ADVERTISEMENT

ಕುಲಾಂತರಿ ಸಾಸಿವೆ ಇಂದಿನ ಅಗತ್ಯವೇ?

ದೇಸಿ ಕುಲಾಂತರಿ ಬೀಜವು ದೇಶದ ಹೆಮ್ಮೆಯ ಸಂಕೇತ ಎಂಬ ವಾದದ ನಡುವೆಯೇ ಅದರ ವಿರುದ್ಧದ ಕೂಗೂ ತೀವ್ರವಾಗಿದೆ

ವಿ.ಗಾಯತ್ರಿ
Published 4 ಅಕ್ಟೋಬರ್ 2016, 19:30 IST
Last Updated 4 ಅಕ್ಟೋಬರ್ 2016, 19:30 IST
ಕುಲಾಂತರಿ ಸಾಸಿವೆ ಇಂದಿನ ಅಗತ್ಯವೇ?
ಕುಲಾಂತರಿ ಸಾಸಿವೆ ಇಂದಿನ ಅಗತ್ಯವೇ?   

ಕುಲಾಂತರಿ ಬೀಜಗಳಿಂದ ನಮ್ಮ ಬೀಜ ಸ್ವಾತಂತ್ರ್ಯ ನಾಶವಾಗಿ ಬಹುರಾಷ್ಟ್ರೀಯ ಕಂಪೆನಿಗಳ ಏಕಸ್ವಾಮ್ಯತೆಗೆ ದಾರಿಯಾಗುತ್ತದೆ ಎಂಬ ಕಾರಣಕ್ಕೆ ಅದನ್ನು ವಿರೋಧಿಸಲಾಗುತ್ತದೆ ಎಂಬುದು ಸಾಮಾನ್ಯ ಅಭಿಪ್ರಾಯ. ಹಾಗಾದರೆ ದೆಹಲಿ ವಿಶ್ವವಿದ್ಯಾಲಯವೇ ಅಭಿವೃದ್ಧಿಪಡಿಸಿ, ದೇಶದ ಅತ್ಯುಚ್ಚ ನಿಯಂತ್ರಕ ಸಂಸ್ಥೆಯಾದ ಜಿಇಎಸಿಯ (Genetic Engineering Appraisal Committee) ಅನುಮೋದನೆ ಪಡೆದ ಡಿಎಮ್‌ಎಚ್- 11 (ಧಾರಾ ಮಸ್ಟರ್ಡ್ ಹೈಬ್ರಿಡ್– 11)  ಎನ್ನುವ ‘ದೇಸಿ’ ಕುಲಾಂತರಿ ಸಾಸಿವೆ ಇದೀಗ ತೀವ್ರ ವಿವಾದಕ್ಕೆ ಸಿಕ್ಕಿಕೊಂಡದ್ದಾದರೂ ಹೇಗೆ?

ಈ ದೇಸಿ ಕುಲಾಂತರಿ ಬೀಜವನ್ನು ದೇಶದ ಹೆಮ್ಮೆಯ ಸಂಕೇತವೆಂದು ಬಿಂಬಿಸುತ್ತಿದ್ದ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಈ ವಿಚಾರದಲ್ಲಿ ಸಾರ್ವಜನಿಕ ಅಭಿಪ್ರಾಯ ಕೋರಿ 30 ದಿನಗಳ, ಅಂದರೆ ಇಂದಿನವರೆಗೆ (ಅ. 5) ಅವಕಾಶ ನೀಡಿದೆ. 2010ರಲ್ಲಿ ಹೀಗೆಯೇ ಬಿಡುಗಡೆಗೆ ಅನುಮೋದನೆ ಪಡೆದಿದ್ದ ಕುಲಾಂತರಿ ಬದನೆಗೆ ತಡೆ ತರುವಲ್ಲಿ ಆಗಿನ ಪರಿಸರ ಮತ್ತು ಅರಣ್ಯ ಸಚಿವ ಜೈರಾಂ ರಮೇಶ್ ಕ್ರಿಯಾಶೀಲ ಪಾತ್ರ ವಹಿಸಿದ್ದರು. ಆಗ ಬದನೆಯಲ್ಲಿ ಮುಗಿದಿದ್ದ ಕುಲಾಂತರಿ ಆಹಾರ ಬೆಳೆಯ ಅಧ್ಯಾಯ ಈಗ ಸಾಸಿವೆಯಲ್ಲಿ ಮತ್ತೆ ತೆರೆದುಕೊಂಡಿದೆ.

ಕುಲಾಂತರಿ ಸಾಸಿವೆಯನ್ನು ಏಕೆ ಬೆಂಬಲಿಸಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಇಂತಿದೆ. ಮೊದಲನೆಯದಾಗಿ, ಇದು ಸಾರ್ವಜನಿಕ ವಲಯ ಈ ದೇಶದ ಜನರ ದುಡ್ದಿನಿಂದ ಅಭಿವೃದ್ಧಿಪಡಿಸಿರುವುದೇ ಹೊರತು ಬಹುರಾಷ್ಟ್ರೀಯ ಕಂಪೆನಿಯ ಕೂಸಲ್ಲ. ಎರಡನೆಯದಾಗಿ, ಭಾರತ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಕಳೆದುಕೊಂಡಿದ್ದು ಪ್ರತಿವರ್ಷ 65 ಸಾವಿರ ಕೋಟಿ ರೂಪಾಯಿಯ ತೈಲ ಆಮದು ಮಾಡಿಕೊಳ್ಳುತ್ತಿದೆ.

ಈ ಕುಲಾಂತರಿ ಸಾಸಿವೆ ಈಗಿರುವ ತಳಿಗಳಿಗಿಂತ 35% ಹೆಚ್ಚು ಇಳುವರಿ ಕೊಡುವುದರಿಂದ ಉತ್ಪಾದನೆ ಹೆಚ್ಚಾಗಿ ತೈಲ ಆಮದಿನಲ್ಲಿ ಗಣನೀಯ ಕಡಿತ ಮಾಡಬಹುದು. ಮೂರನೆಯದಾಗಿ, ಬಿಡುಗಡೆಗೆ ಸಿದ್ಧವಾಗಿರುವ ಈ ಕುಲಾಂತರಿ ಸಾಸಿವೆ ಮಾನವ, ಪರಿಸರ, ಪಶುಪಕ್ಷಿ- ಕೀಟಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವುದಿಲ್ಲವೆಂದು ಸಾಬೀತಾಗಿದೆ. ಆದರೆ ವಾಸ್ತವವೇ ಬೇರೆಯಿದ್ದು ಈ ಎಲ್ಲಾ ವಿಚಾರಗಳು ಸತ್ಯಕ್ಕೆ ದೂರವಾಗಿರುವುದರಿಂದಲೇ ಇದನ್ನು ನಿಷೇಧಿಸಬೇಕೆಂಬ ಕೂಗು ಮುಗಿಲು ಮುಟ್ಟುತ್ತಿರುವುದು.

ಮೊದಲನೆಯದಾಗಿ, ಈ ಕುಲಾಂತರಿ ಸಾಸಿವೆಯನ್ನು ನಮ್ಮ ಸ್ವಂತ ನೆಲದಲ್ಲಿ ಅಭಿವೃದ್ಧಿಪಡಿಸಿದ್ದರೂ ಇದಕ್ಕೆ ಸೇರಿಸಿರುವ ವಂಶವಾಹಿಯ (ಜೀನ್) ಹಕ್ಕುಸ್ವಾಮ್ಯ ಇರುವುದು ‘ಬಾಯರ್ ಆಗ್ರೋ ಸೈನ್ಸಸ್’ ಎನ್ನುವ ಜರ್ಮನಿ ಮೂಲದ ಬಹುರಾಷ್ಟ್ರೀಯ ಕಂಪೆನಿ ಬಳಿ. ಈ ಡಿಎಂಎಚ್- 11 ಎನ್ನುವ ಕುಲಾಂತರಿ ಸಾಸಿವೆ ಬರ್ನೆಸ್, ಬರ್‌ಸ್ಟರ್, ಬಾರ್ ಎಂಬ ಮೂರು ವಂಶವಾಹಿ ವ್ಯವಸ್ಥೆ ಹೊಂದಿದೆ.

ಇಲ್ಲಿ ಫಲಹೀನ ಗಂಡು ಸಸ್ಯಗಳನ್ನು ಅಭಿವೃದ್ಧಿಪಡಿಸಲು ಬರ್ನೆಸ್-ಬರ್‌ಸ್ಟರ್ ವಂಶವಾಹಿ ಪದ್ಧತಿ ಬಳಸಿದ್ದರೆ, ಗ್ಲುಫೊಸಿನೇಟ್ ಎಂಬ ಕಳೆನಾಶಕದ ಸಹಿಷ್ಣುತೆಗೆ ಬಾರ್ ವಂಶವಾಹಿಯನ್ನು ಸೇರಿಸಲಾಗಿದೆ. 2002ರಲ್ಲಿ ಇದೇ ಬಾಯರ್ (ಪ್ರೊ- ಆಗ್ರೊ) ಕಂಪೆನಿ ಇದೇ ವಂಶವಾಹಿ ವ್ಯವಸ್ಥೆ ಹೊಂದಿದ ಕುಲಾಂತರಿ ಸಾಸಿವೆ ಬಿಡುಗಡೆಗೆ ಅರ್ಜಿ ಸಲ್ಲಿಸಿದಾಗ ಜೈವಿಕ ತಂತ್ರಜ್ಞಾನ ಇಲಾಖೆ ಅದನ್ನು ತಿರಸ್ಕರಿಸಿತ್ತು (ಈಗಲೂ ಇಂತಹ ಹತ್ತಾರು ಕಳೆನಾಶಕ ಸಹಿಷ್ಣು ಕುಲಾಂತರಿ ಬೆಳೆಗಳನ್ನು ತಡೆಹಿಡಿಯಲಾಗಿದೆ).

ಕಳೆನಾಶಕ ಸಹಿಷ್ಣು ವಂಶವಾಹಿಗಳ 100% ಹಕ್ಕನ್ನು ಬಾಯರ್ ಕಂಪೆನಿ ಹೊಂದಿದೆ. ಈ ಕುಲಾಂತರಿ ಸಾಸಿವೆಗೆ ಸೇರಿಸಿರುವ ವಂಶವಾಹಿಗಳ ಹಕ್ಕುಸ್ವಾಮ್ಯ ಕೂಡ ಬಾಯರ್‌ಗೇ ಸೇರುತ್ತದೆ. ಮುಂದೊಂದು ದಿನ ಈ ‘ದೇಸಿ’  ಕುಲಾಂತರಿ ಸಾಸಿವೆಯ ಹಕ್ಕುಸ್ವಾಮ್ಯ ನನ್ನದು ಎಂದು ಬಾಯರ್ ಅದನ್ನು ಕಬಳಿಸಬಹುದು.

ದೆಹಲಿ ವಿಶ್ವವಿದ್ಯಾಲಯದ ಡಾ. ಪೆಂತಾಲ್ ಅವರು ಕುಲಾಂತರಿ ಸಾಸಿವೆ ಅಭಿವೃದ್ಧಿಗೆ ಜಿಇಎಸಿಗೆ ಅರ್ಜಿ ಸಲ್ಲಿಸಿದಾಗ, ಅದಕ್ಕೆ ಕಳೆನಾಶಕ ಸಹಿಷ್ಣು ವಂಶವಾಹಿ ಸೇರಿಸಲಾಗುತ್ತದೆ ಎಂಬ ವಿಚಾರವನ್ನೇ ಹೇಳಿರಲಿಲ್ಲ. ಇದನ್ನು ವಾಣಿಜ್ಯವಾಗಿ ಬೆಳೆಯಲು ಅನುಮೋದನೆ ನೀಡಿದಾಗಲೂ ಜಿಇಎಸಿಗೆ ಈ ವಿಚಾರ ಗೊತ್ತಿರಲಿಲ್ಲ! ಕಳೆನಾಶಕ ಸಹಿಷ್ಣು ಕುಲಾಂತರಿ ತಂತ್ರಜ್ಞಾನ ಮಹಾ ಅಪಾಯಕಾರಿ. 2012ರಲ್ಲಿ ಲೋಕಸಭೆಯ ಸ್ಥಾಯಿ ಸಮಿತಿ ಮತ್ತು 2013ರಲ್ಲಿ ಸುಪ್ರೀಂ ಕೋರ್ಟ್‌ನ ತಾಂತ್ರಿಕ ತಜ್ಞ ಸಮಿತಿಗಳೆರಡೂ, ಈ ತಂತ್ರಜ್ಞಾನವನ್ನು ಭಾರತದಲ್ಲಿ ಉಪಯೋಗ ಮಾಡಕೂಡದು ಎಂದು ಬಲವಾಗಿ ಶಿಫಾರಸು ಮಾಡಿದ್ದವು.

ಕುಲಾಂತರಿ ಸಾಸಿವೆ ಬೆಳೆಗೆ ಗ್ಲುಫೊಸಿನೇಟ್ ಕಳೆನಾಶಕ ಕಡ್ಡಾಯವಾಗಿ ಹೊಡೆಯಬೇಕಾಗಿರುತ್ತದೆ. ಪ್ರಪಂಚದಾದ್ಯಂತ ಅನೇಕ ದೇಶಗಳು ಗ್ಲುಫೊಸಿನೇಟನ್ನು ನಿಷೇಧಿಸಿರುವುದರಿಂದ ಭಾರತದಲ್ಲಿ ಕುಲಾಂತರಿ ಸಾಸಿವೆಯ ಮೂಲಕ ಲಾಭ ದೋಚಿಕೊಳ್ಳಲು ಬಾಯರ್ ಈ ಹುನ್ನಾರ ನಡೆಸಿದೆ. ಹಾಗಾಗಿ ಬಾಯರ್ ಕಂಪೆನಿಯ ಜೊತೆ ವಂಶವಾಹಿ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿ ಡಾ. ಪೆಂತಾಲ್ ಮಾಡಿಕೊಂಡ ಒಪ್ಪಂದ ಬಹಿರಂಗಪಡಿಸಬೇಕು ಎಂದು ಇದರ ವಿರೋಧಿಗಳು ಒತ್ತಾಯಿಸುತ್ತಿದ್ದಾರೆ.

ಈ ಕಳೆನಾಶಕ ಸಹಿಷ್ಣು ವಂಶವಾಹಿಯನ್ನು ಹೊಂದಿರುವ ಮೂಲ ಬೀಜಗಳನ್ನು ಬಳಸಿ ಲೆಕ್ಕವಿಲ್ಲದಷ್ಟು ಸಂಕರಣ ತಳಿಗಳನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ಎಷ್ಟರ ಮಟ್ಟಿಗಿನ ಮಾಲಿನ್ಯ ಉಂಟಾಗುತ್ತದೆ ಎಂಬುದು ಊಹಿಸಲು ಅಸಾಧ್ಯ. ಎರಡನೆಯದಾಗಿ, ಕುಲಾಂತರಿ ಸಾಸಿವೆಯಿಂದ ಇಳುವರಿ ಹೆಚ್ಚಾಗಿ ಖಾದ್ಯತೈಲ ಆಮದಿನಲ್ಲಿ ಕಡಿತವಾಗುತ್ತದೆ ಎನ್ನುವುದು.

1980ರ ದಶಕದಲ್ಲಿ ಖಾದ್ಯ ತೈಲ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಹೊಂದಿದ್ದ ಭಾರತ ನಂತರ ಅದನ್ನು ಕಳೆದುಕೊಳ್ಳಲು ಉತ್ಪಾದನೆ ಕಡಿಮೆಯಾದದ್ದು ಕಾರಣವಲ್ಲ, 1991ರ ಹೊಸ ಆರ್ಥಿಕ ನೀತಿ, ಭಾರತ ಡಬ್ಲ್ಯುಟಿಒ ಸೇರಿದ್ದು ಮತ್ತು 1994ರಲ್ಲಿ ಆಹಾರ ಪದಾರ್ಥಗಳ ಆಮದಿನ ಮೇಲೆ ಪ್ರಮಾಣಾತ್ಮಕ ನಿರ್ಬಂಧ ತೆಗೆದುಹಾಕಿದ್ದು ಕಾರಣ.

ಇದರಿಂದ ಭಾರತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಸಿವೆಯ ಬೆಲೆಯಲ್ಲಿ ದೊಡ್ಡ ವ್ಯತ್ಯಾಸ ಉಂಟಾಯಿತು. 1994-97ರ ಅವಧಿಯಲ್ಲಿ ಭಾರತದಲ್ಲಿ ಸಾಸಿವೆ ಬೆಲೆ ಟನ್ನಿಗೆ ಗರಿಷ್ಠ ₹ 63,500 (962.3 ಡಾಲರ್) ಇದ್ದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ  ₹ 40,700 (617 ಡಾಲರ್) ಇತ್ತು. ಇದರಿಂದ ಭಾರತದ ರೈತರು ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಹೊರಗುಳಿಯುವಂತಾಯಿತು. ಬೆಲೆ ಕುಸಿತದಿಂದ ಭಾರತದ ಸಾಸಿವೆ ಬೆಳೆಗಾರರು ₹ 1.09 ಲಕ್ಷ ಕೋಟಿ ನಷ್ಟ ಅನುಭವಿಸಬೇಕಾಯಿತು. ಇಲ್ಲಿನ ಸಾಸಿವೆ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಗಿಂತ 27% ಹೆಚ್ಚಿದೆ.

ಭಾರತದಲ್ಲಿ ಎಣ್ಣೆಕಾಳು ಬೆಳೆಗಾರರಿಗೆ ಸಿಗುವ ಕಿಲುಬುಕಾಸಿನ ಸಬ್ಸಿಡಿಗೂ ಯುರೋಪಿಯನ್ ದೇಶಗಳಲ್ಲಿನ ಸಬ್ಸಿಡಿಗೂ ಅಜಗಜದ ವ್ಯತ್ಯಾಸ ಇರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಕ್ತ ಸ್ಪರ್ಧೆ ಅಸಾಧ್ಯ. ಹೀಗಾಗಿ 1998ರ ವೇಳೆಗೆ ಭಾರತ ಸ್ವಾವಲಂಬನೆ ಕಳೆದುಕೊಂಡು ಪ್ರಪಂಚದಲ್ಲೇ ದೊಡ್ಡ ಎಣ್ಣೆ ಆಮದುದಾರ ದೇಶ ಎನಿಸಿಕೊಂಡಿತು. ಇಲ್ಲಿನ ಸಾಸಿವೆ ಮತ್ತು ಇತರ ಎಣ್ಣೆಕಾಳುಬೇಸಾಯದಲ್ಲಿ ತೀವ್ರ ಸ್ಥಗಿತ ಉಂಟಾಯಿತು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಪ್ರಕಾರ, 2005- 15ರ ಅವಧಿಯಲ್ಲಿ ಭಾರತದ ಎಣ್ಣೆ ಆಮದು ಮೂರುಪಟ್ಟಾಯಿತು. ಇವತ್ತು ಭಾರತ 1.45 ಕೋಟಿ ಟನ್ ಖಾದ್ಯ ತೈಲ ಆಮದು ಮಾಡಿಕೊಳ್ಳುತ್ತಿದೆ. ದೇಶ ಇಂದು ರಿಫೈನ್ಡ್ ಆಯಿಲ್ ಅನ್ನು ಕಚ್ಚಾತೈಲ ಮಾತ್ರವಲ್ಲ, ಎಣ್ಣೆಕಾಳುಗಳಿಗಿಂತ ಕಡಿಮೆ ದರದಲ್ಲಿ ಆಮದು ಮಾಡಿಕೊಳ್ಳುತ್ತಿದೆ!  ಇದರ ಬಹುಪಾಲು ಪಾಮ್‌ಆಯಿಲ್ ಆಗಿದೆಯೇ ವಿನಾ ಸಾಸಿವೆ ಎಣ್ಣೆಯಲ್ಲ.

ಹೀಗಾಗಿ ತೈಲ ಆಮದು ವೆಚ್ಚ  ಕಡಿಮೆ ಮಾಡುವುದು ಉತ್ಪಾದನೆಗೆ ಸಂಬಂಧಿಸಿದ್ದಲ್ಲ, ಮಾರಾಟ ನೀತಿಗೆ ಸಂಬಂಧಿಸಿದ್ದಾಗಿದ್ದು ಸಮಸ್ಯೆಗೆ ಉತ್ತರ ಇರುವುದು ಕುಲಾಂತರಿ ಸಾಸಿವೆಯಲ್ಲಲ್ಲ, ಮಾರಾಟ ನೀತಿಗಳನ್ನು ಸರಿಪಡಿಸುವಲ್ಲಿ. ಅಷ್ಟಕ್ಕೂ ಇಂದು ಭಾರತದ ರೈತರು ಬಳಸುತ್ತಿರುವ ಬೀಜಗಳು ಉತ್ತಮ ಇಳುವರಿಯನ್ನೇ ಕೊಡುತ್ತಿವೆ.

ವಿಷಮುಕ್ತ ರೀತಿಯಲ್ಲಿ ಬೆಳೆದಾಗ ಜೇನುಹುಳುಗಳು ಅಪಾರವಾಗಿ ಆಕರ್ಷಿತವಾಗಿ 30% ಇಳುವರಿ ಹೆಚ್ಚುವುದರಲ್ಲಿ ಯಾವ ಅನುಮಾನವೂ ಇಲ್ಲ.ಮೂರನೆಯದು, ಕುಲಾಂತರಿ ಸಾಸಿವೆ ಸುರಕ್ಷಿತ ಎನ್ನುವ ಪ್ರತಿಪಾದನೆ. ಈ ಸಾಸಿವೆ ಕಳೆನಾಶಕ ಸಹಿಷ್ಣು ಎನ್ನುವಾಗಲೇ ಅಪಾಯದ ಗಂಟೆ ಬಾರಿಸಿಯಾಯಿತು. ಭಾರತದಲ್ಲಿ ಇದರ ದುಷ್ಪರಿಣಾಮ ಕಂಡುಹಿಡಿಯುವ ವ್ಯವಸ್ಥೆ ಇಲ್ಲವೇ ಇಲ್ಲ.

