ADVERTISEMENT

ತಂಬಾಕು: ಆದಾಯಕ್ಕಿಂತ ಲುಕ್ಸಾನೇ ಹೆಚ್ಚು

ಡಾ.ವಿಶಾಲ್ ರಾವ್
Published 28 ಡಿಸೆಂಬರ್ 2014, 19:30 IST
Last Updated 28 ಡಿಸೆಂಬರ್ 2014, 19:30 IST
ತಂಬಾಕು: ಆದಾಯಕ್ಕಿಂತ ಲುಕ್ಸಾನೇ ಹೆಚ್ಚು
ತಂಬಾಕು: ಆದಾಯಕ್ಕಿಂತ ಲುಕ್ಸಾನೇ ಹೆಚ್ಚು   

ತಂಬಾಕು ಚಟ ಮಾರಣಾಂತಿಕ ಕಾಯಿಲೆ­ಗಳನ್ನು ತಂದೊಡ್ಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ನಮ್ಮ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಜನ ತಂಬಾಕು ಸಂಬಂಧಿ ರೋಗಗಳಿಂದ ಅಸುನೀಗುತ್ತಿದ್ದಾರೆ. 2011ರ ಅಂಕಿಅಂಶದ ಪ್ರಕಾರ ನಮ್ಮ ರಾಜ್ಯ­ದಲ್ಲಿ ಪ್ರತಿವರ್ಷ ಸುಮಾರು 6000 ಜನ ಇದಕ್ಕೆ ಬಲಿಯಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬಲ್‌ ಅಡಲ್ಟ್‌ ಟೊಬ್ಯಾಕೊ ಸಮೀಕ್ಷೆಯ ಪ್ರಕಾರ, ನಮ್ಮ ರಾಜ್ಯದ ಶೇ 28ರಷ್ಟು ಜನ, ಅಂದರೆ ಸುಮಾರು 1.5 ಕೋಟಿ ಜನ ತಂಬಾಕು ವ್ಯಸನಿಗಳಾಗಿದ್ದಾರೆ. ಅಂದಾಜಿನ ಪ್ರಕಾರ, ಇವರಲ್ಲಿ ಶೇ 30ರಷ್ಟು ರೋಗಿಗಳು ಕ್ಯಾನ್ಸರ್‌, ಹೃದಯ, ಶ್ವಾಸಕೋಶ ಅಥವಾ ಇನ್ನಿತರ ತೊಂದರೆಗಳಿಂದಾಗಿ 10ರಿಂದ 12 ವರ್ಷ ಮುಂಚಿತವಾಗಿಯೇ ಸಾವಿಗೀಡಾಗ­ಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇತ್ತೀಚೆಗೆ ತಿಳಿಸಿರುವ ಪ್ರಕಾರ ತಂಬಾಕು ಸೇವನೆ­ಯಿಂದ ಉಂಟಾಗುವ ಕ್ಯಾನ್ಸರ್‌, ಹೃದಯಾ­ಘಾತ, ಶ್ವಾಸಕೋಶ ತೊಂದರೆಗಳ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ ಸುಮಾರು 1000 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಇದು ಆರ್ಥಿಕ ಹಾಗೂ ಆರೋಗ್ಯ ದೃಷ್ಟಿಯಿಂದ ತುಂಬಾ ಗಂಭೀರವಾದ ವಿಷಯವೇ ಸರಿ.

