ಸುಪ್ರೀಂ ಕೋರ್ಟ್‌ನಲ್ಲಿ 30 ವರ್ಷಗಳ ಹಿಂದೆ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಭಾರತದ ಅರಣ್ಯದ ವ್ಯಾಖ್ಯೆಯನ್ನೇ ಬದಲಿಸಿತು. ಕೇರಳದ ನಿಲಂಬೂರು ರಾಜವಂಶಸ್ಥರಾದ ಟಿ.ಎನ್.ಗೋದವರ್ಮನ್ ತಿರುಮುಲ್ಪಾಡ್ ಎಂಬುವರು ತಮ್ಮ ವಂಶಕ್ಕೆ ಸೇರಿದ ಅರಣ್ಯ ಭೂಮಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ರಕ್ಷಣೆ ಮಾಡಲು ಸುಪ್ರೀಂ ಕೋರ್ಟ್ ಮೊರೆ ಹೋದರು.
ಅರಣ್ಯ ಸಂರಕ್ಷಣೆಗಾಗಿ ಹೂಡಲಾದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಮೂರ್ತಿ ಜೆ.ಎಸ್.ವರ್ಮಾ ನೇತೃತ್ವದ ತ್ರಿಸದಸ್ಯ ಪೀಠವು 1996ರ ಡಿಸೆಂಬರ್‌ನಲ್ಲಿ ಐತಿಹಾಸಿಕ ತೀರ್ಪು ನೀಡಿತು. ಅರಣ್ಯ ಇಲಾಖೆಯ ಅಥವಾ ಇತರ ಸರ್ಕಾರಿ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಾಗದೇ ಇದ್ದು, ಸಸ್ಯವರ್ಗ, ಮರಗಳ ಸಾಂದ್ರತೆ ಮತ್ತು ಪಾರಿಸರಿಕ ಗುಣಲಕ್ಷಣಗಳನ್ನು ಹೊಂದಿರುವ, ಅಂದರೆ ಶಬ್ದಕೋಶದಲ್ಲಿ ‘ಅರಣ್ಯ’ವನ್ನು ಹೇಗೆ ವ್ಯಾಖ್ಯಾನಿಸಲಾಗಿದೆಯೋ ಅದನ್ನು ಆಧರಿಸಿ, ಅಂತಹ ಪ್ರದೇಶವನ್ನು ಕೂಡ ಅರಣ್ಯ ಎಂದು ಪರಿಗಣಿಸಬೇಕು ಎಂಬುದು ತೀರ್ಪಿನ ಸಾರಾಂಶ. ಭಾರತದ ಎಲ್ಲ ರಾಜ್ಯಗಳೂ ಪರಿಭಾವಿತ ಅರಣ್ಯವನ್ನು ಗುರುತಿಸಬೇಕು ಎಂದು ಸೂಚಿಸಿತು. ಹೀಗೆ ಡೀಮ್ಡ್ ಫಾರೆಸ್ಟ್ ಅಥವಾ ಪರಿಭಾವಿತ ಅರಣ್ಯ ಪ್ರದೇಶ ಎಂಬ ಹೊಸ ವಿಧಾನ ಹುಟ್ಟಿಕೊಂಡಿತು. ದೇಶದಾದ್ಯಂತ ಲಕ್ಷಾಂತರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಪರಿಭಾವಿತ ಅರಣ್ಯ ಎಂದು ಪರಿಗಣಿಸಲಾಯಿತು.
ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಕರ್ನಾಟಕ ಸರ್ಕಾರವು 1997ರಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿತು. ಆ ಸಮಿತಿಯು ತರಾತುರಿಯಲ್ಲಿ 9,94,881 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಿ, ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತು. ಆ ಪ್ರದೇಶದಲ್ಲಿ ಅದಾಗಲೇ ಘೋಷಿತಗೊಂಡ ಮೀಸಲು ಅರಣ್ಯ, ರಾಜ್ಯ ಮೀಸಲು ಅರಣ್ಯ, ಜಿಲ್ಲಾ ಮೀಸಲು ಅರಣ್ಯದ ಜೊತೆಯಲ್ಲಿ ಕೆಲವು ಕೃಷಿ ಜಮೀನುಗಳನ್ನೂ ಸೇರಿಸಲಾಗಿದೆ ಎಂಬ ಕೂಗು ಎದ್ದಿತು. ಸರ್ಕಾರದ ಈ ನಡೆಯು ಭೂಮಾಲೀಕರು ಮತ್ತು ರಾಜಕಾರಣಿಗಳಿಂದ ತೀವ್ರ ವಿರೋಧವನ್ನು ಎದುರಿಸಿತು. ಸರ್ಕಾರ ಇಕ್ಕಟ್ಟಿಗೆ ಸಿಲುಕಿಕೊಂಡಿತು.
ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ಗುರುತಿಸುವಲ್ಲಿ ಉಂಟಾದ ತೀವ್ರ ಗೊಂದಲವನ್ನು ಸರಿಪಡಿಸಲು ರಾಜ್ಯ ಸರ್ಕಾರವು ಎರಡೂವರೆ ದಶಕಗಳಿಂದಲೂ ಸೋಲುತ್ತಲೇ ಇದೆ. ಗಣಿ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಮಾಫಿಯಾಗಳ ಒತ್ತಡಕ್ಕೆ ಮಣಿಯುತ್ತಿರುವ ಸರ್ಕಾರಕ್ಕೆ ಈ ಸಮಸ್ಯೆಯನ್ನು ಪರಿಹರಿಸಲು ಸಾಧ‍್ಯವಾಗಲಿಲ್ಲ. ಆದರೂ 2020- 21ರಲ್ಲಿ ಸರ್ಕಾರ ಮತ್ತೊಂದು ಪ್ರಮಾಣಪತ್ರವನ್ನು ಸಲ್ಲಿಸಿ, ಪರಿಭಾವಿತ ಅರಣ್ಯ ಪ್ರದೇಶವನ್ನು ಕಂದಾಯ ಇಲಾಖೆಗೆ ವರ್ಗಾಯಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿತು. ಆದರೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಇಂತಹ ಯಾವುದೇ ಕ್ರಮಕ್ಕೆ ಅವಕಾಶವಿಲ್ಲ ಎಂದು 2021ರಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತು.
2022ರಲ್ಲಿ ರಾಜ್ಯ ಸರ್ಕಾರವು ಸುಮಾರು 6.64 ಲಕ್ಷ ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ವ್ಯಾಪ್ತಿಯಿಂದ ಹೊರಗಿಡುವ ಪ್ರಯತ್ನವಾಗಿ ಮತ್ತೊಂದು ಪ್ರಮಾಣಪತ್ರವನ್ನು ಸಲ್ಲಿಸಿತು. ಆ ಮೂಲಕ, ಪರಿಭಾವಿತ ಅರಣ್ಯ ಪ್ರದೇಶವನ್ನು ವಾಣಿಜ್ಯ ಮತ್ತು ಇತರ ಉಪಯೋಗಗಳಿಗೆ ಬಳಸುವ ಉದ್ದೇಶವನ್ನು ಹೊಂದಿತ್ತು. ಸರ್ಕಾರದ ಈ ಕ್ರಮವನ್ನು ಪರಿಸರವಾದಿಗಳು ತೀವ್ರವಾಗಿ ವಿರೋಧಿಸಿದರು. ಇದು ದೊಡ್ಡ ಪ್ರಮಾಣದ ಒತ್ತುವರಿಯನ್ನು ಕಾನೂನುಬದ್ಧಗೊಳಿಸುವ ನಡೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಜ್ಞರ ಸಮಿತಿ ಸಲ್ಲಿಸಿದ್ದ ಪರಿಭಾವಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಖಾಸಗಿ ಪಟ್ಟಾ, ಅಸ್ತಿತ್ವದಲ್ಲಿ ಇಲ್ಲದ ಸರ್ವೆ ನಂಬರ್, ಮೀಸಲು ಅರಣ್ಯ ಪ್ರದೇಶ, ಕೆರೆ ತೀರ, ಶಾಲಾ ನೆಡುತೋಪು, ಪರಿಭಾವಿತ ಮಾನದಂಡಕ್ಕೆ ಅನುಗುಣವಾಗಿಲ್ಲದ ಪ್ರದೇಶಗಳು ಸೇರಿದ್ದವು. ಇವುಗಳನ್ನು ಮರುಪರಿಶೀಲನೆ ಮಾಡಿ, ತಜ್ಞರ ಸಮಿತಿಯು ಮೂಲದಲ್ಲಿ ಸಲ್ಲಿಸಿದ್ದ 9,94,881 ಹೆಕ್ಟೇರ್ ಪ್ರದೇಶವನ್ನು 2,21,554 ಹೆಕ್ಟೇರ್ ವ್ಯಾಪ್ತಿಗೆ ಇಳಿಸಿತು. ಜೊತೆಗೆ ಪುನರ್‌ರಚಿಸಲಾದ ತಜ್ಞರ ಸಮಿತಿಯು ನೀಡಿದ ಶಿಫಾರಸಿನಂತೆ, ಪರಿಭಾವಿತ ಮಾನದಂಡಗಳಿಗೆ ಅನುಗುಣವಾಗಿರುವ ಹಾಗೂ ಈ ಮೊದಲು ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರದೇ ಬಿಟ್ಟುಹೋಗಿದ್ದ 1,08,632 ಹೆಕ್ಟೇರ್ ಪ್ರದೇಶವನ್ನು ಸೇರಿಸಿ, ಒಟ್ಟು 3,30,186 ಹೆಕ್ಟೇರ್ ವ್ಯಾಪ್ತಿಯನ್ನು ಪರಿಭಾವಿತ ಅರಣ್ಯ ಎಂದು ಪರಿಗಣಿಸಲು ರಾಜ್ಯ ಸರ್ಕಾರವು 2022ರಲ್ಲಿ ಅಧಿಸೂಚನೆ ಹೊರಡಿಸಿತು.
ಅರಣ್ಯ ಸಂರಕ್ಷಣಾ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ತಂದ ಕೇಂದ್ರ ಸರ್ಕಾರವು ಅದಕ್ಕೆ ‘ವನ್ ಸಂರಕ್ಷಣ್ ಏವಂ ಸಂವರ್ಧನ್ ಅಧಿನಿಯಮ್’ ಎಂದು ನಾಮಕರಣ ಮಾಡಿತು. ಈ ಕಾಯ್ದೆಯು ಅರಣ್ಯ ಸಂರಕ್ಷಣೆಗೆ ವಿರುದ್ಧವಾಗಿದೆ ಮತ್ತು ಗೋದವರ್ಮನ್ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ನಿವೃತ್ತ ಐಎಫ್ಎಸ್ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದರು. ಮೊಕದ್ದಮೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ವಾದ, ಪ್ರತಿವಾದಗಳನ್ನು ಆಲಿಸಿ, ಗೋದವರ್ಮನ್ ವಿಷಯದಲ್ಲಿ ನೀಡಿದ ತೀರ್ಪಿಗೆ ವಿರುದ್ಧವಾಗಿ ಯಾವುದೇ ತರಹದ ಉಲ್ಲಂಘನೆಯನ್ನು ಮಾಡಬಾರದು ಎಂದು ಇದೇ ವರ್ಷದ ಫೆಬ್ರುವರಿ 3ರಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು.
ಪರಿಭಾವಿತ ಅರಣ್ಯ ಪ್ರದೇಶವನ್ನು ಗುರುತಿಸುವ ಕಾರ್ಯಕ್ಕೆ ಅನೇಕ ರಾಜ್ಯಗಳು ಮುಂದಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಆದೇಶದ ದಿನಾಂಕದಿಂದ ಒಂದು ತಿಂಗಳ ಒಳಗಾಗಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಜಿಲ್ಲಾವಾರು ಸಮಿತಿಗಳನ್ನು ರಚಿಸಬೇಕು ಮತ್ತು ಈ ಸಮಿತಿಗಳು ಮುಂದಿನ ಆರು ತಿಂಗಳ ಒಳಗೆ ಪರಿಭಾವಿತ ಅರಣ್ಯ ಪ್ರದೇಶವನ್ನು ಕರಾರುವಾಕ್ಕಾಗಿ ಗುರುತಿಸಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು, ರಾಜ್ಯಗಳು ಸಲ್ಲಿಸಿದ ವಿವರಗಳನ್ನು ಕ್ರೋಡೀಕರಿಸಿ ಅದನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು ಎಂದು ಹೇಳಿದೆ. ಯಾವುದೇ ರಾಜ್ಯ ಆರು ತಿಂಗಳ ನಿಗದಿತ ಮಿತಿಯಲ್ಲಿ ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸಂಬಂಧಿಸಿದ ವಿವರವನ್ನು ಸಲ್ಲಿಸಲು ವಿಫಲವಾದಲ್ಲಿ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ವೈಯಕ್ತಿಕ ನೆಲೆಯಲ್ಲಿ ಹೊಣೆ ಮಾಡಲಾಗುವುದು ಎಂದು ಹೇಳಿದೆ.
ಪರಿಭಾವಿತ ಅರಣ್ಯ ಪ್ರದೇಶವನ್ನು ಗುರುತಿಸಿ ಸಂರಕ್ಷಿಸುವ ಹೊಣೆ ಅರಣ್ಯ ಇಲಾಖೆಗೆ ಸೇರುತ್ತದೆ. ಆದರೆ, ಈಗಾಗಲೇ ಶಾಸನಬದ್ಧವಾಗಿ ಸಂರಕ್ಷಣೆಗೆ ಒಳಪಟ್ಟ ಅಭಯಾರಣ್ಯ, ರಾಜ್ಯ ಮೀಸಲು ಅರಣ್ಯ, ಜಿಲ್ಲಾ ಮೀಸಲು ಅರಣ್ಯವನ್ನೇ ಸಂರಕ್ಷಣೆ ಮಾಡಲಾರದ ಸ್ಥಿತಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಇದೆ. ಶಿವಮೊಗ್ಗ ಜಿಲ್ಲೆಯ ಸಾಗರ ಅರಣ್ಯ ವಿಭಾಗಕ್ಕೆ ಒಳಪಡುವ ನಾಲ್ಕು ತಾಲ್ಲೂಕುಗಳಲ್ಲಿ 4,500 ಹೆಕ್ಟೇರ್ ಅರಣ್ಯ ಪ್ರದೇಶವು ಅಕ್ರಮವಾಗಿ ಮಂಜೂರಾಗಿದೆ. 26,500 ಮಂದಿ ತಲಾ ಮೂರು ಎಕರೆಗಿಂತ ಕಡಿಮೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಇದರ ಒಟ್ಟು ವಿಸ್ತೀರ್ಣ 31,000 ಎಕರೆ ಮತ್ತು ಸುಮಾರು 2,500 ಜನ ಮೂರು ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದು, 13,000 ಎಕರೆ ಅರಣ್ಯ ಪ್ರದೇಶವನ್ನು ಕಬಳಿಸಿದ್ದಾರೆ ಎಂದು ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ. ಆದರೆ ರಾಜ್ಯ ಸರ್ಕಾರ ಮತ್ತೆ ಇಲ್ಲಿ ಎಡವಿದೆ. ಮೂರು ಎಕರೆಗಿಂತ ಕಡಿಮೆ ಒತ್ತುವರಿ ಮಾಡಿಕೊಂಡವರನ್ನು ಒಕ್ಕಲೆಬ್ಬಿಸಬಾರದು ಎಂದು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಸುತ್ತೋಲೆ ಹೊರಡಿಸಿದೆ. ಸುತ್ತೋಲೆಗೆ ಬೆದರಿದ ಅರಣ್ಯ ಭವನದ ಅಧಿಕಾರಿಗಳು ಅರಣ್ಯ ಒತ್ತುವರಿಯನ್ನು ತೆರವುಗೊಳಿಸದಂತೆ ಇಲಾಖೆಯ ಕೆಳಹಂತದ ಸಿಬ್ಬಂದಿಗೆ ಆದೇಶ ನೀಡಿದ್ದಾರೆ.
ಪರಿಭಾವಿತ ಅರಣ್ಯ ಪ್ರದೇಶವನ್ನು ಗುರುತಿಸಿ, ಸಂರಕ್ಷಿಸುವಲ್ಲಿ ಅರಣ್ಯ ಇಲಾಖೆ ಎಡವದಿರಲಿ. ಸಾರ್ವಜನಿಕರು ಈ ಕೆಲಸದಲ್ಲಿ ಅರಣ್ಯ ಇಲಾಖೆಯ ಜೊತೆ ಕೈಜೋಡಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.