ADVERTISEMENT

ಕಲೆ ಆವರಿಸಿಕೊಂಡ ಮನೆ

ತಾರಾ ನಿವಾಸ

ಪ್ರಜಾವಾಣಿ ವಿಶೇಷ
Published 28 ಜನವರಿ 2016, 19:45 IST
Last Updated 28 ಜನವರಿ 2016, 19:45 IST
ಕಲೆ ಆವರಿಸಿಕೊಂಡ ಮನೆ
ಕಲೆ ಆವರಿಸಿಕೊಂಡ ಮನೆ   

ಕಲಾವಿದ ಶ್ರೀನಾಥ್ ವಸಿಷ್ಠ ಅವರಿಗೆ ಮನೆ ಎಂದರೆ ಪ್ರೀತಿಯ ಗೂಡು. ಅದು ಕಲಾಪ್ರೀತಿಗೂ ನೆಲೆಯಾಗಬೇಕೆಂಬ ಉದ್ದೇಶದೊಂದಿಗೆ ಮನೆಯನ್ನು ಕಲೆಗೆ ಪೂರಕವಾಗುವಂತೆ ನಿರ್ಮಿಸಿಕೊಂಡಿದ್ದಾರೆ. ಮನೆಯ ಪ್ರತಿ ಜಾಗವನ್ನೂ ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ. ಅವರ ಮನೆಯ ವಿಶೇಷಗಳನ್ನು ಅವರ ಮಾತಲ್ಲೇ ಕೇಳೋಣ...

ಮನೆ ಎಂದರೆ ಪ್ರೀತಿಯ ಗೂಡು. ತಂದೆ–ತಾಯಿ, ಗಂಡ–ಹೆಂಡತಿ, ಮಕ್ಕಳು, ಬಂಧು ಬಳಗ ಒಡನಾಡುವ ಈ ತಾಣ ವಿಶಿಷ್ಟವಾಗಿದ್ದರೇ ಚೆನ್ನ. ನನಗಂತೂ ಮನೆಯೇ ಎಲ್ಲ; ಅದು ಎರಡು ದೃಷ್ಟಿಗಳಿಂದ. ಒಂದು ಕುಟುಂಬದ್ದಾದರೆ ಮತ್ತೊಂದು ಕಲೆಯದ್ದು. ಇಲ್ಲಿನ ಕಿಟಕಿ, ಬಾಗಿಲು, ಬಾಲ್ಕನಿ, ಹೀಗೆ ಮನೆಯ ಪ್ರತಿ ಅಂಶಗಳೊಂದಿಗೂ ನನ್ನ ನಂಟಿದೆ, ನೆನಪುಗಳಿವೆ.

ನಮ್ಮ ಮನೆ ನಲವತ್ತು ವರ್ಷ ಹಳೆಯದು. ವಿಜಯನಗರದ ಆರ್‌ಪಿಸಿ ಬಡಾವಣೆಯಲ್ಲಿದೆ. ನಾನು ಆರೇಳು ವರ್ಷದವನಿದ್ದಾಗ ಅಪ್ಪ ಮನೆ ಕಟ್ಟಿಸಿದ್ದು. ಮೊದಲು ಚಾಮರಾಜಪೇಟೆಯಲ್ಲಿ ಬಾಡಿಗೆಗೆ ಇದ್ದೆವು. ನಂತರ ಸಾಲ ಸೋಲ ಮಾಡಿ ಮೂರೂವರೆ ಸಾವಿರ ರೂಪಾಯಿಗೆ 40x60 ಅಳತೆ ಜಾಗ ತೆಗೆದುಕೊಂಡು ಮನೆ ಕಟ್ಟಿದ್ದು. ಆಗಿನ ಕಾಲಕ್ಕೆ ಸಾವಿರ ಎಂದರೆ ಲಕ್ಷದಂತೆ.

ಆಗ ನಮ್ಮ ಬಳಿ ಹೆರಾಲ್ಡ್‌ ಕಾರೊಂದಿತ್ತು. ಮನೆ ಕಟ್ಟುವ ಸಮಯದಲ್ಲಿ ಶಾಲೆ ಮುಗಿಸಿಕೊಂಡು ಒಮ್ಮೊಮ್ಮೆ ಇಲ್ಲಿಗೆ ಬರುತ್ತಿದ್ದೆವು. ಇಲ್ಲಿ ನಿಂತು ನೋಡಿದರೆ ಮೈಸೂರು ರಸ್ತೆ ಬಳಿಯ ಮಸೀದಿ ಮೈದಾನ ಕಾಣುತ್ತಿತ್ತು. ಅಲ್ಲಿನ ವಾಹನ ಸಂಚಾರವೂ ಇಲ್ಲಿಂದ ಕಾಣುತ್ತಿತ್ತು. ಅದನ್ನು ನೋಡುವುದೇ ನಮಗೆ ಸಂಭ್ರಮ. ನಮ್ಮ ಮನೆ ಇದ್ದ ರಸ್ತೆಯಲ್ಲಿ ನಮ್ಮದೂ ಸೇರಿ ಮೂರೇ ಮನೆ. ಹೊಂಡ, ಕಾಡಿನಂತಿದ್ದ ಪ್ರದೇಶ.

ಧೈರ್ಯ ಮಾಡಿ ಮನೆ ಕಟ್ಟಿಸಿದ್ದೇ ಹೆಚ್ಚು. ಸೊಳ್ಳೆ ಪರದೆ ಕಟ್ಟಿಕೊಂಡು ಊಟ ಮುಗಿಸಬೇಕಿತ್ತು. ಮನೆ ಕಟ್ಟಿ ಹೊಸತರಲ್ಲಿ ಸುಮಾರು ವರ್ಷ ಯಾವ ನೆಂಟರೂ ಬರುತ್ತಿರಲಿಲ್ಲ. ಬಸ್ಸೂ ಇರಲಿಲ್ಲ. ಆರು ಗಂಟೆ ನಂತರ ಮನೆ ಬಾಗಿಲು ತೆರೆಯುತ್ತಿರಲಿಲ್ಲ. ಒಂದೆರಡು ಬಾರಿ ಇಲ್ಲಿಗೆ ಬಂದು ಬೇರೆ ಮನೆಗೆ ಖಾಲಿ ಮಾಡಿಕೊಂಡು ಹೋಗಿದ್ದೂ ಇದೆ. ನಮ್ಮ ಮನೆಯದ್ದೊಂದು ಸಾಹಸ ಕಥೆಯೇ ಹೌದು.

ಮನೆ ಹೆಸರು ಶ್ರೀಕೃಷ್ಣ ನಿಲಯ. ನನ್ನ ತಾತ ಕೃಷ್ಣಮೂರ್ತಿ ನೆನಪಿನಲ್ಲಿ ಅಪ್ಪ  ಇಟ್ಟ ಹೆಸರು. ಆಗೆಲ್ಲಾ ಮನೆ ಕಟ್ಟಲು ವಾಸ್ತು ಎಂದೇನೂ ಇರುತ್ತಿರಲಿಲ್ಲ. ಕಂಟ್ರಾಕ್ಟರ್‌ ಮಾತ್ರ ಇರುತ್ತಿದ್ದರು. ನಂಬಿಕೆ ಮೇಲೆ ಮನೆ ಕಟ್ಟುತ್ತಿದ್ದುದು. ಮನೆ ಎಂದರೆ ಒಂದು ಪರಿಕಲ್ಪನೆಯಿದೆ. ಎರಡು ಬೆಡ್‌ರೂಂ, ವರಾಂಡಾ, ಡೈನಿಂಗ್ ಹಾಲ್, ಹಾಲ್ ಹೀಗೆ. ಅದರಂತೆಯೇ ನಾವೂ ಮನೆ ಕಟ್ಟಿದ್ದು.  ಆ ಎಲ್ಲಾ ಸಹಜ ಅಂಶಗಳೂ ನಮ್ಮ ಮನೆಯಲ್ಲಿವೆ. ಆದರೆ ಅವಶ್ಯಕತೆಗಳಿಗೆ ತಕ್ಕಂತೆ ಮನೆಯೂ ಅಗಲವಾಗುತ್ತಾ ಹೋಯಿತು. ಈಗ ಮನೆಯೇ ಎಲ್ಲವೂ ಆಗಿ ಬಿಟ್ಟಿದೆ.

ನಾಟ್ಯಶಾಲೆಯಾದ ಮನೆ
ನನ್ನ ಅಮ್ಮ ಭಾಗ್ಯ ಲಕ್ಷ್ಮಿ ಅವರು ಸಂಗೀತ ಹೇಳಿಕೊಡುತ್ತಿದ್ದರು. ಅದಕ್ಕೂ ನಮ್ಮ ಮನೆಯಲ್ಲೇ ಜಾಗ. ನನ್ನ ಹೆಂಡತಿ ನೃತ್ಯ ಕಲಾವಿದೆ. ಆದ್ದರಿಂದ ಮನೆಯಲ್ಲೇ ಅನುಕೂಲ ಮಾಡಿಕೊಂಡೆವು. ನೃತ್ಯ ಎಂದರೆ ಒಂದಿಷ್ಟು ವಿಶೇಷವಾಗಿರಲಿ ಎಂದು ಟೆರೇಸ್‌ಗೆ ಹೆಂಚಿನಿಂದ ಸುಂದರವಾಗಿ ಹೊದಿಕೆ ಹಾಕಿಸಿ ಅದನ್ನು ನೃತ್ಯ ತರಬೇತಿ ಸ್ಥಳವಾಗಿ ಮಾಡಿಕೊಂಡೆವು. ಇದೇ ಜಾಗವನ್ನು ಇನ್ನೂ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಪದೇಪದೇ ಅನ್ನಿಸುತ್ತಿತ್ತು.

ಅರ್ಥಪೂರ್ಣವಾಗಿ ಹಾಗೆಯೇ ಎಲ್ಲರಿಗೂ ಉಪಯೋಗವಾಗುವಂತೆ ಆ ಜಾಗವನ್ನು ಬಳಸಿಕೊಳ್ಳಬೇಕು ಎಂದು ಅನ್ನಿಸುತ್ತಿತ್ತು. ಆದ್ದರಿಂದ ಚಿಕ್ಕ ಥಿಯೇಟರ್‌ನಂತೆ ಅದನ್ನು ಅಚ್ಚುಕಟ್ಟಾಗಿ ರೂಪಿಸಿದೆವು. ಸಿನಿಮಾ ಪ್ರದರ್ಶಿಸಲು 14 ಅಡಿ ಸ್ಕ್ರೀನ್ ಸಂಪರ್ಕಿಸಲಾಗುತ್ತದೆ. ತಿಂಗಳಲ್ಲಿ ಎರಡನೇ ಹಾಗೂ ನಾಲ್ಕನೇ ಭಾನುವಾರ ಇಲ್ಲಿ ಎರಡು ಸಿನಿಮಾಗಳನ್ನು ಪ್ರದರ್ಶನ ಮಾಡುತ್ತೇನೆ.

ಬಡಾವಣೆ ಜನರಿಗೆಂದೇ ‘ಬಡಾವಣೆ ಸಿನಿಮಾ’ ಎಂದು ಎರಡು ಉತ್ತಮ ಸಿನಿಮಾಗಳನ್ನು ಆಯ್ದು ಪ್ರದರ್ಶಿಸುತ್ತೇವೆ. ನೂರು ಮಂದಿಗೆ ಇಲ್ಲಿ ಸ್ಥಳಾವಕಾಶವಾಗುವಂತೆ ಕಟ್ಟಲಾಗಿದೆ. ಸುಮಾರು ಎಂಬತ್ತು ಮಂದಿ ಬಂದು ಸಿನಿಮಾ ನೋಡುತ್ತಾರೆ. ಪ್ರಶಸ್ತಿ ಪಡೆದ, ನೋಡಲೇಬೇಕಾದ ಸದಭಿರುಚಿಯ ಸಿನಿಮಾಗಳನ್ನು ಪ್ರದರ್ಶಿಸಿ ಈ ಮೂಲಕ ಸಿನಿಮಾ ನೋಡುವ ಅಭಿರುಚಿ ಬೆಳೆಸುವ ಸಣ್ಣ ಪ್ರಯತ್ನ ನನ್ನದು.  ಸಂಜೆ 6.30ರಿಂದ 8.30ವರೆಗೆ ಸಿನಿಮಾ ಪ್ರದರ್ಶನ ಇರುತ್ತದೆ.

ಮನೆಯಲ್ಲೇ ಕಚೇರಿ, ಸ್ಟುಡಿಯೊ
ನಟನೆಯೊಂದಿಗೆ ನನ್ನದೇ ಇವೆಂಟ್‌ ಮ್ಯಾನೇಜ್‌ಮೆಂಟ್ ಕಂಪೆನಿ ಕೂಡ ಇದೆ. ಆದ್ದರಿಂದ ಮನೆಯಲ್ಲೇ ಪುಟ್ಟ ಕಚೇರಿ ನಿರ್ಮಿಸಿಕೊಂಡಿದ್ದೇನೆ. ಮೊದಲ ಮಹಡಿಯಲ್ಲಿ ನನ್ನ ಕಚೇರಿ ಇದೆ. ಎರಡನೇ ಮಹಡಿಯಲ್ಲಿ ಸ್ಟುಡಿಯೊ ಇದೆ. ಟೆರೇಸ್‌ಗೆ ಹೊಂದಿಕೊಂಡಂತೆ ಇರುವ ಸ್ಟುಡಿಯೊದಲ್ಲಿ ಎಡಿಟಿಂಗ್‌, ಡಬ್ಬಿಂಗ್ ನಡೆಯುತ್ತದೆ. ಎರಡು ಸಿನಿಮಾಗಳ ಡಬ್ಬಿಂಗ್ ಆಗಿದ್ದು, ಧಾರಾವಾಹಿಗಳ ಎಡಿಟಿಂಗ್ ಕೂಡ ಇಲ್ಲಿ ನಡೆಯುತ್ತಿದೆ. ನನಗೆ ಮನೆಯೇ ಎಲ್ಲ. ಏಕೆಂದರೆ ಎಲ್ಲವೂ ಮನೆಯಲ್ಲೇ ಸಿಗುತ್ತಿದೆ. ಮನೆಯ ಒಂದಿಂಚು ಜಾಗವನ್ನೂ ವ್ಯರ್ಥ ಮಾಡದೆ ಬಳಸಿಕೊಳ್ಳಲಾಗಿದೆ.

ನಮ್ಮ ಇಡೀ ಮನೆಯನ್ನು ಕಲೆ ಆವರಿಸಿಕೊಂಡಿದೆ ಎನ್ನಬಹುದು. ಮನೆ ಹಿಂದೆ ಹತ್ತು ಅಡಿ ಜಾಗ ಬಿಡಲಾಗಿದೆ. ತೆಂಗಿನ ಮರ ಇದೆ. ಪೂಜೆಗೆ ಬೇಕಾದ ಹೂ ಗಿಡಗಳನ್ನು ಬೆಳೆಸಿದ್ದೇವೆ. ನನಗೆ ಹೆಚ್ಚು ಆಪ್ತ ಸ್ಥಳ ಎಂದರೆ ನನ್ನ ಕಚೇರಿ. ನನ್ನದು ಎನ್ನುವ ಭಾವನೆಯೇ ಒಂದು ರೀತಿ ಸಂಚಲನ ಮೂಡಿಸುತ್ತದೆ. ಅಲ್ಲಿಗೆ ಬಂದವರೂ ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿದೆ ಎನ್ನುತ್ತಾರೆ. ನನ್ನ ಕಲೆಯ ಹುಚ್ಚಾಟಗಳಿಗೆಲ್ಲಾ ಮನೆಯೇ ಪರೋಕ್ಷ ಕಾರಣದಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT