ADVERTISEMENT

ಹೊಸ ವರ್ಷದ ಪಾರ್ಟಿ ಕಥೆಗಳು

ಎಸ್.ಆರ್.ರಾಮಕೃಷ್ಣ
Published 6 ಜನವರಿ 2013, 19:59 IST
Last Updated 6 ಜನವರಿ 2013, 19:59 IST

ಬೆಂಗಳೂರಿನಲ್ಲಿ ಹೊಸ ವರ್ಷ ಬರುತ್ತಿದ್ದಂತೆ ಎಂ.ಜಿ ರೋಡ್‌ನ ಸುತ್ತ ಮುತ್ತ ಹಬ್ಬದ ವಾತಾವರಣ ಮೂಡುತ್ತದೆ. ಇದು ಹಲವರಲ್ಲಿ ಸಂಭ್ರಮ ಮೂಡಿಸಿದರೆ ಕೆಲವರಲ್ಲಿ ಆತಂಕ ಮೂಡಿಸುತ್ತದೆ. ಸಾಮಾನ್ಯವಾಗಿ ವ್ಯಾಪಾರದ ದೃಷ್ಟಿಯಿಂದ ಎಲೆಲ್ಲಿ ಏನೇನು ನಡೆಯುತ್ತಿದೆ ಎಂಬ ವರದಿಗಳನ್ನು ನೋಡಿರುತ್ತೇವೆ. ಆದರೆ ವರದಿಯಾಗದೇ ಉಳಿದಿರುವ ಕಥೆಗಳು ಎಷ್ಟೋ ಇರುತ್ತವೆ.

ಪತ್ರಕರ್ತೆ ಪ್ರಾಚಿ ಸಿಬಾಲ್ ಹೋಟೆಲ್, ಪಬ್ ಮತ್ತು  ಬಾರ್‌ಗಳಲ್ಲಿ ಕೆಲಸ ಮಾಡುವವರನ್ನು, ಪೊಲೀಸರನ್ನು ಮಾತಾಡಿಸಿದಾಗ ತುಂಬ ತಮಾಷೆಯ ವಿಷಯಗಳು ಹೊರಬಿದ್ದವು.ಒಂದು ಹೋಟೆಲ್ ನಲ್ಲಿ ಸ್ವಿಮ್ಮಿಂಗ್ ಪೂಲ್‌ನಿಂದ ನೀರು ತೆಗೆಸಿ ಆ ಜಾಗದಲ್ಲಿ ಪಾರ್ಟಿ ಮಾಡಲು ವ್ಯವಸ್ಥೆ ಮಾಡಿದ್ದರಂತೆ. ಒಬ್ಬ ಸೂಟ್ ಧರಿಸಿದ ವ್ಯಕ್ತಿಗೆ ಅದೇನಾಯಿತೋ ಡೈವಿಂಗ್ ಬೋರ್ಡ್ ಏರಿಬಿಟ್ಟ. ಪಾರ್ಟಿ ಮಾಡುತ್ತಿದ್ದ ಇತರರು ನೋಡು ನೋಡುತ್ತಿದ್ದಂತೆಯೇ ಅಲ್ಲಿಂದ ನೀರಿಲ್ಲದ ಕೊಳದೊಳಗೆ ಧುಮುಕಿದ. ಕಾಲು ಮುರಿದುಕೊಂಡಿದ್ದ ಅವನನ್ನು ಹೋಟೆಲ್‌ನ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದರಂತೆ. ಅಲ್ಲಿ ಕೆಲಸ ಮಾಡಿದ ಒಬ್ಬ ಹೇಳಿದ್ದು ಇದು... `ಅವನಿಗೆ ಹೇಗೆ ಅಷ್ಟು ಅಮಲು ಏರಿತೋ ಗೊತ್ತಿಲ್ಲ. ಅವನು ಕುಡಿದದ್ದು ಬರೀ ಫ್ರೂಟ್ ಜ್ಯೂಸು!'

ಮತ್ತೊಂದು ರೆಸ್ಟೋರೆಂಟ್‌ನಲ್ಲಿ ಒಬ್ಬ ವೈಟರ್ ಹೋಗುತ್ತ ಬರುತ್ತ ಸ್ವಲ್ಪ ಸ್ವಲ್ಪ ಮದ್ಯ ಕುಡಿದು ತೂರಾಡಲು ಶುರು ಮಾಡಿದ. ದೊಡ್ಡ ರೂಂನ ಮಧ್ಯದಲ್ಲಿರುವ ಅಲಂಕಾರಿಕ ದೀಪದಿಂದ ಅದೇನೋ ತೂಗುತ್ತಿರುವುದು ಕಂಡು ಬಂತು. ಅದೇನಿರಬಹುದು ಎಂದೂ ನೋಡಿದರೆ ಈ ಭೂಪ ಅಲ್ಲಿ ಜೋಕಾಲಿ ಆಡುತ್ತಿದ್ದನಂತೆ.

ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ದೊಡ್ಡ ಬಾರ್ ಒಂದರಲ್ಲಿ ಹೋದ ವರ್ಷ ನಡೆದದ್ದು ಇಂದಿಗೂ ಅಲ್ಲಿನ ಕೆಲಸಗಾರರು ನೆನೆಸಿಕೊಳ್ಳುತ್ತಾರೆ. ಅನ್‌ಲಿಮೆಟೆಡ್ ಡ್ರಿಂಕ್ಸ್ ಎಂದು ಅವರು ಘೋಷಿಸಿದ್ದರಿಂದ ವಿಪರೀತ ಜನ ಬಂದುಬಿಟ್ಟಿದ್ದರು. ಸುಮಾರು 150ಜನ ಹಿಡಿಸುವ ಬಾರ್ ನಲ್ಲಿ 900 ಜನ ತುಂಬಿದ್ದರು. ಎಲ್ಲರೂ ಜಾರಿ ಬೀಳುತ್ತಿದ್ದರು. ಕಾರಣ ಏನೆಂದರೆ ಎಲ್ಲರೂ ವಾಂತಿ ಮಾಡಿಕೊಳ್ಳುತ್ತಿದ್ದರು. `ಸ್ಲಿಪರಿ ಫ್ಲೋರ್ ಪ್ರಾಬ್ಲಮ್ ' ಎಂದು ಅಲ್ಲಿನ ಕೆಲಸಗಾರರೂ ಇಂದಿಗೂ ಮಾತಾಡಿಕೊಳ್ಳುತ್ತಾರೆ.

ಡಿಸೆಂಬರ್ 22ರಿಂದ ಹೊಸ ವರ್ಷದ ಮೊದಲ ವಾರದ ವರೆಗೂ ಎಷ್ಟೋ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ರಜ ಕೊಡುವುದಿಲ್ಲ. ಇನ್ನು ನ್ಯೂ ಇಯರ್ ಪಾರ್ಟಿ ಸಮಯದಲ್ಲಿ ಗ್ಲಾಸ್ ಗಳನ್ನು ಎತ್ತಿಟ್ಟು ಥರ್ಮೊಕಾಲ್ ಲೋಟಗಳನ್ನು ಬಳಸುತ್ತಾರೆ. ಇದಕ್ಕೆ ಎರಡು ಕಾರಣ: ತೊಳೆಯುವ ಗೋಜು ಇರುವುದಿಲ್ಲ ಮತ್ತು ನಶೆ ಏರಿದ ಅತಿಥಿಗಳು ಗ್ಲಾಸ್ ಒಡೆದು ಇರಿದುಕೊಳ್ಳುವ ಸಾಧ್ಯತೆ ಇರುವುದಿಲ್ಲ.

ಕಪ್ಪು ಸೂಟ್ ಧರಿಸ ಬಾರ್‌ಗಳ ಬಾಗಿಲಲ್ಲಿ ನಿಂತಿರುವ ಬೌನ್ಸರ್‌ಗಳ ಮುಖ್ಯ ಕೆಲಸ ಗಲಾಟೆ ಆಗದಂತೆ ನೋಡಿಕೊಳ್ಳುವುದು. ಹೊಸ ವರ್ಷದ ಪಾರ್ಟಿ ನಡೆಯುವ ಸ್ಥಳಗಳಲ್ಲಿ ಇವರಿಗೆ ಡಿಮ್ಯಾಂಡ್ ಹೆಚ್ಚಾಗಿರುತ್ತದೆ. ದಿನಕ್ಕೆ ಒಂದರಿಂದ ಒಂದೂವರೆ ಸಾವಿರ ರೂಪಾಯಿ ಸಂಪಾದಿಸುವ ಇವರು ಕೂಡ ಎಷ್ಟೋ ತಮಾಷೆಗಳನ್ನು ಕಂಡಿರುತ್ತಾರೆ.

ಬೌನ್ಸರ್ ಒಬ್ಬ ನೆನೆಸಿಕೊಂಡ ಅನುಭವ: ಕಾರ್ಪೊರೇಟ್ ಮುಖ್ಯಸ್ಥನಂತೆ ಕಂಡ ಒಬ್ಬ ಬಾತ್‌ರೂಂಗೆ ಹೋದ. ಕೆಲಸ ಮುಗಿಸಿ ಹೊರಗೆ ಬರುತ್ತಿದ್ದಂತೆ ಸೂಟ್ ಬಿಚ್ಚಿಟ್ಟ. ಅಲ್ಲೇ ನೆಲದ ಮೇಲೆ ನೆಮ್ಮದಿಯಾಗಿ ಮಲಗಿಬಿಟ್ಟ. ಬೌನ್ಸರ್‌ಗಳು ಅಲ್ಲಿಗೆ ಹೋಗಿ ಅವನನ್ನು ಎತ್ತಿಕೊಂಡು ಹೋಗಬೇಕಾಯಿತು. ಸರಿಯಾಗಿ ಕುಡಿದಿದ್ದ ಅವನು ಬಾರ್‌ನ ನೆಲವನ್ನು ತನ್ನ ಮನೆಯ ಮಲಗುವ ಕೋಣೆ ಎಂದು ತಿಳಿದಿದ್ದನಂತೆ. ಬೌನ್ಸರ್‌ಗಳಿಗೆ ದೊಡ್ಡ ತಲೆ ನೋವೆಂದರೆ ಮಹಿಳಾ ಅತಿಥಿಗಳನ್ನು ರಕ್ಷಿಸುವುದು. ಜಗಳ ಶುರು ಆದಾಗ ಮೊದಲು ಹೋಗಿ ಸಮಾಧಾನ ಪಡಿಸಲು ಪ್ರಯತ್ನಿಸುತ್ತಾರೆ.

ಅದು ಯಶಸ್ವಿ ಆಗದಿದ್ದರೆ ಒಂದೆರಡು ಏಟು ಕೊಡುತ್ತಾರೆ. ಆಗಲೂ ಗಲಾಟೆ ಶಮನ ಆಗದಿದ್ದರೆ ಪೊಲೀಸರನ್ನು ಕರೆಯುತ್ತಾರೆ. ಜಗಳ ಪಬ್ ನಿಂದ ಹೊರಗೆ ಹೋದರೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸಣ್ಣ ಪಬ್‌ನಲ್ಲಿ ಮೂರೋ ನಾಲ್ಕೋ ಬೌನ್ಸರ್ ಗಳಿರುತ್ತಾರೆ. ಊರಾಚೆ ನಡೆಯುವ ದೊಡ್ಡ ಪಾರ್ಟಿಗಳಿಗೆ 40ರಿಂದ 60 ಬೌನ್ಸರ್‌ಗಳನ್ನು ಕರೆಯುತ್ತಾರೆ.

ಒಬ್ಬ ಪಬ್ ಮಾಲೀಕ ಹೇಳುವ ಪ್ರಕಾರ, `ಅನ್‌ಲಿಮಿಟೆಡ್ ಫುಡ್ ಅಂಡ್ ಡ್ರಿಂಕ್' ಎಂದಾಗ ಅತಿಥಿಗಳು ಅತಿಯಾಗಿ ಕುಡಿಯುತ್ತರೆ. ಆದರೆ ತಿನ್ನುವುದಿಲ್ಲ! ಕುಡಿದ ಅಮಲಿನಲ್ಲಿ ಜಗಳ ಶುರು ಆದರೆ ಆಹಾರವನ್ನು ಒಬ್ಬರ ಮೇಲೆ ಒಬ್ಬರು ಎರಚಿ ಕೊಳ್ಳುತ್ತಾರೆ. ಇನ್ನು ಮಹಿಳೆಯರೂ ಜಗಳ ಆಡುವುದು ಅಪರೂಪವೇನಲ್ಲ. ಒಮ್ಮೆ ಎರಡು ಗುಂಪಿನ ಹೆಣ್ಣು ಮಕ್ಕಳು ಒಬ್ಬರನ್ನೋಬರು ಪರಚಿಕೊಂಡು ಮುಖವೆಲ್ಲ ರಕ್ತ ಮಾಡಿಕೊಂಡು ಹೊರಬಂದರಂತೆ! ಇಂಥ ತರಲೆಗಳನ್ನು ನಿಭಾಯಿಸುವ ಪೊಲೀಸರು ಹಣವಲ್ಲದೆ ವಿದೇಶಿ ಮದ್ಯ ನಿರೀಕ್ಷಿಸುತ್ತಾರಂತೆ.ಹೊಸ ವರ್ಷದ ಸಡಗರ, ರಸ್ತೆ ಅಪಘಾತಗಳ ಬಗ್ಗೆ ಕೇಳಿರುತ್ತೇವೆ. ಆದರೆ ಇಂಥ ವರದಿಗಳು ಮಾಧ್ಯಮಗಳಿಗೆ ಬರುವುದು ವಿರಳ, ಅಲ್ಲವೇ?
ಕಷಾಯದ ಸಮಯ

ಚಳಿಗಾಲದ ತೊಂದರೆಗಳು ಹಲವರನ್ನು ಬಾಧಿಸುತ್ತಿವೆ. ಗಂಟಲು ನೋವು, ನೆಗಡಿ, ಜ್ವರ ಎಲ್ಲೆಡೆ ಕಂಡುಬರುತ್ತಿದೆ. ಡಾಕ್ಟರ್ ಹತ್ತಿರ ಹೋದವರು ಪ್ಯಾರಸಿಟಮಾಲ್, ಆಂಟಿಬಯಾಟಿಕ್ಸ್ ತೆಗೆದುಕೊಳ್ಳುತ್ತಾರೆ. ಮನೆಯಲ್ಲಿ ಕಷಾಯ ಮಾಡಿಕೊಡುವ ಅಮ್ಮಂದಿರು, ಅಜ್ಜಿಯರು ಈಗ ಕಡಿಮೆಯಾಗಿದ್ದಾರೆ. ಉದ್ಯೋಗದಲ್ಲಿರುವ ಅಮ್ಮಂದಿರಿಗೆ ಕಷಾಯ ಮಾಡುವ ಸಮಯ ಇರುವುದಿಲ್ಲ. ಡಾಕ್ಟರ್ ಔಷಧಿಗೆ ಇಲ್ಲದ ಒಂದು ಗುಣ ಈ ಕಷಾಯಗಳಿಗೆ ಇರುತ್ತದೆ. ಜೀರಿಗೆ, ಮೆಣಸಿನಂಥ ಮನೆಯಲ್ಲಿ ತಕ್ಷಣ ಸಿಗುವ ಪದಾರ್ಥಗಳನ್ನು ಕುಟ್ಟಿ ತಯಾರಿಸುವ ಕಷಾಯ ಫ್ರೆಶ್ ಆಗಿ ಕುಡಿದಾಗ ಬರುವ ಬೆಚ್ಚನೆಯ ಭಾವನೆ ಡಾಕ್ಟರ ಕೊಟ್ಟ ಗುಳಿಗೆ ನುಂಗಿದಾಗ ಬರುವುದಿಲ್ಲ. ಕಷಾಯ ಮಾಡಿ ಕೊಡುವವರು ಇಲ್ಲದಿದ್ದಾಗ ಏನು ಮಾಡುವುದು? ಇಂಟರ್ನೆಟ್ ಇದ್ದೇ ಇದೆಯಲ್ಲ! ಗೂಗಲ್ ಮಾಡಿದರೆ ಬೇರೆ ಬೇರೆ ಥರದ ಕಷಾಯ ಮಾಡುವ ರಿಸಿಪಿ ಸಿಗುತ್ತದೆ. ನೋಡಿಕೊಂಡು ನೀವೇ ಮಾಡಿಕೊಳ್ಳಿ. ನೆಗಡಿ, ಜ್ವರ ಸ್ವಾವಲಂಬಿಯಾಗಿ ಎದುರಿಸಿ!


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT