ADVERTISEMENT

ಶಿಲೆಯಲ್ಲ–ಕಲಾವಿದರ ಕಲಾತ್ಮಕ ಮನೆ!

ಗಣೇಶ ಅಮಿನಗಡ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST
ಶಿಲೆಯಲ್ಲ–ಕಲಾವಿದರ ಕಲಾತ್ಮಕ ಮನೆ!
ಶಿಲೆಯಲ್ಲ–ಕಲಾವಿದರ ಕಲಾತ್ಮಕ ಮನೆ!   

ಕಲಾವಿದರ ಮನೆಯೂ ಕಲಾತ್ಮಕವಾಗಿರುತ್ತದೆ ಎನ್ನುವುದಕ್ಕೆ ಆ ಮನೆ ಸಾಕ್ಷಿಯಂತಿದೆ.
ಮೈಸೂರಿನ ತಿ.ನರಸೀಪುರ ರಸ್ತೆಯಲ್ಲಿರುವ ನೇತಾಜಿನಗರದ ಮೊದಲನೇ ಹಂತದ ವಾಟರ್‌ ಟ್ಯಾಂಕ್‌  ಎದುರಿಗೆ ಇರುವ ‘ಹೆಜ್ಜೆ–ಗೆಜ್ಜೆ’ ಮನೆಯೊಳಗೆ ಕಾಲಿಟ್ಟರೆ ಅದು, ಕಲಾವಿದರ ಮನೆ ಎನ್ನುವುದು ಯಾವುದೇ ಸಂಶಯಕ್ಕೆ ಎಡೆಯಿಲ್ಲದಂತೆ ಖಚಿತವಾಗುತ್ತದೆ.

ಅದು ಭರತನಾಟ್ಯದ ಕಲಾವಿದ ಶ್ರೀಧರ್‌ ಹಾಗೂ ಸೌಮ್ಯ ಜೈನ್‌ ಅವರ ‘ಕನಿಸನ ಮನೆ’. ಸಂಗೀತ ಹಾಗೂ ನೃತ್ಯದ ಮೂಲಕ ಪ್ರಸಿದ್ಧರಾಗಿರುವ ಈ ದಂಪತಿಯ ಮನೆಯ ಮುಖ್ಯ ಆಕರ್ಷಣೆ ಎಂದರೆ, ಶಿಲೆಯ ಬಳಕೆ.

‘ಕಲ್ಲು ಕಲ್ಲಿನಲಿ ಕೇಳಿಸದೆ ಕನ್ನಡದ ದನಿ’... ಎನ್ನುವ ಚಿತ್ರಗೀತೆಯಂತೆಯೇ ಈ ಕಲಾವಿದ ದಂಪತಿಯ ಮನೆಯಲ್ಲಿ ಕಲ್ಲಿನಲ್ಲೇ ವೈವಿಧ್ಯತೆ ಮೂಡಿಸಲಾಗಿದೆ. ಕಲ್ಲಿನದೇ ಮೆಟ್ಟಿಲುಗಳು, ಕಲ್ಲಿನದೇ ಗೋಡೆಗಳು ಇಲ್ಲಿ ಗಮನ ಸೆಳೆಯುತ್ತವೆ.

ಅರ್ಧ ವೃತ್ತಾಕಾರದ ಕಲ್ಲಿನ ಗೋಡೆಯೊಳಗಿಟ್ಟು  ಕಟ್ಟಿದ ಕಲ್ಲಿನ ಮೆಟ್ಟಿಲುಗಳು ಮನೆಯ ಒಳಾಂಗಣದ ಅಂದವನ್ನು ಇಮ್ಮಡಿಗೊಳಿಸಿವೆ. ಕಲ್ಲಿನ ಗೋಡೆ ಕೂಡಾ ಗಮನ ಸೆಳೆಯುತ್ತದೆ. ಗೋಡೆಯ ಕೆಳಗೆ ಶ್ರೀರಂಗಪಟ್ಟಣದ ಗಂಜಾಂ ದೇವಸ್ಥಾನದಲ್ಲಿನ ಪ್ರಸಿದ್ಧ ನಿಮಿಷಾಂಬ ದೇವಿಯ ಪ್ರತಿರೂಪದ ಕಲ್ಲಿನ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿದೆ.
ಇದರ ಪಕ್ಕದ ಪ್ಯಾಸೇಜ್‌ ಹಾದು ಒಳಹೋದರೆ ರಂಗಮನೆ ಸಿಗುತ್ತದೆ. ಅದು ‘ನಿಮಿಷಾಂಬಾ ನಾದಾಲಯ ಮಂಟಪ’. ಇಲ್ಲಿ ಭರತನಾಟ್ಯ ಹಾಗೂ ಲಲಿತಕಲೆಗಳ ಕಲಾವಿದರಿಗೆ ತಾಲೀಮು ನಡೆಸಲು ಮೀಸಲಾಗಿರುವ ಸ್ಥಳ.

