ADVERTISEMENT

ಒಳಾಂಗಣಕ್ಕೆ ಒಪ್ಪಲಿ ಟೈಲ್ಸ್

ಮಂಜುನಾಥ ರಾಠೋಡ
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST
ಒಳಾಂಗಣಕ್ಕೆ ಒಪ್ಪಲಿ ಟೈಲ್ಸ್
ಒಳಾಂಗಣಕ್ಕೆ ಒಪ್ಪಲಿ ಟೈಲ್ಸ್   

ಬಣ್ಣದ ಆಯ್ಕೆ: ಟೈಲ್ಸ್‌ ಬಣ್ಣವನ್ನು ಜಾಗರೂಕತೆಯಿಂದ ಆಯ್ಕೆ ಮಾಡಿ. ಟೈಲ್ಸ್‌ನ ಬಣ್ಣವು ಗೋಡೆಯ ಬಣ್ಣದೊಂದಿಗೆ ಹೊಂದಿಕೊಳ್ಳುವಂತಿರಲಿ. ಕೋಣೆಯ ಒಳಗೆ ಬರುವ ಬೆಳಕಿಗೂ ನೆಲಹಾಸಿನ ಬಣ್ಣ ಹೊಂದಿಕೆ ಆಗಬೇಕು.

ಗುಣಮಟ್ಟ: ಈಗಂತೂ ವೆಟ್ರಿಫೈಡ್‌, ಸೆರಾಮಿಕ್, ಪೋರ್ಕಿಲೈನ್ ಹೀಗೆ ಬಗೆಬಗೆಯ ಟೈಲ್ಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಉತ್ತಮ ಗುಣಮಟ್ಟದ ಟೈಲ್ಸ್‌ ಕೊಳ್ಳಲು ಹಿಂದೇಟು ಹಾಕಬೇಡಿ. ಹೆಚ್ಚು ಬಾಳಿಕೆ ಬರುವ ಮತ್ತು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಇರುವ ಟೈಲ್ಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ. ತೊಳೆದರೆ ಸುಲಭವಾಗಿ ಕಲೆ ಹೋಗುವಂತಿರುವ ಟೈಲ್ಸ್ ಆಯ್ಕೆ ಮಾಡಿಕೊಳ್ಳಿ. ಕಡಿಮೆ ಗುಣಮಟ್ಟದ ಟೈಲ್ಸ್‌ ದಿನಕಳೆದಂತೆ ಹೊಳಪು ಕಳೆದುಕೊಳ್ಳುತ್ತವೆ. ಅತಿ ನುಣುಪಾದ ಮತ್ತು ತೀರಾ ಒರಟಾದ ಟೈಲ್ಸ್ ಕೊಳ್ಳದಿರಿ.

ವಿನ್ಯಾಸ ಮತ್ತು ಗಾತ್ರ: ವಿನ್ಯಾಸಗಳಿಲ್ಲದ ಟೈಲ್ಸ್‌ಗಳು ಈ ಟ್ರೆಂಡಿ ಅನಿಸಿಕೊಳ್ಳುವುದಿಲ್ಲ. ಮರದ ನೆಲಹಾಸುಗಳು ಆಕರ್ಷಕವಾಗಿಯೇನೋ ಕಾಣುತ್ತವೆ. ಆದರೆ ಅದರ ನಿರ್ವಹಣೆ ಕಷ್ಟ ಎನ್ನುವುದು ಹಲವರ ಅಭಿಪ್ರಾಯ. ಇಂಥವರು ವಿವಿಧ ಚಿತ್ತಾರಗಳುಳ್ಳ ಟೈಲ್ಸ್‌ ಆರಿಸಿಕೊಳ್ಳಬಹುದು. ನೆಲಹಾಸಿನ ಗಾತ್ರವೂ ವಿನ್ಯಾಸದಷ್ಟೇ ಅವಶ್ಯಕ. ದೊಡ್ಡ ಗಾತ್ರದ ಟೈಲ್ಸ್‌ಗಳನ್ನು ಸಾಗಿಸುವಾಗ, ಜೋಡಿಸುವಾಗ ಮುರಿಯುವ ಸಾಧ್ಯತೆ ಇರುತ್ತದೆ.

ADVERTISEMENT

ಸಣ್ಣ ಟೈಲ್ಸ್‌ಗಳಲ್ಲಿ ಆ ಭಯವಿಲ್ಲ. ಆದರೆ ಅನಗತ್ಯವಾಗಿ ಜಾಯಿಂಟ್‌ಗಳು ಹೆಚ್ಚಿ ಮನೆಗೆ ಅಂದ ಕೆಡುತ್ತದೆ. ಸಣ್ಣ ಟೈಲ್ಸ್‌ ಜೋಡಿಸಲು ಹೆಚ್ಚು ಸಮಯ ಮತ್ತು ಶ್ರಮ ಬೇಕು. ಎರಡು ಅಡಿಯ ಟೈಲ್ಸ್‌ ಈಗಿನ ಟ್ರೆಂಡ್. ಇದು ಬಹುತೇಕ ಎಲ್ಲ ಅಗತ್ಯಗಳನ್ನೂ ಪೂರೈಸಬಲ್ಲದು. ಬಜೆಟ್‌ಗೆ ಅನುಗುಣವಾಗಿ ಗಾತ್ರದ ಆಯ್ಕೆ ಮಾಡಿಕೊಂಡರೆ ಉತ್ತಮ.

ಜೋಡಿಸುವಿಕೆ: ಟೈಲ್ಸ್ ಅಳವಡಿಸುವ ಕಾರ್ಯ ಅತ್ಯಂತ ನಾಜೂಕಿನದು ಹಾಗಾಗಿ ಅನುಭವಿಗಳಿಂದಲೇ ಈ ಕಾರ್ಯ ಮಾಡಿಸಿ. ಟೈಲ್ಸ್ ಅಂಟಿಸಲು ಉತ್ತಮ ಗುಣಮಟ್ಟದ ಗ್ರೌಟ್ ಅಥವಾ ಸಿಮೆಂಟ್ ಬಳಸಿ. ಇಲ್ಲದಿದ್ದರೆ ಎರಡು ಬಾರಿ ತೊಳೆದ ತಕ್ಷಣ ಟೈಲ್ಸ್‌ ನಡುವೆ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಟೈಲ್ಸ್‌ಗಳನ್ನು ಒಂದೇ ಅಳತೆಗೆ ಅಳವಡಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅಳತೆ ವ್ಯತ್ಯಾಸವಾದರೆ ಉಬ್ಬು-ತಗ್ಗು ಉಂಟಾಗುವ ಅಪಾಯ ಇರುತ್ತದೆ.

ಅಡುಗೆ ಮನೆ ಟೈಲ್ಸ್: ಅಡುಗೆ ಮನೆಯ ಗೋಡೆಗೆ ಹಾಕುವ ಟೈಲ್ಸ್ ಗೋಡೆಯ ಬಣ್ಣಕ್ಕೆ ಹೊಂದಿಕೆ ಆಗುವಂತಿರಲಿ. ತರಕಾರಿ, ಹಣ್ಣುಗಳುಳ್ಳ  ಟೈಲ್ಸ್ ಹಾಕಿದರೆ ನೋಡಲು ಸುಂದರವಾಗಿರುತ್ತದೆ. ಅಡುಗೆ ಮನೆಯಲ್ಲಿ ಯಾವಾಗಲೂ ನೀರು, ಎಣ್ಣೆ ಸೇರಿದಂತೆ ಜಿಡ್ಡಿನ ಪದಾರ್ಥಗಳು ಬೀಳುತ್ತಿರುತ್ತದೆ.  ತೊಳೆದರೆ ಕಲೆ ಸುಲಭವಾಗಿ ಹೋಗುವಂತಹ ಟೈಲ್ಸ್ ಹಾಕಿದರೆ ಉತ್ತಮ. ಕ್ವಾರಿ, ಕಲ್ಲು, ಬಿದಿರು, ಸೆರಾಮಿಕ್, ಪರ್ಸಿಲೀನ್ ಮತ್ತು ಗ್ಲಾಸ್ ಟೈಲ್ಸ್ ಅಡುಗೆ ಮನೆಗೆ ಒಳ್ಳೆಯ ಆಯ್ಕೆ.

ಬಚ್ಚಲು ಮನೆ ಟೈಲ್ಸ್: ಸದಾ ನೀರಿರುವ ಬಚ್ಚಲು ಮನೆಯಲ್ಲಿ ಒರಟಾದ ಟೈಲ್ಸ್ ಬಳಸಿದರೆ ಉತ್ತಮ. ನುಣುಪಾದ ಟೈಲ್ಸ್ ಇದ್ದರೆ ಜಾರಿ ಬೀಳುವ ಅಪಾಯ ಇರುತ್ತದೆ. ಗೋಡೆಗೂ ಒರಟಾದ ಟೈಲ್ಸ್‌ಗಳನ್ನೇ ಬಳಸಿ.

ತೊಳೆಯುವಾಗ ಎಚ್ಚರಿಕೆ: ಟೈಲ್ಸ್ ತೊಳೆಯುವಾಗ ಕೆಲವು ಎಚ್ಚರಿಕೆಗಳು ಅಗತ್ಯ. ಆಸಿಡ್ ಹಾಕಿ ತೊಳೆಯುಬೇಡಿ. ಇದರಿಂದ ಟೈಲ್ಸ್‌ಗಳು ಹೊಳಪು ಕಳೆದುಕೊಳ್ಳುತ್ತವೆ. ಟೈಲ್ಸ್ ಅಳವಡಿಸಲು ಹಾಕಿರುವ ಸಿಮೆಂಟ್ ಕರಗಿ ಟೈಲ್ಸ್ ಬೇರ್ಪಡುವ ಸಾಧ್ಯತೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.