ಪ್ರಪಂಚದಾದ್ಯಂತ ವೈಜ್ಞಾನಿಕವಾಗಿ ಸಾಬೀತಾಗಿರುವಂತೆ, ಗ್ಲುಫೊಸಿನೇಟ್ ಕಳೆನಾಶಕವು ಜೇನುನೊಣಗಳ ನರಕೋಶ, ಸಂತಾನೋತ್ಪತ್ತಿ ಅಂಗಗಳ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಭಾರತದ ಏಳು ರಾಜ್ಯಗಳ ಜೇನು ಉತ್ಪಾದಕರ ಮಹಾಮಂಡಳಿಯ ಪ್ರಕಾರ, ನಮ್ಮಲ್ಲಿ 90 ಸಾವಿರ ಟನ್ ವಾರ್ಷಿಕ ಜೇನು ಉತ್ಪಾದನೆಯಿದ್ದು ಇದರ ಶೇ 60ಕ್ಕೂ ಹೆಚ್ಚು ಸಾಸಿವೆ ಹೊಲದಿಂದ ಬರುತ್ತಿದೆ.

ವಾರ್ಷಿಕವಾಗಿ 35 ಸಾವಿರ ಟನ್ ರಫ್ತಾಗುತ್ತಿದ್ದು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ. ಜೇನು ಕೃಷಿಕರ ಅನುಭವದಂತೆ ಬಿ.ಟಿ. ಹತ್ತಿ ಬಂದ ನಂತರ ಜೇನುಹುಳುಗಳು ಹತ್ತಿ ಹೊಲಕ್ಕೆ ಹೋಗುವುದನ್ನು ಬಿಟ್ಟವು. ದಿನಕ್ಕೆ 20 ಕೆ.ಜಿ.ಯಷ್ಟು ಉತ್ಪಾದನೆಯಾಗುತ್ತಿದ್ದ ಜೇನುತುಪ್ಪ ಒಂದು ತೊಟ್ಟೂ ಸಿಗದಂತಾಯಿತು. ಹೀಗಾಗಿ ಬಿ.ಟಿ. ಹತ್ತಿ ಹೊಲದ ಆಸುಪಾಸಿನಲ್ಲಿ ಜೇನು ಕೃಷಿ ಮಾಡುವುದನ್ನೇ ನಿಲ್ಲಿಸಬೇಕಾಯಿತು. ಇನ್ನು ಕುಲಾಂತರಿ ಸಾಸಿವೆ ಬಂದುಬಿಟ್ಟರೆ ದೇಶದ ಜೇನು ಕೃಷಿಯ ಮೇಲೆ ದೊಡ್ಡ ಹೊಡೆತವೇ ಬೀಳುತ್ತದೆ.

ಈ ಉದ್ಯಮದಲ್ಲಿ ಒಳಗೊಂಡಿರುವ ಐದು ಲಕ್ಷ ಜೇನು ಕೃಷಿಕರು ಉದ್ಯೋಗ ಕಳೆದುಕೊಳ್ಳುವಂತಹ ಸ್ಥಿತಿ ಎದುರಾಗುತ್ತದೆ. ಅಲ್ಲದೆ ದೇಶದ  ಬಹುಪಾಲು ಜೇನುತುಪ್ಪವನ್ನು ಆಮದು ಮಾಡಿಕೊಳ್ಳುವ ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕ ಕುಲಾಂತರಿ ಮುಕ್ತ ದೃಢೀಕರಣ ಪಡೆದ ಜೇನುತುಪ್ಪವನ್ನು ಮಾತ್ರ ಕೊಳ್ಳುತ್ತವೆ. 

ಇದಕ್ಕೆ ಸಮಜಾಯಿಷಿ ಕೊಡುವ ದೀಪಕ್ ಪೆಂತಾಲ್, ‘ನಮ್ಮ ಕ್ಷೇತ್ರ ಪ್ರಯೋಗದ ಸಮಯದಲ್ಲಿ ಜೇನುನೊಣಗಳು ಎಂದಿನಂತೆ ಹೂವಿಗೆ ಬರುತ್ತಿದ್ದವು’ ಎನ್ನುತ್ತಾರೆ. ಅಷ್ಟಕ್ಕೂ ಇವರು ಕೈಗೊಂಡದ್ದು ಒಂದೇ ಹಂಗಾಮಿನ ಕ್ಷೇತ್ರ ಪ್ರಯೋಗ. ಹಿರಿಯ ವಿಜ್ಞಾನಿ ಪುಷ್ಪ ಭಾರ್ಗವ, ‘ಇಂಥ ಪರಿಣಾಮಗಳು ತಕ್ಷಣ ತೋರ್ಪಡುವುದಿಲ್ಲ. ಯಾವುದೇ ಕುಲಾಂತರಿ ಬೆಳೆಯನ್ನು ಪರಿಸರಕ್ಕೆ ಬಿಡುವ ಮೊದಲು 30  ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಬೇಕು ಎನ್ನುತ್ತಾರೆ.

ಆದರೆ ಈ ಕುಲಾಂತರಿ ಸಾಸಿವೆ ವಿಚಾರದಲ್ಲಿ ಯಾವುದೇ ಜೀವ ಸುರಕ್ಷಕ ಪರೀಕ್ಷೆಗಳೂ ಪೂರ್ಣಗೊಂಡಿಲ್ಲ. ಅಪೂರ್ಣ ಪ್ರಯೋಗಗಳನ್ನೇ ಒಳಗೊಂಡಿದ್ದ 4 ಸಾವಿರ  ಪುಟಗಳ ‘ಬಯೋಸೇಫ್ಟಿ ಡೋಸಿಯರ್’ ಅನ್ನು ಪೆಂತಾಲ್ ಸಲ್ಲಿಸಿದರೂ ಜಿಇಎಸಿ ಅದನ್ನು ಪರಿಶೀಲಿಸದೆ ‘ಕುಲಾಂತರಿ ಸಾಸಿವೆ ಸುರಕ್ಷಿತವಾಗಿದೆ’ ಎಂದು ಘೋಷಿಸಿಬಿಟ್ಟಿತು.

ನಾಗರಿಕ ಸಮಾಜದಿಂದ ಒತ್ತಡ ಹೆಚ್ಚಾದ ನಂತರ ಕೇಂದ್ರ ಮಾಹಿತಿ ಆಯೋಗವು ಪರಿಸರ ಸಚಿವಾಲಯಕ್ಕೆ ಜೀವ ಸುರಕ್ಷತಾ ವಿವರ ಬಿಡುಗಡೆಗೆ  ಆದೇಶಿಸಿತು.ಆನಂತರವೇ ಇದೇ ಜನವರಿಯಲ್ಲಿ ಜಿಇಎಸಿಯು ಒಂದು ಉಪಸಮಿತಿ ರಚಿಸಿ ಅದರ ವರದಿ ತೆಗೆದುಕೊಂಡಿತು. ಅದನ್ನು ಓದಲು ಹೋಗದೆ 133 ಪುಟಗಳ ಸಂಕ್ತಿಪ್ತ ದಾಖಲೆಯೊಂದರಲ್ಲಿ ಅದನ್ನು ಸೇರಿಸಿ, ಪರಿಸರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಸಾರ್ವಜನಿಕರ ಅಭಿಪ್ರಾಯ ಕೋರಿತು.

ಇದನ್ನು ಓದಿದಾಗ ನಮಗೆ ಅವರು ಕೈಗೊಂಡಿರಬಹುದಾದ ಸುರಕ್ಷತಾ ಪರೀಕ್ಷೆಗಳ ಕಲ್ಪನೆ ಸಿಗುವುದಿಲ್ಲ. ‘ಕುಲಾಂತರಿ ಸಾಸಿವೆ ಮಾನವ ಮತ್ತು ಪ್ರಾಣಿಗಳ ಆಹಾರದ ದೃಷ್ಟಿಯಿಂದ ಸುರಕ್ಷಿತ ಮತ್ತು ಪರಿಸರಕ್ಕೆ ಇದರಿಂದ ಹಾನಿ ಇಲ್ಲ’ ಎಂದು ಹೇಳಿ, ಕೊನೆಗೆ ‘ಜೇನುನೊಣಗಳುಮತ್ತು ಆಸುಪಾಸಿನ ಕೀಟ ಸಂತತಿಗಳ ಮೇಲೆ ಯಾವ ರೀತಿಯ ಪರಿಣಾಮವಾಗುತ್ತದೆ ಎಂಬ ಬಗ್ಗೆ ಹೆಚ್ಚಿನ ಅಧ್ಯಯನ ಬೇಕು’ ಎಂದು ಹೇಳಲಾಗಿದೆ. ಅಂದರೆ ಈಗ ನಡೆದಿರುವ ಪರೀಕ್ಷೆಗಳು ಅಪೂರ್ಣ ಎಂದು ಪರೋಕ್ಷವಾಗಿ ಘೋಷಿಸಿಕೊಂಡಿದೆ. ಜಿಇಎಸಿಯಲ್ಲಿ ಇರುವ ಬಹುಪಾಲು ಸದಸ್ಯರು ದ್ವಂದ್ವನೀತಿ ಉಳ್ಳವರು ಮತ್ತು ಅವರು ಸಭೆಗಳಿಗೆ ಹಾಜರಾದುದೇ ಕಡಿಮೆ.

ಕೊನೆಗೆ ತೀರ್ಮಾನ ಕೊಡಬೇಕಾಗಿ ಬಂದಾಗ, ‘ಕುಲಾಂತರಿ ಸಾಸಿವೆ ಎಲ್ಲಾ ರೀತಿಯಲ್ಲೂ ಸುರಕ್ಷಿತ’ ಎಂದು ಛಾಪು ಹಾಕುತ್ತಾರೆ. ಆದ್ದರಿಂದ ಡಾ. ಪೆಂತಾಲ್ ಅವರು ಸಲ್ಲಿಸಿದ ಸಂಪೂರ್ಣ ದಾಖಲೆಯನ್ನು ಬಹಿರಂಗಗೊಳಿಸಬೇಕು, ಜನಾಭಿಪ್ರಾಯ ಸಂಗ್ರಹಣೆಗೆ ಮೂರು ತಿಂಗಳ ಅವಧಿ ಕೊಡಬೇಕು ಎಂದು ಪ್ರಶಾಂತ್ ಭೂಷಣ್ ಮತ್ತಿತರರು ಪಟ್ಟು ಹಿಡಿದಿದ್ದಾರೆ. ‘ಸುರಕ್ಷಿತವೋ ಅಲ್ಲವೋ ಎಂದು ತಿಳಿದುಕೊಳ್ಳದೆ ಕುಲಾಂತರಿ ಸಸ್ಯಗಳನ್ನು ಪರಿಸರಕ್ಕೆ ಬಿಡುವುದು, ಆಹಾರಕ್ಕೆ ಬಳಸುವುದು ಮಹಾ ಅಪರಾಧ’ ಎನ್ನುತ್ತಾರೆ ಪುಷ್ಪ ಭಾರ್ಗವ.

ದೇಶದಲ್ಲಿ 65 ಲಕ್ಷ ಹೆಕ್ಟೇರ್‌ನಲ್ಲಿ ಸಾಸಿವೆ ಬೆಳೆಯುತ್ತಿದ್ದು ವಾರ್ಷಿಕ 6.80 ಕೋಟಿಯಿಂದ 8 ಕೋಟಿ ಟನ್ ಉತ್ಪಾದನೆ ಇದೆ. ವೈವಿಧ್ಯಮಯ ಸಾಸಿವೆ ತಳಿಗಳನ್ನು ಹೊಂದಿರುವ ಹೆಮ್ಮೆ ಭಾರತಕ್ಕಿದೆ. ಸಾಸಿವೆ ಬೇಸಾಯ ಪ್ರಧಾನವಾಗಿಲ್ಲದ ಕರ್ನಾಟಕದಂಥ ರಾಜ್ಯದಲ್ಲೂ ರೈತರು ಪ್ರತಿ ಬೆಳೆ ಜೊತೆ ಅಷ್ಟಿಷ್ಟು ಸಾಸಿವೆ ಸೇರಿಸಿ ಬಿತ್ತುವುದು ವಾಡಿಕೆ. ಇದು ಮುಖ್ಯ ಬೆಳೆಗೆ ಬೀಳುವ ಕೀಟಬಾಧೆ ತಡೆಯುತ್ತದೆ, ಮನೆ ಬಳಕೆಗೆ ಸಿಗುತ್ತದೆ.

ಸಾಸಿವೆ ಒಗ್ಗರಣೆ ಹಾಕದ ಮನೆ ಹೇಗೆ ಇಲ್ಲವೋ, ಸಾಸಿವೆ ಕೂಡಿಸಿ ಹಾಕದ ಬೆಳೆ, ಹೊಲವೂ ಇಲ್ಲ. ಕುಲಾಂತರಿ ಸಾಸಿವೆಯೇನಾದರೂ ಬಂದರೆ ಈ ಎಲ್ಲಾ ವೈವಿಧ್ಯಮಯ ಬೀಜಗಳು ನಾಶವಾಗಿ, ಪ್ರತಿ ಹೊಲವೂ ಕುಲಾಂತರಿ ಮಾಲಿನ್ಯಕ್ಕೆ ಒಳಗಾಗುತ್ತದೆ. ಬಿ.ಟಿ. ಹತ್ತಿಯ ಅನುಭವಕ್ಕಿಂತ ಬೇರೆ ಬೇಕಿಲ್ಲವಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.