ADVERTISEMENT

ಬೆಂಗಳೂರಿನ ಅಪರೂಪದ ಸಾಕು ಪ್ರಾಣಿಗಳು

ಎಸ್.ಆರ್.ರಾಮಕೃಷ್ಣ
Published 13 ಜನವರಿ 2013, 19:59 IST
Last Updated 13 ಜನವರಿ 2013, 19:59 IST
ಬೆಂಗಳೂರಿನ ಅಪರೂಪದ ಸಾಕು ಪ್ರಾಣಿಗಳು
ಬೆಂಗಳೂರಿನ ಅಪರೂಪದ ಸಾಕು ಪ್ರಾಣಿಗಳು   

ನಮ್ಮ ನಗರದಲ್ಲಿ ಗುಬ್ಬಚ್ಚಿಗಳು ಕಾಣೆಯಾಗಿರುವುದನ್ನು  ನೀವು ಗಮನಿಸಿರಬಹುದು. ಮನೆಗಳಲ್ಲಿ ಅಕ್ಕಿ ಆರಿಸುವ ರೂಢಿ ಕಡಿಮೆಯಾದಂತೆ, ಅಂಗಡಿಯಿಂದ ಕ್ಲೀನ್ ಮಾಡಿದ ದಿನಸಿ ತರುವುದು ಹೆಚ್ಚಾದಂತೆ, ಅಪಾರ್ಟ್‌ಮೆಂಟ್‌ಗಳು ಇಂಡಿಪೆಂಡೆಂಟ್ ಮನೆಗಳ ಜಾಗ ಆಕ್ರಮಿಸಿಕೊಂಡಂತೆ, ಗುಬ್ಬಚ್ಚಿಯಂಥ ಹಕ್ಕಿಗಳು ನಮ್ಮಿಂದ ದೂರ ಸರಿದಿವೆ. ಮಹಾನಗರಗಳಲ್ಲಿ ನಮಗೂ ಪ್ರಾಣಿ-ಪಕ್ಷಿ ಲೋಕಕ್ಕೂ ಇರುವ ಕೊಂಡಿ ನಮಗೇ ತಿಳಿಯದಂತೆ ಮುರಿದುಹೋಗುತ್ತಿದೆ.

ನಾಯಿ ಸಾಕುವುದು ಸಾಮಾನ್ಯ ಎನಿಸಿದರೂ, ಎಷ್ಟೋ  ಅಪಾರ್ಟ್‌ಮೆಂಟ್ ನಡೆಸುವ ಸಂಘಗಳು ಸಾಕು ಪ್ರಾಣಿಗಳನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಬೆಕ್ಕು ಸ್ವಲ್ಪ ಬೇರೆಯೇ ಥರದ ಪ್ರಾಣಿ. ಕಟ್ಟಿ ಹಾಕಲಾಗುವುದಿಲ್ಲ. ಸಾಕಿದವರ ಮನೆಯಲ್ಲಿ ಹಾಲು ಕುಡಿದು ಊರೆಲ್ಲ ಸುತ್ತಿಕೊಂಡು ಮಲಗುವ ಹೊತ್ತಿಗೆ ಮರಳಿ ಬರುತ್ತದೆ. ಹಾಗಾಗಿ ಅದಕ್ಕೆ ಅಷ್ಟು ನಿರ್ಬಂಧವಿಲ್ಲ.

ಈಚಿನ ಬೆಳವಣಿಗೆ: ನಾಯಿ, ಬೆಕ್ಕನ್ನು ಹೊರತು ಪಡಿಸಿ ಬೆಂಗಳೂರಿನ ಜನ ಹೊಸ ಸಾಕು ಪ್ರಾಣಿಗಳನ್ನು ಮನೆಗೆ ತರುತ್ತಿದ್ದಾರೆ. ಬೇರೆ ಬೇರೆ ಥರದ ಪಕ್ಷಿಗಳು, ಹಾವುಗಳು, ಬಿಳಿ ಇಲಿಗಳು, ಆಮೆಗಳು... ಹೀಗೆ ಹಿಂದೆಂದೂ ಕಂಡರಿಯದ ಸಾಕು ಪ್ರಾಣಿಗಳು ನಿಮ್ಮ ನೆರೆ ಹೊರೆಯಲ್ಲಿ ಇರುವ ಸಾಧ್ಯತೆ ಇದೆ. ಪತ್ರಕರ್ತೆ ಮಾರಿಯಾ ಲವೀನ ಹುಡುಕಿ ಹೊರಟಾಗ ಹಲವು ವಿಸ್ಮಯಗಳು ಕಾದಿದ್ದವು.

