ಮಕ್ಕಳಿಗೆ ಪೋಷಕಾಂಶಭರಿತ ಸಮತೋಲಿತ ಆಹಾರ ಸಮೃದ್ಧವಾಗಿ ಲಭ್ಯವಾಗದಿದ್ದಲ್ಲಿ, ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಕುಗುತ್ತಾರೆ. ಇಂತಹವರನ್ನು ಕುಪೋಷಣೆಪೀಡಿತ ಮಕ್ಕಳು ಎಂದು ಕರೆಯಲಾಗುತ್ತದೆ. ಸಸ್ಯಾಹಾರವನ್ನು ಸೇವಿಸುವ ಜೀವಿಗಳು, ಅನ್ಯಜೀವಿಗಳನ್ನು ಅವಲಂಬಿಸಿ ಬದುಕುವ ಮಾಂಸಾಹಾರಿ ಪ್ರಾಣಿಗಳು ಸಹ ಕುಪೋಷಣೆಯಿಂದ ಬಳಲುವುದನ್ನು ಕಾಣಬಹುದು. ಮನುಕುಲಕ್ಕೆ ಕುಪೋಷಣೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.
ಹವಾಮಾನ ಬದಲಾವಣೆಯಿಂದಾಗಿ ಏನೆಲ್ಲಾ ಅವಘಡಗಳು ಸಂಭವಿಸುತ್ತವೆ ಎಂಬುದನ್ನು ಪತ್ತೆ ಮಾಡಲು ವಿಜ್ಞಾನಿಗಳು, ಹವಾಮಾನ ತಜ್ಞರು, ಪರಿಸರ ಸಂಘಟನೆಗಳವರು ಶ್ರಮಿಸುತ್ತಿದ್ದಾರೆ. ಭೂಮಿಯ ಮೇಲಿನ ಜೀವಿಗಳ ಪೈಕಿ ಮೂರನೇ ಒಂದು ಭಾಗದಷ್ಟು ಜೀವಿಪ್ರಭೇದಗಳ ಆಹಾರ ಮೂಲ ಸಸ್ಯಗಳು. ದೇಹದ ಶಕ್ತಿ ಸಂಚಯನಕ್ಕೆ ಅವು ಸಸ್ಯಗಳನ್ನೇ ಅವಲಂಬಿಸಿಕೊಂಡಿವೆ. ಸ್ವಾಭಾವಿಕವಾಗಿ ಸಸ್ಯಗಳಲ್ಲಿ ಕ್ಯಾಲರಿ ಅಂಶ ಕಡಿಮೆ ಇರುವುದರಿಂದ, ಶಾಖಾಹಾರಿ ಪ್ರಾಣಿಗಳು ಹೆಚ್ಚು ಹೆಚ್ಚು ಸಸ್ಯಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಹವಾಗುಣ ಬದಲಾವಣೆಯಿಂದಾಗಿ ಕೆಲವು ಸಸ್ಯಗಳಲ್ಲಿ ಪೋಷಕಾಂಶಗಳ ಕೊರತೆಯಾಗುತ್ತಿರುವುದು ಈ ನಿರ್ದಿಷ್ಟ ಸಸ್ಯಗಳನ್ನು ಅವಲಂಬಿಸಿಕೊಂಡಿರುವ ಶಾಖಾಹಾರಿ ಪ್ರಾಣಿಗಳ ಸಂಕಷ್ಟವನ್ನು ಹೆಚ್ಚು ಮಾಡಿದೆ.
ಭೂಮಿಯ ವಾತಾವರಣದಲ್ಲಿ ಇಂಗಾಲಾಮ್ಲದ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಸಸ್ಯವೂ ಹೆಚ್ಚು ಹೆಚ್ಚು ಇಂಗಾಲಾಮ್ಲವನ್ನು ಹೀರಿಕೊಂಡು ವೇಗವಾಗಿ ಬೆಳೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಸಸ್ಯಗಳಲ್ಲಿ ಸಂಚಯವಾಗಬೇಕಾದ ಇತರ ಪೋಷಕಾಂಶಗಳ ಕೊರತೆ ಕಂಡುಬರುತ್ತಿದೆ ಎಂದು ಸಸ್ಯ ವಿಜ್ಞಾನಿ ಎಲೆನ್ ವಿಟ್ಟಿ ವರದಿ ಮಾಡಿದ್ದಾರೆ. ಮೇಲ್ನೋಟಕ್ಕೆ ಗೋಚರಿಸದ ಈ ವಿದ್ಯಮಾನವು ಮುಂದಿನ ದಿನಗಳಲ್ಲಿ ಇಡೀ ಆಹಾರ ಸರಪಳಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ‘ದಿ ಕನ್ಸರ್ವೇಷನ್’ ಪತ್ರಿಕೆ ವರದಿ ಮಾಡಿದೆ.
ಹವಾಗುಣ ಬದಲಾವಣೆ ಎಂಬುದು ಪ್ರತಿನಿತ್ಯದ ವಿದ್ಯಮಾನವಾದರೆ, ಮುಂದೆ ಬರಲಿರುವ ಶಾಖದಲೆಗಳು ಸಸ್ಯಗಳ ಒಟ್ಟಾರೆ ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ ಎಂದು ‘ನಾಸಾ’ದ ಉಪನಿರ್ದೇಶಕ ಅಲೆಕ್ಸ್ ರೂನೆ ಹೇಳುತ್ತಾರೆ.
ಮಾನವ ತನ್ನ ದೇಹಕ್ಕೆ ಯಾವ ಪೋಷಕಾಂಶಗಳ ಕೊರತೆಯಿದೆ ಎಂದು ತಾನಾಗಿಯೇ ತಿಳಿದುಕೊಳ್ಳಲಾರ. ಆದರೆ, ಬಹುತೇಕ ವನ್ಯಜೀವಿಗಳು ತಮ್ಮ ಪೋಷಕಾಂಶಗಳ ಕೊರತೆಯನ್ನು ತಿಳಿದುಕೊಂಡು, ಅದನ್ನು ನಿವಾರಿಸಿಕೊಳ್ಳುವ ಗುಣವನ್ನು ಅಂತರ್ಗತವಾಗಿಯೇ ಹೊಂದಿರುತ್ತವೆ. ಉದಾಹರಣೆಗೆ, ಆನೆಗೆ ಉಪ್ಪಿನಂಶದ ಕೊರತೆಯಾದಾಗ, ಉಪ್ಪಿನಂಶವಿರುವ ಮಣ್ಣನ್ನು ತಿನ್ನುವ ಮೂಲಕ ಕೊರತೆಯನ್ನು ನೀಗಿಸಿಕೊಳ್ಳುವ ವಿದ್ಯಮಾನವನ್ನು ತಜ್ಞರು ದಾಖಲಿಸಿದ್ದಾರೆ.
ಜೀವಜಾಲದ ಸರಪಳಿಯಲ್ಲಿ ಕೀಟಗಳದ್ದು ಬಹುಮುಖ್ಯ ಪಾತ್ರ. ಹಲವು ಕೀಟಗಳು ಪರಾಗಸ್ಪರ್ಶದ ಮೂಲಕ ತಮ್ಮ ನೈಸರ್ಗಿಕ ಸೇವೆಯನ್ನು ನೀಡಿದರೆ, ಸಸ್ಯಗಳ ಎಲೆಯಂತಹ ಭಾಗಗಳನ್ನು ಭಕ್ಷಿಸುವ ಕೀಟಗಳು ಪಕ್ಷಿಗಳಿಗೆ ಹಾಗೂ ಕೆಲವು ಪ್ರಾಣಿಗಳಿಗೆ ಆಹಾರವಾಗುತ್ತವೆ. ಕಂಬಳಿಹುಳು ಮತ್ತು ಹುಲ್ಲು ಮಿಡತೆ ಕೀಟ ಪ್ರಭೇದಗಳು ಸಸ್ಯವನ್ನು ಅವಲಂಬಿಸಿ ಬದುಕುತ್ತವೆ. ಅವು ಅವಲಂಬಿಸಿದ ಸಸ್ಯಗಳಲ್ಲಿ ಪೋಷಕಾಂಶಗಳ ಕೊರತೆ ಕಂಡುಬಂದಿದ್ದರಿಂದ, ಅವುಗಳ ಗಾತ್ರ ಮತ್ತು ವಂಶಾಭಿವೃದ್ಧಿಯಲ್ಲಿ ಏರುಪೇರು ಆಗಿದ್ದನ್ನು ವಿಜ್ಞಾನಿಗಳು ದಾಖಲಿಸಿದ್ದಾರೆ. ವಾತಾವರಣದಲ್ಲಿ ಇಂಗಾಲಾಮ್ಲದ ಪ್ರಮಾಣ ಹೆಚ್ಚಾದಂತೆ, ಈ ಕೀಟಗಳ ಸಂಖ್ಯೆಯು ಗಮನಾರ್ಹವಾಗಿ ಇಳಿಮುಖವಾಗುತ್ತಿದೆ. ಸಸ್ಯಗಳಲ್ಲಿ ಇಂಗಾಲಾಮ್ಲದ ಪ್ರಮಾಣ ಜಾಸ್ತಿ ಆಗಿರುವ ಕಾರಣಕ್ಕೆ ಪೀಡೆಕೀಟಗಳೆಂದು ಕರೆಯಲಾಗುವ ಗಿಡಹೇನುಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ಕಾಡು ಮರಗಳು ಹಣ್ಣು ಬಿಡುವ ಕಾಲ. ಈಗ್ಗೆ ಕೆಲವು ದಶಕಗಳ ಹಿಂದೆ ಒಮ್ಮೆ ಕಾಡಿಗೆ ಹೋದರೆ ಮುಳ್ಳಣ್ಣು, ಸಂಪಿಗೆ, ಪರಿಗೆ, ದ್ಯಾವಣಿಗೆ, ಗುಡ್ಡೇಗೇರು, ಹಲಗೆ ಹಣ್ಣು, ನೆಲ್ಲಿ, ಬುಕ್ಕೆ, ನುರುಕಲು, ತುಂಬ್ರಿ ಹೀಗೆ ಲೆಕ್ಕವಿಲ್ಲದಷ್ಟು ಪೋಷಕಾಂಶಭರಿತ ಕಾಡಿನ ಹಣ್ಣುಗಳು ಸಮಾರಾಧನೆಗೆ ಸಿಗುತ್ತಿದ್ದವು. ಕ್ಷೀಣವಾದ ಕಾಡಿನಲ್ಲಿ ಅದು ಹೇಗೋ ಉಳಿದಿರುವ ಕಾಡು ಮರ, ಬಳ್ಳಿಗಳ ಫಲ ನೀಡುವ ಕ್ಷಮತೆ ತೀರಾ ಇಳಿಮುಖವಾಗಿದೆ. ಬುಟ್ಟಿಗಟ್ಟಲೆ ನೆಲ್ಲಿಕಾಯಿ ಬಿಡುತ್ತಿದ್ದ ಮರಗಳಲ್ಲಿ ಕೈಬೆರಳೆಣಿಕೆಯಷ್ಟು ನೆಲ್ಲಿಕಾಯಿ ಸಿಗುತ್ತಿದೆ. ಕೆಲವು ಭಾಗಗಳಲ್ಲಿ ಹೂ ಬಿಟ್ಟರೂ ಕಾಯಿ ಕಚ್ಚುತ್ತಿಲ್ಲವೆಂಬುದನ್ನು ಮಲೆನಾಡು ಭಾಗದ ಕೃಷಿ ತಜ್ಞರು ತೋರಿಸಬಲ್ಲರು.
ಹವಾಗುಣ ಬದಲಾವಣೆಯಿಂದಾಗಿ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಬದುಕು ಕೂಡಾ ಕಷ್ಟಕರವಾಗಿದೆ. ಕಾಡಿನ ಕಿರು ಉತ್ಪನ್ನಗಳನ್ನು ನಂಬಿಕೊಂಡಿರುವ ಸೋಲಿಗರಿಗೆ ಋತುಮಾನದಲ್ಲಿ ಆಗುತ್ತಿರುವ ಏರುಪೇರಿನಿಂದಾಗಿ ಪೋಷಕಾಂಶಭರಿತ ನೆಲ್ಲಿಕಾಯಿ, ಜೇನು ಮತ್ತು ಔಷಧೀಯ ಸಸ್ಯಗಳ ಲಭ್ಯತೆ ಕಡಿಮೆಯಾಗಿರುವುದನ್ನು ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿದೆ. ಲಂಟಾನದಂತಹ ಕಳೆಸಸ್ಯಗಳು ಸ್ಥಳೀಯ ಸಸ್ಯಪ್ರಭೇದಗಳನ್ನು ನಾಶ ಮಾಡುತ್ತಿದ್ದು, ವನ್ಯಜೀವಿಗಳ ಆವಾಸಸ್ಥಾನವೂ ಕ್ಷೀಣಿಸುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ಅರಣ್ಯ ದಟ್ಟಣೆ ಹೆಚ್ಚಿದೆ. ಹಿಂದೆ ಜೇನುಗಳ ಸಂಖ್ಯೆಯೂ ಸಮೃದ್ಧವಾಗಿತ್ತು. ಹತ್ತು-ಹನ್ನೆರಡು ವರ್ಷಗಳಿಂದ ಜೇನು ಹುಟ್ಟಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ವಾತಾವರಣದಲ್ಲಿನ ಬಿಸಿಯೇರಿಕೆ ಒಂದು ಕಾರಣವಾದರೆ, ಬಲಿಷ್ಠವಾದ ಹಾಗೂ ಜೇನನ್ನೇ ಆಹಾರವನ್ನಾಗಿ ಮಾಡಿಕೊಂಡ ಕಣಜಗಳ ಸಂಖ್ಯೆ ಹೆಚ್ಚುತ್ತಿರುವುದು ಮತ್ತೊಂದು ಕಾರಣವಾಗಿದೆ ಎಂದು ಸ್ಥಳೀಯ ರೈತರು ಪ್ರತಿಪಾದಿಸುತ್ತಾರೆ. ಕೀಟಶಾಸ್ತ್ರಜ್ಞರು ಈ ಕುರಿತು ಸಂಶೋಧನೆ ಮಾಡಿದಲ್ಲಿ, ಇನ್ನೂ ಹೆಚ್ಚಿನ ನಿಖರ ಕಾರಣಗಳನ್ನು ತಿಳಿದುಕೊಳ್ಳಲು ಸಾಧ್ಯ.
ಮಲೆನಾಡಿನ ಹಳ್ಳಿಗಾಡುಗಳಲ್ಲಿ ನವಿಲುಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವವರು ಇದ್ದಾರೆ. ಅವರ ಪ್ರಕಾರ, ಆ ಪ್ರದೇಶದ ‘ಪರಿಸರ ಸ್ಥಿತಿಗತಿ’ ಉತ್ತಮವಾಗಿದೆಯೆಂದು ಅರ್ಥ. ವಾಸ್ತವಿಕ ಪರಿಸ್ಥಿತಿ ಬೇರೆಯದೇ ಆಗಿದೆ. ಜೀವಿವೈವಿಧ್ಯ ಸಾಂದ್ರತೆ ಹೆಚ್ಚು ಇದ್ದಷ್ಟೂ ಅಲ್ಲಿನ ಪರಿಸರ ಸ್ಥಿತಿಗತಿ ಉತ್ತಮವಾಗಿದೆ ಎಂದು ಪರಿಗಣಿಸುವ ಸಿದ್ಧ ಮಾದರಿ ನಮ್ಮ ಕಣ್ಣೆದುರು ಇರುವಾಗ, ಯಾವುದೋ ಒಂದು ಪ್ರಭೇದ, ಅದು ರಾಷ್ಟ್ರಪಕ್ಷಿಯೇ ಆಗಿದ್ದರೂ ಅವುಗಳ ಸಂಖ್ಯೆ ಹೆಚ್ಚಾಗುವುದರಿಂದ ಪರಿಸರದಲ್ಲಿ ಮತ್ತು ಜೀವಿವೈವಿಧ್ಯ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಸಾಮಾನ್ಯವಾಗಿ ನವಿಲು ಪ್ರಭೇದ ಬಯಲು ಪ್ರದೇಶಗಳಲ್ಲಿ ಕಂಡುಬರುತ್ತದೆ. ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಕೋಳಿಗಳಂತೆ ಅವು ಆಹಾರ ಹುಡುಕುವುದನ್ನು ಈಗಲೂ ಕಾಣಬಹುದು.
ಹಲವು ಕಾರಣಗಳಿಂದಾಗಿ ಪಶ‍್ಚಿಮಘಟ್ಟಗಳಲ್ಲಿ ಅರಣ್ಯ ನಾಶವಾಗಿದ್ದು, ಇಲ್ಲಿನ ಭೌಗೋಳಿಕ ರಚನೆ ಬಯಲುನಾಡಿನಂತೆ ಬದಲಾಗುತ್ತಿದೆ. ಅರಣ್ಯ ನಾಶ ಮತ್ತು ಬದಲಾದ ಭೌಗೋಳಿಕ ರಚನೆಯಿಂದಾಗಿ ನವಿಲುಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂಬ ಸಂಗತಿ ಆಘಾತಕಾರಿ. ಎಲ್ಲಾ ತರಹದ ಹಾವುಗಳನ್ನು ಭಕ್ಷಿಸುವ ನವಿಲುಗಳಿಂದಾಗಿ, ಉರಗ ಸಂತತಿ ಕ್ಷೀಣಿಸುತ್ತಿದೆ ಮತ್ತು ರೈತಸ್ನೇಹಿ ಉರಗಗಳ ಸಂತತಿ ಕಡಿಮೆ ಆಗುತ್ತಿರುವುದು ಆಹಾರಭದ್ರತೆ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಉರಗಗಳ ಆಹಾರ ಮುಖ್ಯವಾಗಿ ಇಲಿ, ಹೆಗ್ಗಣಗಳು. ಹಾವು ಸಂತತಿ ನಾಶದಿಂದ, ದಂಶಕಗಳ ಸಂಖ್ಯೆ ವಿಪರೀತ ಹೆಚ್ಚುತ್ತದೆ. ಇಂಗಾಲಾಮ್ಲವನ್ನು ಹೀರಿಕೊಳ್ಳುವ ಅರಣ್ಯ ಪ್ರದೇಶಗಳ ಕುಗ್ಗುವಿಕೆ ಮತ್ತೆ ನೇರವಾಗಿ ಇನ್ನಷ್ಟು ಭೂ ಬಿಸಿಯೇರಿಕೆಗೆ ಕಾರಣವಾಗುತ್ತಿದೆ.
ಒಂದು ಪ್ರದೇಶದ ಪರಿಸರ ಅವನತಿ ಆ ನಿರ್ದಿಷ್ಟ ಪ್ರದೇಶಕ್ಕೆ ನೇರವಾಗಿ ಹಾನಿ ಮಾಡುತ್ತಲೇ, ಜಾಗತಿಕವಾದ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ. ಪಶ್ಚಿಮಘಟ್ಟಗಳ ಪತನ ಇತರ ದ್ವೀಪ ರಾಷ್ಟ್ರಗಳನ್ನು ಮುಳುಗಿಸುವಲ್ಲಿ ನೇರ ಪಾತ್ರ ವಹಿಸುತ್ತದೆ. ಆಸ್ಟ್ರೇಲಿಯಾ ಮೂಲದ ಅಕೇಶಿಯಾದಂತಹ ವಿದೇಶಿ ಕಳೆ ಸಸ್ಯಗಳು ಬಂದು ಮಧ್ಯ ಪಶ್ಚಿಮಘಟ್ಟದಲ್ಲಿ ವಿಜೃಂಭಿಸಿದ ಕಾರಣಕ್ಕೆ ಇಲ್ಲಿನ ನದಿ ಹರಿವಿನಲ್ಲಿ ಅಪಾರ ಪ್ರಮಾಣದ ವ್ಯತ್ಯಯ ಉಂಟಾಯಿತು. ಇಲ್ಲೇ ಇಂಗಬೇಕಿದ್ದ ಮಳೆನೀರು ನೆರೆಯನ್ನುಂಟು ಮಾಡಿ, ಇತ್ತ ಬರದ ಸ್ಥಿತಿಗೂ ಅತ್ತ ಸಮುದ್ರ ಮಟ್ಟ ಏರಿಕೆಗೂ ಕಾರಣವಾಯಿತು.
ಪರಿಸರ ನಾಶ ಯಾವ ರೀತಿಯಿಂದ ಆದರೂ ಅದರ ಪರಿಣಾಮ ಮನುಕುಲದ ಮೇಲೆ ನೇರವಾಗಿ ಆಗುತ್ತದೆ ಎಂಬುದು ನಿರ್ವಿವಾದದ ಸಂಗತಿ. ಜೇನು ಅಳಿದರೆ, ನಾಲ್ಕೇ ವರ್ಷದಲ್ಲಿ ಮನುಕುಲವು ಅಳಿಯುತ್ತದೆ ಎಂಬ ಮೇರು ವಿಜ್ಞಾನಿ ಐನ್‍ಸ್ಟೀನ್ ಮಾತು ನಮಗೆ ಎಚ್ಚರಿಕೆಯ ಪಾಠವಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.