ಭಾರತವು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಬಾಯಿ ಕ್ಯಾನ್ಸರ್‌ ರೋಗಿಗಳು ಇರುವ ದೇಶ. ಇದಕ್ಕೆ ತಂಬಾಕು ಚಟವೇ ಮುಖ್ಯ ಕಾರಣ. ಹೀಗಾಗಿ ಕ್ಯಾನ್ಸರ್‌ ನಿಯಂತ್ರಿಸಬೇಕೆಂದರೆ ತಂಬಾಕು ಜಗಿಯುವಿಕೆಗೆ ಲಗಾಮು ಹಾಕಲೇ­ಬೇಕು. ತಂಬಾಕನ್ನು ನೇರವಾಗಿ ಜಗಿಯು­ವುದರಿಂದ ಅದರ ಅಪಾಯ ಇನ್ನಷ್ಟು ಹೆಚ್ಚಾಗುತ್ತದೆ. ತಂಬಾಕು ಜಗಿಯುವವರಲ್ಲಿ ಎಲ್ಲೆಂದರಲ್ಲಿ ಉಗುಳುವ ಚಾಳಿಯೂ ಇರುತ್ತದಾದ್ದರಿಂದ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯಕ್ಕೂ ಇದು ಸವಾಲು ಒಡ್ಡಿದೆ. ಅಲ್ಲದೇ ಸಮಾಜದ ಆರ್ಥಿಕ ದುರ್ಬಲ ವರ್ಗಗಳೇ ಇದರ ಚಟಕ್ಕೆ ಬೀಳುವುದು ಹೆಚ್ಚು. ಹೊಗೆರಹಿತ ತಂಬಾಕು ಬಳಕೆ ಕೂಡ ದೇಶದ ಲಕ್ಷಾಂತರ ಜನರಲ್ಲಿ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂಬುದು ಸುಪ್ರೀಂಕೋರ್ಟ್‌ಗೆ ಎನ್‌ಐಎಚ್‌ಎಫ್‌ಡಬ್ಲ್ಯು ಸಲ್ಲಿಸಿರುವ ವರದಿಯಿಂದ ಗೊತ್ತಾಗಿದೆ.

ಕರ್ನಾಟಕ ಸರ್ಕಾರವು ಮೊದಲಿಗೆ ಗುಟ್ಕಾವನ್ನು ಕೇಂದ್ರ ಸರ್ಕಾರದ ಆಹಾರ ಮಾನದಂಡಗಳು ಹಾಗೂ ಸುರಕ್ಷತಾ ಕಾಯಿದೆಯಡಿ (ಎಫ್‌ಎಸ್‌ಎಸ್‌ಎಐ ಕಾಯಿದೆ) ನಿಷೇಧಿಸಿತು. ಈ ಕಾಯಿದೆಯ 2, 3, 4ನೇ ಸೆಕ್ಷನ್‌ಗಳ ಅನ್ವಯ ಹಾಗೂ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್‌ ನಿರ್ದೇಶನಗಳ ಪ್ರಕಾರ ಯಾವುದೇ ಆಹಾರ ಉತ್ಪನ್ನವು ತಂಬಾಕು ಅಥವಾ ನಿಕೋಟಿನ್‌ ಅಂಶವನ್ನು ಒಳಗೊಂಡಿರಬಾರದು. ಆದರೆ ಹೀಗೆ ನಿಷೇಧ ಹೇರಿದ ಮಾತ್ರಕ್ಕೆ ತಂಬಾಕು ಉತ್ಪನ್ನಗಳ ಬಳಕೆ ನಿಂತುಬಿಡಲಿಲ್ಲ. ಅದು ಪ್ರತ್ಯೇಕ ಪೌಚ್‌ಗಳ ಅವತಾರದಲ್ಲಿ ಮಾರುಕಟ್ಟೆಗೆ ಬಂದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರವು ತಂಬಾಕಿನ ಎಲ್ಲಾ ಸ್ವರೂಪಗಳ ಮೇಲೆ, ಅಂದರೆ ಸಂಸ್ಕರಿತ, ಸ್ವಾದ ಸೇರಿಸಿದ, ಸುಗಂಧಯುಕ್ತ–  ಈ ಎಲ್ಲಾ ಬಗೆಯ ತಂಬಾಕು ಮಾರಾಟಗಳ ಮೇಲಿನ ನಿಷೇಧವನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿತು. ಗುಟ್ಕಾ, ಜರ್ದಾ ಹೀಗೆ ಯಾವುದೇ ಹೆಸರಿನಿಂದ ಕರೆ­ದರೂ ಎಲ್ಲಾ ತಂಬಾಕು ಉತ್ಪನ್ನ­ಗಳಿಗೂ ಇದು ಅನ್ವಯವಾಗುತ್ತದೆ ಎಂದೂ ಅದು ಸ್ಪಷ್ಟ­ಪಡಿಸಿತು. ಕೋರ್ಟ್‌ ವಿಸ್ತೃತ­ವಾಗಿ ಹೇಳಿರು­ವಂತೆ ಎಫ್‌ಎಸ್‌ಎಸ್‌ಎಐ ಕಾಯಿದೆಯ 2, 3, 4ನೇ ಸೆಕ್ಷನ್‌ಗಳನ್ವಯ ಇವನ್ನೂ ಆಹಾರವೆಂದೇ ಪರಿಗಣಿಸಲಾಗುತ್ತದೆ.

ನಿಷೇಧದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸು­ವಂತೆ ಕೇಂದ್ರದ ಆರೋಗ್ಯ ಸಚಿವರು ಈಚೆಗೆ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ನಿರ್ದೇಶನದ ಮೇರೆಗೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಬಿಹಾರ, ಮಿಜೋರಾಂ, ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಮಣಿಪುರ ರಾಜ್ಯಗಳು ಮೇಲಿನ ಉತ್ಪನ್ನಗಳ ಮಾರಾಟ­ವನ್ನು ನಿಷೇಧಿಸಿವೆ. ಇತರ ರಾಜ್ಯಗಳೂ ಈ ಕುರಿತು ಪರಿಶೀಲನೆ ನಡೆಸುತ್ತಿವೆ. ಬಿಡಿಯಾಗಿ ಸಿಗರೇಟು  ಮಾರುವುದನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ನಿಷೇಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇದನ್ನು ಜಾರಿಗೊಳಿಸಲು ಸರ್ಕಾರ ನೀಡಿರುವ ಸಮರ್ಥನೆ ಹೀಗಿದೆ:

* ಈಗ 20–30 ವರ್ಷದೊಳಗಿನವರಲ್ಲಿ ಕ್ಯಾನ್ಸರ್‌ ಹೆಚ್ಚಾಗುತ್ತಿದೆ. ಬೆಳೆಯುವ ಮಕ್ಕಳು 10ರಿಂದ 18ರೊಳಗಿನ ವಯಸ್ಸಿನಲ್ಲಿ ಈ ಚಟಕ್ಕೆ ದಾಸರಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಸಾಮಾನ್ಯವಾಗಿ ಯಾರಿಗೇ ಆದರೂ ಯಾವುದೇ ಚಟ ಅಂಟಿಕೊಳ್ಳುವುದು ಈ ವಯಸ್ಸಿನಲ್ಲೇ. ಆದ್ದರಿಂದ ತಂಬಾಕು ಕಂಪೆನಿಗಳು ಈ ವಯೋಮಾನದವರನ್ನೇ ತಮ್ಮ ಉತ್ಪನ್ನದ ಬಳಕೆದಾರರನ್ನಾಗಿಸಿಕೊಳ್ಳುವ ಉದ್ದೇಶ ಹೊಂದಿರುತ್ತವೆ. ದೇಶದಲ್ಲಿ ತಂಬಾಕು ಸಂಬಂಧಿ ಕಾಯಿಲೆಗಳಿಂದಾಗಿ ಪ್ರತಿವರ್ಷ ಸುಮಾರು 10 ಲಕ್ಷ ಜನ ಅಸುನೀಗುತ್ತಾರೆ.
ಬಳಕೆದಾರರ ಸಂಖ್ಯೆಯಲ್ಲಿ ಆಗುವ ಈ ನಷ್ಟವನ್ನು ತುಂಬಿಕೊಳ್ಳಲು ಕಂಪೆನಿಗಳು ಹದಿವಯಸ್ಸಿನವರ ಮೇಲೆಯೇ ಕಣ್ಣು ನೆಟ್ಟಿರುತ್ತವೆ.

* ಪ್ಯಾಕೆಟ್‌ಗಳನ್ನು ಮಾತ್ರ ಮಾರಾಟ ಮಾಡುವ ಪದ್ಧತಿ ಜಾರಿಗೆ ಬಂದರೆ ಹದಿವಯಸ್ಕರಿಗೆ ಅದರ ಖರೀದಿ ಸ್ವಲ್ಪಮಟ್ಟಿಗಾದರೂ ಕಷ್ಟವಾಗುತ್ತದೆ. ಜತೆಗೆ, ಬಿಡಿ ಸಿಗರೇಟಿಗಿಂತ ಪ್ಯಾಕೆಟ್‌ ಆದರೆ ಮನೆಯಲ್ಲಿ ಪೋಷಕರಿಗೆ ಅಥವಾ ಶಾಲೆಗಳಲ್ಲಿ ಅಧ್ಯಾಪಕರಿಗೆ ಅದು ಕಣ್ಣಿಗೆ ಬೀಳುವ ಸಾಧ್ಯತೆ ಹೆಚ್ಚು. ಬಿಡಿ ಸಿಗರೇಟುಗಳನ್ನು ಯಾರ ಕಣ್ಣಿಗೂ ಕಾಣದಂತೆ ಮುಚ್ಚಿಡುವುದು ಸುಲಭ.