ಬೆಂಗಳೂರಿನ ಪೆರೆಯ್ರ ಕುಟುಂಬದ ಸರಿತ ಮತ್ತು ಶಾರನ್ ಸಹೋದರಿಯರು ಎರಡು ಬಿಳಿ ಇಲಿ ಸಾಕಿದ್ದಾರೆ. ಮನೆಯ ಡ್ರಾಯಿಂಗ್ ರೂಮಿನಲ್ಲಿ ಗಾಜಿನ ಗೂಡು ಮಾಡಿ ಅದರಲ್ಲಿ ಬಿಟ್ಟಿದ್ದಾರೆ. ಬಾಳೆಹಣ್ಣು, ಗೆಣಸು, ಪುಟ್ಟ ಮೀನು ಈ ಇಲಿಗಳಿಗೆ ಆಹಾರ. ಇಂಥ ಇಲಿಯೊಂದಕ್ಕೆರೂ 100ರಿಂದ 300 ಬೆಲೆಯಂತೆ. ಅಕ್ಕ ತಂಗಿ ಸೇರಿ ನೋಡಿಕೊಳ್ಳುವ ಈ ಇಲಿಗಳಿಗೆ ದೀಪಿಕಾ ಪಡುಕೋಣೆ ಮತ್ತು ಕತ್ರಿನ ಕೈಫ್ ಎಂದು ಹೆಸರಿಟ್ಟಿದ್ದಾರೆ. ಬಿಳಿ ಇಲಿಗಳು ಮನೆಯಲ್ಲಿದ್ದರೆ ಬೇರೆ ಇಲಿಗಳು ಬರುವುದಿಲ್ಲವಂತೆ.

ಸಾಕು ಪ್ರಾಣಿಗಳನ್ನು ಮಾರುವ ಅಂಗಡಿಯನ್ನು ಇನ್ಫೆಂಟ್ರಿ ರಸ್ತೆಯಲ್ಲಿ ಇಟ್ಟಿರುವ ಷರೀಫ್ ಒಂದು ದೊಡ್ಡ ಮಕಾವ್ ಗಿಣಿಯನ್ನು ತಾವೇ ಸಾಕಿಕೊಂಡಿದ್ದಾರೆ. ಇದಕ್ಕೆ ಸುಮಾರುರೂ 5 ಲಕ್ಷ ಬೆಲೆಯಂತೆ. ಹಣ್ಣು, ಬೀಜ, ಎಲೆ ತಿನ್ನುವ ಈ ಪಕ್ಷಿ ಒಂದು ಬೆಕ್ಕಿನ ಗಾತ್ರ ಇದೆ. ಅಮೆರಿಕ ದೇಶದ ಮೂಲ ವಾಸಿಯಾದ ಈ ಗಿಣಿಯನ್ನು ಪಂಜರದಲ್ಲಿ ಕೂಡಿಟ್ಟಿರುತ್ತಾರೆ.

ಸಂಜೀವ್ ಪೆದ್ನೆಕರ್ ಎಂಬ ಸರ್ಪ ಪ್ರೇಮಿ ತಮ್ಮ ಮನೆಯಲ್ಲಿ ಹಲವಾರು ಹಾವುಗಳನ್ನು ಸಾಕಿದ್ದಾರೆ. ಇಂಟು ದಿ ವೈಲ್ಡ್ ಎಂಬ ಸಾಹಸ ಸಂಸ್ಥೆಯನ್ನು ನಡೆಸುವ ಅವರು ಸರ್ಪ ತಜ್ಞ. ಹಾವುಗಳನ್ನು ಸಂರಕ್ಷಿಸಲು ಮತ್ತು ಸಾಕಲು ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದಿದ್ದಾರೆ. ಶಾಲಾ ಮಕ್ಕಳನ್ನು ಮನೆಗೆ ಬರಮಾಡಿಕೊಂಡು ಹಾವುಗಳ ಬಗ್ಗೆ ಅರಿವು ಮೂಡಿಸುತ್ತಾರೆ.

ಅನಿತಾ ಈರಯ್ಯ ಎಂಬ ಐಬಿಎಂ ಉದ್ಯೋಗಿ ತಮ್ಮ ಹೆಣ್ಣೂರ್ ಮನೆಯಲ್ಲಿ ಬಾತು ಕೋಳಿಗಳನ್ನು ಸಾಕಿದ್ದಾರೆ. `ಯಾರಾದರೂ ಮನೆಗೆ ಬಂದರೆ ಕೂಗಲು ಪ್ರಾರಂಭಿಸುತ್ತವೆ' ಎನ್ನುವ ಅವರು ಬಾತು ಕೋಳಿಗಳು ನಾಯಿಗಳಿಗಿಂತ ಹೆಚ್ಚು ಪ್ರೀತಿಯಿಂದ ನಡೆದುಕೊಳ್ಳುತ್ತವೆ ಎನ್ನುತ್ತಾರೆ.

