ವಿಶ್ಲೇಷಣೆ
ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಮೀಸಲಾತಿ ನೀಡಬೇಕು ಎಂಬ ಚಿಂತನೆ ಬಹಳ ಹಿಂದೆಯೇ ಬಂದಿತ್ತು. ಇಂತಹ ಮೀಸಲಾತಿಯ ಕಾನೂನು ಸಿಂಧುತ್ವದ ಕುರಿತ ವಿವಾದವನ್ನು ಸುಪ್ರೀಂ ಕೋರ್ಟ್ ಪರಿಹರಿಸಿ ದಶಕವೇ ಕಳೆದಿದೆ. ದೇಶದ ಅತಿ ದೊಡ್ಡ ವಿರೋಧ ಪಕ್ಷದ ಬೆಂಬಲ ಈ ಯೋಚನೆಗೆ ಇದೆ. ಸಮಸ್ಯೆ ಏನೆಂದರೆ, ಇದಕ್ಕೆ ಇನ್ನೇನು ಕಾಲಕೂಡಿ ಬಂತು ಅನ್ನುವಷ್ಟರಲ್ಲಿ ನಾವು ಒಂದು ಹೆಜ್ಜೆ ಹಿಂದೆಯೇ ಉಳಿದು ಬಿಡುತ್ತೇವೆ. ಈ ನಡುವಿನ ಅವಧಿಯಲ್ಲಿ ಪ್ರಭಾವಿಗಳ ಗುಂಪು ಯಾವುದೇ ಚಿಂತನೆಯನ್ನು ಮುಂದೂಡಬಹುದು ಮತ್ತು ತಡೆಯಲೂಬಹುದು. ಈ ಚಿಂತನೆಯನ್ನು ಜಾರಿಗೆ ತರಲು ರಾಜಕೀಯ ಇಚ್ಛಾಶಕ್ತಿ ಬೇಕು.
ಈಗ, ಅಂತಹ ರಾಜಕೀಯ ಇಚ್ಛಾಶಕ್ತಿ ರೂಪುಗೊಂಡಿದೆಯೇ? ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕಳೆದ ವಾರ ಹೇಳಿಕೆಯೊಂದನ್ನು ನೀಡಿದ್ದರು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಬೇಕು ಎಂಬ ತನ್ನ ಬಹುಕಾಲದ ಬೇಡಿಕೆಯನ್ನು ಪುನರುಚ್ಚರಿಸುವುದು ಈ ಹೇಳಿಕೆಯ ಉದ್ದೇಶವಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ ಒದಗಿಸುವುದಕ್ಕಾಗಿ ಸಂವಿಧಾನಕ್ಕೆ 2005ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ಈ ಮೀಸಲಾತಿಯ ಕಾನೂನು ಸಿಂಧುತ್ವವನ್ನು ಸುಪ್ರೀಂ ಕೋರ್ಟ್ 2014ರಲ್ಲಿ ಎತ್ತಿ ಹಿಡಿದಿತ್ತು. ಕಾಂಗ್ರೆಸ್ ಪಕ್ಷದ 2024ರ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಲಾಗಿತ್ತು. ಸಂಸದೀಯ ಸಮಿತಿಯೊಂದು ಕೂಡ ಇದನ್ನು ಬೆಂಬಲಿಸಿತ್ತು. ಈಗ, ಇದು ಅನುಷ್ಠಾನಕ್ಕೆ ಬರುವ ರಾಜಕೀಯ ಸಾಧ್ಯತೆಗಳು ಹೆಚ್ಚು ಕಾಣಿಸುತ್ತಿವೆ.
ಕಾಂಗ್ರೆಸ್ ಪಕ್ಷವು ಇಂತಹ ಬೇಡಿಕೆಯನ್ನು ಮುಂದಿಟ್ಟರೆ ಆಡಳಿತಾರೂಢ ಪಕ್ಷದ ನಿಲುವು ಏನಿರಬಹುದು ಎಂಬುದು ನಮಗೆ ತಿಳಿದಿಲ್ಲ. ಒಂದು ವಿಚಾರ ಖಚಿತ: ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಕುರಿತು ಇನ್ನೊಂದು ಸುತ್ತಿನ ಚರ್ಚೆಯನ್ನು ನಾವು ಆರಂಭಿಸಿದ್ದೇವೆ.
ಉನ್ನತ ಶಿಕ್ಷಣವು ಪ್ರಬಲವಾದ ವ್ಯವಸ್ಥೆ. ಇಲ್ಲಿ ‘ಅಸಮಾನತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿಕೊಂಡು ಬರಲಾಗಿದೆ’ ಎಂದು ವಿದ್ವಾಂಸರು ಹೇಳುತ್ತಾರೆ. ಉನ್ನತ ಶಿಕ್ಷಣದ ಮೇಲ್‌ಸ್ತರದ ಸಂಸ್ಥೆಗಳನ್ನು ಜಾಣತನದಿಂದ ಖಾಸಗೀಕರಣ ಮಾಡಲಾಗಿದೆ. ಇಂತಹ ಸಂಸ್ಥೆಗಳು ಪ್ರಬಲ ವರ್ಗ ಮತ್ತು ಪ್ರಬಲ ಜಾತಿಗಳ ಜನರ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಲಾಗಿದೆ. ಸಮಾನ ಅವಕಾಶಗಳಿಗೆ ಸಂಬಂಧಿಸಿ ಸಂವಿಧಾನ ನೀಡಿದ ಖಾತರಿಯ ಮೇಲೆ ಕನಿಷ್ಠ ಬದ್ಧತೆಯಾದರೂ ಇದ್ದರೆ, ಸರ್ಕಾರವು ಮಧ್ಯಪ್ರವೇಶಿಸಿ ಖಾಸಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿ ಜಾರಿ ಆಗುವಂತೆ ನೋಡಿಕೊಳ್ಳಬೇಕು.
ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಮತ್ತು ದೀರ್ಘಾವಧಿಯ ಎರಡು ಚಳವಳಿಗಳು ನಡೆಯುತ್ತಿವೆ. ಮೊದಲನೆಯದಾಗಿ, ಉನ್ನತ ಶಿಕ್ಷಣಕ್ಕೆ ಬರುವವರ ಸಂಖ್ಯೆಯಲ್ಲಿ ಅಭೂತಪೂರ್ವ ಏರಿಕೆಯಾಗಿದೆ. ಇದೊಂದು ಚಾರಿತ್ರಿಕ ಅಲೆ. ಮುಖ್ಯವಾಗಿ, ಚಾರಿತ್ರಿಕವಾಗಿ ಕಲಿಕೆಯ ಅವಕಾಶ ನಿರಾಕರಿಸಲ್ಪಟ್ಟ ಸಮುದಾಯಗಳ ಜನರು ವಿಳಂಬವಾಗಿಯಾದರೂ ಉನ್ನತ ಶಿಕ್ಷಣಕ್ಕೆ ಪ್ರವೇಶಿಸುತ್ತಿದ್ದಾರೆ. ಈ ಪ್ರವೃತ್ತಿಯನ್ನು ಸತೀಶ್ ದೇಶಪಾಂಡೆ ಹೀಗೆ ವಿವರಿಸುತ್ತಾರೆ: ‘1990ರಿಂದ 2019ರ ನಡುವೆ ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ ಐದೂವರೆ ಪಟ್ಟು ಏರಿಕೆಯಾಗಿದೆ. ಒಟ್ಟು ಪ್ರವೇಶಾತಿ ಏಳೂವರೆ ಪಟ್ಟು ಹೆಚ್ಚಳವಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ಮತ್ತು ಮುಸ್ಲಿಂನಂತಹ ಅಂಚಿನಲ್ಲಿರುವ ಸಮುದಾಯಗಳ ಪ್ರವೇಶಾತಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಸಮುದಾಯಗಳ ಮಹಿಳೆಯರ ಪ್ರವೇಶಾತಿಯೂ ಹೆಚ್ಚಳವಾಗಿದೆ’.
ಇದು ನಿಜವಾಗಿಯೂ ಒಳ್ಳೆಯ ಸುದ್ದಿ ಆಗಬೇಕಿತ್ತು. ಆದರೆ, ಎರಡನೇ ವಿದ್ಯಮಾನವು ಹಾಗೆ ಆಗಲು ಬಿಡುವುದಿಲ್ಲ: ಸರ್ಕಾರಿ ಉನ್ನತ ಶಿಕ್ಷಣ ವ್ಯವಸ್ಥೆಯ ಕುಸಿತ ಈ ಎರಡನೇ ವಿದ್ಯಮಾನವಾಗಿದೆ. ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನೂ ನಾವು ನೋಡುತ್ತಿದ್ದೇವೆ. ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸಮಾಜದ ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳು ದಾಂಗುಡಿ ಇಡುತ್ತಿದ್ದಾರೆ. ಅಲ್ಲಿ ದಟ್ಟಣೆ ಉಂಟಾಗಿದೆ. ಆದರೆ, ಅಲ್ಲಿ ಬೋಧಕ ಸಿಬ್ಬಂದಿ ಇಲ್ಲ ಮತ್ತು ಕನಿಷ್ಠ ಅನುದಾನವೂ ದೊರಕುತ್ತಿಲ್ಲ. ಇವು ಸಮಯ ಕಳೆಯುವ ತಾಣಗಳಾಗುತ್ತಿವೆಯೇ ಹೊರತು ಜ್ಞಾನ, ಕೌಶಲ ಅಥವಾ ಉದ್ಯೋಗ ಒದಗಿಸುವ ಕೇಂದ್ರಗಳಾಗಿಲ್ಲ. ಖಾಸಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಇಲ್ಲಿ ಅಪೇಕ್ಷಣೀಯ ಮಾದರಿಯ ತರಗತಿ ಕೊಠಡಿಗಳಿವೆ, ಅತ್ಯುತ್ತಮ ಮೂಲಸೌಕರ್ಯವಿದೆ. ಉತ್ತಮ ಬೋಧಕರೂ ಇದ್ದಾರೆ.
ಈ ಎರಡು ವಿದ್ಯಮಾನಗಳಿಂದಾಗಿ ಶೈಕ್ಷಣಿಕ ಅವಕಾಶಗಳ ಲಭ್ಯತೆಯಲ್ಲಿ ಬಹಳ ದೊಡ್ಡ ಅಂತರ ಸೃಷ್ಟಿಯಾಗಿದೆ. ಸತೀಶ್ ದೇಶಪಾಂಡೆ ಇದನ್ನು ಹೀಗೆ ಹೇಳುತ್ತಾರೆ: ‘ಹೆಚ್ಚು ಜನರಿಗೆ ಉನ್ನತ ಶಿಕ್ಷಣ ಲಭ್ಯವಾಗುತ್ತಿದೆ ಎಂಬುದರಲ್ಲಿ ಒಂದು ವಿಚಿತ್ರ ಅಂಶವೂ ಅಡಗಿದೆ. ಕೆಳ ಸ್ತರಗಳ ಜನರು ಉನ್ನತ ಶಿಕ್ಷಣಕ್ಕೆ ಬಂದರೂ ಮೇಲ್ ಸ್ತರದವರಿಗೆ ತಮ್ಮ ಮುನ್ನಡೆ ಅಥವಾ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸಾಧ್ಯವಾಗಿದೆ’.
ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಮೀಸಲಾತಿ ಇಲ್ಲ. ಆದರೆ, ಶ್ರೀಮಂತರಿಗೆ ಅಲಿಖಿತ ಮೀಸಲಾತಿ ದೊರೆಯುತ್ತಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, 2021–22ರಲ್ಲಿ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಶೇ 60ರಷ್ಟು ಮಂದಿ ಮೇಲ್‌ಸ್ತರದ ಹಿಂದೂಗಳು (ಜನಸಂಖ್ಯೆಯಲ್ಲಿ ಅವರ ಪಾಲು ಶೇ 20ರಷ್ಟು). ಇತರರ ಜಾತಿವಾರು ಲೆಕ್ಕಾಚಾರ ಹೀಗಿದೆ: ಪರಿಶಿಷ್ಟ ಜಾತಿ ಶೇ 6.8 (ಜನಸಂಖ್ಯೆ ಶೇ 17), ಪರಿಶಿಷ್ಟ ಪಂಗಡ ಶೇ 3.6 (ಜನಸಂಖ್ಯೆ ಶೇ 9), ಒಬಿಸಿ ಶೇ 24.9 (ಜನಸಂಖ್ಯೆ ಶೇ 45–50), ಮುಸ್ಲಿಮರು ಶೇ 3.8 (ಜನಸಂಖ್ಯೆ ಶೇ 15). ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ, ಅಲ್ಲಿನ ಬಹುಬೇಡಿಕೆಯ ಕೋರ್ಸ್‌ಗಳಲ್ಲಿ ಈ ಸಮುದಾಯಗಳ ವಿದ್ಯಾರ್ಥಿಗಳು ಇನ್ನೂ ಕಡಿಮೆ ಇದ್ದಾರೆ.
ಮೀಸಲಾತಿಯು ಪರಿಸ್ಥಿತಿಯಲ್ಲಿ ವ್ಯತ್ಯಾಸ ಉಂಟು ಮಾಡುತ್ತದೆ. ಮೀಸಲಾತಿ ನೀತಿಯನ್ನು ಅನುಸರಿಸುವ ಸರ್ಕಾರಿ ವಿಶ್ವವಿದ್ಯಾಲಯಗಳ ಜೊತೆ ಹೋಲಿಸಿದರೆ ವ್ಯತ್ಯಾಸ ಅರಿವಾಗುತ್ತದೆ. ಪರಿಶಿಷ್ಟ ಜಾತಿಯವರು ಶೇ 14.6ರಷ್ಟು, ಪರಿಶಿಷ್ಟ ಪಂಗಡದವರು ಶೇ 6ರಷ್ಟು, ಒಬಿಸಿ ಸಮುದಾಯ ಶೇ 31.2ರಷ್ಟು ಇದ್ದಾರೆ. ಮೀಸಲಾತಿಯ ಅನುಕೂಲ ಇಲ್ಲದ ಮುಸ್ಲಿಮರ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಅವರ ಪ್ರಮಾಣವು ಶೇ 4.1ರಷ್ಟಿದೆ.
ಕಳೆದ ಹಲವು ದಶಕಗಳಲ್ಲಿ ವಾಣಿಜ್ಯೀಕರಣ ಮತ್ತು ಖಾಸಗೀಕರಣವೇ ನಮ್ಮ ಶಿಕ್ಷಣ ನೀತಿಯಾಗಿದೆ. ರಾಜಕೀಯವಾಗಿ ಮಾತ್ರ ಇದನ್ನು ಸರಿಪಡಿಸಲು ಸಾಧ್ಯ. ಮುಖ್ಯವಾಗಿ ಮಾಡಕಬೇಕಿರುವುದು ಏನೆಂದರೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು. ಹೆಚ್ಚು ಹಣ ಕೊಡಬೇಕು, ಉತ್ತಮ ಆಡಳಿತ ಇರಬೇಕು, ಪೂರ್ಣಾವಧಿ ಬೋಧಕ ಸಿಬ್ಬಂದಿ, ಶೈಕ್ಷಣಿಕ ಸ್ವಾಯತ್ತೆ, ಪರಿಷ್ಕೃತ ಪಠ್ಯಕ್ರಮಗಳು ಇರಬೇಕು. ಇದರೊಂದಿಗೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಮೀಸಲಾತಿ ನೀತಿಯನ್ನು ಅನುಸರಿಸುವಂತೆ ಮಾಡಬೇಕು.
ಹೀಗೆಲ್ಲ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ? ಜೈರಾಮ್ ರಮೇಶ್ ಅವರ ಹೇಳಿಕೆಯು ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡುತ್ತದೆ. ಸಂವಿಧಾನಕ್ಕೆ 2005ರಲ್ಲಿ 93ನೇ ತಿದ್ದುಪಡಿ ತಂದು 15(5)ನೇ ವಿಧಿಯನ್ನು ಸೇರಿಸಲಾಯಿತು. ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಸಮುದಾಯಗಳ ಉನ್ನತಿಗಾಗಿ ವಿಶೇಷ ಅವಕಾಶ ಸೃಷ್ಟಿಸುವ ಅಧಿಕಾರವನ್ನು ಈ ತಿದ್ದುಪಡಿಯು ಸರ್ಕಾರಕ್ಕೆ ನೀಡುತ್ತದೆ. ‘ಅನುದಾನಿತ ಆಗಿರಲಿ, ಅನುದಾನರಹಿತವಾಗಿರಲಿ, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶದಲ್ಲಿ ಮೀಸಲಾತಿ ನೀಡಬಹುದಾಗಿದೆ’ ಎಂದು ಈ ವಿಧಿಯು ಹೇಳುತ್ತದೆ.
ಈ ತಿದ್ದುಪಡಿಯನ್ನು ಬಳಸಿಕೊಂಡು ‘ಕೇಂದ್ರ ಶಿಕ್ಷಣ ಸಂಸ್ಥೆಗಳು (ಪ್ರವೇಶದಲ್ಲಿ ಮೀಸಲು) ಕಾಯ್ದೆ’ಯನ್ನು 2006ರಲ್ಲಿ ಜಾರಿಗೆ ತರಲಾಯಿತು. ಆದರೆ, ಇದು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಒಬಿಸಿ ಸಮುದಾಯಗಳಿಗೆ ಮೀಸಲಾತಿ ಒದಗಿಸುತ್ತದೆ. ಅಶೋಕ್ ಕುಮಾರ್ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಈ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬಹುದು ಎಂದು ಕೋರ್ಟ್ ಹೇಳಿತು. ಆದರೆ, ಅನುದಾನರಹಿತ ವಿದ್ಯಾಸಂಸ್ಥೆಗಳ ಕುರಿತು ಏನನ್ನೂ ಹೇಳಿಲ್ಲ. ಈ ಸಮಸ್ಯೆಯೂ ಈಗ ಬಗೆಹರಿದಿದೆ. 2011ರಲ್ಲಿ ದ್ವಿಸದಸ್ಯ ಪೀಠ ಮತ್ತು 2014ರಲ್ಲಿ ಸಂವಿಧಾನ ಪೀಠವು ಖಾಸಗಿ ವಿದ್ಯಾಸಂಸ್ಥೆಗಳಲ್ಲಿಯೂ ಮೀಸಲಾತಿ ನೀಡುವುದನ್ನು ಎತ್ತಿಹಿಡಿದಿವೆ. ಹೀಗಾಗಿ, ಈ ಸಮಸ್ಯೆ ಈಗ ಉಳಿದಿಲ್ಲ.
ಈ ವಿಚಾರವನ್ನು ರಾಜಕೀಯ ಕಾರ್ಯಸೂಚಿ ಮಾಡುವ ಮೂಲಕ ಸಾಮಾಜಿಕ ನ್ಯಾಯ ನೀತಿಯಲ್ಲಿನ ಬಹುದೊಡ್ಡ ಲೋಪವೊಂದನ್ನು ಸರಪಡಿಸಬಹುದು. ದಲಿತ, ಆದಿವಾಸಿ ಮತ್ತು ಹಿಂದುಳಿದವರನ್ನು ಒಟ್ಟಾಗಿಸುವ ಮೂಲಕ ಸಾಮಾಜಿಕ ನ್ಯಾಯ ರಾಜಕಾರಣದ ಗಂಭೀರ ಸಮಸ್ಯೆಯೊಂದನ್ನು ಕೂಡ ಪರಿಹರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.