ADVERTISEMENT

ರಾಟೆಯ ಕುಲಜಾತಿ

​ಪ್ರಜಾವಾಣಿ ವಾರ್ತೆ
Published 25 ಮೇ 2015, 5:32 IST
Last Updated 25 ಮೇ 2015, 5:32 IST

ವ್ಯವಸ್ಥೆಯಲ್ಲಿ ಎಲ್ಲವೂ ಪರುಷಪ್ರಧಾನ ನೆಲೆಯಲ್ಲಿಯೇ ಗುರುತಿಸಲ್ಪಡುತ್ತದೆ.  ಭಾಷಾ ಪ್ರಯೋಗದ ರಾಜಕಾರಣದಲ್ಲಿಯೇ ಇದನ್ನು ಗುರುತಿಸಬಹುದು.  ಇನ್ನು ಕಾಯಕದ ವಿಷಯದಲ್ಲಿ ಹೇಳುವಂತೆಯೇ ಇಲ್ಲ. ಎಲ್ಲ ಕಾಯಕಗಳೂ ಪುರುಷ ಪ್ರಧಾನವಾಗಿ ಗುರುತಿಸಿದವೇ ಆಗಿವೆ.  ಎರಡು ಹೊತ್ತೂ ಅಡುಗೆ ಮನೆಯಲ್ಲಿ ಬೇಯಿಸುವವಳು ಬೇಯುವವಳು ಹೆಣ್ಣಾದರೂ ನಳಪಾಕ ಭೀಮಪಾಕದ ಪ್ರಧಾನತೆಯನ್ನು ಅಳಿಸಲಾಗಿಲ್ಲ.

ಹನ್ನೆರಡನೇ ಶತಮಾನದಲ್ಲಿ ಮೊದಲ ಬಾರಿಗೆ ಕೆಲವು ಕಾಯಕಗಳು ಶಿವಶರಣೆಯರ ಹೆಸರಿನ ಜೊತೆ ಸಂಬಂಧ ಪಡೆದು ಮಾನ್ಯತೆ ಹೊಂದಿರುವುದು ಕಂಡುಬರುತ್ತದೆ.  ಕದಿರ ರೆಮ್ಮವ್ವೆ ಕದಿರ ಕಾಯಕದ ಕಾಳವ್ವೆ, ಕಾಲಕಣ್ಣಿಯ ಕಾಮವ್ವ, ಕೊಟ್ಟಣದ ಸೋಮವ್ವ, ಮೋಳಿಗೆ ಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಹೀಗೆ ಹಲವು ಜನರನ್ನು ಹೆಸರಿಸಬಹುದು. ಇವುಗಳಲ್ಲಿ ಕೆಲವು ಪ್ರಧಾನ ಕಸುಬುಗಳಿಗೆ ಪೂರಕವಾಗಿ ಬರುವ ಒಳ ಕಸುಬುಗಳಿರಬಹುದು. 

ಉದಾಹರಣೆಗೆ ಕದಿರ ಕಾಯಕ. ಬಟ್ಟೆ ಅಥವಾ ಕಂಬಳಿ ನೇಯುವಾಗ ಅದಕ್ಕೆ ಬೇಕಾದ ನೂಲನ್ನು ತೆಗೆಯುವ ಕಾಯಕ. ಇದನ್ನು ಹೆಚ್ಚಾಗಿ ಮಹಿಳೆಯರೇ ಮಾಡುತ್ತಿದ್ದರು.  ಆದಾಗ್ಯೂ ಆ ಕಾಯಕವನ್ನು ಪ್ರತ್ಯೇಕ ಕಾಯಕದಂತೆ ನೋಡಿ ಮಹಿಳೆಯ ಶ್ರಮವನ್ನು ಗೌರವಿಸಿದ್ದು ಚರಿತ್ರೆಯಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಅದನ್ನು ಶಿವಶರಣರ ಚಳವಳಿ ಮಾನ್ಯಮಾಡಿದೆ.  ಮಹಿಳೆಗೆ ಸಮಾನ ಗೌರವ ಕೊಟ್ಟ ಚಳವಳಿ ಅದಾದ್ದರಿಂದ ಅವರ ಶ್ರಮವನ್ನು ಸಮಾನವಾಗಿ ಗೌರವಿಸಿದಂತೆ ಕಾಯಕ ಸಂಬಂಧದಲ್ಲಿ ಮಹಿಳೆಯ ಆರ್ಥಿಕ ಸಾಮಥ್ರ್ಯವನ್ನು ಮಾನ್ಯಮಾಡಿದೆ.  ಅವರ ದುಡಿಮೆಯ ಫಲವನ್ನು ದಾಸೋಹದ ಭಾಗವಾಗಿ ಕಂಡಿದೆ.  ಕಾಯಕ ಜೀವಿಗಳಾದ ಹೆಣ್ಣುಮಕ್ಕಳು ತಮ್ಮ ಕಾಯಕವನ್ನು ಸತ್ಯಶುದ್ಧ ಕಾಯಕವೆಂದು ಹೆಗ್ಗಳಿಕೆಯಿಂದ ಹೇಳಿದ ನೈತಿಕ ಸ್ಥೈರ್ಯ ಮೆರೆದಿದ್ದಾರೆ.

ಕದಿರ ರೆಮ್ಮವ್ವೆ, ಕದಿರ ಕಾಯಕ ಮಾಡಿಕೊಂಡಿದ್ದ ಒಬ್ಬ ಶಿವಶರಣೆ.  ಅವಳು ತನ್ನೊಂದು ವಚನದಲ್ಲಿ “ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ, ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು, ನಿಂದ ಬೊಂಬೆ ಮಹಾರುದ್ರ, ರುದ್ರನ ಬೆಂಬಳಿಯವೆರಡು ಸೂತ್ರಕರ್ಣ, ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ ಸುತ್ತಿತ್ತು ನೂಲು ಕದಿರುತುಂಬಿತ್ತು” ಎಂದಿದ್ದಾಳೆ.  ಕಾಯಕದ ಸಲಕರಣೆಯನ್ನು ಬ್ರಹ್ಮ, ವಿಷ್ಣು, ಮಹೇಶ್ವರರ ಸಂಯೋಗದ ಜೀವಭೂಮಿಯಾಗಿಸಿಕೊಂಡು ಅಲ್ಲಿ ಅರಿವಿನ ಕದಿರು ಹಿಡಿದು ಭಕ್ತಿಯ ಕೈಯಲ್ಲಿ ರಾಟೆ ತಿರುಗಿಸಿದ ಶರಣೆ ಇವಳು.

ಗಾಂಧೀಜಿಯವರ ಸ್ವಾತಂತ್ರದ ಹೋರಾಟದಲ್ಲಿ ರಾಟೆ ಎಂಬುದು ದುಡಿಯುವ ವರ್ಗದ ಸಂಕೇತವಾಗಿತ್ತು. ಸಂಘಟನಾತ್ಮಕ ಶ್ರಮದ ಗುರುತಾಗಿತ್ತು. ಉತ್ಪಾದನೆಯ ಸತ್ಯಶುದ್ಧ ಮಾರ್ಗದ ಶಕ್ತಿ ಸೂಚಕವಾಗಿತ್ತು. ಅಂಥ ಕಾಯಕ ಉಪಕರಣದಲ್ಲಿ ಸೃಷ್ಟಿ-ಸ್ಥಿತಿ-ಲಯ ಕರ್ತರಾದ ತ್ರಿಮೂರ್ತಿಗಳನ್ನು ಒಳಗುಮಾಡಿಕೊಂಡು ಕದಿರೆಗೆ ನೂಲು ಸುತ್ತುತಿದ್ದ ರೆಮ್ಮವ್ವೆಯ ಆಧ್ಯಾತ್ಮವನ್ನು ಬಣ್ಣಿಸಹೋದರೆ ಶಬ್ದದ ಲಜ್ಜೆಯ ನೋಡಾ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.