* ತಂಬಾಕು ಸೇವನೆಯು ಮಾದಕ ವಸ್ತು ವ್ಯಸನಕ್ಕೆ ರಹದಾರಿ ಇದ್ದಂತೆ. ಶೇ 75ಕ್ಕಿಂತಲೂ ಹೆಚ್ಚು ಮಾದಕ ವಸ್ತು ವ್ಯಸನಿಗಳು ಆರಂಭದಲ್ಲಿ ತಂಬಾಕು ಸೇವನೆಯ ಚಟಕ್ಕೆ ಬಿದ್ದವರೇ ಆಗಿರುತ್ತಾರೆ. ಮಾದಕ ವಸ್ತು ವ್ಯಸನ ತಪ್ಪಿಸಲು ತಂಬಾಕು ಸೇವನೆ ನಿಯಂತ್ರಣವು ಮೊದಲ ಹೆಜ್ಜೆಯಿದ್ದಂತೆ.

* ಯಾವುದೇ ತಂಬಾಕು ಉತ್ಪನ್ನದ ಮೇಲಿರುವ ಆರೋಗ್ಯ ಸೂಚಿ ಎಚ್ಚರಿಕೆಗಳು ತುಂಬಾ ಮುಖ್ಯ. ಆದರೆ ಬಿಡಿ ಸಿಗರೇಟುಗಳ ಮಾರಾಟದಿಂದಾಗಿ, ಈ ಆರೋಗ್ಯ ಸೂಚಿಗಳ ಉದ್ದೇಶವೇ ನಿರರ್ಥಕವಾಗುತ್ತದೆ.

ನಮ್ಮ ದೇಶದಲ್ಲಿ ಆರೋಗ್ಯ ಸೇವಾ ವ್ಯವಸ್ಥೆಯು ಶೇ 80ರಷ್ಟು ಖಾಸಗಿ ವಲಯವನ್ನೇ ಅವಲಂಬಿಸಿದೆ. ಅಂದರೆ ತಂಬಾಕು ಸೇವನೆ ಚಟ ಸೇರಿದಂತೆ ಯಾವುದೇ ಕಾರಣದಿಂದ ರೋಗಕ್ಕೆ ತುತ್ತಾದವರು ಚಿಕಿತ್ಸೆಗಾಗಿ ತಮ್ಮ ಜೀಬಿನಿಂದಲೇ ಖರ್ಚು ಭರಿಸಬೇಕಾಗುತ್ತದೆ. ಇದರಿಂದ ರೋಗಿಯ ಹಾಗೂ ರೋಗಿಯ ಕುಟುಂಬದ ಮೇಲಿನ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಾಗುತ್ತದೆ. ನಮ್ಮ ಶೇ 80ರಷ್ಟು ಜನ ಗ್ರಾಮೀಣ ಪ್ರದೇಶ­ದಲ್ಲಿ ನೆಲೆಸಿದ್ದು,  ಶೇ 75ರಷ್ಟು ಜನರ ಪ್ರತಿ­ದಿನದ ಖರೀದಿ ಸಾಮರ್ಥ್ಯ 100 ರೂಪಾಯಿ­ಗಿಂತ ಕಡಿಮೆ ಇದೆ. ಇಂತಹ ದುರ್ಭರ ಪರಿ­ಸ್ಥಿತಿಯಲ್ಲಿ ದುಬಾರಿಯಾಗು­ತ್ತಿರುವ ಆರೋಗ್ಯ ಸೇವಾ ವೆಚ್ಚವನ್ನು ಸಾಮಾನ್ಯ ಜನರು ತಡೆದುಕೊಳ್ಳಬೇಕು ಎಂದು ನಿರೀಕ್ಷಿಸುವು­ದಾ­ದರೂ ಹೇಗೆ? ತನ್ನ ಚಟಕ್ಕೆ ತಾನು ದಂಡ ತರಲಿ ಎಂದು ನಿರುಮ್ಮಳವಾಗಿ ಇದ್ದುಬಿಡುವು­ದಾ­ದರೂ ಹೇಗೆ?

ದೇಶದ ಆರ್ಥಿಕತೆಗೆ ತಂಬಾಕಿನಿಂದ ಬರುವ ಆದಾಯವೂ ಮುಖ್ಯ ಎಂಬ ವಾದ ಕೂಡ ಇದೆ. ತೆರಿಗೆ, ರಫ್ತು, ಉದ್ಯೋಗ ಇವೆಲ್ಲದರಿಂದ ಬೊಕ್ಕಸಕ್ಕೆ ಬರುವ ಆದಾಯ ಮುಖ್ಯ ನಿಜ. ಈಗ ಸರ್ಕಾರಕ್ಕೆ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಮತ್ತು ರಫ್ತಿನಿಂದ ವಾರ್ಷಿಕ ₨ 9000 ಕೋಟಿ  ಆದಾಯ ಬರುತ್ತಿದೆ. ಆದರೆ ತಂಬಾಕಿನಿಂದಾಗಿ ಬರುವ ಮೂರೇ ಮೂರು ಮುಖ್ಯ ರೋಗಗಳ ಚಿಕಿತ್ಸೆಗಾಗಿ ಮಾಡುತ್ತಿರುವ ವೆಚ್ಚ ಇದಕ್ಕಿಂತ ತುಂಬಾ ಹೆಚ್ಚು, ಅಂದರೆ ವಾರ್ಷಿಕ ಸುಮಾರು ₨ 30 ಸಾವಿರ ಕೋಟಿ  ಇದೆ. ಇಡೀ ದೇಶವು ಆರೋಗ್ಯಕ್ಕಾಗಿ ಮಾಡುತ್ತಿರುವ ಒಟ್ಟಾರೆ ವೆಚ್ಚದಲ್ಲಿ ಶೇ 25ರಷ್ಟನ್ನು ತಂಬಾಕು ರೋಗಗಳ ಚಿಕಿತ್ಸೆಯೇ ಕಬಳಿಸುತ್ತಿದೆ.

ಹಾಗಿದ್ದರೂ ತಂಬಾಕು ಬಳಕೆ ನಿಯಂತ್ರಿಸಲು ಕ್ರಮ ಕೈಗೊಳ್ಳದೇ ಇರುವುದಕ್ಕೆ ರೈತರ ಹಿತ­ರಕ್ಷಣೆಯ ಮತ್ತೊಂದು ಸಾಮಾನ್ಯ ಕಾರಣವನ್ನು ನೀಡಲಾಗುತ್ತಿದೆ. ರೈತರ ಹಿತಾಸಕ್ತಿ ರಕ್ಷಿಸುವುದು ಮುಖ್ಯ ಎಂಬುದರಲ್ಲಿ ಎರಡನೇ ಮಾತು ಇಲ್ಲ. ಆದರೆ ಈ ಉತ್ಪನ್ನಗಳಿಂದಾಗಿ ನಮ್ಮ ರಾಜ್ಯದಲ್ಲಿ ಸೃಷ್ಟಿಯಾಗುತ್ತಿರುವ ರೋಗಿ­ಗಳು ಹಾಗೂ ರೋಗಿಗಳ ಕುಟುಂಬಗಳನ್ನು ಅಲಕ್ಷದಿಂದ ಮರೆ­ಯ­­ಬಾರದು. ಈ ಜವಾಬ್ದಾರಿ­ಯನ್ನೂ ನಾವು ಪ್ರದರ್ಶಿಸಬೇಕಾಗಿದೆ. ನಮ್ಮ ರಾಜ್ಯದ ಶೇ 28ರಷ್ಟು,  ಅಂದರೆ 1.5 ಕೋಟಿಗಿಂತಲೂ ಹೆಚ್ಚು ಜನರ ಆರೋಗ್ಯವನ್ನು ರಕ್ಷಿಸುವುದು ಹಾಗೂ ಇವರನ್ನು ಭವಿಷ್ಯದ ರೋಗಿಗಳಾ­ಗದಂತೆ ತಡೆ­ಯುವುದು ಅತ್ಯಂತ ಮುಖ್ಯವಾಗ­ಬೇಕಿದೆ. ಹೊಸ ಹೊಸ ಆಸ್ಪತ್ರೆಗಳ ನಿರ್ಮಾಣಕ್ಕೆ ಮಂಜೂ­ರಾತಿ ಪಡೆಯುವುದಕ್ಕಿಂತ ಈ ಅವ­ಘಡವನ್ನು ತಪ್ಪಿಸು­ವುದು ಸಮಂಜಸ­ವಲ್ಲವೇ?
ಯಾವುದೇ ವ್ಯಕ್ತಿ ರೋಗ ಪೀಡಿತನಾದಾಗ ಆ ವ್ಯಕ್ತಿ  ಮಾತ್ರ ಬಾಧೆ ಅನುಭವಿಸುವುದಿಲ್ಲ. ಆತನ ಇಡೀ ಕುಟುಂಬವು ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಬಸವಳಿಯುತ್ತದೆ ಎಂಬುದನ್ನು ಒಬ್ಬ ವೈದ್ಯನಾಗಿ ನಾನು ಹೇಳುತ್ತಿದ್ದೇನೆ. ಅಲ್ಲದೇ, ಬಹುತೇಕ ರೋಗಿಗಳು ಗ್ರಾಮೀಣ ಪ್ರದೇಶದ­ವರಾಗಿದ್ದು ಅಲ್ಲಿ ಸೂಕ್ತ ಆರೋಗ್ಯ ಸೇವೆಯ ಲಭ್ಯತೆ ಇರುವುದಿಲ್ಲ. ಇದರಿಂದಾಗಿ ಚಿಕಿತ್ಸೆಗೆಂದೇ ಇಂತಹ ಕುಟುಂಬಗಳು ನಗರಗಳೆಡೆಗೆ ವಲಸೆ ಬರಬೇಕಾಗುತ್ತದೆ.

ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿಯಾಗು­ತ್ತಿದ್ದರೂ ತಂಬಾಕಿನಿಂದ ಉಂಟಾಗುವ ಕ್ಯಾನ್ಸರ್‌ ಗುಣಪಡಿಸುವಲ್ಲಿ ಅಥವಾ ರೋಗಿಯ ಆಯಸ್ಸು ಹೆಚ್ಚಿಸುವಲ್ಲಿ ಅದು ಹೆಚ್ಚಿನ ಕಾಣಿಕೆಯನ್ನೇನೂ ನೀಡುತ್ತಿಲ್ಲ. ಇದು ನಾವೆಲ್ಲರೂ ಒಪ್ಪಿಕೊಳ್ಳ­ಲೇಬೇಕಾದ ಕಟುವಾಸ್ತವ! ಈ ಅತ್ಯಾಧುನಿಕ ಜೆಟ್‌ ಯುಗದಲ್ಲಿ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಕೆಲವರಿಗೆ ಅಚ್ಚರಿಯಾಗಬಹುದು. ಆದರೆ, ತಂತ್ರಜ್ಞಾನದ ಅಭಿವೃದ್ಧಿಯಿಂದಲೇ ಉತ್ತಮ ಫಲಶ್ರುತಿಯನ್ನು ನಿರೀಕ್ಷಿಸುವುದು ಸಾಧ್ಯ­ವಿಲ್ಲ; ಹೀಗಾದದ್ದೇ ಆದರೆ, ಅದು ಮನುಷ್ಯನಿಗೆ ವಿಷ ಕುಡಿಯಲು ಅವಕಾಶ ಕೊಟ್ಟು ಅದರ ಪ್ರತ್ಯೌಷಧಕ್ಕಾಗಿ ಹುಡುಕಾಟ ನಡೆಸಿದಂತೆ ಆಗುತ್ತದೆ. ಇದು ವಿವೇಚನಾರಹಿತ ಧೋರಣೆ­ಯಲ್ಲದೆ ಮತ್ತೇನೂ ಅಲ್ಲ.

‘ರೋಗದ ಮೂಲಕ್ಕೆ ಚಿಕಿತ್ಸೆ ನೀಡಿ, ರೋಗದ ಲಕ್ಷಣಕ್ಕಲ್ಲ’ ಎಂಬುದು ವೈದ್ಯಶಾಸ್ತ್ರದ ಪ್ರಾಥ­ಮಿಕ ಸರಳ ತತ್ವವಾಗಿದೆ. ಅಂದರೆ, ಒಬ್ಬ ವ್ಯಕ್ತಿ ಜ್ವರ­ದಿಂದ ಬಳಲುತ್ತಿದ್ದರೆ ಪ್ಯಾರಾಸಿಟ­ಮಲ್‌ ಕೊಟ್ಟು­ಬಿಟ್ಟರೆ ಸಾಕಾಗುವುದಿಲ್ಲ. ಏಕೆಂದರೆ ಜ್ವರ ಎಂಬುದು ರೋಗ ಲಕ್ಷಣ ಮಾತ್ರ. ಇದಕ್ಕೆ ಮಲೇರಿಯಾ, ವಿಷಮಶೀತ ಜ್ವರ, ಡೆಂಗೆ, ಎಚ್‌1ಎನ್‌1 ಯಾವುದಾದರೂ ಕಾರಣವಿರ­ಬಹುದು. ಹೀಗಾಗಿ ಈ ಮೂಲಕ್ಕೆ ಚಿಕಿತ್ಸೆ ಕೊಡ­ಬೇಕಾ­ಗುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ ಈಗ ಮಾಡ­ಲಾಗುತ್ತಿರುವ ಶಸ್ತ್ರಚಿಕಿತ್ಸೆ, ಕಿಮೊಥೆರಪಿ, ರೇಡಿಯೊ­ಥೆರಪಿಗಳು ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡುತ್ತಿವೆಯೇ ಹೊರತು ರೋಗದ ಮೂಲಕ್ಕೆ ಅಲ್ಲ. ಇದು ನಿಷ್ಪ್ರಯೋಜಕ ಎಂಬ ಅರಿವು ಇದೀಗ ಮೂಡುತ್ತಿದೆ. ಹೀಗಾಗಿಯೇ ವೈದ್ಯ­ವಿಜ್ಞಾನ ಜಗತ್ತು ಇಂದು ರೋಗಿಯ ಜೀವಿತಾ­ವಧಿ ಹೆಚ್ಚಿಸು­ವುದಕ್ಕಿಂತ ಮುಖ್ಯವಾಗಿ ಆತನ ಜೀವಿತಾವಧಿಯ ಗುಣಮಟ್ಟ ಹೆಚ್ಚಿಸಲು ಒತ್ತು ನೀಡುತ್ತಿದೆ. ಅಂದರೆ ಯಾವುದೇ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವುದಕ್ಕಿಂತ ‘ಕ್ಯಾನ್ಸರ್‌ ತಡೆಗಟ್ಟು­ವಿಕೆ’ಗೆ ತೆಗೆದುಕೊಳ್ಳುವ ಕ್ರಮಗಳು ಹೆಚ್ಚು ತೃಪ್ತಿ ನೀಡುತ್ತವೆ.

ಇದು ಕೇವಲ ಕ್ಯಾನ್ಸರ್‌ಗೆ ಮಾತ್ರ ಅನ್ವಯ­ವಾಗು­­­ವಂತಹುದಲ್ಲ. ತಂಬಾಕಿನಿಂದ ಬರುವ ಹೃದಯ ಬೇನೆ, ಶ್ವಾಸಕೋಶ ತೊಂದರೆ ಅಥವಾ ಇನ್ನಿತರ ತೊಂದರೆಗಳಿಗೂ ಅನ್ವಯವಾಗುತ್ತದೆ. ಇವಕ್ಕೆ ಔಷಧಿ, ಶಸ್ತ್ರಚಿಕಿತ್ಸೆ ಅಥವಾ ಬೇರೆ ರೀತಿಯ ಚಿಕಿತ್ಸೆ ಕೊಡುವುದಕ್ಕಿಂತ ಅವುಗಳ ತಡೆಗಟ್ಟುವಿಕೆಗೆ ಒತ್ತು ಕೊಡಬೇಕಾದ ಜರೂರು ಇದೆ. ಯುವ ಜನಾಂಗದ ಆರೋಗ್ಯ ಸಂಪತ್ತನ್ನು ಸಂರಕ್ಷಿಸ­ಬೇಕೆಂದರೆ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ­ಗಳನ್ನು ತೆಗೆದುಕೊಳ್ಳುವುದು ಬಲು ಮುಖ್ಯ­ವಾಗುತ್ತದೆ

(ಲೇಖಕರು ಶಿರ ಮತ್ತು ಕುತ್ತಿಗೆ ಕ್ಯಾನ್ಸರ್‌ ಶಸ್ತ್ರಚಿಕಿತ್ಸಾ ತಜ್ಞರು)

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT