್ಪತ್ರಯಲ್ಲಿ ಅವನ ನಾಲ್ಕು ಬೆರಳುಗಳನ್ನು ಕತ್ತರಿಸಿ ತೆಗೆಯಲಾಯಿತು. ಆತ ಶಾಶ್ವತವಾಗಿ ಅಂಗವಿಕಲನಾದ!. ಕೊನೆಗೂ ಐದು ದಿನದ ಕಾರ್ಯಾಚರಣೆ ನಂತರ ನಮ್ಮ ತಂಡ, ಮರಳಿ ನಮ್ಮ ವಾಸಸ್ಥಳಕ್ಕೆ ತಲುಪಿದರು.

ಮತ್ತೊಂದು ಘಟನೆಯೂ ನೆನಪಾಗುತ್ತದೆ. ಹೊರಗೆ ಹಿಮಪಾತ. ಒಂದು ಫೈಬರ್ ಗುಡಿಸಲು, ಒಂದು ಮಂಚ, ಒಂದು ಹೀಟರ್ ಮತ್ತು ಒಂದು ಖುರ್ಚಿ ಇಡುವಷ್ಟು ಗುಡಿಸಲಿದ್ದ ವಾಸಸ್ಥಳ ನನ್ನದು. ಒಂದು ಬೆಳಿಗ್ಗೆ ಒಂದು ಮೆಸೇಜ್ ಬಂತು. ‘ಸಾಬ್, ಕಂಗ್ರಾಚುಲೇಶನ್ಸ್, ನಾವು ಒಂಭತ್ತು ಜನ ನುಸುಳುಕೋರರನ್ನು ಹಿಡಿದಿದ್ದೇವೆ!. ಸರಿ, ಅವರನ್ನೆಲ್ಲಾ ನನ್ನ ಬಳಿ ಕರೆ ತನ್ನಿ ಎಂದು ನಾನು ಹೇಳಿದೆ. ಸಂಜೆಯ ವೇಳೆಗೆ ನಮ್ಮ ಸೈನಿಕರು, ಹಿಡಿದಿದ್ದ ಆ ಒಂಭತ್ತು ಜನರೊಂದಿಗೆ ಬಂದರು!. ಅವರನ್ನು ಕಂಡಾಗ ನನಗೆ ಬಹಳ ಬಹಳ ಬೇಸರ, ವೇದನೆ. ಇನ್ನೂ ಮೀಸೆ ಚಿಗುರದ ಹದಿನೆಂಟು- ಇಪ್ಪತ್ತರ ಯುವಕರು. ಆ ಚಳಿಯಲ್ಲಿ ಅವರು ನಡುಗುತ್ತಾ ಇದ್ದರು!. ಪರಿಸ್ಥಿತಿಯ ಭೀಕರತೆಗೊಂದು ಉದಾಹರಣೆ. ಒಬ್ಬ ಯುವಕ, ಚಳಿಯಿಂದ ಎಷ್ಟು ಬಳಲಿದ್ದ ಎಂದರೆ, ಒಳ ಬಂದವನೇ ನನ್ನ ಹೀಟರನ್ನು ಅಪ್ಪಿ ಹಿಡಿದು ಬಿಟ್ಟ-ಅವನ ಮೈ ಕೈ ಎಲ್ಲಾ ಸುಟ್ಟೇ ಹೋಯ್ತು!. ಈ ಘಟನೆ ನೆನೆಸಿದರೇ ಇಂದು ಆಘಾತವಾಗುತ್ತದೆ. ಅವರಿಗೆ ಪೂರಿ ಸಬ್ಜಿ ಮಾಡಿ ಕೊಟ್ಟು, ಬ್ರಾಂಡಿ ಕುಡಿಸಲಾಯ್ತು. ಸ್ವಲ್ಪ ಸುಧಾರಿಸಿದ ನಂತರ ಅವರನ್ನು ಕರೆದು ವಿಚಾರಿಸಿದೆವು. ಆಗ ಅವರು ಹೇಳಿದ ವಿಷಯ, ಅಲ್ಲಿಗೆ ಸಮೀಪದ ಒಂದು ಹಳ್ಳಿಯ ಯುವಕರನ್ನು ಜಬರ್ದಸ್ತಿನಲ್ಲಿ ಕರೆ ತಂದು ಗಡಿ ನುಸುಳುವಂತೆ ಮಾಡಿದ್ದರು. ಒಬ್ಬನ ಕೈಯಲ್ಲಿ ಒಂದು ಕಾಶ್ಮೀರಿಯಲ್ಲಿ ಬರೆದಿದ್ದ ಪತ್ರ! ಅದನ್ನೋದಲು ಹೇಳಿದರೆ ಅವನಿಗೆ ಸಂಕೋಚ. ಮತ್ತೊಬ್ಬನ ಕೈಯಲ್ಲಿ ಅದನ್ನು ಕೊಟ್ಟು ಓದಲು ಹೇಳಿದರೆ, ಅದು ಅವನು ಪ್ರೇಯಸಿಗೆ ಬರೆದ ಪತ್ರ!. ಆ ಪತ್ರವನ್ನು ಅವನ ಪ್ರೇಯಸಿ ಮನೆಯ ಕಿಟಕಿಯೊಳಗೆ ಎಸೆಯಲು ಹೋಗುತ್ತಿದ್ದಾಗ, ಅವನನ್ನು ಪಾಕಿಸ್ಥಾನಿ ಉಗ್ರರು ಹಿಡಿದು, ಪಾಕಿಸ್ಥಾನಕ್ಕೆ ಕರೆದೊಯ್ದು, ಕೆಲ ದಿನ ತರಬೇತಿ ನೀಡಿ, ಭಾರತದೊಳಕ್ಕೆ ನುಸುಳಲು ಬಿಟ್ಟಿದ್ದರು!.

ಅಂತೂ ಒಂಭತ್ತೂ ಜನರನ್ನು ವೈದ್ಯಕೀಯ ತಪಾಸಣೆಗೆ ಬಿಟ್ಟಾಗ, ಒಬ್ಬನ ಪರಿಸ್ಥಿತಿ ಗಂಭೀರವಾಗಿತ್ತು. ಕೊನೆಗೆ ಆ ಒಂಭತ್ತೂ ಜನರನ್ನು ರಾತ್ರಿ ನನ್ನ ಟೆಂಟ್ ಒಳಗೆ ಮಲಗಿಸಿದೆವು. ಒಬ್ಬ ಹುಡುಗ ಸತ್ತರೂ ಆ ಜವಾಬ್ದಾರಿ ನನ್ನ ಮೇಲೆ!. ಕೊನೆಗೂ ಮರುದಿನ ಬೆಳಿಗ್ಗೆ ಆ ಯುವಕನೂ ಜೀವಂತ ಇದ್ದ. ಅವರೆಲ್ಲರನ್ನೂ ಆಸ್ಪತ್ರೆಗೆ ಕಳಿಸಿ, ನಿರಾಳವಾದೆ.

ಇದೆಲ್ಲವೂ ನಮ್ಮ ಸೈನಿಕರ ಪರಿಸ್ಥಿತಿ!. ಆದರೆ ಎಲ್ಲವನ್ನೂ ಮಾಡುವಾಗ, ಅನುಭವಿಸುವಾಗ ನಮ್ಮೆದುರು ಕೇವಲ ದೇಶ..ದೇಶ...ದೇಶ ಕಾಣುತ್ತದೆ. ಪಾಕಿಸ್ತಾನಿಗಳು ನಮ್ಮನ್ನು ಸೈತಾನ್ ಎಂದೇ ಸಂಭೋಧಿಸುತ್ತಾರೆ.

ಇಲ್ಲಿಯೂ ಹೇಳಬೇಕಾದ ಕೆಲ ವಿಚಾರಗಳಿವೆ. ನಮ್ಮ ಸೈನಿಕ ಪಡೆ ಹೀಗೆ ಉಗ್ರರನ್ನು ಸತತ ಹಿಡಿಯುತ್ತಾ, ಕೊಲ್ಲುತ್ತಾ ಸಾಗುವಾಗ ಬೇರೆ ಪಡೆಗಳಿಗೆ ಒತ್ತಡವೂ ಹೆಚ್ಚುತ್ತದೆ!. ಇದೂ ಒಂದು ರೀತಿಯ ಸೈನಿಕ ತುಕಡಿಯ ಸಾಮರ್ಥ್ಯದ ಪರೀಕ್ಷೆಯೂ ಆಗಿರುತ್ತದೆ!. ಅನೇಕ ಸಂದರ್ಭಗಳಲ್ಲಿ ನಮ್ಮ ತುಕಡಿಗಳನ್ನು ತೋರಿಸಿ, ಬೇರೆಯವರಿಗೆ ಸವಾಲು ಹಾಕಲಾಗುತ್ತದೆ. ಹಾಗಾಗಿ ಬೇರೆ ಕೆಲ ಸೈನಿಕ ಆಫೀಸರ್‌ಗಳು ನಮ್ಮಲ್ಲಿ, ನೀವು ಈ ಶತ್ರುಗಳನ್ನು ನಿಮ್ಮ ಬಳಿ ಕರೆಸಿಕೊಳ್ಳುವುದಾ ಎಂದು ತಮಾಷೆಯನ್ನೂ ಮಾಡುತ್ತಾರೆ. ಹೀಗೆ ನಿರಂತರ ಯಶಸ್ಸಿನಿಂದಾಗಿ ನಮ್ಮ 8 ಸಿಖ್‌ಲೈಟ್‌ ಇನ್‌ಫೆಂಟ್ರಿ ತಂಡ, ಶತ್ರುಗಳ ಪಾಲಿಗೆ ಸಿಂಹ ಸ್ವಪ್ನವಾಗಿತ್ತು.

ಅದೆಷ್ಟೋ ಕಡೆ ನಮಗರಿವಿರದಂತೆಯೇ ಶತ್ರುಗಳು ಸುರಂಗವನ್ನೂ ಕೊರೆದಿಡುತ್ತಿದ್ದರು. ಸುರಂಗ ತೋಡಿ, ಅದರ ಮೇಲೆ ಪೊದೆಗಳು ಬೆಳೆದಿರುತ್ತಿದ್ದುವು. ಅಥವಾ ಗೊತ್ತೇ ಆಗದ ಹಾಗೆ ಏನನ್ನಾದರೂ ಮುಚ್ಚಿರುತ್ತಿದ್ದರು. ಒಮ್ಮೆ ಹೀಗೇ ಆಯ್ತು. ದುರ್ಗಮ ದಾರಿಯಲ್ಲಿ, ಪೊದೆಗಳ ನಡುವೆ ನಮ್ಮ ಕೆಲಸ ಸೈನಿಕರು ನಡೆದು ಹೋಗುತ್ತಿದ್ದಾಗ, ಇಬ್ಬರು ಸೈನಿಕರು ಕ್ಷಣಾರ್ಧದಲ್ಲಿ ಕಾಣೆಯಾದರು!. ಗೊತ್ತಾಗದೇ ಮುಚ್ಚಿಟ್ಟಿದ್ದ ಸುರಂಗದ ಮೇಲೆ ಕಾಲು ಹಾಕಿ ಒಳಗೆ ಬಿದ್ದು ಬಿಟ್ಟಿದ್ದರು!. ಅವರನ್ನು ಹುಡುಕುವಾಗ ಸುರಂಗದೊಳಗೆ ಸಿಕ್ಕಿದರು, ಅಲ್ಲಿ ಮದ್ದು ಗುಂಡುಗಳ ರಾಶಿ. ಅದರ ಜೊತೆಗೆ ಒಂದು ಪತ್ರವೂ ನಮಗೆ ಸಿಕ್ಕಿತು. ಅದು ಪಾಕಿಸ್ತಾನಿ ಸೈನ್ಯ, ನುಸುಳುಕೋರ ಉಗ್ರರಿಗೆ ಬರೆದ ಪತ್ರವಾಗಿತ್ತು. ಅದರ ಒಂದು ಒಕ್ಕಣೆ ಹೀಗಿತ್ತು- ಆ 8 ಸಿಖ್‌ಲೈಟ್‌ ಇನ್‌ಫೆಂಟ್ರಿ ತುಕಡಿ ಈಗ ಇಲ್ಲಿ ಬೀಡು ಬಿಟ್ಟಿದೆ, ಅವರ ಬಗ್ಗೆ ಹುಷಾರಾಗಿ! ಎಂದು. ಅಂದರೆ ನಮ್ಮ ಸೈನ್ಯದ ತುಕಡಿಗಳಿಗೆ ಪಾಕಿಸ್ತಾನಿಗಳು ಎಷ್ಟು ಹೆದರಿದ್ದರು ಎಂಬುದಕ್ಕೆ ಇದು ನಿದರ್ಶನವಾಗಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.