ADVERTISEMENT

'ನಮ್ಮೂರಲ್ಲಿ ಚಳಿಗಾಲದಲ್ಲಿ' ಹಾಡಿನ ಸಾಹಿತ್ಯ ಮಾತ್ರ ಅಲ್ಲ ಸಂಗೀತವೂ 'ಪುಂಟಿಲಾ' ನಾಟಕದ ಹಾಡಿನಿಂದ ಸ್ಫೂರ್ತಿ ಪಡೆಯಿತೇ?

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 10:43 IST
Last Updated 25 ಏಪ್ರಿಲ್ 2017, 10:43 IST
'ನಮ್ಮೂರಲ್ಲಿ ಚಳಿಗಾಲದಲ್ಲಿ' ಹಾಡಿನ ಸಾಹಿತ್ಯ ಮಾತ್ರ ಅಲ್ಲ ಸಂಗೀತವೂ 'ಪುಂಟಿಲಾ' ನಾಟಕದ ಹಾಡಿನಿಂದ ಸ್ಫೂರ್ತಿ ಪಡೆಯಿತೇ?
'ನಮ್ಮೂರಲ್ಲಿ ಚಳಿಗಾಲದಲ್ಲಿ' ಹಾಡಿನ ಸಾಹಿತ್ಯ ಮಾತ್ರ ಅಲ್ಲ ಸಂಗೀತವೂ 'ಪುಂಟಿಲಾ' ನಾಟಕದ ಹಾಡಿನಿಂದ ಸ್ಫೂರ್ತಿ ಪಡೆಯಿತೇ?   

ಬೆಂಗಳೂರು: ನಮ್ಮೂರಲ್ಲಿ ಮೇ ತಿಂಗಳಲ್ಲಿ ಎಂದು ಆರಂಭವಾಗುವ ಆ ಹಾಡು, ಬ್ಯೂಟಿಫುಲ್ ಮನಸುಗಳು ಚಿತ್ರದಲ್ಲಿ ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೆ ಚಂದ ಎಂಬ ಹಾಡಾಗಿ ಬದಲಾಗಿದ್ದು ಹೇಗೆ? ಈ ಪ್ರಶ್ನೆಯ ಜಾಡು ಹಿಡಿದು ಹೋದಾಗ ಸಿಕ್ಕಿದ ಮಾಹಿತಿಗಳು ಇಲ್ಲಿವೆ.

ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೆ ಚಂದ.. ಬ್ಯೂಟಿಫುಲ್ ಮನಸುಗಳು ಸಿನಿಮಾದ ಸುಂದರವಾದ ಹಾಡು. ಈ ಹಾಡನ್ನು ವಿಜಯ ಪ್ರಕಾಶ್ ಅವರು ಹಾಡಿದ್ದು, ಈ ಹಾಡಿನ ಗಾಯನಕ್ಕಾಗಿ ಅವರಿಗೆ ಈ ಬಾರಿಯ 'ಶ್ರೇಷ್ಠ ಗಾಯಕ' ರಾಜ್ಯ ಪ್ರಶಸ್ತಿಯೂ ಲಭಿಸಿದೆ.

ವಿಷಯ ಇದಲ್ಲ ಈ ಹಾಡಿನ ಸಾಹಿತ್ಯ ಮತ್ತು ಸಂಗೀತವನ್ನೊಮ್ಮೆ ಗಮನಿಸಿ.

ADVERTISEMENT

ಹಾಡಿನ ಸಾಲುಗಳು ಹೀಗಿವೆ.
‘ನಮ್ಮೂರಲ್ಲಿ ಚಳಿಗಾಲದಲ್ಲಿ
ಮುಂಜಾವು ಮೂಡೋದೆ ಚಂದ
ಮಾರ್ಕೆಟ್  ರೋಡಲ್ಲಿ ಬಾಸ್ಕೆಟ್ ಹಿಡ್ಕೊಂಡು
ನಮ್ಮುಡುಗಿ ನಡೆಯೋದೆ ಅಂದ
ಬಡಿಸೋಳೆ ಕನ್ಸೂ ನೂರಾರು
ಮರೆತೋಯ್ತು ಮುದ್ದೆ ಬಸ್ಸಾರು
ಬ್ಯೂಟಿಫುಲ್ ಮನಸುಗಳು...

ಈಗ ಈ ಕೆಳಗಿನ ಸಾಲುಗಳನ್ನು ಗಮನಿಸಿ
ನಮ್ಮೂರಲ್ಲಿ ಮೇ ತಿಂಗಳಲ್ಲಿ, ಮುಂಜಾವು ಮೂಡೋದೆ ಚಂದ
ಚರ‍್ರಿ ಮರಗಳಲಿ ಹಣ್ಣು ತುಂಬುವವು, ಗಾಳೀಲಿ ಅದರದ್ದೆ ಗಂಧ
ಒಮ್ಮೆ ಅಂಥದ್ದೊಂದು ಬೆಳಗು ಮುಂಜಾವು, ಬಾಸ್ಕೆಟ್ಟು ಕೈಲಿತ್ತು ಹುಡುಗೇರು ನಾವು
ಹಣ್ಣು ಕೊಯ್ಯೊಕಂತ ನಡೆದಿರುವಾಗ,
ಬಂದ ಅವ ಸುಕುಮಾರ, ಕುದುರೆ ಸವ್ವಾರ
ಯಾರೇ ಈ ಇವನು ಅಂದ್ಕೋತಾ ನಾವು, ಸರಸರ ಮರಹತ್ತಿ ಹಣ್ಣು ಕೊಯ್ತಿದ್ವು,
ಅಲ್ಲೇನೇ ಬಂದ, ಕುದುರೆಯಿಂದಿಳಿದ, ಚರ‍್ರಿ ಮರದಡಿಗೆ ತಲೆಯೆತ್ತಿ ಕೂತ.
ಆಗ ಗೊತ್ತಾಯ್ತು ಕಣ್ಣ ಮಸಲತ್ತು, ಕಣ್ಣಿನ ಮಸಲತ್ತು
ಇಳಿದದ್ದೇ ನಾವು ನಿಂತ್ಕೊಳ್ರೆ ಅಂದ, ಬ್ಯಾಸ್ಕೆಟ್ಟಿಂದೆತ್ಕೊಂಡು ಹಣ್ಣೊಂದ ತಿಂದ
ಬಲುರುಚಿ ಬಲುರುಚಿ ಅಂತ ಥ್ಯಾಂಕ್ಸ್ ಕೊಟ್ಟ, ಕುದುರೆಯ ಹತ್ಕೊಂಡು ನಡೆದೇಬಿಟ್ಟ.
ಬೇಸಿಗೆಗಾಲ ಸಂದು, ಮಳೆಗಾಲ ಬಂದು, ಒಣಗಿಸಿಟ್ಟ ಹಣ್ಣು ಸಣ್ಣಕೆ ಹೆಚ್ಚಿ
ಬಾಯಲ್ಲಿಟ್ಕೊಂಡು ಸವಿಯುವ ಹೊತ್ತು, ಸುಕುಮಾರ ನೆನಪಾದ ಮತ್ತೂ ಮತ್ತೂ ಮತ್ತೂ...

ಇದು ಕೆವಿ ಸುಬ್ಬಣ್ಣ ಅವರು ರಚಿಸಿದ ಹಾಡು. ಬರ್ಟೋಲ್ಟ್ ಬ್ರೆಕ್ಟ್ ಅವರ ಪುಂಟಿಲಾ(1990ರಲ್ಲಿ ಕನ್ನಡಕ್ಕೆ ಅನುವಾದವಾಗಿದೆ) ನಾಟಕವನ್ನು ಜಸವಂತ್ ಜಾಧವ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದು, ಈ ನಾಟಕದಲ್ಲಿ 'ನಮ್ಮೂರಲ್ಲಿ ಮೇ ತಿಂಗಳಲ್ಲಿ' ಹಾಡು ಬಳಕೆಯಾಗಿದೆ. ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದವರು ಬಿ.ವಿ ಕಾರಂತರು.

ಬ್ಯೂಟಿಫುಲ್ ಮನಸುಗಳು ಸಿನಿಮಾದ ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೆ ಚಂದ ಹಾಡಿಗೂ 'ಪುಂಟಿಲಾ' ನಾಟಕದ ನಮ್ಮೂರಲ್ಲಿ ಮೇ ತಿಂಗಳಲ್ಲಿ ಮುಂಜಾವು ಮೂಡೋದೇ ಚಂದ ಹಾಡಿಗೂ ಸಾಮ್ಯತೆ ಇದೆ ಅಲ್ಲವೇ?

ಅಂದಹಾಗೆ ‘ನಮ್ಮೂರಲ್ಲಿ ಚಳಿಗಾಲದಲ್ಲಿ' ಹಾಡು ಕಾರಂತರ ಹಾಡಿನಿಂದ ಸ್ಫೂರ್ತಿಗೊಂಡು ಮಾಡಿದ್ದೇವೆ. ಅದನ್ನು ನಾವು ಪತ್ರಿಕಾಗೋಷ್ಠಿಯಲ್ಲೂ ಹೇಳಿದ್ದೇವೆ. ಸಿನಿಮಾದಲ್ಲಿ ಕೂಡ ಕೆ.ವಿ. ಸುಬ್ಬಣ್ಣ, ಬಿ.ವಿ. ಕಾರಂತ, ಕೆ.ವಿ. ಅಕ್ಷರ ಮತ್ತು ನೀನಾಸಮ್‌ಗೆ ಕೃತಜ್ಞತೆ ಸಲ್ಲಿಸಿದ್ದೇವೆ. ಇದೇ ಹಾಡಿಗೆ ಎಂದು ಪ್ರತ್ಯೇಕವಾಗಿ ಕೃತಜ್ಞತೆ ಸಲ್ಲಿಸಿಲ್ಲ. ಏಕೆಂದರೆ ಕಾರಂತರ ಸಂಯೋಜನೆಯ ಇಡೀ ಹಾಡನ್ನು ನಾವು ಬಳಸಿಕೊಂಡಿಲ್ಲ. ಎರಡು ಸಾಲು ಮಾತ್ರ ಉಳಿಸಿಕೊಂಡು ಉಳಿದಂತೆ ಹಿನ್ನೆಲೆ ಸಂಗೀತವನ್ನೆಲ್ಲ ಹೊಸದಾಗೇ ಸಂಯೋಜಿಸಲಾಗಿದೆ. ಹಾಗಿದ್ದಾಗ ಕಾರಂತರ ಸಂಗೀತ ಎಂದು ಕ್ರೆಡಿಟ್ ಕೊಟ್ಟರೆ ಅದು ಸರಿಯಲ್ಲ ಎಂದು ಹೇಳಿದ್ದಾರೆ.

[related]

ಆದರೆ ಹಾಡು ಮಾತ್ರವಲ್ಲ ಅದಕ್ಕೆ ಬಳಸಿದ ಸಂಗೀತಕ್ಕೂ ಸಾಮ್ಯತೆ ಇದೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ. 'ಪುಂಟಿಲಾ' ನಾಟಕದ ಹಾಡಿನಿಂದ ಸ್ಫೂರ್ತಿ ಪಡೆದು ಬ್ಯೂಟಿಫುಲ್ ಮನಸುಗಳು ಚಿತ್ರದ ಹಾಡು ರಚಿಸಿದ್ದರೂ, ಸಂಗೀತವೂ ಅದೇ ರೀತಿಯಲ್ಲಿದೆ ಅಲ್ಲವೇ? ಸಿನಿಮಾದಲ್ಲಿ ಹೆಚ್ಚಿನ ಸಂಗೀತ ಉಪಕರಣಗಳನ್ನು ಬಳಸಿ ಸಣ್ಣ ಪುಟ್ಟ ಮಾರ್ಪಾಡು ಮಾಡಿದ್ದು ಬಿಟ್ಟರೆ, ಹಾಡು ಕೇಳುವಾಗ ಅಲ್ಲಿನ ಸಾಮ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ, ಬ್ಯೂಟಿಫುಲ್ ಮನಸುಗಳು ಸಿನಿಮಾದ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ ಬಿ.ಜೆ. ಭರತ್ ಇದಕ್ಕೆ ಏನಂತಾರೆ? 

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗ ಸಂಗೀತ'ದ ದಾಖಲೀಕರಣ ವಿಡಿಯೊಗಳಲ್ಲಿ  'ನಮ್ಮೂರಲ್ಲಿ ಮೇ ತಿಂಗಳಲ್ಲಿ' ಹಾಡು ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.