
ವಿಶ್ಲೇಷಣೆ: ಮಗುಕನ್ನಡವೇ ಕನ್ನಡದ ನಾಳೆಗಳು..! ಕನ್ನಡ ಭಾಷೆ ಕಲಿಸಿ ಹಕ್ಕೊತ್ತಾಯ
ಕಲಿಕೆಯ ಪ್ರಕ್ರಿಯೆಯನ್ನು ಸರಳ ಹಾಗೂ ಸೃಜನಶೀಲ ಆಗಿಸದೆ ಹೋದರೆ ಕನ್ನಡ ಉಳಿಸುವ ಪ್ರಯತ್ನಗಳು ಪರಿಣಾಮಕಾರಿ ಆಗಲಾರವು. ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಕಲಿಸಿ ಎನ್ನುವ ಹಕ್ಕೊತ್ತಾಯದ ಆಂದೋಲನವೂ ಇಂದಿನ ಅಗತ್ಯ.
––––––––
ನಾವೇಕೆ ನಮ್ಮ ಮಕ್ಕಳಿಗೆ ಕನ್ನಡವನ್ನು ಸರಳವಾಗಿ ಕಲಿಸುತ್ತಿಲ್ಲ? ಕನ್ನಡದ ಬಗ್ಗೆ ಬಹಳ ಪ್ರೀತಿ ಎನ್ನುತ್ತೇವೆ. ಸುಲಭವಾಗಿರುವ ಕನ್ನಡವನ್ನು ಕಷ್ಟ ಮಾಡಿ, ಒಂದನೇ ತರಗತಿಯಿಂದಲೇ ಪ್ರಾಣ ಹಿಂಡೋಕೆ ಶುರು ಮಾಡುತ್ತೇವೆ. ಇವತ್ತಿನ ಮಕ್ಕಳಿಗೆ ಇವತ್ತಿನ ಕನ್ನಡ ಕಲಿಸಬೇಕು. ಅದೂ ಏಳನೇ ತರಗತಿಯವರೆಗೆ ಕತೆ, ಹಾಡು, ಕಾರ್ಟೂನ್‌ಗಳನ್ನು ಕೇಳಿಸೋದು, ತೋರಿಸೋದು ಮಾಡಿ ಕನ್ನಡವನ್ನು ಅವರ ಗೆಳೆಯರನ್ನಾಗಿ ಮಾಡಬೇಕು. ಉಹೂಂ, ಏಳುನೂರು ವರ್ಷಗಳ ಹಿಂದಿನ ಕೇಶೀರಾಜನ ‘ಶಬ್ದಮಣಿದರ್ಪಣ’ದ ಬಗ್ಗೆ ಇರುವಷ್ಟು ಮೋಹ, ಇವತ್ತು ಕನ್ನಡ ಉಳಿಸುವ ಕಡೆಗೆ ನಮಗಿಲ್ಲ. ಕನ್ನಡ ನಮ್ಮ ತಾಯಿ ಎಂದು ಹೇಳೋದೇ ಸೈ. ಅವಳ ಮಗುವನ್ನೇ ಕಿತ್ತುಕೊಳ್ಳುತ್ತಿರುವುದು ಗೊತ್ತೇ ಆಗಲ್ಲ. ಈಗ ಬೇಕಿರೋದು ‘ಮಗುಕನ್ನಡ’ ಅಂತ ಹೇಗೆ ವಿವರಿಸುವುದು? ಕಾಲ ಬದಲಾದರೂ ಭಾಷೆ ಕಲಿಸುವ ರೀತಿ ಬದಲಾಯಿಸದೇ ಎಡಬಿಡಂಗಿಗಳಾಗಿರುವ ನಾವು, ಎಂದೋ ಕನ್ನಡ ಸಾಯಬಹುದೆಂದು ಇಂದು ಅಳುತ್ತಾ ಕೂರಬೇಕಾ? ಅಥವಾ ಬದುಕಿಸುವ ದಾರಿ ಹುಡುಕಬೇಕಾ?
ಕನ್ನಡವನ್ನು ಮಗುಭಾಷೆ ಅಥವಾ ಮಕ್ಕಳ ನುಡಿಯಾಗಿ ಬದಲಿಸಲು ಬರೀ ಎರಡು ವಿಧಾನಗಳನ್ನು ಬಳಸಿದರೆ ಸಾಕು. ಆದರೆ, ಈ ಎರಡು ಸರಳ ವಿಧಾನಗಳನ್ನು ನಮ್ಮ ವಿದ್ವಾಂಸರಿಂದ ಹಿಡಿದು, ಸರ್ಕಾರದ ತನಕ ಮನಗಾಣಿಸಲು ಆಗದಿರು ವುದಕ್ಕೆ ನಮ್ಮ ಅಹಂಕಾರವೇ ಕಾರಣ. ಇದಕ್ಕೆ ಹೆಚ್ಚುವರಿ ಬಂಡವಾಳ ಬೇಕಿಲ್ಲ, ಹೆಚ್ಚುವರಿ ಶಿಕ್ಷಕರೂ ಬೇಕಿಲ್ಲ. ಮನಸ್ಸು ಮತ್ತು ಕನ್ನಡ ಪ್ರೀತಿ ಇದ್ದರೆ ಸಾಕು.
ಮೊದಲು, ನಮ್ಮ ಪ್ರಾಥಮಿಕ ಕನ್ನಡ ಪಾಠಪುಸ್ತಕಗಳಲ್ಲಿ ಪ್ರತೀ ದಿನ ನಾವು ಮಾತಾಡುವ ಕನ್ನಡವನ್ನು ಬಳಸಬೇಕು. ಉದಾ: ಸಂಕಲನ, ವ್ಯವಕಲನ ಎಂದೆಲ್ಲ ಹೇಳುವ ಬದಲಿಗೆ ಕೂಡೋದು, ಕಳೆಯೋದು ಅಂದರೆ ಅರ್ಧ ಹೊರೆ ಇಳಿಯುತ್ತದೆ. ವ್ಯಾಕರಣ ಪಾಠವಂತೂ ಇರಲೇಬಾರದು. ಅದೆಲ್ಲಾ ಮುಂದೆ ವಿಶೇಷವಾಗಿ ಕನ್ನಡ ಕಲಿಯುವವರಿಗೆ ಇರಲಿ. ಈಗ ನಾನು ಹೇಳಹೊರಟಿರುವ ಎರಡು ವಿಧಾನಗಳನ್ನು ಗಮನಿಸೋಣ. ಒಂದನೆಯದು, ನಮ್ಮೊಳಗೇ ಇರುವ ಭಾಷಾ ಸಾಮರ್ಥ್ಯವನ್ನು ದುಡಿಸಿ ಕೊಳ್ಳುವುದು. ಈ ಬಗ್ಗೆ ಭಾಷಾ ವಿಜ್ಞಾನಿ ನೋಮ್ ಚಾಮ್‌ಸ್ಕಿ ಅರವತ್ತರ ದಶಕದಲ್ಲೇ ಹೇಳಿದ್ದಾರೆ. ಈ ಪ್ರಕಾರ, ಮಕ್ಕಳು ಹನ್ನೆರಡು ವರ್ಷಗಳ ಒಳಗೆ ಕಿವಿಯ ಮೇಲೆ ಬಿದ್ದ ಭಾಷೆಯನ್ನು ಸಲೀಸಾಗಿ ಕಲಿಯುತ್ತವೆ. ಮಕ್ಕಳಿಗೆ ಕನ್ನಡವನ್ನೋ ಇಂಗ್ಲಿಷನ್ನೋ ಆಟ ಆಡಿದಂತೆ ಕಲಿಸಬಹುದು. ಅದಕ್ಕೆ ಅವರಿಗೆ ‘ಕೇಳು ಪಾಠ’ ಮತ್ತು ‘ನೋಡು ಪಾಠ’ ಒದಗಿಸಬೇಕು. ಈಗ ಬೃಹದಾಕಾರವಾಗಿ ಬೆಳೆದಿರುವ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನೇ ನಾವೀಗ ಕನ್ನಡ ಕಲಿಕೆಯ ತಾಣವಾಗಿ ಬಳಸಿಕೊಳ್ಳುವ ಯೋಜನೆಯನ್ನು ರೂಪಿಸಬೇಕಿದೆ. ರಾಜ್ಯದ ಎಲ್ಲಾ ಮಾಧ್ಯಮದ ಶಾಲೆಗಳಲ್ಲಿ ಪ್ರತೀದಿನ ಕನಿಷ್ಠ ಒಂದು ಗಂಟೆಯಾದರೂ ಮಕ್ಕಳಿಗೆ ಹಾಡು–ಕತೆಯ ರೂಪದ ಪಾಠಗಳನ್ನು ತೋರಿಸಬೇಕು, ಕೇಳಿಸಬೇಕು. ಆ ಅವಧಿಯಲ್ಲಿ ಮಕ್ಕಳನ್ನು ಅವರಷ್ಟಕ್ಕೇ ಬಿಡಬೇಕು. ಆಮೇಲೆ ಅದರ ಬಗೆಗೆ ಅವರೇ ಮಾತಾಡಲು ಅವಕಾಶ ಕೊಡಬೇಕು. ಇದೊಂದು ಮನಸ್ಸು ಅರಳಿಸುವ ಖುಷಿಯ ಕ್ಷಣವಾಗಿರಬೇಕು. ಇದನ್ನೊಂದು ಆಂದೋಲನದ ರೀತಿಯಲ್ಲಿ ಮಾಡಬೇಕು.