ಮಿಹಿರ್ ಶರ್ಮ ಒಬ್ಬ ಅಂಥ್ರೋಪೋಲಜಿ ವಿದ್ಯಾರ್ಥಿ. ಆಮೆಯೊಂದನ್ನು ಸಾಕಿದ್ದರು. ಈಚೆಗೆ ಅದು ಸತ್ತು ಹೋಯಿತು. ತೊಂಬತ್ತೆರಡು ವರ್ಷದ ಆಮೆ ಮಿಹಿರ್ ಅವರ ತಾತನಿಗೆ ಯಾರೋ ಉಡುಗೊರೆಯಾಗಿ ಕೊಟ್ಟಿದ್ದರಂತೆ. ಹಿಮಾಲಯ ಪ್ರದೇಶದ ಈ ಪ್ರಾಣಿ ಸೌತೆಕಾಯಿ ಮತ್ತು ಕ್ಯಾರಟ್ ಇಷ್ಟ ಪಡುತ್ತಿತ್ತಂತೆ. ಹೊರಗಿರಲು ಬಯಸುವ ಆಮೆಯನ್ನು ಮನೆಯೊಳಗೆ ಸಾಕುವುದು ಅಷ್ಟು ಸುಲಭವಲ್ಲ ಎಂಬುದು ಮಿಹಿರ್ ಅಭಿಪ್ರಾಯ.

ಗ್ರೀನ್ ಟೆರರ್ ಎಂಬ ಮೀನನ್ನು ಶಿಲ್ಪ ಮತ್ತು ಅನಿಲ್ ಮಚಡೊ ತಮ್ಮ ಮನೆಗೆ ತಂದು ಸಾಕಲು ಶುರು ಮಾಡಿದಾಗ ನಡೆದದ್ದನ್ನು ಅವರು ನಿರೀಕ್ಷಿಸಿರಲಿಲ್ಲ. ಈ ಮೀನು ಎಷ್ಟು ಆಕ್ರಮಣಕಾರಿ ಎಂದರೆ ಬೌಲ್‌ನಲ್ಲಿದ್ದ ಇತರ ಎಲ್ಲ ಮೀನುಗಳನ್ನೂ ತಿಂದು ಹಾಕಿ ಬಿಟ್ಟಿತು. ಈಗ ಪ್ರತ್ಯೇಕ ಬೌಲ್ ತಂದು ಅದರಲ್ಲಿ ಬಿಟ್ಟಿದ್ದಾರೆ. ಜಿನ್ಸೋ ಎಂಬ ವಿದ್ಯಾರ್ಥಿ ಮನೆಯಲ್ಲಿ ಹತ್ತು ಸಾಕು ಪ್ರಾಣಿಗಳನ್ನು ಇಟ್ಟುಕೊಂಡಿದ್ದಾನೆ. ಅದರಲ್ಲಿ ವಿಷಪೂರಿತ ಜೇಡ ಟರಂಟುಲಾ ಕೂಡ ಒಂದಿದೆಯಂತೆ. ಇದು ನೋಡಲು ಆಕರ್ಷಕವಾಗಿರುತ್ತದೆ ಎಂಬ ಕಾರಣಕ್ಕೆ ಸಾಕಿದ್ದಾನಂತೆ. ಗಂಡು ಟರಂಟುಲಾ ಜೇಡದ ಆಯಸ್ಸು ನಾಲ್ಕು ವರ್ಷ. ಹೆಣ್ಣು ಹನ್ನೆರಡು ವರ್ಷ ಇರುತ್ತದಂತೆ. ಆದರೆ ನೋಡಲು ಗಂಡು ಟರಂಟುಲಾ ಜೇಡ ಚೆಂದ. 

ಗಮನಿಸಬೇಕಾದ ಒಂದು ಅಂಶ ಅಂದರೆ, ಈ ಸಾಕು ಪ್ರಾಣಿಗಳು ನಾಯಿಯ ಥರ ಅಲ್ಲ. ಅವುಗಳ ಜೊತೆ ರಸ್ತೆ, ತೋಟ ಸುತ್ತಾಡಿ, ಚೆಂಡು ಎಸೆಯುವ ಆಟ ಆಡಲು ಸಾಧ್ಯವಿಲ್ಲ. ಕಾಡಿನಲ್ಲಿರಬೇಕಾದ ಕೆಲವು ಪ್ರಾಣಿ ಪಕ್ಷಿಗಳನ್ನು ಮನೆಯಲ್ಲಿ ಸಾಕುವುದು ಕಾನೂನು ಬಾಹಿರ. ರಿಯಲ್ ಎಸ್ಟೇಟ್ ಸಂದಿಗ್ಧ ಇಂಥ ಸಾಕು ಪ್ರಾಣಿಗಳನ್ನು ಮನೆಗೆ ತರಲು ಬೆಂಗಳೂರು ನಿವಾಸಿಗಳನ್ನು ಪ್ರೆರೇಪಿಸುತ್ತಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT