ADVERTISEMENT

ಸಾಲ ಮಸಾಲ

ಪ್ರಕಾಶ ಶೆಟ್ಟಿ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ಸಾಲ ಮಸಾಲ
ಸಾಲ ಮಸಾಲ   

ಮಸಾಲ ಟಿ.ವಿ. ಚಾನೆಲ್‌ನಲ್ಲಿ ರೈತರ ಸಾಲ ಮನ್ನಾದ ವಿಚಾರದಲ್ಲಿ ಅರಚಾಟ ನಡೆಯುತ್ತಿತ್ತು. ಜಾಡಿಸ್ ಪಕ್ಷದ ಮುದ್ದೆಹಳ್ಳಿ ಭಯಂಕರ್, ಕಾಂಗಯ್ಯ ಪಕ್ಷದ ಚಿಕ್ಕಣ್ಣ ಕಬಾಬು ಹಾಗೂ ಬಾಜಪ್ಪ ಪಕ್ಷದ ತಿಳಿಸಾರಪ್ಪ ಅವರುಗಳ ಅರಚಾಟದ ‘ಉತ್ತೇಜನಕಾರ’ರಾಗಿ ಕದನ್ ಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು.

ಕದನ್ ಕುಮಾರ್: ಮುದ್ದೆಹಳ್ಳಿಯವರೇ, ನಿಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುವಾಗ ತುಂಬಾ ಎಚ್ಚರ ವಹಿಸಬೇಕಾಗಿತ್ತು ಎಂದು ನಿಮಗೀಗ ಅನಿಸುವುದಿಲ್ಲವೇ?

ತಿಳಿಸಾರಪ್ಪ: ಅವರು ಖಂಡಿತವಾಗ್ಲೂ ನಿದ್ದೆಗಣ್ಣಿನಲ್ಲೇ ಆ ಪ್ರಣಾಳಿಕೆ ತಯಾರಿಸಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ ಸಾರ್.

ADVERTISEMENT

ಮುದ್ದೆಹಳ್ಳಿ ಭಯಂಕರ್‌: ರೀ, ತಿಳಿಸಾರಪ್ಪರೇ, ಅವರ ಪ್ರಶ್ನೆ ನನಗೆ. ನಿಮಗಲ್ಲ.

ತಿ.ಸಾ: ಒಂದ್ನಿಮಿಷ… ನಾನು ಹೇಳುವುದನ್ನ ಮುಗಿಸ್ತೀನಿ. ಅಲ್ರೀ, 24 ಗಂಟೆಗಳಲ್ಲಿ ರೈತರ ಐವತ್ತಮೂರು ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದೆಂದರೆ ಅದೇನು ರಾಗಿ ಮುದ್ದೆ ನುಂಗಿದ ಹಾಗೆಯಾ?

ಮು.ಭ: ರೀ ತಿಳಿಸಾರ್, ನಾವು ಸಾಲ ಮನ್ನಾ ಮಾಡಿ ತೋರಿಸಿದರೆ ಸಾಕಲ್ಲ! ನಮಗೇನೋ ಇಪ್ಪತ್ತನಾಲ್ಕು ಗಂಟೆಗಳಿಗೆ ಮುನ್ನ ಮನ್ನಾ ಮಾಡಬೇಕೂಂತ ಆಸೆಯಿತ್ತು . ಆದರೆ ನಮ್ಮ ಪಕ್ಷದ ಜ್ಯೋತಿಷಿ ‘ಗಳಿಗೆ ಚೆನ್ನಾಗಿಲ್ಲ’ ಅಂದ್ಬಿಟ್ರು. ಈಗ ಮುಂದಿನ ಹದಿನೈದನೇ ದಿನದ ರಾತ್ರಿ 12 ಗಂಟೆ 22 ಸೆಕೆಂಡಿಗೆ ಶುಭ ಗಳಿಗೆ ಇದೆ ಅಂದಿದ್ದಾರೆ.

ಚಿಕ್ಕಣ್ಣ ಕಬಾಬು: ನನಗೆ ಸಂಶಯ ಏನಪ್ಪಾಂದ್ರೆ... ಆ ಜ್ಯೋತಿಷಿ ನಿಮ್ಮ ಪಕ್ಷದವರೇ ಸಿ.ಎಂ. ಆಗ್ತಾರೆ ಎಂದು ಭವಿಷ್ಯ ಹೇಳಿರಲಿಲ್ಲವೇನೋ! ಒಂದು ವೇಳೆ ಹೇಳಿರುತ್ತಿದ್ದರೆ ಖಂಡಿತವಾಗ್ಲೂ ನೀವು ‘ಇಪ್ಪತ್ತನಾಲ್ಕು ಗಂಟೆಗಳ’ ಭರವಸೆ ಕೊಡುತ್ತಿರಲಿಲ್ಲ.

ತಿ.ಸಾ: ನಿಮ್ಮ ಮಾಜಿ ಸಿಎಮ್ಮಯ್ಯ ಮರಳಿ ಸಿ.ಎಂ. ಆಗೋಕೆ ಹೀಗೆ ಹಿಂದುಳಿದುಬಿಡುತ್ತಾರೆ ಎಂದು ಕೂಡಾ ಅವರು ಊಹಿಸಿರಲಿಕ್ಕಿಲ್ಲ.

ಕ.ಕು: ಆದರೆ ಈಗ ಮಾನ್ಯ ಮುಖ್ಯಮಂತ್ರಿಯವರಿಗೆ ತಪ್ಪಿನ ಅರಿವಾದಂತಿದೆ. ಬೊಕ್ಕಸದಲ್ಲಿ ಹಣ ಹೇಗೆ ಸರಿದೂಗಿಸಬಹುದೂಂತ ತಲೆ ಕೆರೆದುಕೊಳ್ಳುತ್ತಿದ್ದಾರಂತಲ್ಲ ಸಾರ್.

ಮು.ಭ: ಕಾದು ನೋಡಿ... ನಾವು ಕಣ್ಣುಮುಚ್ಕೊಂಡು ಸಿಕ್ಕ ಸಿಕ್ಕ ರೈತರ ಸಾಲ ಮನ್ನಾ ಮಾಡಲ್ಲ. ಹಲವಾರು ಕ್ಷೇತ್ರಗಳಲ್ಲಿ ನಾವು ಠೇವಣಿಯನ್ನೇ ಕಳಕೊಂಡು ಹೀನಾಯವಾಗಿ ಸೋತಿದ್ದೇವೆ. ಅಂತಹ ಕ್ಷೇತ್ರಗಳಲ್ಲಿರುವ ರೈತರಿಗೆ ಸಾಲ ಮನ್ನಾ ಮಾಡುವ ಪ್ರಶ್ನೆಯೇ ಇಲ್ಲ!

ಚಿ.ಕ: ಅದ್ಯಾಕ್ರೀ ಹಾಗೆ ಹೇಳ್ತೀರ ಭಯಂಕರ್? ನೀವು ಬರೀ 37 ಕ್ಷೇತ್ರಗಳ ಸಿ.ಎಂ. ಅಂದ್ಕೊಂಡ್ರೇನೋ? ಹುಷಾರ್! ನೀವು ನಮ್ಮ ಮುಲಾಜಿನಲ್ಲಿದ್ದೀರ… ನಮ್ಮದು ಸೇರಿಸಿ ಒಟ್ಟು 116 ಕ್ಷೇತ್ರಗಳ ರೈತರಿಗೆ ಸಾಲ ಮನ್ನಾ ಮಾಡ್ಬೇಕಾಗುತ್ತೆ!

ತಿ.ಸಾ: ನಾನ್ಸೆನ್ಸ್! ನಮ್ಮ 104 ಕ್ಷೇತ್ರಗಳ ಅನ್ನದಾತರಿಗೆ ಮನ್ನಾಭಾಗ್ಯ ನೀಡದಿದ್ದರೆ, ವಾಟಲ್ ರಾಜ್ ಅವರಿಗೆ ಸುಪಾರಿ ಕೊಟ್ಟು ರಾಜ್ಯ ಬಂದ್ ಮಾಡಿಸ್ತೇವೆ! ಹುಷಾರ್‌!

ಚಿ.ಕ: ನಾನೊಂದು ಮಾತು ಹೇಳ್ತೀನಿ…

ತಿ.ಸಾ: ನೀವೇನ್ರೀ ಹೇಳೋದು? ನೀವು ಯಾವತ್ತು ಸ್ವಾಮಿಯನ್ನು ಸಿ.ಎಂ. ಮಾಡಿದಿರೋ ಆವತ್ತೇ ಮಾತನಾಡುವ ನೈತಿಕ ಹಕ್ಕು ಕಳಕೊಂಡಿದ್ದೀರಿ! ನಿಮಗೆ…

ಚಿ.ಕ: ಒಂದ್ನಿಮಿಷ... ಒಂದ್ನಿಮಿಷ… ನಿಮ್ಮ ಪಕ್ಷದವರು ಸಾಲ ಮನ್ನಾ ವಿಚಾರದಲ್ಲಿ ಇಷ್ಟೊಂದು ಕಾಳಜಿ ಯಾಕೆ ವಹಿಸ್ತೀರಾಂತ ನನಗೆ ಗೊತ್ತು. ನಿಮ್ಮ ಶ್ರೀಮಂತ ಶಾಸಕರು, ಕಾರ್ಯಕರ್ತರು ಕೃಷಿ ಹೆಸರಲ್ಲಿ ಏನೇನೋ ಮಾಡೋಕೆ ಸಾಲ ತೆಗೊಂಡಿರಬೇಕು.

ತಿ.ಸಾ: ಅದೆಲ್ಲಾ ನನಗೆ ಗೊತ್ತಿಲ್ಲ. ಆದರೆ ಇವರು ಮಾತ್ರ ಭರವಸೆ ಕೊಡುವಾಗಲೇ ಆ ಬಗ್ಗೆ…

ಕ.ಕು: ತಿಳಿಸಾರ್, ಈ ಚರ್ಚೆಯನ್ನು ಒಂದು ಚಿಕ್ಕ ವಿರಾಮದ ನಂತರ ಮುಂದುವರಿಸೋಣ…

ತಿ.ಸಾ: ಮಿಸ್ಟರ್ ಕದನ್, ನಮಗೆ ವಿರಾಮ ಬೇಡ! ನೋಡಿ, ಜಾಡಿಸ್ ಪಕ್ಷ ಭರವಸೆ ಕೊಡುವಾಗಲೇ ಲ್ಯಾಂಡ್ ಕ್ರೂಸರ್ ಕಾರು ಓಡಿಸುವ ರೈತರಿಗೆ, ಅಡಿಕೆ ಕೃಷಿಕರಿಗೆ, ಕಾಫಿ ಕೃಷಿಕರಿಗೆ ಸಾಲ ಮನ್ನಾ ಮಾಡುವುದಿಲ್ಲಾಂತ ಸ್ಪಷ್ಟವಾಗಿ ಹೇಳಬೇಕಾಗಿತ್ತು! ಈಗ ಬೆಬ್ಬೆಬೆ ಅಂದ್ರೆ…

ಕ.ಕು: ಕದನ ವಿರಾಮಕ್ಕೆ ಇಂದಿನ ನಮ್ಮ ಅತಿಥಿಗಳು ಒಪ್ಪುತ್ತಿಲ್ಲಾಂತ ಕಾಣುತ್ತಿದೆ.

ಮು.ಭ: ರೈತರನ್ನು ಸಾಲದ ಶೂಲದಿಂದ ಪಾರು ಮಾಡುವುದು ನಮ್ಮ ಸಾಮರ್ಥ್ಯದ ಪ್ರಶ್ನೆ. ನಾವು ಅದಕ್ಕೆ ಬದ್ಧರಾಗಿದ್ದೇವೆ.

ಚಿ.ಕ: ಇಲ್ಲ, ಭಯಂಕರ್ ಅವರೇ… ನಿಮ್ಮ ಸಾಮರ್ಥ್ಯ ಕಟ್ಕೊಂಡರೆ ಸಾಕೇ? ಬೊಕ್ಕಸದ ಸಾಮರ್ಥ್ಯವನ್ನೂ ನೋಡಬೇಕಲ್ಲ?

ಮು.ಭ: ನನ್ನ ಆರ್ಥಿಕ ಸಲಹೆ ಏನಪ್ಪಾಂದ್ರೆ… ಬೆಳಗಾವಿಯಲ್ಲಿರೋ ಸುವರ್ಣಸೌಧ, ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಮಾರಿಬಿಟ್ರಾಯಿತು. ಬೊಕ್ಕಸ ತುಂಬಿ ತುಳುಕುತ್ತೆ.

ಕ.ಕು: ನಿಧಾನಸೌಧ ಯಾಕೆ ಬಿಡ್ತೀರಾ? ಅಹ್ಹ ಹ... ಹಾ… ಇಲ್ಲಿಗೆ ಒಂದು ದೊಡ್ಡವಿರಾಮ. ನಮಸ್ಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.