ಎರಡನೆಯದು, ಕನ್ನಡದ ಮೇಲೆ ಕೆಲವರು ಯಜಮಾನಿಕೆ ಮಾಡುತ್ತಿದ್ದಾರೆ. ತಾವು ಹೇಳಿದ್ದೇ ಶುದ್ಧ ಕನ್ನಡ, ಉಳಿದದ್ದೆಲ್ಲಾ ಕನ್ನಡವೇ ಅಲ್ಲ ಎನ್ನುತ್ತಾ ಕನ್ನಡದ ಕೊಲೆಗೆ ಶಸ್ತ್ರ ಕೊಡುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಹಲವು ಆಡುಕನ್ನಡಗಳಿವೆ; ಅವುಗಳ ಉಚ್ಚಾರ ಬೇರೆ ಬೇರೆ ರೀತಿಯಿದೆ. ಇದು ಕನ್ನಡದ ಶ್ರೀಮಂತಿಕೆಯ ಕುರುಹು. ಆದರೆ, ಕೆಲವರು ಅದನ್ನೆಲ್ಲಾ ಇಸ್ತ್ರಿ ಹಾಕಿ ‘ಗ್ರಂಥದ ಭಾಷೆ’ ಅಂತ ಒಂದನ್ನು ಕೃತಕವಾಗಿ ಸೃಷ್ಟಿಸಿ, ಅದರಂತೆಯೇ ಮಾತಾಡಬೇಕು, ಬರೆಯಬೇಕು ಎಂದು ಒತ್ತಾಯಿಸು ತ್ತಿದ್ದಾರೆ. ಆ ಮೂಲಕ ಕೆಲವರಲ್ಲಿ ಕೀಳರಿಮೆ ಹುಟ್ಟಿಸುವುದನ್ನು ಮೊದಲು ನಿಲ್ಲಿಸಬೇಕು. ಅವರು ಹಾಗೆಯೇ ಮಾತಾಡಲಿ, ಬರೆಯಲಿ. ಎಲ್ಲರೂ ಹಾಗೆ ಬರೆಯುವ– ಮಾತಾಡುವ ಅಗತ್ಯವಿಲ್ಲ. ಯಾವ್ಯಾವುದೋ ಭಾಷೆ ಅರ್ಥ ಮಾಡಿಕೊಳ್ಳುವವರು, ಆಡುಕನ್ನಡಗಳನ್ನು ಸ್ವಲ್ಪ ಸಮಾಧಾನದಿಂದ ಕೇಳಿಸಿಕೊಂಡು ಅರ್ಥ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲವೆ? ಆಗದಿದ್ದರೆ ಬಿಟ್ಟುಬಿಡಿ. ನಮ್ಮ ಕನ್ನಡ ನಮಗೆ. ಯಾರೂ ಯಾರನ್ನೂ ಲೇವಡಿ ಮಾಡಬೇಕಾಗಿಲ್ಲ. ಕನ್ನಡ ಉಳಿಯಲೇಬೇಕು ಅನ್ನುವುದಾದರೆ, ಕನ್ನಡವನ್ನು ಇವತ್ತಿಗೆ ತಕ್ಕಂತೆ ಮರುರೂಪಿಸಿಕೊಳ್ಳುತ್ತಲೇ ಇರಬೇಕು. ಹಾಗೆಂದರೇನು?
ಕನ್ನಡದ ಉಳಿವಿನ ಬಗೆಗೆ ಬದುಕಿಡೀ ಧ್ಯಾನಿಸುತ್ತಿರುವ ಡಿ.ಎನ್. ಶಂಕರಬಟ್ಟರನ್ನು ಕನ್ನಡ ನಾಡು ಮೂಲೆಗುಂಪು ಮಾಡಿದೆ. ಬರಹಕ್ಕೂ ಮಾತಿಗೂ ನಂಟು ತಪ್ಪಿದರೆ ಆ ಭಾಷೆ ಕೇವಲ ಬರವಣಿಗೆಯಲ್ಲಷ್ಟೇ ಉಳಿದು ಜನ ಬೇರೆ ಭಾಷೆಯತ್ತ ಹೋಗುತ್ತಾರೆ ಎಂಬುದಕ್ಕೆ ಅವರು ಸಂಸ್ಕೃತದ ಉದಾಹರಣೆ ಕೊಡುತ್ತಾರೆ. ಹಳಗನ್ನಡ ಜೀವಂತಿಕೆ ಕಳೆದುಕೊಂಡಾಗ ವಚನಕಾರರು ‘ಜನರ ಕನ್ನಡ’ ಬಳಸಿದ ವಿವೇಕವನ್ನು ತೆರೆದು ತೋರಿಸುತ್ತಾರೆ. ಬಿಎಂಶ್ರೀ ಹೇಳುವ, ಉಳಿಯಲಾರದ್ದನ್ನು, ಉಳಿಯಬಾರದ್ದನ್ನು ತ್ಯಜಿಸುವ ಧೈರ್ಯ ನಮ್ಮಲ್ಲಿ ಬೆಳೆಯಬೇಕು. ಗಿಡವನ್ನು ಸಾಯಿಸದೆ, ಗಿಡವನ್ನು ನಾಶಮಾಡುವ ಒಣರೆಂಬೆಯನ್ನು ಕತ್ತರಿಸಿ ಕಸಿಮಾಡಿ ಹೂಹಣ್ಣು ಬೆಳೆವಂತೆ ಮಾಡಬೇಕು ಎಂಬ ಮಾತು ಉಲ್ಲೇಖಿಸಿ, ಒಳನುಡಿಗಳಲ್ಲಿಲ್ಲದ ಮಹಾಪ್ರಾಣಗಳು ಬರಹದಲ್ಲಿಲ್ಲದಿದ್ದರೆ ಅಪರಾಧವಲ್ಲ ಎನ್ನುತ್ತಾರೆ.
ಕನ್ನಡದಲ್ಲಿರುವುದು ಕೇವಲ ಮೂರು ಸಂಧಿ, ಮೂರು ಸಮಾಸ. ಇದರಲ್ಲಿ ಕನ್ನಡದೊಳಗೆ ಬಂದಿರುವ ಎಲ್ಲಾ ಪದಗಳನ್ನೂ ವಿವರಿಸಬಹುದು. ಒಂದನೇ ತರಗತಿಗೇ ಸಂಸ್ಕೃತ ಪದಗಳೇ ಹೆಚ್ಚು ತುಂಬಿರುವ ಅನಾಕರ್ಷಕ ಕನ್ನಡ ಪುಸ್ತಕ ಮಾಡಿದರೆ, ಮಕ್ಕಳು ಕನ್ನಡ ಬಿಟ್ಟು ಇಂಗ್ಲಿಷ್‌ಗೆ ಹೋಗದೆ ಇನ್ನೇನು ಮಾಡುತ್ತವೆ?
ನಾವು ನಿಜವಾಗಲೂ ಹೋರಾಟ ಮಾಡಬೇಕಾದ ಜಾಗದಲ್ಲಿ ಹೋರಾಟವನ್ನೇ ಮಾಡುತ್ತಿಲ್ಲ.ಕರ್ನಾಟಕದಲ್ಲಿ ನೂರಾರು ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಆ ಲೆಕ್ಕದಲ್ಲಿ ಸಾವಿರಾರು ಕನ್ನಡ ಉಪನ್ಯಾಸಕರ ಹುದ್ದೆ ಹುಟ್ಟಬೇಕಿತ್ತು. ಆದರೆ ಅವುಗಳು ಬಿಎ, ಬಿಕಾಂ ಮಕ್ಕಳಿಗೂ ಕನ್ನಡ ಕಲಿಸುತ್ತಿಲ್ಲ. ಕೆಲವರು ಕಣ್ಣೊರೆಸಲು ಒಂದು ಸೆಮಿಸ್ಟರ್ ಕಲಿಸುತ್ತಾರೆ. ಕನ್ನಡದವರೇ ಕಟ್ಟುವ ಸಂಸ್ಥೆಗಳಲ್ಲೂ ಹೀಗೆಯೇ ಮಾಡುತ್ತಾರೆಂದರೆ, ಅದನ್ನು ಕನ್ನಡ ದ್ವೇಷ ಎಂದು ಕರೆಯಬೇಕಾ? ಬೇರೆ ರಾಜ್ಯದ ವಿದ್ಯಾರ್ಥಿಗಳನ್ನು ‘ಆದಾಯ’ಮೂಲ ಎಂದು ಓಲೈಸಲಾಗುತ್ತದೆ. ಕನ್ನಡದ ವಿದ್ಯಾರ್ಥಿಗಳು ಲೆಕ್ಕಕ್ಕಿಲ್ಲ. ಸರ್ಕಾರಿ ಕಾಲೇಜುಗಳು ಕೊಡುವಂತೆ ಕನ್ನಡ/ಹಿಂದಿ/ಉರ್ದು/ಸಂಸ್ಕೃತ ಇತ್ಯಾದಿ ಆಯ್ಕೆ ಕೊಡುವುದಕ್ಕೆ ಏನು ತೊಂದರೆ? ಈ ಕ್ಯಾಂಪಸ್ ಗಳಲ್ಲಿ ಕನ್ನಡ ವಾತಾವರಣವೇ ಇರುವುದಿಲ್ಲ. ಲಕ್ಷಾಂತರ ರೂಪಾಯಿಯನ್ನು ಕನ್ನಡದ ಮಕ್ಕಳಿಂದ ಪಡೆದು, ಎಲ್‌ಕೆಜಿಯಿಂದ ಉನ್ನತ ಶಿಕ್ಷಣದ ತನಕ ಕನ್ನಡ ಮಾತನಾಡುವುದೇ ಕೀಳು ಎಂಬಂತೆ ಬಿಂಬಿಸುವುದರಿಂದ, ಈಗೀಗ ಬೆಂಗಳೂರಿನ ಮಕ್ಕಳು ತಮ್ಮ ಊರಿನ ನೆಂಟರೊಂದಿಗೂ ಕನ್ನಡ ಮಾತಾಡಲು ಇಷ್ಟಪಡುವುದಿಲ್ಲ. ಹೋರಾಟ ಇತ್ತ ಕಡೆ ಮುಖಮಾಡಲಿ.
ಇದೆಲ್ಲದರಾಚೆಗೆ ಒಳ್ಳೆಯ ಬೆಳವಣಿಗೆಗಳೂ ಆಗುತ್ತಿವೆ. ವಿದೇಶ ಪ್ರವಾಸದ ಕನ್ನಡಿಗರ ವ್ಲಾಗ್‌ಗಳನ್ನು ಗಮನಿಸಿ. ಅದರಲ್ಲಿ ಕೆಲವರಿಗೆ ಇಂಗ್ಲಿಷ್ ಬರುವುದಿಲ್ಲ. ಆದರ ಅಗತ್ಯವೇ ಇಲ್ಲ ಎಂಬುದನ್ನು ಅವರು ತೋರಿಸಿಕೊಡುತ್ತಿದ್ದಾರೆ. ಕನ್ನಡವನ್ನೇ ತಮ್ಮ ಅನ್ನದ ಭಾಷೆ ಮಾಡಿಕೊಂಡಿದ್ದಾರೆ. ನಮ್ಮ ಭ್ರಮೆಗಳನ್ನು ಪುಡಿಮಾಡಿದ್ದಾರೆ.
ಚೀನಾದ ಕೆಲವು ನಗರಗಳಲ್ಲಿ ಬಿಟ್ಟರೆ ಹೆಚ್ಚಿನೆಡೆ ಜನರಿಗೆ ಇಂಗ್ಲಿಷ್ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ‘ನೋ ಇಂಗ್ಲಿಷ್’ ಅಂತ ಹೇಳೋಕೆ ಮಾತ್ರ. ಪ್ರವಾಸೋದ್ಯಮದಿಂದಲೇ ಲಕ್ಷಾಂತರ ಉದ್ಯೋಗ ಸೃಷ್ಟಿ ಮಾಡಿರುವ ಅವರನ್ನು ನೋಡಿದರೆ ‘ಕನ್ನಡ ಅನ್ನದ ಭಾಷೆಯಲ್ಲ’ ಎಂದು ಇಂಗ್ಲಿಷ್ ಮಾಧ್ಯಮ ಮಾಫಿಯಾಗಳು ಹುಟ್ಟುಹಾಕಿದ ಖೆಡ್ಡಾಕ್ಕೆ ನಾವು ಎಷ್ಟು ಸಲೀಸಾಗಿ ಬಿದ್ದಿದ್ದೇವೆ ಎನ್ನುವುದು ಗೊತ್ತಾಗುತ್ತದೆ. ಇಂದಿನ ಯುವಜನ ಬೇರೆ ಬೇರೆ ಮಾಧ್ಯಮಗಳಲ್ಲಿ ಕನ್ನಡದ ಮೂಲಕ ಬದುಕು ಕಂಡುಕೊಂಡಿದ್ದಾರೆ. ಕನ್ನಡ ಅಂದ್ರೆ ಬರೀ ಪದಗಳಲ್ಲ. ಇಲ್ಲಿನ ಬದುಕು, ವೈವಿಧ್ಯ, ಸೊಬಗು. ಇದನ್ನೆಲ್ಲಾ ಆತ್ಮವಿಶ್ವಾಸದಿಂದ ಕನ್ನಡ ಸಿನಿಮಾಗಳಲ್ಲಿ ಬಳಕೆ ಮಾಡಿಕೊಳ್ಳುತ್ತಾ ಜಗತ್ತಿನ ಗಮನ ಕನ್ನಡದೆಡೆಗೆ ಸೆಳೆಯುತ್ತಿರುವುದು ಕೂಡ ಒಳ್ಳೆಯ ಬೆಳವಣಿಗೆ.
ಎಲ್‌ಕೆಜಿಯಿಂದ ಇಂಜಿನಿಯರಿಂಗ್ ಮುಗಿಯುವ ತನಕ ಹುಚ್ಚುಗಟ್ಟಿ ಓದಿ ಹತ್ತಿಪ್ಪತ್ತು ಸಾವಿರ ಸಂಬಳ ತೆಗೆದುಕೊಳ್ಳುವುದಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾ? ಒಂದು ವೇಳೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿಯವರು ಇಲ್ಲದೇ, ಎಲ್ಲವೂ ಅತ್ಯುತ್ತಮ ಸರ್ಕಾರಿ ಶಾಲಾ ಕಾಲೇಜುಗಳೇ ಆಗಿದ್ದರೆ, ಕನ್ನಡ ಅನ್ನದ ಭಾಷೆಯಲ್ಲ ಎಂಬ ಸುಳ್ಳು ಪ್ರಚಾರ ಹುಟ್ಟುತ್ತಲೇ ಇರಲಿಲ್ಲ, ಅಲ್ಲವೇ?
ಅಯ್ಯಾ, ಸರ್ಕಾರದವರೇ ಮತ್ತು ಕೆಲವು ಯಜಮಾನರುಗಳೇ, ಎಲ್ಲಾ ನಾಟಕ ಬಿಟ್ಟು ಕನ್ನಡ ಮಕ್ಕಳಿಗೆ ನ್ಯಾಯವಾಗಿ ಸಿಗಬೇಕಾದ ಕನ್ನಡನುಡಿಯ ಆಸ್ತಿಪಾಲನ್ನು ಕೊಟ್ಟುಬಿಡಿ. ಅದು ತಾಯಿ–ತಂದೆ, ಮಗು, ಎಲ್ಲರ ಕನ್ನಡವೂ ಆಗಲಿ. ಹಾಗೆಯೇ ನಾವೆಲ್ಲರೂ ನಮ್ಮ ಮೊಬೈಲ್, ಎಟಿಎಂ, ಸೇರಿದಂತೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕನ್ನಡವನ್ನೇ ಬಳಸೋಣ. ಈಗ ‘ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಕಲಿಸಿ’ ಮತ್ತು ‘ಕನ್ನಡ ಪಾಠ ಸರಳವಾಗಲಿ’ ಎಂಬ ಆಂದೋಲನ ಶುರುಮಾಡೋಣವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.