ADVERTISEMENT

ಗಾಂಧಿ ಬಗ್ಗೆ ತಿಳಿಸಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST

‘ಮತ್ತೆ ಏಕೆ ಗಾಂಧಿ ಭವನ?’ ಎಂಬ ಡಿ.ಎಸ್‌.ನಾಗಭೂಷಣ ಅವರ ಲೇಖನ (ಸಂಗತ, ಜ. 16) ಸಮಯೋಚಿತವೂ ವಿಚಾರಾರ್ಹವೂ ಆಗಿದೆ. ಬಹಳಮಟ್ಟಿಗೆ ಮೂಲೆಗುಂಪಾಗುತ್ತಿರುವ ಗಾಂಧಿಯವರ ಮಾರ್ಗ, ಮೌಲ್ಯಗಳನ್ನು ಪರಿಚಯಿಸುವ ಸದುದ್ದೇಶದಿಂದ ಪ್ರತೀ ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಾಣ ಯೋಜನೆಯನ್ನು ರಾಜ್ಯ ಸರ್ಕಾರ ಯೋಚಿಸಿರಬಹುದು.

ಆದರೆ ವರ್ತಮಾನದಲ್ಲಿ ತಲೆಎತ್ತಿರುವ ಯಾವ ಭವನವೂ ಆಯಾ ವ್ಯಕ್ತಿ ಅಥವಾ ವೃತ್ತಿಯ ಮೌಲ್ಯ ಪ್ರಚಾರ ಮಾಡುತ್ತಿರುವುದು ಹಾಗೂ ಸಂವರ್ಧನೆಗಾಗಿ ಶ್ರಮಿಸುತ್ತಿರುವುದು ಬಹಳ ಕಡಿಮೆ. ಹೀಗಾಗಿ ಗಾಂಧಿ ಭವನಕ್ಕೂ ಅದೇ ಗತಿ ಬರಬಾರದು.

ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರು ಮತ್ತು ಆಸಕ್ತರ (ಮುಕ್ತವಾಗಿ ಹಾಗೂ ಯುಕ್ತವಾಗಿ ತೊಡಗಿಸಿಕೊಳ್ಳುವವರು) ಅಭಿಪ್ರಾಯ ಸಂಗ್ರಹಿಸಿ, ಅಗತ್ಯವೆಂದು ಕಂಡುಬಂದರೆ ಮಾತ್ರ ಸಾರ್ವಜನಿಕ ಹಣವನ್ನು ತೊಡಗಿಸುವುದು ಒಳ್ಳೆಯದು. ಅದಕ್ಕಿಂತ ಮೊದಲು ಶಾಲಾ ಹಂತದಲ್ಲಿ ಗಾಂಧೀಜಿಯ ಜೀವನ ಪರಿಚಯ, ಆಫ್ರಿಕಾದಲ್ಲಿ ಅವರ ಸಾಧನೆ, ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಅವರು ಕೊಟ್ಟ ತಿರುವು, ಅವರು ರೂಪಿಸಿದ್ದ ರಚನಾತ್ಮಕ ಕಾರ್ಯಗಳು, ಅವರ ಕನಸಿನ ಸಮಾಜದ ಬಗ್ಗೆ ಮಕ್ಕಳಿಗೆ ವ್ಯವಸ್ಥಿತವಾಗಿ ತಿಳಿಸಬೇಕಾಗಿದೆ.

ತತ್ವಾಧಾರಿತವಾದ, ರಾಜಕೀಯಕ್ಕೆ ಹೊರತಾದ, ಪಂಥ, ಪಂಗಡಗಳ ವ್ಯಾಪ್ತಿಗೆ ಬಾರದಿರುವ ಇಂತಹ ಘಟಕಗಳಲ್ಲಿ ತೊಡಗಿಸಿಕೊಳ್ಳುವ ಶ್ರದ್ಧಾವಂತ ಯುವ ಪೀಳಿಗೆಯನ್ನು ಗುರುತಿಸಬೇಕಾದ ಅಗತ್ಯವೂ ಇದೆ.

ಇನ್ನು ಭವನ ನಿರ್ಮಾಣ ಯೋಜನಾಧಾರಿತವಾಗದೆ ಅಗತ್ಯಾಧಾರಿತವಾದರೆ  ಮಾತ್ರ ಗುಣಾತ್ಮಕ ಬೆಳವಣಿಗೆ ಸಾಧ್ಯ. ಈಗಾಗಲೇ ಅಂಥ ಭವನ ಅಸ್ತಿತ್ವದಲ್ಲಿದ್ದು ಗಾಂಧಿಪ್ರಣೀತ ಅಂಶಗಳನ್ನು ಪ್ರಚುರಪಡಿಸುವಲ್ಲಿ ಕಾರ್ಯೋನ್ಮುಖವಾಗಿದ್ದರೆ, ಗುರುತಿಸಿ ಬೆಂಬಲಿಸುವುದು ಒಳ್ಳೆಯದು.
-ಎಲ್‌.ನರಸಿಂಹಯ್ಯ ತೊಂಡೋಟಿ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.