‘ಪ್ಯಾರ್ ಕಾ ಪೆಹಲಾ ಖತ್ ಲಿಖನೆಮೆ ವಕ್ತ್ ತೊ ಲಗತಾ ಹೈ...’ (ಮೊದಲ ಪ್ರೇಮದ ಪತ್ರ ಬರೆಯಲು ಸಮಯವಂತೂ ಬೇಕು) ಜಗಜಿತ್ ಸಿಂಗ್ ಈ ಗಜಲ್ ಹಾಡ್ತಿದ್ರ ಮನಸಿನಾಗ ನವಿಲುಗರಿಯ ನವಿರು ಸ್ಪರ್ಶದ ಅನುಭವ.
ಆದ್ರ ಖರೇ ಹೇಳಬೇಕಂದ್ರ, ಬರಿಯೂದಕ್ಕಿಂತ ತ್ರಾಸಿನ ಕೆಲಸ ಅಂದ್ರ ಕೊಡೂದು. ಯಾಕಂದ್ರ ನಾವು ಪಿ.ಜಿ. ಮಾಡೂಮುಂದ ಒಬ್ಬ ಹುಡುಗ ಇದ್ದ.
ಪತ್ರ ಬರದು ಆರು ತಿಂಗಳಾದ್ರೂ ಕೊಟ್ಟಿರಲಿಲ್ಲ. ದಿನಾಲೂ ಮಡಿಕಿ ತಗಿಯೂದು, ಓದಿ ಜೇಬಿನಾಗ ಇಟ್ಕೊಳ್ಳೂದು ಮಾಡ್ತಿದ್ದ. ಅವಾಗೆಲ್ಲ ನಮ್ಮ ಗೆಳತಿಯರ ಗುಂಪು ಇದೇ ಹಾಡನ್ನು ಹಾಡ್ತಿದ್ವಿ. ‘ಪ್ಯಾರ್ ಕಾ ಪೆಹಲಾ ಖತ್ ದೇನೆ ಮೆ ವಕ್ತ್ ತೊ ಲಗ್ತಾ ಹೈ...’ (ಮೊದಲ ಪ್ರೇಮ ಪತ್ರ ಕೊಡಲು ಕಾಲಕೂಡಬೇಕು’) ಅಂತ.
ಮಜಾ ಅಂದ್ರ ನಮ್ದು ಅಗ್ದಿ ಉಡಾಳ ಗುಂಪು. ನಾವೂ ಕ್ಲಾಸಿನಾಗ ಇದ್ದಿದ್ದಕ್ಕಿಂತ ಧಾರವಾಡದ ಲೈಬ್ರರಿ ಕ್ಯಾಂಟೀನ್ ಹತ್ರ ಟೈಮ್ ಕಳದಿದ್ದೇ ಹೆಚ್ಚು. ಹಂಗಾಗಿ ಯಾರು ಯಾರಿಗೆ ನೋಡ್ತಾರ, ಕಾಡ್ತಾರ ಎಲ್ಲಾ ನಮ್ಮ ನಜರಿನಾಗ ಇತ್ತು.
ನಯೆ ಪರಿಂದೋಕೊ ಉಡ್‌ನೆಮೆ ವಕ್ತ್ ತೊ ಲಗ್ತಾ ಹೈ...(ಮರಿಹಕ್ಕಿಗಳು ಹಾರಲು ಕಾಲ ಕೂಡಿಬರಬೇಕು) ಅದರ ಮುಂದಿನ ಸಾಲು. ಇದನ್ನೂ ನಾವು ಅಗ್ದಿ ಹಗರಗೆ ಪ್ರೀತಿ ಮಾಡ್ತೀವಿ ಅಂತ ಹೇಳ್ಕೊಂಡು, ಕಾಲೇಜು ಬಿಟ್ಟು ಅಡ್ಡಾಡೋರಿಗಂತೇ ಹೇಳ್ತಿದ್ವಿ.
ಇದೆಲ್ಲವೂ ಈ ಹಾಡಿನ ಪಲ್ಲವಿ ಮಾತ್ರ ಆತು. ಅಷ್ಟನ್ನು ಎಲ್ಲಾರಿಗೆ ಕಾಡಾಕ ಹಾಡ್ತಿದ್ವಿ. ಒಬ್ರೇ ಇದ್ದಾಗ ನಮಗೂ ಆ ಹಾಡು ಅಷ್ಟೇ ಕಾಡ್ತಿತ್ತು.
ಮುಂದಿನ ಸಾಲು ಮಾತ್ರ ಪ್ರೀತಿ ಮತ್ತು ಕಾಮದ ನಡುವಿನ ಗೆರಿ ಸ್ಪಷ್ಟ ಮಾಡಿತ್ತು. ‘ಜಿಸ್ಮ್ ಕಿ ಬಾತ್ ನಹಿ ಉನ್ ಕೆ ದಿಲ್ ತಕ್ ಪಹುಂಚ್‌ನಾ ಥಾ... ಲಂಬೀ ದೂರಿ ತೇಯ್ ಕರನೇಮೆ ವಕ್ತ್ ತೊ ಲಗ್ತಾ ಹೈ... (ದೇಹದ ಮಾತಲ್ಲ ಇದು, ಅವರ ಹೃದಯದವರೆಗೂ ಸಾಗಬೇಕಿತ್ತು/ ದೂರದ ಪಯಣ, ಇದಕ್ಕೆ ಸಮಯವಂತೂ ಬೇಕೇ ಬೇಕು).
ಅದು ಯವಾಗ ನಾವೆಲ್ಲ ಜಗಜಿತ್ ಸಿಂಗ್‌ನ ಅಭಿಮಾನಿಗಳಾಗಿದ್ದವೋ ಅವೊತ್ತಿನಿಂದಲೇ ಪ್ರೀತಿಯಂದ್ರ ಕಾಮ ಅಲ್ಲ ಅನ್ನೂದು ಪಕ್ಕಾ ಆಗಿತ್ತು. ಪ್ರೀತಿ ಅಂದ್ರ ಆರಾಧನೆ. ಒಲಿಯುವುದು, ಬಿಡುವುದು ಇಂಥ ಯಾವ ಹಟನೂ ಇರಲಿಲ್ಲ. ಅದೊಂದು ನಮೂನಿ ಮೌನ ನಲುಮೆ.
ಅಲ್ಲಿ ಯಾವುದೇ ನಿರೀಕ್ಷೆಗಳಿರಲಿಲ್ಲ. ಯಾವುದೇ ಬೇಡಿಕೆಗಳಿರಲಿಲ್ಲ. ಅಂಥದ್ದೊಂದು ಸಂಸ್ಕಾರ ಈ ಗಜಲ್‌ಗಳಿಂದ ಸಿಗ್ತಿತ್ತು. ಬರಿಯೂದಕ್ಕಿಂತನೂ ನಮ್ಮ ಕಿವಿಗೆ ತಾಕಿ, ಮನಸಿಗೆ ಮುಟ್ಟಿ, ನಮ್ಮೊಳಗೊಂದು ಸಂಸ್ಕಾರ ಮೂಡಿಸುವ ಶಕ್ತಿ ಸಂಗೀತಕ್ಕ ಮಾತ್ರ ಅದ ಅನ್ನೂದು ಖರೇವಂದ್ರೂ ಸಾಬೀತಾಗಿದ್ದು ಇಂಥವೇ ಗಜಲ್‌ಗಳಿಂದ.
ಪ್ರೀತಿ ಅನ್ನೂದೊಂದು ಸದಾ ಹರಿಯುವ ನೀರಿನ ಝರಿ ಆಗಬೇಕು. ಅದು ಧಗಧಗ ದಹಿಸಿ ಉರಿಯುವ ಪ್ರೀತಿ ಆಗಬಾರದು. ಹುಚ್ಚುತನ, ಆವೇಶ, ಆವೇಗ, ಉದ್ವೇಗ ಎಲ್ಲವೂ ಪ್ರೀತಿಯೊಳಗ ಇರಬೇಕು. ಆದ್ರ ಅವೆಲ್ಲವೂ ಔಚಿತ್ಯ ಮೀರಿದ್ರ ಅಶ್ಲೀಲ ಆಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದ್ರ ನಮ್ಮ ಪ್ರೀತಿಯನ್ನೇ ದೈವ ಅಂದ್ಕೊಂಡು ಆರಾಧಿಸುವಾಗ ಈ ಪಡೆಯುವ ಹುಚ್ಚುತನಕ್ಕ ಬೀಳೂದು ಸಾಧ್ಯವೇ ಇರಲಿಲ್ಲ.
ಈಗೀಗ ಪ್ರೀತಿ ನಿರಾಕರಿಸಿದ್ದಕ್ಕ ಮಚ್ಚಲೆ ಕೊಚ್ಚಿದ್ರು. ಆ್ಯಸಿಡ್ ಎರಚಿದ್ರು... ಇಂಥವೆಲ್ಲ ಓದೂ ಮುಂದ ಮನಸು ನಡಗ್ತದ. ಅಂಜ್ತದ. ಇದೆಂಥ ಪ್ರೀತಿ? ಪ್ರೀತಿನಾ ಇದು... ಅಂತನೂ ಅನ್ನಸ್ತದ.
ಕವಿ ರಾಜೇಂದ್ರನಾಥ್ ಬರದ ಇನ್ನೊಂದು ಹಾಡು, ‘ತೇರೆ ಖುಷ್ಬೂ ಮೆ ಬಸ್ ಖತ್ ಮೈ ಜಲಾತಾ ಕೈಸೆ...’ (ನಿನ್ನ ಮಾಧುರ್ಯದೊಳು ಅದ್ದಿದ ಪತ್ರಗಳನ್ನು ಸುಡುವುದೆಂತು?) ಅಷ್ಟು ಸೂಕ್ಷ್ಮ ಆಗಿರಬೇಕಾಗಿದ್ದ ಪ್ರೀತಿ, ತೀರ ಪ್ರೀತಿಸುವವರನ್ನೇ ಸುಡೂವಷ್ಟು ಕಠೋರ ಅಥವಾ ನಿಷ್ಕರುಣಿ ಆಗಾಕರೆ ಹೆಂಗ ಸಾಧ್ಯ?
ಇವೆಂದಿಗೂ ಉತ್ತರ ಸಿಗದ ಪ್ರಶ್ನೆಗಳು.
‘ಮೈ ಕೈಸೆ ಕಹೂಂ ಜಾನೆಮನ್, ತೇರಾ ದಿಲ್ ಸುನೆ ಮೇರಿ ಬಾತ್... ಆಂಖೋಕಿ ವೊ ಸ್ಯಾಹಿ, ಹೋಟೋಂಕಾ ಉಜಾಲಾ ತೇರಾ ದಿಲ್ ಸುನೆ ಮೇರಿ ಬಾತ್...’ ( ಹೇಗೆ ಹೇಳುವುದಿನ್ನು ಸಖಿ, ನಿನ್ನ ಕಂಗಳ ಶಾಯಿ, ತುಟಿಯ ಬೆಳಕಿನಲಿ, ನನ್ನ ಮನದ ಮಾತು ನಿನಗೆ ಕೇಳಲಿ) ಹಾಡು ಕೇಳ್ದಾಗಂತೂ ಪ್ರೀತಿ ಮಾಡೂದಕ್ಕಿಂತ, ಮಾಡ್ತೀವಿ ಅಂತ ಹೇಳೂದೇ ಭಾಳ ತ್ರಾಸಿನ ಕೆಲಸ ಅಂತ ಅನ್ನಸ್ತಿತ್ತು.
ಹಿಂಗಾಗಿ ಪ್ರೀತಿ ಅನ್ನೂದು ಬರೇ ದೂರದಿಂದ ಬಯಸೂದಷ್ಟೇ ಅಂತ ಮನದಟ್ಟಾಗ್ತಿತ್ತು.
ಖರೇ ಹೇಳಬೇಕಂದ್ರ ಹದಿಹರೆಯದ ವಯಸ್ಸಿನಾಗ ಇಂಥ ಗಜಲ್ ಅಥವಾ ಸಂಗೀತದತ್ತ ಮನಸು ಹೊರಳಲಿಲ್ಲಂದ್ರ ಒಂದು ಸಂಸ್ಕಾರದಿಂದ ನಾವು ವಂಚಿತರಾದ್ಹಂಗ.
ಈಗಿನ ಹುಡುಗರಿಗೆ ಹೃದಯದ ತನ ಸಾಗುವ ಸಂಯಮವೇ ಇಲ್ಲ. ಎಲ್ಲಾ ಪ್ರೀತಿನೂ ಕಾಮದೊಳಗ ಮುಗದೇ ಹೋಗ್ತದ. ಪ್ರೀತಿನೇ ಬಸದು ಬಿಡ್ತಾರ. ಮುಂದ, ತಾವೇ ಅವರಾಗಿ, ಅವರೇ ತಾವಾಗುವ ಆ ಸುಂದರ ಅನುಭವ ಇವರ ಅನುಭೂತಿಗೆ ದಕ್ಕೂದೆ ಇಲ್ಲ. ಯಾಕಂದ್ರ ಇವರಿಗೆಲ್ಲ ಆ ಸಂಯಮವೂ ಇಲ್ಲ. ಅಷ್ಟು ಜೀವನೋತ್ಸಾಹನೂ ಇಲ್ಲ.
ಬರೇ ಇನ್ನೊಬ್ಬರೊಂದಿಗೆ ಅಡ್ಡಾಡೂದು, ಉಣ್ಣೂದು, ತಿನ್ನೂದು, ಉಳ್ಳಾಡೂದು ಇಷ್ಟೆ ಪ್ರೀತಿ ಅಂದ್ಕೊಂಡಾರ. ಒಂದು ಸಂಜಿ ಕೈ ಹಿಡಕೊಂಡು, ಮಾತಾಡಲಾರದೆ ಒಂದಷ್ಟು ಹೆಜ್ಜಿ ನಡಿಯೂ ಸುಖ ಎಷ್ಟು ಮಂದಿಗೆ ಗೊತ್ತು?
ನಡು ಮಧ್ಯಾಹ್ನ ಸೂರ್ಯನ ಬಿಸಿಲಿಗಿಂತನೂ ಹೊಳಪಿರುವ ಪ್ರೇಮಿಯ ಕಣ್ಣಿನೊಳಗ ಇಣುಕಿ, ಇಡೀ ಜಗತ್ತು ಮರಿಯೂವಷ್ಟು ಸಮಯ ಯಾರಿಗೈತಿ... ಕಣ್ಣಾಗ ಕಣ್ಣು ನೆಡೂದ್ರೊಳಗ, ಜೇಬಿನಾಗಿದ್ದ ಕೂಸು, ಮೊಬೈಲ್ ಫೋನು ಕುಂಯ್‌ಗುಡ್ತದ. ಅಲ್ಲಿಗೆ ಪ್ರೀತಿಯ ಆ ತಂತಿ ಮೀಟುವ ಮೊದಲೇ ಕಡಿದು ಹೋಗಿರ್ತದ.
ಇಲ್ಲೇ ಪ್ರೀತಿಯ ಹದ ತಪ್ಪೂದು. ಎರಡು ಹೃದಯ ಬೆಸೀಬೇಕಂದ್ರ ಅವು ಕಾಯಬೇಕು. ಆ ಕಾವಿನೊಳಗ ಬಂಗಾರದಂಥ ಪ್ರೀತಿ ಹೊರಬರಬೇಕು. ಪ್ರತಿ ನೋವಿನ ನಂತರವೂ ಅಲ್ಲೊಂದು ಪ್ರೀತಿನೇ ಮೊಳಕಿಯೊಡೀಬೇಕು.
ಒಂದೇ ಒಂದು ಸಣ್ಣ ಜಗಳ, ಅಸಮಾಧಾನ, ಸಿಡಿದು ಬೇರೆ ಆಗಬೇಕು ಅನ್ನುವಷ್ಟು ರೋಷ ಉಕ್ಕಿದ್ರ ಅದಕ್ಕೇನು ಅಂತಾರ? ಏನು ಅನ್ಬೇಕು? ಒಬ್ರು ಪ್ರೀತಿ ಮಾಡೂದಿಲ್ಲ ಅಂದ್ರ ಅದು ಅವರ ಆಯ್ಕೆ. ಅದನ್ನು ಗೌರವಿಸುವಷ್ಟು ಕನಿಷ್ಠ ಗುಣನೂ ಇರಲಿಲ್ಲಂದ್ರ... ಅವರ ಒಂದು ನಿರ್ಣಯವನ್ನೇ ಒಪ್ಪಿಕೊಳ್ಳಾಕ ಆಗದವರು ಇನ್ನ ಅವರನ್ನು ಒಪ್ಕೊಳ್ಳೂದು ಸಾಧ್ಯ ಐತೇನು? ಇಂಥವೇ ವಾದಸರಣಿಯನ್ನು ಮುಂದಿಟ್ಕೊಂತ ಹೋದ್ರ ನಾವು ಯಾರೂ ಯಾರಿಗೂ ಪ್ರೀತಿ ಮಾಡಾಕ ಆಗೂದಿಲ್ಲ ಅಂತ ಅನಸಾಕ ಸುರು ಆಗ್ತದ.
ಪ್ರೀತಿ ಅಂದ್ರ... ‘ಅಗರ್ ಹಮ್ ಕಹೆ ಔರ್ ವೊ ಮುಸ್ಕುರಾಯೆ, ಉನ್‌ಕೆ ಲಿಯೇ ಜಿಂದಗಾನಿ ಲುಟಾದೆ’ (ಒಂದು ವೇಳೆ, ನಾ ಹೇಳಿದಾಗ, ಅವರು ಮುಗುಳ್ನಕ್ಕರೆ, ಅವರಿಗಾಗಿ ಜೀವನವೇ ಮುಡಿಪು) ಅನ್ನುವಂಥ ಉತ್ಕಟ ಕೋಮಲ ಭಾವ.
ನಾನು–ನೀನು ಅನ್ನುವ ಹಪಾಹಪಿ ಇರದೇ, ನಾನೇ ನೀನು... ನೀನೇ ನಾನು... ಮತ್ತ ಬರೇ ನಾವು ಅನ್ನುವಂಥ ಸೂತ್ರ ಬಂತಂದ್ರ ಅದು ಪ್ರೀತಿ. ಅದೇ ಪ್ರೀತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.