ಟರ್ಕಿಯಿಂದ ಗ್ರೀಸ್ ದೇಶಕ್ಕೆ ಹೋಗಲು ಮೋಟಾರ್ ಚಾಲಿತ ದೋಣಿಯನ್ನು ನೀಡುವುದಾಗಿ ಸಂತ್ರಸ್ತರನ್ನು ಕಳ್ಳ ಮಾರ್ಗದಲ್ಲಿ ಬೇರೆ ದೇಶಕ್ಕೆ ಕರೆದೊಯ್ಯುವವರು ಅಬ್ದುಲ್ಲಾ ಕುರ್ದಿಗೆ ಭರವಸೆ ನೀಡಿದ್ದರು. ಗ್ರೀಸ್ ದೇಶವನ್ನು ಒಮ್ಮೆ ತಲುಪಿದರೆ, ಕೆನಡಾ ದೇಶದಲ್ಲಿ ಹೊಸ ಜೀವನ ಆರಂಭಿಸಲು ಮೊದಲ ಹೆಜ್ಜೆ ಇಟ್ಟಂತೆ ಆಗುತ್ತಿತ್ತು. ಆದರೆ ಕಳ್ಳಸಾಗಣೆದಾರರು 15 ಅಡಿ ಉದ್ದದ ರಬ್ಬರ್ ದೋಣಿ ಕೊಟ್ಟರು. ಸಮುದ್ರದಲ್ಲಿ ದೊಡ್ಡ ಅಲೆಗಳು ಬಂದಾಗ ಈ ರಬ್ಬರ್ ದೋಣಿ ಮಗುಚಿಕೊಳ್ಳುತ್ತಿತ್ತು.
ಸಮುದ್ರದಲ್ಲಿ ಒಂದು ಅಲೆ ಅಬ್ದುಲ್ಲಾ, ಆತನ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಎತ್ತಿ ಹಾಕಿತು. ಮೂವರನ್ನೂ ಉಳಿಸಿಕೊಳ್ಳಲು ಅಬ್ದುಲ್ಲಾ ಯತ್ನಿಸಿದ. ಆದರೆ ಅವನ ಪ್ರಯತ್ನ ಫಲ ಕೊಡಲಿಲ್ಲ. ಕೊನೆಯಲ್ಲಿ ಜೀವ ಉಳಿಸಿಕೊಂಡಿದ್ದು 40 ವರ್ಷ ವಯುಸ್ಸಿನ ಅಬ್ದುಲ್ಲಾ ಮಾತ್ರ.
‘ನನಗೆ ಯಾವುದೂ ಬೇಡವಾಗಿದೆ. ಜಗತ್ತಿನ ಎಲ್ಲ ದೇಶಗಳನ್ನು ನನಗೆ ಉಡುಗೊರೆಯಾಗಿ ನೀಡಿದರೂ, ಅದು ನನಗೆ ಬೇಡ. ನನ್ನ ಪಾಲಿಗೆ ಅತ್ಯಂತ ಅಮೂಲ್ಯವಾಗಿದ್ದನ್ನು ಕಳೆದುಕೊಂಡಾಗಿದೆ’ ಎಂದು ಅಬ್ದುಲ್ಲಾ, ಟರ್ಕಿಯ ಮುಗ್ಲಾದ ಒಂದು ಶವಾಗಾರದಲ್ಲಿ ಕೆಲವು ದಾಖಲೆಗಳಿಗೆ ಸಹಿ ಮಾಡಿದ ನಂತರ ಹೇಳಿದ. ಪತ್ನಿ, ಮಕ್ಕಳ ಮೃತ ದೇಹ ಪಡೆಯಲು ಅಬ್ದುಲ್ಲಾ ಅಲ್ಲಿಗೆ ಬಂದಿದ್ದ. ಕೆಂಪು ಅಂಗಿ, ಕಪ್ಪು ಚೆಡ್ಡಿ ತೊಟ್ಟು ಟರ್ಕಿಯ ಸಮುದ್ರ ತೀರದಲ್ಲಿ ಹೆಣವಾಗಿ ಬಿದ್ದಿದ್ದ, ಅಬ್ದುಲ್ಲಾನ ಎರಡನೆಯ ಮಗನ ಚಿತ್ರ, ಸಂತ್ರಸ್ತರ ಸ್ಥಿತಿ ಬಗ್ಗೆ ಜಗತ್ತಿನ ಗಮನ ಸೆಳೆದಿದೆ.
ಯುದ್ಧ ಮತ್ತು ಹತಾಶೆಯ ಕಾರಣದಿಂದ ಲಕ್ಷಾಂತರ ಜನ ತಮ್ಮ ಮೂಲ ನೆಲೆ ತೊರೆಯುತ್ತಿದ್ದಾರೆ. ಆದರೆ ಈ ದುರಂತದ ಭೀಕರತೆಯನ್ನು ಕಟ್ಟಿಕೊಟ್ಟಿದ್ದು ಈ ಸಂಖ್ಯೆಗಳಲ್ಲ. ಸಮುದ್ರದ ದಂಡೆಯಲ್ಲಿ ಕೆನ್ನೆಯನ್ನು ಮರಳಿಗೆ ಒತ್ತಿ ಮಲಗಿದಂತಿದ್ದ ಅಯ್ಲಾನ್‌ನ (ಅಬ್ದುಲ್ಲಾನ ಮಗ) ಮೃತ ದೇಹದ ಚಿತ್ರ ವಲಸೆಯ ಹಿಂದಿರುವ ಭೀಕರತೆಯನ್ನು ತೆರೆದಿಟ್ಟಿತು. ಈ ಚಿತ್ರ ಸಾಮಾಜಿಕ ಮಾಧ್ಯಮಗಳ ಮೂಲಕ ಜಗತ್ತಿನ ಎಲ್ಲ ಭಾಗಗಳನ್ನೂ ತಲುಪಿತು. ಹೊಸ ಭರವಸೆ, ಅವಕಾಶಗಳ ಬೆಂಬತ್ತಿ ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದಿಂದ ಯುರೋಪ್‌ನತ್ತ ವಲಸೆ ಹೋಗುತ್ತಿರುವವರಿಗೆ ಸಹಾಯಹಸ್ತ ಚಾಚಲು ಆಗದಿದ್ದುದರ ಪರಿಣಾಮವನ್ನು ಈ ಚಿತ್ರ ಪಾಶ್ಚಾತ್ಯ ಜಗತ್ತಿಗೆ ತೋರಿಸಿಕೊಟ್ಟಿತು.
ಆಸ್ಟ್ರಿಯಾದ ಒಂದು ಟ್ರಕ್ಕಿನ ಹಿಂದೆ ಕಳೆದ ವಾರ ಕಂಡ ಕೊಳೆತ ಸ್ಥಿತಿಯಲ್ಲಿದ್ದ ಶವಗಳಿಗಿಂತ ಹೆಚ್ಚಿನ ಪ್ರಮಾಣದ ಪ್ರಭಾವವನ್ನು ಅಯ್ಲಾನ್‌ನ ಚಿತ್ರ ಉಂಟುಮಾಡಿದೆ. ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧ 1.10 ಕೋಟಿ ಜನ ಸಿರಿಯನ್ನರ ಪಾಲಿಗೆ ತಂದಿತ್ತಿರುವ ದುರಂತವನ್ನು ತೆರೆದಿಟ್ಟಿದೆ. ಈ ಪುಟ್ಟ ಬಾಲಕನ ಚಿತ್ರ ಪಶ್ಚಿಮ ಏಷ್ಯಾ ಮತ್ತು ಯುರೋಪ್‌ನಲ್ಲಿ ರಾಜಕೀಯ ಬಿರುಗಾಳಿಯನ್ನೇ ಹುಟ್ಟುಹಾಕಿದೆ. ಅಲ್ಲದೆ, ಸಿರಿಯಾ ಬಿಕ್ಕಟ್ಟಿನ ವಿಚಾರದಲ್ಲಿ ಇಷ್ಟು ದಿನಗಳ ಕಾಲ ಹೆಚ್ಚು ತಲೆಕೆಡಿಸಿಕೊಳ್ಳದ ದೂರದ ಕೆನಡಾದಲ್ಲೂ ರಾಜಕೀಯ ಬಿರುಗಾಳಿ ಸೃಷ್ಟಿಸಿದೆ.
ಅಬ್ದುಲ್ಲಾನಿಗೆ ಕೆನಡಾದಲ್ಲಿ ಸಂಬಂಧಿಕರಿದ್ದರೂ, ಆ ದೇಶಕ್ಕೆ ವಲಸೆ ಬರಲು ಏಕೆ ವೀಸಾ ನೀಡಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಕೊಡುವಂತೆ ಕೆನಡಾ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಬಂದಿದೆ. ಅಬ್ದುಲ್ಲಾನ ಕೆನಡಾದ ಸಂಬಂಧಿಕರು ಅಲ್ಲಿ ಅವನಿಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ವಲಸೆ ಬರಲು ಅಬ್ದುಲ್ಲಾ ಸಲ್ಲಿಸಿದ್ದ ದಾಖಲೆಗಳು ಅಪೂರ್ಣವಾಗಿದ್ದವು ಎಂದು ಕೆನಡಾ ಸರ್ಕಾರ ಹೇಳುತ್ತಿದೆ. ಆದರೆ ಅಲ್ಲಿನ ಮತ್ತು ಜಗತ್ತಿನ ಇತರ ಭಾಗಗಳ ಜನರ ಆಕ್ರೋಶ ತಣಿದಿಲ್ಲ.
ಅಬ್ದುಲ್ಲಾ, ಕುರ್ದಿಶ್ ಸಮುದಾಯಕ್ಕೆ ಸೇರಿದ ಕ್ಷೌರಿಕ. ಆತ ತನ್ನ ಸಹೋದರನ ಜೊತೆ ವಲಸೆ ಹೋಗಲು ಸಿದ್ಧನಾಗಿದ್ದ. ಇದಕ್ಕೆ ಆತನ ಸಹೋದರಿ ಟಿಮಾ ಕುರ್ದಿ ಹಣಕಾಸಿನ ನೆರವು ಕೊಡುವವಳಿದ್ದಳು. ಆಕೆ ವಾಸಿಸಿರುವುದು ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್‌ನ ಹೊರವಲಯದಲ್ಲಿ. ತನ್ನ ಮನೆಯ ತಳಮಹಡಿಯಲ್ಲಿ ಕುಟುಂಬದ ಜೊತೆ ವಾಸ್ತವ್ಯ ಹೂಡು, ತಾನು ನಡೆಸುತ್ತಿರುವ ಕ್ಷೌರ ದಂಗಡಿಯಲ್ಲೇ ಕೆಲಸ ಆರಂಭಿಸು ಎಂದು ಟಿಮಾ, ಅಬ್ದುಲ್ಲಾಗೆ ಹೇಳಿದ್ದಳು.
‘ಕೆನಡಾಕ್ಕೆ ಹೋದ ನಂತರ ಅಲ್ಲಿನ ನಮ್ಮ ಖರ್ಚುಗಳನ್ನು ತಾನೇ ನೋಡಿಕೊಳ್ಳುವುದಾಗಿ ಟಿಮಾ, ಕೆನಡಾ ಅಧಿಕಾರಿಗಳಿಗೆ ಹೇಳಿದ್ದಳು. ಆದರೆ ಅವರು ಇದಕ್ಕೆ ಒಪ್ಪಲಿಲ್ಲ’ ಎಂದು ಅಬ್ದುಲ್ಲಾ ತಿಳಿಸಿದ. ಟಿಮಾ ಆರಂಭದಲ್ಲಿ ಮೊಹಮ್ಮದ್‌ನ ಕುಟುಂಬಕ್ಕೆ ಮಾತ್ರ ವೀಸಾ ಕೊಡಿ ಎಂದು ಅರ್ಜಿ ಸಲ್ಲಿಸಿದ್ದಳು. ಆದರೆ, ಮೊಹಮ್ಮದ್‌ಗೆ ಸಂತ್ರಸ್ತನ ಸ್ಥಾನ ನೀಡಲಾಗಿದೆ ಎಂಬುದನ್ನು ಸಾಬೀತು ಮಾಡಲು ಆಗದೆ ಆ ಅರ್ಜಿ ಜೂನ್‌ನಲ್ಲಿ ತಿರಸ್ಕೃತಗೊಂಡಿತು. ಟರ್ಕಿಯ ನಿಯಮಗಳ ಅನ್ವಯ, ಸಿರಿಯನ್ನರು ಇಂತಹ ದಾಖಲೆ ಪಡೆಯುವುದು ಸಾಧ್ಯವಿಲ್ಲದ ಮಾತು. ಇಬ್ಬರೂ ಸಹೋದರರಿಗೆ ವೀಸಾ ಸಿಗುವುದಿಲ್ಲ ಎಂಬುದು ಕುಟುಂಬಕ್ಕೆ ಖಚಿತವಾಯಿತು.
ಆಗ, ಇಬ್ಬರು ಸಹೋದರರ ಪ್ರಯಾಣಕ್ಕೆ ಯಂತ್ರಚಾಲಿತ ದೋಣಿ ಖರೀದಿಸಲು ಹಣಕಾಸಿನ ನೆರವು ನೀಡುವುದಾಗಿ ಟಿಮಾ ಭರವಸೆ ನೀಡಿದಳು. ‘ದೋಣಿಯ ಬಗ್ಗೆ ಭರವಸೆ ನೀಡಿದ್ದಕ್ಕೆ ನನಗೆ ವಿಷಾದವಿದೆ. ಯುದ್ಧ ನಿಂತರೆ ಸಾಕು. ಸಿರಿಯಾದ ಜನರಿಗೆ ಸಹಾಯ ಮಾಡಲು ಇಡೀ ವಿಶ್ವ ಮುಂದೆ ಬರಬೇಕು. ಅವರೂ ಮನುಷ್ಯರು’ ಎಂದು ಟಿಮಾ ಕಣ್ಣೀರುಗರೆಯುತ್ತಾಳೆ.
ಆಯ್ಲಾನ್‌ನ ತಂದೆ ಅಬ್ದುಲ್ಲಾ ಬೆಳೆದಿದ್ದು ಡಮಾಸ್ಕಸ್‌ನಲ್ಲಿ. ಇದು ಸಿರಿಯಾದ ರಾಜಧಾನಿ. ಆದರೆ ಆತನ ಮೂಲ ಟರ್ಕಿ ಗಡಿ ಬಳಿ ಇರುವ ಕುರ್ದಿಶ್ ಸಮುದಾಯ ಹೆಚ್ಚಿರುವ ಕೊಬಾನಿ ನಗರ. ಡಮಾಸ್ಕಸ್‌ನಲ್ಲಿ ತೊಂದರೆ ಹೆಚ್ಚಿದೆ ಎಂಬ ಕಾರಣಕ್ಕೆ ಒಂದು ವರ್ಷದ ಹಿಂದೆ ಕುಟುಂಬವನ್ನು ಕೊಬಾನಿಗೆ ಸ್ಥಳಾಂತರ ಮಾಡಿದ್ದೆ ಎಂದು ಅಬ್ದುಲ್ಲಾ ದೂರವಾಣಿಯಲ್ಲಿ ತಿಳಿಸಿದ. ಆದರೆ, ಆ ಪ್ರದೇಶದ ಮೇಲೆ ಐಎಸ್ ಉಗ್ರರು ಪದೇ ಪದೇ ದಾಳಿ ನಡೆಸುತ್ತಿದ್ದ ಕಾರಣ, ಅಲ್ಲಿ ಸುರಕ್ಷತೆ ಇರಲಿಲ್ಲ. ನಂತರ ಅಬ್ದುಲ್ಲಾ ಕುಟುಂಬ ಇಸ್ತಾಂಬುಲ್‌ಗೆ ಸ್ಥಳಾಂತರಗೊಂಡಿತು. ಅಲ್ಲಿ ಅಬ್ದುಲ್ಲಾಗೆ ದುಡಿಮೆಗೆ ಅವಕಾಶ ಸಿಗುತ್ತಿರಲಿಲ್ಲ. ಹಾಗಾಗಿ ಅಬ್ದುಲ್ಲಾ ತನ್ನ ಸಹೋದರಿಯಿಂದ ಹಣ ಪಡೆಯುತ್ತಿದ್ದ.
ಅಬ್ದುಲ್ಲಾಗೆ ಸಹಾಯ ಮಾಡಿ ಎಂದು ಟಿಮಾ ಸ್ಥಳೀಯ ಸಂಸದ ಫಿನ್‌ಡೊನೆಲ್ಲಿ ಅವರಿಗೆ ಮನವಿ ಮಾಡಿದಳು. ಡೊನೆಲ್ಲಿ ಅವರು, ಪೌರತ್ವ ಮತ್ತು ವಲಸೆ ಸಚಿವ ಕ್ರಿಸ್ ಅಲೆಕ್ಸಾಂಡರ್ ಅವರಿಗೆ ಪತ್ರ ಬರೆದು, ಅಬ್ದುಲ್ಲಾಗೆ ಸಹಾಯ ಮಾಡುವಂತೆ ಕೋರಿದರು. ‘ನಾವು ಸಾಕಷ್ಟು ಕಾದೆವು. ಆದರೆ ಯಾವುದೇ ಸಹಾಯ ಸಿಗಲಿಲ್ಲ’ ಎಂದ ಅಬ್ದುಲ್ಲಾ. ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುವ ಗುಣ ತನ್ನಲ್ಲಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಕೆನಡಾ, ಸಂಪ್ರದಾಯವಾದಿ ಸರ್ಕಾರ ಬಂದ ನಂತರ ತನ್ನ ನೀತಿಗಳಲ್ಲಿ ಬದಲಾವಣೆ ತಂದುಕೊಂಡಿದೆ. ಸಿರಿಯಾದ 10 ಸಾವಿರ ಸಂತ್ರಸ್ತರಿಗೆ ನೆಲೆ ನೀಡುವ ಭರವಸೆ ಅಲೆಕ್ಸಾಂಡರ್ ಅವರಿಂದ ದೊರೆತಿತ್ತು. ಆಗಸ್ಟ್ ಕೊನೆಯ ವೇಳೆಗೆ ಒಂದು ಸಾವಿರ ಜನ ಬಂದಿದ್ದರು. ಇನ್ನೂ ಹೆಚ್ಚು ಜನರಿಗೆ ಅವಕಾಶ ಕೊಡಬೇಕು ಎಂದು ಡೊನೆಲ್ಲಿ ಅವರ ಪಕ್ಷ ಒತ್ತಾಯಿಸುತ್ತಿದೆ.
ಚುನಾವಣಾ ಪ್ರಚಾರದಲ್ಲಿದ್ದ ಅಲೆಕ್ಸಾಂಡರ್ ಅವರು, ಅಬ್ದುಲ್ಲಾನ ಕುಟುಂಬಕ್ಕೆ ಬಂದ ಸ್ಥಿತಿ ಗಮನಿಸಿ ರಾಷ್ಟ್ರದ ರಾಜಧಾನಿ ಒಟ್ಟಾವಾಕ್ಕೆ ಗುರುವಾರ ಮರಳಿದರು. ‘ಈ ಘಟನೆ ವಿಶ್ವದಾದ್ಯಂತ ಶೋಕಕ್ಕೆ ಕಾರಣವಾಗಿದೆ’ ಎಂದು ಹೇಳಿದರು. ಯುರೋಪ್‌ನ ಗಡಿಯೊಳಕ್ಕೆ ಪ್ರವೇಶಿಸಬೇಕು ಎಂದು ಹಲವು ಬಾರಿ ಪ್ರಯತ್ನಿಸಿದೆ ಎಂದು ಅಬ್ದುಲ್ಲಾ ಹೇಳಿದ್ದಾನೆ. ಟರ್ಕಿಯ ಎದಿರ್ನೆ ಬಳಿ ನದಿ ದಾಟುವ ವೇಳೆ ತಾನು ಮುಳುಗಿಹೋಗುತ್ತಿದ್ದೆ ಎಂದು ಅಬ್ದುಲ್ಲಾ ಹೇಳಿದ್ದಾನೆ. ‘ಒಮ್ಮೆ ಬಲ್ಗೇರಿಯಾದ ಗಡಿಯಲ್ಲಿ ನನ್ನನ್ನು ಹಿಡಿದು, ಮರಳಿ ತಂದುಬಿಟ್ಟರು’ ಎಂದು ಆತ ಹೇಳಿದ.
‘ಮುಳುಗಿಹೋಗುವ ಭಯ ನಮಗೆ ಇತ್ತು. ಆದರೆ ಟರ್ಕಿಯ ಕಳ್ಳಸಾಗಣೆದಾರರು, ಹಾಗೇನೂ ಆಗುವುದಿಲ್ಲ, ಮಧ್ಯಮ ಗಾತ್ರದ ದೋಣಿ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ನೀರಿನಲ್ಲಿ ಮುಳುಗದಂತೆ ತಡೆಯುವ ಜಾಕೆಟ್‌ಗಳು ಕುಟುಂಬದ ಸದಸ್ಯರ ಬಳಿ ಇದ್ದವು. ಆದರೆ ಅವು ದುರ್ಘಟನೆಯ ವೇಳೆ ಕಳೆದುಹೋದವು’ ಎಂದು ಅಬ್ದುಲ್ಲಾ ತಿಳಿಸಿದ. ‘ಇಲ್ಲಿನವರ ನಿಜ ಸಮಸ್ಯೆ ಏನು ಎಂಬ ಬಗ್ಗೆ ಗಮನಹರಿಸುವ ಬದಲು, ಜನ ಅಬ್ದುಲ್ಲಾನನ್ನು ಬೈಯುತ್ತಿದ್ದಾರೆ. ಅಬ್ದುಲ್ಲಾನ ಕುಟುಂಬ ಅನುಭವಿಸಿದಂಥ ಅಸಂಖ್ಯ ದುರಂತಗಳನ್ನು ಟರ್ಕಿಯ ಭದ್ರತಾ ಸಿಬ್ಬಂದಿ ನೋಡಿದ್ದಾರೆ. ಆದರೆ ಅವು ವಿಶ್ವದ ಗಮನಕ್ಕೆ ಬಂದಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ನಿಜ ಹೇಳಬೇಕೆಂದರೆ, ಅನೇಕ ಜನ ಸಂತ್ರಸ್ತರು ಸಮುದ್ರ ದಾಟಲು ಆಟಿಕೆಯಂತಹ ದೋಣಿ ಬಳಸುತ್ತಾರೆ. ನಸುಕಿನ 3 ಗಂಟೆಯ ವೇಳೆಗೆ ಸಮುದ್ರ ದಾಟಲು ಆರಂಭಿಸುತ್ತಾರೆ. ಈ ಸಂದರ್ಭದಲ್ಲಿ ಗಾಳಿ ನಿರಂತರವಾಗಿ ಬೀಸುತ್ತಿರುತ್ತದೆ. 15 ಅಡಿಗಳಷ್ಟು ಎತ್ತರದ ಅಲೆಗಳು ಏಳುತ್ತಿರುತ್ತವೆ ಎಂದು ಆ ಅಧಿಕಾರಿ ವಿವರಿಸಿದರು. ಸಮುದ್ರದ ಅಲೆಗಳಿಗೆ ಸಿಲುಕಿ ಮಗುಚಿಕೊಂಡ ದೋಣಿಯನ್ನು ಪತ್ನಿ ಹಿಡಿದುಕೊಂಡಿದ್ದ ಸಂದರ್ಭದಲ್ಲಿ ತನ್ನ ಮಕ್ಕಳನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳ ಬಗ್ಗೆ ಅಬ್ದುಲ್ಲಾ ಗದ್ಗದಿತನಾಗಿ ವಿವರಿಸುತ್ತಾನೆ. ಅವರನ್ನು ನೀರಿನ ಮೇಲ್ಭಾಗಕ್ಕೆ ತರಬೇಕು, ಅವರು ಉಸಿರಾಡಲು ಸಾಧ್ಯವಾಗುವಂತೆ ಮಾಡಬೇಕು ಎಂದು ಒದ್ದಾಡಿದೆ ಎಂದು ಅಬ್ದುಲ್ಲಾ ವಿವರಿಸುತ್ತಾನೆ.
ಒಬ್ಬ ಮಗನನ್ನು ಮೇಲೆ ತಂದ ತಕ್ಷಣ ಇನ್ನೊಬ್ಬ ಮಗನನ್ನು ಮೇಲೆ ತರಬೇಕಿತ್ತು. ಅವರನ್ನು ಬದುಕಿಸಲು ನೀರಿನಲ್ಲಿ ಮೂರು ಗಂಟೆಗಳ ಕಾಲ ಹೆಣಗಿದೆ. ಉಸಿರಾಡಲು ಸಾಧ್ಯವಾಗದೆ ಪ್ರಾಣ ಬಿಟ್ಟ ಒಬ್ಬ ಮಗ ಬಿಳಿ ದ್ರವವನ್ನು ಉಗುಳುತ್ತಾ ನೀರಿನಲ್ಲಿ ಮುಳುಗಿಹೋದದ್ದನ್ನು ಕಣ್ಣಾರೆ ಕಂಡೆ. ನಂತರ, ಇನ್ನೊಬ್ಬ ಮಗನನ್ನು ಅವನ ತಾಯಿಯತ್ತ (ತನ್ನ ಪತ್ನಿ) ನೂಕಿದೆ. ಅವನಾದರೂ ಉಳಿಯಲಿ ಎಂಬ ಆಸೆಯಿತ್ತು ಎಂದು ಅಬ್ದುಲ್ಲಾ ಹೇಳಿದ.
ಇಷ್ಟು ಹೇಳಿದ ಅಬ್ದುಲ್ಲಾ, ಕ್ಷಮೆ ಯಾಚಿಸಿದ. ‘ಇನ್ನು ನನ್ನಿಂದ ಮಾತನಾಡಲು ಸಾಧ್ಯವಿಲ್ಲ’ ಎಂದ. ‘ಕಳ್ಳ ಮಾರ್ಗದ ಮೂಲಕ ಇನ್ನೊಂದು ದೇಶಕ್ಕೆ ಹೋಗುವುದು ನಿಲ್ಲಬೇಕು. ದೇಶ ತೊರೆಯುವುದಕ್ಕೆ ರಕ್ತ ಕೊಡುತ್ತಿರುವವರ ಸಮಸ್ಯೆ ಬಗೆಹರಿಯಬೇಕು ಎಂಬುದಷ್ಟೇ ನನಗೆ ಈಗಿರುವ ಆಸೆ’ ಎಂದು ಕೊನೆಯ ಮಾತು ಹೇಳಿದ.
‘ಸಂತ್ರಸ್ತರನ್ನು ಕಳ್ಳ ಮಾರ್ಗದ ಮೂಲಕ ಬೇರೆ ದೇಶಕ್ಕೆ ಕರೆದೊಯ್ಯುವವರು ಇರುವ ಜಾಗಕ್ಕೆ ನಾನು ಹೋಗಿದ್ದೆ. ದೋಣಿಯಲ್ಲಿ ಮಕ್ಕಳನ್ನು ಕರೆದೊಯ್ಯಬೇಡಿ ಎಂದು ಬೇರೆಡೆ ಹೋಗಲು ಅಣಿಯಾಗುತ್ತಿದ್ದವರಿಗೆ ಹೇಳಿದೆ.ಅವರಿಗೆ ನನ್ನ ಸ್ಥಿತಿ ವಿವರಿಸಿದೆ. ಕೆಲವರ ಮನಸ್ಸು ಬದಲಾಯಿತು’.
ದಿ ನ್ಯೂಯಾರ್ಕ್ ಟೈಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.