ಬೇರೆ ಊರುಗಳಿಂದ ಬರುವ ಅನೇಕ ಕಲಾವಿದರು ಇಲ್ಲಿ ತಾಲೀಮು ನಡೆಸಿ ಪ್ರದರ್ಶನಕ್ಕೆ ಸಜ್ಜಾದ ಉದಾಹರಣೆಗಳಿವೆ. ಅಲ್ಲದೇ 150 ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಈ ರಂಗಮನೆಯಲ್ಲಿ, ಈಗಾಗಲೇ ನೂರಾರು ಸಂಗೀತ, ಭರತನಾಟ್ಯ  ಕಾಯರ್ಕ್ರಮಗಳೂ ನಡೆದಿವೆ. ಪ್ರದರ್ಶನ ಸ್ಥಳದ ಎರಡೂ ಬದಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಗ್ರೀನ್‌ರೂಂಗಳಿವೆ. ಈ ರಂಗಮನೆಯ ನೆಲಕ್ಕೆ ರೆಡ್‌ ಆಕ್ಸೈಡ್‌, ಯೆಲ್ಲೋ ಆಕ್ಸೈಡ್‌ ಹಾಗೂ ಗ್ರೀನ್‌ ಆಕ್ಸೈಡ್ ಹಾಕಿ ಬಹಳ ಭಿನ್ನವಾಗಿ ನಿರ್ಮಿಸಲಾಗಿದೆ. ಜತೆಗೆ ವಿವಿಧ ಹಂತಗಳಲ್ಲಿ ಕಟ್ಟೆಗಳನ್ನೂ  ಕಟ್ಟಿರುವುದರಿಂದ ವೀಕ್ಷಕರು ಕುಳಿತು ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುಕೂಲಕಾರಿಯಾಗಿದೆ.

ಮನೆಯ ಸುತ್ತಲ ಹಸಿರು ಪರಿಸರ ಕಣ್ಣಿಗೆ ತಂಪು ನೀಡುತ್ತದೆ. ಮನೆಯ ಮುಂದೆ 15 ಅಡಿ ಜಾಗದಲ್ಲಿ ಗಿಡಗಳನ್ನು ಬೆಳೆಸಲಾಗಿದೆ. ಮೈಸೂರು ಮಲ್ಲಿಗೆ, ಜಾಜಿ ಮಲ್ಲಿಗೆ, ಏಳು ಸುತ್ತಿನ ಮಲ್ಲಿಗೆ, ಸಂಜೆ ಮಲ್ಲಿಗೆ, ಮುದ್ದು ಮಲ್ಲಿಗೆ, ಮದ್ರಾಸ್‌ ಮಲ್ಲಿಗೆ... ಜತೆಗೆ ದಾಸವಾಳ, ಮಾವಿನ ಮರ, ಕರಿಬೇವಿನ ಗಿಡ ಅಲ್ಲದೇ ವಿವಿಧ ಬಗೆಯ ಅಲಂಕಾರಿಕ ಗಿಡಗಳನ್ನು ಬೆಳೆಸಲಾಗಿದೆ.

15 ಕಲ್ಲಿನ ಮೆಟ್ಟಿಲುಗಳನ್ನು ಹತ್ತಿ ಮನೆಯೊಳಗೆ ಹೋದರೆ ಬಿದಿರಿನ ಗೋಡೆ ಗಮನ ಸೆಳೆಯುತ್ತದೆ. ಬೇಸಿಗೆಯಲ್ಲಿ ತಂಪಾಗಿ, ಚಳಿಗಾಲದಲ್ಲಿ ಬೆಚ್ಚಗಿಡುವುದರ ಜತೆಗೆ ನೋಡಲು ಆಕರ್ಷಕವಾಗಿರಲೆಂದು ಬಿದಿರಿನ ಗೋಡೆ ನಿರ್ಮಿಸಲಾಗಿದೆ. ಈ ಗೋಡೆಗೆ ಹೊಂದಿಕೆಯಾಗುವಂತೆ ಬಿದಿರಿನ ಕುರ್ಚಿಗಳು ಹಾಗೂ ಟಿಪಾಯಿ ಸಹ ಇವೆ.

ಗಾಳಿ ಹಾಗೂ ಬೆಳಕು ಚೆನ್ನಾಗಿ ಬರಲೆಂದು ಕಿಟಕಿಗಳಿಗೆ ಪರದೆ ಕೂಡಾ ಹಾಕಿಲ್ಲ. ಎತ್ತರದ ಗೋಡೆಗಳು ಇರುವುದರಿಂದ ಮನೆಯೊಳಗೆ ಅಷ್ಟೊಂದು ಶಾಖದ ಅನುಭವವೂ ಆಗುವುದಿಲ್ಲ. ಗ್ರಾನೈಟ್‌ ಬಳಸಿಲ್ಲ. ಹೆಚ್ಚು ಮರಮುಟ್ಟು ಬಳಸಿಲ್ಲ. ಹಸಿರು ಉಳಿಯಲಿ ಎನ್ನುವುದು ಅವರ ಆಶಯ.

ಬಾಗಿಲಿಲ್ಲದ ದೇವರ ಕೋಣೆ
ಮನೆಯೊಳಗೆ ಗಣೇಶೋತ್ಸವಕ್ಕೆಂದು ಪ್ರತಿವರ್ಷ ಮಣ್ಣಿನ ಗಣಪತಿ ಮೂರ್ತಿಯನ್ನು ತರುವುದಿಲ್ಲ. ಕಲ್ಲಿನ ಗಣೇಶ ಮೂರ್ತಿಯನ್ನೇ ಪ್ರತಿಷ್ಠಾಪಿಸಲಾಗಿದೆ. ಮುಖ್ಯವಾಗಿ ಈ ಮನೆಯ ದೇವರ ಕೋಣೆಗೆ ಬಾಗಿಲೇ ಇಲ್ಲ.

‘ದೇವರನ್ನು ಕೂಡಿ ಹಾಕುವುದು ಬೇಡ ಎಂದೇ ಬಾಗಿಲು ಮಾಡಿಸಿಲ್ಲ’ ಎನ್ನುತ್ತಾರೆ ಮನೆಯೊಡೆಯ ಶ್ರೀಧರ್‌.
ಆದರೆ, ನೂರಾರು ವರ್ಷಗಳ ಹಳೆಯದಾದ ಮನೆಯೊಂದರ ಎರಡು ಕಂಬಗಳನ್ನು ಬೆಂಗಳೂರಿನಿಂದ ತಂದು ಅಲ್ಲಿಟ್ಟಿದ್ದಾರೆ. ಮಹಡಿಯ ಮೇಲೆ ನಟರಾಜನ ವಿಗ್ರಹವಿದೆ.

ನೃತ್ಯಕ್ಕೆ ಬೇಕು ಹೆಜ್ಜೆ–ಗೆಜ್ಜೆ. ಈ ಎರಡೂ ಮೇಳೈಸಿರುವ ಈ ಮನೆಯಲ್ಲಿ ಗಣಪತಿಯ ಕಲಾತ್ಮಕ ಪೇಂಟಿಂಗ್‌, ಮೂರ್ತಿಗಳನ್ನು ಅಲ್ಲಲ್ಲಿ ಅಲಂಕರಿಸಲಾಗಿದೆ.

‘ಎಂಟು ವರ್ಷಗಳ ಹಿಂದೆ 30 ಅಡಿ ಅಗಲ ಹಾಗೂ 60 ಅಡಿ ಉದ್ದದ ಈ ಮನೆ ಕಟ್ಟಿದಾಗ ₨16 ಲಕ್ಷ ವೆಚ್ಚವಾಗಿತ್ತು. ಶಿವಮೊಗ್ಗದ ನನ್ನ ಸೋದರ, ವಾಸ್ತುಶಿಲ್ಪಿ ಅನಿಲ್‌ ಜೈನ್‌ ಈ ಮನೆಯನ್ನು ವಿನ್ಯಾಸಗೊಳಿಸಿದ’ ಎನ್ನುತ್ತಾರೆ ವರುಣಾ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯೂ ಆಗಿರುವ ಸೌಮ್ಯ.

‘ಹೆಚ್ಚು ಆಸರೆ ಇಲ್ಲದ, ಹೊರಕ್ಕೆ ಚಾಚಿಕೊಂಡಂತೆ ಇರುವ ಕಲ್ಲಿನ ಮೆಟ್ಟಿಲುಗಳು ಹೆಚ್ಚಿನ ಭಾರ ಬಿದ್ದರೆ ತುಂಡಾತ್ತವೆ ಎಂದು ಮನೆ ಕಟ್ಟುವವರು ಹೆದರಿಸಿದ್ದರು. ಆದರೆ ಒಮ್ಮೆ 500 ಕೆ.ಜಿ ತೂಕದ ವಸ್ತುಗಳನ್ನು ಮನೆಯೊಳಗೆ ತಂದ ಮೇಲೆ ಅವರಿಗೂ ನಂಬಿಕೆ ಬಂತು’ ಎನ್ನುತ್ತಾರೆ ಶ್ರೀಧರ್‌ ಜೈನ್.

ನಿಮಿಷಾಂಬಾ ನೃತ್ಯ ಶಾಲೆ ನಡೆಸುವ  ಅವರು, ಅದೇ ಕಾರಣವಾಗಿ ಮನೆಗೆ ‘ಹೆಜ್ಜೆ–ಗೆಜ್ಜೆ’ ಎಂದೇ ಹೆಸರಿಟ್ಟಿದ್ದಾರೆ.

‘ಕಲೆಗೆ ಪ್ರೋತ್ಸಾಹವಿಲ್ಲ, ದುಡ್ಡಿಲ್ಲ ಎನ್ನುವುದು ಸುಳ್ಳು. ಬಹಳ ಹಿಂದೆ ಕಲೆಯನ್ನು ಕೀಳಾಗಿ ನೋಡುತ್ತಿದ್ದರು. ಈಗ ಕಲಾವಿದರು ಶ್ರಮಪಟ್ಟರೆ ಪ್ರೋತ್ಸಾಹವೂ ಸಿಗುತ್ತದೆ, ದುಡ್ಡೂ ಬರುತ್ತದೆ. ನಮ್ಮಂಥ ಕಲಾವಿದರು ‘ಕನಸಿನ ಮನೆ’ಯನ್ನೂ ಕಟ್ಟಿಕೊಳ್ಳಬಹುದು. ಮುಖ್ಯವಾಗಿ ತಾಲೀಮಿಗೆಂದು ಪ್ರತ್ಯೇಕ ಮನೆ ಅಥವಾ ಜಾಗ ನೋಡಿಕೊಳ್ಳುವುದಕ್ಕಿಂತ ಹೀಗೆ ಮನೆಯ ಕೆಳಗಿನ ಜಾಗವನ್ನು ಮೀಸಲಿಟ್ಟರೆ ಒಳಿತು’ ಎನ್ನುವ ಶ್ರೀಧರ್‌ ಅವರು ‘ಆಪ್ತಮಿತ್ರ’ ಸಿನಿಮಾದಲ್ಲಿಯ ‘ರಾ ರಾ...’ ಹಾಡಿಗೆ ನರ್ತಿಸಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.